ಮುಸ್ಲಿಂ ದ್ವೇಷದ ದಟ್ಟ ಇರುಳಿನಲ್ಲಿ ಮಸುಕಾಗುತ್ತಿರುವ ಸಾಮರಸ್ಯ–ಸಹಬಾಳ್ವೆಯ ಮೌಲ್ಯಗಳಿಗೆ ದೀಪಕ್ ಹೊಸ ದನಿಯಾಗಿ ಎದ್ದು ನಿಂತಿದ್ದಾರೆ. ಈತನ ನಡವಳಿಕೆ ದ್ವೇಷದ ಕುರುಡುಗಣ್ಣುಗಳಿಗೆ ಪ್ರೀತಿಯ ಬೆಳಕು ಹರಿಸಬೇಕಿದೆ.
“ಏನಾದರೂ ಆಗು, ಮೊದಲು ಮಾನವನಾಗು” ಎಂಬ ವಿಶ್ವಮಾನವ ಸಂದೇಶವನ್ನು ಸಾರಿದವರು ರಾಷ್ಟ್ರಕವಿ ಕುವೆಂಪು. ಅಂತೆಯೇ, ಡಾ. ಸಿದ್ಧಯ್ಯ ಪುರಾಣಿಕ್ ಅವರೂ ಕೂಡ ‘ಮೊದಲು ಮಾನವನಾಗು’ ಎಂದೇ ಹೇಳಿದ್ದಾರೆ. ಹಿರಿಯರು ಹಾಕಿಕೊಟ್ಟ ಈ ಸಂದೇಶವನ್ನು ಅರಿತು, ಪಾಲಿಸದ ಹಿಂದುತ್ವವಾದಿ ದುರುಳರು ದೇಶದ ನೆಮ್ಮದಿ, ಶಾಂತಿ ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆ. ದ್ವೇಷದ ಬೆಂಕಿ ಹಚ್ಚುತ್ತಿದ್ದಾರೆ. ತಾವು ಹಿಂದು ರಕ್ಷಕರೆಂದು ಹೇಳಿಕೊಂಡು, ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ. ಜನರ ಮನದಲ್ಲಿ ದ್ವೇಷದ ವಿಷವಿಕ್ಕುತ್ತಿದ್ದಾರೆ.
ಈ ಹಿಂದುತ್ವ ಕೋಮುವಾದಿಗಳ ಉಪಟಳ 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹೆಚ್ಚಾಗಿದೆ. ಲಂಗು-ಲಗಾಮು ಇಲ್ಲದಂತೆ ವರ್ತಿಸುವ ಇವರುಗಳು ದೇಶದಾದ್ಯಂತ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ. ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುತ್ತಿದ್ದಾರೆ. ಮುಸ್ಲಿಂ ವ್ಯಾಪಾರಿಗಳ ಮೇಲೆ ದಾಳಿ-ದಾಂಧಲೆಗಳು ಹೆಚ್ಚಾಗಿವೆ. ಹಿಂದೂ ದೇವಸ್ಥಾನಗಳ ಮುಂದೆ ಮುಸ್ಲಿಂರು ವ್ಯಾಪಾರ ಮಾಡುತ್ತಿದ್ದರೇ ಗಲಭೆ ಎಬ್ಬಿಸುವುದು, ಮುಸ್ಲಿಂರು ಹಿಂದು ಹೆಸರನ್ನಿಟ್ಟು ವ್ಯಾಪಾರ ಮಾಡಬಾರದು ಎಂಬ ಕಟ್ಟುಪಾಡುಗಳನ್ನೇ ಇವರುಗಳೇ ಹಾಕಿಕೊಂಡು ಸಾಮಾನ್ಯ ಜನರ ಮೇಲೆ ದರ್ಪ ತೋರುತ್ತಿದ್ದಾರೆ. ಮೋದಿ ಕಾಲದಲ್ಲಿ ವಿದ್ಯೆ, ಕೆಲಸವಿಲ್ಲದ ಈ ಹಿಂದುತ್ವವಾದಿಗಳು ಆಡಿದ್ದೆ ಆಟವಾಗಿದೆ. ಇವರ ಆಟಕ್ಕೆ ಲಗಾಮು ಹಾಕುವ ಸರ್ಕಾರ ಸದ್ಯ ದೇಶದಲ್ಲಿಲ್ಲ. ಆದರೆ, ಇವರ ಆಟಗಳನ್ನ ಪ್ರಶ್ನೆ ಮಾಡುವ ನಿಜವಾದ ದೇಶಭಕ್ತರು ಈ ದೇಶದಲ್ಲಿದ್ದಾರೆ.
ಹೌದು, 70 ವರ್ಷದ ಮುಸ್ಲಿಂ ವಯೋವೃದ್ಧನ ಮೇಲೆ ದರ್ಪ ತೋರಿಸುತ್ತಿದ್ದ ಬಜರಂಗದಳ ಕಾರ್ಯಕರ್ತರನ್ನ 46 ವರ್ಷ ವಯಸ್ಸಿನ ದೀಪಕ್ ಅವರು ತಡೆದಿದ್ದಾರೆ. ಅವರನ್ನು ಎದುರಿಸಿ ನಿಂತಿದ್ದಾರೆ.
‘ಬಾಬಾ’ ಎಂಬ ಹೆಸರಿನಿಂದ ಈ ಗಲಾಟೆ ಆರಂಭವಾಗಿದೆ. ಜನವರಿ 26ರಂದು ಉತ್ತರಾಖಂಡದಲ್ಲಿ ಬಜರಂಗದಳಕ್ಕೆ ಸೇರಿದವರು ಎನ್ನಲಾದ ಹಿಂದುತ್ವ ಕೋಮುವಾದಿಗಳ ಗುಂಪೊಂದು ‘ಬಾಬಾ ಸ್ಕೂಲ್ ಡ್ರೆಸ್’ ಅಂಗಡಿಯ ಮಾಲೀಕ ವಕೀಲ್ ಅಹ್ಮದ್ ಅವರಿಗೆ ಬೆದರಿಕೆ ಹಾಕಿದೆ. ಅಂಗಡಿಗೆ ಬಾಬಾ ಎಂದು ಹೆಸರಿಟ್ಟಿರುವುದನ್ನ ತೆಗೆದು ಹಾಕಬೇಕು ಎಂದು ಒತ್ತಾಯಿಸಿದೆ. ಬಾಬಾ ಎಂಬ ಪದವನ್ನು ಹಿಂದೂ ಧಾರ್ಮಿಕ ವ್ಯಕ್ತಿಗಳು ಮಾತ್ರ ಬಳಸಬೇಕು. ಮುಸ್ಲಿಂರು ಬಳಸಬಾರದು ಎಂದು ಹೇಳಿದ್ದಾರೆ.
ವಯೋವೃದ್ಧ ಮುಸ್ಲಿಂ ಅಂಗಡಿ ಮಾಲೀಕನಿಗೆ ಬಜರಂಗದಳ ಕಾರ್ಯಕರ್ತರು ನೀಡುತ್ತಿದ್ದ ಕಿರುಕುಳವನ್ನ ನೋಡತ್ತ ಕುಳಿತುಕೊಳ್ಳದೇ, ಮಧ್ಯಪ್ರವೇಶಿಸಿದ ಕೋಟ್ದ್ವಾರದಲ್ಲಿ ಜಿಮ್ ನಡೆಸುತ್ತಿರುವ ದೀಪಕ್ ಕುಮಾರ್ ಕೋಮುವಾದಿಗಳ ಗುಂಪನ್ನು ಧೈರ್ಯವಾಗಿ ಎದುರಿಸಿದ್ದಾರೆ. ವಿಡಿಯೋವೊಂದರಲ್ಲಿ ತನ್ನನ್ನು ತಾನು ‘ಮೊಹಮ್ಮದ್ ದೀಪಕ್’ ಎಂದು ಕರೆದುಕೊಂಡಿದ್ದಾರೆ. ತಾನೂ ಭಾರತೀಯ. ಕಾನೂನಿನ ಮುಂದೆ ಎಲ್ಲರೂ ಸರಿಸಮಾನರು ಎಂದು ಹೇಳಿದ್ದಾರೆ. ದೀಪಕ್ ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ದೀಪಕ್ ಮಧ್ಯಪ್ರವೇಶಿಸಿದ ಬಳಿಕ ಹಿಂದುತ್ವವಾದಿಗಳ ಗುಂಪು ದೀಪಕ್ ವಿರುದ್ಧವೇ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಹಲವರ ವಿರುದ್ಧ ಉತ್ತರಾಖಂಡ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಸದ್ಯ ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ದೀಪಕ್ ಮಧ್ಯಪ್ರವಶಿಸಿದ್ದಕ್ಕೆ ರೊಚ್ಚಿಗೆದ್ದಿದ್ದ ಹಿಂದುತ್ವವಾದಿಗಳ ಗುಂಪು ಜನವರಿ 31ರಂದು ದೀಪಕ್ ಅವರ ಜಿಮ್ ಬಳಿ ಸುಮಾರು 40 ಜನರ ಗುಂಪಿನೊಂದಿಗೆ ತೆರಳಿದ್ದಾರೆ. ದೀಪಕ್ ವಿರುದ್ಧ ಘೋಷಣೆಗಳನ್ನ ಕೂಗುತ್ತಾ ಉದ್ವಿಗ್ನತೆಯನ್ನು ಸೃಷ್ಟಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಮೂರು ಪ್ರತ್ಯೇಕ ಎಫ್ ಐ ಆರ್ ದಾಖಲಿಸಿದ್ದಾರೆ. ಸಂಚಾರಕ್ಕೆ ಅಡ್ಡಿಪಡಿಸುವುದು, ಕೋಮು ಸಾಮರಸ್ಯವನ್ನು ಭಂಗಗೊಳಿಸುವುದು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ 30 ರಿಂದ 40 ಅಪರಿಚಿತ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ವಕೀಲ್ ಅಹ್ಮದ್ ಅವರ ದೂರಿನ ಆಧಾರದ ಮೇಲೆ ಎರಡನೇ ಎಫ್ಐಆರ್ ದಾಖಲಿಸಲಾಗಿದೆ. ಜನವರಿ 28ರಂದು ನಡೆದ ಘರ್ಷಣೆಯ ಸಂದರ್ಭದಲ್ಲಿ ಅವಹೇಳನಕಾರಿ ಭಾಷೆ ಬಳಸಿ ಬೆದರಿಕೆ ಹಾಕಿದ ಆರೋಪದ ಮೇಲೆ ದೀಪಕ್ ಕುಮಾರ್ ಮತ್ತು ಅವರ ಸಹಚರರ ವಿರುದ್ಧ ಮತ್ತೊಬ್ಬ ಸ್ಥಳೀಯ ನಿವಾಸಿ ಕಮಲ್ ಪ್ರಸಾದ್ ಅವರು ಮೂರನೇ ಎಫ್ಐಆರ್ ದಾಖಲಿಸಿದ್ದಾರೆ.
ದೀಪಕ್ ಅವರು ತಾವು ತೆಗೆದುಕೊಂಡ ನಿಲುವಿನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಗಮನ ಸೆಳೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿನ ವೀಡಿಯೊವೊಂದರಲ್ಲಿ ಮಾತನಾಡಿದ ಅವರು, “ನಾನು ಹಿಂದೂ ಅಲ್ಲ, ಮುಸಲ್ಮಾನ ಅಲ್ಲ, ಸಿಖ್ ಅಲ್ಲ, ಕ್ರೈಸ್ತನೂ ಅಲ್ಲ. ನಾನು ಎಲ್ಲಕ್ಕಿಂತ ಮೊದಲು ಒಬ್ಬ ಮನುಷ್ಯ. ನಮ್ಮ ದೇಶಕ್ಕೆ ಪ್ರೀತಿ ಮತ್ತು ವಾತ್ಸಲ್ಯ ಬೇಕು, ದ್ವೇಷವಲ್ಲ. ಪ್ರೀತಿಯನ್ನು ಹರಡುವುದು ಬಹಳ ದೊಡ್ಡ ವಿಷಯ. ಮುಂದೆಯೂ ಅನ್ಯಾಯ ಕಂಡರೆ ಪ್ರತಿಭಟಿಸಲು ಹಿಂಜರಿಯುವುದಿಲ್ಲ’” ಎಂದು ಹೇಳಿದ್ದಾರೆ. “ಬೆದರಿಕೆಗಳು ಮತ್ತು ಆನ್‌ಲೈನ್ ನಿಂದನೆಯ ಹೊರತಾಗಿಯೂ, ತನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಲಿತ ನಾಯಕಿ ದಲಿತರಿಗೇ ವಿರುದ್ಧವಾಗಿ ವರ್ತಿಸುತ್ತಿರುವುದೇಕೆ?
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಸಿವಿಲ್ ಸೊಸೈಟಿ ಸಂಸ್ಥೆಗಳು ದೀಪಕ್ ಅವರ ಬೆಂಬಲಕ್ಕೆ ನಿಂತಿವೆ.
“ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಸಂಘ ಪರಿವಾರವು ಸಂವಿಧಾನವನ್ನು ತುಳಿಯಲು ಪ್ರತಿದಿನ ಪಿತೂರಿ ನಡೆಸುತ್ತಿದೆ. ಉತ್ತರಾಖಂಡದ ದೀಪಕ್ ಸಂವಿಧಾನ ಮತ್ತು ಮಾನವೀಯತೆಗಾಗಿ ಹೋರಾಡುತ್ತಿರುವುದರಿಂದ ಅವರು ಭಾರತದ ವೀರ” ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ.
“ನಮಗೆ ದೀಪಕ್‌ನಂತಹ ಹೆಚ್ಚಿನ ಜನರು ಬೇಕು. ತಲೆಬಾಗದವರು, ಭಯಪಡದವರು ಹಾಗೂ ಸಂವಿಧಾನದೊಂದಿಗೆ ತಮ್ಮ ಎಲ್ಲ ಶಕ್ತಿಯಿಂದ ದೃಢವಾಗಿ ನಿಲ್ಲುವವರು ಬೇಕು. ನಾವು ನಿಮ್ಮೊಂದಿಗಿದ್ದೇವೆ ಸಹೋದರ. ಭಯಪಡಬೇಡಿ. ನೀವು ಸಿಂಹ ಹೃದಯದ ಯೋಧ. ‘ದ್ವೇಷದ ಮಾರುಕಟ್ಟೆ’ಯಲ್ಲಿ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ಜೀವಂತ ಸಂಕೇತ” ಎಂದು ದೀಪಕ್ ಅವರನ್ನು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ.
ಮುಸ್ಲಿಂರ ವಿರುದ್ಧ ಒಂದಲ್ಲ ಒಂದು ರೀತಿಯಲ್ಲಿ ಜಗಳಕ್ಕೆ ಮುಂದಾಗುವ ಈ ಹಿಂದುತ್ವವಾದಿಗಳು ನಿರುದ್ಯೋಗಿಗಳು. ಮಾಡಲು ಸರಿಯಾದ ಕೆಲಸವಿದ್ದಿದ್ದರೇ, ಈ ರೀತಿಯ ಗೂಜಿಗೆ ಹೋಗುತ್ತಿರಲಿಲ್ಲ. ದೇಶದಲ್ಲಿರುವ ನಿರುದ್ಯೋಗವೂ ಇದಕ್ಕೆ ಕಾರಣ.

‘ಬಾಬಾ‘ ಎಂಬ ಪದ ಯಾವುದೇ ಧರ್ಮದ ಸ್ವತ್ತಲ್ಲ. ಹಾಗೇ ನೋಡಿದರೇ, ಚಿಕ್ಕಮಗಳೂರಿಗೆ ಕಾಫಿ ತಂದು ಅದನ್ನ ಇಡೀ ದೇಶದ ಆರ್ಥಿಕತೆಯ ಶಕ್ತಿಯಾಗಿ ಮಾಡಿದವರು ‘ಬಾಬಾ ಬುಡನ್‘. ಇನ್ನು ಜಾತ್ಯಾತೀತ, ಸೌಹಾರ್ದತೆ ಸಮಾನತೆಯ ಶಕ್ತಿ ‘ಶಿರಡಿ ಸಾಯಿಬಾಬಾ‘ ಮುಸ್ಲಿಂರು. ಆದರೆ, ಈ ಜಾತಿ ಎಂಬ ಬೇಗುದಿಗೆ ಬೀಳದೇ ಸಮಾಜಕ್ಕೆ ಸಂದೇಶವನ್ನ ತಂದುಕೊಟ್ಟಿದ್ದಾರೆ. ಇದನ್ನೇ ಅರಿತು ಅರಿಯದೇ ಇರುವ ಈ ಮತಿಗೇಡಿಗಳು ಬಾಬಾ ಎಂಬ ಹೆಸರನ್ನಿಟ್ಟುಕೊಂಡು ಗಲಭೆ ಎಬ್ಬಿಸುತ್ತಾರೆ. ಬಹುಸಂಖ್ಯಾತರಾದ ಹಿಂದುಗಳಿಗೆ ಅಲ್ಪಸಂಖ್ಯಾತರಾದ ಮುಸ್ಲಿಂರಿಂದ ಅಪಾಯ ಎಂಬ ಪೊಳ್ಳು ಸುಳ್ಳನ್ನ ಮುನ್ನೆಲೆಗೆ ತಂದು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ.
46 ವರ್ಷ ವಯಸ್ಸಿನ ಜಿಮ್ ಮಾಲೀಕ ದೀಪಕ್, ಹಿಂದೂ ಮತಾಂಧರ ಬೆದರಿಕೆಗಳಿಗೆ ಜಗ್ಗದೆ, ದೃಢವಾಗಿ ನಿಂತು ತನ್ನನ್ನು “ಮೊಹಮ್ಮದ್ ದೀಪಕ್” ಎಂದು ಕರೆದುಕೊಂಡು ತಾನು ನಂಬಿದ ಮಾನವೀಯತೆಯ ಮಾರ್ಗದಲ್ಲೇ ಪ್ರತಿಭಟಿಸಿದ್ದಾರೆ. ಧರ್ಮದ ಹೆಸರಿನಲ್ಲಿ ನಡೆಯುವ ದ್ವೇಷ ರಾಜಕಾರಣದ ಎದುರು, ಗುರುತುಗಳನ್ನೇ ಪ್ರಶ್ನಿಸುವ ಮೂಲಕ ನಿಂತ ಈ ನಡೆ, ಕೇವಲ ಪ್ರತಿರೋಧವಲ್ಲ — ಅದು ನೈತಿಕ ಧೈರ್ಯದ ಘೋಷಣೆ.
ಮುಸ್ಲಿಂ ದ್ವೇಷದ ದಟ್ಟ ಇರುಳಿನಲ್ಲಿ ಮಸುಕಾಗುತ್ತಿರುವ ಸಾಮರಸ್ಯ–ಸಹಬಾಳ್ವೆಯ ಮೌಲ್ಯಗಳಿಗೆ ದೀಪಕ್ ಹೊಸ ದನಿಯಾಗಿ ಎದ್ದು ನಿಂತಿದ್ದಾರೆ. ಈತನ ನಡವಳಿಕೆ ದ್ವೇಷದ ಕುರುಡುಗಣ್ಣುಗಳಿಗೆ ಪ್ರೀತಿಯ ಬೆಳಕು ಹರಿಸಬೇಕಿದೆ.




