ಕುರ್ಡಿಶ್ ಬಂಡುಕೋರರ ಕೈಗೆ ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸಿಕ್ಕರೆ, ಅದು ಕೇವಲ ಇರಾನ್‌ಗೆ ಮಾತ್ರವಲ್ಲ, ಇಡೀ ಮಧ್ಯಪ್ರಾಚ್ಯವನ್ನೇ ರಕ್ತಪಾತದ ಕೂಪಕ್ಕೆ ತಳ್ಳಲಿದೆ. ನೆರೆಯ ಟರ್ಕಿ, ಸಿರಿಯಾ ಮತ್ತು ಇರಾಕ್‌ಗಳಲ್ಲಿರುವ ಕುರ್ಡಿಶ್ ಪ್ರತ್ಯೇಕತಾವಾದಿಗಳಿಗೆ ಇದು ಪ್ರೇರಣೆ ನೀಡಲಿದ್ದು, ಇಡೀ ಪ್ರಾಂತ್ಯದಲ್ಲಿ ಭಾರೀ ಅರಾಜಕತೆ ಸೃಷ್ಟಿಯಾಗಲಿದೆ
ಜಗತ್ತಿನೆದುರು ತನ್ನನ್ನು ತಾನು ‘ಶಾಂತಿಯ ರಕ್ಷಕ’ ಹಾಗೂ ‘ಪ್ರಜಾಪ್ರಭುತ್ವದ ಕಾವಲುಗಾರ’ ಎಂದು ಬಿಂಬಿಸಿಕೊಳ್ಳುವ ಅಮೆರಿಕ, ತನ್ನ ಸ್ವಾರ್ಥ ಸಾಧನೆಗಾಗಿ ಮತ್ತು ತನಗೆ ಬಗ್ಗದ ರಾಷ್ಟ್ರಗಳನ್ನು ಮಣಿಸಲು ಯಾವ ಕೀಳು ಮಟ್ಟಕ್ಕಾದರೂ ಇಳಿಯಬಲ್ಲದು ಎಂಬುದಕ್ಕೆ ಮತ್ತೊಂದು ಆಘಾತಕಾರಿ ಸಾಕ್ಷ್ಯ ಹೊರಬಿದ್ದಿದೆ. ಇರಾನ್‌ನ ಪರಮಾಣು ಕಾರ್ಯಕ್ರಮವನ್ನು ಹತ್ತಿಕ್ಕುವ ನೆಪದಲ್ಲಿ, ಅಲ್ಲಿನ ‘ಕುರ್ಡಿಶ್ ಬಂಡುಕೋರ’ ಗುಂಪುಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಿ ‘ಪ್ರಾಕ್ಸಿ ಯುದ್ಧ’(ನೇರವಾಗಿ ಯುದ್ಧ ಮಾಡದೆ ಪರೋಕ್ಷವಾಗಿ ಮೂರನೇ ವ್ಯಕ್ತಿಯನ್ನು ಬಳಸಿಕೊಳ್ಳುವುದು) ಸೃಷ್ಟಿಸಲು ಅಮೆರಿಕದ ರಕ್ಷಣಾ ಇಲಾಖೆ ಹಾಗೂ ಗುಪ್ತಚರ ಸಂಸ್ಥೆ ‘ಸಿಐಎ’ ರಹಸ್ಯ ಸಂಚು ರೂಪಿಸಿವೆ. ಇದು ಅಮೆರಿಕದ ವಿದೇಶಾಂಗ ನೀತಿಯ ದ್ವಂದ್ವ, ಹತಾಶೆ ಹಾಗೂ ಜಾಗತಿಕ ಮಟ್ಟದಲ್ಲಿ ಅದರ ವಿನಾಶಕಾರಿ ಬುದ್ಧಿಯನ್ನು ಬಟಾಬಯಲು ಮಾಡಿದೆ.
ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ಅತ್ಯಂತ ಗುಪ್ತವಾಗಿ ಹಾಗೂ ಭದ್ರವಾಗಿ ಮುನ್ನಡೆಸುತ್ತಿದೆ. ಶತ್ರುರಾಷ್ಟ್ರಗಳ, ಅದರಲ್ಲೂ ಮುಖ್ಯವಾಗಿ ಅಮೆರಿಕ ಹಾಗೂ ಇಸ್ರೇಲ್‌ನ ಕ್ಷಿಪಣಿ ಅಥವಾ ಬಾಂಬ್ ದಾಳಿಗಳಿಂದ ತನ್ನ ಪರಮಾಣು ಸೌಲಭ್ಯಗಳನ್ನು ರಕ್ಷಿಸಿಕೊಳ್ಳಲು ಇರಾನ್ ಬೃಹತ್ ತಂತ್ರಗಾರಿಕೆ ರೂಪಿಸಿದೆ. ಝಾಗ್ರೋಸ್ ಪರ್ವತ ಶ್ರೇಣಿಗಳ ನಡುವೆ ನೈಸರ್ಗಿಕ ದೈತ್ಯ ಬಂಡೆಗಳ ಅಡಿಯಲ್ಲಿ ತನ್ನ ಪರಮಾಣು ನೆಲೆಗಳನ್ನು ಅದು ನಿರ್ಮಿಸಿದೆ. ಈ ರಹಸ್ಯ ನೆಲೆಯು ಭೂಮಿಯ ಮೇಲ್ಮೈನಿಂದ ಬರೋಬ್ಬರಿ 260 ರಿಂದ 300 ಅಡಿ ಆಳದಲ್ಲಿದೆ. ಕೇವಲ ಮಣ್ಣಷ್ಟೇ ಅಲ್ಲದೆ, ಕಲ್ಲಿನ ಬಂಡೆಗಳು, ದಪ್ಪನೆಯ ಕಾಂಕ್ರೀಟ್ ಮತ್ತು ಉಕ್ಕಿನ ರಕ್ಷಾಕವಚ ಈ ನೆಲೆಗಿದೆ.
ತನ್ನ ಬಳಿ ಜಗತ್ತಿನ ಅತ್ಯಂತ ಶಕ್ತಿಶಾಲಿ ವಾಯುಪಡೆ ಇದೆ, ಜಗತ್ತಿನ ಯಾವುದೇ ಮೂಲೆಯನ್ನಾದರೂ ಧ್ವಂಸ ಮಾಡಬಲ್ಲೆ ಎಂದು ಬೀಗುವ ಅಮೆರಿಕಕ್ಕೆ, ಇರಾನ್‌ನ ಈ 80-90 ಮೀಟರ್ ಆಳದ ಭದ್ರಕೋಟೆ ನುಂಗಲಾರದ ತುತ್ತಾಗಿದೆ. ಅಮೆರಿಕದ ಬಳಿಯಿರುವ ಅತ್ಯಂತ ಶಕ್ತಿಶಾಲಿ ಹಾಗೂ ಬೃಹತ್ ‘ಬಂಕರ್-ಬಸ್ಟರ್’ ಬಾಂಬ್‌ಗಳು ಗರಿಷ್ಠ 60 ಮೀಟರ್ ಆಳದವರೆಗೆ ಮಾತ್ರ ನುಗ್ಗಿ ಸ್ಫೋಟಿಸುವ ಸಾಮರ್ಥ್ಯ ಹೊಂದಿವೆ. ಅಂದರೆ, ಎಷ್ಟೇ ಕರಾರುವಕ್ಕಾದ ಹಾಗೂ ನಿರಂತರ ವಾಯುದಾಳಿ ನಡೆಸಿದರೂ ಈ ಪರಮಾಣು ನೆಲೆಯನ್ನು ಅಲುಗಾಡಿಲು ಅಮೆರಿಕದ ಸೇನೆಗೆ ಕಷ್ಟಸಾಧ್ಯ.
ನೇರವಾದ ಸೇನಾ ಕಾರ್ಯಾಚರಣೆ ಅಥವಾ ವಾಯುದಾಳಿಯಿಂದ ಇರಾನ್‌ನ ಪರಮಾಣು ನೆಲೆಯನ್ನು ನಾಶಪಡಿಸುವುದು ಅಸಾಧ್ಯ ಎಂಬ ಕಟುಸತ್ಯ ಅಮೆರಿಕಕ್ಕೆ ಮನದಟ್ಟಾಗಿದೆ. ತನ್ನ ಸೇನಾಬಲದ ಮಿತಿ ಎದುರಾದಾಗ, ಜಾಗತಿಕ ದೊಡ್ಡಣ್ಣ ಈಗ ವಾಯುಮಾರ್ಗದ ಮೊರೆ ಹೋಗಿದ್ದಾನೆ. ವಾಯುಪಡೆಯಿಂದ ಅಸಾಧ್ಯವಾದುದ್ದನ್ನು, ಭೂಮಾರ್ಗದ ಮೂಲಕ ಮತ್ತು ಗೆರಿಲ್ಲಾ ಮಾದರಿಯ ಕಾರ್ಯಾಚರಣೆಯ ಮೂಲಕ ಸಾಧಿಸಲು ಅಮೆರಿಕ ರಹಸ್ಯ ತಂತ್ರವೊಂದನ್ನು ಹೆಣೆದಿದೆ. ಇದಕ್ಕಾಗಿ ಇರಾನ್‌ನ ಇಸ್ಲಾಮಿಕ್ ಆಡಳಿತದ ವಿರುದ್ಧ ದಶಕಗಳಿಂದ ಸಶಸ್ತ್ರ ಹೋರಾಟ ನಡೆಸುತ್ತಿರುವ ಮತ್ತು ಪ್ರತ್ಯೇಕತಾವಾದಿ ನಿಲುವು ಹೊಂದಿರುವ ಕುರ್ಡಿಶ್ ಭಿನ್ನಮತೀಯ ಗುಂಪುಗಳನ್ನು ದಾಳವಾಗಿ ಬಳಸಿಕೊಳ್ಳಲು ಉದ್ದೇಶಿಸಿದೆ.
ಇದನ್ನು ಓದಿದ್ದೀರಾ? ಇರಾನ್‌ನ ‘ಉಕ್ಕಿನ ಮನುಷ್ಯ’ ಆಯತೊಲ್ಲಾ ಅಲಿ ಖಮೇನಿ
ಇರಾನ್‌ನ ಪಶ್ಚಿಮ ಭಾಗದ ಗಡಿ ಪ್ರದೇಶಗಳು ಹಾಗೂ ಬೆಟ್ಟಗುಡ್ಡಗಳಲ್ಲಿ ಕುರ್ಡಿಶ್ ಉಗ್ರಗಾಮಿಗಳು ಪ್ರಬಲ ಜಾಲವನ್ನು ಹೊಂದಿದ್ದಾರೆ. ಈ ದುರ್ಗಮ ಪರ್ವತಗಳ ಮೂಲೆಮೂಲೆಗಳು, ಹವಾಮಾನ ಮತ್ತು ಸ್ಥಳೀಯ ಭೌಗೋಳಿಕ ಪರಿಸ್ಥಿತಿ ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕಣ್ತಪ್ಪಿಸಿ, ಗುಪ್ತವಾಗಿ ಪರಮಾಣು ನೆಲೆಯ ಸಮೀಪಕ್ಕೆ ತಲುಪುವ ಮತ್ತು ಒಳನುಸುಳುವ ಸಾಮರ್ಥ್ಯ ಈ ಸ್ಥಳೀಯ ಬಂಡುಕೋರರಿಗೆ ಮಾತ್ರ ಇದೆ ಎಂದು ಅಮೆರಿಕ ನಂಬಿದೆ. ಹೀಗಾಗಿ ತನ್ನ ಸೈನಿಕರ ಪ್ರಾಣವನ್ನು ಪಣಕ್ಕಿಡುವ ಬದಲು, ಸ್ಥಳೀಯ ಬಂಡುಕೋರರನ್ನು ಎತ್ತಿಕಟ್ಟಿ ತನ್ನ ಗುರಿ ಸಾಧಿಸುವ ಕುತಂತ್ರ ಇದಾಗಿದೆ.
ದೈತ್ಯ ಬಂಡೆಗಳ ಕೆಳಗಿರುವ ನೆಲೆಯನ್ನು ಒಳಹೊಕ್ಕು ಧ್ವಂಸಗೊಳಿಸಲು, ಕುರ್ಡಿಶ್ ಬಂಡುಕೋರರ ಕೈಗೆ ಮಾರಕಾಸ್ತ್ರಗಳನ್ನು ನೀಡುವ ತಯಾರಿ ನಡೆದಿದೆ. ಸುಧಾರಿತ ಹಾಗೂ ಅತ್ಯಂತ ಶಕ್ತಿಶಾಲಿ ಸ್ಫೋಟಕಗಳು, ಟ್ಯಾಂಕ್ ನಿರೋಧಕ ಮಾರ್ಗದರ್ಶಿ ಕ್ಷಿಪಣಿಗಳು, ಕಣ್ಗಾವಲು ಹಾರಾಟದ ಅತ್ಯಾಧುನಿಕ ಡ್ರೋನ್‌ಗಳು ಹಾಗೂ ಎನ್‌ಕ್ರಿಪ್ಟೆಡ್ ಸಂವಹನ ಉಪಕರಣಗಳನ್ನು ಗುಪ್ತವಾಗಿ ಪೂರೈಸಲು ಯೋಜನೆ ರೂಪಿಸಲಾಗಿದೆ. ಬಂಡುಕೋರರು ನೆಲೆಯೊಳಗೆ ನುಸುಳಿ, ಪ್ರಮುಖ ದ್ವಾರಗಳು, ವಿದ್ಯುತ್ ಸಂಪರ್ಕವ್ಯವಸ್ಥೆಗಳನ್ನು ಸ್ಫೋಟಿಸಿದರೆ, ಇಡೀ ಪರಮಾಣು ಯೋಜನೆಯನ್ನು ನಾಶಪಡಿಸಬಹುದು ಎಂಬುದು ಅಮೆರಿಕದ ಲೆಕ್ಕಾಚಾರವಾಗಿದೆ.
ಅಮೆರಿಕವು ತಾನೇ ಖುದ್ದಾಗಿ ಸೇನಾ ಕಾರ್ಯಾಚರಣೆಗೆ ಇಳಿದರೆ ಜಾಗತಿಕ ಮಟ್ಟದಲ್ಲಿ ತೀವ್ರ ಮುಖಭಂಗ, ಪ್ರಾಣಹಾನಿ ಮತ್ತು ಅಪಾರ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಭೀತಿ ಅಮೆರಿಕಕ್ಕಿದೆ. ಈ ಹೇಡಿತನದ ಕಾರಣಕ್ಕಾಗಿಯೇ ಅದು ‘ಪ್ರಾಕ್ಸಿ ಯುದ್ಧ’ದ ಮೊರೆ ಹೋಗಿದೆ. ಇತರರನ್ನು ಬಲಿಪಶು ಮಾಡಿ, ಹಿಂಬದಿಯಿಂದ ಚೂರಿ ಹಾಕುವ ಅಮೆರಿಕದ ಈ ನೀತಿಯು, ಅದು ಜಾಗತಿಕ ಭದ್ರತೆಯ ಬಗ್ಗೆ ಆಡುವ ಮಾತುಗಳೆಲ್ಲವೂ ಕೇವಲ ನಾಟಕ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಇದು ಅಮೆರಿಕ ಮಾಡುತ್ತಿರುವ ಮೊದಲ ಐತಿಹಾಸಿಕ ಪ್ರಮಾದವೇನಲ್ಲ. ತನ್ನ ಲಾಭಕ್ಕಾಗಿ ಉಗ್ರರನ್ನು ಬೆಳೆಸಿ ಪೋಷಿಸುವ ಕೆಟ್ಟ ಇತಿಹಾಸ ಅಮೆರಿಕಕ್ಕಿದೆ. 1980ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟವನ್ನು ಮಣಿಸಲು ಮುಜಾಹಿದ್ದೀನ್‌ಗಳಿಗೆ ಇದೇ ಅಮೆರಿಕ ಶಸ್ತ್ರಾಸ್ತ್ರ, ಹಣ ಮತ್ತು ತರಬೇತಿ ನೀಡಿತ್ತು. ಆ ಗುಂಪುಗಳೇ ಮುಂದೆ ‘ಅಲ್-ಖೈದಾ’ ಮತ್ತು ‘ತಾಲಿಬಾನ್’ ಆಗಿ ಬೆಳೆದು ಇಡೀ ಜಗತ್ತಿಗೆ ಕಾಡಿದ್ದು ಕರಾಳ ಇತಿಹಾಸ. ಈಗ ಇರಾನ್ ವಿಷಯದಲ್ಲೂ ಅದೇ ಮಾರಕ ಇತಿಹಾಸವನ್ನು ಮರುಸೃಷ್ಟಿಸಲು, ಮತ್ತೊಂದು ಭಸ್ಮಾಸುರನನ್ನು ಸೃಷ್ಟಿಸಲು ಅಮೆರಿಕ ಹೊರಟಂತಿದೆ.
ಒಂದೆಡೆ ಭಯೋತ್ಪಾದನೆ ವಿರುದ್ಧ ಸಮರ ಸಾರುವುದಾಗಿ ಭಾಷಣ ಬಿಗಿಯುವ ಅಮೆರಿಕ, ಇನ್ನೊಂದೆಡೆ ಸಾರ್ವಭೌಮ ರಾಷ್ಟ್ರವೊಂದರ ಸರ್ಕಾರದ ವಿರುದ್ಧ ಹೋರಾಡುವ ಸಶಸ್ತ್ರ ಗುಂಪುಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಅದರ ಅತಿದೊಡ್ಡ ಬೂಟಾಟಿಕೆ. ಕುರ್ಡಿಶ್ ಬಂಡುಕೋರರ ಕೈಗೆ ಅಮೆರಿಕದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸಿಕ್ಕರೆ, ಅದು ಕೇವಲ ಇರಾನ್‌ಗೆ ಮಾತ್ರವಲ್ಲ, ಇಡೀ ಮಧ್ಯಪ್ರಾಚ್ಯವನ್ನೇ ರಕ್ತಪಾತದ ಕೂಪಕ್ಕೆ ತಳ್ಳಲಿದೆ. ನೆರೆಯ ಟರ್ಕಿ, ಸಿರಿಯಾ ಮತ್ತು ಇರಾಕ್‌ಗಳಲ್ಲಿರುವ ಕುರ್ಡಿಶ್ ಪ್ರತ್ಯೇಕತಾವಾದಿಗಳಿಗೆ ಇದು ಪ್ರೇರಣೆ ನೀಡಲಿದ್ದು, ಇಡೀ ಪ್ರಾಂತ್ಯದಲ್ಲಿ ಭಾರಿ ಅರಾಜಕತೆ ಸೃಷ್ಟಿಯಾಗಲಿದೆ.
ಇವೆಲ್ಲವನ್ನು ಗಮನಿಸಿದರೆ, ತನ್ನ ಭೌಗೋಳಿಕ ರಾಜಕೀಯ ಹಿತಾಸಕ್ತಿಗಳಿಗಾಗಿ ಬೇರೆ ದೇಶಗಳ ಆಂತರಿಕ ಭದ್ರತೆಯೊಂದಿಗೆ ಚೆಲ್ಲಾಟವಾಡುವ ಅಮೆರಿಕದ ಈ ರಕ್ತಪಿಪಾಸು ನೀತಿ ಅತ್ಯಂತ ಖಂಡನೀಯ ಹಾಗೂ ಅಪಾಯಕಾರಿ. 80-90 ಮೀಟರ್ ಆಳದ ಪರಮಾಣು ನೆಲೆಯನ್ನು ರಾಜತಾಂತ್ರಿಕವಾಗಿ ಅಥವಾ ಅಂತಾರಾಷ್ಟ್ರೀಯ ನಿಯಮಗಳ ಮೂಲಕ ಬಗೆಹರಿಸುವ ಬದಲು, ಉಗ್ರಗಾಮಿಗಳಿಗೆ ಶಸ್ತ್ರಾಸ್ತ್ರ ನೀಡಿ ಧ್ವಂಸಕ್ಕೆ ಸಂಚು ರೂಪಿಸಿರುವುದು ಅಮೆರಿಕದ ನೈತಿಕ ಅಧಃಪತನವನ್ನು ತೋರಿಸುತ್ತದೆ. ಶಾಂತಿಯ ಮುಖವಾಡದ ಹಿಂದಿರುವ ಅಮೆರಿಕದ ಈ ವಿನಾಶಕಾರಿ ನಡೆಯೇ ಇಂದು ಜಾಗತಿಕ ಶಾಂತಿಗೆ ಇರುವ ಅತಿದೊಡ್ಡ ಕಂಟಕ.





