ಯಾವುದೇ ಒಂದು ಜವಾಬ್ದಾರಿಯುತ ಸರ್ಕಾರದ ಆದ್ಯತೆ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಾಗಿರಬೇಕು. ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕೆಗಳ ಸ್ಥಾಪನೆಯ ಮೂಲಕ ಜನರ ಜೀವನಮಟ್ಟ ಸುಧಾರಿಸಬೇಕು. ಆದರೆ, ಅಸ್ಸಾಂನ ಬಿಜೆಪಿ ಸರ್ಕಾರ ಜನರನ್ನು ಸರ್ಕಾರದ ಪಿಂಚಣಿ ಮತ್ತು ಭತ್ಯೆಗಳ ಮೇಲೆ ಅವಲಂಬಿತರನ್ನಾಗಿ ಮಾಡುವ ಮೂಲಕ ಶಾಶ್ವತವಾಗಿ ‘ಫಲಾನುಭವಿ’ಗಳನ್ನಾಗಿ ಉಳಿಸಲು ಯತ್ನಿಸುತ್ತಿದೆ
ಬೊಕ್ಕಸ ಬರಿದಾದರೂ ಚಿಂತೆಯಿಲ್ಲ, ಅಧಿಕಾರ ಉಳಿದರೆ ಸಾಕು ಎಂಬ ಹತಾಶ ಮನಸ್ಥಿತಿಯಲ್ಲಿ ಅಸ್ಸಾಂ ಸರ್ಕಾರ; 37 ಲಕ್ಷ ಮಹಿಳೆಯರಿಗೆ ‘ಬಿಹು’ ನೆಪದಲ್ಲಿ ಆಮಿಷದ ಅಸ್ತ್ರ ನೀಡುತ್ತಿದೆ. ಪ್ರಜಾಪ್ರಭುತ್ವದ ಹಬ್ಬ ಎಂದು ಕರೆಯಲ್ಪಡುವ ಚುನಾವಣೆಗಳು ಬಂತೆಂದರೆ ಸಾಕು, ಆಳುವ ಪಕ್ಷಗಳಿಗೆ ಮತದಾರ ಪ್ರಭು ‘ದೇವರಂತೆ’ ಕಾಣಲಾರಂಭಿಸುತ್ತಾನೆ. ಐದು ವರ್ಷಗಳ ಕಾಲ ಬೆಲೆ ಏರಿಕೆ, ನಿರುದ್ಯೋಗ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಹೈರಾಣಾಗಿರುವ ಜನಸಾಮಾನ್ಯನಿಗೆ ಚುನಾವಣೆ ಹೊಸ್ತಿಲಲ್ಲಿ ಮಾತ್ರ ಸರ್ಕಾರಗಳು ‘ಭಾಗ್ಯಲಕ್ಷ್ಮಿ’ಯಾಗಿ ಗೋಚರಿಸುತ್ತವೆ.
ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಸಿಎಂ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ, ರಾಜ್ಯದ ಹಣದ ಮಳೆಗೆರೆಯಲು ಮುಂದಾಗಿದೆ. ಅದರಲ್ಲೂ ‘ಬಿಹು’ ಹಬ್ಬದ ಉಡುಗೊರೆ ಮತ್ತು ‘ಒರುನೋದಯ’ದಂತಹ ಯೋಜನೆಗಳ ಮೂಲಕ ಬರೋಬ್ಬರಿ 37 ಲಕ್ಷ ಮಹಿಳೆಯರಿಗೆ ಮಾಸಿಕ 8 ಸಾವಿರ ರೂಪಾಯಿಗಳವರೆಗೆ ನಗದು ವರ್ಗಾವಣೆ ಮಾಡುವ ಘೋಷಣೆಗಳು, ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಮೀರಿ, ನೇರವಾಗಿಯೇ ಮತದಾರರಿಗೆ ನೀಡುತ್ತಿರುವ ‘ಕಾನೂನುಬದ್ಧ ಲಂಚ’ದಂತೆ ಗೋಚರಿಸುತ್ತಿದೆ.
ಬಿಜೆಪಿ ರಾಷ್ಟ್ರೀಯ ಮಟ್ಟದಲ್ಲಿ ‘ರೇವಡಿ ಸಂಸ್ಕೃತಿ’ (ಉಚಿತ ಕೊಡುಗೆಗಳ ಸಂಸ್ಕೃತಿ) ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತದೆ. ಸ್ವತಃ ಪ್ರಧಾನಿ ಮೋದಿ ಅವರೇ ಹಲವು ವೇದಿಕೆಗಳಲ್ಲಿ ಉಚಿತ ಯೋಜನೆಗಳು ದೇಶದ ಆರ್ಥಿಕತೆಗೆ ಮಾರಕ ಎಂದು ಪ್ರತಿಪಾದಿಸಿದ್ದರು. ಆದರೆ, ಅಸ್ಸಾಂನಲ್ಲಿ ಮಾತ್ರ ಆ ಸಿದ್ಧಾಂತಗಳೆಲ್ಲವೂ ಗಾಳಿಯಲ್ಲಿ ತೂರಿಹೋಗಿವೆ.

ಅಸ್ಸಾಂ ಸರ್ಕಾರ ಘೋಷಿಸಿರುವ ಈ ಹೊಸ ಆಫರ್‌ಗಳ ಪ್ರಕಾರ, ಸುಮಾರು 37 ಲಕ್ಷ ಮಹಿಳಾ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಮಾಸಿಕವಾಗಿ ಕೈಗೆ ಸಿಗುವ ಮೊತ್ತ ಬರೋಬ್ಬರಿ 8,000 ರೂಪಾಯಿಗಳನ್ನು ದಾಟಲಿದೆ. ಇದನ್ನು ‘ಬಿಹು ಗಿಫ್ಟ್’ ಎಂದು ಕರೆಯಲಾಗುತ್ತಿದ್ದರೂ, ವಾಸ್ತವದಲ್ಲಿ ಇದು ‘ಎಲೆಕ್ಷನ್ ಗಿಫ್ಟ್’ ಎಂಬುದು ಯಾರಿಗಾದರೂ ಅರ್ಥವಾಗುವ ಸತ್ಯ. ರಾಜ್ಯದಲ್ಲಿ ರಸ್ತೆಗಳು ಹದಗೆಟ್ಟಿವೆ, ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಪರಿಹಾರವಿಲ್ಲ, ಯುವಕರಿಗೆ ಉದ್ಯೋಗವಿಲ್ಲ. ಇಂತಹ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಹಣವಿಲ್ಲ ಎಂದು ಹೇಳುವ ಸರ್ಕಾರ, ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಾವಿರಾರು ಕೋಟಿ ರೂಪಾಯಿಗಳನ್ನು ಜನರಿಗೆ ನೇರವಾಗಿ ಹಂಚಲು ಮುಂದಾಗಿರುವುದು ರಾಜಕೀಯ ಅವಕಾಶವಾದದ ಪರಮಾವಧಿ.
ಸಾಲದ ಸುಳಿಯಲ್ಲಿ ರಾಜ್ಯ
ಅಸ್ಸಾಂನ ಆರ್ಥಿಕ ಸ್ಥಿತಿ ಏನೆಂಬುದನ್ನು ಗಮನಿಸಿದರೆ, ಈ ಘೋಷಣೆಗಳು ಎಷ್ಟು ಅವಾಸ್ತವಿಕ ಮತ್ತು ಅಪಾಯಕಾರಿ ಎಂಬುದು ಅರಿವಾಗುತ್ತದೆ. ಆರ್‌ಬಿಐ ಮತ್ತು ಸಿಎಜಿ ವರದಿಗಳ ಪ್ರಕಾರ, ಅಸ್ಸಾಂ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿದೆ. ರಾಜ್ಯದ ಜಿಎಸ್‌ಡಿಪಿ ಅನುಪಾತಕ್ಕೆ ಹೋಲಿಸಿದರೆ ಸಾಲದ ಪ್ರಮಾಣ ಮಿತಿಮೀರುತ್ತಿದೆ. ಹೀಗಿರುವಾಗ, ಕೇವಲ ಮತಗಳಿಕೆಯ ಒಂದೇ ಉದ್ದೇಶಕ್ಕಾಗಿ, ಮುಂದಿನ ಪೀಳಿಗೆಯ ತಲೆ ಮೇಲೆ ಸಾಲದ ಹೊರೆ ಹೊರಿಸಿ, ಪ್ರಸ್ತುತ ಮತದಾರರ ಜೇಬು ತುಂಬಿಸುವ ತಂತ್ರಗಾರಿಕೆ ಎಷ್ಟು ಸರಿ?
ಇದನ್ನು ಓದಿದ್ದೀರಾ?: ಜಗತ್ತಿನ ಗಮನ ಸೆಳೆಯುತ್ತಿರುವ ಗ್ರೆಟಾ ಥನ್‌ಬರ್ಗ್; ಭಾರತದ ರೈತರನ್ನು ಬೆಂಬಲಿಸಿದ್ದ ಪರಿಸರ ಹೋರಾಟಗಾರ್ತಿ
ಈ ಯೋಜನೆಗಳಿಗೆ ಬೇಕಾದ ಸಾವಿರಾರು ಕೋಟಿ ರೂಪಾಯಿಗಳನ್ನು ಹೊಂದಿಸಲು ಸರ್ಕಾರ ಮತ್ತೆ ಸಾಲ ಮಾಡಬೇಕಾಗುತ್ತದೆ ಅಥವಾ ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಟ್ಟ ಹಣವನ್ನು ಇದಕ್ಕೆ ವರ್ಗಾಯಿಸಬೇಕಾಗುತ್ತದೆ. ಅಂತಿಮವಾಗಿ ಇದರ ಹೊರೆ ಪರೋಕ್ಷ ತೆರಿಗೆಯ ರೂಪದಲ್ಲಿ ಮತ್ತೆ ಜನಸಾಮಾನ್ಯನ ಮೇಲೆಯೇ ಬೀಳಲಿದೆ. ಆದರೆ, “ಇಂದಿನ ಸುಖಕ್ಕಾಗಿ ನಾಳೆ ಬಲಿಯಾಗಲಿ” ಎಂಬ ಮನಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಮುನ್ನಡೆಯುತ್ತಿರುವಂತೆ ಕಾಣುತ್ತಿದೆ.
ಸ್ವಾವಲಂಬನೆಯ ಬದಲು ಪರಾವಲಂಬನೆ
ಯಾವುದೇ ಒಂದು ಜವಾಬ್ದಾರಿಯುತ ಸರ್ಕಾರದ ಆದ್ಯತೆ ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದಾಗಿರಬೇಕು. ಉದ್ಯೋಗ ಸೃಷ್ಟಿ, ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕೆಗಳ ಸ್ಥಾಪನೆಯ ಮೂಲಕ ಜನರ ಜೀವನಮಟ್ಟ ಸುಧಾರಿಸಬೇಕು. ಆದರೆ, ಅಸ್ಸಾಂನ ಬಿಜೆಪಿ ಸರ್ಕಾರ ಜನರನ್ನು ಸರ್ಕಾರದ ಪಿಂಚಣಿ ಮತ್ತು ಭತ್ಯೆಗಳ ಮೇಲೆ ಅವಲಂಬಿತರನ್ನಾಗಿ ಮಾಡುವ ಮೂಲಕ ಶಾಶ್ವತವಾಗಿ ‘ಫಲಾನುಭವಿ’ಗಳನ್ನಾಗಿ ಉಳಿಸಲು ಯತ್ನಿಸುತ್ತಿದೆ. ಮಹಿಳೆಯರಿಗೆ ಮಾಸಿಕ 8 ಸಾವಿರ ರೂ. ನೀಡುವುದು ಮೇಲ್ನೋಟಕ್ಕೆ ಸಬಲೀಕರಣದಂತೆ ಕಂಡರೂ, ವಾಸ್ತವದಲ್ಲಿ ಇದು ಮಹಿಳೆಯರನ್ನು ಕೇವಲ ಒಂದು ‘ಮತ ಬ್ಯಾಂಕ್’ ಆಗಿ ಪರಿವರ್ತಿಸುವ ತಂತ್ರವಾಗಿದೆ. ದುಡಿದು ತಿನ್ನಬೇಕಾದ ಕೈಗಳಿಗೆ, ಕುಳಿತಲ್ಲೇ ಹಣ ನೀಡಿ, ಅವರ ಪ್ರಶ್ನಿಸುವ ಧ್ವನಿಯನ್ನು ಅಡಗಿಸುವ ಪ್ರಯತ್ನವಿದು.

ಬಿಜೆಪಿಯ ಇಬ್ಬಗೆಯ ನೀತಿ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದಾಗ, ಅದನ್ನು ರಾಜ್ಯದ ಬೊಕ್ಕಸಕ್ಕೆ ಹೊರೆ ಎಂದು ಟೀಕಿಸಿದ ಬಿಜೆಪಿ ನಾಯಕರು, ಈಗ ಅಸ್ಸಾಂನಲ್ಲಿ ಅದಕ್ಕಿಂತಲೂ ಹೆಚ್ಚಿನ ಮೊತ್ತದ ಹಣವನ್ನು ಹಂಚಲು ಮುಂದಾಗಿರುವುದು ಅವರ ದ್ವಂದ್ವ ನೀತಿಗೆ ಕನ್ನಡಿ ಹಿಡಿದಿದೆ. ಬೇರೆ ರಾಜ್ಯಗಳಲ್ಲಿ ಆರ್ಥಿಕ ಶಿಸ್ತಿನ ಪಾಠ ಮಾಡುವ ಬಿಜೆಪಿ, ತನ್ನದೇ ಆಡಳಿತವಿರುವ ಅಸ್ಸಾಂನಲ್ಲಿ ಮಾತ್ರ ಆರ್ಥಿಕ ಅರಾಜಕತೆಗೆ ನಾಂದಿ ಹಾಡಿದೆ. ‘ಮಹಿಳಾ ಸಶಕ್ತೀಕರಣ’ದ ಮುಖವಾಡದ ಅಡಿಯಲ್ಲಿ ನಡೆಯುತ್ತಿರುವ ಈ ಹಣದ ಹಂಚಿಕೆ, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವಂತಹದ್ದು. ಮತದಾರನಿಗೆ ಅಭಿವೃದ್ಧಿಯ ರಿಪೋರ್ಟ್ ಕಾರ್ಡ್ ತೋರಿಸಿ ಮತ ಕೇಳುವ ಬದಲು, ನೋಟಿನ ಕಂತೆಗಳನ್ನು ತೋರಿಸಿ ಮತ ಸೆಳೆಯಲು ಹೊರಟಿರುವುದು ದುರದೃಷ್ಟಕರ.
ಅಸ್ಸಾಂ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಘೋಷಣೆಯಾಗಿರುವ ಈ ಯೋಜನೆಗಳು, ತಾತ್ಕಾಲಿಕವಾಗಿ ಜನರನ್ನು ಖುಷಿಪಡಿಸಬಹುದು. ಆದರೆ, ದೀರ್ಘಾವಧಿಯಲ್ಲಿ ಇದು ರಾಜ್ಯದ ಆರ್ಥಿಕತೆಯನ್ನು ದಿವಾಳಿಯಂಚಿಗ ತಳ್ಳುವುದು ನಿಶ್ಚಿತ. ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳು ಜನಸೇವಕರಾಗಬೇಕೇ ಹೊರತು, ಮತರಾರರನ್ನು ಹಣ ಕೊಟ್ಟು ಖರೀದಿಸುವ ವ್ಯಾಪಾರಿಗಳಾಗಬಾರದು. ಅಸ್ಸಾಂನ ಪ್ರಜ್ಞಾವಂತ ಮತದಾರರು ಈ ‘ಬಿಹು ಗಿಫ್ಟ್’ನ ಹಿಂದಿರುವ ರಾಜಕೀಯ ಲೆಕ್ಕಾಚಾರವನ್ನು ಅರ್ಥಮಾಡಿಕೊಳ್ಳುವರೇ ಎಂಬುದು ಈಗಿರುವ ಯಕ್ಷಪ್ರಶ್ನೆ.





