ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಯಾವುದೇ ಯೋಜನೆ ಮಾನವ ಹಕ್ಕುಗಳು, ಪರಿಸರ ಮತ್ತು ಆರ್ಥಿಕ ಸ್ವಾಯತ್ತತೆಯ ಮೇಲೆ ದುಷ್ಪರಿಣಾಮ ಬೀರಬಾರದು. ಬಾಂಗ್ಲಾದೇಶದಂತಹ ಘಟನೆಗಳು ಇತರ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಿವೆ. ನಿಜವಾದ ಪ್ರಗತಿ ಎಂದರೆ ನೈಸರ್ಗಿಕ ಸಂಪನ್ಮೂಲಗಳ ಸಮತೋಲನದ ಬಳಕೆ, ಮಾನವೀಯ ಮೌಲ್ಯಗಳ ರಕ್ಷಣೆಯೊಂದಿಗೆ ನಡೆಯುವ ಆರ್ಥಿಕ ವಿಕಾಸವೇ ಆಗಿರಬೇಕು. ಆದರೆ ಇವೆಲ್ಲವನ್ನೂ ಅದಾನಿ ಸಮೂಹ ನಿರ್ಲಕ್ಷಿಸುತ್ತಿದೆ
ಭಾರತದ ಉದ್ಯಮಿ ಗೌತಮ್ ಅದಾನಿಯ ಅದಾನಿ ಗ್ರೂಪ್ (Adani Group), ವಿದ್ಯುತ್, ಗಣಿಗಾರಿಕೆ ಮತ್ತು ಬಂದರುಗಳಂತಹ ವ್ಯಾಪಾರಗಳಲ್ಲಿ ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದರೆ ಇವೆಲ್ಲ ಉದ್ಯಮಗಳು ಭ್ರಷ್ಟಾಚಾರ, ಪರಿಸರ ನಾಶ, ಮಾನವ ಹಕ್ಕುಗಳ ಉಲ್ಲಂಘನೆಗಳಂತಹ ಗಂಭೀರ ಆರೋಪಗಳಿವೆ. 2025ರ ನವೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಬೆಳವಣಿಗೆ ಇದಕ್ಕೊಂದು ಹೊಸ ಉದಾಹರಣೆಯಾಗಿದೆ. ಬಾಂಗ್ಲಾದ ನೂತನ ಸರ್ಕಾರವು ಅದಾನಿ ಪವರ್ ಗ್ರೂಪ್ (Adani power group)ನೊಂದಿಗಿನ 1617 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯದ ಸರಬರಾಜು ಒಪ್ಪಂದವನ್ನು ರದ್ದು ಮಾಡುವ ಬೆದರಿಕೆಯನ್ನು ಹಾಕಿದೆ. ಈ ಆರೋಪಗಳು ಸಾಬೀತಾದರೆ ಒಪ್ಪಂದ ಕೈಬಿಡಲಾಗುವುದಾಗಿ ಸ್ಪಷ್ಟಪಡಿಸಿದೆ. ಇದು ಕೇವಲ ಬಾಂಗ್ಲಾದೇಶಕ್ಕೆ ಸೀಮಿತವಲ್ಲ; ಶ್ರೀಲಂಕಾ, ಕೆನ್ಯಾ, ಆಸ್ಟ್ರೇಲಿಯಾ ಮತ್ತು ವಿಯಟ್ನಾಂನಂತಹ ದೇಶಗಳಲ್ಲಿ ಅದಾನಿ ಯೋಜನೆಗಳು ರದ್ದಾಗಿವೆ ಅಥವಾ ಸ್ಥಗಿತಗೊಂಡಿವೆ.
ಅದಾನಿ ಪವರ್ (ಜಾರ್ಖಂಡ್) ಲಿಮಿಟೆಡ್ 2017ರ ನವೆಂಬರ್‌ನಲ್ಲಿ ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್ (BPDB) ಜೊತೆ 25 ವರ್ಷಗಳ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದದಡಿ ಜಾರ್ಖಂಡ್‌ನ ಗಾಡ್ಡಾದಲ್ಲಿರುವ 1,600 MW (2 x 800 MW) ಅಲ್ಟ್ರಾ-ಸೂಪರ್‌ಕ್ರಿಟಿಕಲ್ ಕಲ್ಲಿದ್ದಲು ಆಧಾರಿತ ಉತ್ಪಾದನಾ ಘಟಕದಿಂದ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜಾಗುತ್ತದೆ. ಒಪ್ಪಂದದ ಒಟ್ಟು ಮೌಲ್ಯ 23.87 ಬಿಲಿಯನ್ ಡಾಲರ್(2 ಲಕ್ಷ ಕೋಟಿ ರೂಪಾಯಿ) ಆಗಿದ್ದು, ಪ್ರತಿ ಯೂನಿಟ್‌ಗೆ 10.08 ಸೆಂಟ್‌ಗಳ (Tk 14.87 – ಬಾಂಗ್ಲಾ ದರ) ದರ ನಿಗದಿಪಡಿಸಲಾಗಿದೆ. 2023ರ ಏಪ್ರಿಲ್‌ನಿಂದ ಸಂಪೂರ್ಣ ಸರಬರಾಜು ಆರಂಭವಾಯಿತು. ಗಾಡ್ಡಾ ಉತ್ಪಾದಿತ ವಿದ್ಯುತ್ ಪಶ್ಚಿಮ ಬಂಗಾಳದ ಬೆಹರಾಂಪುರ್ – ಬಾಂಗ್ಲಾದೇಶದ ಭೇರಾಮಾರಾ ನಡುವಿನ 400 kV HVDC ಅಂತಾರಾಷ್ಟ್ರೀಯ ವಿದ್ಯುತ್ ಮಾರ್ಗದ ಮೂಲಕ ಬಾಂಗ್ಲಾದೇಶದ ರಾಷ್ಟ್ರೀಯ ಗ್ರಿಡ್‌ಗೆ ತಲುಪುತ್ತದೆ. ಈ ಯೋಜನೆಯು ಮೋದಿ-ಶೇಖ್ ಹಸೀನಾ(ಬಾಂಗ್ಲಾ ಉಚ್ಚಾಟಿತ ನಾಯಕಿ) ಭೇಟಿಯ ಫಲಿತಾಂಶವಾಗಿದ್ದು, ದುಬಾರಿ ದರ ಮತ್ತು ಭ್ರಷ್ಟಾಚಾರ ಆರೋಪಗಳಿಂದ ವಿವಾದಕ್ಕೊಳಗಾಗಿದೆ.
ಹೆಚ್ಚು ದರ ಮತ್ತು ಭ್ರಷ್ಟಾಚಾರ
2024ರಲ್ಲಿ ಹಸೀನಾ ಸರ್ಕಾರ ಪತನವಾದ ನಂತರ, ಮಧ್ಯಂತರ ಸರ್ಕಾರದ ನೇತೃತ್ವದಲ್ಲಿ ಮುಹಮ್ಮದ್ ಯೂನುಸ್ ಅಧಿಕಾರಕ್ಕೆ ಬಂದರು. ಅವರ ಸರ್ಕಾರದ ವಿದ್ಯುತ್ ಸಚಿವಾಲಯದ ಅಡಿಯಲ್ಲಿ ರಚಿಸಲಾದ ‘ಉನ್ನತ ಮಟ್ಟದ ತಜ್ಞ ಸಮಿತಿ (High-Level Expert Panel)’ ಅದಾನಿ ಪವರ್ ಒಪ್ಪಂದವನ್ನು ಪರಿಶೀಲಿಸಿತು. ಆ ಪರಿಶೀಲನೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪಗಳು ಪತ್ತೆಯಾಗಿವೆ. ಸಮಿತಿಯ ವರದಿಯ ಪ್ರಕಾರ, ಈ ಒಪ್ಪಂದದಲ್ಲಿ “ಸಂಘಟಿತ ಭ್ರಷ್ಟಾಚಾರ” ನಡೆದಿದೆ ಮತ್ತು ಈ ಒಪ್ಪಂದಗಳನ್ನು ಕೆಲವರಿಗೆ ಅನ್ಯಾಯವಾಗಿ ಲಾಭ ತರುವಂತೆ ಬಳಸಲಾಗಿದೆ. ವರದಿ ಹೇಳುವಂತೆ, ಒಪ್ಪಂದ ಮಾಡುವಾಗ ನಿಯಮಗಳು ಮತ್ತು ಸರಿಯಾದ ಕ್ರಮಗಳನ್ನು ಪಾಲಿಸದಿರುವುದು, ಅತಿಯಾದ ಬೆಲೆ ನಿಗದಿ ಮತ್ತು ಹಸೀನಾ ಸರ್ಕಾರದ ಕೆಲವು ಅಧಿಕಾರಿಗಳೊಂದಿಗೆ ಸಂಧಾನದ ಮೂಲಕ ಒಪ್ಪಂದಗಳನ್ನು ಮಾಡಿದ ಸಂದರ್ಭಗಳು ಕಂಡುಬಂದಿವೆ.

ಇದರಿಂದ ಬಾಂಗ್ಲಾದೇಶವು ವಿದ್ಯುತ್ ಪಡೆಯದೇ, ಸುಮಾರು 100 ಕೋಟಿ ಡಾಲರ್ ಬಾಕಿ ಸಾಲದಲ್ಲಿದೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಭಾರವಾಗಿದೆ. ಬಾಂಗ್ಲಾದೇಶಕ್ಕೆ ಅದಾನಿ ಪವರ್ ನೀಡುತ್ತಿರುವ ವಿದ್ಯುತ್ ದರವು ಭಾರತದಲ್ಲಿನ ಇತರ ಖಾಸಗಿ ಉತ್ಪಾದಕರಿಗಿಂತ ಬಹಳ ಹೆಚ್ಚು ಎಂದು ಆಕ್ಷೇಪಣೆಗಳು ವ್ಯಕ್ತವಾಗಿವೆ. ವರದಿಗಳ ಪ್ರಕಾರ, ಈ ದರವು ಕೆಲವರ ಲೆಕ್ಕದಲ್ಲಿ ಶೇ 25 ರಿಂದ 60ರಷ್ಟು ಹೆಚ್ಚು ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ, ಬಾಂಗ್ಲಾದೇಶವು ವಿದ್ಯುತ್ ಖರೀದಿಗಾಗಿ ಅಧಿಕ ಮೊತ್ತವನ್ನು ಪಾವತಿಸಬೇಕಾಗುತ್ತದೆ, ಇದು ದೇಶದ ಸಾರ್ವಜನಿಕ ಹಣಕಾಸಿನ ಮೇಲೆ ಒತ್ತಡ ಉಂಟಾಗುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ — ಪಾವತಿಗಳ ಬಾಕಿ ಮೊತ್ತ. ಬಾಂಗ್ಲಾದೇಶ ಸರ್ಕಾರವು ಅದಾನಿ ಪವರ್‌ಗೆ ಸುಮಾರು 900 ಮಿಲಿಯನ್ ಡಾಲರ್ (ಸುಮಾರು 7,500 ಕೋಟಿ ರೂ.) ಬಾಕಿಯಾಗಿರುವುದಾಗಿ ವರದಿಯಾಗಿದೆ. ಇದು ಕೂಡ ದೇಶಕ್ಕೆ ಹೊರೆಯಾಗಿದೆ.
ಇಂಧನ ದರಗಳ ಏರಿಕೆ ಮತ್ತು ವಿದೇಶಿ ವಿನಿಮಯದ ಕೊರತೆಯಿಂದಾಗಿ ಬಾಂಗ್ಲಾದೇಶ ಈಗಾಗಲೇ ವಿದ್ಯುತ್ ಕ್ಷೇತ್ರದಲ್ಲಿ ಹಣಕಾಸಿನ ಬಿಕ್ಕಟ್ಟಿನಲ್ಲಿದೆ. ಈ ಪರಿಸ್ಥಿತಿಯಲ್ಲಿ, ಹೆಚ್ಚು ದರದ ಒಪ್ಪಂದಗಳು ಸಾರ್ವಜನಿಕರ ಅಸಮಾಧಾನವನ್ನು ಹೆಚ್ಚಿಸುತ್ತಿವೆ. ಇವೆಲ್ಲ ಹಿನ್ನಲೆಯಲ್ಲಿ ಒಪ್ಪಂದದ ಪ್ರಾಮಾಣಿಕತೆ, ದರ ಮತ್ತು ಅದಾನಿ ಸಮೂಹದ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಈ ಒಪ್ಪಂದವನ್ನು ಮರುಪರಿಶೀಲನೆಗೆ ಒಳಪಡಿಸಿದೆ. ವರದಿಗಳ ಪ್ರಕಾರ, ಹೊಸ ಆಡಳಿತವು “ಒಪ್ಪಂದದಲ್ಲಿ ಭ್ರಷ್ಟಾಚಾರ ಅಥವಾ ಅನಿಯಮಿತತೆ ಸಾಬೀತಾದರೆ, ಅದನ್ನು ರದ್ದುಗೊಳಿಸಲಾಗುವುದು ಎಂದು ಘೋಷಿಸಿದೆ. ಎಂದಿನಂತೆ ಸುಳ್ಳುಗಳನ್ನು ಸಮರ್ಥಿಸುವ ಅದಾನಿ ಸಮೂಹ ಈ ಆರೋಪಗಳನ್ನು ನಿರಾಕರಿಸಿ ಅಂತಾರಾಷ್ಟ್ರೀಯ ನ್ಯಾಯಮಂಡಳಿಗೆ ಹೋಗುವುದಾಗಿ ಹೇಳಿದೆ. ಇದು ಅದಾನಿ ಸಾಮ್ರಾಜ್ಯದ ಸ್ವಭಾವವನ್ನು ತೋರಿಸುತ್ತದೆ. ಭ್ರಷ್ಟಾಚಾರದ ಆರೋಪಗಳು ಬಂದರೆ ಕಾನೂನು ಜಗಳಗಳನ್ನು ಆರಂಭಿಸಿ, ಒಪ್ಪಂದ ಮಾಡಿಕೊಂಡ ದೇಶಗಳನ್ನು ಒತ್ತಾಯಗೊಳಿಸುವುದು ಇಲ್ಲವೇ ಆರ್ಥಿಕವಾಗಿ ನಷ್ಟಗೊಳಿಸುವುದು ಅದಾನಿ ಸಮೂಹದ ಚಾಳಿಯಾಗಿದೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿಗಳ ಛಲಕ್ಕೊಂದು ಸಲಾಂ; ಮಾತು ತಪ್ಪದಿರಲಿ ಸರ್ಕಾರ
ಅದಾನಿ ಮೇಲಿನ ಜಾಗತಿಕ ಆರೋಪಗಳು
ಅದಾನಿ ಗ್ರೂಪ್‌ನ ಯೋಜನೆಗಳು ಬಾಂಗ್ಲಾದೇಶಕ್ಕೆ ಸೀಮಿತವಲ್ಲ ಹಲವು ದೇಶಗಳಿಗೆ ಭ್ರಷ್ಟಾಚಾರ, ಪರಿಸರ ಹಾನಿ ಮತ್ತು ಮಾನವ ಹಕ್ಕು ಉಲ್ಲಂಘನೆಗಳನ್ನು ಎಸಗುತ್ತಲೇ ಬಂದಿದೆ. ಶ್ರೀಲಂಕಾದಲ್ಲಿ 2025ರ ಫೆಬ್ರುವರಿಯಲ್ಲಿ 484 MW ಪವನ ವಿದ್ಯುತ್ ಯೋಜನೆಗಳು ರದ್ದಾಯಿತು. 442 ಮಿಲಿಯನ್ ಡಾಲರ್ ಮೌಲ್ಯದ ಈ ಯೋಜನೆಯನ್ನು ಅದಾನಿ ಹಿಂಪಡೆದರು, ಏಕೆಂದರೆ ಪರಿಸರ ಹಾನಿ ಮತ್ತು ಸ್ಥಳೀಯರ ಪ್ರತಿಭಟನೆಗಳಿಂದ ಅಲ್ಲಿನ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತು. ಸರ್ಕಾರ “ಪರಿಸರ ಅನುಮತಿ ಇಲ್ಲ” ಎಂದು ಹೇಳಿತು. ಅದಾನಿ ಮೊದಲು ನಿರಾಕರಿಸಿದರೂ, ಕೊನೆಗೆ ಒಪ್ಪಿಕೊಂಡು ಯೋಜನೆ ಕೈಬಿಟ್ಟಿತು.
ಕೆನ್ಯಾದಲ್ಲಿ 2024ರ ನವೆಂಬರ್‌ನಲ್ಲಿ ಅಧ್ಯಕ್ಷ ವಿಲಿಯಂ ರುತೊ ಅದಾನಿ ವಿಮಾನಯಾನ ಯೋಜನೆಗಳನ್ನು ರದ್ದುಗೊಳಿಸಿದರು. ಏರ್‌ಪೋರ್ಟ್ ವಿಸ್ತರಣೆ (1.4 ಬಿಲಿಯನ್ ಡಾಲರ್) ಮತ್ತು ನದಿ ಯೋಜನೆ (568 ಮಿಲಿಯನ್ ಡಾಲರ್)ಯನ್ನು ಸರ್ಕಾರ “ಭ್ರಷ್ಟಾಚಾರ ಸಾಧ್ಯತೆ” ಎಂದು ಹೇಳಿತು. ಅಲ್ಲಿನ ಸ್ಥಳೀಯರು ಕೂಡ ಮೂಲಸೌಕರ್ಯ ನಾಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಆಸ್ಟ್ರೇಲಿಯಾದ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯಲ್ಲಿ ಆದಿವಾಸಿಗಳು ಭೂಮಿ ಹಕ್ಕುಗಳ ಉಲ್ಲಂಘನೆಗೆ ದೂರು ನೀಡಿದರು; 2024ರಲ್ಲಿ ಅಲ್ಲಿನ ಸರ್ಕಾರ ಪರಿಶೀಲನೆಗೆ ಒಳಪಡಿಸುವುದಾಗಿ ತಿಳಿಸಿತು. ಆದರೂ ಪ್ರತಿಭಟನೆಗಳು ಮುಂದುವರಿದಿವೆ. ವಿಯೆಟ್ನಾಂನಲ್ಲಿ 3 ಬಿಲಿಯನ್ ಡಾಲರ್ ಏರ್‌ಪೋರ್ಟ್ ಯೋಜನೆಗಳು ಅಮೆರಿಕದ ಆರೋಪಗಳ ನಂತರ ಪರಿಶೀಲನೆಯಲ್ಲಿವೆ. ಇಂಡೋನೇಷ್ಯಾದ ಸೌರ ಯೋಜನೆಗಳು ಭ್ರಷ್ಟಾಚಾರದಿಂದಾಗಿ ಸ್ಥಗಿತಗೊಂಡಿವೆ.
ಫ್ರಾನ್ಸ್‌ನಲ್ಲಿ TotalEnergies ನಂತಹ ಹೂಡಿಕೆದಾರರು ಅದಾನಿ ಗ್ರೂಪ್‌ನ ಹೊಸ ಯೋಜನೆಗಳಲ್ಲಿನ ಹೂಡಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವುದಾಗಿ ವರದಿಯಾಗಿದೆ. ಈ ಎಲ್ಲ ಬೆಳವಣಿಗೆಗಳು ಅದಾನಿ ಸಮೂಹ ಮಾಡುತ್ತಿರುವ ವಂಚನೆಗಳ ಬಗ್ಗೆ ತಿಳಿಸುತ್ತವೆ.
ಪರಿಸರ ಮತ್ತು ಮಾನವ ಹಕ್ಕುಗಳ ಸಮಸ್ಯೆಗಳು
ಅದಾನಿ ಸಮೂಹವು ಇತ್ತೀಚಿನ ವರ್ಷಗಳಲ್ಲಿ ಏಷ್ಯಾ, ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಅನೇಕ ದೇಶಗಳಲ್ಲಿ ದೊಡ್ಡ ಪ್ರಮಾಣದ ಮೂಲಸೌಕರ್ಯ ಮತ್ತು ಇಂಧನ ಯೋಜನೆಗಳನ್ನು ಕೈಗೊಂಡಿದೆ. ಆದರೆ ಈ ಯೋಜನೆಗಳ ಹಿನ್ನೆಲೆ ಕೇವಲ ಆರ್ಥಿಕ ಅಭಿವೃದ್ಧಿಯಲ್ಲ — ಅವು ಪರಿಸರ ಹಾನಿ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಆರ್ಥಿಕ ಶೋಷಣೆಯ ಹೊಸ ಮುಖವನ್ನು ತೆರೆದಿವೆ.
ಶ್ರೀಲಂಕಾದ ಪವನ ವಿದ್ಯುತ್ ಯೋಜನೆಗಳ ಉದಾಹರಣೆ ಅತ್ಯಂತ ಸ್ಪಷ್ಟವಾಗಿದೆ. ಅಲ್ಲಿ ನಿರ್ಮಿಸಲಾಗುತ್ತಿರುವ ಪವನ ವಿದ್ಯುತ್ ಯೋಜನೆ ಪಕ್ಷಿಗಳ ವಲಸೆ ಮಾರ್ಗಗಳನ್ನು ಅಡ್ಡಿಪಡಿಸುತ್ತಿದ್ದು, ಸಮುದ್ರ ಜೀವಿಗಳಿರುವ ಸೂಕ್ಷ್ಮ ಪ್ರದೇಶಗಳಲ್ಲಿ ತಾಂತ್ರಿಕ ಕಾಮಗಾರಿಗಳು ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪರಿಸರ ತಜ್ಞರ ಎಚ್ಚರಿಕೆಗಳಿದ್ದರೂ, ಸ್ಥಳೀಯ ಪರಿಸರ ನಿಯಮಗಳನ್ನು ಉಲ್ಲಂಘಿಸಿ ಈ ಯೋಜನೆ ಮುಂದುವರಿಯುತ್ತಿದೆ. ಕೆನ್ಯಾದ ನದಿ ಯೋಜನೆಗಳು ಕೂಡ ಇದೇ ರೀತಿಯ ಪರಿಣಾಮ ಬೀರಿವೆ. ಅವು ನೀರಿನ ಹರಿವಿನ ಮಾದರಿಯನ್ನು ಬದಲಿಸಿ, ಕೃಷಿ ಭೂಮಿಗಳನ್ನು ಬತ್ತುವ ಅಪಾಯಕ್ಕೆ ಒಳಪಡಿಸುತ್ತಿವೆ. ಆಸ್ಟ್ರೇಲಿಯಾದಲ್ಲಿ ಅದಾನಿ ಸಂಸ್ಥೆಯ ಕಲ್ಲಿದ್ದಲು ಗಣಿಗಾರಿಕೆ ಹವಾಮಾನ ಬದಲಾವಣೆಯನ್ನು ವೇಗಗೊಳಿಸಿ, ಪರಿಸರ ಕಾರ್ಯಕರ್ತರಿಂದ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.

ಮಾನವ ಹಕ್ಕುಗಳ ಉಲ್ಲಂಘನೆಯು ಈ ಯೋಜನೆಗಳ ಪ್ರಮುಖ ಅಂಶವಾಗಿದೆ. ಭಾರತ, ಆಸ್ಟ್ರೇಲಿಯಾ ಮತ್ತು ಆಫ್ರಿಕಾದ ಹಲವೆಡೆ ಆದಿವಾಸಿ ಸಮುದಾಯಗಳನ್ನು ಅವರ ಮೂಲ ಸ್ಥಳದಿಂದ ಹೊರದೂಡುವ ಘಟನೆಗಳು ದಾಖಲಾಗಿವೆ. ಕಾರ್ಮಿಕರಿಗೆ ನೀಡಲಾಗುವ ವೇತನ ಕಡಿಮೆ, ಸುರಕ್ಷತಾ ಸೌಲಭ್ಯಗಳ ಕೊರತೆ, ಹಾಗೂ ಕಾರ್ಮಿಕ ಸಂಘಟನೆಗಳ ವಿರುದ್ಧದ ದಮನನೀತಿ ಕ್ರಮಗಳು ತೀವ್ರವಾದ ಸಾಮಾಜಿಕ ಅಸಮಾನತೆಯನ್ನು ಬಯಲಿಗೆಳೆಯುತ್ತವೆ. ಅಭಿವೃದ್ಧಿ ಎಂಬ ಹೆಸರಿನಲ್ಲಿ ನಡೆಯುವ ಈ ರೀತಿಯ ಶೋಷಣೆ ಸ್ಥಳೀಯ ಜನರ ಜೀವನಮಟ್ಟವನ್ನು ಕುಗ್ಗಿಸುತ್ತಿದೆ.
ಆರ್ಥಿಕ ದೃಷ್ಟಿಯಿಂದಲೂ ಈ ಯೋಜನೆಗಳು ವಿವಾದಾಸ್ಪದವಾಗಿವೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ವಿದ್ಯುತ್ ಯೋಜನೆಗಳಂತಹ ಉದಾಹರಣೆಗಳು ಆ ದೇಶವನ್ನು ಸಾಲದ ಬಲೆಗೆ ಸಿಕ್ಕಿಸುತ್ತಿವೆ. ಅದಾನಿ ಯೋಜನೆಗಳಿಗೆ ವಿದೇಶಿ ಬ್ಯಾಂಕ್‌ಗಳಿಂದ ಹಣಕಾಸು ದೊರಕುತ್ತದೆ, ಆದರೆ ಯೋಜನೆ ವಿಫಲವಾದರೆ ಆ ಸಾಲದ ಹೊರೆ ರಾಷ್ಟ್ರಗಳ ಮೇಲೆಯೇ ಬೀಳುತ್ತದೆ. ಯೋಜನೆಗಳ ನಿಯಮಗಳು ಬಹುತೇಕ ಕಂಪನಿಯ ಪರವಾಗಿದ್ದು, ಯೋಜನೆ ಕೈಗೊಳ್ಳುವ ದೇಶಗಳ ಹಿತಾಸಕ್ತಿಯನ್ನು ನಿರ್ಲಕ್ಷಿಸುತ್ತವೆ.
ಈ ಎಲ್ಲಾ ಬೆಳವಣಿಗೆಗಳು ಒಂದು ಸ್ಪಷ್ಟ ಸಂದೇಶ ನೀಡುತ್ತವೆ — ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಯಾವುದೇ ಯೋಜನೆ ಮಾನವ ಹಕ್ಕುಗಳು, ಪರಿಸರ ಮತ್ತು ಆರ್ಥಿಕ ಸ್ವಾಯತ್ತತೆಯ ಮೇಲೆ ದುಷ್ಪರಿಣಾಮ ಬೀರಬಾರದು. ಬಾಂಗ್ಲಾದೇಶದಂತಹ ಘಟನೆಗಳು ಇತರ ರಾಷ್ಟ್ರಗಳಿಗೆ ಎಚ್ಚರಿಕೆಯ ಗಂಟೆಯಾಗಿವೆ. ನಿಜವಾದ ಪ್ರಗತಿ ಎಂದರೆ ನೈಸರ್ಗಿಕ ಸಂಪನ್ಮೂಲಗಳ ಸಮತೋಲನದ ಬಳಕೆ, ಮಾನವೀಯ ಮೌಲ್ಯಗಳ ರಕ್ಷಣೆಯೊಂದಿಗೆ ನಡೆಯುವ ಆರ್ಥಿಕ ವಿಕಾಸವೇ ಆಗಿರಬೇಕು. ಆದರೆ ಇವೆಲ್ಲವನ್ನು ಅದಾನಿ ಸಮೂಹ ನಿರ್ಲಕ್ಷಿಸುತ್ತಿದೆ.





