ಬೆಂಗಳೂರಿನ ‘PRR’ ಯೋಜನೆಗೆ ಮರುಜೀವ; ರೈತರಿಗೆ BDA ಅನ್ಯಾಯ; ಭೂಸ್ವಾಧೀನಕ್ಕೆ ವಿರೋಧ

Date:

ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದ ಸಮಯದಲ್ಲಿ ಬಿಡಿಎ, ಕೇವಲ 200 ಮರಗಳನ್ನು ಮಾತ್ರವೇ ಕಡಿಯಲಾಗುತ್ತದೆ ಎಂದು ಸುಳ್ಳು ಹೇಳಿತ್ತು. SEIAAಯಿಂದ ಪರಿಸರ ಅನುಮೋದನೆ ನೀಡಿತ್ತು. ನಂತರದಲ್ಲಿ, 32,175 ಮರಗಳನ್ನು ಉರುಳಿಸಬೇಕೆಂದು ಹೇಳುವ ಮೂಲಕ ಎನ್‌ಜಿಟಿ ಕೆಂಗಣ್ಣಿಗೆ ಗುರಿಯಾಗಿತ್ತು.

ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಹಲವಾರು ಯೋಜನೆಗಳು ಕುಂಟುತ್ತಲೇ ಸಾಗುತ್ತಿವೆ. ಸರ್ಕಾರಗಳ ನಿರ್ಲಜ್ಜ ನಿರ್ಲಕ್ಷ್ಯದಿಂದ ಬೆಂಗಳೂರಿಗರು ಪ್ರತಿವರ್ಷವೂ ಮಳೆಗಾಲದಲ್ಲಿ ಬಳಲಿ ಬೆಂಡಾಗುತ್ತಿದ್ದಾರೆ. ಸರ್ಕಾರಗಳು ರೂಪಿಸಿದ್ದ ಹಲವಾರು ಯೋಜನೆಗಳು ತೆರೆಮರೆಗೆ ಸರಿದು, ಅವುಗಳನ್ನು ಜನರು ಮರೆತೆ ಹೋಗಿದ್ದಾರೆ. ಅಂತಹದೊಂದು ಯೋಜನೆಯಲ್ಲಿ ‘ಪೆರಿಫೆರಲ್ ರಿಂಗ್‌ ರಸ್ತೆ’ (PRR) ಯೋಜನೆಯೂ ಒಂದು. 2005ರಲ್ಲಿ ಸಿದ್ದಪಡಿಸಲಾಗಿದ್ದ ಯೋಜನೆಗೆ 20 ವರ್ಷಗಳ ಬಳಿಕ ಮರುಜೀವ ಬಂದಿದೆ. ಯೋಜನೆಯ ಬಗ್ಗೆ ಚರ್ಚೆ ಮುನ್ನೆಲೆಗೆ ಬಂದಿದೆ. ಆದರೆ, ಈ ಯೋಜನೆಯನ್ನು ರೈತರು ವಿರೋಧಿಸುತ್ತಿದ್ದಾರೆ. ತಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎನ್ನುತ್ತಿದ್ದಾರೆ.

ಏನಿದು ಯೋಜನೆ?

ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆಯ ನಿವಾರಣೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1995ರಲ್ಲಿ ಬೆಂಗಳೂರಿನ ‘ಸಮಗ್ರ ಅಭಿವೃದ್ಧಿ ಯೋಜನೆ’ಯಲ್ಲಿ ಪಿಆರ್‌ಆರ್‌ಅನ್ನು ಪರಿಚಯಿಸಿತು. 2005ರಲ್ಲಿ ಯೋಜನೆಯನ್ನು ರೂಪಿಸಿತು. ಈ ಯೋಜನೆಯು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ ಎಂದು ಹೇಳಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಪ್ರಸ್ತಾಪಿತ ಯೋಜನೆಯು ಬೆಂಗಳೂರಿನ ತುಮಕೂರು ರಸ್ತೆಯಿಂದ ಹೊಸೂರು ರಸ್ತೆಗೆ ಬೆಂಗಳೂರಿನ ಹೊರವಲಯದಲ್ಲಿ 73-74 ಕಿ.ಮೀ ಉದ್ದದ 8 ಪಥದ ಎಕ್ಸ್‌ಪ್ರೆಸ್‌ ವೇ ನಿರ್ಮಿಸುವ ಉದ್ದೇಶ ಹೊಂದಿದೆ. ಇದು, ಹೆಸರಘಟ್ಟ ರಸ್ತೆ, ದೊಡ್ಡಬಲ್ಲಾಪುರ ರಸ್ತೆ, ಬಳ್ಳಾರಿ ರಸ್ತೆ, ಹೆಣ್ಣೂರು ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಹೊಸಕೋಟೆ ರಸ್ತೆ ಹಾಗೂ ಸರ್ಜಾಪುರ ರಸ್ತೆಯನ್ನು ಸಂಧಿಸುತ್ತದೆ.

ಪರಿಣಾಮವಾಗಿ, ನಗರದ ಹೊರ ಭಾಗದ ಜನರು ನಗರದೊಳಗೆ ಹಾದುಹೋಗುವುದನ್ನು ತಪ್ಪಿಸಸುತ್ತದೆ ಎಂದು ಸರ್ಕಾರ/ಬಿಡಿಎ ಹೇಳಿಕೊಂಡಿವೆ. ಮಾತ್ರವಲ್ಲದೆ, ರಸ್ತೆಯ ಜೊತೆಗೆ ಸರ್ವೀಸ್‌ ರಸ್ತೆ, ಸೈಕಲ್ ಪಥ ಹಾಗೂ ಮೂಲಸೌಕರ್ಯಗಳ ಭೂಗತ ಪೈಪ್‌ಲೈನ್‌ ನಿರ್ಮಾಣವೂ ಯೋಜನೆಯ ಭಾಗವಾಗಿದೆ.

ಈ ಯೋಜನೆಗೆ 2007ರಲ್ಲಿ ಅನುಮೋದನೆ ನೀಡಿ, ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಈವರೆಗೆ ಯೋಜನೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ, ಯೋಜನೆಯ ಹೆಸರನ್ನು ‘ಬೆಂಗಳೂರು ಬಿಜನೆಸ್ ಕಾರಿಡಾರ್’ (ಬಿಬಿಸಿ) ಎಂದು ಮರುನಾಮಕರಣ ಮಾಡಿ, ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದೆ. ಇತ್ತೀಚೆಗೆ ನಡೆದ ಸಚಿವ ಸಂಪುಟವು ಯೋಜನೆಯ ಜಾರಿಗೆ ಅನುಮೋದನೆ ನೀಡಿದೆ.

ಯೋಜನೆಯನ್ನು ಕಾರ್ಯಗತಗೊಳಿಸಲು ಸುಮಾರು 2,569 ಎಕರೆಯಷ್ಟು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಬೇಕೆಂದು ಬಿಡಿಎ ಹೇಳಿದೆ. ಒಟ್ಟು 8 ತಾಲ್ಲೂಕುಗಳ (ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಆನೇಕಲ್, ದೇವನಹಳ್ಳಿ, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ) 67 ಗ್ರಾಮಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಒಟ್ಟು 27,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಆದರೆ, ರೈತರು ತಮ್ಮ ಕೃಷಿ ಭೂಮಿಯನ್ನು ಬಿಟ್ಟುಕೊಡಲು ನಿರಾಕರಿಸಿದ್ದಾರೆ. ಬಲವಂತವಾಗಿ ಭೂಸ್ವಾಧೀನಕ್ಕೆ ಮುಂದಾಗದಂತೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಯೋಜನೆ ಸುತ್ತಲಿನ ವಿವಾದಗಳು

ಪಿಆರ್‌ಆರ್ ಯೋಜನೆಯ ಅನುಷ್ಠಾನವು 20 ವರ್ಷ ತಡವಾಗಿದೆ. ಇದು ಭೂಸ್ವಾಧೀನದ ವಿವಾದಕ್ಕೆ ಗುರಿಯಾಗಿದೆ. ಯೋಜನೆಗೆ 2005ರಲ್ಲಿ ಪ್ರಾಥಮಿಕ ಅಧಿಸೂಚನೆ ಮತ್ತು 2007ರಲ್ಲಿ ಅಂತಿಮ ಅಧಿಸೂಚನೆ ನೀಡಲ್ಪಟ್ಟರೂ, ಈವರೆಗೆ ಕೇವಲ 3.21 ಎಕರೆಯಷ್ಟು ಭೂಮಿಯನ್ನು ಮಾತ್ರವೇ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಈಗ ಅಗತ್ಯವಿರುವಷ್ಟು ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಬಿಡಿಎ, ‘ಭೂಸ್ವಾಧೀನದಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ-2013’ (ಭೂಸ್ವಾಧೀನ ತಿದ್ದುಪಡಿ ಕಾಯ್ದೆ-2013) ಬದಲಾಗಿ, ‘ಭೂಸ್ವಾಧೀನ ಕಾಯ್ದೆ-1894’ರ ಅಡಿಯಲ್ಲಿ ಪರಿಹಾರ ನೀಡುವುದಾಗಿ ವಾದಿಸುತ್ತಿದೆ. ಇದು ರೈತರ ವಿರೋಧ ಮತ್ತು ವಿವಾದಕ್ಕೆ ಕಾರಣವಾಗಿದೆ.

ಜೊತೆಗೆ, ಯೋಜನೆಗಾಗಿ 33,000 ಮರಗಳನ್ನು ಕಡಿಯಬೇಕೆಂದು ಬಿಡಿಎ ಹೇಳಿಕೊಂಡಿದೆ. ಬೃಹತ್ ಸಂಖ್ಯೆಯ ಮರಗಳನ್ನು ಉರುಳಿಸುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದ ಸಮಯದಲ್ಲಿ ಬಿಡಿಎ, ಕೇವಲ 200 ಮರಗಳನ್ನು ಮಾತ್ರವೇ ಕಡಿಯಲಾಗುತ್ತದೆ ಎಂದು ಸುಳ್ಳು ಹೇಳಿತ್ತು. ಹೀಗಾಗಿ, ಯೋಜನೆಗೆ ‘ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ’ವು (SEIAA) 2014ರಲ್ಲಿ ಪರಿಸರ ಅನುಮೋದನೆ ನೀಡಿತ್ತು. ಆದರೆ, ಆ ನಂತರ, ಕಡಿಯಲಾಗುವ ಮರಗಳ ಸಂಖ್ಯೆಯನ್ನು 16,685ಕ್ಕೆ ಬಿಡಿಎ ಏರಿಸಿತು. 2022ರ ಪರಿಷ್ಕೃತ ವರದಿಯ ವೇಳೆಗೆ 32,175 ಮರಗಳನ್ನು ಉರುಳಿಸಬೇಕೆಂದು ತಿಳಿಸಿತು.

ಪರಿಣಾಮವಾಗಿ, ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ’ಯು ಪರಿಸರ ಅನುಮೋದನೆಯನ್ನು ರದ್ದುಗೊಳಿಸಿತು. ಬಳಿಕ, ಪರಿಸರದ ಮೇಲೆ ಬೀರಬಹುದಾದ ಪ್ರಭಾವವನ್ನು ಪರಿಹರಿಸಿ 2022ರಲ್ಲಿ ಮತ್ತೊಂದು ಪ್ರಸ್ತಾವನೆಯನ್ನು ‘ಎಸ್‌ಇಐಎಎ’ಗೆ ಬಿಡಿಎ ಸಲ್ಲಿಸಿತು. ಆದಾಗ್ಯೂ, ಈ ಪ್ರಸ್ತಾವನೆಯನ್ನು ಕೇಂದ್ರ ಪರಿಸರ, ಅರಣ್ಯ ಹವಾಮಾನ ಬದಲಾವಣೆ ಸಚಿವಾಲಯದ ತಜ್ಞರ ಮೌಲ್ಯಮಾಪನ ಸಮಿತಿಗೆ ‘ಎಸ್‌ಇಐಎಎ’ ವರ್ಗಾಯಿಸಿತು.

ಕೇಂದ್ರ ಸಮಿತಿಯು 2023ರ ಮಾರ್ಚ್‌ನಲ್ಲಿ 20 ಷರತ್ತುಗಳೊಂದಿಗೆ ಪರಿಸರ ಅನುಮತಿ ನೀಡಲು ಶಿಫಾರಸು ಮಾಡಿತು. ಅದರಲ್ಲಿ, ಬಿಡಿಎ ಯಾವುದೇ ಪಾರಂಪರಿಕ ಮರಗಳನ್ನು ಕಡಿಯಬಾರದು. ಯೋಜನೆಗೆ ಉದ್ದೇಶಿತ ಸ್ಥಳಗಳಲ್ಲಿ ಅಂತಹ ಮರಗಳು ಕಂಡುಬಂದರೆ, ರಸ್ತೆಯ ಮಾರ್ಗವನ್ನು ಮರಗಳಿಂದ ದೂರದಲ್ಲಿ ಜೋಡಿಸಬೇಕು ಎಂದು ಸೂಚಿಸಿತು.

ಅಲ್ಲದೆ, ಮಾರ್ಗ ನಕ್ಷೆಯಲ್ಲಿರುವ ಆರು ಕೆರೆಗಳನ್ನು ಗುರುತಿಸಲಾಗಿದೆ. ಈ ಕೆರೆಗಳು ಪೆಲಿಕನ್‌ಗಳು ಮತ್ತು ಕೊಕ್ಕರೆಗಳಂತಹ ಜಲಪಕ್ಷಿಗಳಿಗೆ ಆವಾಸಸ್ಥಾನವಾಗಿದ್ದು, ಕೆರೆಯ ಮೂಲ ರಚನೆಗೆ ಯಾವುದೇ ತೊಂದರೆಯಾಗದೆ ಕಾಮಗಾರಿ ನಡೆಸಬೇಕೆಂದು ನಿರ್ದೇಶಿಸಿತು. ಎಲ್ಲದಕ್ಕೂ ತಲೆದೂಗಿರುವ ಬಿಡಿಎ, ಪರಿಸರ ಅನುಮೋದನೆ ಪಡೆದುಕೊಂಡಿದೆ.

ಯೋಜನೆ ಮತ್ತು ಭೂಸ್ವಾಧೀನಕ್ಕೆ ರೈತರ ವಿರೋಧ

ಯೋಜನೆಯ ಅನುಷ್ಠಾನ ಮತ್ತು ಯೋಜನೆಗಾಗಿನ ಭೂಸ್ವಾಧೀನಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯೋಜನೆಯು 74 ಗ್ರಾಮಗಳನ್ನು ಒಳಗೊಳ್ಳುತ್ತದೆ. ಪರಿಣಾಮವಾಗಿ, ಸುಮಾರು 20,000ಕ್ಕೂ ಹೆಚ್ಚು ಕುಟುಂಬಗಳು ತಮ್ಮ ನಿವಾಸ, ನೆಲೆಗಳನ್ನು ಕಳೆದುಕೊಳ್ಳಲಿದ್ದಾರೆ. ಹೀಗಾಗಿ, ಯೋಜನೆಯನ್ನು ‘ಪಿಆರ್‌ಆರ್ ರೈತ ಹಾಗು ನಿವೇಶನದಾರರ ಸಂಘ’ ವಿರೋಧಿಸಿದೆ. ಯೋಜನೆಯ ಮಾರ್ಗ ಬದಲಿಸಬೇಕು ಅಥವಾ ಯೋಜನೆಯನ್ನೇ ಕೈಬಿಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ಅಲ್ಲದೆ, ಕೆಲವು ರೈತರು ‘ಭೂಸ್ವಾಧೀನ ತಿದ್ದುಪಡಿ ಕಾಯ್ದೆ-2013’ರ ಅಡಿಯಲ್ಲಿ ಪರಿಹಾರ ನೀಡಬೇಕೆಂದು ಕೇಳುತ್ತಿದ್ದಾರೆ. ಬಹುಸಂಖ್ಯಾತ ರೈತರು ತಮ್ಮ ಕೃಷಿ ಭೂಮಿಯನ್ನು ಯೋಜನೆಗಾಗಿ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲವೆಂದು ಪಟ್ಟುಹಿಡಿದಿದ್ದಾರೆ.

ಆದಾಗ್ಯೂ, ಬಿಡಿಎ, ಬ್ರಿಟಿಷರ ಕಾಲದ ‘ಭೂಸ್ವಾಧೀನ ಕಾಯ್ದೆ-1894’ರ ಅಡಿಯಲ್ಲಿ ಭೂಸ್ವಾಧೀನ ಮಾಡಿಕೊಂಡು, ಪರಿಹಾರ ನೀಡುವುದಾಗಿ ಹೇಳುತ್ತಿದೆ. ಆದರೆ, ಭೂಮಿ ಕೊಡಲು ಸಿದ್ದರಿದ್ದೂ, ಸರಿಯಾದ ಪರಿಹಾರ ಬೇಕೆಂದು ಕೇಳುತ್ತಿರುವ ರೈತರು, ‘ಭೂಸ್ವಾಧೀನದಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಹಕ್ಕು ಕಾಯ್ದೆ-2013’ (ಭೂಸ್ವಾಧೀನ ತಿದ್ದುಪಡಿ ಕಾಯ್ದೆ-2013) ಅಡಿಯಲ್ಲಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ನಿತೀಶ್ ಕುಮಾರ್ ಮತ್ತು ಬಿಜೆಪಿಯ ಸ್ವಯಂ ಸೋಲು

1894ರ ಕಾಯ್ದೆಯಡಿ ಭೂಸ್ವಾಧೀನ ಮಾಡಿಕೊಂಡರೆ, ಯೋಜನೆಗೆ ಅಧಿಸೂಚನೆ ಹೊರಡಿಸಲಾದ 2007ರ ಸಂದರ್ಭದಲ್ಲಿ ಭೂಸ್ವಾಧೀನಕ್ಕೆ ಉದ್ದೇಶಿಸಲಾದ ಭೂಮಿಗೆ ಇದ್ದ ಬೆಲೆಗೆ ಅನುಗುಣವಾಗಿ 2 ಪಟ್ಟು ಪರಿಹಾರ ನೀಡಲಾಗುತ್ತದೆ. ಜೊತೆಗೆ, ಪರಿಹಾರದ ಮೊತ್ತದ ಮೇಲೆ ಆದಾಯ ತೆರಿಗೆ ವಿಧಿಸಲಾಗುತ್ತದೆ. ಆದರೆ, 2013 ಕಾಯ್ದೆಯಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಸಮಯದಲ್ಲಿ ಭೂಮಿಗೆ ಇರುವ ಮಾರುಕಟ್ಟೆ ಬೆಲೆಗೆ 3 ಪಟ್ಟು ಹೆಚ್ಚು ಪರಿಹಾರ ನೀಡಲಾಗುತ್ತದೆ ಮತ್ತು ಆದಾಯ ತೆರಿಗೆಯಿಂದ ವಿನಾಯತಿ ಇದೆ. ಹೀಗಾಗಿ, 2013ರ ಕಾಯ್ದೆ ಅಡಿಯಲ್ಲೇ ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಇದೆಲ್ಲದರ ನಡುವೆ, 1894ರ ಕಾಯ್ದೆಯಡಿ ಭೂಸ್ವಾಧೀನ ಮಾಡಿಕೊಳ್ಳುವ ಬಿಡಿಎ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದೆ. ಆದರೆ, ರೈತರು ವಿರೋಧಿಸಿದ್ದು, ಹೈಕೋರ್ಟ್‌ನಲ್ಲಿ ‘ಮಾಸ್‌ ಪಿಟಿಷನ್’ ದಾಖಿಸಿ ಯೋಜನೆಯನ್ನು ರದ್ದುಗೊಳಿಸುವಂತೆ ಕೋರಿದ್ದಾರೆ. ಬಿಡಿಎ ಕಾಯ್ದೆ ಸೆಕ್ಷನ್ 27 ಪ್ರಕಾರ, ಯಾವುದೇ ಯೋಜನೆಗೆ ಅಧಿಸೂಚನೆ ಹೊರಡಿಸಿದ ಐದು ವರ್ಷಗಳಲ್ಲಿ ಆ ಯೋಜನೆ ಜಾರಿಯಾಗದಿದ್ದರೆ ಯೋಜನೆಯೇ ರದ್ದಾಗುತ್ತದೆ ಎಂದು ರೈತರು ವಾದಿಸಿದ್ದಾರೆ. ಅದೇ ಸೆಕ್ಷನ್ ಅಡಿಯಲ್ಲಿ ಯೋಜನೆಯನ್ನು ರದ್ದುಗೊಳಿಸಬೇಕೆಂದು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಇನ್ನು, ಭೂಸ್ವಾಧೀನಕ್ಕೆ ಗುರುತಿಸಲಾದ ಭೂಮಿಯನ್ನು 2007ರಲ್ಲಿಯೇ ನೋಟಿಫೈ ಮಾಡಲಾಗಿದೆ. ಪರಿಣಾಮವಾಗಿ, ರೈತರು ತಮ್ಮ ಭೂಮಿಯನ್ನು ತಾವೇ ಬಳಸಲಾಗದ ಪರಿಸ್ಥಿತಿಯಲ್ಲಿ 20 ವರ್ಷಗಳನ್ನು ದೂಡಿದ್ದಾರೆ. “ಭೂಮಿ ನೋಟಿಫೈ ಆದ ಭೂಮಿಯನ್ನು ಮಾರಾಟ ಮಾಡಲು ಅಥವಾ ಕಟ್ಟಡ ನಿರ್ಮಿಸಲು ಅಥವಾ ಕೃಷಿಯನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ನಮ್ಮ ಶಿಕ್ಷಣ, ಆರೋಗ್ಯ, ವಿವಾಹ ಸೇರಿದಂತೆ ಮೂಲಭೂತ ಅಗತ್ಯಗಳಿಗೆ ಭೂಮಿಯೇ ನಮಗೆ ಆಧಾರವಾಗಿದೆ. ಆದರೆ, ಭೂಮಿಯನ್ನು ಸರ್ಕಾರ ನೋಟಿಫೈ ಮಾಡಿದ್ದು, ಭೂಮಿ ‘ನಿಷ್ಕ್ರಿಯ’ವಾಗಿದೆ. ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿ, ನಮ್ಮ ಸುಪರ್ದಿಗೆ ನೀಡಬೇಕು” ಎಂದು ರೈತರು ಆಗ್ರಹಿಸಿದ್ದಾರೆ.

ಯೋಜನೆ ಕುರಿತು ಈದಿನ.ಕಾಮ್‌ ಜೊತೆ ಮಾತನಾಡಿದ ಸರ್ಜಾಪುರ ನಿವಾಸಿ ಶರತ್, “ಯೋಜನೆಗೆ ಭೂಮಿ ಕೊಡಲು ನಾವು ಸಿದ್ದರಿದ್ದೇವೆ. ಆದರೆ, ಯೋಜನೆಯನ್ನು ಜಾರಿಗೊಳಿಸುವ ತಾಕತ್ತು ಸರ್ಕಾರಗಳಿಗೆ ಇಲ್ಲ. ಹೀಗಾಗಿಯೇ, 21 ವರ್ಷಗಳಿಂದ ಯೋಜನೆಗೆ ನೆನೆಗುದಿಗೆ ಬಿದ್ದಿದೆ. ಯೋಜನೆಗೆ ಭೂಮಿ ಬೇಕೆಂದರೆ, ಬ್ರಿಟಿಷ್ ಕಾಲದ 1894ರ ಕಾಯ್ದೆಯನ್ನು ಬದಿಗಿಟ್ಟು, 2013ರ ಭೂಸ್ವಾಧೀನ ಕಾಯ್ದೆಯಡಿ ಪರಿಹಾರ ಕೊಡಬೇಕು. 2013ರ ಕಾಯ್ದೆಯಡಿ ಪರಿಹಾರ ಕೊಡುವುದಿಲ್ಲ ಎಂದಾದರೆ, ನಾವೂ ಭೂಮಿ ಕೊಡುವುದಿಲ್ಲ. ಭೂಮಿ ನೋಟಿಫಿಕೇಷನ್ ಅಧಿಸೂಚನೆಯನ್ನು ರದ್ದುಗೊಳಿಸಿ, ಡಿನೋಟಿಫೈ ಮಾಡಿ, ನಮ್ಮ ಭೂಮಿಗೆ ಎನ್‌ಒಸಿ ಕೊಡಲಿ. ನಮ್ಮ ಭೂಮಿಯ ಮೇಲೆ ನಮಗೆ ಸಂಪೂರ್ಣ ಅಧಿಕಾರ ನಮಗೆ ಕೊಡಲಿ” ಎಂದು ಒತ್ತಾಯಿಸಿದ್ದಾರೆ.

ರೈತರು ಸರ್ಕಾರದೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಆದರೆ, ಯಾವುದೇ ಒಪ್ಪಂದಕ್ಕೆ ಬರಲಾಗಿಲ್ಲ. ಹೀಗಾಗಿ, ರೈತರು ಯೋಜನೆಯನ್ನು ರದ್ದುಪಡಿಸಬೇಕು ಅಥವಾ ನ್ಯಾಯಯುತ ಪರಿಹಾರ ನೀಡಬೇಕು ಎಂದು ಒತ್ತಿ ಹೇಳುತ್ತಿದ್ದಾರೆ.

ಯೋಜನೆ ಬಗ್ಗೆ ಮಾತನಾಡಿರುವ ‘ಬೆಂಗಳೂರು ಬಿಸಿನೆಸ್ ಕಾರಿಡಾರ್ ಲಿಮಿಟೆಡ್‌’ನ ಅಧ್ಯಕ್ಷ ಎಲ್.ಕೆ ಅತೀಕ್, “ಯೋಜನೆಗಾಗಿ ಭೂಮಿ ಒದಗಿಸುವ ರೈತರಿಗೆ ಸರ್ಕಾರವು ಐದು ವಿಭಿನ್ನ ರೀತಿಯ ಪರಿಹಾರ ಆಯ್ಕೆಗಳನ್ನು ನೀಡಿದೆ. ಈ ಬಗ್ಗೆ ನವೆಂಬರ್‌ನಲ್ಲಿ ರೈತರಿಗೆ ಮಾಹಿತಿ ಮಾಡಲಾಗುತ್ತದೆ. ಆ ನಂತರವೇ, ರೈತರು ಅವುಗಳನ್ನು ಸ್ವೀಕರಿಸುತ್ತಾರೆಯೇ ಅಥವಾ ತಿರಸ್ಕರಿಸುತ್ತಾರೆಯೇ ಎಂದು ನಮಗೆ ತಿಳಿಯಬಹುದು. ಪರಿಹಾರ ಆಯ್ಕೆಗಳು ರೈತರಿಗೆ ಸೂಕ್ತ ಪರಿಹಾರ ನೀಡುತ್ತವೆ” ಎಂದು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...