ರಾಜ್ಯಮಟ್ಟದ ಹೋರಾಟದ ನಂತರ ‘ನಿಮ್ಮ ಸಮಸ್ಯೆ ಬಗೆಹರಿಸೋಣ, ಬನ್ನಿ ಮಾತಾಡೋಣ’ ಎನ್ನುತ್ತಾ ಇಲಾಖೆಯ ಅಧಿಕಾರಿಗಳು ಸುಮಾರು 20ಕ್ಕೂ ಹೆಚ್ಚು ಸಭೆಗಳನ್ನು ಮಾಡಿದ್ದಾರೆ. ಈ ಸಭೆಗಳಲ್ಲಿ ಒಣ ಮಾತುಗಳು ಬಿಟ್ಟಿ ಉಪದೇಶಗಳು ಸಿಕ್ಕವು; ಹೊರತಾಗಿ ಮುಖ್ಯ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಫಲ ದಕ್ಕಿಲ್ಲ. ಗೌರವಧನದ ಹೆಸರಿನಲ್ಲಿ ದುಡಿಸಿಕೊಂಡು ತಿಂಗಳಿಗೆ ನೀಡುವ 5000/- ರೂ ಹಣವನ್ನೂ ಬೇಕಾ ಬಿಟ್ಟಿ ಕೊಡುವುದು. ಇದು ಸರ್ಕಾರವೇ ಈ ಮಹಿಳೆಯರಿಗೆ ತೋರುವ ಅಗೌರವವಲ್ಲದೇ ಮತ್ತೇನು?
ಕೋವಿಡ್ ಯುದ್ದಭೂಮಿಯಲ್ಲಿ ನಾವು ಬೆಚ್ಚಗೆ ಮನೆಯಲ್ಲುಳಿದರೆ ಆಶಾ ಕಾರ್ಯಕರ್ತೆಯರು ಫ್ರಂಟ್ ಲೈನ್ ವಾರಿಯರ್ ಗಳಾಗಿ ತಮ್ಮ ಪ್ರಾಣ ಒತ್ತೆ ಇಟ್ಟು ಹೋರಾಡಿದರು. ಲಕ್ಷಾಂತರ ಜನರ ಜೀವ ಕಾಪಾಡಿದರು. ಕೆಲವು ಆಶಾ ಕಾರ್ಯಕರ್ತೆಯರು ಪ್ರಾಣವನ್ನೂ ಕಳೆದುಕೊಂಡರು. ಕೋವಿಡ್ ಸಂದರ್ಭದ ಇವರ ಕೆಲಸ ಕಂಡು ಕೆಲವೆಡೆ ಜನರು ಹೂ ಮಳೆ ಸುರಿಸಿ ಅಭಿನಂದಿಸಿದರು. ವಿಶ್ವ ಸಂಸ್ಥೆಯೂ ಇವರ ಕೆಲಸವನ್ನು ಗಮನಿಸಿ ಫ್ರಂಟ್ ಲೈನ್ ವಾರಿಯರ್ಸ್ ಎಂದು ಕೊಂಡಾಡಿತು. ಇಲಾಖೆಯ ತಳಹಂತದ ಅಧಿಕಾರಿಗಳಿಂದ ಹಿಡಿದು ಮಂತ್ರಿಗಳವರೆಗೂ ಆಶಾ ಕಾರ್ಯಕರ್ತೆಯರೇ ನಮ್ಮ ಇಲಾಖೆಯ ಆಧಾರ ಸ್ತಂಭ ಎಂದು ಹೇಳುತ್ತಾರೆ.
ಕಳೆದ 15 ವರ್ಷಗಳಲ್ಲಿ ತಾಯಿ ಹಾಗು ಶಿಶು ಮರಣ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಇಲಾಖಾ ವರದಿಗಳು ಹೇಳುತ್ತಿವೆ. ಆಶಾ ಕಾರ್ಯಕರ್ತೆಯರು ತಾವು ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಬೇರೆ ಇಲಾಖೆಯವರಂತೆ ಯಾಂತ್ರಿಕವಾಗಿ ಕೆಲಸ ನಿರ್ವಹಿಸದೆ ಸಮುದಾಯದಲ್ಲಿ ಭಾವನಾತ್ಮಕವಾಗಿ ಬೆರೆತಿದ್ದಾರೆ, ಅಣ್ಣ ಅಕ್ಕ ಎನ್ನುತ್ತಾ, ಎಲ್ಲರ ಆರೋಗ್ಯ ವಿಚಾರಿಸಿಕೊಳ್ಳುತ್ತಾ, ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಾ, ಭ್ರೂಣಾವಸ್ಥೆಯಿಂದ ಮಗು ಭೂಮಿಗೆ ಬರುವವರೆಗೂ ಸಹಾಯ ಮಾಡುತ್ತಾ, ವಯೋವೃದ್ದರಿಗೆ ಸಾಂತ್ವನ ಹೇಳುತ್ತಾ ಅವಶ್ಯಕ ಆರೈಕೆ ಮಾಡುತ್ತಾ, ಮಕ್ಕಳ ಶಿಕ್ಷಣ ಕುಶಲೋಪರಿ ಕೇಳುತ್ತಾ ಇಡೀ ಸಮುದಾಯವನ್ನೆ ತನ್ನ ಕುಟುಂಬದಂತೆ ಭಾವಿಸಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಓಣಿಯಲ್ಲಿನ ಜನರ ಜಷ್ಟ ಸುಖಕ್ಕೆ ಸ್ಪಂದಿಸುವ ಆಪದ್ಬಾಂದವರಂತಾತಾಗಿದ್ದಾರೆ. ಒಂದರ್ಥದಲ್ಲಿ ಇವರು ಇಡೀ ಸಮಾಜದ ಆಶಾವಾದವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಇವರ ಬದುಕಿಗೆನೆ ಯಾವ ಆಶಾವಾದವೂ ಇಲ್ಲದಂತಾಗಿದೆ. ಏಕೆಂದರೆ ಆಶಾ ಕಾರ್ಯಕರ್ತೆಯರಿಗಿರುವ ತಿಂಗಳ ನಿಗದಿತ ವೇತನ ಕೇವಲ 5000 ರೂ ಮಾತ್ರ!! ಜೊತೆಗೆ ಇವರು ಮಾಡುವ ಇತರೇ 30ಕ್ಕೂ ಹೆಚ್ಚು ಸೇವೆಗಳಿಗೆ ನೀಡುವ ಕೆಲ ಪುಡಿಗಾಸು ಸೇರಿಸಿದರೆ, ಅದು ಆರೋ ಏಳೋ ಸಾವಿರ ಸಾವಿರವಾಗಬಹುದು. ಇಲ್ಲದಿದ್ದರೆ ಅದೂ ಇಲ್ಲ. ಇಂದಿನ ಬೆಲೆಏರಿಕೆಯ ದಿನಗಳಲ್ಲಿ ಈ ಪುಡಿಗಾಸಿನಲ್ಲಿ ಇಡೀ ಕುಟುಂಬ ನಡೆಯಬೇಕು!
ಅಂದಹಾಗೆ ಮಹಿಳಾ ಸಬಲೀಕರಣದ ಭಾಗವಾಗಿ ಸರ್ಕಾರವು ಬಹುತೇಕ ಒಂಟಿ ಮಹಿಳೆಯರನ್ನು, ವಿಚ್ಛೇದಿತರನ್ನು, ವಿಧವೆಯರನ್ನು, ಒಂಟಿ ತಾಯಂದಿರನ್ನು ಕೆಲಸಕ್ಕೆ ಸೇರಿಸಿಕೊಂಡಿದೆಯಂತೆ! ಇಂತಹ ಮಹಿಳೆಯರನ್ನು ಗೌರವಯುತವಾಗಿ ನಡೆಸಿಕೊಳ್ಳುವುದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಮಾಡುತ್ತಿರುವುದೇನು? ಗೌರವಧನದ ಹೆಸರಿನಲ್ಲಿ ದುಡಿಸಿಕೊಂಡು ತಿಂಗಳಿಗೆ ನೀಡುವ 5000/- ರೂ ಹಣವನ್ನೂ ಬೇಕಾ ಬಿಟ್ಟಿ ಕೊಡುವುದು. ಇದು ಸರ್ಕಾರವೇ ಈ ಮಹಿಳೆಯರಿಗೆ ತೋರುವ ಅಗೌರವವಲ್ಲದೇ ಮತ್ತೇನು? ಸರ್ಕಾರ ಯಾವ ಮುಖ ಹೊತ್ತು ಮಹಿಳಾ ಸಬಲೀಕರಣದ ಮಾತು ಹೇಳುತ್ತದೆ?
ಈ ಆಶಾ ಕಾರ್ಯಕರ್ತೆಯರನ್ನು ೨೦೦೯ ರಲ್ಲಿ ಕೇಂದ್ರ ಸರಕಾರವು ಕೇವಲ ಪ್ರಾಥಮಿಕ ಶಾಲೆ ಮುಗಿಸಿದವರನ್ನು ನೇಮಕ ಮಾಡಿಕೊಂಡಿತು. ಹಾಗಾಗಿ ಬೆರಳೆಣಿಕೆಯಷ್ಟು ಕಾರ್ಯಕರ್ತೆಯರನ್ನು ಹೊರತುಪಡಿಸಿ ಯಾರಿಗೂ ಕಂಪ್ಯೂಟರ್ ಜ್ಞಾನವಾಗಲಿ ಅಥವಾ ಇಲಾಖಾ ಕೆಲಸಗಳಿಗನುಗುಣವಾದ ಕಾರ್ಯವನ್ನು ಮೊಬೈಲ್ ನಲ್ಲಿ ನಿರ್ವಹಿಸುವ ತಾಂತ್ರಿಕ ಜ್ಞಾನವು ಇವರಿಗೆ ಇಲ್ಲ. ಆರಂಭದಲ್ಲಿ ವಿವಿಧ ಸಮೀಕ್ಷೆಗಳನ್ನು ಮಾಡಿ, ಜನರಲ್ಲಿ ಆರೋಗ್ಯದ ಅರಿವು ಮೂಡಿಸುವ ಕೆಲಸ ಜೊತೆಗೆ ಅಲ್ಪ ಸ್ವಲ್ಪ ಮಾಹಿತಿಯನ್ನೊದಗಿಸುವ ಜವಾಬ್ದಾರಿ ಮಾತ್ರ ಇವರಿಗೆ ಇತ್ತು, ಅತ್ಯಾವಶ್ಯಕವಾದ ಕೆಲ ಮಾಹಿತಿಗಳನ್ನು ದಪ್ತರನಲ್ಲಿ ದಾಖಲಿಸುವ ಕೆಲಸ ಮಾಡುತ್ತಿದ್ದರು.
ಆದರೆ ಸರಕಾರ ಆದೇಶವೊಂದನ್ನು ಹೊರಡಿಸಿ ಇನ್ನು ಮುಂದೆ ಆಶಾ ಕಾರ್ಯಕರ್ತೆಯರು ಸ್ಮಾರ್ಟ್ ಪೋನ್ ಮೂಲಕ ಕೆಲಸ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಿದೆ. ಜೊತೆಗೆ ಸ್ಮಾರ್ಟ್ ಪೋನ್ ಇಲ್ಲದವರು ತಮ್ಮ ಸ್ವಂತ ಖರ್ಚಿನಲ್ಲಿ ಖರಿದಿಸಬೇಕು ಎಂಬ ಬಿಟ್ಟಿ ಉಪದೇಶವನ್ನೂ ನೀಡಿದೆ.
ಇವರ ಕೆಲಸಕ್ಕನುಗುಣವಾದ ಪ್ರೋತ್ಸಾಹ ಧನವನ್ನು ಇಲಾಖೆಯು ಆಗಾಗ ದೇವರಪ್ರಸಾದದಂತೆ ವಿತರಿಸುತ್ತಿತ್ತು, ಸಿಕ್ಕವರಿಗೆ ಸಿರುಂಡೆ ಎಂಬಂತೆ! ಈ ಪ್ರೋತ್ಸಾಹಧನ ಪಾವತಿಸುವಲ್ಲಿ ಕೆಲವು ತೊಂದರೆಗಳು ಇದ್ದದ್ದು ನಿಜ. ಪ್ರೋತ್ಸಾಹಧನ ವಿತರಣೆಯಲ್ಲಿನ ಕೆಲವು ನ್ಯೂನ್ಯತೆಗಳನ್ನು ಸರಿಪಡಿಸುವ ಬದಲಿಗೆ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಎಂಬಂತೆ ಬಿಂಬಿಸಿ ಆರೋಗ್ಯ ಇಲಾಖೆಯು ಡಿಜಿಟಲೀಕರಣದ ನೆಪದಲ್ಲಿ RCH ಪೋರ್ಟಲ್‌ಗೆ ಲಿಂಕ್ ಮಾಡಿತು. ಇದು ರೋಗಕ್ಕಿಂತ ಔಷಧಿಯೇ ಮರಣಾಂತಿಕ ಎಂಬಂತಾಗಿದೆ. ಯಾಕೆಂದರೆ ಇದು ಜಾರಿಯಾದಂದಿನಿಂದ ಇಲಾಖಾ ಅಂಕಿಸಂಖ್ಯೆಗಳ ಪ್ರಕಾರವೇ ಪ್ರತಿ ತಿಂಗಳೂ ಸಾವಿರಾರು ಆಶಾ ಕಾರ್ಯಕರ್ತೆಯರು ಪಡೆಯಬೇಕಿದ್ದ ಪ್ರೋತ್ಸಾಹಧನ ಪಡೆಯುತ್ತಿಲ್ಲ. ಅಂದರೆ ಆ ಪ್ರಮಾಣದಲ್ಲಿ ಸೋರಿಕೆ ಇದೆ ಎಂದರ್ಥ! ಅನ್ಯಾಯಕ್ಕೊಳಗಾಗುವ ರಾಜ್ಯದ ಈ 10ರಿಂದ 12 ಸಾವಿರ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹಧನ ಹೋಗುತ್ತದಾದರೂ ಎಲ್ಲಿಗೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಈ ಯಕ್ಷಪ್ರಶ್ನೆಗಳಿಗೆ ಉತ್ತರ ನೀಡಲು ಇಡೀ ಇಲಾಖೆಯಲ್ಲಿ ಚಪರಾಸಿಯಿಂದ ಹಿಡಿದು ಆರೋಗ್ಯ ಸಚಿವರವರೆಗೂ ಹುಡುಕಿದರೂ ಉತ್ತರಿಸುವ ಧರ್ಮರಾಯ ಯಾರೂ ಇಲ್ಲ. ಆದರೆ ಅಂಗೈ ಹುಣ್ಣಿಗೆ ಕನ್ನಡಿ ಹುಡುಕಾಟದಲ್ಲಿದೆ ಸರಕಾರ. ಕನಿಷ್ಠಪಕ್ಷ ಇವರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ ವೇತನ, ಗ್ರ್ಯಾಚ್ಯುಟಿ, ಪಿಎಫ್- ಇಎಸ್ ಐ ಸೌಲಭ್ಯವನ್ನೂ ಸರಕಾರ ನೀಡಿಲ್ಲ. ಅತ್ತ ಕೇಂದ್ರ ಸರಕಾರ ಕಳೆದ 15 ವರ್ಷಗಳಿಂದ ಪ್ರೋತ್ಸಾಹ ಧನವನ್ನೂ ಹೆಚ್ಚಿಸಿಲ್ಲ.
ಇಲಾಖೆ ನೀಡುವ ಪ್ರೋತ್ಸಾಹ ಧನ ಸಾಲುತ್ತಿಲ್ಲವಾದ್ದರಿಂದ ‘ನಾನು ದಿನಾಲು ಮೂರ್ನಾಲ್ಕು ಮನೆಗಳಿಗೆ ಕಸ, ಮುಸುರೆ, ಬಟ್ಟೆ ತೊಳಿಯಲು ಹೋಗುತ್ತಿದ್ದೇನೆ ಸರ್ ಎನ್ನುತ್ತಾರೆ ಹೆಸರು ಹೇಳಿಕೊಳ್ಳಲಿಚ್ಚಿಸದ ವಿಜಯಪುರ ಜಿಲ್ಲೆಯ ಆಶಾ ಕಾರ್ಯಕರ್ತೆಯರೊಬ್ಬರು. ಇನ್ನೊಬ್ಬ ಆಶಾ ಕಾರ್ಯಕರ್ತೆ ಢಾಬಾಗಳಲ್ಲಿ ಸಂಜೆ ಪಾತ್ರೆ ತೊಳೆಯಲು ಹೋದರೆ ಮತ್ತೊಬ್ಬ ಆಶಾ ಕಾರ್ಯಕರ್ತೆ ಜೊತೆಗೆ ಟೇಲರಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಇನ್ನೊಬ್ಬರು ಪಾರ್ಟ್ ಟೈಮ್ ಬ್ಯೂಟಿ ಪಾರ್ಲರ್ ನಡೆಸುತ್ತಾ ಜೀವನ ತಳ್ಳುತ್ತಿದ್ದಾರೆ. ಮಗದೊಬ್ಬರು ರೊಟ್ಟಿ ಯಂತ್ರ ಖರೀದಿಸಿ ಬಿಡುವಿದ್ದಾಗ ರೊಟ್ಟಿ ಮಾಡಿ ಮಾರುತ್ತಾರೆ.
‘ಸರ್ಕಾರ ಕೊಡು ಐದು ಸಾವಿರದಾಗ ಸಂಸಾರ ಹೆಂಗ ನಡಿತದ್ರಿ, ಅದ್ಕ ಎರಡು ಆಕಳಾ ಸಾಕಿವಿ. ನಮ್ಮ ಮನಿ ಅವ್ರು ನಾನು ಕೂಡಿ ನೋಡ್ಕೋತಿವಿ, ಅದು ಸ್ವಲ್ಪ ನಮ್ಗ ಅನ್ಕೂಲ ಆಗೇದ’ ಎನ್ನುತ್ತಾರೆ ಆಶಾ ಕಾರ್ಯಕರ್ತೆಯಾದ ತಿಕೋಟಾದ ಅಂಬಿಕಾ ಒಳಸಂಗ.
‘ಒಂದ ಹೆಣ್ಣ, ಒಂದ ಗಂಡ ನನ್ನ ಕೈಯಾಗ ಕೊಟ್ಟು ನಮ್ಮ ಮನಿ ಅವ್ರು ಹೋಗ್ಯಾರ್ರಿ(ತೀರಿಕೊಂಡಿದ್ದಾರೆ). ಅವ್ರ(ಮಕ್ಕಳ) ಹೊಟ್ಟಿ ಬಟ್ಟಿ ನೋಡ್ಕೋಬೇಕ್ರಿ ಮತ್ತು ನಮ್ಮ ಅತ್ತಿ ಮಾವಗ ವಯಸ್ಸಾಗೇದ್ರಿ ಅವರನ್ನ ನೋಡ್ಕೋಬೇಕು. ಹೊಲ ಮನಿ ಎನೂ ಇಲ್ರಿ ಈ ಐದು ಸಾವಿರ ರೂಪಾಯ್ದಾಗ ಹೆಂಗ ಜೀವ್ನಾ ಮಡ್ಬೇಕ ನೀವೇ ಹೇಳ್ರಿ ಸರ್” ಎಂದು ಉಕ್ಕಿಬಂದ ದು:ಖವನ್ನು ತಡೆಯುತ್ತಾ ಹೇಳಿದರು. ಹೆಸರು ಹೇಳಲಿಚ್ಚಿಸದ ಆಶಾ ಒಬ್ಬರು. ‘ಸರ್ ಹೊರಗಗೆ ಕೂಲಿ ಕೆಲಸಕ್ಕೆ ಹೋಗುದು ಪಾಡದ್ರಿ , ಅದ್ಕಿನ ಇದು ಹೇಸಿ ಅದ್ರಿ’ ಎನ್ನುತ್ತಾರೆ ಮತ್ತೊಬ್ಬ ಆಶಾ. ‘ಇದ್ದ ಎರಡ ಮಕ್ಕಳನ ಚಲೋತ್ನೆಗೆ ನೋಡುದಾಲರಕ ತುಮುಕೂರ ಸಿದ್ದಗಂಗಾ ಮಠದಾಗ (ಶಿಕ್ಷಣಕ್ಕೆ) ಬಿಟ್ಟಿನ್ರಿ ಸರ್ ಏನ್ ಹೇಳುದು ನಮ್ಮ ಕತಿ. ಬಡವ್ರ ಮನ್ಯಾಗ ಮಕ್ಕಳ ಹುಟ್ಟಬಾರದ್ರಿ’ ಎಂದು ಮಕ್ಕಳನ್ನು ನೆನಪಿಸಿ ಕಣ್ಣೀರಾಗುತ್ತಾರೆ ಇನ್ನೊಬ್ಬ ಆಶಾ. ಬೀದರ್ ನಿಂದ ಚಾಮರಾಜನಗರದವರೆಗೆ ಇತ್ತ ಉಡುಪಿ ಹಿಡಿದು ಬಳ್ಳಾರಿ ವರೆಗೆ ಬಹುತೇಕ ಎಲ್ಲಾ ಜಿಲ್ಲೆಗಳ ಆಶಾಗಳ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೆ ರೀತಿ ಇದೆ.
ಸಾಲದೆಂಬಂತೆ ಕೆಲವೊಂದೆಡೆ ಈ ಕಾರ್ಯಕರ್ತೆಯರ ಮುಗ್ದತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾ ಇವರದಲ್ಲದ ಕೆಲಸಗಳನ್ನು ಇವರಿಂದ ಮಾಡಿಸಿಕೊಳ್ಳುವ ಇಲಾಖಾ ಸಿಬ್ಬಂದಿಯೂ ಇದೆ. ಇವರಿಗೆ ಲಂಗು ಲಗಾಮು ಏನೂ ಇಲ್ಲ. ಏನಾದರೂ ಕೇಳಿದರೆ, ‘ನಿಮ್ಮ ಪೇಮೆಂಟ್ ಕಟ್ ಮಾಡುತ್ತೇವೆ’, ‘ನಿಮ್ಮನ್ನು ಕೆಲಸದಿಂದ ತಗೆದು ಹಾಕುತ್ತೇವೆ’ ಎಂದು ಮೇಲಾಧಿಕಾರಿಗಳು ಧಮಕಿ ಹಾಕುತ್ತಾರೆ. ಈ ಧಮಕಿಗೆ ಒಮ್ಮೆಲೆ ನಡುಗಿಬಿಡುತ್ತಾರೆ ಈ ಆಶಾಗಳು! ಯಾಕೆಂದರೆ ಇವರನ್ನೆ ನಂಬಿದ ಮಕ್ಕಳು, ವಯೋವೃದ್ಧ ತಂದೆ- ತಾಯಿ ಅಥವಾ ಅತ್ತೆ-ಮಾವರ ಗತಿ ನೆನಪಿಸಿಕೊಂಡು!! ಅತೀ ಕಡಿಮೆ ಸಂಬಳ, ಇಲಾಖೇತರ ಕೆಲಸಗಳ ಬಾರ, ಇಲಾಖೆಯಲ್ಲಿಯೂ ತಮ್ಮದಲ್ಲದ ಕೆಲಸಗಳ ಹೇರಿಕೆ, ಸಮಯಕ್ಕನುಗುಣವಾಗಿ ಆಗದ ವೇತನ, ಇವರಿಗೆ ಸೇರಬೇಕಾದ ಪ್ರೋತ್ಸಾಹ ಧನ ನಡು ಮಧ್ಯೆಯೇ ಸೋರಿ ಹೊಗುವುದು ಇಂತಹ ಹಲವಾರು ಸಮಸ್ಯೆಗಳಿಂದ ಆಶಾ ಕಾರ್ಯಕರ್ತೆಯರು ಬಸವಳಿದಿದ್ದಾರೆ.
ಇವರ ರಾಜ್ಯ ಮಟ್ಟದ ಹೋರಾಟದ ನಂತರ ‘ನಿಮ್ಮ ಸಮಸ್ಯೆ ಬಗೆಹರಿಸೋಣ, ಬನ್ನಿ ಮಾತಾಡೋಣ’ ಎನ್ನುತ್ತಾ ಇಲಾಖೆಯ ಅಧಿಕಾರಿಗಳು ಸುಮಾರು 20ಕ್ಕೂ ಹೆಚ್ಚು ಸಭೆಗಳನ್ನು ಮಾಡಿದ್ದಾರೆ. ಈ ಸಭೆಗಳಲ್ಲಿ ಒಣ ಮಾತುಗಳು ಬಿಟ್ಟಿ ಉಪದೇಶಗಳು ಸಿಕ್ಕವು; ಹೊರತಾಗಿ ಮುಖ್ಯ ಬೇಡಿಕೆಗೆ ಸಂಬಂಧಿಸಿದಂತೆ ಯಾವುದೇ ಫಲ ದಕ್ಕಿಲ್ಲ. ಅಲ್ಲದೇ ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲೂ ಯಾವುದೇ ಘೋಷಣೆ ಮಾಡಲಿಲ್ಲ. ಜೊತೆಗೆ ಬಹುತೇಕ ರಾಜ್ಯದ ಎಲ್ಲ ಶಾಸಕರುಗಳು, ಸಚಿವರುಗಳಿಗೂ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿ ತಮ್ಮ ಬೇಡಿಕೆ ಇಡೇರಿಕೆಗಾಗಿ ಮನವಿಮಾಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ.
“ವಿವಿಧ ಹೆಸರಿನಡಿ ಸರಕಾರವು ಪುಡಿ ಪುಡಿಯಾಗಿ ವಿತರಿಸುವ ಹಣವನ್ನು ಒಟ್ಟುಗೂಡಿಸಿ ಈಗಿರುವ ಬಜೆಟ್ ನಲ್ಲಿಯೇ ಪ್ರತಿ ಆಶಾಕಾರ್ಯಕರ್ತೆಗೆ ತಿಂಗಳಿಗೆ 15,000/- ರೂ ಹಣ ಯಾವ ತೊಂದರೆಯೂ ಇಲ್ಲದೆ ಸಂಬಳ ನೀಡಬಹುದು. ಸರಕಾರಕ್ಕೆ ಇದರಿಂದ ಯಾವುದೇ ಹಣಕಾಸಿನ ಹೊರೆಯೂ ಆಗುವುದಿಲ್ಲ, ಇರುವ ಕೆಲ ಚಿಕ್ಕಪುಟ್ಟ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಬೇಕಷ್ಟೇ” ಎನ್ನುತ್ತಾರೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿಗಳಾದ ಡಿ.ನಾಗಲಕ್ಷ್ಮೀ ಯವರು. ಇದರ ಬಗ್ಗೆ ಇಲಾಖಾಧಿಕಾರಿಗಳು ತಮ್ಮ ಒಣ ಪ್ರತಿಷ್ಟೆ ಬಿಟ್ಟು ಮುಕ್ತವಾಗಿ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವುದು ಒಳ್ಳೆಯದು.
“ಎರಡು ವರ್ಷಗಳ ಹಿಂದೆ ಫೆಬ್ರುವರಿಯಲ್ಲಿ ಹೋರಾಟ ಮಾಡಿದಾಗ “ನನ್ನನ್ನು ನಂಬಿ, ಹೋರಾಟ ಹಿಂತೆಗೆದುಕೊಳ್ಳಿ, ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸುವೆ” ಎಂದಿದ್ದರು. ಒಂದು ವರ್ಷ ಕಳೆದರೂ ಇದರ ಬಗ್ಗೆ ಸರ್ಕಾರ ಚಕಾರವೆತ್ತಲಿಲ್ಲ. ಇದರಿಂದ ರೋಷಿ ಹೋಗಿ ಆಶಾ ಕಾರ್ಯಕರ್ತೆಯರು ಮತ್ತೆ ಕಳೆದ ಜನವರಿಯಲ್ಲಿ ಫ್ರೀಡಂಪಾರ್ಕ್‌ನಲ್ಲಿ ಅನಿರ್ದಿಷ್ಟ ಆಹೋರಾತ್ರಿ ಧರಣಿಯನ್ನು ಆರಂಭಿಸಿದರು. ಆಗ ಇಲಾಖಾಧಿಕಾರಿಗಳು ಮತ್ತು ಆರೋಗ್ಯ ಸಚಿವರೊಂದಿಗೆ ನಡೆಸ ಸರಣಿ ಸಭೆಗಳು ವಿಫಲವಾದವು. ಕೊನೆಗೆ ಸ್ವತ: ಮುಖ್ಯಮಂತ್ರಿಗಳು ಮದ್ಯೆ ಪ್ರವೇಶಿಸಿ ಪ್ರತಿ ಆಶಾ ಕಾರ್ಯಕರ್ತೆಯರಿಗೂ ಯಾವುದೇ ಸಂದರ್ಭದಲ್ಲೂ ನಾನು 10.000/- ಕಡಿಮೆಯಾಗದಂತೆ ಸಂಬಳ ಮಾಡುತ್ತೇನೆ. ಎಂದು ಆಶ್ವಾಸನೆ ನೀಡಿದರು. ಮುಖ್ಯಮಂತ್ರಿಗಳ ಆಶ್ವಾಸನೆಯಿಂದ ಸಂತುಷ್ಟರಾದ ಆಶಾ ಕಾರ್ಯಕರ್ತೆಯರು ಖುಷಿಯಿಂದ ಮನೆಗೆ ಹಿಂತಿರುಗಿದರು. ಆದರೆ ಆ ಆಶ್ವಾಸನೆ ಇಂದಿಗೂ ಇಡೇರಿಸಿಲ್ಲ. ಒಂದರ್ಥದಲ್ಲಿ ರಾಜ್ಯ ಸರಕಾರ ಆಶಾಗಳನ್ನು ನಂಬಿಸಿ ವಂಚಿಸುವ ಕೆಲಸ ಮಾಡಿದಂತಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೂರು ಸಾವಿರ ಸಂಬಳ ಹೆಚ್ಚಳ ಮಾಡುವೆವು ಎಂಬ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿನ ಆಶ್ವಾಸನೆಯೂ ಆಶ್ವಾಸನೆಯಾಗಿಯೇ ಉಳಿದಿದೆ. ಆದುದರಿಂದ ರಾಜ್ಯಸರಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ” ಎನ್ನುವುದು ಆಶಾಗಳ ಒಕ್ಕೋರಲಿನ ದ್ವನಿಯಾಗಿದೆ.
ಒಟ್ಟಿನಲ್ಲಿ ಇಡೀ ಸಮಾಜದ ಆಶಾವಾದವಾಗಿ ಬೆಳೆದಿರುವ ಆಶಾ ಕಾರ್ಯಕರ್ತೆಯರಿಗೆ ‘ಆಶಾವಾದ’ ತುಂಬುವ ಕೆಲಸ ಸರಕಾರ ಮಾಡುವುದು ಗಳಿಗೆಯ ತುರ್ತು ಅವಶ್ಯಕತೆಯಾಗಿದೆ. ಇತ್ತ ಕೇಂದ್ರ ಸರ್ಕಾರವು ತನ್ನ ಜವಾಬ್ದಾರಿ ಏನೂ ಇಲ್ಲ ಎಂಬಂತೆ ಈ ವಿಷಯದಲ್ಲಿ ಕುಂಭಕರ್ಣ ನಿದ್ರೆಗೆ ಜಾರಿದೆ. ಒಟ್ಟಿನಲ್ಲಿ ಈಗ ಮುಂಬರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಈ ಆಶಾ ಕಾರ್ಯಕರ್ತೆಯರ ಬದುಕಿಗೆ ಆಶಾವಾದ ಹುಟ್ಟಿಸುವಂತಹ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಮಾಡಬೇಕಿದೆ.
ಹೊದಲ್ಲೆಲ್ಲಾ ‘ಕೊಟ್ಟ ಮಾತಿನಂತೆ ನಾವು ನಡೆದಿದ್ದೇವೆ’ ಎಂದು ಕೊಚ್ಚಿಕೊಳ್ಳುವ ಸಿಎಂ ಸಿದ್ದರಾಮಯ್ಯನವರು ಇವರಿಗೂ ಕೊಟ್ಟ ಮಾತನ್ನುಳಿಸಿಕೊಳ್ಳಲಿ ಕನಿಷ್ಠ ರೂ. 10.000 ವೇತನ ಖಾತ್ರಿಮಾಡಲಿ. ಆಗ ಮಾತ್ರವೇ ಅವರ ಮಾತಿಗೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಇಲ್ಲ. ಕೊಲೆ, ದರೋಡೆ, ಕಳ್ಳತನ ಮಾಡಿಜೈಲು ಪಾಲಾದ ಕೈದಿಗಳಿಗೆ 15,000/- ನೀಡುವ ಸರ್ಕಾರ ನಾಡಿನ ಜನರ ಸೇವೆ ಮಾಡುತ್ತಾ ಸಮುದಾಯದ ಆಶಾವಾದವಾಗಿ ಬೆಳೆದ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 10.000/- ಸಾವಿರ ವೇತನ ನಿಗದಿ ಮಾಡಿ ರಾಜ್ಯ ಸರ್ಕಾರ ತನ್ನ ಮರ್ಯಾದೆ ಮತ್ತು ಘನತೆ ಉಳಿಸಿಕೊಳ್ಳಲಿ.

ಹೆಚ್.ಟಿ. ಭರತಕುಮಾರ
ಲೇಖಕರು,
ಸಾಮಾಜಿಕ ಕಾರ್ಯಕರ್ತರು, ವಿಜಯಪುರ




