ʼಸ್ವತಂತ್ರವಾಗಿ ಮತ್ತೆ ನಮ್ಮೊಂದಿಗಿರಿʼ-ಜೈಲಿನಲ್ಲಿರುವ ತನ್ನ ವಿದ್ಯಾರ್ಥಿಗಳಿಗೆ ಜೆಎನ್‌ಯು ಶಿಕ್ಷಕಿಯ ಸಂದೇಶ

Date:

ದೆಹಲಿಯ ಜವಾಹರಲಾಲ್‌ ನೆಹರೂ ವಿವಿಯಲ್ಲಿ ನಿವೃತ್ತ ಇತಿಹಾಸ ಪ್ರಾಧ್ಯಾಪಕಿ ಪ್ರೊ. ಜಾನಕಿ ನಾಯರ್‌ ಅವರು ತಮ್ಮ ವಿದ್ಯಾರ್ಥಿಗಳಾದ ಡಾ ಉಮರ್‌ ಖಾಲಿದ್‌ ಮತ್ತು ಶರ್ಜೀಲ್‌ ಇಮಾಮ್‌ ಕುರಿತು ಬರೆದ ಭಾವನಾತ್ಮಕ ಪತ್ರ scroll.in ನಲ್ಲಿ ಪ್ರಕಟವಾಗಿದೆ. ಅದರ ಅನುವಾದ ಇಲ್ಲಿದೆ.

ದೆಹಲಿ ಗಲಭೆ ಪ್ರಕರಣದಲ್ಲಿ ಶಾರ್ಜೀಲ್‌ ಇಮಾಮ್‌ ಹಾಗೂ ಉಮರ್‌ ಖಾಲಿದ್‌ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಿಸಿದೆ. ಪ್ರಕರಣದ ಆರೋಪಿಗಳಾಗಿ ಸತತ 5 ವರ್ಷಗಳಿಗೂ ಹೆಚ್ಚು ಕಾಲದಿಂದ ಇವರಿಬ್ಬರೂ ಜೈಲಿನಲ್ಲಿದ್ದಾರೆ. ಜವಾಹರಲಾಲ್ ನೆಹರೂ ವಿವಿ(JNU)ಯ ಇತಿಹಾಸ ಶಿಕ್ಷಕಿ ಪ್ರೊ. ಜಾನಕಿ ನಾಯರ್‌ (2020ರಲ್ಲಿ ನಿವೃತ್ತಿ) ಅವರು ಕಾರಾಗೃಹ ಶಿಕ್ಷೆಯಲ್ಲಿರುವ ತನ್ನ ಇಬ್ಬರೂ ವಿದ್ಯಾರ್ಥಿಗಳಿಗಾಗಿ ಸಂದೇಶ ರವಾನಿಸಿದ್ದಾರೆ. ಆ ಸಂದೇಶದ ಅನುವಾದ ಇಲ್ಲಿದೆ.

ಒಬ್ಬ ಆಧುನಿಕ ಭಾರತೀಯ ಇತಿಹಾಸಕಾರಳಾಗಿ ನಾನು, ವಸಾಹತುಶಾಹಿ ಆಡಳಿತವು ಬರೆದಿಟ್ಟಿರುವ ದಾಖಲೆಗಳನ್ನು ʼಧಾನ್ಯದ ವಿರುದ್ಧʼ (Against the grain) ಓದುವ ಅಭ್ಯಾಸಕ್ಕೆ ಒಗ್ಗಿಕೊಂಡಿದ್ದೇನೆ. ಅಂದರೆ, ಅವುಗಳನ್ನು ಬರೆಯಲಾದ ಉದ್ದೇಶಕ್ಕಿಂತ ಬೇರೆಯದೇ ಉದ್ದೇಶಕ್ಕಾಗಿ ಓದುವುದು. ವಸಾಹತು ದಾಖಲೆಗಳಲ್ಲಿರುವ ಆರೋಪ, ಟೀಕೆ, ದಂಡನೆಗಳನ್ನು ಅರ್ಥೈಸಿಕೊಳ್ಳುವುದರಿಂದಲೇ; ಇಂದಿನ ಕಾಲದಲ್ಲಿ ನಾವು ಲಘುವಾಗಿ ತೆಗೆದುಕೊಳ್ಳುವ, ಸ್ವಾತಂತ್ರ್ಯದ ಶಿಲ್ಪಿಗಳು ಎಂದು ಪರಿಗಣಿಸಲ್ಪಡುವ ವ್ಯಕ್ತಿಗಳ ಜೀವನ, ಹೋರಾಟ ಮತ್ತು ಆಶಯಗಳನ್ನು ತಿಳಿದುಕೊಳ್ಳುವುದು ಎಂಬುದು ಇದರರ್ಥ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1830ರ ದಶಕದಲ್ಲಿ ಕರ್ನಾಟಕದ ಮೈಸೂರು ಭಾಗದಲ್ಲಿ ಬಂಡಾಯ ಎದ್ದ ರೈತರಾಗಿರಲೀ, 1942ರಲ್ಲಿಯೇ ಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಸ್ವಾತಂತ್ರ್ಯ ಘೋಷಿಸಿಕೊಂಡ ಮೈಸೂರು ಭಾಗದ ಈಸೂರು ಎಂಬ ಸಣ್ಣ ಹಳ್ಳಿಗರೇ ಆಗಿರಲಿ, ಎಲ್ಲರೂ ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕಾಗಿ ಬೆಲೆ ತೆತ್ತವರೇ. ಆ ಕಾರಣಕ್ಕೇ, ಶಾರ್ಜೀಲ್ ಇಮಾಮ್ ಮತ್ತು ಉಮರ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಕೂಡ ದಾಖಲೆಯಾಗಿರಿಸಿಕೊಂಡು ಭವಿಷ್ಯದಲ್ಲಿ ಓದಲಾಗುತ್ತದೆ ಎಂದು ನನ್ನೊಳಗಿನ ಇತಿಹಾಸಕಾರ ಆಶಿಸುತ್ತಿದ್ದಾನೆ. ಹೀಗೆ ಮಾಡಲು ಇಂದಿನ ದಿನಗಳಲ್ಲಿ ಭರವಸೆಯನ್ನು ತರ್ಕದಿಂದ ಬೇರ್ಪಡಿಸಬೇಕು. ಅಂದರೆ, ಕಾರಣಕ್ಕಿಂತ ಹೆಚ್ಚಾಗಿ ಆಶಯವೇ ಬೇಕಾಗಿದೆ. ನಮ್ಮ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಈ ರೀತಿಯ ಆಶಯದ ಅಗತ್ಯವೂ ಇದೆ.

umarSharjeel

2019ರ ಅಂತ್ಯ ಹಾಗೂ 2020ರ ಆರಂಭದಲ್ಲಿ ದೆಹಲಿ ಪ್ರದೇಶದಲ್ಲಿದ್ದ ನಮಗೆ ಸ್ವತಂತ್ರ ಭಾರತದ ಅತ್ಯಂತ ಸೃಜನಾತ್ಮಕ, ದೀರ್ಘಕಾಲ ನಡೆದ, ಅಹಿಂಸಾತ್ಮಕ, ಅತ್ಯಂತ ಶಕ್ತಿಯುತವಾದ ಜನಾಂದೋಲನವೊಂದನ್ನು ಕಣ್ಣಾರೆ ನೋಡುವ ಅಥವಾ ಭಾಗವಹಿಸುವ ಅವಕಾಶ ದೊರಕಿತು. ಭಾರತವು ಕಷ್ಟಪಟ್ಟು ಗಳಿಸಿದ ಪೌರತ್ವದ ನಿಜ ವ್ಯಾಖ್ಯಾನವನ್ನು ನಿರ್ಬಂಧಿಸಲು, ಸೀಮಿತಗೊಳಿಸಲು ಹೊರಟಾಗ- ಅದರ ವಿರುದ್ಧ ನಡೆದ ಅತ್ಯಂತ ಪ್ರಬಲ ಹೋರಾಟ ಅದು.

ಈ ಚಳವಳಿಯು ಸಾರ್ವಜನಿಕ ಜೀವನದಲ್ಲಿ ಹೆಚ್ಚು ಕಾಣಿಸಿಕೊಳ್ಳದೇ ಇದ್ದ ಅನೇಕ ಮುಸ್ಲಿಂ ಮಹಿಳೆಯರನ್ನು ಅಕ್ಷರಶಃ ಬೀದಿಗಳತ್ತ ಕರೆತಂದಿತು. ಯಾವುದೇ ದೊಡ್ಡ ರಾಜಕೀಯ ಬೆಂಬಲವಿಲ್ಲದೆಯೂ ಅವರು ವಾರಗಳ ಕಾಲ ಹೋರಾಟ ಮುಂದುವರೆಸಿದರು.

ಹೊಸ ರೀತಿಯ ಪ್ರತಿಭಟನೆಗಳು, ಹೊಸ ಸಂವಹನ ಶೈಲಿಗಳನ್ನು ಪ್ರಯೋಗಿಸಿದ ಆ ಸ್ಥಳ, ಅಂತಹ ಸಂದರ್ಭದಲ್ಲಿ ಹುಟ್ಟಿಕೊಂಡ ಆ ಕ್ಷಣದ ಭರವಸೆಗಳಿಗೆ ಯುವಜನತೆ ಮಾರುಹೋಗಿದ್ದು ಅಚ್ಚರಿಯೇ! ಇತಿಹಾಸದ ಅರಿವು ಮತ್ತು ರಾಜಕೀಯ ಜಾಗೃತಿ ಹೊಂದಿದ್ದ ಶಾರ್ಜೀಲ್ ಮತ್ತು ಉಮರ್ ಖಾಲಿದ್ ಕೂಡ ಅನೇಕ ಯುವಕರಂತೆ ಸಹಜವಾಗಿಯೇ ಆ ಚಳವಳಿಯತ್ತ ಆಕರ್ಷಿತರಾದರು.

ಶಾರ್ಜೀಲ್ ಇಮಾಮ್ ಮತ್ತು ಉಮರ್ ಖಾಲಿದ್ ಬಾಂಬ್ ಎಸೆದ ಕ್ರಾಂತಿಕಾರಿಗಳಲ್ಲ. ನಾನು ಅವರಿಬ್ಬರಿಗೂ ಬೋಧಿಸಿದ್ದೇನೆ. ಅವರ ಬುದ್ಧಿಮತ್ತೆ, ಪರಿಶ್ರಮ, ವಿಭಿನ್ನವಾಗಿ ಯೋಚಿಸುವ ಸಾಮರ್ಥ್ಯ ನನಗೆ ತುಂಬಾ ಮೆಚ್ಚುಗೆ ತಂದಿತ್ತು. ಅವರ ಎಲ್ಲ ಅಭಿಪ್ರಾಯಗಳಿಗೆ ನಾನು ಒಪ್ಪುತ್ತಿರಲಿಲ್ಲ. ಅವರಲ್ಲೂ ಯುವ ಸಹಜ ಅಹಂಕಾರ ಇತ್ತು; ಕೆಲವೊಮ್ಮೆ ಅದು ಕಿರಿಕಿರಿ ಎನಿಸುತ್ತಿತ್ತು. ಆದರೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ವಿಶೇಷವಾಗಿ ಇತಿಹಾಸ ಅಧ್ಯಯನ ಕೇಂದ್ರದ) ಬಹುತೇಕ ವಿದ್ಯಾರ್ಥಿಗಳಂತೆ, ಅವರು ವಾದ–ಪ್ರತಿವಾದಕ್ಕೆ ಜೀವಕೊಟ್ಟವರು; ಓದುವ, ಬರೆಯುವ, ಚರ್ಚಿಸುವ ಹಸಿವಿದ್ದವರು; ಹೊಸ ವಿಚಾರಗಳನ್ನು ಧೈರ್ಯವಾಗಿ, ಕೆಲವೊಮ್ಮೆ ಅತಿಯಾದ ಉತ್ಸಾಹದಿಂದಲೇ ಹೇಳುವವರಾಗಿದ್ದರು. JNUನ ಉದ್ದೇಶವೇ ಯುವಕರು ಯೋಚಿಸುವ, ವಾದಿಸುವ, ಕನಸು ಕಾಣುವ, ತಪ್ಪಾದ ತೀರ್ಮಾನಗಳಿಂದ ಎದುರಾಗಬಹುದಾದ ಅಪಾಯಗಳನ್ನು ಎದುರಿಸಲು ಬೇಕಾದ ಬೌದ್ಧಿಕ ವಾತಾವರಣ ಸೃಷ್ಟಿಸುವುದು. ಇದು ತರಗತಿಗಳಲ್ಲಿ ಮಾತ್ರವಲ್ಲ; ಕ್ಯಾಂಟೀನ್‌, ಹಾಸ್ಟೆಲ್‌, ತೆರೆದ ಸ್ಥಳಗಳಲ್ಲಿ, ತಡ ರಾತ್ರಿವರೆಗೂ, ಬೆಳಗಿನ ಜಾವದವರೆಗೂ ನಡೆಯುವ ʼರಾತ್ರಿ ತತ್ತ್ವಶಾಸ್ತ್ರʼ ಚರ್ಚೆಗಳಲ್ಲಿ ಜೀವಂತವಾಗಿತ್ತು.

ನಮ್ಮ ತಲೆಮಾರಿಗೆ ಕಾಣಲು ಸಾಧ್ಯವಾಗದಿದ್ದ ಉತ್ತಮ ಜಗತ್ತಿನ ಕನಸು ಕಂಡವರು ಶಾರ್ಜೀಲ್, ಉಮರ್, ನತಾಶಾ ನರ್ವಾಲ್, ದೇವಾಂಗನಾ ಕಲಿತಾ ಉತ್ತಮ ಜಗತ್ತಿನ ಕನಸು ಕಂಡ ಕಾರಣಕ್ಕೆ ಅವರನ್ನು ದೋಷಿಗಳೆಂದು ಕರೆಯಬೇಕೇ? ಇತಿಹಾಸ ಅಧ್ಯಯನ ಕೇಂದ್ರದ ಅನೇಕ ವಿದ್ಯಾರ್ಥಿಗಳೂ ಹೊಸ ಭವಿಷ್ಯ ನಿರ್ಮಿಸುವ ಆಸೆಯಿಂದಲೇ ಪ್ರೇರಿತರಾಗಿದ್ದರು. ಪ್ರಶ್ನಿಸುವುದು, ಮೂಲಗಳನ್ನು ಕೆದಕುವುದು, ತಮ್ಮ ಆಲೋಚನೆಗಳನ್ನು ತಾವೇ ಮೌಲ್ಯಮಾಪನ ಮಾಡಿಕೊಳ್ಳುವುದು ಸೇರಿದಂತೆ ಈ ರೀತಿಯ ಸ್ವಾತಂತ್ರ್ಯವನ್ನು ಅವರು ಆಸ್ವಾದಿಸಿದ್ದರು. ಕೆಲವು ಆಲೋಚನೆಗಳು ಬುದ್ಧಿವಂತತೆಯಿಂದಿದ್ದರೆ, ಕೆಲವು ಅಪಾರ ಪ್ರತಿಭೆಯಿಂದ ಹೊರಹೊಮ್ಮುತ್ತಿದ್ದವು. ಅವರ ಆಲೋಚನೆಗಳನ್ನೆಲ್ಲ ಭಯವಿಲ್ಲದೆ ಪ್ರಯೋಗಿಸಬಹುದಾದ ವಾತಾವರಣವನ್ನು ಜೆಎನ್‌ಯು ಮತ್ತು ಇತಿಹಾಸ ಅಧ್ಯಯನ ಕೇಂದ್ರ ನಿರ್ಮಿಸಿತ್ತು.

ಇಂದು, ಕೇವಲ ಸಾರ್ವಜನಿಕವಾಗಿ ಬಳಸಿದ ಕೆಲವು ಪದಗಳ ಕಾರಣಕ್ಕಾಗಿ, ಶಾರ್ಜೀಲ್ ಇಮಾಮ್ ಮತ್ತು ಉಮರ್ ಖಾಲಿದ್ ತಮ್ಮ ಜೀವನದ ಅತ್ಯಂತ ಸೃಜನಾತ್ಮಕ, ಉತ್ಪಾದಕವಾದ 5 ವರ್ಷಗಳಿಗಿಂತಲೂ ಹೆಚ್ಚು ಕಾಲವನ್ನು ಜೈಲಿನಲ್ಲಿ ಕಳೆಯಬೇಕಾಗಿದೆ.‌ ನಮ್ಮ ಗಣರಾಜ್ಯದ 75ನೇ ವರ್ಷದಲ್ಲಿ, ತಮ್ಮ ಮಾತು, ಆಲೋಚನೆ, ಭಾಷಣಗಳಿಗಾಗಿ ಭಾರೀ ಬೆಲೆ ಕಟ್ಟುತ್ತಿರುವ ಶಾರ್ಜೀಲ್ ಮತ್ತು ಉಮರ್‌‌ನಂತಹವರನ್ನು ನಾವು ಸ್ಮರಿಸಲೇಬೇಕು. ಪ್ರಬಲ ಹೆಸರುಗಳು ಮತ್ತು ರಾಜಕೀಯ ಪೋಷಣೆಯಿಂದ ಇತರ ಭಾರತೀಯರ ವಿರುದ್ಧ ಬಹಿರಂಗವಾಗಿ ಹಿಂಸೆಗೆ ಕರೆಕೊಟ್ಟ ಅನೇಕರು ಇಂದು ಸ್ವತಂತ್ರವಾಗಿ ಸಂಚರಿಸುತ್ತಿರುವುದನ್ನು, ಕೆಲವರು ಸಾರ್ವಜನಿಕ ಹುದ್ದೆಗಳಲ್ಲಿಯೇ ಇರುವುದನ್ನು ನಾವು ಮರೆಯಕೂಡದು.

ಡಾ ಬಿ ಆರ್ ಅಂಬೇಡ್ಕರ್ ಎಚ್ಚರಿಸಿದ್ದ ವೈರುಧ್ಯಗಳನ್ನು ಇಂದು ನಾವು ಸ್ಪಷ್ಟವಾಗಿ ನೋಡುತ್ತಿದ್ದೇವೆ. ಭಾರತದಲ್ಲಿ ಪ್ರಜಾಪ್ರಭುತ್ವ ಕೇವಲ ಆಲಂಕಾರಿಕ ಮೇಲ್ಪದರ ಎಂದು ಅವರು ತಿಳಿದಿದ್ದರು. ನಮ್ಮ ಅಂತರ್ಗತ ಶ್ರೇಣೀಕೃತ, ಅನ್ಯಾಯವಾದ, ಅಸಮಾನ ಸಮಾಜವು- ಗಣರಾಜ್ಯದ ಸ್ವಾತಂತ್ರ್ಯ ಮತ್ತು ಹಕ್ಕುಗಳೊಂದಿಗೆ ಘರ್ಷಿಸಿದಾಗ ಹಿಂಸಾತ್ಮಕ ವೈರುಧ್ಯಗಳು ಸ್ಫೋಟಗೊಳ್ಳುತ್ತವೆ ಎಂದು ಅವರು ಅರಿತಿದ್ದರು.

ಸಾಹಿತ್ಯ ವಿದ್ವಾಂಸ, ಚಿಂತಕ ರಹಮತ್ ತರೀಕೆರೆಯವರು ಹೇಳಿದಂತೆ, ಧಾರ್ಮಿಕವಾಗಿರಲಿ ಅಥವಾ ಧಾರ್ಮಿಕವಲ್ಲದಿರಲಿ-ಭಾರತವು ಮಹಾನ್ ಆಲೋಚನೆಗಳನ್ನು ಹುಟ್ಟಿಸಿದ ಇತಿಹಾಸ ಹೊಂದಿದೆ. ಆದರೆ ನಮ್ಮ ಸಾಮಾಜಿಕ ಆಚರಣೆಗಳು ಆ ಮಹಾನ್ ಆಲೋಚನೆಗಳಿಗೆ ಎಂದಿಗೂ ತಕ್ಕುದಾದವಾಗಿಲ್ಲ. ಆ ಸಮಾನತೆಯ ಸಾಧ್ಯತೆಯನ್ನು ಕನಸು ಕಾಣುವ ಯುವಕರನ್ನೇ ಸಾಮಾಜಿಕ ಮರಣದಂತಹ ಸ್ಥಿತಿಗೆ ತಳ್ಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಸಂಪೂರ್ಣ ನ್ಯಾಯಯುತ ಅಥವಾ ಸಮಾನ ಜಗತ್ತಿನ ಕುರಿತು ಹೇಳಲು ಕೊಂಚ ಹಿಂಜರಿಯುವೆ!

ಇದನ್ನೂ ಓದಿ: ಈ ದಿನ ಸಂಪಾದಕೀಯ | ‘ಸುಪ್ರೀಮ್’ ನೀಡಿದ ಎರಡು ವ್ಯತಿರಿಕ್ತ ತೀರ್ಪುಗಳು! ಅರವಿಂದ್‌ಗೆ ಒಂದು ನ್ಯಾಯ, ಉಮರ್‌ಗೆ ಮತ್ತೊಂದೇ?

ಆದರೂ, ಶಾರ್ಜೀಲ್ ಇಮಾಮ್ ಮತ್ತು ಉಮರ್ ಖಾಲಿದ್ ಈ ಪರೀಕ್ಷೆಗಳಿಂದ ತಮ್ಮ ಆದರ್ಶಗಳನ್ನು ಕಳೆದುಕೊಳ್ಳದೆ ಹೊರಬರುವರು ಎನ್ನುವ ನಂಬಿಕೆ ನನಗಿದೆ. ಜೈಲಿನ ಗೋಡೆಗಳ ಒಳಗೂ ಅವರು ಯೋಚಿಸುತ್ತಾರೆ, ಓದುತ್ತಾರೆ, ಕನಸು ಕಾಣುತ್ತಾರೆ, ಬದುಕುತ್ತಾರೆ. ಆ ದಮನದ ಜಾಗವನ್ನೇ ಬದಲಾಯಿಸುವ ಶಕ್ತಿಯನ್ನು ಅವರು ಕಂಡುಕೊಳ್ಳಲಿದ್ದಾರೆ ಎಂದು ನಾನು ನಂಬಿದ್ದೇನೆ.

ಇಲ್ಲಿ ನಾನು ಪ್ಯಾಲೆಸ್ಟೀನ್ ಕವಿ ಮಹಮೂದ್ ಡೆರ್ವೀಶ್ ಅವರ (ಬೆನ್ ಬೆನ್ನಾನಿಯವರು ಅನುವಾದಿಸಿದ) ಅದ್ಭುತ ಸಾಲುಗಳನ್ನು ಉಲ್ಲೇಖಿಸದೆ ಇರಲಾರೆ…

ಅದು ಸಾಧ್ಯವಿದೆ…
ಕನಿಷ್ಠ ಕೆಲವೊಮ್ಮೆ ಸಾಧ್ಯ…
ಈಗಂತೂ ಖಂಡಿತ ಸಾಧ್ಯ. ಜೈಲು ಕೋಣೆಯೊಳಗೇ
ಕುದುರೆಯೇರಿ ಓಡಿ ಹೋಗಲು ಸಾಧ್ಯ..

ಜೈಲು ಗೋಡೆಗಳು ಅಳಿದು ಹೋಗಬಹುದು,
ಕೋಣೆಯು ಗಡಿ ಇಲ್ಲದ ದೂರದ ಭೂಮಿಯಾಗಬಹುದು.

ನೀವು ಗೋಡೆಗಳನ್ನು ಏನು ಮಾಡಿದಿರಿ?
ನಾನು ಅವುಗಳನ್ನು ಬಂಡೆಗಳಿಗೆ ಹಿಂತಿರುಗಿಸಿದೆ.

ಒಳ ಮಾಳಿಗೆಯನ್ನು?
ಅದನ್ನು ಕುದುರೆಯ ಜೀನಾಗಿ ಮಾಡಿದೆ.

ಸರಳನ್ನು ಏನು ಮಾಡಿದೆ?
ಅದನ್ನು ಪೆನ್ಸಿಲ್ ಮಾಡಿದೆ…

ಕಾವಲುಗಾರ ಕೋಪಗೊಂಡ.
ಕವಿತೆ ಇಷ್ಟವಿಲ್ಲವೆಂದು
ಬಾಗಿಲು ಮುಚ್ಚಿಬಿಟ್ಟ.

ಬೆಳಗ್ಗೆ ನನ್ನ ನೋಡಲು ಬಂದ, ಗದರಿದ:
ಈ ನೀರು ಎಲ್ಲಿಂದ ಬಂತು?
ನೈಲ್ ನದಿಯಿಂದ.

ಮರಗಳು?
ಡಮಾಸ್ಕಸ್ ತೋಟಗಳಿಂದ.

ಸಂಗೀತ?
ನನ್ನ ಹೃದಯದ ತಾಳದಿಂದ…

ಕಾವಲುಗಾರ ಮತ್ತೆ ಕೋಪಗೊಂಡ.
ಕವಿತೆ ಇಷ್ಟವಿಲ್ಲವೆಂದು
ಬಾಗಿಲು ಮುಚ್ಚಿ ಹೊರಟುಬಿಟ್ಟ.

ಸಂಜೆಗೆ ಮತ್ತೆ ಬಂದು ಕೇಳಿದ:
ಈ ಚಂದ್ರ ಎಲ್ಲಿಂದ?
ಬಾಗ್ದಾದ್‌ನ ರಾತ್ರಿಗಳಿಂದ.

ಮದ್ಯ?
ಅಲ್ಜಿಯರ್ಸ್ ದ್ರಾಕ್ಷಿ ತೋಟಗಳಿಂದ.

ಈ ಸ್ವಾತಂತ್ರ್ಯ?
ನಿನ್ನೆ ನೀನು ಕಟ್ಟಿದ ಸರಳುಗಳಿಂದ.

ಕಾವಲುಗಾರ ದುಃಖಿತನಾದ.
ಅವನು ತನ್ನ ಸ್ವಾತಂತ್ರ್ಯವನ್ನು
ತನಗೆ ಹಿಂದಿರುಗಿಸಬೇಕೆಂದು ಬೇಡಿಕೊಂಡ…

ಶಾರ್ಜೀಲ್ ಮತ್ತು ಉಮರ್…
ಮತ್ತೆ ಸ್ವತಂತ್ರವಾಗಿರಿ ನಮ್ಮ ಜೊತೆ!!

ಕೃಪೆ- scroll.in
ಅನುವಾದ : ನೀಲಾ ಎನ್‌

ಇಂಗ್ಲಿಷ್‌ ಲಿಂಕ್‌ ಇಲ್ಲಿದೆ https://scroll.in/article/1089795/be-with-us-again-in-freedom-sharjeel-and-umar-a-jnu-teachers-message-for-her-jailed-students

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...