ಸಾಮಾನ್ಯವಾಗಿ ನಗರಸಭೆಗಳ ಉದ್ದೇಶ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು. ಆದರೆ ಇಳಕಲ್ ನಗರದಲ್ಲಿರುವ ಬಹುತೇಕ ಎಲ್ಲಾ ಸಾರ್ವಜನಿಕ ಮೂತ್ರಾಲಯಗಳು ಗಬ್ಬೆದ್ದು ನಾರುತಿದ್ದು, ಜನಸಾಮಾನ್ಯರಿಗೆ ತೀವ್ರ ತೊಂದರೆ ಉಂಟುಮಾಡುತ್ತಿರುವುದಾಗಿ ಆರೋಪಗಳು ಕೇಳಿ ಬರುತ್ತಿವೆ. ಈ ಗಂಭೀರ ಸಮಸ್ಯೆಯತ್ತ ಇಳಕಲ್ ನಗರಸಭೆ ಕಣ್ತಪ್ಪಿಯೂ ನೋಡುತ್ತಿಲ್ಲ ಎಂದು ಸಾರ್ವಜನಿಕ ಆಕ್ರೋಶ ಹೆಚ್ಚಾಗಿದೆ.
ನಗರದ ಪ್ರಮುಖ ಬಸ್ ನಿಲ್ದಾಣಗಳು, ಮಾರುಕಟ್ಟೆ ಪ್ರದೇಶಗಳು ಹಾಗೂ ಜನಸಂದಣಿ ಇರುವ ಸ್ಥಳಗಳಲ್ಲಿ ಇರುವ ಮೂತ್ರಾಲಯಗಳಲ್ಲಿ ಸ್ವಚ್ಛತೆ ಎಂಬುದೇ ಇಲ್ಲದಂತಾಗಿದೆ. ದುರ್ವಾಸನೆಯಿಂದಾಗಿ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಬಳಸಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾರ್ವಜನಿಕ ಆರೋಗ್ಯಕ್ಕೂ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇಳಕಲ್ ನಗರದ ಜನಸಂಖ್ಯೆ ಒಂದು ಲಕ್ಷ ದಾಟಿದ್ದು, ಜೊತೆಗೆ ತಾಲೂಕಿನ ವಿವಿಧ ಗ್ರಾಮಗಳಿಂದ ನಿತ್ಯವೂ ಸಾವಿರಾರು ಜನರು ವ್ಯಾಪಾರ, ಉದ್ಯೋಗ, ಶಿಕ್ಷಣ ಹಾಗೂ ಚಿಕಿತ್ಸೆಗಾಗಿ ನಗರಕ್ಕೆ ಆಗಮಿಸುತ್ತಿದ್ದಾರೆ. ಇಷ್ಟೊಂದು ಭಾರೀ ಜನಸಂಖ್ಯೆ ಮತ್ತು ದಿನನಿತ್ಯದ ಜನಸಂದಣಿಯ ನಡುವೆಯೂ, ನಗರದಲ್ಲಿ ಸಾರ್ವಜನಿಕರಿಗೆ ಲಭ್ಯವಿರುವುದು ಕೇವಲ ಮೂರು ಸಾರ್ವಜನಿಕ ಮೂತ್ರಾಲಯಗಳು ಮಾತ್ರ ಎಂಬುದು ಸದ್ಯ ಗಂಭೀರ ಚರ್ಚೆಗೆ ಕಾರಣವಾಗಿದೆ.
ಇಳಕಲ್ ನಗರದಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಮೂತ್ರಾಲಯಗಳು ಪುರುಷರಿಗೆ ಮಾತ್ರ ಸೀಮಿತವಾಗಿದ್ದು, ಮಹಿಳೆಯರಿಗಾಗಿ ಪ್ರತ್ಯೇಕ ಸಾರ್ವಜನಿಕ ಮೂತ್ರಾಲಯವೇ ಇಲ್ಲ ಎಂಬುದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರದಲ್ಲಿ ಮಹಿಳಾ ಶೌಚಾಲಯಗಳ ಕೊರತೆ ನಾಗರಿಕ ಸೌಲಭ್ಯಗಳ ಮೇಲೆ ದೊಡ್ಡ ಪ್ರಶ್ನೆ ಎತ್ತಿದೆ.
ನಗರಸಭೆ ಎದುರು, ಪಾಂಡಿಪಲ್ಲೆ ಮಾರುಕಟ್ಟೆ ಹಾಗೂ ನಂಬರ್-10 ಸರ್ಕಾರಿ ಶಾಲೆಯ ಸಮೀಪ ಇರುವ ಸಾರ್ವಜನಿಕ ಮೂತ್ರಾಲಯಗಳೂ ಸಹ ಸಮರ್ಪಕ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿವೆ. ದುರ್ವಾಸನೆಯಿಂದಾಗಿ ಸಾರ್ವಜನಿಕರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು, ಈ ಮೂತ್ರಾಲಯಗಳನ್ನು ಬಳಸದಂತಾಗಿದೆ. ಇದರಿಂದ ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತಿರುವುದು ಸ್ಪಷ್ಟವಾಗಿದೆ. ವಿಚಿತ್ರವೆಂದರೆ, ನಗರಸಭೆಯ ಎದುರಲ್ಲೇ ಇರುವ ಮೂತ್ರಾಲಯವನ್ನೇ ಸ್ವಚ್ಛವಾಗಿ ನಿರ್ವಹಿಸಲು ವಿಫಲವಾಗಿರುವ ನಗರಸಭೆ ಅಧಿಕಾರಿಗಳು, ಇನ್ನು ನಗರದ ಇತರ ಭಾಗಗಳಲ್ಲಿ ಇರುವ ಸಾರ್ವಜನಿಕ ಮೂತ್ರಾಲಯಗಳ ಸ್ಥಿತಿಗತಿಗಳ ಕಡೆಗೆ ಕಣ್ಣೆತ್ತಿ ನೋಡುವರೇ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.

ಸಾರ್ವಜನಿಕರಿಗಾಗಿ ಮೂತ್ರಾಲಯ ಸೌಲಭ್ಯ ಕಲ್ಪಿಸುವುದಾಗಿ ಹೇಳಿ ನಗರಸಭೆ ಸಾರ್ವಜನಿಕರಿಂದ ತೆರಿಗೆ ವಸಲಿ ಮಾಡುತ್ತದೆ. ತೆರಿಗೆ ವಸೂಲಿ ಮಾಡಲು ಮಾತ್ರ ಆಸಕ್ತಿ ತೋರುವ ನಗರಸಭೆ, ಶುಚಿತ್ವ ಮೂತ್ರಾಲಯವನ್ನು ಸಾರ್ವಜನಿಕರಿಗೆ ಒದಗಿಸಿವ ಆಸಕ್ತಿಯನ್ನೂ ತೋರಬೇಕಿದೆ. ಸ್ವಚ್ಛ ಭಾರತದ ಯೋಜನೆಯಡಿ ಸರಕಾರದಿಂದ ಅನುದಾನ ಪಡೆಯುತ್ತಿರುವ ನಗರಸಭೆ, ಸಾರ್ವಜನಿಕರಿಗೆ ಉಚಿತ ಬೇಡ, ಹಣ ಕೊಟ್ಟಾದರೂ ಉಪಯೋಗಿಸುವ ಮೂತ್ರಾಲಯಗಳ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಪುರುಷರ ಮೂತ್ರಾಯಲಯದ ಪರಿಸ್ಥಿತಿ ಹೀಗಾದರೆ, ಮಹಿಳೆಯರ ಮೂತ್ರಾಲಯದ ಸಮಸ್ಯೆ ಕತೆ ಕೇಳುವಂತೆಯೇ ಇಲ್ಲ. ನಗರದಲ್ಲಿ ಮಹಿಳೆಯರಿಗಾಗಿ ಒಂದೇ ಒಂದು ಶೌಚಾಲಯ ಅಥವಾ ಮೂತ್ರಾಲಯಗಳಿಲ್ಲ. ತಾಲೂಕು ಕೇಂದ್ರವಾದ ಇಳಕಲ್ ನಗರಕ್ಕೆ ವಿವಿಧ ಕೆಲಸಗಳಿಗಾಗಿ ಪುರುಷರಷ್ಟೇ ಮಹಿಳೆಯರು ಬರುತ್ತಾರೆ. ಉಚಿತ ಪ್ರಯಾಣ ಆರಂಭದ ಬಳಿಕವಂತೂ ಪುರುಷರ ದುಪ್ಪಟ್ಟು ಮಹಿಳಾ ಪ್ರಯಾಣಿಕರು ನಗರಕ್ಕೆ ಬರುತ್ತಿದ್ದಾರೆ. ಪರಸ್ಥಳದಿಂದ ಬಂದ ಮಹಿಳೆಯರು ಮೂತ್ರ ಮಾಡಲು ಅನಿವಾರ್ಯವಾಗಿ ಸಂದಿಗೊಂದಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶೌಚಾಲಯ ಇಲ್ಲದಿರುವುದರಿಂದ ನೈಸರ್ಗಿಕ ಕರೆ ತೀರಿಸಲು ಹೆಣಗಾಡುವಂತಾಗಿದೆ. ನಗರಸಭೆ ಜನಪ್ರತಿನಿಧಿಗಳ ಅವಧಿ ಮುಕ್ತಾಯವಾಗಿ ಅಧಿಕಾರಿಗಳ ಆಡಳಿತ ಇದ್ದು, ಸಾರ್ವಜನಿಕರ ಸಮಸ್ಯೆ ಆಲಿಸುವವರೇ ಇಲ್ಲದಂತಾಗಿದೆ. ಯಾರಿಗೆ ಸಮಸ್ಯೆ ಹೇಳಿಕೊಳ್ಳುವುದು ಸಾರ್ವಜನಿಕರಿಗೆ ದಾರಿ ತೋರದಂತಾಗಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು ಕಚೇರಿಯಲ್ಲಿ ಕೂಡುವುದನ್ನು ಬಿಟ್ಟು ನಗರದಲ್ಲಿ ಅಡ್ಡಾಡಿ ಸಾರ್ವಜನಿಕರ ಸಮಸ್ಯೆ ಆಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಈದಿನ. ಕಾಂನೊಂದಿಗೆ ಮಾತನಾಡಿದ ಶಿಲ್ಪಾ, ಇಳಕಲ್ ನಗರದ ಪ್ರಮುಖ ಕೇಂದ್ರವಾದ ಕಂಠೀ ವೃತ್ತದಲ್ಲಿ ಮೂತ್ರಾಲಯ ಸಮಸ್ಯೆ ಬಹಳಷ್ಟು ಇದೆ. ಹೊರಗಡೆಯಿಂದ ಬರುವ ಸಾರ್ವಜನಿಕರು, ಮಹಿಳೆಯರು ಮೂತ್ರ ಮಾಡಲು ಪರದಾಡುತ್ತಿದ್ದಾರೆ. ನಗರಸಭೆ ಹಣಕೊಟ್ಟು ಬಳಕೆ ಮಾಡುವ ಶೌಚಾಲಯದ ವ್ಯವಸ್ಥೆಯನ್ನಾದರೂ ಮಾಡಬೇಕು” ಎನ್ನುತ್ತಾರೆ.
ಇದನ್ನೂ ಓದಿ: ಬಾಗಲಕೋಟೆ | ವಿವಾಹೇತರ ಸಂಬಂಧದ ಅನುಮಾನ; ಪತ್ನಿಯ ತಲೆ ಬೋಳಿಸಿದ ವಿಕೃತ ಪತಿ
ನಗರಸಭೆ ಪೌರಾಯುಕ್ತರಾದ ಶ್ರೀನಿವಾಸ್ ಜಾಧವ್ ಮಾತನಾಡಿ, “ನಗರದಲ್ಲಿ ಮೂತ್ರಾಲಯದ ಕೊರತೆಯ ಬಗ್ಗೆ ನಮ್ಮ ಗಮನಕ್ಕೂ ಬಂದಿದೆ. ಸಾರ್ವಜನಿಕರಿಂದಲೂ ಅನೇಕರು ಮನವಿ ಕೊಟ್ಟಿದ್ದಾರೆ. ಈ ವರ್ಷದ ಬಜೆಟ್ ನಲ್ಲಿ ಇದಕ್ಕಾಗಿ ಅನುದಾನ ಮೀಸಲಿಟ್ಟು ಮೂತ್ರಾಲಯಗಳ ಸಂಖ್ಯೆ ಹೆಚ್ಚಿಸಲಾಗುವುದು. ಈಗಿರುವ ಮೂತ್ರಾಲಯಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು” ಎಂದರು.
ತಡಮಾಡದೇ ಮಹಿಳೆಯರಿಗೆ ಪ್ರತ್ಯೇಕ ಹಾಗೂ ಸುರಕ್ಷಿತ ಮೂತ್ರಾಲಯಗಳ ನಿರ್ಮಾಣ, ಇರುವ ಮೂತ್ರಾಲಯಗಳ ತುರ್ತು ಸ್ವಚ್ಛತೆ, ನಿಯಮಿತ ನಿರ್ವಹಣೆ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸುವುದು ಅಧಿಕಾರಿಗಳ ಮುಂದಿರುವ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಇದು ಆರೋಗ್ಯ ಸಂಕಟವಾಗಿ, ಸಾಮಾಜಿಕ ಅವಮಾನವಾಗಿ ಮತ್ತು ಆಡಳಿತದ ವಿರುದ್ಧ ಜನಾಕ್ರೋಶವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಸಾರ್ವಜನಿಕ ಸೌಲಭ್ಯಗಳು ದಯೆಯಿಂದಲ್ಲ, ಹಕ್ಕಿನಿಂದ ದೊರೆಯಬೇಕಾದವು ಎಂಬುದನ್ನು ನಗರಸಭೆ ಮರೆಯಬಾರದು.





