ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ, ಎಲ್‌ಡಿಎಫ್, ಯುಡಿಎಫ್‌ನ ಆಂತರಿಕ ತಿಕ್ಕಾಟಗಳ ಫಲಾನುಭವಿ ಈಗ ಬಿಜೆಪಿ. ಸಿಪಿಐನಿಂದ ಮುಕುಂದನ್, ಎಸ್ ರಾಜೇಂದ್ರನ್ ಮತ್ತು ಕೆ ಅಜಿತ್ ಮೊದಲಾದ ನಾಯಕರು ಬಿಜೆಪಿ ಸೇರಿರುವುದರಿಂದ ಎನ್‌ಡಿಎ ಈಗ ಸ್ಥಳೀಯವಾಗಿ ತನ್ನ ಪ್ರಭಾವ ಹೆಚ್ಚಿಸಲು ಶ್ರಮಿಸುತ್ತಿದೆ. ಆದರೆ ಬಿಜೆಪಿಯ ದಾರಿಯೂ ಸುಗಮವಾಗಿಲ್ಲ. ಅಲ್ಲೂ ಬಂಡಾಯ, ಪಕ್ಷಾಂತರ, ಉಚ್ಚಾಟನೆ ಗಾಳಿ ಸೋಕಿದೆ.
ಕೇರಳದಲ್ಲಿ ವಿಧಾನಸಭೆ ಮತದಾನ ನಡೆಯಲು ಇನ್ನು ಕೆಲವೇ ವಾರಗಳು ಬಾಕಿಯಿದೆ. ಎಲ್‌ಡಿಎಫ್, ಯುಡಿಎಫ್, ಎನ್‌ಡಿಎ ಮೈತ್ರಿಕೂಟದಲ್ಲಿರುವ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಿದೆ. ಟಿಕೆಟ್ ಹಂಚಿಕೆ ಮಾಡುತ್ತಿದ್ದಂತೆ ಎಲ್ಲ ಪಕ್ಷಗಳಿಗೂ ಸಂಕಟ ಶುರುವಾಗಿದೆ. ಬಂಡಾಯ, ಪಕ್ಷಾಂತರದ ಸಂಕಷ್ಟ ಎದುರಾಗಿದೆ. ಉಚ್ಚಾಟನೆ ಎಂಬ ಅಸ್ತ್ರ ಪ್ರಯೋಗವೂ ನಡೆಯುತ್ತಿದೆ.
ಈ ಬಿಕ್ಕಟ್ಟಿನಲ್ಲಿ ಹೆಚ್ಚಾಗಿ ಸಿಲುಕಿರುವುದು ಆಡಳಿತಾರೂಢ ಎಲ್‌ಡಿಎಫ್. ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಿರಿಯ ತಲೆಗಳನ್ನು ಬಿಟ್ಟು ಎಲ್‌ಡಿಎಫ್ ಯುವಕರಿಗೆ ಮಣೆ ಹಾಕಿದೆ. ಇದರಿಂದಾಗಿ ಅಲ್ಲಲ್ಲಿ ಬಂಡಾಯ, ಅಸಮಾಧಾನ ಭುಗಿಲೆದ್ದಿದೆ. ಸತತ ಮೂರನೇ ಬಾರಿಗೆ ಅಧಿಕಾರ ಪಡೆಯಬೇಕು ಎಂದು ಪ್ರಯತ್ನಿಸುತ್ತಿರುವ ಎಲ್‌ಡಿಎಫ್ ಇಕ್ಕಟ್ಟಿನಲ್ಲಿ ಸಿಲುಕಿದೆ.
ಇದನ್ನು ಓದಿದ್ದೀರಾ? ಕೇರಳ ಚುನಾವಣೆ | ಕ್ರೈಸ್ತ ಸಮುದಾಯದ ಮತಗಳು ‘ಗೇಮ್ ಚೇಂಜರ್’ ಆಗಬಹುದೇ?
ಸುಮಾರು 25 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಬಿಜು ಎಸ್ ಚಿರಾಯತ್ ಅವರು ಎಲ್‌ಡಿಎಫ್ ಮಿತ್ರ ಪಕ್ಷ ಕೇರಳ ಕಾಂಗ್ರೆಸ್ (ಎಂ) ಪಕ್ಷಕ್ಕೆ ಸೇರ್ಪಡೆಗೊಂಡು ಚಾಲಕುಡಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಇವರು ಚಾಲಕುಡಿ ಮುನ್ಸಿಪಾಲಿಟಿಯಲ್ಲಿ ಸತತವಾಗಿ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದರು. ಮಾರ್ಚ್ 16ರಂದು ಬೆಳಿಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಮತ್ತು ತಮ್ಮ ಕೌನ್ಸಿಲರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಸಂಜೆಯ ವೇಳೆಗೆ ಎಲ್‌ಡಿಎಫ್ ಬೆಂಬಲಿತ ಅಭ್ಯರ್ಥಿಯಾಗಿ ಟಿಕೆಟ್ ಪಡೆದರು. ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಭಾರಿ ಬಹುಮತ ಗಳಿಸಿದ್ದ ಜನಪ್ರಿಯ ಕೌನ್ಸಿಲರ್ ಚಿರಾಯತ್ ಅವರು ಎಲ್‌ಡಿಎಫ್ ಸೇರಿರುವುದು ಎಡಪಕ್ಷಗಳಿಗೆ ಸಿಕ್ಕ ಪ್ರಮುಖ ಗೆಲುವು ಎಂದರೆ ತಪ್ಪಾಗದು.
ಒಂದೆಡೆ ಲಾಭವಾದರೆ ಇನ್ನೊಂದೆಡೆ ನಷ್ಟ
ಆದರೆ ಒಂದೆಡೆ ಲಾಭವಾದರೆ ಇನ್ನೊಂದೆಡೆ ಎಲ್‌ಡಿಎಫ್ ಕಳೆದುಕೊಂಡಿದೆ ಎಂಬುದು ವಾಸ್ತವ. ನಾಟ್ಟಿಕದಲ್ಲಿ ಸಿಪಿಐ ಹಾಲಿ ಶಾಸಕ ಸಿ.ಸಿ. ಮುಕುಂದನ್ ಅವರಿಗೆ ಟಿಕೆಟ್ ನೀಡದೆ ಗೀತಾ ಗೋಪಿಗೆ ಮಣೆ ಹಾಕಿದೆ. ಇದರಿಂದ ಅಸಮಾಧಾನಗೊಂಡ ಮುಕುಂದನ್ ಸಿಪಿಐ ಟಿಕೆಟ್ ಮಾರಾಟ ಮಾಡಿದೆ ಎಂದು ಆರೋಪಿಸಿದ್ದಲ್ಲದೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗಬಹುದೇ ಎಂಬ ಪ್ರಯತ್ನ ಮಾಡಿದರು. ಅಲ್ಲೂ ತನಗೆ ಸ್ಥಾನವಿಲ್ಲ ಎಂದಾಗ ಕಡೆಯದಾಗಿ ಈವರೆಗೆ ಯಾವ ಪಕ್ಷವನ್ನು ವಿರೋಧಿಸುತ್ತಾ ಬಂದಿದ್ದರೋ ಅದೇ ಪಕ್ಷ ಅಂದರೆ ಬಿಜೆಪಿ ಸೇರಿದರು. ಇದೀಗ ನಾಟ್ಟಿಕದ ಎನ್‌ಡಿಎ ಅಭ್ಯರ್ಥಿ ಮುಕುಂದನ್. ಬಿಜೆಪಿ ಸೇರಿದ್ದು ಮಾತ್ರವಲ್ಲದೆ ಸಿಪಿಐ ಒಳಗೆ ನಡೆದ ಭ್ರಷ್ಟಾಚಾರವನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
ಇನ್ನೊಂದೆಡೆ ಎಡಪಕ್ಷಗಳ ಸಾಂಪ್ರದಾಯಿಕ ಭದ್ರಕೋಟೆಯಾದ ಕಣ್ಣೂರಿನಲ್ಲಿ, ಸುಮಾರು ಆರು ದಶಕಗಳ ಕಾಲ ಸೇವೆ ಸಲ್ಲಿಸಿದವರು ಸಿಪಿಐಎಂ ಹಿರಿಯ ನಾಯಕ ಟಿಕೆ ಗೋವಿಂದನ್. ಆದರೆ ತಳಿಪರಂಬದಲ್ಲಿ ಪಿ.ಕೆ. ಶ್ಯಾಮಲಾ ಅವರನ್ನು ಸಿಪಿಐಎಂ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಇದರಿಂದ ಅಸಮಾಧಾನಗೊಂಡು ಈಗಾಗಲೇ ಗೋವಿಂದನ್ ಸಿಪಿಐ(ಎಂ) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅದೇ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಪಯ್ಯನ್ನೂರು ಶಾಸಕ ಟಿ.ಐ. ಮಧುಸೂದನನ್ ಅವರು ಪಕ್ಷದ ನಿಧಿ ದುರುಪಯೋಗ ಮಾಡಿದ್ದಾರೆ. ಹತ್ಯೆಗೀಡಾದ ಕಾರ್ಮಿಕ ಸಿ.ವಿ. ಧನರಾಜ್ ಅವರ ಕುಟುಂಬಕ್ಕಾಗಿ ಸಂಗ್ರಹಿಸಿದ ಹಣವೂ ಅದರಲ್ಲಿ ಸೇರಿದೆ ಎಂಬ ಆರೋಪವನ್ನು ಮಾಡಿದ ಕಣ್ಣೂರು ಜಿಲ್ಲಾ ಸಮಿತಿಯ ಮಾಜಿ ಸದಸ್ಯ ವಿ. ಕುಂಞಿಕೃಷ್ಣನ್ ಪಕ್ಷದ ವಿರುದ್ಧ ತಿರುಗಿಬಿದ್ದಿದ್ದರು. ಆದರೆ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಂತೆ ಕುಂಞಿಕೃಷ್ಣನ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಇದೀಗ ಕುಂಞಿಕೃಷ್ಣನ್ ಪಯ್ಯನ್ನೂರಿನ ಸ್ವತಂತ್ರ ಅಭ್ಯರ್ಥಿ.
ಗೋವಿಂದನ್ ಮತ್ತು ಕುಂಞಿಕೃಷ್ಣನ್ ಎಲ್‌ಡಿಎಫ್‌ನಲ್ಲಿ ತಮಗೆ ಟಿಕೆಟ್ ದಕ್ಕದು ಎಂದು ಸ್ಪಷ್ಟವಾಗುತ್ತಿದ್ದಂತೆ ಪಕ್ಷದ ವಿರುದ್ಧ ಆರೋಪಗಳನ್ನು ಮಾಡಿದವರು. ಕೊನೆಗೆ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನಲ್ಲಿ ಸ್ಥಾನ ಸಿಗಬಹುದೇ ಎಂದು ಪ್ರಯತ್ನಿಸಿದವರು. ಅಲ್ಲೂ ಸ್ಥಾನವಿಲ್ಲ ಎಂದು ತಿಳಿದಾಗ ಸ್ವತಂತ್ರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದದಾರೆ. ಇವೆರಡೂ ಎಲ್‌ಡಿಎಫ್‌ನ ಸಾಂಪ್ರದಾಯಿಕ ಭದ್ರಕೋಟೆಯಾದ ಕಾರಣ ಎಡರಂಗಕ್ಕೆ ಹೊಡೆತ ನೀಡುವ ಸಾಧ್ಯತೆ ಹೆಚ್ಚಿದೆ.
ಆದರೆ ಎಡಪಂಥೀಯರಿಗೆ ಅತ್ಯಂತ ದೊಡ್ಡ ಹೊಡೆತ ಬಿದ್ದಿರುವುದು ಆಲಪ್ಪುಳದಲ್ಲಿ. ಮಾಜಿ ಸಚಿವ, ನಾಲ್ಕು ಬಾರಿ ಶಾಸಕ ಮತ್ತು ಸಿಪಿಐ(ಎಂ)ನಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ನಾಯಕರಾಗಿರುವ ಜಿ. ಸುಧಾಕರನ್ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಪಕ್ಷದಿಂದ ದೂರ ಸರಿದು ಅಂಬಲಪ್ಪುಳದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಸುಧಾಕರನ್ ಜನಪ್ರಿಯತೆ ತಿಳಿದಿರುವ ಯುಡಿಎಫ್ ಕೂಡ ಅವರಿಗೆ ಮೌನವಾಗಿ ಬೆಂಬಲಕ್ಕೆ ನಿಂತಿದೆ. ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದೆ. ಆದರೆ ಅಧಿಕೃತ ನಿರ್ಧಾರ ಇನ್ನೂ ಬಾಕಿ ಇದೆ.
ಎಡರಂಗದಲ್ಲಿ ಭಿನ್ನಮತೀಯರ ಪಟ್ಟಿ ಅಲ್ಲಿಗೆ ಮುಗಿಯಲ್ಲ. ಒಂದು ಕಾಲದಲ್ಲಿ ಪಕ್ಷದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ, ಭಿನ್ನಮತೀಯರ ಸಭೆಯಲ್ಲಿ ಭಾಗವಹಿಸಿದ್ದಕ್ಕೆ ಶೋರ್ನೂರ್‌ನ ಮಾಜಿ ಶಾಸಕ ಪಿಕೆ ಸಸಿ ಮತ್ತೆ ಪಕ್ಷಕ್ಕೆ ಮರಳುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ಅವರು ಯುಡಿಎಫ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ, ಒಟ್ಟಪಾಲಂನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ. ಹಿರಿಯ ನಾಯಕರಾದ ಎ ಸುರೇಶ್ ಮತ್ತು ಪಿ ಆಯಿಷಾ ಪೊಟ್ಟಿ ಕೂಡ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ಸಿಪಿಐಎಂನಿಂದ ಹೊರನಡೆದಿದ್ದಾರೆ. ಸುರೇಶ್ ಮಲಂಪುಳನಲ್ಲಿ, ಪೊಟ್ಟಿ ಕೊಟ್ಟಾರಕ್ಕರನಲ್ಲಿ ಕಾಂಗ್ರೆಸ್ ಟಿಕೆಟ್ ಮೂಲಕ ಸ್ಪರ್ಧಿಸಲಿದ್ದಾರೆ.
ಸಿಪಿಐ(ಎಂ) ಮಾಜಿ ಶಾಸಕ ಎಸ್ ರಾಜೇಂದ್ರನ್ ಮತ್ತು ಸಿಪಿಐನ ಮಾಜಿ ನಾಯಕ ಕೆ ಅಜಿತ್ ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ರಾಜೇಂದ್ರನ್ ತಾವು ಮೂರು ಬಾರಿ ಪ್ರತಿನಿಧಿಸಿದ್ದ ದೇವಿಕುಲಂನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಅಜಿತ್ ಎರಡು ಬಾರಿ ಪ್ರತಿನಿಧಿಸಿದ್ದ ವೈಕಂನಲ್ಲಿ ಸ್ಪರ್ಧಿಸಲಿದ್ದಾರೆ.

ಅಂತಿಮವಾಗಿ ಬರುವುದು ಪಿ.ವಿ. ಅನ್ವರ್. ಪಿಣರಾಯಿ ವಿಜಯನ್ ಅವರ ಸರ್ಕಾರದ ಮೊದಲ ಮತ್ತು ಎರಡನೇ ಅವಧಿಯಲ್ಲಿ ಎಡಪಂಥೀಯ ಪಕ್ಷೇತರರಾಗಿ ನಿಲಂಬೂರಿನಿಂದ ಆಯ್ಕೆಯಾದ ಅನ್ವರ್ ಅವರನ್ನು ಒಂದು ಕಾಲದಲ್ಲಿ ಸಿಪಿಐ(ಎಂ) ನ ವಿಶ್ವಾಸಾರ್ಹ ಮಿತ್ರ ಎಂದು ಪರಿಗಣಿಸಲಾಗಿತ್ತು. ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್ ಜತೆಗಿನ ಅವರ ಸಂಬಂಧ ಹದಗೆಡಲು ಪ್ರಾರಂಭಿಸಿದಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಯುಡಿಎಫ್ ನಿಲಂಬೂರಿನಲ್ಲಿ ಆರ್ಯದನ್ ಶೌಕತ್ ಅವರನ್ನು ಕಣಕ್ಕಿಳಿಸಿ ಆ ಸ್ಥಾನವನ್ನು ವಶಪಡಿಸಿಕೊಂಡಿದೆ. ಅನ್ವರ್ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಕೇರಳ ಘಟಕದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಯುಡಿಎಫ್ ಸೇರಿದ್ದಾರೆ. ಇದೀಗ ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಬೇಪೋರ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.
ಪಕ್ಷಾಂತರಿಗಳಿಗೆ ಯುಡಿಎಫ್ ಆದ್ಯತೆ: ಸ್ಥಳೀಯ ನಾಯಕರ ಅಸಮಾಧಾನ
ಎಲ್‌ಡಿಎಫ್ ನಾಯಕರುಗಳಲ್ಲಿನ ಅಸಮಾಧಾನವು ಯುಡಿಎಫ್ ಗಮನಾರ್ಹವಾದ ಲಾಭಗಿಟ್ಟಿಸಿಕೊಳ್ಳಲು ಸಹಾಯ ಮಾಡಿದೆ. 2006ರಲ್ಲಿ ಆರ್ ಬಾಲಕೃಷ್ಣ ಪಿಳ್ಳೈ ವಿರುದ್ಧ ಐತಿಹಾಸಿಕ ಗೆಲುವು ಕಂಡಿದ್ದವರು ಆಯಿಷಾ ಪೊಟ್ಟಿ. ಸುಮಾರು ಮೂರು ದಶಕಗಳಿಂದ (1977ರಿಂದ) ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಬಾಲಕೃಷ್ಣ ಪಿಳ್ಳೈ ಅವರ ಸತತ ಗೆಲುವಿನ ಓಟಕ್ಕೆ ಆಯಿಷಾ ಬ್ರೇಕ್ ಹಾಕಿದ್ದರು. ಕೊಟ್ಟಾರಕ್ಕರನಲ್ಲಿ ಮೂರು ಬಾರಿ ಸಿಪಿಐ(ಎಂ) ಶಾಸಕಿಯಾಗಿದ್ದಾರೆ. ಇದೀಗ ಆಯಿಷಾ ಪೊಟ್ಟಿ ಕಾಂಗ್ರೆಸ್ ಸೇರಿರುವುದು ಯುಡಿಎಫ್‌ಗೆ ಸಿಕ್ಕ ಬಲ.
ಆದರೆ ಪಕ್ಷಾಂತರಿಯಾದ ಪೊಟ್ಟಿಗೆ ಟಿಕೆಟ್ ನೀಡಿರುವುದು ಸ್ಥಳೀಯವಾಗಿ ಅಸಮಾಧಾನಕ್ಕೆ ಕಾರಣವಾಗಿದೆ. 2021ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆರ್ ರೇಶ್ಮಿ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಈಗ ಕೊಟ್ಟಾರಕ್ಕರನಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಇದರಂತೆ ಪಿಕೆ ಸಸಿ, ಜಿ ಸುಧಾಕರನ್, ಟಿಕೆ ಗೋವಿಂದನ್, ವಿ ಕುಂಞಿಕೃಷ್ಣನ್ ಸೇರಿದಂತೆ ಎಲ್‌ಡಿಎಫ್‌ನ ಬಂಡಾಯ ನಾಯಕರನ್ನು ಬೆಂಬಲಿಸುವ ಯುಡಿಎಫ್ ನಿರ್ಧಾರವು ಸ್ಥಳೀಯವಾಗಿ ಹಲವು ನಾಯಕರುಗಳಲ್ಲಿ ಅಸಮಾಧಾನ ಸೃಷ್ಟಿಸಿರುವುದು ವಾಸ್ತವ.

ಆಲಪ್ಪುಳದಲ್ಲಿ, ಕಾಂಗ್ರೆಸ್ ನಾಯಕತ್ವವು ಎಲ್‌ಡಿಎಫ್‌ನ ಎಚ್ ಸಲಾಂ ವಿರುದ್ಧ ತನ್ನದೇ ಆದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬದಲು ಅಂಬಲಪ್ಪುಳದ ಸ್ವತಂತ್ರ ಅಭ್ಯರ್ಥಿ ಜಿ ಸುಧಾಕರನ್ ಅವರನ್ನು ಬೆಂಬಲಿಸಿದೆ. ಇದರಿಂದ ಅಸಮಾಧಾನಗೊಂಡ ಯುವ ಕಾಂಗ್ರೆಸ್ ಮತ್ತು ಕೆಎಸ್‌ಯು ಸಂಘಟನೆಯನ್ನು ಹಲವು ವರ್ಷಗಳಿಂದ ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂಜೆ ಜಾಬ್ ಬಿಜೆಪಿ ಸೇರಿದ್ದಾರೆ. ಇದೀಗ ಇದರ ಲಾಭ ಪಡೆಯಲು ಮುಂದಾಗಿರುವ ಬಿಜೆಪಿ ಅಂಬಲಪ್ಪುಳದಲ್ಲಿ ಜಾಬ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಕೊಲ್ಲಂನಲ್ಲಿಯೂ ಇದೇ ರೀತಿ ನಡೆದಿದೆ. ಕರುಣಗಪ್ಪಳ್ಳಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಮತ್ತು ಮಾಜಿ ಯುಡಿಎಫ್ ಅಧ್ಯಕ್ಷ ಥೋಡಿಯೂರ್ ರಾಮಚಂದ್ರನ್ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಹೇಳಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದಾರೆ.
ಕಾಂಗ್ರೆಸ್ ನಂತರ ಎರಡನೇ ಅತಿದೊಡ್ಡ ಯುಡಿಎಫ್ ಮಿತ್ರ ಪಕ್ಷ ಐಯುಎಂಎಲ್. ಈ ಪಕ್ಷ ತಿರುರಂಗಡಿಯಲ್ಲಿ ಪಿಎಂಎ ಸಮೀರ್ ಅವರನ್ನು ಕಣಕ್ಕಿಳಿಸುವ ನಿರ್ಧಾರವು ಭಿನ್ನಾಭಿಪ್ರಾಯವನ್ನು ಹುಟ್ಟುಹಾಕಿದೆ. ಐಯುಎಂಎಲ್ ರಾಜ್ಯ ಕಾರ್ಯದರ್ಶಿ ಅಬ್ದುರಹಿಮಾನ್ ರಂದಥಾನಿ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಸಮೀರ್ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಇದರ ಲಾಭ ಪಡೆಯಲು ಎಲ್‌ಡಿಎಫ್ ತಂತ್ರ ಶುರು ಮಾಡಿದೆ. ರಂದಥಾನಿಯನ್ನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಮನವೊಲಿಸಲು ಆರಂಭಿಸಿದೆ. ಆದರೆ ರಂದಥಾನಿ ಇನ್ನೂ ನಿರ್ಧಾರ ಕೈಗೊಂಡಿಲ್ಲ.
ಇವೆಲ್ಲವುದರ ಲಾಭ ಪಡೆಯುವ ಎನ್‌ಡಿಎ!
ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ, ಎಲ್‌ಡಿಎಫ್, ಯುಡಿಎಫ್‌ನ ಆಂತರಿಕ ತಿಕ್ಕಾಟಗಳ ಫಲಾನುಭವಿ ಈಗ ಬಿಜೆಪಿ. ಸಿಪಿಐನಿಂದ ಮುಕುಂದನ್, ಎಸ್ ರಾಜೇಂದ್ರನ್ ಮತ್ತು ಕೆ ಅಜಿತ್ ಮೊದಲಾದ ನಾಯಕರು ಬಿಜೆಪಿ ಸೇರಿರುವುದರಿಂದ ಎನ್‌ಡಿಎ ಈಗ ಸ್ಥಳೀಯವಾಗಿ ತನ್ನ ಪ್ರಭಾವ ಹೆಚ್ಚಿಸಲು ಶ್ರಮಿಸುತ್ತಿದೆ. ಆರ್ ರೇಶ್ಮಿ ಜತೆ ಕಾಂಗ್ರೆಸ್‌ನಿಂದ ಬಾಬು ದಿವಾಕರನ್ ಅವರನ್ನು ಸಹ ಸೆಳೆದಿದೆ. ಈಗ ಕುನ್ನತುನಾಡುನಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ. ಕೆಪಿಸಿಸಿ ಕಾರ್ಯದರ್ಶಿ ಥೋಡಿಯೂರ್ ರಾಮಚಂದ್ರನ್ ಕೂಡಾ ಬಿಜೆಪಿಗೆ ಸೇರಿದ್ದಾರೆ.
ಆದರೆ ಬಿಜೆಪಿಯ ದಾರಿಯೂ ಸುಗಮವಾಗಿಲ್ಲ. ಸಂಘಟನಾ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಮಾರ್ಚ್ 17ರಂದು ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ನೋಬಲ್ ಮ್ಯಾಥ್ಯೂ ಅವರನ್ನು ಉಚ್ಚಾಟಿಸಲಾಗಿದೆ. ಕಂಜಿರಪಳ್ಳಿಯಿಂದ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಮ್ಯಾಥ್ಯೂ ವಿರೋಧಿಸಿದ್ದರು. ಕುರಿಯನ್‌ಗೆ ಸ್ಥಳೀಯವಾಗಿ ಸಂಪರ್ಕವಿಲ್ಲ, ಅವರಿಗೆ ಟಿಕೆಟ್ ನೀಡಿ ಬಿಜೆಪಿ ಸ್ಥಳೀಯ ಕಾರ್ಯಕರ್ತರನ್ನು ನಿರ್ಲಕ್ಷಿಸಿದೆ ಎಂಬುದು ಮ್ಯಾಥ್ಯೂ ಆರೋಪ. ಕೆ. ಸುರೇಂದ್ರನ್ ಮತ್ತು ಪಿ.ಕೆ. ಕೃಷ್ಣದಾಸ್ ನೇತೃತ್ವದ ಬಣಗಳ ನಡುವಿನ ಭಿನ್ನಾಭಿಪ್ರಾಯಗಳನ್ನೂ ಮ್ಯಾಥ್ಯೂ ಬಹಿರಂಗಪಡಿಸಿದರು. ಇದೀಗ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಚಿಂತನೆ ನಡೆಸಿದ್ದಾರೆ.
ಇದಕ್ಕೂ ಮುನ್ನವೇ 2025ರಲ್ಲಿ ಬುಡಕಟ್ಟು ನಾಯಕಿ ಮತ್ತು ಜನಾತಿಪತ್ಯ ರಾಷ್ಟ್ರೀಯ ಸಭಾ (ಜೆಆರ್‌ಎಸ್) ಮುಖ್ಯಸ್ಥ ಸಿಕೆ ಜಾನು ಎನ್‌ಡಿಎ ತೊರೆದು ಮತ್ತೆ ಯುಡಿಎಫ್‌ಗೆ ಸೇರಿದ್ದಾರೆ. ಜೆಆರ್‌ಎಸ್ ಎನ್‌ಡಿಎಗೆ ಸೇರುವ ಮೊದಲು ಯುಡಿಎಫ್‌ನ ಭಾಗವಾಗಿತ್ತು. 2024ರಲ್ಲಿ, ಪಾಲಕ್ಕಾಡ್ ಜಿಲ್ಲಾ ನಾಯಕತ್ವದೊಂದಿಗೆ ಘರ್ಷಣೆ ಕಾರಣ ಸಂದೀಪ್ ವಾರಿಯರ್ ಕಾಂಗ್ರೆಸ್ ಸೇರಿದ್ದಾರೆ. ಇದೀಗ ತ್ರಿಕ್ಕರಿಪುರನಲ್ಲಿ ಸ್ಪರ್ಧಿಸುವ ನಿರೀಕ್ಷೆಯಿದೆ. ಎಂ.ಟಿ. ರಮೇಶ್ ಮತ್ತು ಬಿ. ಗೋಪಾಲಕೃಷ್ಣನ್ ಸೇರಿದಂತೆ ಹಲವಾರು ಪ್ರಮುಖರನ್ನು ಆರಂಭಿಕ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿಡಲಾಗಿರುವುದರಿಂದ ಬಿಜೆಪಿ ಹಿರಿಯ ನಾಯಕರಲ್ಲಿ ಅಸಮಾಧಾನ ಹುಟ್ಟಿದೆ.
ಹೀಗೆ ಎಲ್‌ಡಿಎಫ್, ಯುಡಿಎಫ್ ಮತ್ತು ಹೊಸದಾಗಿ ಕೊಂಚ ಸ್ಥಾನ ಪಡೆದುಕೊಳ್ಳುತ್ತಿರುವ ಎನ್‌ಡಿಎ ಮೂರೂ ಮೈತ್ರಿ ಕೂಟಗಳೂ ಬಂಡಾಯ, ಪಕ್ಷಾಂತರ, ಉಚ್ಚಾಟನೆ ಸಂಕಷ್ಟದಲ್ಲಿ ಸಿಲುಕಿದೆ. ಒಂದೆಡೆ ಲಾಭವಾದರೆ ಇನ್ನೊಂದೆಡೆ ನಷ್ಟ ಕಂಡಿದೆ. ಕಡೆಯದಾಗಿ ಯಾರ ಪಾಲಿಗೆ ಗದ್ದುಗೆ ಎಂಬುದು ಪ್ರಚಾರ ತಂತ್ರ, ಜಾತಿ ಲೆಕ್ಕಾಚಾರದ ಮೇಲೆ ಅವಲಂಬಿತ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




