ಬಾಂಗ್ಲಾದೇಶ | ದೇಶದ ಉದಯವನ್ನೇ ವಿರೋಧಿಸಿದ್ದ ಪಕ್ಷಕ್ಕೆ ಪ್ರತಿಪಕ್ಷ ಸ್ಥಾನ

Date:

ಬಾಂಗ್ಲಾದೇಶದ ಜಾತ್ಯತೀತ ಮೌಲ್ಯಗಳಿಗೆ ಜಮಾಅತ್ ಇಂದಿಗೂ ಸವಾಲಾಗಿದೆ. ಇಸ್ಲಾಮಿಕ್ ರಾಷ್ಟ್ರದ ಪರಿಕಲ್ಪನೆಯೇ ಅವರ ಮೂಲ ಸಿದ್ಧಾಂತ. ಅವಾಮಿ ಲೀಗ್ ಇಲ್ಲದ ಸಂಸತ್ತಿನಲ್ಲಿ ಅಥವಾ ಮುಂಬರುವ ಚುನಾವಣೆಯಲ್ಲಿ ಜಮಾಅತ್ ನಿರ್ಣಾಯಕ ಪಾತ್ರ ವಹಿಸುವುದು ಖಚಿತ

ಇತಿಹಾಸ ಚಕ್ರವು ವಿಚಿತ್ರ ತಿರುವುಗಳನ್ನು ಪಡೆಯುತ್ತದೆ ಎನ್ನುವುದಕ್ಕೆ ಬಾಂಗ್ಲಾದೇಶದ ಪ್ರಸ್ತುತ ರಾಜಕೀಯ ವಿದ್ಯಮಾನಗಳೇ ಸಾಕ್ಷಿ. 1971ರಲ್ಲಿ ಯಾವ ಪಕ್ಷವು ಬಾಂಗ್ಲಾದೇಶದ ಉದಯವನ್ನೇ ವಿರೋಧಿಸಿತ್ತೋ, ಯಾವ ಸಂಘಟನೆಯು ಪಾಕಿಸ್ತಾನದ ಅಖಂಡತೆಯನ್ನು ಪ್ರತಿಪಾದಿಸಿ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಂದೂಕು ಹಿಡಿದಿತ್ತೋ, ಅದೇ ‘ಜಮಾಅತೆ ಇಸ್ಲಾಮಿ’ಇಂದು ಬಾಂಗ್ಲಾದೇಶದ ರಾಜಕೀಯದ ಕೇಂದ್ರಬಿಂದುವಾಗಿದೆ. ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಆಡಳಿತದ ಪತನದ ನಂತರ ಸೃಷ್ಟಿಯಾಗಿರುವ ರಾಜಕೀಯ ಶೂನ್ಯತೆಯನ್ನು ತುಂಬಲು, ದಶಕಗಳಿಂದ ಅಂಚಿನಲ್ಲಿದ್ದ ಈ ಬಲಪಂಥೀಯ ಪಕ್ಷವು ಸಜ್ಜಾಗಿದೆ.

ನಿಷೇಧ, ಯುದ್ಧಾಪರಾಧಗಳ ತೀರ್ಪು ಮತ್ತು ಗಲ್ಲು ಶಿಕ್ಷೆಗಳ ಸರಮಾಲೆಯ ನಡುವೆಯೂ ಈ ಪಕ್ಷವು ರಾಜಕೀಯವಾಗಿ ಮರುಹುಟ್ಟು ಪಡೆದಿರುವುದು ದಕ್ಷಿಣ ಏಷ್ಯಾದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿದೆ. 1971ರಿಂದ ಇಲ್ಲಿಯವರೆಗಿನ ಜಮಾಅತೆ ಇಸ್ಲಾಮಿಯ ಈ ಪಯಣ ಹೂವಿನ ಹಾದಿಯಾಗಿರದೆ, ರಕ್ತಸಿಕ್ತ ಮತ್ತು ವಿವಾದಾತ್ಮಕ ಅಧ್ಯಾಯಗಳಿಂದ ಕೂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಜಮಾಅತೆ ಇಸ್ಲಾಮಿಯ ಇತಿಹಾಸವನ್ನು ಕೆದಕಿದರೆ ಸಿಗುವುದು 1971ರ ವಿಮೋಚನಾ ಯುದ್ಧದ ಕರಾಳ ಪುಟಗಳು. ಅಂದು ಪಾಕಿಸ್ತಾನದಿಂದ ಬಾಂಗ್ಲಾದೇಶ (ಅಂದಿನ ಪೂರ್ವ ಪಾಕಿಸ್ತಾನ) ಬೇರೆಯಾಗುವುದನ್ನು ಈ ಪಕ್ಷ ಉಗ್ರವಾಗಿ ವಿರೋಧಿಸಿತ್ತು. ಇದು ಇಸ್ಲಾಂನ ಏಕತೆಗೆ ಧಕ್ಕೆ ಎಂಬುದು ಅವರ ವಾದವಾಗಿತ್ತು. ಅಷ್ಟೇ ಅಲ್ಲ, ಪಾಕಿಸ್ತಾನದ ಸೇನೆಗೆ ನೆರವಾಗಲು ‘ರಜಾಕರ್’, ‘ಅಲ್-ಬದರ್’ ಮತ್ತು ‘ಅಲ್-ಶಮ್ಸ್’ ನಂತಹ ಅರೆಸೇನಾ ಪಡೆಗಳನ್ನು ರಚಿಸಿತ್ತು. ಈ ಪಡೆಗಳು ಸ್ವಾತಂತ್ರ್ಯ ಹೋರಾಟಗಾರರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದವು ಎಂಬ ಆರೋಪ ಇಂದಿಗೂ ಅವರ ಮೇಲಿದೆ. ಬಾಂಗ್ಲಾದೇಶ ಸ್ವತಂತ್ರಗೊಂಡ ತಕ್ಷಣ, ಮೊದಲ ಸರ್ಕಾರವು ಜಮಾಅತೆ ಇಸ್ಲಾಮಿಯನ್ನು ರಾಜಕೀಯವಾಗಿ ನಿಷೇಧಿಸಿತ್ತು.

ಸ್ವತಂತ್ರ ಬಾಂಗ್ಲಾದೇಶದಲ್ಲಿ ಅಸ್ತಿತ್ವವನ್ನೇ ಕಳೆದುಕೊಂಡಿದ್ದ ಜಮಾಅತ್‌ಗೆ ಆಮ್ಲಜನಕ ಸಿಕ್ಕಿದ್ದು 1975ರಲ್ಲಿ ಶೇಖ್ ಮುಜಿಬುರ್ ರೆಹಮಾನ್ ಅವರ ಹತ್ಯೆಯ ನಂತರ. ಜನರಲ್ ಜಿಯಾವುರ್ ರೆಹಮಾನ್ ಮತ್ತು ನಂತರದ ಸೇನಾ ಆಡಳಿತಗಾರರು ಧರ್ಮಧಾರಿತ ರಾಜಕೀಯಕ್ಕಿದ್ದ ನಿಷೇಧವನ್ನು ತೆಗೆದುಹಾಕಿದರು. ಇದು ಜಮಾಅತ್ ಪಾಲಿಗೆ ವರದಾನವಾಯಿತು. ಪಾಕಿಸ್ತಾನಕ್ಕೆ ಪರಾರಿಯಾಗಿದ್ದ ಗುಲಾಮ್ ಅಜಮ್ ಅವರಂತಹ ನಾಯಕರು ಮರಳಿ ಬಂದು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಆರಂಭಿಸಿದರು. ಮಸೀದಿಗಳು ಮತ್ತು ಮದ್ರಸಾಗಳ ಮೂಲಕ ತಮ್ಮ ಜಾಲವನ್ನು ವಿಸ್ತರಿಸಿದರು.

1990ರ ದಶಕದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾದಾಗ, ಜಮಾಅತೆ ಇಸ್ಲಾಮಿ ನಿರ್ಣಾಯಕ ಶಕ್ತಿಯಾಗಿ ಬೆಳೆದಿತ್ತು. ಏಕಾಂಗಿಯಾಗಿ ಅಧಿಕಾರ ಹಿಡಿಯುವಷ್ಟು ಶಕ್ತಿ ಇಲ್ಲದಿದ್ದರೂ, ಸರ್ಕಾರ ರಚನೆಗೆ ಇವರ ಬೆಂಬಲ ಅನಿವಾರ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿಎನ್‌ಪಿ) ಜೊತೆ ಮೈತ್ರಿ ಮಾಡಿಕೊಂಡ ಜಮಾಅತ್, 2001-2006ರ ಅವಧಿಯಲ್ಲಿ ಸಮ್ಮಿಶ್ರ ಸರ್ಕಾರದ ಭಾಗವಾಯಿತು. ಯುದ್ಧಾಪರಾಧದ ಆರೋಪವಿದ್ದ ನಾಯಕರೇ ಮಂತ್ರಿಗಳಾಗಿ, ರಾಷ್ಟ್ರಧ್ವಜ ಇರುವ ಕಾರುಗಳಲ್ಲಿ ಓಡಾಡಿದ್ದು ಬಾಂಗ್ಲಾದೇಶದ ಇತಿಹಾಸದ ದೊಡ್ಡ ವಿಪರ್ಯಾಸವಾಗಿತ್ತು.

2008ರಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ, ಜಮಾಅತ್ ಪಾಲಿಗೆ ಕತ್ತಲ ಯುಗ ಆರಂಭವಾಯಿತು. 1971ರ ಯುದ್ಧಾಪರಾಧಗಳ ವಿಚಾರಣೆಗೆ ‘ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿ’ ಸ್ಥಾಪಿಸಲಾಯಿತು. ಜಮಾಅತ್‌ನ ಮತಿವುರ್ ರೆಹಮಾನ್ ನಿಜಾಮಿ, ಅಲಿ ಅಹ್ಸಾನ್ ಮೊಹಮ್ಮದ್ ಮುಜಹಿದ್ ಸೇರಿದಂತೆ ಹಲವು ಉನ್ನತ ನಾಯಕರನ್ನು ಗಲ್ಲಿಗೇರಿಸಲಾಯಿತು.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!

2013ರಲ್ಲಿ ಹೈಕೋರ್ಟ್ ಜಮಾಅತ್‌ನ ನೋಂದಣಿಯನ್ನು ರದ್ದುಗೊಳಿಸಿತು, ಇದರಿಂದಾಗಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆಯನ್ನು ಕಳೆದುಕೊಂಡರು. ಕಳೆದ ಒಂದೂವರೆ ದಶಕದಲ್ಲಿ ಪಕ್ಷದ ಕಚೇರಿಗಳಿಗೆ ಬೀಗ ಬಿದ್ದಿತ್ತು, ನಾಯಕರು ಜೈಲು ಸೇರಿದ್ದರು ಅಥವಾ ಭೂಗತರಾಗಿದ್ದರು.

ಆದರೆ ಆಗಸ್ಟ್ 2024ರಲ್ಲಿ ವಿದ್ಯಾರ್ಥಿ ಆಂದೋಲನದ ಕಿಚ್ಚಿಗೆ ಸಿಲುಕಿ ಶೇಖ್ ಹಸೀನಾ ದೇಶಬಿಟ್ಟು ಓಡಿಹೋದ ಘಟನೆ, ಜಮಾಅತೆ ಇಸ್ಲಾಮಿಗೆ ಅನಿರೀಕ್ಷಿತವಾಗಿ ಬಾಗಿಲು ತೆರೆಯಿತು. ಹಸೀನಾ ಸರ್ಕಾರ ಪತನಗೊಳ್ಳುವ ಕೆಲವೇ ದಿನಗಳ ಮೊದಲು ಜಮಾಅತ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ ನಿಷೇಧಿಸಿತ್ತು. ಆದರೆ, ಹಸೀನಾ ಪಲಾಯನದ ನಂತರ ರಚನೆಯಾದ ಮಧ್ಯಂತರ ಸರ್ಕಾರವು ಆ ನಿಷೇಧವನ್ನು ರದ್ದುಗೊಳಿಸಿತು.

ಈಗಿನ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಅವಾಮಿ ಲೀಗ್‌ನ ಪ್ರಮುಖ ನಾಯಕರು ತಲೆಮರೆಸಿಕೊಂಡಿದ್ದಾರೆ, ಪಕ್ಷ ಅಸ್ತವ್ಯಸ್ತವಾಗಿದೆ. ಪ್ರಬಲ ವಿರೋಧ ಪಕ್ಷವಾಗಿದ್ದ ಬಿಎನ್‌ಪಿ ಈಗ ಆಡಳಿತ ಪಕ್ಷವಾಗಿ ತಾರೀಖ್‌ ರೆಹಮಾನ್ ದೇಶದ ಚುಕ್ಕಣಿ ಹಿಡಿದಿದ್ದಾರೆ. ಇಂತಹ ಸಂದರ್ಭದಲ್ಲಿ, ದಶಕಗಳಿಂದ ಸಾಂಸ್ಥಿಕವಾಗಿ ಸದೃಢವಾಗಿರುವ, ಶಿಸ್ತಿನ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಜಮಾಅತೆ ಇಸ್ಲಾಮಿ ಸಹಜವಾಗಿಯೇ ‘ಪ್ರಧಾನ ಪ್ರತಿಪಕ್ಷ’ದ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ಪ್ರಸ್ತುತ ಜಮಾಅತೆ ಇಸ್ಲಾಮಿ ತನ್ನ ಹಳೆಯ ‘ಯುದ್ಧಾಪರಾಧಿ’ ಇಮೇಜ್ ಬದಲಿಸಿಕೊಳ್ಳಲು ಯತ್ನಿಸುತ್ತಿದೆ. ಇತ್ತೀಚೆಗೆ ನಡೆದ ವಿದ್ಯಾರ್ಥಿ ಹೋರಾಟದಲ್ಲಿ ತಮ್ಮ ಕಾರ್ಯಕರ್ತರೂ ಮೃತಪಟ್ಟಿದ್ದಾರೆ ಎಂದು ಹೇಳುವ ಮೂಲಕ ಯುವಜನರ ಸಹಾನುಭೂತಿ ಗಳಿಸಲು ಮುಂದಾಗಿದೆ. ಹಿಂಸಾಚಾರದ ಬದಲಿಗೆ ಸುಧಾರಣೆ ಮತ್ತು ರಾಷ್ಟ್ರ ನಿರ್ಮಾಣದ ಮಾತನಾಡುತ್ತಿದೆ.

ಇದನ್ನೂ ಓದಿ ಪ್ರೀಮಿಯಂ ಲೇಖನ | ರಾಹುಲ್‌ ಗಾಂಧಿ ಎಂಬ ಬೆಂಕಿಯ ಚೆಂಡು

ಆದರೆ, ಬಾಂಗ್ಲಾದೇಶದ ಜಾತ್ಯತೀತ ಮೌಲ್ಯಗಳಿಗೆ ಜಮಾಅತ್ ಇಂದಿಗೂ ಸವಾಲಾಗಿದೆ. ಇಸ್ಲಾಮಿಕ್ ರಾಷ್ಟ್ರದ ಪರಿಕಲ್ಪನೆಯೇ ಅವರ ಮೂಲ ಸಿದ್ಧಾಂತ. ಅವಾಮಿ ಲೀಗ್ ಇಲ್ಲದ ಸಂಸತ್ತಿನಲ್ಲಿ ಅಥವಾ ಮುಂಬರುವ ಚುನಾವಣೆಯಲ್ಲಿ ಜಮಾಅತ್ ನಿರ್ಣಾಯಕ ಪಾತ್ರ ವಹಿಸುವುದು ಖಚಿತ.

ಒಟ್ಟಿನಲ್ಲಿ, 53 ವರ್ಷಗಳ ಹಿಂದೆ ಯಾವ ದೇಶದ ಅಸ್ತಿತ್ವವನ್ನು ನಿರಾಕರಿಸಿದ್ದರೋ, ಇಂದು ಅದೇ ದೇಶದ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯಾಗಿ ಜಮಾಅತೆ ಇಸ್ಲಾಮಿ ಬೆಳೆದು ನಿಂತಿದೆ. ಇದು ಪ್ರಜಾಪ್ರಭುತ್ವದ ಗೆಲುವೋ ಅಥವಾ ಇತಿಹಾಸದ ವ್ಯಂಗ್ಯವೋ ಎಂಬುದನ್ನು ಕಾಲವೇ ನಿರ್ಧರಿಸಬೇಕು.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...