ದೇಶದಲ್ಲಿ ದಿನನಿತ್ಯವೂ ಸೇವೆ ಸಲ್ಲಿಸುತ್ತಿದ್ದರೂ, ಕಾರ್ಮಿಕರೆಂದು ಪರಿಗಣಿಸದೇ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಒಳಗಾಗಿರುವವರು ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರು. ಈ ಮೂರು ವಿಭಾಗಗಳಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಕಾರ್ಮಿಕ ಕಾಯ್ದೆಯಡಿ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಇಎಸ್‌ಐ, ಪಿಎಫ್, ಪಿಂಚಣಿಯಂತಹ ಸೌಕರ್ಯಗಳೂ ಸಿಗುತ್ತಿಲ್ಲ. ಮಾತ್ರವಲ್ಲ, ದುಡಿಮೆಗೆ ತಕ್ಕಷ್ಟು ವೇತನವೂ ದೊರೆಯುತ್ತಿಲ್ಲ. ಅವರಿಗೆ ಸಿಗುತ್ತಿರುವುದು ಕೇವಲ ಗೌರವಧನ ಮಾತ್ರ. ಹಾಗಾಗಿಯೇ ಅವರನ್ನು ಕಾರ್ಯಕರ್ತೆಯರು ಎಂದು ಪರಿಗಣಿಸಲಾಗಿದೆ.
ಆಹಾರ, ಆರೋಗ್ಯ ಹಾಗೂ ಶಿಕ್ಷಣ ಸೌಲಭ್ಯಗಳು ಎಲ್ಲ ವರ್ಗ/ಸಮುದಾಯಗಳಿಗೆ ದೊರಕಬೇಕೆಂಬ ಉದ್ದೇಶದಿಂದ ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. ಅವುಗಳು ಫಲಾನುಭವಿಗಳನ್ನು ತಲುಪುವಂತೆ ಮಾಡಲು ಕಾರ್ಯಕರ್ತೆಯರನ್ನು ನೇಮಿಸಿಕೊಂಡಿತು. ಈ ಯೋಜನೆಗಳಡಿ ದುಡಿಯುವವರನ್ನು ನೌಕರರು ಎಂದು ಪರಿಗಣಿಸದ ಸರ್ಕಾರವು, ಅವರನ್ನು ಕಾರ್ಯಕರ್ತೆಯರು ಎಂದು ಕರೆಯಿತು. ವೇತನದ ಬದಲಿಗೆ ಗೌರವಧನದ ಹೆಸರಿನಲ್ಲಿ ಬಿಡಿಗಾಸು ಕೊಡಲಾರಂಭಿಸಿತು.
ಪ್ರಸ್ತುತ ದೇಶಾದ್ಯಂತ ಅಂಗನವಾಡಿಗಳಲ್ಲಿ 30 ಲಕ್ಷ, ಬಿಸಿಯೂಟ ಯೋಜನೆಯಡಿ 24 ಲಕ್ಷ ಹಾಗೂ ಆಶಾ ಯೋಜನೆಯಡಿ 10 ಲಕ್ಷ ಒಟ್ಟು 64 ಲಕ್ಷ ಕಾರ್ಯಕರ್ತೆಯರು ಸೇವೆ ಸಲ್ಲಿಸುತ್ತಿದ್ದಾರೆ. ಮಹಿಳೆಯರು ಮತ್ತು ಮಕ್ಕಳಿಗೆ ನಾನಾ ರೀತಿಯ ಸೌಲಭ್ಯ ಎದಗಿಸುವ ಈ ಕಾರ್ಯಕರ್ತೆಯರೇ ಸರ್ಕಾರದಿಂದ ಸೌಲಭ್ಯ ವಂಚಿತರಾಗಿದ್ದಾರೆ. ವೇತನ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಮುಂದಿಟ್ಟು, ನಿರಂತರ ಪ್ರತಿಭಟನೆಗಳನ್ನು ನಡೆಸುತ್ತಲೇ ಇದ್ದಾರೆ.
ಅಂಗನವಾಡಿ, ಆಶಾ ಹಾಗೂ ಬಿಸಿಯೂಟ ಕಾರ್ಯಕರ್ತೆಯರ ಗೋಳು
ಅಂದಹಾಗೆ, ಅಂಗನವಾಡಿ ಯೋಜನೆಯು ಈಗ (2025) ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಆದರೆ, ಅಂಗನವಾಡಿ ಕಾರ್ಯಕರ್ತೆಯರು ಮಾತ್ರ ರಸ್ತೆಯಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಭಾರತದಲ್ಲಿ ಅಂಗನವಾಡಿ ಯೋಜನೆಯು ‘ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವೀಸಸ್’ (ICDS) ಯೋಜನೆಯ ಭಾಗವಾಗಿ 1975ರಲ್ಲಿ ಆರಂಭವಾಯಿತು. ಮಕ್ಕಳು ಮತ್ತು ಗರ್ಭಿಣಿ, ಬಾಣಂತಿಯರಲ್ಲಿ ಪೌಷ್ಟಿಕಾಂಶ ಸುಧಾರಣೆ ಹಾಗೂ ಮಗುವಿನ ಸದೃಢತೆ, ಮಾನಸಿಕ ಬೆಳವಣಿಗೆ ಹಾಗೂ ಸಾಮಾಜಿಕ ಒಳಗೊಳ್ಳುವಿಕೆಗೆ ಇದೇ ಅಂಗನವಾಡಿ ಬುನಾದಿಯೂ ಆಗಿದೆ. ಮಕ್ಕಳ ಬೆಳವಣಿಗೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ.
ದೇಶಾದ್ಯಂತ ಸುಮಾರು 14 ಲಕ್ಷ ಅಂಗನವಾಡಿಗಳಲ್ಲಿ 30 ಲಕ್ಷ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇವೆ ಒದಗಿಸುತ್ತಿದ್ದಾರೆ. ಇವೆರೆಲ್ಲರೂ ತೀರಾ ಕಡಿಮೆ ವೇತನ ಅರ್ಥಾತ್ ಗೌರವಧನಕ್ಕೆ ದುಡಿಯುತ್ತಿದ್ದಾರೆ.
ಕರ್ನಾಟಕದಲ್ಲಿ ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರಿಗೆ 5,500 ರೂ. ಮತ್ತು ಸಹಾಯಕಿಯರಿಗೆ 3,000 ರೂ. ಗೌರವಧನ ನೀಡಲಾಗುತ್ತಿದೆ. ಹಲವು ರಾಜ್ಯಗಳಿಗೆ ಹೋಲಿಸಿದರೆ, ಇದು ತೀರಾ ಕಡಿಮೆ ವೇತನ. ಹರಿಯಾಣ, ಆಂಧ್ರಪ್ರದೇಶದಂತಹ ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 8,000 ರೂ.ನಿಂದ 14,000 ರೂ.ವರೆಗೆ ಗೌರವಧನ ನೀಡಲಾಗುತ್ತಿದೆ. ಹರಿಯಾಣದಲ್ಲಿ ಮಾಸಿಕ ದೊರೆಯುವ ಗೌರವಧನವನ್ನು ಕರ್ನಾಟಕದಲ್ಲಿ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸರಾಸರಿ 3 ತಿಂಗಳು ದುಡಿಯಬೇಕು.
ಕರ್ನಾಟಕದಲ್ಲಿ ಕಾರ್ಯಕರ್ತೆಯರಿಗೆ 5,500 ರೂ. ಮತ್ತು ಸಹಾಯಕಿಯರಿಗೆ 3,000 ರೂ. ದೊರೆಯುತ್ತಿರುವುದೂ 2018ರಿಂದ ಈಚೆಗೆ. ಅದಕ್ಕೂ ಮುಂಚೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಕೇವಲ 4,000 ರೂ. ಮತ್ತು ಸಹಾಯಕಿಯರಿಗೆ 2,000 ರೂ. ಮಾತ್ರವೇ ನೀಡಲಾಗುತ್ತಿತ್ತು. 2018ರಲ್ಲಿ ಅಂಗನವಾಡಿ ನೌಕರರ ಹೋರಾಟಕ್ಕೆ ಮಣಿದ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾರ್ಯಕತೆಯರಿಗೆ 1,500 ರೂ. ಮತ್ತು ಸಹಾಯಕಿಯರಿಗೆ 1,000 ರೂ. ಗೌರವಧನ ಹೆಚ್ಚಿಸಿತ್ತು. ಅಂದಿನಿಂದ ಈವರೆಗೆ ಗೌರವಧನದಲ್ಲಿ ಹೆಚ್ಚಳ ಕಂಡುಂಬಂದಿಲ್ಲ.
ಗಮನಾರ್ಹವಾಗಿ, ಕೇಂದ್ರ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸಿ ದಶಕಗಳೇ ಕಳೆದುಹೋಗಿವೆ.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಂತೆ ಬಿಸಿಯೂಟ ನೌಕರರೂ ತೀರಾ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಕರ್ನಾಟಕದಲ್ಲಿ 2003ರಲ್ಲಿ ಬಿಸಿಯೂಟ ಯೋಜನೆ ಆರಂಭವಾಯಿತು. ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಉದ್ದೇಶದಿಂದ ಆರಂಭವಾದ ಯೋಜನೆ, ಬಳಿಕ ಪ್ರೌಢಶಾಲೆಗಳಿಗೂ ವಿಸ್ತರಣೆಯಾಯಿತು.
ಬಿಸಿಯೂಟ ನೌಕರರು ಶಾಲೆಗಳಲ್ಲಿ ಮಧ್ಯಾಹ್ನದ ಅಡುಗೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಆರಂಭದಲ್ಲಿ ಅವರ ಕೆಲಸದ ಅವಧಿಯು 4 ಗಂಟೆಗಳ ಮಾತ್ರವೆಂದು ಹೇಳಲಾಗಿತ್ತು. ಆದರೀಗ, ಬರೋಬ್ಬರಿ 6.5 ಗಂಟೆಗಳ ಕಾಲ ಅವರು ದಿನನಿತ್ಯ ದುಡಿಯುತ್ತಿದ್ದಾರೆ. ಅಲ್ಲದೆ, ಅವರಿಗೆ ದೊರೆಯುತ್ತಿರುವ ಗೌರವಧನ ಕೇವಲ 2,200 ರೂ.ನಿಂದ 2,700 ರೂ.ಗಳು ಮಾತ್ರ. ಈ ಮೊತ್ತವೂ ದೊರೆಯುತ್ತಿರುವುದು 2018ರ ನಂತರವೇ. ಆ ವರ್ಷ ರಾಜ್ಯ ಸರ್ಕಾರವು ಗೌರವಧನವನ್ನು ಹೆಚ್ಚಳ ಮಾಡಿತು. ಅದಕ್ಕೂ ಮೊದಲು ಕೇವಲ 1,000 ರೂ. ಮಾತ್ರ ಅವರ ಮಾಸಿಕ ಗೌರವಧನವಾಗಿತ್ತು.
ಈ ಗೌರವಧನವೂ ದೊರೆಯುವುದು ವರ್ಷದಲ್ಲಿ 10 ತಿಂಗಳು ಮಾತ್ರ. ಬೇಸಿಗೆ ರಜೆಯ ಸಮಯದಲ್ಲಿ ಶಾಲಾ ಶಿಕ್ಷಕರು ಸೇರಿದಂತೆ ಶಾಲೆಗಳ ಎಲ್ಲ ನೌಕರರು ವೇತನ ಪಡೆಯುತ್ತಾರೆ. ಆದರೆ, ಬಿಸಿಯೂಟ ನೌಕರರಿಗೆ ಆ ಎರಡು ತಿಂಗಳು ಯಾವುದೇ ವೇತನ ಅರ್ಥಾಥ್ ಗೌರವಧನ ದೊರೆಯುತ್ತಿಲ್ಲ. ಇನ್ನು, 2009ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಗೌರವಧನವನ್ನು ಒಮ್ಮೆಯೂ ಹೆಚ್ಚಳ ಮಾಡಿಲ್ಲ.

ಇನ್ನು, ಆಶಾ ಕಾರ್ಯಕರ್ತೆಯರ ಪಡಿಪಾಟಿಲು ಹೇಳತೀರದು. ದಿನನಿತ್ಯ ಬೆಳಗ್ಗೆಯಿಂದ ಸಂಜೆವರೆಗೂ ದುಡಿಯುವ ಆಶಾ ಕಾರ್ಯಕರ್ತೆಯರು ತೀರಾ ಕಡಿಮೆ ಗೌರವಧನಕ್ಕೆ ದುಡಿಯುತ್ತಿದ್ದಾರೆ. ಕರ್ನಾಟಕದಲ್ಲಿ ಆಶಾ ಕಾರ್ಯಕರ್ತೆಯರಿಗೆ 10,000 ರೂ. ಗೌರವಧನ ನೀಡಲಾಗುತ್ತಿದೆ. ಅವರು ಸಲ್ಲಿಸುವ ಸೇವೆಗೂ, ಅವರಿಗೆ ನೀಡಲಾಗುತ್ತಿರುವ ಗೌರವಧನಕ್ಕೂ ಭಾರೀ ವ್ಯತ್ಯಾಸವಿದೆ. ಹೀಗಾಗಿಯೇ, ಆಶಾ ಕಾರ್ಯಕರ್ತೆಯರು ತಮ್ಮನ್ನು ಆರೋಗ್ಯ ಇಲಾಖೆಯಡಿ ಆರೋಗ್ಯ ನೌಕರರಾಗಿ ಪರಿಗಣಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ಲೇಖನ ಓದಿದ್ದೀರಾ?: ಮಾತೃತ್ವ ರಜೆ ಒಂದು ವರ್ಷಕ್ಕೆ ಏರಿಸಿ: ಇದು ಕರುಣೆಯಲ್ಲ, ಮಹಿಳೆಯರ ಘನತೆಯ ಹಕ್ಕು
ಅಂಗನವಾಡಿ, ಬಿಸಿಯೂಟ ಹಾಗೂ ಆಶಾ – ಈ ಮೂರೂ ಯೋಜನೆಗಳಿಗೆ ಆರಂಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ 90:10 ಅನುಪಾತದಲ್ಲಿ ಅನುದಾನ ನೀಡಲಾಗುತ್ತಿತ್ತು. ಅಂದರೆ, ಈ ಯೋಜನೆಗಳಿಗೆ ತಗಲುವ ಒಟ್ಟು ವೆಚ್ಚದಲ್ಲಿ 90% ಹಣವನ್ನು ಕೇಂದ್ರ ಸರ್ಕಾರ ಭರಿಸುತ್ತಿತ್ತು. ಉಳಿದ 10%ಅನ್ನು ರಾಜ್ಯ ಸರ್ಕಾರಗಳು ಒದಗಿಸುತ್ತಿದ್ದವು. ಆದರೆ, ಈಗ ಕೇಂದ್ರ ಸರ್ಕಾರವು ತನ್ನ ಅನುದಾನವನ್ನು ಹಂತ-ಹಂತವಾಗಿ ಕಡಿತಗೊಳಿಸಿದ್ದು, 60:40 ಅನುಪಾತಕ್ಕೆ ತಂದು ನಿಲ್ಲಿಸಿದೆ. ಯೋಜನೆಗಳ ಹೊರೆಯನ್ನು ರಾಜ್ಯ ಸರ್ಕಾರಗಳ ಮೇಲೆ ಹೇರುತ್ತಿದೆ.
ದಶಕಗಳು-ವರ್ಷಗಳಿಂದ ಗೌರವಧನದ ಹೆಸರಿನಲ್ಲಿ ತೀರಾ ಕಡಿಮೆ ವೇತನಕ್ಕೆ ದುಡಿದಿರುವ ಈ ಮೂರು ಯೋಜನೆಗಳ ಕಾರ್ಯಕರ್ತೆಯರು, ದುಡಿಮೆಗೆ ತಕ್ಕ ಪ್ರತಿಫಲಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಸಿಐಟಿಯು ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಧರಣಿ
ಸಿಐಟಿಯು ಭಾಗವಾಗಿರುವ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ, ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಕಾರ್ಯಕರ್ತೆಯರು ಸಂಘಟಿತರಾಗಿದ್ದಾರೆ. ಡಿಸೆಂಬರ್ 1ರಿಂದ ಕರ್ನಾಟಕದಲ್ಲಿ ನಾಲ್ವರು ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ, ವಿ ಸೋಮಣ್ಣ, ಪ್ರಲ್ಹಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಅವರ ನಿವಾಸಗಳ ಎದುರು ಮೂರು ಯೋಜನೆಗಳ ಕಾರ್ಯಕರ್ತೆಯರು ಧರಣಿ ಆರಂಭಿಸಿದ್ದರು.

ಬೆಂಗಳೂರು, ಮಂಡ್ಯ, ತುಮಕೂರು ಹಾಗೂ ಹುಬ್ಬಳ್ಳಿಯಲ್ಲಿರುವ ನಾಲ್ವರು ಕೇಂದ್ರ ಸಚಿವರ ನಿವಾಸಗಳು ಎದುರು ಸುಮಾರು 40,000 ಕಾರ್ಯಕರ್ತೆಯರು ಡಿಸೆಂಬರ್ 1ರಿಂದ ನಿರಂತರ ಧರಣಿ ನಡೆಸಿದ್ದರು. ಕೊರೆವ ಚಳಿಯಲ್ಲಿ ನೆಲದಲ್ಲಿಯೇ ಕುಳಿತ, ರಾತ್ರಿ ವೇಳೆ ಮಲಗಿ ಧರಣಿ ನಡೆಸುತ್ತಿದ್ದ ಕಾರ್ಯಕರ್ತೆಯರ ಹೋರಾಟಕ್ಕೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸ್ಪಂದಿಸಿದ್ದಾರೆ.
ಡಿಸೆಂಬರ್ 3ರಂದು ಹೋರಾಟದ ಮುಂಚೂಣಿಯಲ್ಲಿದ್ದ ನಾಯಕಿಯರನ್ನು ದೆಹಲಿಗೆ ಕರೆಸಿಕೊಂಡಿದ್ದ ಕುಮಾರಸ್ವಾಮಿ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಭಾಗಿಯಾಗಿದ್ದ ಹೋರಾಟಗಾರ್ತಿಯರು, “ಸಾಮಾಜಿಕ ನ್ಯಾಯದ ಹಿತದೃಷ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಸಿಯೂಟ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಬೇಕು. ಬಿಸಿಯೂಟ ನೌಕರರು ಬೇಸಿಗೆ ರಜೆಯ ಸಮಯದಲ್ಲಿ ಕೆಲಸ ಮಾಡಲು ಸಿದ್ದರಿದ್ದಾರೆ. ಅವರಿಗೆ ವರ್ಷದ 12 ತಿಂಗಳೂ ವೇತನ ಪಾವತಿಸಬೇಕು. ಬಿಸಿಯೂಟ ನೌಕರರು ದಿನನಿತ್ಯ 6.5 ಗಂಟೆಗಳ ಕಾಲ ದುಡಿಯುತ್ತಿದ್ದು, ಅವರ ಕೆಲಸವು 6.5 ಗಂಟೆ ಎಂಬುದನ್ನು ದಾಖಲೆಯಲ್ಲಿ ಪ್ರಾಮಾಣಿಕರಿಸಬೇಕು. ಅಂಗನವಾಡಿಗಳಲ್ಲಿ ಫಲಾನುಭವಿಗಳಿಗೆ ತೊಡಕಾಗಿರುವ ಫೇಸ್ ರೆಕಗ್ನಿಷನ್ ಸಿಸ್ಟಮ್ (ಎಫ್‌ಆರ್‌ಎಸ್)ಅನ್ನು ಹಿಂಪಡೆಯಬೇಕು. ಮಗುವಿನ ಘಟಕ (ಯುನಿಟ್) ವೆಚ್ಚವು 8 ರೂ.ಗಳಿದ್ದು, ಅದನ್ನು ಹೆಚ್ಚಿಸಬೇಕು. ಅಂಗನವಾಡಿಗಳಿಗೆ ಪ್ಯಾಕ್ ಮಾಡಲಾದ ಸಿದ್ದ ಆಹಾರವನ್ನು ಪೂರೈಕೆ ಮಾಡಬಾರದು, ಉತ್ತಮ ಆಹಾರವನ್ನು ಪೂರೈಸಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣಾ ಕೆಲಸಗಳಿಗೆ ಬಳಸಿಕೊಳ್ಳಬಾರದು. ಮಾತ್ರವಲ್ಲದೆ, ಆಶಾ ಕಾರ್ಯಕರ್ತೆಯರು ಇಡೀ ದಿನ ಸೇವೆ ಸಲ್ಲಿಸುತ್ತಿದ್ದು, ಅವರನ್ನು ಆರೋಗ್ಯ ಇಲಾಖೆಯಡಿ ನೌಕರರಾಗಿ ಪರಿಗಣಿಸಬೇಕು. ಅವರಿಗೆ, ಗೌರವಧನದ ಬದಲಾಗಿ, ಕನಿಷ್ಠ ವೇತನ ನಿಗದಿ ಮಾಡಬೇಕು. ಈ 64 ಲಕ್ಷ ಕಾರ್ಯಕರ್ತೆಯರಿಗಾಗಿ ಪ್ರತ್ಯೇಕ ವೇತನ ಆಯೋಗ ರಚನೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.

ಅಂಗನವಾಡಿ, ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರ ನಿಯೋಗದ ಹಕ್ಕೊತ್ತಾಯಗಳನ್ನು ಆಲಿಸಿರುವ ಸಚಿವರು, “ಎಲ್ಲ ಅಂಶಗಳನ್ನು ಪರಿಗಣಿಸಿ ಹಣಕಾಸು ಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ಭರವಸೆ ನೀಡಿದ್ದಾರೆ” ಎಂದು ಸಿಐಟಿಯು ನಾಯಕಿ ಎಸ್ ವರಲಕ್ಷ್ಮಿ ಮಾಹಿತಿ ನೀಡಿದ್ದಾರೆ.
ಕಾರ್ಯಕರ್ತೆಯರ ಹೋರಾಟ ಮತ್ತು ಕೇಂದ್ರ ಸಚಿವರೊಂದಿಗೆ ಸಭೆಯ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಎಸ್ ವರಲಕ್ಷ್ಮಿ ಅವರು, “ಕೇಂದ್ರ ಸಚಿವರ ನಿವಾಸದ ಎದುರು ಡಿ.1ರಿಂದ ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದೆವು. ನಮ್ಮ ಹೋರಾಟಕ್ಕೆ ಎಚ್.ಡಿ ಕುಮಾರಸ್ವಾಮಿ ಅವರು ಸ್ಪಂಧಿಸಿದ್ದು, ದೆಹಲಿಯಲ್ಲಿ ನಮ್ಮ ನಿಯೋಗದೊಂದಿಗೆ ಸಭೆ ನಡೆಸಿದ್ದಾರೆ. ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳುವುದಾಗಿ ಕೇಂದ್ರದ ಸಚಿವರು ಭರವಸೆ ನೀಡಿದ್ದಾರೆ. ಹೀಗಾಗಿ, ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಿದ್ದೇವೆ. 2026ರ ಫೆಬ್ರವರಿಯಲ್ಲಿ ಮಂಡನೆಯಾಗುವ ಕೇಂದ್ರ ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟಗಳು ಮತ್ತಷ್ಟು ಬಿರುಸು ಪಡೆದುಕೊಳ್ಳಲಿವೆ” ಎಂದು ಎಚ್ಚರಿಕೆ ನೀಡಿದ್ದಾರೆ.




