ಬೆಂಗಳೂರು ಟ್ರಾಫಿಕ್‌ಗೆ ಮದ್ದಾಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮೆಟ್ರೋ ಪ್ರಯಾಣ ದರಗಳು ಆಕಾಶಕ್ಕೇರಿವೆ. 2017ರ ನಂತರ ಈ ದರಗಳಲ್ಲಿ ಏರಿಕೆ ಆಗಿರಲಿಲ್ಲ. ಆದರೆ, ಕಳೆದ ವರ್ಷ ಬರೋಬ್ಬರಿ ಶೇ.71.5 ಹೆಚ್ಚಳ ಮಾಡಿದ್ದ ನಿಗಮ ಇದೀಗ ಮತ್ತೆ ದರ ಪರಿಷ್ಕರಣೆ ಮಾಡಿ ಜನರ ತಲೆಬಿಸಿಗೆ ಕಾರಣವಾಗಿದೆ. ಪದೇಪದೆ ದರ ಏರಿಕೆಯೂ ಸಾರ್ವಜನಿಕರ ಸಿಟ್ಟಿಗೆ ಕಾರಣವಾಗಿದೆ. ಕಳೆದ ವರ್ಷ ಈ ಏರಿಕೆಯ ಹೊಣೆಯನ್ನು ರಾಜ್ಯ ಕಾಂಗ್ರೆಸ್ ಕೇಂದ್ರ ಬಿಜೆಪಿ ಸರ್ಕಾರದ ಮೇಲೆಯೂ, ರಾಜ್ಯದಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿಯು ರಾಜ್ಯ ಸರ್ಕಾರದ ಮೇಲೆಯೂ ಹೊರಿಸಿತ್ತು. ಆದರೆ, ಈ ಬಾರಿಯ ಏರಿಕೆಯ ಹೊಣೆ ಯಾರು ಹೊತ್ತುಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ.
ಕಳೆದ ವರ್ಷ ತಾನೇ ಬೆಂಗಳೂರಿಗರಿಗೆ ಶೇ.71.5 ರಷ್ಟು ದರ ಏರಿಕೆ ಮಾಡಿ ಹೊರೆ ಹೆಚ್ಚಿಸಿದ ನಿಗಮ ಈ ಬಾರಿ ಮತ್ತೆ ಶೇ.5ರಷ್ಟು ಹೆಚ್ಚಳ ಮಾಡಿದೆ. ವಾರ್ಷಿಕ ದರ ಏರಿಕೆಯು 96.10 ಕಿಮೀಗಳ ಉದ್ದದ ನಮ್ಮ ಮೆಟ್ರೋ ಲೈನ್‌ಗಳಿಗೆ ಅನ್ವಯವಾಗಲಿದೆ. ದರವು ಕನಿಷ್ಟ 1 ರೂ. ಯಿಂದ ಗರಿಷ್ಟ 5 ರೂ. ಹೆಚ್ಚಳವಾಗಿದೆ. ಈ ಹೊಸ ದರಗಳು ಫೆಬ್ರವರಿ 9, 2026 ರಿಂದ ಜಾರಿಗೆ ಬರಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ದರ ನಿಗದಿ ಸಮಿತಿ -(FFC) ಮಾಡಿದ ಶಿಫಾರಸ್ಸಿನಂತೆ ಟಿಕೆಟ್ ದರದಲ್ಲಿ ಏರಿಕೆ ಮಾಡಲಾಗಿದೆ. FFCಯ ಶಿಫಾರಸುಗಳು BMRCL ಗೆ ಬದ್ಧವಾಗಿರುವುದರಿಂದ, 2025ರ ಫೆಬ್ರವರಿ 9 ರಂದು FFC ಶಿಫಾರಸು ಮಾಡಿದ ದರ ಜಾರಿಯಾದ ಒಂದು ವರ್ಷದ ನಂತರ, ಅಂದರೆ 2026ರ ಫೆಬ್ರವರಿ 9 ರಿಂದ ವಾರ್ಷಿಕವಾಗಿ ಹೊಸ ದರ ಜಾರಿಯಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಪ್ರಯಾಣದ ದೂರದ ಆಧಾರದ ಮೇಲೆ ದರ ನಿಗದಿ ಮಾಡಲಾಗಿದೆ.
ಪರಿಷ್ಕೃತ ದರದ ವಿವರ ಹೀಗಿದೆ:
- 2 ಕಿಲೋ ಮೀ.ವರೆಗಿನ ಪ್ರಯಾಣಕ್ಕೆ ₹10 ರಿಂದ 11 ರೂ
- 2-4 ಕಿ.ಮೀ.ಗೆ ₹20 ರಿಂದ 21 ರೂ.
- 6-8 ಕಿ.ಮೀ.ಗೆ ₹40 ರಿಂದ 42 ರೂ.
- 8-10 ಕಿ.ಮೀ. ಪ್ರಯಾಣಕ್ಕೆ ₹50 ರ ಬದಲಿಗೆ 53 ರೂ.
- 10-15 ಕಿ.ಮೀ.ಗೆ ₹60 ರಿಂದ 63 ರೂ.
- ಇದಲ್ಲದೆ, ಹೆಚ್ಚಿನ ದೂರದ ಪ್ರಯಾಣಕ್ಕಾಗಿ, ಅಂದರೆ 15-20 ಕಿ.ಮೀ.ಗೆ ₹70 ರಿಂದ 74
- 20-25 ಕಿ.ಮೀ.ಗೆ ₹80 ರಿಂದ 84 ರೂ.
- 25-30 ಕಿ.ಮೀ. ಹಾಗೂ ಅದಕ್ಕಿಂತ ಹೆಚ್ಚಿನ ದೂರಕ್ಕೆ ₹90 ರಿಂದ ₹95ಕ್ಕೆ ದರಗಳು ಏರಿಕೆ ಆಗಲಿವೆ ಎಂದು ಹೇಳಲಾಗಿದೆ.
ಸುಮಾರು 7.5 ವರ್ಷಗಳ ಕಾಲ ಮೆಟ್ರೋ ಟಿಕೆಟ್ ದರದಲ್ಲಿ ಯಾವುದೇ ಪರಿಷ್ಕರಣೆಯಾಗಿರಲಿಲ್ಲ. ಕಳೆದ ವರ್ಷದ ಸರಾಸರಿ ಶೇ. 71ರಷ್ಟು ದರ ಏರಿಕೆ ಮಾಡಲಾಗಿತ್ತು. ಈ ನಿರ್ಧಾರದ ಬೆನ್ನಲ್ಲೇ ಪ್ರಯಾಣಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಟೀಕೆಗೂ ಗುರಿಯಾಗಿತ್ತು. ಮೆಟ್ರೋ ಟಿಕೆಟ್ ದರ ಶೇಕಡ 60 ರೂಪಾಯಿಯಿಂದ 90 ರೂಪಾಯಿಗೆ ಏರಿಕೆಯಾಗಿತ್ತು. ಬಡ, ಮಧ್ಯಮ ವರ್ಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮೆಟ್ರೋದಿಂದ ದೂರ ಉಳಿದಿದ್ದರು. ಆ ಬಳಿಕ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯ ಮೇರೆಗೆ ಶೇ.30ರಷ್ಟು ಅಂದರೆ, 8-9 ರೂಪಾಯಿ ಟಿಕೆಟ್ ದರ ಇಳಿಸಲಾಗಿತ್ತು. ಈಗ ಒಂದು ವರ್ಷವಾಗುತ್ತಿದ್ದಂತೆ ಮತ್ತೆ ದರ ಏರಿಕೆ ಮಾಡಲಾಗಿದೆ.

ಪ್ರಯಾಣ ದರದಲ್ಲಿ 5% ಹೆಚ್ಚಳದಿಂದಾಗಿ ಬಿಎಂಆರ್‌ಸಿಎಲ್ 121 ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷಿಸುತ್ತಿದೆ. ಆದ್ದರಿಂದ, ಬೆಂಗಳೂರು ಪ್ರಯಾಣಿಕರು, ಫೆಬ್ರವರಿ 10ರಿಂದ ವಾರದಲ್ಲಿ ಒಂದು ದಿನ ಮೆಟ್ರೋವನ್ನು ಬಹಿಷ್ಕರಿಸಬೇಕು. ಇದರಿಂದಾಗಿ 121 ಕೋಟಿ ರೂ.ಗಳ ಅನ್ಯಾಯದ ಆದಾಯವನ್ನು ತಡೆಯಬಹುದು. ಬಿಎಂಆರ್‌ಸಿಎಲ್ ಕೇಳುವ ಏಕೈಕ ಮಾರ್ಗ ಇದಾಗಿದೆ ಎಂದು ನೆಟ್ಟಿಗರು ಹೇಳಿದ್ದಾರೆ.
ಈ ಹಿಂದೆ ಏಕಾಏಕಿ ಮೇಟ್ರೊ ದರ ಏರಿಕೆಯಾದಾಗ ಮೆಟ್ರೋ ಸವಾರರ ಪ್ರಮಾಣದಲ್ಲಿ ಶೇ.6ರಷ್ಟು ತಗ್ಗಿರುವ ವರದಿಗಳು ಹೊರ ಬಿದ್ದಿದ್ದವು. ಇದೀಗ ಮತ್ತೆ ದರ ಏರಿಕೆಯಾಗಿರುವುದು ಬೆಂಗಳೂರಿನ ಜನತೆಗೆ ಬಿಸಿತುಪ್ಪವಾಗಿದೆ. ಪ್ರತಿವರ್ಷವೂ ದರ ಏರಿಕೆ ಕಾಣುತ್ತಿರುವುದು ಜನರ ಆಘಾತಕ್ಕೆ ಕಾರಣವಾಗಿದೆ. ಒಂದು ಕಡೆ ಬಸ್ ಟಿಕೆಟ್ ಬಿಸಿ, ಮತ್ತೊಂದು ಕಡೆ ಮೆಟ್ರೊ ಬರೆ! ಅಧಿಕಾರಿಗಳು, ರಾಜಕಾರಣಿಗಳು ನಿತ್ಯವೂ ಮೆಟ್ರೊದಲ್ಲಿ ಓಡಾಡಿದ್ದರೆ ಜನರ ಕಷ್ಟ ಅರ್ಥವಾಗುತ್ತಿತ್ತೇನೋ. ಆದರೆ, ಅವರಿಗೆ ಸಾಮಾನ್ಯರ ಬವಣೆ ತಿಳಿಯುವುದಿಲ್ಲ. ಅಧಿಕಾರದ ಚುಕ್ಕಾಣಿ ಹಿಡಿದವರು ಒಬ್ಬರಿಗೊಬ್ಬರ ಮೇಲೆ ಗೂಬೆ ಕೂರಿಸುತ್ತಾ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಮೋಟಾರು ವಾಹನಗಳ ದಟ್ಟಣೆ ಬೆಂಗಳೂರಿನ ವಾಯು ಮಾಲಿನ್ಯಕ್ಕೆ ಗಣನೀಯ ಕಾರಣವಾಗಿದೆ. ವಾಯುಮಾಲಿನ್ಯ, ಹದಗೆಟ್ಟಿರುವ ರಸ್ತೆ ಸಂಚಾರ ವ್ಯವಸ್ಥೆಯ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳು ರಸ್ತೆಗಳಿಗೆ ಇಳಿಯುವುದನ್ನು ಆದಷ್ಟೂ ಮಟ್ಟಿಗೆ ತಡೆಯುವ ಕ್ರಮವಾಗಿ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಆಗು ಮಾಡುವುದು ಸರ್ಕಾರಗಳ ಕರ್ತವ್ಯ. ಆದರೆ, ಈ ವ್ಯವಸ್ಥೆ ಈಗಾಗಲೇ ಸುಲಿಗೆಗೆ ತುತ್ತಾಗುತ್ತಿರುವುದು ದುರಂತ.




