AI ಮ್ಯೂಸಿಕ್ ಜನರೇಷನ್ ವ್ಯವಸ್ಥೆಗಳು ಸಾವಿರಾರು ಹಾಡು, ರಾಗ, ಲಯ ಮತ್ತು ರಚನಾ ಮಾದರಿಗಳನ್ನು ವಿಶ್ಲೇಷಿಸಿ ಕಲಿಯುತ್ತವೆ. ಬಳಕೆದಾರರು ಕೊಡುವ ಪ್ರಾಮ್ಟ್ ಅಥವಾ ವಿಷಯದ ಭಾವಕ್ಕೆ ಅನುಗುಣವಾಗಿ, ಅವು ಹೊಸ ಸಂಗೀತವನ್ನು ರಚಿಸುತ್ತವೆ. ಸಂಗೀತದ ಅಧಿಕೃತ ತರಬೇತಿ ಇಲ್ಲದವರಿಗೂ ಈ ತಂತ್ರಜ್ಞಾನ ಪ್ರಯೋಗದ ಅವಕಾಶ ನೀಡುತ್ತಿರುವುದು ವಿಶೇಷ.
ಸಂಗೀತವೆಂಬುದು ಭಾವನೆಗಳನ್ನ ಪ್ರತಿಬಿಂಬಿಸುವ ಅತ್ಯಂತ ಪ್ರಬಲ ಕಲಾರೂಪ. ಶತಮಾನಗಳಿಂದಲೂ ಸಂಗೀತದ ಎಲ್ಲಾ ಪ್ರಕಾರಗಳಿಗೂ ತನ್ನದೇ ವೈಶಿಷ್ಟ್ಯವಿದೆ. ಹವ್ಯಾಸವಾಗಿ, ವೃತ್ತಿಯಾಗಿ ಮ್ಯೂಸಿಕ್ ಕ್ರಿಯೇಷನ್ ನಿತ್ಯ ಜೀವನದ ಭಾಗವಾಗಿದೆ. ಇಪ್ಪತ್ತೊಂದನೇ ಶತಮಾನದಿಂದೀಚೆಗೆ ಅದೇ ಸಂಗೀತ ಸೃಷ್ಟಿ ಪ್ರಕ್ರಿಯೆಗೆ ಕೃತಕ ಬುದ್ಧಿಮತ್ತೆ (AI) ಹೊಸ ತಿರುವು ನೀಡುತ್ತಿದೆ. ನಾವು ಸಾಹಿತ್ಯ ಕೊಟ್ಟರೆ ಸಾಕು, ಕೆಲವೊಮ್ಮೆ ಅದೂ ಬೇಡ. ತಾನೇ ಸ್ವರ ರಚಿಸಿ, ರಾಗ ಬೆರೆಸಿ, ಭಾವಕ್ಕೆ ತಕ್ಕ ಹಾಡೊಂದನ್ನು ಸೃಷ್ಟಿಸಿ ಕ್ಷಣಾರ್ಧದಲ್ಲಿ ಕೊಟ್ಟುಬಿಡುತ್ತದೆ. ಇದು ಸಂಗೀತದ ಪರಿಭಾಷೆಯನ್ನು ಮರು ರೂಪಿಸುವ ಮಹತ್ವದ ಬೆಳವಣಿಗೆಯಾಗಿದೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ಈಗ ಸಂಗೀತದಂತಹ ಸೃಜನಾತ್ಮಕ ಕ್ಷೇತ್ರಗಳಿಗೂ ಆಳವಾಗಿ ಇಳಿಯುತ್ತಿದೆ. ಹಿಂದೆ ಸಂಗೀತ ನಿರ್ಮಾಣ ಎಂದರೆ ಸ್ಟುಡಿಯೊ, ವಾದ್ಯ, ತಾಂತ್ರಿಕ ಪರಿಣಿತಿ ಮತ್ತು ಸಮಯ ನಿರ್ವಹಣೆಯ ಸುದೀರ್ಘ ಪ್ರಕ್ರಿಯೆ ಇರುತ್ತಿತ್ತು. ಆದರೆ ಈಗ ಹಾಗಿಲ್ಲ. ಡಿಜಿಟಲ್ ವೇದಿಕೆಗಳಲ್ಲಿ ಕಂಟೆಂಟ್ ಪ್ರಮಾಣ ಹೆಚ್ಚಾಗುತ್ತಿರುವುದರೊಂದಿಗೆ, ತಕ್ಷಣ ಬಳಸಬಹುದಾದ ಮತ್ತು ಕಾಪಿರೈಟ್ ಸಮಸ್ಯೆ ಇಲ್ಲದ ಸಂಗೀತದ ಅಗತ್ಯವೂ ಹೆಚ್ಚುತ್ತಿದೆ.
ಹಿಂದೆ ಮಾಧ್ಯಮ ಸಂಸ್ಥೆಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ತಮ್ಮದೇ ಸಂಗೀತವನ್ನು ಸೃಷ್ಟಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಸ್ಟಾಕ್ ಮ್ಯೂಸಿಕ್ ಲೈಬ್ರರಿಗಳ ಮೇಲೆ ಅವಲಂಬಿತರಾಗಿದ್ದರು. ಅವು ಉಪಯುಕ್ತವಾದರೂ, ಒಂದೇ ತರದ ಧ್ವನಿಯನ್ನ ಪದೇ ಪದೇ ಕೇಳಲಾಗುವುದಿಲ್ಲ ಮತ್ತು ಹೊಸತನದ ಕೊರತೆ ಎಂಬಿತ್ಯಾದಿ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆ AI ಮೂಲಕ ರಚಿಸಲಾದ ಸಂಗೀತ ಬೇಡಿಕೆ ಹೆಚ್ಚಿಸಿಕೊಂಡಿದೆ.

AI ಮ್ಯೂಸಿಕ್ ಜನರೇಷನ್ ವ್ಯವಸ್ಥೆಗಳು ಸಾವಿರಾರು ಹಾಡು, ರಾಗ, ಲಯ ಮತ್ತು ರಚನಾ ಮಾದರಿಗಳನ್ನು ವಿಶ್ಲೇಷಿಸಿ ಕಲಿಯುತ್ತವೆ. ಬಳಕೆದಾರರು ಕೊಡುವ ಪಠ್ಯ ಸೂಚನೆಗಳು (ಪ್ರಾಮ್ಟ್) ಅಥವಾ ವಿಷಯದ ಭಾವಕ್ಕೆ ಅನುಗುಣವಾಗಿ, ಅವು ಹೊಸ ಸಂಗೀತವನ್ನು ರಚಿಸುತ್ತವೆ. ಉದಾಹರಣೆಗೆ: ʼCalm background musicʼ, ʼexhilarating voiceʼ, ʼDocumentary styleʼ ಎಂಬಂತಹ ಸರಳ ಸೂಚನೆಗಳೇ ಸಾಕಾಗುತ್ತವೆ. ಸಂಗೀತದ ಅಧಿಕೃತ ತರಬೇತಿ ಇಲ್ಲದವರಿಗೂ ಈ ತಂತ್ರಜ್ಞಾನ ಪ್ರಯೋಗದ ಅವಕಾಶ ನೀಡುತ್ತಿರುವುದು ವಿಶೇಷ.
AI ಆಧಾರಿತ ಮ್ಯೂಸಿಕ್ ಕ್ರಿಯೇಷನ್ ನಲ್ಲಿ ಹಲವು ಆಪ್ ಮತ್ತು ಪ್ಲಾಟ್‌ಫಾರ್ಮ್‌ಗಳು ಈಗಾಗಲೇ ಗಟ್ಟಿ ನೆಲೆ ಕಂಡುಕೊಂಡಿವೆ. ಇವುಗಳಲ್ಲಿ ಕೆಲವೊಂದು ಸಂಪೂರ್ಣ ಹಾಡುಗಳನ್ನು ರಚಿಸಿದರೆ, ಕೆಲವು ಹಿನ್ನೆಲೆ ಸಂಗೀತ, ಬೀಟ್ ಅಥವಾ ವೋಕಲ್ ಶೈಲಿಗೆ ಹೆಚ್ಚು ಒತ್ತು ನೀಡುತ್ತವೆ. ಡಿಜಿಟಲ್ ಕಂಟೆಂಟ್ ಉತ್ಪಾದನೆ, ಪಾಡ್‌ಕಾಸ್ಟ್, ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮ ಬಳಕೆಯನ್ನು ಗಮನದಲ್ಲಿಟ್ಟುಕೊಂಡೇ ಬಹುತೇಕ ಈ ಟೂಲ್ಸ್ ರೂಪುಗೊಂಡಿವೆ.
Suno AI: Suno AI ಈಗ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ AI ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದು. ಬಳಕೆದಾರರು ಕೇವಲ ಪಠ್ಯ ಸೂಚನೆ ನೀಡಿದರೆ ಸಾಕು, ಅದನ್ನು ಆಧರಿಸಿ ಲಿರಿಕ್ಸ್, ಮ್ಯೂಸಿಕ್, ವೋಕಲ್ ಸಹಿತ ಪೂರ್ಣ ಹಾಡನ್ನು ರಚಿಸುತ್ತದೆ. ಪಾಪ್, ಫೋಕ್, ಹಿಪ್‌ಹಾಪ್, ಸಿನೆಮಾಟಿಕ್ ಶೈಲಿ ಸೇರಿದಂತೆ ಹಲವು ಶೈಲಿಗಳಲ್ಲಿ ಆಕರ್ಷಕವಾಗಿ ಸಾಂಗ್ ಪ್ರೊಡ್ಯೂಸ್ ಮಾಡುತ್ತದೆ. ಕಡಿಮೆ ಸಮಯದಲ್ಲಿ ಹಾಡು ಬೇಕಿರುವವರಿಗೆ ಇದು ಹೆಚ್ಚು ಅನುಕೂಲ.
Udio: Udio ಕೂಡ Sunoಗೆ ಸಮಾನವಾದ AI ಸಾಂಗ್ ಜನರೇಟರ್. ಇಲ್ಲಿ ಬಳಕೆದಾರರು ಹಾಡಿನ ಭಾವ, ಶೈಲಿ ಮತ್ತು ಕೆಲವೊಮ್ಮೆ ಲಿರಿಕ್ಸ್ ನೀಡಬಹುದು. ಅದನ್ನು ಆಧರಿಸಿ AI ಸಂಗೀತ ಮತ್ತು ವೋಕಲ್‌ಗಳನ್ನು ರಚಿಸುತ್ತದೆ. ಮ್ಯೂಸಿಕ್ ಕ್ವಾಲಿಟಿ ಮತ್ತು ವೋಕಲ್ ರಿಯಲಿಸಂ ಕಾರಣಕ್ಕೆ ಇದು ಕ್ರಿಯೇಟರ್ ವಲಯದಲ್ಲಿ ಗಮನ ಸೆಳೆಯುತ್ತಿದೆ.
AIVA (Artificial Intelligence Virtual Artist): AIVA ಹೆಚ್ಚು ವೃತ್ತಿಪರ ಸಂಗೀತ ನಿರ್ಮಾಣಕ್ಕೆ ಬಳಸಲಾಗುವ AI ಟೂಲ್. ಇದು ವಿಶೇಷವಾಗಿ ಕ್ಲಾಸಿಕಲ್, ಫಿಲ್ಮ್ ಸ್ಕೋರ್, ಗೇಮ್ ಮತ್ತು ಡಾಕ್ಯುಮೆಂಟರಿ ಹಿನ್ನೆಲೆ ಸಂಗೀತಕ್ಕೆ ಸೂಕ್ತವಾಗಿದೆ. ಸಂಗೀತ ನಿರ್ದೇಶಕರು ಮತ್ತು ಪ್ರೊಡಕ್ಷನ್ ಹೌಸ್‌ಗಳು ಇದನ್ನು ಸಹಾಯಕ ಸಂಗೀತಕಾರನಂತೆ ಬಳಸುತ್ತಿದ್ದಾರೆ.

Soundraw: ಇದು ಮುಖ್ಯವಾಗಿ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ರಚನೆಗೆ ಬಳಕೆಯಾಗುತ್ತದೆ. ಬಳಕೆದಾರರು ವೀಡಿಯೋಗೆ ತಕ್ಕ ಮೂಡ್, ಟೆಂಪೋ ಮತ್ತು ಲೆಂತ್ ಆಯ್ಕೆ ಮಾಡಿದರೆ, AI ಅದಕ್ಕೆ ತಕ್ಕ ಸಂಗೀತವನ್ನು ರಚಿಸುತ್ತದೆ. ಯೂಟ್ಯೂಬ್ ಕ್ರಿಯೇಟರ್‌ಗಳು, ಮಾಧ್ಯಮ ಸಂಸ್ಥೆಗಳು ಮತ್ತು ಜಾಹೀರಾತು ಕ್ಷೇತ್ರದಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ.
Boomy: ಸಾಮಾನ್ಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡ AI ಮ್ಯೂಸಿಕ್ ಆಪ್ Boomy. ಯಾವುದೇ ಸಂಗೀತ ಜ್ಞಾನವಿಲ್ಲದವರೂ ಇಲ್ಲಿ ಕೆಲವೇ ಕ್ಲಿಕ್‌ಗಳಲ್ಲಿ ಹಾಡು ರಚಿಸಬಹುದು. ರಚಿಸಿದ ಹಾಡುಗಳನ್ನು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಪ್‌ಲೋಡ್ ಮಾಡುವ ಅವಕಾಶವನ್ನೂ ಇದು ನೀಡುತ್ತದೆ. ಹೊಸಬರಿಗೆ ಇದು ಪ್ರವೇಶ ದ್ವಾರವಾಗಿದೆ.
Amper Music: Amper Music (ಈಗ Shutterstock ಭಾಗ) ಮುಖ್ಯವಾಗಿ ವೀಡಿಯೋ ಮತ್ತು ಮೀಡಿಯಾ ಪ್ರೊಡಕ್ಷನ್‌ಗಾಗಿ ಬಳಸಲಾಗುತ್ತದೆ. ದೃಶ್ಯಕ್ಕೆ ತಕ್ಕಂತೆ ಸಂಗೀತವನ್ನು ಕಸ್ಟಮೈಸ್ ಮಾಡುವ ಆಪ್ಷನ್ ಇದರಲ್ಲಿ ಇದೆ. ವೇಗವಾಗಿ ಕಾಪಿರೈಟ್-ಸೇಫ್ ಮ್ಯೂಸಿಕ್ ಬೇಕಿರುವ ಸಂಸ್ಥೆಗಳಿಗೆ ಇದು ಅನುಕೂಲ.
Ecrett Music: ಇದೊಂದು ಸರಳ ಇಂಟರ್‌ಫೇಸ್ ಹೊಂದಿರುವ AI ಮ್ಯೂಸಿಕ್ ಜನರೇಟರ್. ದೃಶ್ಯ, ಭಾವನೆ ಮತ್ತು ಶೈಲಿಯನ್ನು ಆಯ್ಕೆ ಮಾಡಿದರೆ, ಅದಕ್ಕೆ ತಕ್ಕ ಹಿನ್ನೆಲೆ ಸಂಗೀತವನ್ನು ಸೃಷ್ಟಿಸುತ್ತದೆ. ಪ್ರೆಸೆಂಟೇಷನ್, ವಿಡಿಯೋ ಸ್ಟೋರಿ ಮತ್ತು ಡಿಜಿಟಲ್ ಫೀಚರ್‌ಗಳಿಗೆ ಇದು ಸೂಕ್ತ.
Loudly AI Music Generator: Loudly ಪ್ಲಾಟ್‌ಫಾರ್ಮ್ ಎಲೆಕ್ಟ್ರಾನಿಕ್, ಪಾಪ್ ಮತ್ತು ಟ್ರೆಂಡಿಂಗ್ ಶೈಲಿಗಳತ್ತ ಹೆಚ್ಚು ಒತ್ತು ನೀಡುತ್ತದೆ. ಸೋಶಿಯಲ್ ಮೀಡಿಯಾ ಮತ್ತು ಶಾರ್ಟ್-ಫಾರ್ಮ್ ವಿಡಿಯೋ ಕಂಟೆಂಟ್‌ಗಾಗಿ ಬಳಸಲಾಗುತ್ತಿದೆ. ಮ್ಯೂಸಿಕ್ ಲೂಪ್ಸ್ ಮತ್ತು ಬೀಟ್‌ಗಳ ರಚನೆಯಲ್ಲಿ ಇದು ಜನಪ್ರಿಯ.

Beatoven.ai: ಭಾರತೀಯ ಬಳಕೆದಾರರಲ್ಲಿ ನಿಧಾನವಾಗಿ ಪರಿಚಿತವಾಗುತ್ತಿರುವ AI ಟೂಲ್. ಕಥನಾತ್ಮಕ ವಿಡಿಯೋ, ಪಾಡ್‌ಕಾಸ್ಟ್ ಮತ್ತು ಡಾಕ್ಯುಮೆಂಟರಿಗಳಿಗೆ ತಕ್ಕ ಭಾವನಾತ್ಮಕ ಹಿನ್ನೆಲೆ ಸಂಗೀತ ರಚಿಸುವುದು ಇದರ ವಿಶೇಷತೆ. ಮಾಧ್ಯಮ ಮತ್ತು ಸ್ಟೋರಿ ಟೆಲ್ಲಿಂಗ್ ಕ್ಷೇತ್ರದಲ್ಲಿ ಹೆಚ್ಚು ಉಪಯುಕ್ತ.
ಒಂದು ಕಾಲದಲ್ಲಿ ಸಿನಿಮಾ ಒಂದಕ್ಕೆ ಹಾಡು ರಚಿಸುವುದು ಎಂದರೆ ಅದೊಂದು ತಪಸ್ಸಿನಂತಿತ್ತು. ಹಂಸಲೇಖ, ರಾಜನ್–ನಾಗೇಂದ್ರ, ಉಪೇಂದ್ರ ಕುಮಾರ್, ಕೀರವಾಣಿ, ಇಳಯರಾಜ, ಎಸ್ ಎ ರಾಜ್‌ಕುಮಾರ್, ಎ ಆರ್ ರೆಹಮಾನ್, ದೇವ ಅವರಂತ ಸಂಗೀತ ನಿರ್ದೇಶಕರು ಒಂದು ಸಿನಿಮಾದ ಹಾಡಿಗಾಗಿ ದಿನಗಟ್ಟಲೆ ಕಥೆ ಕೇಳುತ್ತಿದ್ದರು, ಪಾತ್ರಗಳ ಮನಸ್ಥಿತಿಯನ್ನು ಅರಿತುಕೊಳ್ಳುತ್ತಿದ್ದರು, ದೃಶ್ಯವನ್ನು ಮನಸ್ಸಿನಲ್ಲಿ ಕಟ್ಟಿಕೊಳ್ಳುತ್ತಿದ್ದರು. ರಾಗ, ಲಯ, ಸಾಹಿತ್ಯ ಎಲ್ಲವೂ ಕಥೆಯ ಆತ್ಮಕ್ಕೆ ಹೊಂದಿಕೊಳ್ಳಬೇಕು ಎಂಬ ಜವಾಬ್ದಾರಿ ಅವರ ಮೇಲಿರುತ್ತಿತ್ತು. ಒಂದು ಹಾಡು ಹೊರಬಂದರೆ ಅದು ಸಿನಿಮಾಕ್ಕೆ ಮಾತ್ರ ಸೀಮಿತವಾಗಿರಲಿಲ್ಲ; ಜನರ ಬದುಕಿನ ಭಾಗವಾಗುತ್ತಿತ್ತು.
ಅವರು ಬಳಸಿದ ತಂತ್ರಜ್ಞಾನ ಇಂದಿನಷ್ಟಾಗಿರಲಿಲ್ಲ. ಲೈವ್ ಆರ್ಕೆಸ್ಟ್ರಾ, ರಿಯಲ್ ವಾದ್ಯಗಳು, ಗಾಯಕರ ದಿನಗಟ್ಟಲೆ ಅಭ್ಯಾಸ.. ಒಂದು ಚಿಕ್ಕ ತಪ್ಪು ಕೂಡ ಮರು ರೆಕಾರ್ಡಿಂಗ್‌ಗೆ ಕಾರಣವಾಗುತ್ತಿತ್ತು. ಆದರೂ ಆ ಕಷ್ಟವೇ ಹಾಡಿಗೆ ಜೀವ ತುಂಬುತ್ತಿತ್ತು. ಅದಕ್ಕೇ ಆ ಕಾಲದ ಹಾಡುಗಳು ಇಂದಿಗೂ ನೆನಪಿನಲ್ಲಿ ಉಳಿದಿವೆ. ಎವರ್‌ಗ್ರೀನ್ ಎನಿಸುತ್ತವೆ.
ಅಂತಹ ಪರಂಪರೆಯ ನಡುವೆ ಬೆಳೆದ ಅನೇಕ ಯುವ ಸಂಗೀತಾಸಕ್ತರು ಇಂದಿಗೂ ಅವಕಾಶಕ್ಕಾಗಿ ಹೋರಾಡುತ್ತಿದ್ದಾರೆ. ಸ್ಟುಡಿಯೊಗಳ ಮುಂದೆ ತಿರುಗುವುದು, ಡೆಮೊ ಹಾಡುಗಳನ್ನು ಕಳುಹಿಸುವುದು, ಕಾರಣ ಇಲ್ಲದೆ ನಿರಾಕರಣೆ ಎದುರಿಸುವುದು ಇತ್ಯಾದಿ. ಪ್ರತಿಭೆ ಇದ್ದರೂ ಚಾನ್ಸ್ ಸಿಗದೆ ಕಳೆದುಹೋದ ಕನಸುಗಳೆಷ್ಟೋ! ಇಂತ ಹೊತ್ತಿನಲ್ಲಿ AI ಮ್ಯೂಸಿಕ್ ಎಂಬ ಹೊಸ ಶಕ್ತಿ ವೇದಿಕೆಯ ಮೇಲೆ ಬಂದಿಳಿದಿದೆ. ಕೆಲವೇ ಸೆಕೆಂಡುಗಳಲ್ಲಿ ಟ್ಯೂನ್, ಬೀಟ್, ಕೆಲವೊಮ್ಮೆ ವೋಕಲ್ ಸಹಿತ ಹಾಡು ಸಿದ್ಧವಾಗುತ್ತದೆ. ಜಾಹೀರಾತು, ಬ್ಯಾಕ್‌ಗ್ರೌಂಡ್ ಸ್ಕೋರ್, ಸೋಶಿಯಲ್ ಮೀಡಿಯಾ ಮ್ಯೂಸಿಕ್‌ಗಳಲ್ಲಿ AI ವೇಗವಾಗಿ ಜಾಗ ಹಿಡಿಯುತ್ತಿದೆ. ಇದು ತಂತ್ರಜ್ಞಾನ ಅವಕಾಶಗಳ ಮೇಲೆ ಸವಾರಿ ಮಾಡಲಿದೆಯೇ? ಎಂಬ ಆತಂಕಕ್ಕೂ ಕಾರಣವಾಗಿದೆ.

ಆದರೆ, ವಾಸ್ತವ ಅಷ್ಟೊಂದು ಸರಳವೂ ಅಲ್ಲ, ಭಯಾನಕವೂ ಅಲ್ಲ. AI ಈಗ ಮುಖ್ಯವಾಗಿ ಸದ್ಯದ ಬಳಕೆಗಾಗಿ ಬೇಕಾದ ಸಂಗೀತವನ್ನು ಮಾತ್ರ ತುಂಬಬಲ್ಲದು. ಇಲ್ಲಿ ನಿರ್ಮಾಪಕರಿಗೆ ವೇಗ ಮತ್ತು ಕಡಿಮೆ ವೆಚ್ಚ ಮುಖ್ಯ. ಆ ಕಾರಣಕ್ಕೆ ಮಾನವ ಸಂಗೀತಕಾರರ ಅವಕಾಶಗಳು ಕಡಿಮೆಯಾಗುತ್ತಿರುವುದು ನಿಜ. ಆದರೆ, ಹಂಸಲೇಖ ಅಥವಾ ರೆಹಮಾನ್ ಮಟ್ಟದ ಸಂಗೀತ ನಿರ್ದೇಶಕರನ್ನು AI ರಿಪ್ಲೇಸ್ ಮಾಡಬಲ್ಲದೇ? ಒಂದು ದೃಶ್ಯದ ಮೌನ, ಪಾತ್ರದ ಒಳಗುದಿ, ಆಯಾ ಕಾಲಘಟ್ಟಕ್ಕೆ ಸಂಗೀತದ ಮೂಲಕ ಧ್ವನಿ ನೀಡುವ ಕೆಲಸ AIಗೆ ಸಾಧ್ಯವೇ? ಇಲ್ಲ. ಏಕೆಂದರೆ AIಗೆ ಅನುಭವವಿಲ್ಲ, ನೋವಿಲ್ಲ, ನೆನಪುಗಳಿಲ್ಲ. ಅದು ಹಿಂದಿನ ಹಾಡುಗಳನ್ನು ಕಲಿಯುತ್ತದೆ, ಆದರೆ ಹೊಸತನ್ನು ಅನುಭವಿಸುವುದಿಲ್ಲ.
ಇದನ್ನೂ ಓದಿ: ಸಮಾಜದ ಸ್ವಾಸ್ಥ್ಯ ಹಾಳುಗೆಡವುತ್ತಿರುವ ʼರೀಲ್ಸ್ʼ ಗೀಳು; ಬೇಕಿದೆ ಕಡಿವಾಣ
AI ಸಂಪೂರ್ಣವಾಗಿ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದೆ ಎನ್ನುವುದಕ್ಕಿಂತ ಮಧ್ಯಮ ಮಟ್ಟದ ಕೆಲಸಗಳನ್ನು ಹೆಚ್ಚು ಕಬಳಿಸುತ್ತಿದೆ. ಇದರಿಂದ ಯುವ ಪ್ರತಿಭೆಗಳ ಮುಂದಿನ ದಾರಿ ಕಠಿಣವಾಗಬಹುದು. ಆದರೆ ಅದೇ ಸಮಯದಲ್ಲಿ, ಮಾನವ ಶಕ್ತಿಯನ್ನು ಸಂಪೂರ್ಣವಾಗಿ ತಳ್ಳಿಹಾಕುವ ಶಕ್ತಿಯೂ AIಗೆ ಇಲ್ಲ. ಕಥೆ ಹೇಳುವ ಸಂಗೀತ, ಭಾವನೆ ತುಂಬಿದ ಮೆಲೋಡಿ, ಕಾಲಾತೀತ ಹಾಡುಗಳು ಇನ್ನೂ ಮಾನವ ಮನಸ್ಸಿನಿಂದಲೇ ಹುಟ್ಟುತ್ತವೆ. ಹುಟ್ಟಬೇಕಾಗಿದೆ.
ಯಾವ ಸಂಗೀತಕಾರನೂ AI ವಿರುದ್ಧ ಹೋರಾಡಬೇಕಿಲ್ಲ. ತನ್ನ ಅನುಭವವನ್ನು ಇನ್ನೂ ಎಷ್ಟು ಚಂದವಾಗಿ ಸ್ವರಗಳೊಂದಿಗೆ ಪೋಣಿಸಬಹುದು ಎಂಬುದರೊಂದಿಗೆ ಹೋರಾಡಬೇಕಿದೆ. AIಗೆ ವೇಗ ಇದೆ, ಗಣನೆ ಇದೆ. ಆದರೆ, ನೆನಪಿಲ್ಲ, ನೋವು-ನಲಿವುಗಳಿಲ್ಲ, ಕನಸುಗಳಿಲ್ಲ. ಅದು ಸಾಧನವಾಗಬಹುದು, ನೆರವಾಗಬಹುದು, ನಾಯಕನಾಗಲಾರದು. ಕಾಲ ಬದಲಾಗಬಹುದು, ತಂತ್ರಜ್ಞಾನ ಬದಲಾಗಬಹುದು; ಆದರೆ ಹೃದಯದಿಂದ ಬಂದ ಸಂಗೀತ ಮಾತ್ರ ಕಾಲಾತೀತ.





