‘ಈ ದಿನ’ ವಿಶೇಷ ವರದಿ | ಬೀದಿಯಲ್ಲೇ ಸವೆಯುವ ಬದುಕು; ಸೂರಿಲ್ಲದ ಜನರ ಗೋಳು ಕೇಳೋರಿಲ್ಲ

Date:

ಬೆಂಗಳೂರು ನಿದ್ದೆಗೆ ಜಾರಿತ್ತು. ಆದರೆ ಎಲ್ಲರೂ ಮಲಗಿರಲಿಲ್ಲ. ಕೆಲವರಿಗೆ ರಾತ್ರಿ ಎಂದರೆ ವಿಶ್ರಾಂತಿ ಅಲ್ಲ ಅದೊಂದು ಬದುಕು ಉಳಿಸಿಕೊಳ್ಳುವ ಹೋರಾಟ. ರಾತ್ರಿ ಅಂದ್ರೆ, ನಿದ್ದೆಯ ಸಮಯ. ಆದ್ರೆ ಎಲ್ಲರಿಗೂ ಅಲ್ಲ. ಈ ನಗರದಲ್ಲಿ, ಕೆಲವು ತಾಯಂದಿರಿಗೆ ರಾತ್ರಿ ಎಂದರೆ ಜಾಗರಣೆ. ವಯಸ್ಸಾದವರಿಗೆ- ಮಕ್ಕಳಿಗೆ ಚಳಿಯನ್ನು ಗೆಲ್ಲುವ ಸವಾಲು… ಇದು ಬೆಂಗಳೂರು, ನಮ್ಮ ನಗರ.

ಸಂಜೆಯಾದರೆ ಮೈ ಕೊರೆಯುವ ಚಳಿ, ಬೆಳಿಗ್ಗೆ ಹತ್ತಾದರೂ ಕಾಣದ ಸೂರ್ಯ. ಈ ವರ್ಷ ಹೆಚ್ಚು ಚಳಿ, ಇದಕ್ಕೆ ನಾನಾ ಕಾರಣಗಳು. ಇಂತಹ ಚಳಿಗಾಲದಲ್ಲಿ ಸೂರಿದ್ದವರು ಹೇಗೋ ನಿಭಾಯಿಸುತ್ತಾರೆ. ಆದರೆ, ಆಕಾಶವೇ ಸೂರು, ಭೂಮಿಯೇ ಚಾಪೆಯಾಗಿಸಿಕೊಂಡವರ ಕತೆಗಳು ಮನ ಕಲಕುತ್ತವೆ. ಆ ದೃಶ್ಯಗಳನ್ನು ಕಣ್ಣಾರೆ ಕಂಡವರು ಚಳಿಯಲ್ಲೂ ಬೆವರೋದು ಖಂಡಿತ. ಪಾರ್ಕ್‌ಗಳು, ಮೆಟ್ರೋ ನಿಲ್ದಾಣಗಳು, ಬಸ್ ಸ್ಟ್ಯಾಂಡ್‌ಗಳು, ಫುಟ್‌ಪಾತ್‌ಗಳು ಮತ್ತು ಫ್ಲೈಓವರ್‌ಗಳ ಕೆಳಗೆ ರಾತ್ರಿ ಹೊತ್ತಿನಲ್ಲಿ ʼಮನುಷ್ಯʼರು ಮಲಗುತ್ತಾರೆ. ಹಾಸಿಗೆ ಇಲ್ಲ, ಹೊದಿಕೆ ಇಲ್ಲ, ಸುರಕ್ಷತೆ ಇಲ್ಲ. ದಿನವಿಡೀ ಜೀವನದ ಓಟದಲ್ಲಿ ಕಣ್ಣಿಗೆ ಬೀಳದ ಈ ಜನರು; ರಾತ್ರಿಯಲ್ಲಿ ನಗರವೇ ಅವರಿಗೆ ತಾತ್ಕಾಲಿಕ ಮನೆ ಆಗುತ್ತದೆ. ಒಂದೆಡೆ ಸಾವಿರಾರು ಕೋಟಿ ರೂಪಾಯಿಗಳ ಮೌಲ್ಯದ ಕಾರ್ಪೊರೇಟ್ ಕ್ಯಾಂಪಸ್‌ಗಳು, ಮತ್ತೊಂದೆಡೆ ಚಳಿ, ಹಸಿವು ಮತ್ತು ಭಯದ ನಡುವೆ ಮಲಗುವ ಮಾನವರು. ಈ ವೈರುಧ್ಯ ಕಾಣ ಬೇಕಿದ್ದರೆ ನಡು ರಾತ್ರಿ ಬೆಂಗಳೂರು ನಗರ ಸುತ್ತಾಡಬೇಕು. ಇಡೀ ರಾತ್ರಿ ಜಗತ್ತು ಬೆಚ್ಚಗೆ ರಗ್ಗು ಹೊದ್ದು ಮಲಗಿದ್ದರೆ ಈ ಸೂರಿಲ್ಲದ ಜೀವಗಳು ನಡುಗುತ್ತಾ ಎಚ್ಚರದ ರಾತ್ರಿಗಳನ್ನು ಕಳೆಯುತ್ತಿವೆ.

ಬೆಂಗಳೂರು, ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡುವ ನಗರ, ಬೆಳೆಯುತ್ತಿರುವ ಆರ್ಥಿಕ ಕೇಂದ್ರವಾಗಿ ಕಾಣುತ್ತದೆ. ಪ್ರತಿನಗರದಲ್ಲೂ ನಿರಾಶ್ರಿತರು ಇರುತ್ತಾರೆ. ಸ್ಲಂಗಳು ಇರುತ್ತವೆ. ಹಾಗೆಯೇ ನಮ್ಮ ಬೆಂಗಳೂರು ಕೂಡ. ರಾತ್ರಿಯಲ್ಲಿ ಈ ನಗರದ ಮತ್ತೊಂದು ಮುಖ ತೆರೆದುಕೊಳ್ಳುತ್ತದೆ. ಸಾರಿಗೆಯ ಗದ್ದಲ, ಹಾರ್ನ್‌ಗಳ ಅಬ್ಬರ, ಮತ್ತು ಜೀವನದ ಓಟದ ನಡುವೆ ಈ ನಗರದಲ್ಲಿ ಸಾವಿರಾರು ಜನರು ಸೂರು ಇಲ್ಲದೆ, ಹೊದಿಕೆಯಿಲ್ಲದೇ ಮಲಗುತ್ತಾರೆ. ತೀರಾ ವಯಸ್ಸಾದವರು, ಪುಟ್ಟ ಮಕ್ಕಳು, ಮಹಿಳೆಯರು, ಹದಿ ಹರೆಯದ ಹೆಣ್ಣುಮಕ್ಕಳು, ಯುವಕರು, ಕಾಯಿಲೆ ಪೀಡಿತರು, ವ್ಯಸನಿಗಳು ಎಲ್ಲರೂ ಬಸ್‌ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಮುರುಟಿ ಮಲಗಿರುತ್ತಾರೆ. ಮಹಿಳೆಯರ ಸುರಕ್ಷತೆ ಎಂಬುದು ಈ ಜಾಗಗಳಲ್ಲಿ ಕನಸು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿರಾಶ್ರಿತ ಜನರು ಎದುರಿಸುತ್ತಿರುವ ಪರಿಸ್ಥಿತಿಗಳನ್ನು ಮತ್ತು ಕುಸಿಯುತ್ತಿರುವ ತಾಪಮಾನವನ್ನು ಅವರು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಈ ದಿನ.ಕಾಮ್‌ ನಗರದಾದ್ಯಂತ ರಿಯಾಲಿಟಿ ಚೆಕ್‌ ಮಾಡಿದಾಗ, ಹೆಚ್ಚಿನವರು ಫ್ಲೈಓವರ್‌ಗಳ ಕೆಳಗೆ, ಸಾರಿಗೆ ಕೇಂದ್ರಗಳ ಬಳಿ, ಆಸ್ಪತ್ರೆಗಳ ಬಳಿ ಆಶ್ರಯ ಪಡೆದಿದ್ದರು. ಕೆ.ಆರ್. ಮಾರುಕಟ್ಟೆ, ಮೆಜೆಸ್ಟಿಕ್‌ ಬಸ್‌ಸ್ಟ್ಯಾಂಡ್‌, ಎಂ ಜಿ ರಸ್ತೆ, ಮಲ್ಲೇಶ್ವರ ಮುಂತಾದ ಕಡೆಗಳಲ್ಲಿ ʼಈ ದಿನʼ ತಂಡ ಸುತ್ತಾಡಿದಾಗ ಕಂಡಿದ್ದು ಮನ ಕಲಕುವ ದೃಶ್ಯಗಳು. ಅನೇಕರು ಬಸ್ ನಿಲ್ದಾಣಗಳ ಮೂಲೆಗಳಲ್ಲಿ ಮಲಗಿದ್ದರು. ಕೆಲವು ಜಾಗಗಳು ದುರ್ವಾಸನೆಯಿಂದ ಕೂಡಿತ್ತು.

ಬೆಂಗಳೂರು ನಿದ್ದೆಗೆ ಜಾರಿತ್ತು. ಆದರೆ ಎಲ್ಲರೂ ಮಲಗಿರಲಿಲ್ಲ. ಕೆಲವರಿಗೆ ರಾತ್ರಿ ಎಂದರೆ ವಿಶ್ರಾಂತಿ ಅಲ್ಲ ಅದೊಂದು ಬದುಕು ಉಳಿಸಿಕೊಳ್ಳುವ ಹೋರಾಟ. ರಾತ್ರಿ… ನಿದ್ದೆಯ ಸಮಯ. ಆದ್ರೆ ಎಲ್ಲರಿಗೂ ಅಲ್ಲ. ಈ ನಗರದಲ್ಲಿ, ಕೆಲವು ತಾಯಂದಿರಿಗೆ ರಾತ್ರಿ ಎಂದರೆ ಭಯ. ಕೆಲವು ಮಕ್ಕಳಿಗೆ ರಾತ್ರಿ ಎಂದರೆ ಚಳಿ. ಇದು ಬೆಂಗಳೂರು, ನಮ್ಮ ನಗರ. ಮೊದಲು ನಮ್ಮ ಪಯಣ ಶುರುವಾಗಿದ್ದು ಎಂ ಜಿ ರೋಡ್‌ ಮೂಲಕ. 

ರಾತ್ರಿ 12:30 – ಎಂ ಜಿ ರೋಡ್

ಮೊದಲು ನಮ್ಮ ಹೆಜ್ಜೆ ಬಿದ್ದದ್ದು ಎಂ ಜಿ ರೋಡ್‌ಗೆ. ಗದ್ದಲ, ಸಂಗೀತದಿಂದ ತುಂಬಿದ್ದ ಎಮ್‌ಜಿ ರೋಡ್‌ನಲ್ಲಿ ಪಬ್‌ಗಳಿಂದ ಹೊರಬರುತ್ತಿದ್ದ ಯುವಕ-ಯುವತಿಯರ ಮುಖಗಳಲ್ಲಿ ಖುಷಿಯ ಹೊಳಪಿತ್ತು. ಇವೆಲ್ಲವೂ “ಐಟಿ ಸಿಟಿ” ಎಂಬ ನಗರದ ಹೆಮ್ಮೆಯನ್ನು ನೆನಪಿಸುತ್ತಿದ್ದವು.  ಆದ್ರೆ ಅದೇ ರಸ್ತೆಯ ಅಂಚಿನಲ್ಲಿ ಮತ್ತೊಂದು ಜೀವನ ನಮ್ಮ ಕಣ್ಣೆದುರು ಬಂದಿತ್ತು. ಚಿಕ್ಕ ಚಿಕ್ಕ ಮಕ್ಕಳು, ಮಧ್ಯರಾತ್ರಿ ಎನ್ನದೇ, ಹೂಗಳ ಗುಚ್ಚ ಹಿಡಿದು “ಅಣ್ಣ, ಅಕ್ಕ ತಗೊಳ್ಳಿ… ಪ್ಲೀಸ್” ಅಂತ ಕೈ ಚಾಚುತ್ತಿದ್ದರು. ಅವರ ಕಣ್ಣುಗಳಲ್ಲಿ ಹೊಟ್ಟೆಪಾಡಿನ ಹಸಿವು ಹೆಪ್ಪಾಗಿ ಮಿನುಗುತ್ತಿತ್ತು, ಆದರೆ ರಸ್ತೆಯ ದೀಪಗಳು ಅದನ್ನು ಮರೆಮಾಚುತ್ತಿದ್ದವು. ಅವರ ಕಣ್ಣಲ್ಲಿ ನಿದ್ದೆಯಿಲ್ಲ, ಕನಸೂ ಇರಲಿಲ್ಲ, ಇದ್ದಿದ್ದು ಕೇವಲ ಹೊಟ್ಟೆಪಾಡಿನ ಬೇಡಿಕೆ. ಇದು ಬಾಲ ಕಾರ್ಮಿಕ ವ್ಯವಸ್ಥೆಯ ಭಾಗವೇ ಅಲ್ಲವೇ? ಕಾನೂನುಗಳು ಪುಸ್ತಕಗಳಲ್ಲಿ ಮಾತ್ರವೇ? ಸಾಮಾಜಿಕ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಇಲಾಖೆ ಎಲ್ಲಿ? ಬೆಳಕಿನ ನಡುವೆ ಕತ್ತಲೆ ಕಾಣಿಸದೇ ಹೋಗಿದೆಯೇ?

5 21

ಅದೇ ರಸ್ತೆಯ ಇನ್ನೊಂದು ಬದಿಯಲ್ಲಿ ಪೋಲಿಯೋದಿಂದ ಕುಂಟುತ್ತಾ ನಡೆಯುತ್ತಿದ್ದ ಒಬ್ಬ ವ್ಯಕ್ತಿ ತನ್ನ ಜೀವನದ ಹೋರಾಟವನ್ನು ಭಿಕ್ಷೆಯ ಮೂಲಕ ನಿಭಾಯಿಸುತ್ತಿದ್ದ. ವಾರಕ್ಕೆ ಕೇವಲ ಎರಡು ಅಥವಾ ಮೂರು ಬಾರಿ ಮಾತ್ರ ಭಿಕ್ಷೆ ಬೇಡುತ್ತೇನೆ ಎಂದು ಅವನು ಹೇಳಿದಾಗ, ಅದು ಚಳಿಯಂತೆಯೇ ನನ್ನ ಮನಸ್ಸನ್ನು ಕೊರೆಯಿತು. ಈ ವ್ಯವಸ್ಥೆ ಯಾರನ್ನು ಎಲ್ಲಿಗೆ ತಳ್ಳುತ್ತದೆ ಅನ್ನೋದನ್ನ ಹೇಳಿಬಿಟ್ಟಿತ್ತು ಆತನ ಅಸಹಾಯಕ ಮಾತುಗಳು. ಜೀವನದ ಈ ಅಸಮಾನತೆಯು ನಗರದ ರಸ್ತೆಗಳಲ್ಲಿ ಒಂದು ಕಡೆ ಬೆಳಕು, ಮತ್ತೊಂದು ಕಡೆ ಕಡು ಕತ್ತಲು. ಬೆಳಕಿನ ತೇರಿನಲ್ಲಿ ಛಾಯೆಯ ಕತ್ತಲು ನರ್ತಿಸುತ್ತದೆ, ಒಂದು ಕಡೆ ಸಂಪತ್ತಿನ ಸುಖ, ಮತ್ತೊಂದು ಕಡೆ ಬಡತನದ ಬಿಸಿಲು. ಆಗಲೇ ಎಂ ಜಿ ರೋಡ್‌ ಹೇಳಿಬಿಟ್ಟಿತು—
ಜೀವನ ಎಲ್ಲರಿಗೂ ಒಂದೇ ಅಲ್ಲ ಅಂತ. ಒಂದೇ ರಸ್ತೆ, ಎರಡು ಬೆಂಗಳೂರು! 

16 3

ರಾತ್ರಿ 3:00 – ಮೆಜೆಸ್ಟಿಕ್

ರಾತ್ರಿ ಮೂರರ ಹೊತ್ತಿಗೆ ಬೆಂಗಳೂರು ಚಳಿ ಸುಮಾರು 15 ಡಿಗ್ರಿಗೆ ಇಳಿದಿತ್ತು. ಆಗಲೇ ನಾವು ಮೆಜೆಸ್ಟಿಕ್‌ ತಲುಪಿದ್ದೆವು. ಮೆಜೆಸ್ಟಿಕ್‌ ಇದು ನಗರದ ಹೃದಯಭಾಗ. ಇಲ್ಲಿ ಕಂಡ ದೃಶ್ಯಗಳು ಇನ್ನಷ್ಟು ಮನ ಕಲಕುವಂಥವು. ಇದನ್ನೇ “ಬೆಂಗಳೂರಿನ ಚಳಿ” ಅಂತ ನಾವು ಮಾತಿನಲ್ಲೇ ಹೇಳಿಬಿಡ್ತೀವಿ. ಆದ್ರೆ ಆ ಚಳಿ, ಹೊದಿಕೆ ಇಲ್ಲದವರ ಮೇಲೆ ಹೇಗೆ ಬೀಳುತ್ತೆ ಅನ್ನೋದನ್ನ ಮೆಜೆಸ್ಟಿಕ್‌ ಸ್ಪಷ್ಟವಾಗಿ ತೋರಿಸಿತು. ಮಹಿಳೆ-ಪುರುಷ ಅನ್ನೋ ಭೇದವೇ ಇಲ್ಲ. ರಸ್ತೆ ಬದಿಯಲ್ಲಿ, ಚರಂಡಿ ಪಕ್ಕದಲ್ಲೇ, ಬಸ್ ನಿಲ್ದಾಣಗಳ ಮೂಲೆಗಳಲ್ಲಿ ಜನರು ನಿದ್ದೆಗೆ ಜಾರಿದ್ದರು. ಚರಂಡಿಗಳ ಪಕ್ಕದಲ್ಲಿ ನಿದ್ದೆಯ ಸುಖವನ್ನು ಹುಡುಕಿದ್ದರು. ಹೋಟೆಲ್‌ಗಳ ಕಸದ ರಾಶಿಗಳ ನಡುವೆಯೇ ಆಶ್ರಯದ ಕನಸುಗಳು ಮಲಗಿತ್ತು. 

1 55

ಕೆಲವರು ದೇವರ ಮೂರ್ತಿ ಇಟ್ಟು, “ದೇವರು ನಮ್ಮನ್ನ ಕಾಪಾಡ್ತಾನೆ” ಅನ್ನೋ ನಂಬಿಕೆಯಲ್ಲಿ ಕಣ್ಣು ಮುಚ್ಚಿದ್ದರು. ತಾಯಿ ತನ್ನ ಚಿಕ್ಕ ಚಿಕ್ಕ ಮಕ್ಕಳನ್ನ ಗುಬ್ಬಚ್ಚಿಗಳಂತೆ ಒಡಲಲ್ಲಿ ಹಾಕಿಕೊಂಡು, ಅವರನ್ನ ಬೆಚ್ಚಗೆ ಮಲಗಿಸಿ, ತಾನೂ ಆ ಕೊರೆಯುವ ಚಳಿಯಲ್ಲಿ ನಿದ್ದೆಗೆ ಜಾರಿದ್ದಳು. ಒಂದು ದೃಶ್ಯ ಹೃದಯ ತಾಕದೇ ಇರಲು ಸಾಧ್ಯವೇ?  ಅವಳಿಗೆ ಹೊದಿಕೆ ಇರಲಿಲ್ಲ. ಆದ್ರೆ ಮಕ್ಕಳಿಗೆ ಮಾತ್ರ ತಾಯಿ ಇದ್ದಳು. ಮಕ್ಕಳಿಗೆ ತಾಯಿಯ ದೇಹವೇ ಹೊದಿಕೆಯಾಗಿತ್ತು. 

17 3

ಇದು ನಗರ ಹೊರವಲಯವಲ್ಲ. ಇದು ಬೆಂಗಳೂರಿನ ಹೃದಯಭಾಗ ಎಂದು ನಾನು ಮತ್ತೊಮ್ಮೆ ನೆನಪಿಸಿಕೊಂಡೆ. ಬಿಬಿಎಂಪಿಯ ‘ರಾತ್ರಿ ಶೆಲ್ಟರ್‌’ಗಳು ನಿಜವಾಗಿಯೂ ಇವೇಯೆ?  ಇದ್ದರೆ, ಜನರು ರಸ್ತೆಯಲ್ಲೇಕೆ ಇದ್ದಾರೆ? ಪ್ರತಿ ವರ್ಷ ಇದೇ ಸ್ಥಿತಿ, ಇದೇ ವರದಿಗಳು, ಇದೇ ಭರವಸೆಗಳು ಆದ್ರೆ ಉತ್ತರ ಮಾತ್ರ ಇಲ್ಲ. 

ಬೆಳಗಿನ ಜಾವ 4:30 – ಕೆ.ಆರ್. ಮಾರ್ಕೆಟ್

ಮೆಜೆಸ್ಟಿಕ್ ಮತ್ತು ಎಂ ಜಿ ರೋಡ್‌ ಒಂದು ಕಥೆ ಆದರೆ,  ಕೆ.ಆರ್. ಮಾರ್ಕೆಟ್ ಇನ್ನೊಂದು ಕಥೆ.

ಬೆಳಗಿನ ಜಾವ 4:30 ಆಗುತ್ತಲೇ ಮಾರ್ಕೆಟ್ ಚೇತನಗೊಂಡಿತ್ತು. ವ್ಯಾಪಾರಿಗಳು, ಮಾಲೀಕರು, ಕೂಲಿ ಕಾರ್ಮಿಕರು ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ತಲ್ಲೀನರಾಗಿದ್ದರು.

ರಸ್ತೆಗಳು ತರಕಾರಿ, ಹಣ್ಣುಗಳ ರಾಶಿಗಳಿಂದ ತುಂಬಿ ಹೋಗಿದ್ದವು. ಆದರೆ ಅಲ್ಲೇ ಸುತ್ತಮುತ್ತಲಿನ ನಿರಾಶ್ರಿತರು ಚಳಿಯನ್ನು ಎದುರಿಸುತ್ತಾ, ಫ್ಲೈಓವರ್ ಕೆಳಗೆ, ಬಸ್ ನಿಲ್ದಾಣದ ಮೂಲೆಗಳಲ್ಲಿ ಆಶ್ರಯ ಹುಡುಕಿದ್ದರು. ಮಲ್ಲೇಶ್ವರದಂತಹ ಇತರ ಕಡೆಗಳಲ್ಲೂ ಇದೇ ದೃಶ್ಯ – ಸಾರಿಗೆ ಕೇಂದ್ರಗಳು ಮತ್ತು ಆಸ್ಪತ್ರೆಗಳ ಬಳಿ ನಿರಾಶ್ರಿತರು ಚಳಿಗೆ ಚಾಲೆಂಜ್‌ ಮಾಡಿ ನಿದ್ರೆಗೆ ಜಾರಿದ್ದರು. ನಗರ ಎಚ್ಚರವಾಗುತ್ತಿತ್ತು. ಆದ್ರೆ ರಾತ್ರಿ ಪೂರ್ತಿ ಕಣ್ಣು ಮುಚ್ಚದ ಜೀವಗಳ ಕಥೆ ಮಾತ್ರ ಯಾರ ಗಮನಕ್ಕೂ ಬಾರದೇ ಉಳಿದಿತ್ತು. ನಗರದಿಂದ ಆದಾಯ ಬೇಕು.

ನಗರದ ಜನರಿಗೆ ರಕ್ಷಣೆ ಬೇಡವೇ? ಎಂತಹ ದುರಂತ ನೋಡಿ. ಇದನ್ನು ‘ದುರಂತ’ ಅಂತ ಕರೆಯುವುದು ಬಹುಷಃ ಸುಲಭ. ಆದ್ರೆ ಇದು ಬರೀ ದುರಂತ ಅಲ್ಲ ಇದು ಅಪರಾಧ, ನಿರ್ಲಕ್ಷ್ಯದ ಅಪರಾಧ, ಆಡಳಿತ ವೈಫಲ್ಯದ ಅಪರಾಧ. ಇದು ಆರೋಪ ಅಲ್ಲ. ಬದಲಿಗೆ ಇದು ನಮ್ಮ ಕ್ಯಾಮೆರಾ ಕಂಡ ಸತ್ಯ. 

ಒಂದು ರಾತ್ರಿ, ನೂರು ಪ್ರಶ್ನೆಗಳು ನಮ್ಮನ್ನು ಕಾಡಿತ್ತು. ಈ ಒಂದು ರಾತ್ರಿ ನಮ್ಮೆಲ್ಲರ ಕಣ್ಣನ್ನೇ ತೆರೆಸಿತು. ಬೆಂಗಳೂರಿನ ಒಂದು ರಾತ್ರಿ ಹೇಗೆ ಇರುತ್ತೆ ಅನ್ನೋದಕ್ಕಿಂತ, ಬೆಂಗಳೂರಿನ ಕೆಲವು ಜೀವಗಳಿಗೆ ಪ್ರತಿದಿನವೂ ರಾತ್ರಿ ಹೇಗಿರತ್ತೆ ಅನ್ನೋ ಪ್ರಶ್ನೆ ಉಳಿದುಬಿಟ್ಟಿತು.

ನಗರ ಬೆಳಗುತ್ತೆ. ಆದ್ರೆ ಎಲ್ಲರ ಬದುಕು ಬೆಳಗುತ್ತದೆಯಾ? ಅಭಿವೃದ್ಧಿ ಅನ್ನೋ ಮುಖವಾಡದ ಹಿಂದೆ ರಸ್ತೆ ಮೇಲೆ ಮಲಗುವ ಜೀವಗಳು ಮರೆಮಾಚಲಾಗುತ್ತಿದೆ. ಫ್ಲೈಓವರ್‌ಗಳ ಕೆಳಗೆ ಮಲಗುವ ಜನರಿರುವ ನಗರ ವಿಶ್ವಮಟ್ಟದ ನಗರ ಅಲ್ಲವೇ ಅಲ್ಲ. ಸರ್ಕಾರ ಮತ್ತು ಬಿಬಿಎಂಪಿಗೆ ಒಂದು ಪ್ರಶ್ನೆ ಈ ನಗರ ಯಾರಿಗಾಗಿ? ಈ ನಿರಾಶ್ರಿತರಿಗೆ ಸರ್ಕಾರದ ಯಾವ ಯೋಜನೆಯೂ ಗೊತ್ತಿಲ್ಲ. ಆದರೆ, ಅವರಿಗೆ ಬೇಕಿರುವುದು ಒಂದು ಸುರಕ್ಷಿತ ರಾತ್ರಿ ಮಾತ್ರ.

ಬೆಂಗಳೂರು ವಸತಿರಹಿತರ ಸಮೀಕ್ಷಾ ವರದಿಯ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯ ಪಶ್ಚಿಮ ವಲಯವು ಅತಿ ಹೆಚ್ಚು ನಿರಾಶ್ರಿತರನ್ನ ಹೊಂದಿದೆ [39.6%]. ಪೂರ್ವ [25.4%] ಎರಡನೇ ಸ್ಥಾನದಲ್ಲಿದೆ, ನಂತರ ಮಹಾದೇವಪುರ ವಲಯ [10%] ಮೂರನೇ ಸ್ಥಾನದಲ್ಲಿದೆ. ಈ ಸಮೀಕ್ಷೆಯು ಬೆಂಗಳೂರು ವಸತಿರಹಿತ ಕಾರ್ಯಕ್ರಮದ (BHP)ನಿಂದ ನಡೆಸಲ್ಪಟ್ಟಿತ್ತು, ಇದು ಅಜೀಂ ಪ್ರೇಮ್‌ಜಿ ಫೌಂಡೇಶನ್ ಮತ್ತು ಪ್ರಾಜೆಕ್ಟ್ ಸ್ಮೈಲ್ ಟ್ರಸ್ಟ್‌ನ ಜಂಟಿ ಉಪಕ್ರಮವಾಗಿದ್ದು, ಇದನ್ನು 2022 ರಲ್ಲಿ ನಡೆಸಲಾಯಿತು. ಸಮೀಕ್ಷಕರು 551 ಮೂರಕ್ಕಿಂತ ಹೆಚ್ಚು ನಿರಾಶ್ರಿತ ವ್ಯಕ್ತಿಗಳಿರುವ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದ್ದರು ಮತ್ತು 50 ಶೆಲ್ಟರ್‌ ಹೌಸ್‌ಗಳಲ್ಲಿ ಸುಮಾರು 1,591 ವ್ಯಕ್ತಿಗಳಿಂದ ಡೇಟಾವನ್ನು ಸಂಗ್ರಹಿಸಿದ್ದರು. ವರದಿಯಲ್ಲಿ, ಕೌಟುಂಬಿಕ ಸಂಘರ್ಷ ಪ್ರಮುಖ ಕಾರಣವೆಂದು ಗುರುತಿಸಲಾಗಿದೆ. ಪ್ರತಿಕ್ರಿಯಿಸಿದವರಲ್ಲಿ 34% ರಷ್ಟು ಜನರು ಗ್ರಾಮೀಣ ಪ್ರದೇಶಗಳಿಂದ ವಲಸೆ [27.21%] ಮತ್ತು ಕೆಲಸ ಹುಡುಕಿಕೊಂಡು [26.4%] ಬಂದವರಾಗಿದ್ದಾರೆ. ಬೆಂಗಳೂರಿನಲ್ಲಿ 14,189 ವ್ಯಕ್ತಿಗಳು ನಗರ ನಿರಾಶ್ರಿತರ ವರ್ಗದಲ್ಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ. ಆದರೆ, ಅಸ್ತಿತ್ವದಲ್ಲಿರುವ ಶೆಲ್ಟರ್‌ ಹೌಸ್‌ಗಳು ಕೇವಲ 1,869 ಜನರಿಗೆ ಮಾತ್ರ ವಸತಿ ಕಲ್ಪಿಸಲು ಸಾಧ್ಯವಾಗಿದೆ ಅಂತ ಹೇಳಿದೆ.

ಸರ್ಕಾರಿ ಮತ್ತು ನಾಗರಿಕ ಸಂಘಟನೆಗಳ ಅಂದಾಜುಗಳ ಪ್ರಕಾರ, ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ 8,000 ರಿಂದ 10,000ಕ್ಕೂ ಹೆಚ್ಚು ನಿರಾಶ್ರಿತರು ಬೀದಿಗಳಲ್ಲಿ ಮಲಗುತ್ತಾರೆ. ಇವರಲ್ಲಿ ಸುಮಾರು30 % –35% ಮಹಿಳೆಯರು, ಮತ್ತು 10% –12% ಶೇಕಡಾ ಮಕ್ಕಳು ಎನ್ನಲಾಗುತ್ತದೆ. ಚಳಿಗಾಲದ ಅವಧಿಯಲ್ಲಿ ನಿರಾಶ್ರಿತರಲ್ಲಿ ಉಸಿರಾಟದ ಸಮಸ್ಯೆಗಳು, ಚರ್ಮ ರೋಗಗಳು ಮತ್ತು ಸೋಂಕುಗಳು 40 ಶೇಕಡಾ ವರೆಗೆ ಹೆಚ್ಚಾಗುತ್ತವೆ ಎಂಬುದು ಸಾರ್ವಜನಿಕ ಆರೋಗ್ಯ ತಜ್ಞರ ಅಭಿಪ್ರಾಯ.

ಕಳೆದ 40 ದಿನಗಳಲ್ಲಿ 15ಕ್ಕೂ ಹೆಚ್ಚು ನಿರಾಶ್ರಿತರು ಅಸಹಜ ಮರಣಕ್ಕೀಡಾಗಿದ್ದಾರೆ ಎಂದು ಬೆಂಗಳೂರು ಸಿಟಿ ಪೊಲೀಸ್ ಡೇಟಾ ತೋರಿಸಿದೆ. ಮಲ್ಲೇಶ್ವರಂ ಮತ್ತು ಸಿಟಿ ಮಾರ್ಕೆಟ್ ಪ್ರದೇಶಗಳಲ್ಲಿ ಈ ಸಂಖ್ಯೆ ಹೆಚ್ಚಿದೆ. ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ 13 ಡಿಗ್ರಿ ಸೆಲ್ಸಿಯಸ್‌ನಷ್ಟು ತಾಪಮಾನ ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಈ ಚಳಿಯೂ ಕೂಡ ನಿರಾಶ್ರಿತರ ಸಾವಿಗೆ ಒಂದು ರೀತಿಯಲ್ಲಿ ಕಾರಣವಾಗುತ್ತಿದೆ. ಬೆಂಗಳೂರಿನಲ್ಲಿ, ತಾಪಮಾನ ಕುಸಿತ, ಗಾಳಿಯ ಗುಣಮಟ್ಟ, ಕಳಪೆ ಗುಣಮಟ್ಟದ ಆಹಾರ ಮತ್ತು ನೀರಿನ ಸೇವನೆ ನಿರಾಶ್ರಿತರ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನ ಬೀರುತ್ತಿದೆ.

WhatsApp Image 2026 01 06 at 6.30.49 PM

ಆದಾಗ್ಯೂ, ಈ ಚಳಿಗಾಲದಲ್ಲಿ ಅನೇಕ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿ ಕಂಬಳಿಗಳು, ಆಹಾರ ಪ್ಯಾಕೆಟ್‌ಗಳು ಮತ್ತು ಇತರ ಆರೋಗ್ಯ ರಕ್ಷಣಾ ಅಗತ್ಯ ವಸ್ತುಗಳನ್ನು ವಿತರಿಸಿವೆ. ಉತ್ತರ ಬೆಂಗಳೂರಿನ ಯಶವಂತಪುರ ಮತ್ತು ವಿದ್ಯಾರಣ್ಯಪುರ ಪ್ರದೇಶಗಳಲ್ಲಿ, ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಗಳು ಚಳಿಗಾಲದ ಅಗತ್ಯ ವಸ್ತುಗಳು ಮತ್ತು ಆಹಾರವನ್ನು ನಿರಾಶ್ರಿತರಿಗೆ ಒದಗಿಸುವ ಮೂಲಕ ಕೊಡುಗೆ ನೀಡಿದ್ದಾರೆ.

ಈ ದಿನ.ಕಾಮ್ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗವಾದಂತೆ, ನಿರಾಶ್ರಿತ ಮಹಿಳೆಯರ ಪರಿಸ್ಥಿತಿ ಅತ್ಯಂತ ಆತಂಕಕಾರಿ. ರಾತ್ರಿ ವೇಳೆ ಪಾದಚಾರಿ ಮಾರ್ಗಗಳಲ್ಲಿ ಅಥವಾ ಬಸ್ ಸ್ಟ್ಯಾಂಡ್‌ಗಳ ಸುತ್ತ ಮಲಗುವ ಮಹಿಳೆಯರಿಗೆ ಯಾವುದೇ ರಕ್ಷಣೆಯಿಲ್ಲ. ಮಹಿಳೆಯರ ಸ್ಥಿತಿ ಅತ್ಯಂತ ದಯನೀಯ. ಅವರು ಚಳಿ ಮತ್ತು ಆರೋಗ್ಯ ಸಮಸ್ಯೆಗಳ ಜೊತೆಗೆ ಸೇಫ್ಟಿ ಚಾಲೆಂಜ್‌ಗಳನ್ನು ಎದುರಿಸುತ್ತಾರೆ. ಅನೇಕ ಮಹಿಳೆಯರು ಶೆಲ್ಟರ್‌ಗಳನ್ನು ಬಳಸದೇ ಬೀದಿಗಳಲ್ಲಿ ಮಲಗುತ್ತಾರೆ, ಏಕೆಂದರೆ ಶೆಲ್ಟರ್‌ಗಳಲ್ಲಿ ಕಾಡುವ ಅಸುರಕ್ಷಿತ ಭಾವನೆ.

photo 6262759348270467939 y

ಶೆಲ್ಟರ್‌ಗಳ ಸ್ಥಿತಿ

ಬೆಂಗಳೂರಿನಲ್ಲಿ 48 ನೈಟ್ ಶೆಲ್ಟರ್‌ಗಳಿವೆ. ಆದರೆ ಇರುವ ನಿರಾಶ್ರಿತರ ಜನಸಂಖ್ಯೆಗೆ ಕನಿಷ್ಠ 120 ಶೆಲ್ಟರ್‌ಗಳ ಅವಶ್ಯಕತೆ ಇದೆ. ಇರುವ ಕೆಲವು ಶೆಲ್ಟರ್‌ಗಳಲ್ಲಿ ನಿರ್ವಹಣೆಯ ಕೊರತೆ, ಸರಿಯಾದ ಸಮಯಕ್ಕೆ ಫಂಡಿಂಗ್‌ ಇಲ್ಲದಿರುವ ಸಮಸ್ಯೆಗಳೇ ಹೆಚ್ಚಿದೆ. ನಿರಾಶ್ರಿತ ಕುಟುಂಬಗಳೊಂದಿಗೆ ಮಲಗುವ ಮಕ್ಕಳು ಶಿಕ್ಷಣದಿಂದ ದೂರಾಗುತ್ತಿದ್ದಾರೆ. ಶಾಲೆಯ ಬದಲು ಬೀದಿ ಅವರ ತರಗತಿ ಆಗಿದೆ. ಆರೋಗ್ಯ ಸೇವೆಗಳ ಕೊರತೆಯಿಂದಾಗಿ ಸಣ್ಣ ಕಾಯಿಲೆಗಳೂ ಜೀವಘಾತಕವಾಗುವ ಸಾಧ್ಯತೆ ಇದೆ. ಹಿರಿಯ ನಾಗರಿಕರು ತಮ್ಮ ಜೀವನದ ಸಂಧ್ಯಾಕಾಲವನ್ನು ಇಂತಹ ಅಮಾನುಷ ಪರಿಸ್ಥಿತಿಯಲ್ಲಿ ಕಳೆಯುವುದು ನಗರಕ್ಕೆ ಶೋಭೆಯಲ್ಲ. ಸಮಾಜದ ನೈತಿಕ ಹೊಣೆಗಾರಿಕೆ ಇಲ್ಲಿಯೇ ಪ್ರಶ್ನೆಗೆ ಒಳಗಾಗುತ್ತದೆ.

photo 6262759348270467940 y

ಸರ್ಕಾರದ ಮಟ್ಟದಲ್ಲಿ ನಿರಾಶ್ರಿತರಿಗಾಗಿ ಆಶ್ರಯ ಗೃಹಗಳು, ನೈಟ್ ಶೆಲ್ಟರ್‌ಗಳು ಇದ್ದರೂ, ಅವುಗಳ ಸಂಖ್ಯೆ, ಸಾಮರ್ಥ್ಯ ಮತ್ತು ಗುಣಮಟ್ಟ ತೀರಾ ಕಳಪೆ. ಅನೇಕ ನಿರಾಶ್ರಿತರಿಗೆ ಇಂತಹ ಆಶ್ರಯಗಳ ಬಗ್ಗೆ ಮಾಹಿತಿ ಇಲ್ಲ, ಕೆಲವೆಡೆ ಮಹಿಳೆಯರಿಗೆ ಪ್ರತ್ಯೇಕ ಮತ್ತು ಸುರಕ್ಷಿತ ವ್ಯವಸ್ಥೆಗಳೇ ಇಲ್ಲ. ನಗರದ ಆಡಳಿತ, ಪೊಲೀಸ್ ಇಲಾಖೆ ಮತ್ತು ಸಾಮಾಜಿಕ ಕಲ್ಯಾಣ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಸ್ಪಷ್ಟವಾಗಿ ಕಾಣುತ್ತದೆ. SUH (Shelter for Urban Homeless) ಗೈಡ್‌ಲೈನ್ಸ್ ಪ್ರಕಾರ ಶೆಲ್ಟರ್‌ಗಳು 24/7 ಓಪನ್ ಇರಬೇಕು. ಆದರೆ ಪಾಲಿಸುತ್ತಿಲ್ಲ. ಫಂಡ್ ಕೊರತೆ ಮತ್ತು ಮಿಸ್‌ಮ್ಯಾನೇಜ್‌ಮೆಂಟ್‌ನಂತಹ ಸಮಸ್ಯೆಗಳು ಹೆಚ್ಚಿದೆ. ಕೇಂದ್ರ ಯೋಜನೆಯಾದ ದೀನದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (DAY-NULM) ಅಡಿಯಲ್ಲಿ, ನಾಗರಿಕ ಸಂಸ್ಥೆಗಳು ಮೂಲಸೌಕರ್ಯಗಳನ್ನು ಮತ್ತು ನಿರಾಶ್ರಿತರನ್ನು ಸಂಖ್ಯೆಗಳನ್ನು ದಾಖಲಿಸುವ ಅಗತ್ಯವಿದೆ.

ಈದಿನ.ಕಾಮ್ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ, ರಾತ್ರಿಯ ಬೆಂಗಳೂರು ಕೇವಲ ನಿದ್ರಿಸುತ್ತಿರುವ ನಗರವಲ್ಲ, ಅದು ನಿರ್ಲಕ್ಷಿತ ಬದುಕುಗಳ ಸಮೂಹ ಎಂಬುದು ಸ್ಪಷ್ಟವಾಗಿದೆ. ಕ್ಯಾಮೆರಾಗಳ ಮುಂದೆ ಮಾತನಾಡಲು ಹಿಂಜರಿಯುವ ನಿರಾಶ್ರಿತರು, ಅವರ ಕಣ್ಣುಗಳಲ್ಲಿ ಭವಿಷ್ಯದ ಅನಿಶ್ಚಿತತೆ ಮತ್ತು ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡ ಮನಸ್ಥಿತಿ ಇವೆಲ್ಲವೂ ಈ ವರದಿಯಲ್ಲಿ ದಾಖಲಾಗಿದೆ.

ಈ ಬಗ್ಗೆ ಈದಿನ.ಕಾಮ್‌ ಜೊತೆ ಮಾತನಾಡಿದ ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ “ಎಲ್ಲರಿಗೂ ವಸತಿ ಎನ್ನುವುದು ಗಗನ ಕುಸುಮವಾಗಿದೆ. ಗ್ರಾಮೀಣ ಭಾರತದ ಬದುಕಿನ ಸಂಕಷ್ಟಗಳು ಜನರನ್ನು ಬದುಕು ಕಟ್ಟಿಕೊಳ್ಳುವ ಭ್ರಮೆಯಲ್ಲಿ ನಗರಗಳಿಗೆ ಬರುವಂತೆ ಮಾಡುತ್ತದೆ. ಬಂದವರಿಗೆ ಕನಿಷ್ಠ ಸುರಕ್ಷಿತ ವಸತಿ ವ್ಯವಸ್ಥೆ ಕೂಡಾ ಇಲ್ಲದ ಸ್ಥಿತಿ ಇದೆ. ಮಹಿಳೆಯರು ಹಲವು ರೀತಿಯ ಸಮಸ್ಯೆ ಸಂಕಷ್ಟಗಳಿಗೆ, ಲೈಂಗಿಕ ದೌರ್ಜನ್ಯಗಳಿಗೂ ಒಳಗಾಗುತ್ತಾರೆ. ಇದು ಆಡಳಿತ ನಡೆಸುವವರ ಆದ್ಯತೆಗೆ ಹಿಡಿದ ಕನ್ನಡಿಯಾಗಿದೆ. ಸಿಲಿಕಾನ್ ಸಿಟಿಯ ಲಕ್ಸುರಿ ಉಳ್ಳವರಿಗೆ ಮಾತ್ರವೇ ಆಗಿದ್ದು ಇದು ಅಧಿಕಾರಸ್ಥರ ಉಳ್ಳವರ ಪರ ನೀತಿಗಳ ಪರಿಣಾಮವೇ ಆಗಿದೆ” ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

WhatsApp Image 2026 01 06 at 4.14.32 PM

ನಗರದ ಬೆಳವಣಿಗೆಯಲ್ಲಿ ನಿರಾಶ್ರಿತರನ್ನು ಮರೆಯಬಾರದು – ಅವರಿಗೂ ಸೂರು, ಸುರಕ್ಷತೆ ಮತ್ತು ಗೌರವದ ಜೀವನ ಬೇಕು. ಬೆಂಗಳೂರು ಬೆಳೆಯುತ್ತಿದೆ. ಆದರೆ ಯಾರಿಗಾಗಿ? ಗಾಜಿನ ಗೋಪುರಗಳ ಬೆಳಕು, ಪಾದಚಾರಿ ಮಾರ್ಗಗಳಲ್ಲಿ ಮಲಗುವವರ ಕತ್ತಲೆಯನ್ನು ಮರೆಮಾಚಬಾರದು. ನಿರಾಶ್ರಿತರ ಬದುಕನ್ನು ಕಾಣದೆ ಮುಂದುವರಿಯುವ ಅಭಿವೃದ್ಧಿ, ನಿಜವಾದ ಪ್ರಗತಿಯಲ್ಲ. ಈ ನಗರ ತನ್ನ ಮಾನವೀಯತೆಯನ್ನು ಮರಳಿ ಕಂಡುಕೊಳ್ಳಬೇಕಿದೆ. ಈ ರಿಯಾಲಿಟಿ ಚೆಕ್ ನಗರದ ದಾರುಣ ಮುಖವನ್ನು ತೋರಿಸುತ್ತದೆ. ಈ ಲೇಖನದ ಮೂಲಕ, ನಿದ್ದೆಯಿಲ್ಲದ ಆ ರಾತ್ರಿ, ಮಾತಿಲ್ಲದ ಆ ಜೀವಗಳ ಕಥೆಯನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಿದ್ದೇವೆ. ಇನ್ನಾದರೂ ಪ್ರಭುತ್ವದ ಕಣ್ಣು ತೆರೆಯಲಿ. ಸೂರಿಲ್ಲದವರು ಬೆಚ್ಚಗಿನ ರಾತ್ರಿಗಳನ್ನು ಕಾಣುವಂತಾಗಲಿ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...