ಖಮೇನಿಯನ್ನು ಹತ್ಯೆಗೈಯುವುದು ವಿಶ್ವಸಂಸ್ಥೆಯ ಆಶಯ, ನಿಯಮಗಳ ಮಾತ್ರವಲ್ಲ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಅಲ್ಲವೇ? ಇದನ್ನು ರಷ್ಯಾ, ಚೀನಾದಂತೆ ಭಾರತ ಖಂಡಿಸಲೇಬೇಕಿತ್ತು. ಅದರಲ್ಲೂ ಇರಾನ್ ಭಾರತದ ಮಿತ್ರರಾಷ್ಟ್ರವೂ ಹೌದು, ತೈಲ ಸೇರಿದಂತೆ ಹತ್ತಾರು ವ್ಯಾಪಾರ ವ್ಯವಹಾರ ಎರಡು ದೇಶಗಳ ನಡುವೆ ದಶಕಗಳಿಂದ ನಡೆದುಕೊಂಡು ಬಂದಿದೆ. ಇಷ್ಟೆಲ್ಲ ಬಾಂಧವ್ಯ ಇದ್ದರೂ ಖಮೇನಿ ಹತ್ಯೆಯನ್ನು ಖಂಡಿಸಿ ಮೋದಿ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ, ವಿದೇಶಾಂಗ ಇಲಾಖೆ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದೇ ಮೌನವಾಗಿದೆ.
ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ ಆಡುತ್ತಿರುವ ಆಟದಲ್ಲಿ ವಿಶ್ವದಲ್ಲಿ ಶಾಂತಿ ಮರೆಯಾಗುತ್ತಿದೆ. ಅದರಲ್ಲೂ ಕಳೆದೊಂದು ವರ್ಷದಲ್ಲಿ ಈತನ ಹುಚ್ಚಾಟ ಅತಿಯಾಗಿದ್ದು, ಹಲವಾರು ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ. ಇದು ವಿಶ್ವಸಂಸ್ಥೆಯಲ್ಲಿನ ಒಡಂಬಡಿಕೆಯ ಸ್ಪಷ್ಟ ಉಲ್ಲಂಘನೆ ಮಾತ್ರವಲ್ಲ ಭವಿಷ್ಯದಲ್ಲಿ ಪ್ರಪಂಚದ ಹಲವಾರು ರಾಷ್ಟ್ರಗಳ ಅಸ್ತಿತ್ವವನ್ನೇ ಅಲುಗಾಡಿಸುವ ಮುನ್ಸೂಚನೆ ಎಂದರೆ ತಪ್ಪಾಗಲಾರದು. ಎಲ್ಲದಕ್ಕೂ ಯುದ್ದವೇ ಪರಿಹಾರ ಎನ್ನುವಂತಹ ನಿಲುವು ಟ್ರಂಪ್ ನದ್ದು ಎಂಬಂತಾಗಿದೆ. ಅದರ ವರ್ತಮಾನದ ಪರಿಣಾಮವೇ ಇರಾನ್ ಅಧ್ಯಕ್ಷರ ಹತ್ಯೆ ಹಾಗೂ ಮುಂದುವರೆದಿರುವ ಇರಾನ್ – ಇಸ್ರೇಲ್ ಯುದ್ಧ…!
ಒಂದನೇ ವಿಶ್ವಯುದ್ದದ ನಂತರ ಅಸ್ತಿತ್ವಕ್ಕೆ ಬಂದ ಲೀಗ್ ಆಫ್ ನೇಷನ್ಸ್ ವಿಫಲವಾಗಿ ಎರಡನೇ ಮಹಾಯುದ್ದ ಸಂಭವಿಸಿತು. ಹಾಗಾಗಿ ಎರಡನೇ ವಿಶ್ವಯುದ್ಧ ಮುಗಿದ ಮೇಲೆ ಎಲ್ಲ ರಾಷ್ಟ್ರಗಳು ಪರಸ್ಪರ ಸಹಕಾರ ಮತ್ತು ಗೌರವದಿಂದ ನಡೆದುಕೊಳ್ಳುವ ಸಲುವಾಗಿ ವಿಶ್ವಸಂಸ್ಥೆಯನ್ನು ಸ್ಥಾಪಿಸಲಾಯಿತು. ಯಾವುದೇ ರಾಷ್ಟ್ರವಾಗಲೀ ಇತರೇ ದೇಶದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸುವುದಾಗಲೀ, ಆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದಾಗಲೀ ವಿಶ್ವಸಂಸ್ಥೆಯ ನಿಯಮದ ಉಲ್ಲಂಘನೆ. ಆದರೆ ಬರಬರುತ್ತಾ ವಿಶ್ವಸಂಸ್ಥೆ ಹಲ್ಲಿಲ್ಲದ ಹಾವಿನಂತಾಗಿ, ಅಭಿವೃದ್ಧಿಶೀಲ ಹಾಗೂ ಬಡರಾಷ್ಟ್ರಗಳ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದ್ದು ಮಾತ್ರವಲ್ಲದೆ ಅಮೇರಿಕಾದ ಕೈಗೊಂಬೆಯಂತಾಗಿರುವುದು ವಾಸ್ತವ ಸತ್ಯ. ಇಂತಹ ಸಂದರ್ಭದಲ್ಲಿ ವಿಟೋ ಅಧಿಕಾರವಿರುವ ರಾಷ್ಟ್ರಗಳ ನಡುವೆ ಹೊಂದಾಣಿಕೆಯಿಲ್ಲದೆ ಅವರವರ ಹಿತರಕ್ಷಣೆಗಷ್ಟೇ ಅವರ ಆಧ್ಯತೆಯಂತಾಗಿದೆ. ಬಲಾಢ್ಯರ ಶಕ್ತಿಪ್ರದರ್ಶನದಲ್ಲಿ ಬಡರಾಷ್ಟ್ರಗಳು ಹಾಗೂ ಪ್ರಗತಿಶೀಲ ದೇಶಗಳು ಬಲಿಯಾಗುತ್ತಿವೆ. ವರ್ತಮಾನದಲ್ಲಿ ವಿಶ್ವದಲ್ಲಿ ಅಮೇರಿಕಾದ ಇಚ್ಚೆಯಂತೆ ಈ ಜಗತ್ತು ನಡೆಯಬೇಕು ಎನ್ನುವಂತಾಗಿದೆ. ಅವರದ್ದೇ ಆದ ವ್ಯೂಹ ರಚಿಸಿಕೊಂಡು ಅವರ ಶತ್ರುರಾಷ್ಟ್ರಗಳ ಜೊತೆ ಸ್ನೇಹ ಬೆಳೆಸುವವರನ್ನು ಬೆದರಿಸುವ, ಧಮನಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಹೀಗಿರುವಾಗ ವಿಶ್ವಸಂಸ್ಥೆಯ ಅಗತ್ಯವಾದರೂ ಏನು…? ಈ ಪ್ರಕ್ಷುಬ್ದತೆ ಹಾಗೂ ಸರ್ವಾಧಿಕಾರದ ವಿರುದ್ಧ ಹೋರಾಡುವುದಾದರೂ ಹೇಗೆ ಮತ್ತು ಯಾರು? ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಅಮೆರಿಕವನ್ನು ಆಳಿದ ಹೆಚ್ಚಿನ ಅಧ್ಯಕ್ಷರು ಸರ್ವಾಧಿಕಾರಿಗಳಂತೆ ವರ್ತಿಸಿದವರು ಹಾಗೂ ತಮ್ಮ ಹಿತಾಸಕ್ತಿಯನ್ನು ಇತರ ರಾಷ್ಟ್ರಗಳ ಮೇಲೆ ಹೇರಿದವರು. ಅದರಲ್ಲೂ ಈಗಿನ ಅಧ್ಯಕ್ಷ ಟ್ರಂಪ್ ಇಡೀ ವಿಶ್ವವೇ ತನ್ನ ಅಣತಿಯಂತೆ ನಡೆಯಬೇಕೆಂಬ ಉತ್ಕಟತೆ ಹೊಂದಿರುವ ಮನುಷ್ಯ. ಯಾವ ದೇಶದಲ್ಲಿ ತೈಲ ನಿಕ್ಷೇಪಗಳಿವೆ, ಅದಿರು ನಿಕ್ಷೇಪಗಳಿವೆ, ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ದೊರೆಯಬಹುದು ಎಂಬಿತ್ಯಾದಿ ಅಂಶಗಳನ್ನಿಟ್ಟುಕೊಂಡು ಆ ರಾಷ್ಟ್ರವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಹಪಹಪಿಸುವ ಜಾಯಮಾನ ಟ್ರಂಪ್ ನದ್ದು. ಆತನ ತಾಳಕ್ಕೆ ಕುಣಿಯದಿದ್ದರೆ ಆ ದೇಶದ ಮೇಲೆ ನೇರ ಆಕ್ರಮಣ ಅಥವಾ ಅಲ್ಲಿ ಆಂತರಿಕ ಗಲಬೆ ಸೃಷ್ಟಿಸಿ ಅಲ್ಲಿ ತಮ್ಮ ಮಾತು ಕೇಳುವವರ ಕೈಗೆ ಅಧಿಕಾರ ಕೊಡುವ ಕೆಲಸ ಅಮೆರಿಕ ಮಾಡುತ್ತಿದೆ. ವೆನಿಜುವೆಲ್ಲಾದ ಅಧ್ಯಕ್ಷ ತನ್ನ ಮಾತು ಕೇಳಲಿಲ್ಲ ಎಂದು ಅವನನ್ನು ಕಿಡ್ನ್ಯಾಪ್ ಮಾಡಿ ತನ್ನಲ್ಲಿ ಬಂಧಿಸಿಟ್ಟಿರುವ ಟ್ರಂಪ್ ಇರಾನ್ ಅಧ್ಯಕ್ಷ 86ರ ಹರೆಯದ ಖಮೇನಿಯನ್ನು ನಿರ್ದಯವಾಗಿ ಹತ್ಯೆಗೈದಿದ್ದಾನೆ. ಈ ಸರಣಿ ಇನ್ನೂ ಮುಂದುವರೆಯುವುದರಲ್ಲಿ ಯಾವ ಸಂಶಯವೂ ಇಲ್ಲ. ಆ ದೇಶಗಳಲ್ಲಿ ತಮಗೆ ನಿಷ್ಠರಾಗಿರುವ ಗೊಂಬೆಗಳನ್ನು ತಂದು ಆಡಳಿತ ಚುಕ್ಕಾಣಿ ನೀಡುವ ಹುನ್ನಾರ ಈತನದ್ದು. ಇವನಿಗೆ ಇಸ್ರೇಲ್ ನ ಸರ್ವಾಧಿಕಾರಿ ನೆತನ್ಯಾಹು ಜೊತೆಯಾಗಿರುವುದು ಜಗತ್ತಿಗೆ ಇನ್ನಷ್ಟು ಆತಂಕವನ್ನುಂಟು ಮಾಡುತ್ತಿದೆ.

ಇಷ್ಟೆಲ್ಲ ಅಮೆರಿಕದ ಆಟಾಟೋಪ ನಡೆಯುತ್ತಿರುವಾಗ ಅಲಿಪ್ತ ನೀತಿ ಹೊಂದಿರುವ ಭಾರತ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ನಾವು ಗಮನಿಸಲೇಬೇಕು. ನಮ್ಮ ಪ್ರಧಾನಿ ಮೋದಿ ಈ ವರೆಗೂ ಇರಾನ್ ಅಧ್ಯಕ್ಷರ ಹತ್ಯೆಯನ್ನು ಖಂಡಿಸಿಲ್ಲ ಎನ್ನುವುದು ಅತ್ಯಂತ ಕಳವಳಕಾರಿ ವಿಚಾರ. ಏಕೆಂದರೆ ಇರಾನ್ ಒಂದು ಸಾರ್ವಭೌಮ ರಾಷ್ಟ್ರವಾಗಿದ್ದು, ಅಲ್ಲಿನ ಅಧ್ಯಕ್ಷರು ತಮ್ಮದೇ ಸಂವಿಧಾನದ ಅಡಿಯಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಅಣುಬಾಂಬ್ ತಯಾರಿಯ ಕುರಿತು ಅಮೆರಿಕ ಹಾಗೂ ಇಸ್ರೇಲ್ ಮಾಡುತ್ತಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳಿಲ್ಲ. ಅದೂ ಅಲ್ಲದೇ ಮೂರು ತಿಂಗಳ ಹಿಂದೆ ರಾತ್ರೋರಾತ್ರಿ ಶಂಕಿತ ಅಣು ಸ್ಥಾವರದ ಮೇಲೆ ದಾಳಿ ನಡೆಸಿ ಉಡಾಯಿಸಿರುವುದಾಗಿ ಇದೇ ಟ್ರಂಪ್ ಹೇಳಿಕೊಂಡಿದ್ದ. ಹಾಗಿರುವಾಗ ಖಮೇನಿಯನ್ನು ಹತ್ಯೆಗೈಯುವುದು ವಿಶ್ವಸಂಸ್ಥೆಯ ಆಶಯ, ನಿಯಮಗಳ ಮಾತ್ರವಲ್ಲ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಅಲ್ಲವೇ…? ಇದನ್ನು ರಷ್ಯಾ, ಚೀನಾದಂತೆ ಭಾರತ ಖಂಡಿಸಲೇಬೇಕಿತ್ತು. ಅದರಲ್ಲೂ ಇರಾನ್ ಭಾರತದ ಮಿತ್ರರಾಷ್ಟ್ರವೂ ಹೌದು, ತೈಲ ಸೇರಿದಂತೆ ಹತ್ತಾರು ವ್ಯಾಪಾರ ವ್ಯವಹಾರ ಎರಡು ದೇಶಗಳ ನಡುವೆ ದಶಕಗಳಿಂದ ನಡೆದುಕೊಂಡು ಬಂದಿದೆ. ಇಷ್ಟೆಲ್ಲ ಬಾಂಧವ್ಯ ಇದ್ದರೂ ಖಮೇನಿ ಹತ್ಯೆಯನ್ನು ಖಂಡಿಸಿ ಮೋದಿ ಒಂದೇ ಒಂದು ಟ್ವೀಟ್ ಕೂಡ ಮಾಡಿಲ್ಲ, ವಿದೇಶಾಂಗ ಇಲಾಖೆ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸದೇ ಮೌನವಾಗಿದೆ. ಇದರ ಬದಲಿಗೆ ಮೋದಿ ಅರಬ್ ರಾಷ್ಟ್ರಗಳಲ್ಲಿನ ಅಮೆರಿಕ ಯುದ್ದನೆಲೆಗಳ ಮೇಲೆ ಇರಾನ್ ಮಾಡಿದ ದಾಳಿಯ ಕುರಿತು ಅಲ್ಲಿನ ರಾಜರ ಜೊತೆ ಮಾತನಾಡಿದ್ದಾರೆ. ಇದೇ ಸಮಯದಲ್ಲಿ ಇಸ್ರೇಲ್ ಪ್ರಧಾನಿ ನೆತನ್ಯಾಹು ಭಾರತ ಇಸ್ರೇಲ್ ಜೊತೆಗೆ ನಿಂತಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದು ಮಾತ್ರವಲ್ಲದೆ ಭಾರತ ಯಹೂದಿಗಳಿಗೆ ಬೆಂಬಲ ನೀಡಿದೆ ಎಂಬಂತೆ ಟ್ವೀಟ್ ಮಾಡಿದ್ದಾರೆ. ಅವರ ಮಾತನ್ನು ಭಾರತ ಅಲ್ಲಗಳೆದಿಲ್ಲ ಎಂಬಲ್ಲಿಗೆ ಭಾರತ ಇಸ್ರೇಲ್ ಪರ ಇದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದೆ ಮೋದಿ ಸರಕಾರ.

ಎರಡು ವಿಶ್ವಯುದ್ಧಗಳ ಭೀಕರತೆ ಹಾಗೂ ಪ್ರಬಲ ರಾಷ್ಟ್ರಗಳ ಇತರೇ ರಾಷ್ಟ್ರಗಳನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದನ್ನು ಅರಿತೇ ಅಂದು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು 1954ರಲ್ಲಿ ಅಲಿಪ್ತ ನೀತಿಯನ್ನು ಜಾರಿಗೆ ತಂದರು. ಇದರ ಮುಖ್ಯಾಂಶವೆಂದರೆ ಯುದ್ಧ ಅಥವಾ ಸಂಘರ್ಷದ ಸಂದರ್ಭದಲ್ಲಿ, ಅಂದು ಹಾಗೂ ಇಂದೂ ಕೂಡ ಬಲಿಷ್ಠ ರಾಷ್ಟ್ರಗಳಾಗಿರುವ ಅಮೇರಿಕಾ ಹಾಗೂ ರಷ್ಯಾ (ಅಂದಿನ ಸೋವಿಯತ್ ಯೂನಿಯನ್)ಗಳಲ್ಲಿ ಯಾರ ಪರವೂ ನಿಲ್ಲದೆ ತಟಸ್ಥರಾಗಿರುವುದು. ಆ ಮೂಲಕ ಯಾವುದೇ ಗುಂಪಿನ ರಾಷ್ಟ್ರಗಳ ಜೊತೆಯೂ ಸಂಘರ್ಷ, ವೈರತ್ವವನ್ನು ಹುಟ್ಟು ಹಾಕಿಕೊಳ್ಳದೇ ಸೌಹಾರ್ಧತೆಯಿಂದ ದೇಶದ ಹಿತ ಕಾಯುವ ವಿದೇಶಾಂಗ ನೀತಿ ಈ ವರೆಗೆ ನಡೆದುಕೊಂಡು ಬಂದಿದೆ. ಆದರೆ ಮೋದಿ ಈ ಜಾಣನಡೆಯನ್ನು ಮುರಿದು ಇಸ್ರೇಲ್ ಜೊತೆ ನಾವಿದ್ದೇವೆ ಎನ್ನುವ ಸಂದೇಶವನ್ನು ಪರೋಕ್ಷವಾಗಿ ಸಾರುವ ಮೂಲಕ ಭಾರತ ಅಮೆರಿಕದ ಗುಂಪಿನಲ್ಲಿ ಗುರುತಿಸಿಕೊಂಡಂತೆ ಚಿತ್ರಣ ಮೂಡಿಸಿದ್ದಾರೆ. ಇದರ ಪರಿಣಾಮ ಚೀನಾ, ರಷ್ಯಾ ಸೇರಿದಂತೆ ಅಮೆರಿಕದ ಶತ್ರು ರಾಷ್ಟ್ರಗಳು ಭಾರತವನ್ನು ತಮ್ಮ ಶತ್ರುರಾಷ್ಟ್ರವಾಗಿ ಪರಿಗಣಿಸುವಂತಾಗಿದೆ. ಹಾಗಂತ ಅಮೆರಿಕ ನಮ್ಮ ಶತ್ರುರಾಷ್ಟ್ರವಾದ ಪಾಕಿಸ್ತಾನವನ್ನು ಭಾರತಕ್ಕಿಂತ ಹೆಚ್ಚು ಆಪ್ತವಾಗಿ ಅಪ್ಪಿಕೊಂಡಿದೆ.
ಹಾಗಾದರೆ ಇರಾನ್ – ಇಸ್ರೇಲ್ ಸಂಘರ್ಷದಲ್ಲಿ ಭಾರತ ಶಾಂತಿ ಸ್ಥಾಪನೆಗೆ ಕರೆ ಕೊಡುವುದು ಬಿಟ್ಟು ಇಸ್ರೇಲ್ ಜೊತೆ ಏಕೆ ನಿಲ್ಲುತ್ತಿದೆ ಎನ್ನುವ ವಿಚಾರ ಕುತೂಹಲಕಾರಿ. ಅದಕ್ಕೆ ಮುಖ್ಯ ಕಾರಣ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್ ಗೆ ಹೆದರಿರುವುದು. ಹೌದು ಇತ್ತೀಚೆಗೆ ಟ್ರಂಪ್ ಮೋದಿಯ ರಾಜಕೀಯ ಭವಿಷ್ಯವನ್ನು ನಾಶ ಮಾಡಬಲ್ಲೆ ಎಂದಿದ್ದ. ಅದರ ನಂತರ ಮೋದಿ ಸರಕಾರ ಭಾರತದ ರೈತರ ಪಾಲಿಗೆ ಮರಣ ಶಾಸನವಾಗಬಲ್ಲ ಅಮೆರಿಕ – ಭಾರತ ವ್ಯಾಪಾರ ಒಪ್ಪಂದಕ್ಕೆ ಚಕಾರ ಎತ್ತದೆ ಸಹಿ ಮಾಡಿತ್ತು. ಮೋದಿಯ ಈ ನಡೆಗೆ ಇಂಬು ಕೊಡುವಂತೆ ಬಹಿರಂಗವಾದ ಎಫ್ ಸ್ಟಿನ್‌ಫೈಲ್ ನಲ್ಲಿ ಇಸ್ರೇಲ್ ನಲ್ಲಿ 2017ರಲ್ಲಿ ಮೋದಿ ಅಮೆರಿಕದ ಅಂದಿನ ಅಧ್ಯಕ್ಷರಾಗಿದ್ದ ಇದೇ ಟ್ರಂಪ್ ಎದುರು ಹಾಡಿ, ಕುಣಿದು ಖುಷಿ ಪಡಿಸಿದ್ದರು ಎಂಬ ಉಲ್ಲೇಖವಿದೆ. ಅಂದರೆ ಮೋದಿ ಟ್ರಂಪ್ ಗೆ ಹೆದರುತ್ತಿದ್ದಾರೆ ಹಾಗೂ ತಮ್ಮ ಉಳಿವಿಗಾಗಿ ಭಾರತದ ವಿದೇಶಾಂಗ ನೀತಿಯನ್ನು ಬಲಿಕೊಟ್ಟದ್ದು ಮಾತ್ರವಲ್ಲದೆ ನಮ್ಮ ರೈತರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆಯೇ..? ಹಾಗಾಗಿಯೇ ಬಹುಶ: ಅಮೆರಿಕದಿಂದ ಹತ್ಯೆಗೀಡಾದ ಖಮೇನಿಯ ಸಾವಿಗೆ ಪ್ರತಿಕ್ರಿಯಿಸದೆ ಮೋದಿಬಾಬಾ ಮೌನವಾಗಿದ್ದಾರೆ ಎನ್ನುವ ಆರೋಪವೂ ಇದೆ.

ಅತ್ತ ಮೋದಿ ಇಸ್ರೇಲ್ ಭೇಟಿಯ ಅನಂತರ ಎರಡೇ ದಿನದಲ್ಲಿ ಇಸ್ರೇಲ್ ಮೇಲೆ ಅಪ್ರಚೋದಿತ ಇಸ್ರೇಲ್ – ಅಮೆರಿಕ ಜಂಟಿ ಆಕ್ರಮಣ ನಡೆದದ್ದು ಕಾಕತಾಳೀಯ ಎನ್ನಬಹುದು. ತಮ್ಮ ಪರಮಾಪ್ತ ಗೌತಮ ಅದಾನಿ ಹಾಗೂ ಆತನ ಅಳಿಯ ಸಾಗರ ಅದಾನಿಯ ಭ್ರಷ್ಟಾಚಾರದ ಪ್ರಕರಣ ಅಮೆರಿಕದ ನ್ಯಾಯಲಯದಲ್ಲಿದೆ. ಒಂದು ವೇಳೆ ಅವರಿಬ್ಬರು ಅಪರಾಧಿಗಳೆಂದು ಘೋಷಿಸಿದರೆ ಅವರನ್ನು ಅಮೇರಿಕಾಕ್ಕೆ ಭಾರತ ಒಪ್ಪಿಸಲೇಬೇಕು. ಅಂತಹ ದುರ್ದಿನಗಳು ತನ್ನ ಪಾಲಿಗೆ ಬರಬಾರದೆಂಬ ಮುನ್ನೆಚ್ಚರಿಕೆಗಾಗಿ ಮೋದಿ ದೇಶದ ಹಿತವನ್ನು ಲೆಕ್ಕಿಸದೇ ಹೀಗೆ ವರ್ತಿಸುತ್ತಿದ್ದಾರೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಇದೆಲ್ಲದರ ನಡುವೆ ಮೋದಿ ಭಕ್ತರು ಖಮೇನಿ ಹತ್ಯೆಯನ್ನು ಸಂಭ್ರಮಿಸುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿದ್ದೇವೆ. ಕಾರಣ ಇಷ್ಟೇ ಖಮೇನಿ ಮುಸಲ್ಮಾನ್ ನಾಯಕ ಎಂಬುದು. ಟ್ರಂಪ್ ಹೇಗೆ ಅಮೆರಿಕದ ಪರ ಹೋರಾಡುತ್ತಾರೋ, ನೇತನ್ಯಾಹು ಹೇಗೆ ಇಸ್ರೇಲ್ ಪರ ಕಾದಾಡ್ತಾರೊ ಹಾಗೆಯೇ ತನ್ನ ದೇಶ ಇರಾನ್ ಗಾಗಿ ಖಮೇನಿ ಹೋರಾಡಿದ್ದಾರೆ, ದೇಶಕ್ಕಾಗಿ ಅಂಜದೆ, ಶರಣಾಗದೆ ಧೈರ್ಯದಿಂದ ಶತ್ರುಗಳ ಷಡ್ಯಂತ್ರದ ಆಕ್ರಮಣಕ್ಕೆ ಬಲಿಯಾಗಿದ್ದಾರೆ. ಅವರ ದೇಶದ ಮಟ್ಟಿಗೆ ಅವರು ಹುತಾತ್ಮರಾಗಿದ್ದಾರೆ. ಅವರೆಂದಿಗೂ ಭಾರತದ ವಿರುದ್ಧ ನಿಂತಿಲ್ಲ, ಮೋದಿಗೆ ಬೆದರಿಕೆ ಹಾಕಿಲ್ಲ, ಭಾರತದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮತ್ತೊಂದು ವಿಶೇಷ ಎಂದರೆ ಖಮೇನಿಯವರ ಪೂರ್ಜರು ಇದ್ದದ್ದು ಉತ್ತರಪ್ರದೇಶದ ಬಾರಬಂಕಿ ಜಿಲ್ಲೆಯ ಕಿಂತೂರಿನಲ್ಲಿ. ಆದರೂ ಅವರ ಸಾವಿನ ಕುರಿತು ಒಂದು ವಿಷಾದ ವ್ಯಕ್ತಪಡಿಸುವಷ್ಟು ಸೌಜನ್ಯತೆ ದೇಶದ ಪ್ರಧಾನಿಗೆ ಇಲ್ಲದೆ ಹೋದದ್ದು ದುರದೃಷ್ಟಕರ.
ಇದನ್ನೂ ಓದಿ ಪ್ರೀಮಿಯಂ ಲೇಖನ | ‘ಶಿಯಾ-ಸುನ್ನಿ’ಯಾಗಿ ಚದುರಿದ ಇಸ್ಲಾಂ; ಲಾಭ ಮಾಡಿಕೊಂಡವರಾರು?
ಎಲ್ಲದಕ್ಕಿಂತ ಮೊದಲು ಮಾನವೀಯತೆ ಎಂಬುದನ್ನು ಮರೆತಿರುವ ನಮ್ಮ ಪ್ರಧಾನಿಗಳು ಮಾದರಿ ವಿದೇಶಾಂಗ ನೀತಿಯನ್ನೇ ಗಾಳಿಗೆ ತೂರಿ ಅಮೆರಿಕ ಇಸ್ರೇಲ್ ಪರ ನಿಂತಿದ್ದಾರೆ. ಅವರ ಪರ ನಿಂತದ್ದು ಕೇವಲ ಮೋದಿ ಅಲ್ಲ, ಇಡೀ ಭಾರತ ಎಂಬಂತೆ ಜಾಗತಿಕವಾಗಿ ಗುರುತಿಸಲಾಗುತ್ತದೆ. ಇದರಿಂದ ಅಮೇರಿಕಾ-ಇಸ್ರೇಲ್ ದೇಶಗಳ ಶತ್ರುಗಳಿಗೆ ಭಾರತವೂ ಈಗ ಶತ್ರುರಾಷ್ಟ್ರ ಆಗಿ ಪರಿವರ್ತನೆಯಾಗುತ್ತಿದೆ. ಇಷ್ಟಕ್ಕೂ ಈ ಯುದ್ಧವನ್ನು ಧಾರ್ಮಿಕವಾಗಿ ವಿಶ್ಲೇಷಿಸುವುದಾದರೆ ಶಿಯಾ ಮುಸ್ಲಿಂ ನಾಯಕನೋರ್ವನ ಮೇಲೆ ಕ್ರಿಶ್ಚಿಯನ್ ಹಾಗೂ ಯಹೂದಿ ನಾಯಕರ ಆಕ್ರಮಣ… ಅಲ್ಲಿ ತಾನು ಮಹಾ ಹಿಂದೂ ಎಂದು ಹೇಳಿಕೊಳ್ಳುವ ಮೋದಿಯವರಿಗೆ ಏನು ಕೆಲಸ ಅಲ್ಲವೇ….? ಒಂದೇ ಮೂಲದಿಂದ ಬಂದಿರುವ ಈ ಮೂರು ಸಮುದಾಯಗಳು ದಾಯಾದಿಗಳಂತೆ, ಅವರ ನಡುವಿನ ಕಲಹದಲ್ಲಿ ಹೊರಗಿನವರ ಹಸ್ತಕ್ಷೇಪ, ಬೆಂಬಲ ಅನಗತ್ಯ ಹಾಗೂ ಅಪ್ರಸ್ತುತ. ಒಟ್ಟಾರೆಯಾಗಿ ಹೇಳುವುದಾದರೆ ವಿಶ್ವದಲ್ಲಿ ಮಾನವೀಯತೆ ಸಾಯುತ್ತಿದ್ದರೂ, ಶಾಂತಿ, ಅಹಿಂಸೆಯನ್ನು ಬೋಧಿಸಬೇಕಾದ ಭಾರತ ಕಣ್ಣಿದ್ದು ಕುರುಡಾಗಿದೆ, ಬಾಯಿ ಇದ್ದೂ ಮೌನವಾಗಿದೆ. ಹಾಗಾದರೆ ಹಿಂಸೆಯನ್ನು ಖಂಡಿಸದೆ, ಯುದ್ಧವನ್ನು ಪ್ರೋತ್ಸಾಹಿಸುವುದೇ ವಿಶ್ವಗುರುವಿನ ಸಾಧನೆಯೇ…!?





