ಕೊನೆಯ ಕ್ಷಣದ ಉಚಿತ ಕೊಡುಗೆಗಳಿಗೆ ಕುರುಡಾಗಿರುವುದು, ದೊಡ್ಡ ಮಟ್ಟದಲ್ಲಿ ಮತಗಳ ಸೇರ್ಪಡೆ/ರದ್ದತಿ ಮಾಡಿ ಪ್ರಭಾವ ಬೀರಿರುವ ಆರೋಪವನ್ನು ಚುನಾವಣಾ ಆಯೋಗ ಎದುರಿಸುತ್ತಿದೆ. ಇದೀಗ ಆನ್‌ಲೈನ್‌ನಲ್ಲಿ ಆಯೋಗ ತನ್ನ ಪಾತ್ರವನ್ನು ನಿರಾಕರಿಸುತ್ತಿದೆ, ಆರೋಪಗಳಿಗೆ ಸಾಕ್ಷ್ಯ ಕೇಳುತ್ತಿದೆ. ನಿಷ್ಪಕ್ಷಪಾತ ಚುನಾವಣಾ ಆಯೋಗ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಅತಿ ಮುಖ್ಯ. ಇಂದಿನ ಅಧಿಕಾರಿಗಳೇ ಮುಂದಿನ ತಲೆಮಾರಿಗೆ ಹೊಣೆಗಾರರು ಎನ್ನುವುದನ್ನು ಅವರು ಮರೆಯಬಾರದು.
ಬಿಹಾರದಲ್ಲಿ ಎನ್‌ಡಿಎ ಶೇ. 90ರಷ್ಟು ಸ್ಥಾನಗಳನ್ನು ಪಡೆದು ಇತಿಹಾಸ ರಚಿಸಿ ಗೆಲುವು ಸಾಧಿಸಿದೆ. ಇಂತಹ ಅಭೂತಪೂರ್ವ ಸಾಧನೆಗೆ ಮಾಧ್ಯಮಗಳಲ್ಲಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಜೋಡಿಯ ವರ್ಚಸ್ಸನ್ನು ಕಾರಣವಾಗಿ ನೀಡಲಾಗುತ್ತಿದೆ. ಚುನಾವಣಾ ವಿಶ್ಲೇಷಕರು ಈ ಚುನಾವಣಾ ಗೆಲುವಿಗೆ ಉಚಿತ ಕೊಡುಗೆಗಳನ್ನು ಕಾರಣವಾಗಿ ನೀಡುತ್ತಿದ್ದಾರೆ. ಬಿಹಾರ ಚುನಾವಣೆಯ ಫಲಿತಾಂಶಕ್ಕೆ ಸಂಪೂರ್ಣವಾಗಿ ಚುನಾವಣಾ ಆಯೋಗವನ್ನು ಹೊಣೆಗಾರರಾಗಿಸುವುದು ತಪ್ಪು, ವಿಪಕ್ಷಗಳು ನೆಲಮಟ್ಟದಲ್ಲಿ ಪ್ರಭಾವ ಬೀರಲು ವಿಫಲವಾಗಿವೆ. ರಾಹುಲ್ ಗಾಂಧಿಯವರು ಚುನಾವಣಾ ಕಣದಿಂದ ಹೊರಗೆ ಹೋಗಬೇಕು ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ. ನರೇಂದ್ರ ಮೋದಿಯವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ ಎರಡು ಹೋಳಾಗಿ ಬಿಡಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಹಾಗಿದ್ದರೆ ಈ ಚುನಾವಣೆ ನಿಷ್ಪಕ್ಷಪಾತವಾಗಿ ನಡೆದಿದೆಯೆ? ಚುನಾವಣಾ ಗೆಲುವಿನಲ್ಲಿ ಚುನಾವಣಾ ಆಯೋಗದ ಪಾತ್ರ ಇರಲಿಲ್ಲವೆ? ಮುಖ್ಯವಾಗಿ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಜುಗಲ್‌ಬಂದಿಯ ಕಾರಣದಿಂದಲೇ ಇಂತಹ ಅಭೂತಪೂರ್ವ ಗೆಲುವು ಸಾಬೀತಾಗಿದೆ ಎನ್ನುವ ಆರೋಪಗಳಲ್ಲಿ ಹುರುಳಿಲ್ಲವೆ?
ಜೆಡಿಯು ಅಭೂತಪೂರ್ವ ಸಾಧನೆ?
ಬಿಹಾರ ಚುನಾವಣೆಯಲ್ಲಿ ಎನ್‌ಡಿಎಯ ಅಭೂತಪೂರ್ವ ಗೆಲುವಿನಲ್ಲಿ ಬಿಜೆಪಿಯ ಪಾತ್ರಕ್ಕಿಂತ ಜೆಡಿಯು ಪಾತ್ರವೇ ದೊಡ್ಡದು. 2020ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ 15 ಸ್ಥಾನಗಳನ್ನಷ್ಟೇ ಏರಿಸಿಕೊಂಡಿದೆ. ಬದಲಿಗೆ ಜೆಡಿಯು 2020ರ 43 ಸ್ಥಾನಗಳಿಂದ 85 ಸ್ಥಾನಗಳಿಗೆ ಏರಿದೆ. ಈ ಅಭೂತಪೂರ್ವ ಗೆಲುವಿಗೆ ನಿತೀಶ್ ಕುಮಾರ್ ವರ್ಚಸ್ಸನ್ನು ಮುಂದಿಡಲಾಗುತ್ತಿದೆ. ಆದರೆ ವಾಸ್ತವದಲ್ಲಿ ಈ ಗೆಲುವಿಗೆ ಮುಖ್ಯ ಕಾರಣ ಕೊನೆ ಕ್ಷಣದಲ್ಲಿ ನೀಡಿದ ಉಚಿತ ಕೊಡುಗೆಗಳು ಎಂದು ಚುನಾವಣಾ ವಿಶ್ಲೇಷಕರು ಹೇಳುತ್ತಿದ್ದಾರೆ!
ಚುನಾವಣೆಗೆ ಕೆಲವೇ ದಿನಗಳು ಇರುವಾಗ ಎನ್‌ಡಿಎ 75 ಲಕ್ಷ ಮಹಿಳೆಯರಿಗೆ ನೀಡಿರುವ ತಲಾ 10,000 ರೂಪಾಯಿಗಳ ಬ್ಯಾಂಕ್ ವರ್ಗಾವಣೆ ಮಾಡಿರುವುದು ಚುನಾವಣೆ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ ಎಂದೇ ಹೇಳಲಾಗುತ್ತಿದೆ. ಜೊತೆಗೆ 125 ಯುನಿಟ್‌ಗಳಷ್ಟು ಉಚಿತ ವಿದ್ಯುತ್, ಸಾಮಾಜಿಕ ಭದ್ರತೆಯ ಪಿಂಚಣಿಗಳನ್ನು ಮೂರು ಪಟ್ಟು ಹೆಚ್ಚಳ ಮಾಡಿರುವುದು ಸೇರಿವೆ. ವಿಪಕ್ಷಗಳು ಅನೇಕ ಯೋಜನೆಗಳನ್ನು ಘೋಷಿಸಿದ್ದರೂ, ಅದನ್ನು ಕಾರ್ಯರೂಪಕ್ಕೆ ತಂದಿರಲಿಲ್ಲ. ಆದರೆ 75 ಲಕ್ಷ ಮಹಿಳೆಯರಿಗೆ ತಲಾ ರೂ 10,000 ದೊರೆತಿದ್ದು ಸುಳ್ಳಲ್ಲ. ನೆಲಮಟ್ಟದಲ್ಲಿ ವರದಿ ಮಾಡುತ್ತಿದ್ದ ವರದಿಗಾರರು ಅನೇಕರು ಈ ವ್ಯತ್ಯಾಸವನ್ನು ಗಮನಿಸಿದ್ದಾರೆ. ಮಾಧ್ಯಮದ ವರದಿಗಾರರು ವಿವಿಧ ಮಾಧ್ಯಮಗಳಲ್ಲಿ ನೀಡಿರುವ ವರದಿಗಳ ಪ್ರಕಾರ ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಮತ ಹಾಕಲು ಈ ಹಣ ಕಾರಣವಾಗಿದೆ. ಯಾವ ಪಕ್ಷಕ್ಕೆ ಮತ ಹಾಕಿದರೂ ತಮ್ಮ ಸ್ಥಿತಿಯಲ್ಲಿ ವಿಶೇಷ ಬದಲಾವಣೆ ಆಗುವುದಿಲ್ಲ ಎನ್ನುವುದು ಖಚಿತವಾಗಿರುವ ಸಂದರ್ಭದಲ್ಲಿ ಹಣ ನೀಡಿದ ಪಕ್ಷಕ್ಕೆ ನಿಷ್ಠೆ ತೋರಿಸಿರುವುದರಲ್ಲಿ ಸಂಶಯವೇನೂ ಇಲ್ಲ ಎಂದು ವಿಶ್ಲೇಷಣೆಯಾಗುತ್ತಿದೆ.

ಆದರೆ, ಭಾನುವಾರ ಚುನಾವಣಾ ತಂತ್ರಜ್ಞ ಮತ್ತು ಜನ ಸುರಾಜ್ ನಾಯಕ ಪ್ರಶಾಂತ್ ಕಿಶೋರ್ ಅವರು ಈ ಹಣದ ಮೂಲವನ್ನು ಮುಂದಿಟ್ಟಿದ್ದಾರೆ. ವಿಶ್ವ ಬ್ಯಾಂಕ್‌ನಿಂದ ಪಡೆದ ರೂ 14,000 ಕೋಟಿ ಸಾಲವನ್ನು ಅಭಿವೃದ್ಧಿ ಯೋಜನೆಗಳಿಗೆ ಬದಲಾಗಿ ಬಿಹಾರ ಚುನಾವಣೆಯಲ್ಲಿ ಮಹಿಳೆಯರ ಖಾತೆಗೆ ರೂ 10,000 ವರ್ಗಾವಣೆಗಾಗಿ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದು ಸಾರ್ವಜನಿಕ ಹಣದ ಸ್ಪಷ್ಟವಾದ ದುರ್ಬಳಕೆಯಾಗಿರುವ ಜೊತೆಗೆ, ಕೊನೆ ಕ್ಷಣದಲ್ಲಿ ಮತದಾರರ ಮೇಲೆ ಪ್ರಭಾವ ಬೀರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ.
ಇದಕ್ಕೆ ಮೊದಲು 2018ರಲ್ಲಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದ ಸ್ಮಾರ್ಟ್ ಫೋನ್ ಯೋಜನೆಯನ್ನು ಚುನಾವಣಾ ಆಯೋಗ ತಡೆದಿತ್ತು. ತೆಲಂಗಾಣದಲ್ಲಿ ರೈತು ಬಂಧು ಯೋಜನೆಯನ್ನೂ ಚುನಾವಣಾ ನೀತಿ ಸಂಹಿತೆ ಮುಂದಿಟ್ಟು ತಡೆಯಲಾಗಿತ್ತು. ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್ ಅವರ ಡಿಬಿಟಿ ಯೋಜನೆಯನ್ನು ತಡೆಯಲಾಗಿತ್ತು. 2018ರಲ್ಲಿ ಒಡಿಶಾದಲ್ಲಿ ನವೀನ್ ಪಾಟ್ನಾಯಿಕ್ ಯೋಜನೆಗೂ ಕಲ್ಲು ಹಾಕಲಾಗಿತ್ತು. ಆದರೆ ಬಿಹಾರದಲ್ಲಿ ಮಹಿಳೆಯರಿಗೆ 1 ಕೋಟಿಯನ್ನು ತಲಾ ಹತ್ತು ಸಾವಿರದಂತೆ ಲಂಚ ನೀಡಿದಾಗ ಅದನ್ನು ಚುನಾವಣಾ ಆಯೋಗ ತಡೆಯಲಿಲ್ಲ. ಬಹುತೇಕ ಚುನಾವಣಾ ಸಮೀಕ್ಷೆಯ ಪ್ರಕಾರ ಜೆಡಿಯುನ ಅಭೂತಪೂರ್ವ ಗೆಲುವಿಗೆ ಈ ಯೋಜನೆಯೇ ಮುಖ್ಯ ಕಾರಣ. ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.
ಕೊನೆಯ ಹಂತದಲ್ಲಿ ಎಸ್‌ಐಆರ್ ಹೇರಿಕೆ
ಎರಡನೆಯದಾಗಿ ಚುನಾವಣೆ ಮೇಲೆ ಪ್ರಭಾವ ಬೀರಿದ ಮತ್ತೊಂದು ಅಂಶವೆಂದರೆ ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿರುವ ಹೆಸರುಗಳು. ಬಿಹಾರದ ಮೂರು ಸ್ಥಾನಗಳಲ್ಲಿ ಗೆಲುವಿನ ಅಂತರ ನೂರಕ್ಕೂ ಕಡಿಮೆ. ಇನ್ನು ಕೆಲವು ಸ್ಥಾನಗಳಲ್ಲಿ ಕೆಲವು ಸಾವಿರಗಳ ಅಂತರದಲ್ಲಿ ಗೆಲುವು ದಾಖಲಾಗಿವೆ. ಆದರೆ ರದ್ದತಿ/ ಸೇರ್ಪಡೆಗಳು ಈ ಅಂತರವನ್ನು ಮೀರಿವೆ! ಚುನಾವಣೆಗೆ ಇನ್ನೇನು ತಿಂಗಳು ಬಾಕಿ ಇರುವಾಗ ಈ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ವೋಟ್ ಚೋರಿ ಎಂದೇ ಕುಖ್ಯಾತಿ ಪಡೆದ ಎಸ್‌ಐಆರ್ ಆಧರಿತ ಈ ರದ್ದತಿಗಳಿಂದಾಗಿ 202 ಸ್ಥಾನಗಳ ಪೈಕಿ 174 ಸ್ಥಾನಗಳಲ್ಲಿ ಎನ್‌ಡಿಎಗೆ ಲಾಭವಾಗಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ.
‘ದಿ ಕ್ವಿಂಟ್’ ವೆಬ್‌ತಾಣದ ವಿಶ್ಲೇಷಣೆಯಲ್ಲಿ ಹೇಳಿರುವ ಪ್ರಕಾರ 174 ಸ್ಥಾನಗಳಲ್ಲಿ ಗೆಲುವಿನ ಅಂತರವು ಸ್ಪೆಷಲ್ ಇನ್‌ಟೆನ್ಸಿವ್ ರಿವಿಜನ್ (ಎಸ್‌ಐಆರ್) ಮೂಲಕ ಮತದಾರರ ಹೆಸರುಗಳನ್ನು ರದ್ದು ಮಾಡಿರುವ ಸಂಖ್ಯೆಗಿಂತ ಕಡಿಮೆ ಇದೆ. ಇದರಲ್ಲಿ ಬಹುತೇಕ ಲಾಭ ಎನ್‌ಡಿಎಗೆ ಹೋಗಿದೆ. 2020ರಲ್ಲಿ ಮಹಾಘಟನ್‌ಬಂಧನ್ ಕೈಯಲ್ಲಿದ್ದ 91 ಸ್ಥಾನಗಳಲ್ಲಿ 75 ಅನ್ನು ಎನ್‌ಡಿಎ ಗೆದ್ದುಕೊಂಡಿದೆ ಮತ್ತು ಎಂಜಿಬಿ ಕೇವಲ 15ರನ್ನಷ್ಟೇ ಗೆಲ್ಲಲು ಸಾಧ್ಯವಾಗಿದ್ದು, 1 ಸ್ಥಾನ ಇತರರಿಗೆ ಹೋಗಿದೆ.
ಉದಾಹರಣೆಗೆ ಕುರ್ಹಾನಿ (ಮುಝಫರ್‌ಪುರ) ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ಅಂತರ 9,718. ಈ ವಿಧಾನಸಭಾ ಕ್ಷೇತ್ರದಲ್ಲಿ 24,000 ಮತಗಳನ್ನು ರದ್ದುಗೊಳಿಸಲಾಗಿದೆ. ಇಲ್ಲಿ ಬಲಾಬಲದ ಹೋರಾಟ ನಡೆದು ಕೊನೆಗೆ ಎನ್‌ಡಿಎ ಗೆದ್ದುಕೊಂಡಿದೆ. ಸಂದೇಶ್ (ಭೋಜ್‌ಪುರ್) ಕ್ಷೇತ್ರದಲ್ಲಂತೂ 27 ಮತಗಳಿಂದ ಜೆಡಿಯು ಗೆದ್ದುಕೊಂಡಿದೆ. ಇಲ್ಲಿ ಅಭೂತಪೂರ್ವ 25,682 ಮತಗಳನ್ನು ರದ್ದುಗೊಳಿಸಲಾಗಿದೆ.
ಕೇರಳ ಕಾಂಗ್ರೆಸ್ ತನ್ನ ಟ್ವೀಟ್‌ನಲ್ಲಿ ಹೇಳಿರುವ ಪ್ರಕಾರ, “ನಾವು ಚುನಾವಣಾ ಆಯೋಗದ ದತ್ತಾಂಶವನ್ನು ನೋಡಿದ್ದೇವೆ. ಸುಪ್ರೀಂಕೋರ್ಟ್ ಆದೇಶದಂತೆ ಬಹಿರಂಗಪಡಿಸಿದ ಈ ವಿವರವನ್ನು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ವಿಜಯದ ಅಂತರದ ಜೊತೆಗೆ ಹೋಲಿಸಿದ್ದೇವೆ. 128 ಸ್ಥಾನಗಳಲ್ಲಿ ಎನ್‌ಡಿಎಗೆ ಲಾಭವಾಗಿದೆ” ಎಂದು ಹೇಳಿದೆ.
ಬಿಹಾರದ ಮುಖ್ಯ ಚುನಾವಣಾ ಆಯುಕ್ತರೇ ಸ್ವತಃ ಹೇಳಿರುವ ಪ್ರಕಾರ ಚುನಾವಣಾ ಮತಪಟ್ಟಿಯಿಂದ ಸೇರ್ಪಡೆ ಅಥವಾ ರದ್ದತಿಗಾಗಿ ಜನರಿಂದ ಯಾವುದೇ ಅರ್ಜಿಗಳು ಬಂದಿರಲಿಲ್ಲ. ಹಾಗಿದ್ದರೆ ರದ್ದತಿ ಅಥವಾ ಸೇರ್ಪಡೆ ಮಾಡಿದ್ದು ಹೇಗೆ? ಯಾರ ಹೆಸರನ್ನು ತೆಗೆದು ಹಾಕಲಾಗಿದೆಯೋ ಅವರಿಗೆ ನೋಟೀಸ್ ಕೊಡಲಿಲ್ಲ. ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರವಷ್ಟೇ ರದ್ದು ಮಾಡಿದ 65 ಲಕ್ಷ ಮತದಾರರ ಹೆಸರನ್ನು ಚುನಾವಣಾ ಆಯೋಗ ಬಹಿರಂಗಪಡಿಸಿತ್ತು. ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರದ್ದತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ನೀಡಲಾಗಿದೆ.
ಮಸೌರಿಯಲ್ಲಿ 26,744 ಮತಗಳು ರದ್ದಾಗಿದ್ದರೆ, ಗೆಲುವಿನ ಅಂತರ 7643. ಹತುವಾದಲ್ಲಿ 34741 ಮತಗಳು ರದ್ದಾಗಿದ್ದರೆ, ಗೆಲುವಿನ ಅಂತರ 12,786. ಬನಿಯಾಪುರದಲ್ಲಿ 19,303 ಮತಗಳು ರದ್ದಾಗಿವೆ ಮತ್ತು ಗೆಲುವಿನ ಅಂತರ 17,610. ಇಂತಹ ನೂರಾರು ಉದಾಹರಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇವುಗಳ ಮಾಹಿತಿ ಮೂಲ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮಾಹಿತಿಗಳು! ಹಾಗಿದ್ದರೆ ಚುನಾವಣಾ ಆಯೋಗ ಈ ವಿವರಗಳತ್ತ ಗಮನ ಹರಿಸದೆ ಇರಲು ಹೇಗೆ ಸಾಧ್ಯವಾಯಿತು?
ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ವಿವರಗಳ ಪ್ರಕಾರ, ರದ್ದತಿಯ ಹೊರತಾಗಿ ಲಕ್ಷಗಟ್ಟಲೆ ನಕಲಿ ಸೇರ್ಪಡೆಗಳಾಗಿವೆ. ನಕಲಿ ವಿಳಾಸಗಳಿವೆ, ಅಸ್ತಿತ್ವದಲ್ಲೇ ಇಲ್ಲದ ಮನೆಗಳ ವಿವರಗಳಿವೆ. ನೂರಾರು ಮತದಾರರು ವಿಭಿನ್ನ ಕುಟುಂಬ ಮತ್ತು ಸಮುದಾಯಕ್ಕೆ ಸೇರಿದ್ದರೂ, ಏಕ ವಿಳಾಸದಲ್ಲಿ ನೋಂದಣಿಗೊಂಡಿದ್ದಾರೆ. ಸಾವಿರಾರು ವ್ಯಕ್ತಿಗಳಿಗೆ ಒಂದಕ್ಕಿಂತ ಹೆಚ್ಚು ಮತದಾರರ ಚೀಟಿಗಳನ್ನು ಕೊಡಲಾಗಿದೆ. ಕೆಲವರು ಮೂರು ಮತದಾರರ ಚೀಟಿಗಳನ್ನೂ ಹೊಂದಿದ್ದಾರೆ.
ಅಧಿಕಾರಶಾಹಿ ಮೇಲೆ ಬಿಜೆಪಿ ಹಿಡಿತ
ಬಿಹಾರದಲ್ಲಿ ಲಂಚ, ಎಸ್‌ಐಆರ್ ಜೊತೆಗೆ ಚುನಾವಣೆ ಮೇಲೆ ಪ್ರಭಾವ ಬೀರಿದ ಮತ್ತೊಂದು ಅಂಶವೆಂದರೆ ಹಣದ ಶಕ್ತಿ ಮತ್ತು ಅಧಿಕಾರಶಾಹಿಯ ಮೇಲಿನ ಬಿಜೆಪಿಯ ಅತಿದೊಡ್ಡ ಹಿಡಿತ. ಚುನಾವಣೆಯ ಮೇಲೆ ಪ್ರಭಾವ ಬೀರಲು ತಳಮಟ್ಟದಲ್ಲಿ ಅಧಿಕಾರಿಗಳ ಬೆಂಬಲ ಅತ್ಯಗತ್ಯ. ಅಧಿಕಾರಶಾಹಿ ಮೇಲೆ ಬಿಜೆಪಿ-ಆರ್‌ಎಸ್‌ಎಸ್ ಸಂಘಟನೆಗಳ ಕಬಂಧ ಬಾಹುಗಳು ಪ್ರಭಾವ ಬೀರುತ್ತಿವೆ ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ. ಈ ಅಪವಿತ್ರ ಮೈತ್ರಿಯ ಚುನಾವಣಾ ಪ್ರಭಾವ ಇದಕ್ಕೆ ಮೊದಲು ಮಹಾರಾಷ್ಟ್ರ, ಪಂಜಾಬ್, ಹಿಮಾಚಲ ಮತ್ತು ದೆಹಲಿ ಚುನಾವಣೆಗಳಲ್ಲೂ ಕಂಡುಬಂದಿದೆ. ಕೆಲವೊಂದು ಪ್ರಕರಣದಲ್ಲಿ ಸ್ವತಃ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಗೆಲುವನ್ನು ತಡೆದಿರುವ ಉದಾಹರಣೆಯಿದೆ.
ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಜುಗಲ್‌ಬಂದಿ ಕೇವಲ ಬಿಹಾರದಲ್ಲಿ ಮಾತ್ರವಲ್ಲ. ಇದಕ್ಕೆ ಮೊದಲು ಮಹಾರಾಷ್ಟ್ರ, ಪಂಜಾಬ್ ಮತ್ತು ಹಿಮಾಚಲದಲ್ಲೂ ಇಂತಹುದೇ ಯೋಜನೆಯನ್ನು ಬಹಿರಂಗವಾಗಿ ಕಾರ್ಯರೂಪಕ್ಕೆ ತರಲಾಗಿತ್ತು. ರಾಹುಲ್ ಗಾಂಧಿಯವರು ಪತ್ರಿಕಾ ಗೋಷ್ಠಿಯ ಮೇಲೆ ಪತ್ರಿಕಾ ಗೋಷ್ಠಿ ನಡೆಸಿ ಈ ಕುರಿತು ವಿವರಗಳನ್ನು ಬಹಿರಂಗಪಡಿಸಿದ್ದರು. ಮಹಾರಾಷ್ಟ್ರದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 35,000 ನಕಲಿ ಮತದಾರರನ್ನು ಬಿಜೆಪಿ ಸೇರ್ಪಡೆಗೊಳಿಸಿದೆ ಎಂದು ಅವರು ವಿವರಗಳನ್ನು ಮುಂದಿಟ್ಟಿದ್ದರು. ಆದರೆ ಅದರಿಂದ ಬಿಹಾರದಲ್ಲಿ ಬದಲಾವಣೆ ತರಲು ಅವರಿಂದ ಸಾಧ್ಯವಾಗಲಿಲ್ಲ.
ಬಿಹಾರದ ಚುನಾವಣೆಯಲ್ಲಿ ಚುನಾವಣಾ ಆಯೋಗ ಫಲಿತಾಂಶದ ಮೇಲೆ ಪ್ರಭಾವ ಬೀರಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಚುನಾವಣಾ ಆಯೋಗದ ಅಧಿಕಾರಿಗಳು ಎಷ್ಟೇ ನಿರಾಕರಿಸಿದರೂ, ಸಾಕ್ಷ್ಯ ಮುಂದೆ ಇಡಿ ಎಂದು ಆನ್‌ಲೈನ್‌ನಲ್ಲಿ ಕೂಗಾಡಿದರೂ ಸತ್ಯ ಸುಳ್ಳಾಗದು. ಉಚಿತ ಕೊಡುಗೆಗಳನ್ನು ತಡೆಯಲಿಲ್ಲ, ಎಸ್‌ಐಆರ್‌ನಿಂದ ಪ್ರಭಾವ ಬೀರಿರುವುದು ಸುಳ್ಳಾಗದು.
ಬಿಹಾರ | ಮತದಾನಕ್ಕೆ ಮೊದಲೇ ದೈತ್ಯ ಗೆಲುವಿನ ಜನಾದೇಶ ಬಿಜೆಪಿ ಜೋಳಿಗೆಯಲ್ಲಿತ್ತೇ?
ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿಲ್ಲದ ಚುನಾವಣೆಗಳು ಭವಿಷ್ಯದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ದೊಡ್ಡ ಹೊಡೆತ ಬೀಳಲಿದೆ. ಆರಂಭಿಕ ಹಂತದಲ್ಲಿಯೇ ಇಂತಹ ದುರ್ವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳದೆ ಹೋದಲ್ಲಿ ಭವಿಷ್ಯದ ತಲೆಮಾರು ಪಶ್ಚಾತ್ತಾಪಪಡುವ ದಿನ ದೂರವಿಲ್ಲ.

ಎನ್.ಕೆ. ಸುಪ್ರಭಾ
ಸಮಕಾಲೀನ ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವವಿರುವ ಎನ್ ಕೆ ಸುಪ್ರಭಾ ಅನುವಾದಕರಾಗಿಯೂ ಚಿರಪರಿಚಿತರು. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಮಂಗಳೂರು ಮತ್ತು ಮಣಿಪಾಲದಲ್ಲಿ ಕೆಲವು ವರ್ಷಗಳ ಕಾಲ ದಿನಪತ್ರಿಕೆಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು 2005ರಲ್ಲಿ ಬೆಂಗಳೂರಿಗೆ ಬಂದ ಅವರು, ವರ್ಷಗಳ ಕಾಲ ದಿನಪತ್ರಿಕೆಗಳ ಪುರವಣಿ ಮತ್ತು ನಿಯತಕಾಲಿಕಗಳಲ್ಲಿ ಕೆಲಸ ಮಾಡಿದ್ದಾರೆ. ಕಳೆದ ಹದಿನೇಳು ವರ್ಷಗಳಿಂದ ಹವ್ಯಾಸಿ ಮತ್ತು ವೃತ್ತಿಪರ ಅನುವಾದಕರೂ ಆಗಿದ್ದಾರೆ.




