ಪತ್ರಕರ್ತರು ಕೋಮುವಾದಿ ಜ್ವಾಲೆಯನ್ನು ಭುಗಿಲೆಬ್ಬಿಸುತ್ತಿದ್ದಾರೆ ಎಂದಿದ್ದ ಭಗತ್ ಸಿಂಗ್

Date:

‘ಕೋಮು ದಂಗೆಗಳಿಗೆ ಪ್ರಚೋದನೆ ನೀಡುವ ಇತರೆ ಪ್ರಮುಖ ಪಾತ್ರಧಾರಿಗಳ ಸಾಲಿಗೆ ಪತ್ರಕರ್ತರೂ ಸೇರುತ್ತಾರೆ
ಒಂದು ಕಾಲಕ್ಕೆ ಬಹುಗಣ್ಯ ಕಸುಬು ಎಂದು ಪರಿಗಣಿಸಲಾಗಿದ್ದ ಪತ್ರಿಕೋದ್ಯಮ ಈಗ ತಿಪ್ಪೆಯಾಗಿ ಬದಲಾಗಿದೆ
ಪರಸ್ಪರರನ್ನು ಕೊಲ್ಲುವ ಉನ್ಮಾದಗಳನ್ನು ಜನರಲ್ಲಿ ಪ್ರಚೋದಿಸುತ್ತಿದ್ದಾರೆ. ಪತ್ರಿಕೆಗಳು ಆಸ್ಫೋಟಕ ಮತ್ತು ಅತೀವ ಪ್ರಚೋದಕ ಲೇಖನಗಳನ್ನು ಪ್ರಕಟಿಸಿ ಕೋಮುವಾದೀ ಜ್ವಾಲೆಯನ್ನು ಭುಗಿಲೆಬ್ಬಿಸುತ್ತಿವೆ. ಭಗತ್ ಸಿಂಗ್ 1927ರಲ್ಲಿ ಬರೆದಿದ್ದ ಮಾತುಗಳು. ಇಂದಿಗೂ ನಿಜವಾಗಿ ಉಳಿದಿವೆ.

ಬ್ರಿಟಿಷ್ ವಸಾಹತುಶಾಹಿಯ ನೇಣಿಗೆ ನಗು ನಗುತ್ತಲೇ ಕೊರಳೊಡ್ಡಿ ಸ್ವಾತಂತ್ರ್ಯ ಕ್ರಾಂತಿಯ ಕಿಡಿಯನ್ನು ಲಕ್ಷಾಂತರ ಹೃದಯಗಳಲ್ಲಿ ಹೊತ್ತಿಸಿದ ಭಗತ್ ಸಿಂಗ್ ಬದುಕಿದ್ದು ಇಪ್ಪತ್ಮೂರೇ ವರ್ಷ. ಇಂದು (ಸೆ. 28) ಈ ಕ್ರಾಂತಿಕಾರಿಯ ಹುಟ್ಟಿದ ಹಬ್ಬ. 1907ರ ಸೆಪ್ಟಂಬರ್ 28ರಂದು ಬ್ರಿಟಿಷ್ ಆಡಳಿತದ ಪಂಜಾಬಿನ ಲಿಲಾಪುರ್ ಜಿಲ್ಲೆಯ ಬಂಗಾ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ. ಇಂದು ಲಿಲಾಪುರ್ ಪಾಕಿಸ್ತಾನದ ಭಾಗ. ಫೈಸಲಾಬಾದ್ ಎಂದು ಹೆಸರು ಬದಲಾಗಿದೆ. ಆದರೆ ಭಗತ್ ಸಿಂಗ್‌ಗೆ ಅಲ್ಲಿ ಸ್ಮಾರಕವಿದೆ. ಈ ಅಪ್ರತಿಮ ದೇಶಭಕ್ತನನ್ನು 1931 ಮಾರ್ಚ್ 23ರಂದು ಬ್ರಿಟಿಷರು ಗಲ್ಲಿಗೇರಿಸಿದರು.

ಭಗತ್ ಜನಿಸಿದ ಪಂಜಾಬಿ ಜಾಟ ಸಿಖ್ ಕುಟುಂಬ ನಿಜ ದೇಶಭಕ್ತಿಯ ಪರಂಪರೆಯನ್ನೇ ಹೊಂದಿತ್ತು. ತಂದೆ ಕಿಶನ್ ಸಿಂಗ್ ಮತ್ತು ತಾಯಿ ವಿದ್ಯಾವತಿ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಚಟುವಟಿಕೆಗಳಿಗೆ ಹೆಸರಾಗಿದ್ದವರು. ತಾತ ಅರ್ಜನ್ ಸಿಂಗ್, ಚಿಕ್ಕಪ್ಪಂದಿರಾದ ಅಜಿತ್ ಸಿಂಗ್, ಅರ್ಜನ್ ಸಿಂಗ್ ಹಾಗೂ ಸ್ವರಣ್ ಸಿಂಗ್ ಬ್ರಿಟಿಷ್ ವಿರೋಧಿ ರಾಷ್ಟ್ರವಾದಿಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

1919ರಲ್ಲಿ ಜರುಗಿದ ಜಲಿಯನ್ ವಾಲಾ ಬಾಗ್ ನರಮೇಧ ಭಗತ್ ಸಿಂಗ್‌ನ ಕ್ರಾಂತಿಕಾರಿ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿತು. ತನ್ನ 12ನೆಯ ವಯಸ್ಸಿನಲ್ಲಿ ಬಾಲಕನಾಗಿದ್ದಾಗಲೇ ಜಲಿಯನ್ ವಾಲಾ ಬಾಗ್ ಗೆ ಭೇಟಿ ನೀಡಿದ್ದ ಭಗತ್ ಸಿಂಗ್.

ಉಕ್ಕು ಹರೆಯದ ಈ ಬಿಸಿ ಗುಂಡಿಗೆ ದಾಸ್ಯದ ವಿರುದ್ಧ ಮಾತ್ರವೇ ಅಲ್ಲ, ಸಮ ಸಮಾಜ, ಸಹಬಾಳುವೆಗಾಗಿ ಮಿಡಿದ ಪರಿ ಅಭೂತಪೂರ್ವ. ಆದರೆ ಕೋಮುವಾದ, ಅಸ್ಪೃಶ್ಯತೆ, ಧರ್ಮ-ಜಾತಿಗಳು, ಮೇಲು- ಕೀಳುಗಳ ನೆವದಲಿ ನಡೆವ ಕ್ರೌರ್ಯ-ಶೋಷಣೆ ವಿರುದ್ಧ ಆತ ಎತ್ತಿದ ದನಿ  ಇಂದಿಗೂ ಪ್ರಖರ.

ಸ್ವಾತಂತ್ರ್ಯ ಗಳಿಕೆಯ ಆಚೆಗೆ ಮೇಲು ಕೀಳುಗಳ ನಡುವೆ ಭಾರತದಲ್ಲಿ ಹುಟ್ಟಬೇಕಿದ್ದ ಸಮ ಸಮಾಜದಲ್ಲಿ ನೆಟ್ಟಿತ್ತು ಆತನ ಮನ. ಈ ಕಾರಣಕ್ಕಾಗಿ ಉಳಿದೆಲ್ಲ ಭಗತ್ ಸ್ಥಾನ ಕ್ರಾಂತಿಕಾರಿಗಳಿಗಿಂತ ವಿಶಿಷ್ಟ. ತೊಂಬತ್ತು ವರ್ಷಗಳ ಹಿಂದೆ ಬ್ರಿಟಿಷರು ಭಗತ್ ದೇಹವನ್ನು ಗಲ್ಲಿಗೇರಿಸಿದ್ದರು. ಆದರೆ ಆತನ ಆತ್ಮವನ್ನು, ಸಮಸಮಾಜದ ಆತನ ಕನಸುಗಳನ್ನು ಸ್ವತಂತ್ರ ಭಾರತ ಅನುದಿನವೂ ನೇಣುಗಂಬಕ್ಕೇರಿಸಿ ನೇತಾಡಿಸುತ್ತಿದೆ.

ಪಂಜಾಬಿ, ಹಿಂದಿ, ಉರ್ದು ಹಾಗೂ ಇಂಗ್ಲಿಷ್ ಭಾಷೆಗಳ ಮೇಲೆ ಹಿಡಿತವಿದ್ದ ಭಗತ್ ಬರವಣಿಗೆಯನ್ನು ಹಲವು ಸಮಕಾಲೀನ ಪತ್ರಿಕೆಗಳು ಪ್ರಕಟಿಸುತ್ತಿದ್ದವು. ಪಿಸ್ತೂಲಿನಿಂದ ಕಾಡತೂಸು ಸಿಡಿಸಿ ಬಾಂಬುಗಳ ಎಸೆದವನಾದರೂ ಭಗತ್ ಕಿಸೆಯಲ್ಲಿ ಪುಸ್ತಕವೊಂದು ಸದಾ ಇರುತ್ತಿತ್ತಂತೆ. ವಯಸ್ಸಿಗೆ ಮೀರಿದ ಪ್ರಬುದ್ಧತೆ, ನಿಸ್ವಾರ್ಥ, ಸಮರ್ಪಣಾ ಭಾವ, ವಿನಮ್ರತೆ, ಸ್ವವಿಮರ್ಶೆ, ಸೂಕ್ಷ್ಮತೆಗೆ ಬದ್ಧನಾಗಿದ್ದ ಈ ಚಿರಯುವಕನ ಪರಂಪರೆಯನ್ನು ಪ್ರತಿಗಾಮಿ ಶಕ್ತಿಗಳು ತಮ್ಮ ತೆಕ್ಕೆಗೆ ಸೆಳೆದುಕೊಂಡಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಆತ ನಂಬಿದ್ದ ಶೋಷಣೆರಹಿತ ಸಮಾಜ ನಿರ್ಮಾಣದ ವಿಚಾರಗಳನ್ನು ಮರೆಮಾಚಿ ಆತನಿಗೆ ಯಥಾಸ್ಥಿತಿವಾದದ ರಂಗು ಮೆತ್ತಿ ನಿಲ್ಲಿಸುವ ಹುಸಿಪ್ರಚಾರದ ಪ್ರಯತ್ನಗಳು ಎಡೆಬಿಡದೆ ನಡೆದಿವೆ. ಇದೇ ಹುನ್ನಾರಕ್ಕೆ ಇತ್ತೀಚಿನ ವರ್ಷಗಳಲ್ಲಿ ಬಲಿಯಾಗಿರುವ ಇತರೆ ಮೇರು ವ್ಯಕ್ತಿತ್ವಗಳು ಡಾ.ಬಾಬಾಸಾಹೇಬ ಅಂಬೇಡ್ಕರ್, ಮಹಾತ್ಮ ಗಾಂಧಿ ಹಾಗೂ ಸರ್ದಾರ್ ವಲ್ಲಭ ಭಾಯಿ ಪಟೇಲ್.

bhagat singh
ಜೈಲಿನಲ್ಲಿ ಕೈದಿಯಾಗಿ ಭಗತ್‌ ಸಿಂಗ್

ಭಗತ್ ಸಿಂಗ್ ಬದುಕಿದ್ದಾಗ ಈ ಪ್ರತಿಗಾಮಿ ಶಕ್ತಿಗಳು ಈತನ ಬಳಿ ಸುಳಿದಿರಲಿಲ್ಲ. ಅವುಗಳ ನೆರಳು ಕೂಡ ಸೋಂಕಿರಲಿಲ್ಲ. ಬದಲಿಗೆ ತನ್ನ ಕಡೆಯ ದಿನಗಳಲ್ಲಿ ಆತ ಕಾರ್ಲ್‌ಮಾರ್ಕ್ಸ್ ವಿಚಾರಧಾರೆಗೆ ಒಲಿದಿದ್ದ. ಕೋಮುವಾದವನ್ನು ಕಟುವಾಗಿ ವಿರೋಧಿಸಿದ್ದ. ಬ್ರಿಟಿಷರ ಬಂಧಿಯಾಗಿ ಕಳೆದ ಬದುಕಿನ ಕಟ್ಟಕಡೆಯ ಎರಡು ವರ್ಷಗಳಲ್ಲಿ ಭಗತ್ ಮಾರ್ಕ್ಸ್ ವಾದದ ಕಡೆ ನಡೆದಿದ್ದ.

‘ಸಾಂಪ್ರದಾಯಿಕ ದಂಗೆಗಳು ಮತ್ತು ಅವುಗಳ ಇಲಾಜು’ ಎಂಬುದಾಗಿ ‘ಕೀರ್ತಿ’ (ರೈತರು ಮತ್ತು ಕೂಲಿಕಾರರ ಮಾಸಪತ್ರಿಕೆ) ಮತ್ತು ‘ಉತ್ತರಾರ್ಧ’ ಎಂಬ ಪಂಜಾಬಿ ನಿಯತಕಾಲಿಕಗಳಿಗೆ 1927ರಲ್ಲಿ ಭಗತ್ ಬರೆದ ಲೇಖನ ಇಂದಿನ ಭಾರತದ ಸ್ಥಿತಿಗತಿಗೆ ಹಿಡಿದ ಕನ್ನಡಿ. ಕೋಮುವಾದಿ ನಂಜಿನ ಬಗ್ಗಡವನ್ನು ಬಡಿದೆಬ್ಬಿಸುತ್ತಿರುವ ವಿಷಮತೆ-ಅಸಹನೆಗಳ ಇಂದಿನ ದಿನಗಳಿಗೂ ಪ್ರಸ್ತುತ.

ಸಮಾಜವಾದ ಮತ್ತು ಮಾರ್ಕ್ಸವಾದದ ಆಚೆಗೆ ಅರಾಜಕತಾವಾದ ಕೂಡ ಭಗತ್ ಸಿಂಗನನ್ನು ಗಾಢವಾಗಿ ಪ್ರಭಾವಿಸಿತ್ತು. ಸಾಮಾನ್ಯವಾಗಿ ವ್ಯಕ್ತಿಗತ ಭಯೋತ್ಪಾದನೆಯ ಜೊತೆ ಸಮೀಕರಿಸುವ ವಾದವಿದು. ರಷ್ಯಾದ ಕ್ರಾಂತಿಕಾರಿ ಮಿಖಾಯಿಲ್ ಅಲೆಕ್ಸಾಂಡ್ರೋವಿಚ್ ಬಕುನಿನ್ ಮುಂತಾದವರ ಬರೆಹಗಳನ್ನು ಓದಿ ಆತ್ತ ಕಡೆಗೆ ಆಕರ್ಷಿತನಾಗಿದ್ದ. ಗಲ್ಲುಗಂಬ ಏರುವ ಮೂರು ವರ್ಷಗಳ ಮುನ್ನ 1928ರಲ್ಲಿ ಅರಾಜಕವಾದವನ್ನು ಮೆಚ್ಚಿದ ಆತನ ದೀರ್ಘ ಬರೆಹ ‘ಕೀರ್ತಿ’ಯಲ್ಲಿ ಧಾರಾವಾಹಿಯಾಗಿ ಪ್ರಕಟ ಆಗಿತ್ತು. ಅರಾಜಕವಾದದ ಕಟ್ಟ ಕಡೆಯ ಗುರಿ ಸಂಪೂರ್ಣ ಸ್ವರಾಜ್ಯ ಗಳಿಕೆ. ದೇವರು-ಧರ್ಮ-ಆಸ್ತಿಪಾಸ್ತಿಗಳ ಮೇಲೆ ಖಾಸಗಿ ಒಡೆತನ ಹಾಗೂ ನಿರಂಕುಶ ಪ್ರಭುತ್ವವನ್ನು ಸಂಕೋಲೆಗಳೆಂದು ಆತ ನಿರಾಕರಿರಾಜಕಾರಣದಿಂದ ಧರ್ಮವನ್ನು ಹೊರಗಿಡುವ ಅಗತ್ಯವನ್ನು ಗೆರೆ ಕೊರೆದು ಹೇಳಿದ್ದ ಭಗತ್ ಸಿಂಗ್. ಧರ್ಮವೆಂಬುದು ಖಾಸಗಿ ವ್ಯವಹಾರ. ಅದು ರಾಜಕಾರಣವನ್ನು ಪ್ರವೇಶಿಸದಂತೆ ಪ್ರತಿಬಂಧಿಸಬೇಕು. ಕೋಮುವಾದದ ಪೀಡೆಯನ್ನು ತೊಡೆದು ಹಾಕಲು ಧರ್ಮ ಮತ್ತು ರಾಜಕಾರಣವನ್ನು ಪ್ರತ್ಯೇಕಗೊಳಿಸುವುದೇ ಏಕೈಕ ಪರಿಹಾರ ಎಂದು ಸಾರಿದ್ದ. ಉಗ್ರ ಹಿಂದುತ್ವದ ರಾಜಕಾರಣ ನಡೆಸಿರುವ ಇಂದಿನ ಶಕ್ತಿಗಳಿಗೂ ಭಗತ್ ಗೂ ಸಂಬಂಧವೇ ಇರಲಿಲ್ಲ.

ಕೋರ್ಟುಗಳನ್ನು ತಮ್ಮ ಕ್ರಾಂತಿಕಾರಿ ವಿಚಾರಗಳ ಪ್ರಚಾರಾಂದೋಲನಕ್ಕೆ ಬಳಸಿಕೊಂಡಿದ್ದರು ಭಗತ್ ಸಿಂಗ್ ಮತ್ತು ಆತನ ಸಂಗಾತಿಗಳು. 1930ರ ಜನವರಿ 21ರಂದು ವಿಚಾರಣೆಗೆಂದು ಕೋರ್ಟಿಗೆ ಹಾಜರಾಗಿದ್ದ ಭಗತ್ ಮತ್ತು ಸಂಗಾತಿಗಳು ಧರಿಸಿದ್ದು ಕೆಂಪು ಕೊರಳವಸ್ತ್ರಗಳನ್ನು. ಕೂಗಿದ್ದು ಸಮಾಜವಾದಿ ಕ್ರಾಂತಿ ಚಿರಾಯು ಆಗಲಿ, ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್ ಚಿರಾಯು ಆಗಲಿ, ಚಿರಾಯುವಾಗಲಿ ಜನತೆ, ಲೆನಿನ್ ಹೆಸರಿಗೆ ಅಳಿವಿಲ್ಲ, ಸಾಮ್ರಾಜ್ಯಶಾಹಿಗೆ ಧಿಕ್ಕಾರ ಮುಂತಾದ ಘೋಷಣೆಗಳನ್ನು.

lenin
ಲೆನಿನ್‌

ಕಡೆಯ ವರ್ಷಗಳ ಜೈಲುವಾಸದಲ್ಲಿ ಭಗತ್ ಓದಿನ ಬೀಸು, ಆತ ಬರೆದ 146 ಪುಟಗಳ ಜೈಲು ಟಿಪ್ಪಣಿಗಳಲ್ಲಿ ಪ್ರತಿಫಲಿಸಿದೆ. 108 ಲೇಖಕರ ಪುಸ್ತಕಗಳನ್ನು ಅರಗಿಸಿಕೊಂಡು ಬರೆದುಕೊಂಡ ಉಲ್ಲೇಖಗಳು ಮತ್ತು ಟಿಪ್ಪಣಿಗಳಿವು. ಎಂಗೆಲ್ಸ್ ನ ಸಮಾಜವಾದ-ಯುಟೋಪಿಯನ್ ಅಂಡ್ ಸೈಂಟಿಫಿಕ್. ಖಾಸಗಿ ಆಸ್ತಿಪಾಸ್ತಿ ಮತ್ತು ಪ್ರಭುತ್ವ, ಮಾರ್ಕ್ಸ್ ಮತ್ತು ಎಂಗೆಲ್ಸ್ ನ ದಿ ಕಮ್ಯೂನಿಸ್ಟ್ ಮ್ಯಾನಿಫೆಸ್ಟೋ, ಬರ್ಟ್ರ್ಯಾಂಡ್ ರಸೆಲ್, ಥಾಮಸ್ ಪೇನ್, ದೊಸ್ತೋಯೆವ್ಸ್ಕೀ, ಬುಖಾರಿನ್, ವ್ಹಿಟ್ಮ್ಯಾನ್, ಓಮರ್ ಖಯ್ಯಾಮನ ಕೃತಿಗಳಿಂದ ಧಾರಾಳ ಉಲ್ಲೇಖಗಳು ಈ ಟಿಪ್ಪಣಿಗಳಲ್ಲಿವೆ. ಗಲ್ಲಿಗೇರುವ ಹಿಂದಿನ ವರ್ಷ ಭಗತ್ ಬರೆದ ‘’ನಾನೇಕೆ ನಾಸ್ತಿಕ’’ ಮತ್ತು ‘’ಎಳೆಯ ರಾಜಕೀಯ ಕಾರ್ಯಕರ್ತರಿಗೆ’’ ಕೃತಿಗಳಲ್ಲಿ ಲೆನಿನ್ನನ ಲೆಫ್ಟ್ ವಿಂಗ್ ಕಮ್ಯೂನಿಸಮ್ ಅಂಡ್ ಇಂಪೀರಿಯಲಿಸಮ್ ಮತ್ತು ದಿ ಹೈಯೆಸ್ಟ್ ಸ್ಟೇಜ್ ಆಫ್ ಕ್ಯಾಪಿಟಲಿಸಂನ ಸ್ಪಷ್ಟ ಪ್ರಭಾವಗಳನ್ನು ಇತಿಹಾಸಕಾರರು ಕಂಡಿದ್ದಾರೆ.

ಅಸಲು ಕ್ರಾಂತಿಕಾರಿ ಸೈನ್ಯಗಳಿರುವುದು ಹಳ್ಳಿಗಳಲ್ಲಿ ಮತ್ತು ಫ್ಯಾಕ್ಟರಿಗಳಲ್ಲಿ… ಅವರೆಂದರೆ ರೈತರು ಮತ್ತು ಕಾರ್ಮಿಕರು. ನೇಣಿಗೇರಿದ ಎರಡು ತಿಂಗಳ ಮುನ್ನ 1931ರ ಫೆಬ್ರವರಿ ಎರಡರಂದು ಬರೆದ ‘To the young political workers’  ಲೇಖನದಲ್ಲಿ ಕಾಣಬರುವ ಈ ಸಾಲುಗಳು ಆತನ ಒಲವು ನಿಲುವುಗಳನ್ನು ನಿಚ್ಚಳಗೊಳಿಸುತ್ತವೆ.

‘ಈಗಿನ ಇಂಡಿಯಾದ ಪರಿಸ್ಥಿತಿಯನ್ನು ನೋಡಿದರೆ ರಕ್ತಕಣ್ಣೀರು ಕಪಾಳಕ್ಕೆ ಇಳಿವುದಲ್ಲದೆ, ಕಟ್ಟಕಡೆಗೆ ಈ ದೇಶದ ಪರಿಸ್ಥಿತಿ ಏನಾದೀತು ಎಂಬ ಪ್ರಶ್ನೆ ಏಳುತ್ತದೆ. ಜನ ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸಬೇಕಿದ್ದರೆ, ದೀನ ದರಿದ್ರರು ಮತ್ತು ರೈತರು ಮತ್ತು ದುಡಿಯುವ ವರ್ಗಗಳಿಗೆ ಬಂಡವಾಳಶಾಹಿಯೇ ಅವರ ಅಸಲು ಶತ್ರು ಎಂಬ ವಾಸ್ತವವನ್ನು ತಿಳಿಸಿ ಹೇಳಬೇಕಿದೆ. ಅವರ ಕೈಯಲ್ಲಿನ ದಾಳ ಆಗದಂತೆ, ಅವರ ಮೋಸ ಮರೆಗಳ ಹುನ್ನಾರಗಳಿಗೆ ಬಲಿಯಾಗದಂತೆ ಎಚ್ಚರಗೊಳಿಸಬೇಕಿದೆ. ಎಲ್ಲ ಜಾತಿ, ವರ್ಣ, ಜನಾಂಗ, ರಾಷ್ರೀಯತೆಯ ಭೇದ ಭಾವವಿಲ್ಲದೆ ಒಗ್ಗಟ್ಟಿನಿಂದ ತಮ್ಮ ಹಕ್ಕುಗಳಿಗೆ ಹೋರಾಡಬೇಕೆಂಬ ಅರಿವನ್ನು ಎಲ್ಲ ಬಡವರಲ್ಲಿ ಮೂಡಿಸಬೇಕಿದೆ’ ಎಂದಿದ್ದ.

ಇದನ್ನೂ ಓದಿ ವೀರಶೈವ- ಲಿಂಗಾಯತ: ಜಾತಿ ಸಮೀಕ್ಷೆಯಲ್ಲಿ ‘ಧರ್ಮ’ ಯಾವುದಯ್ಯಾ?

ಹಾಗೆಯೇ ಕೋಮುವಾದದ ದಳ್ಳುರಿಗೆ ಎಣ್ಣೆ ಎರೆವ ಅಂದಿನ ಪತ್ರಿಕೆಗಳ ಕುರಿತು ಭಗತ್ ಹೇಳಿದ್ದ ಮಾತುಗಳ ಗಮನಿಸಿ. ‘ಕೋಮು ದಂಗೆಗಳಿಗೆ ಪ್ರಚೋದನೆ ನೀಡುವ ಇತರೆ ಪ್ರಮುಖ ಪಾತ್ರಧಾರಿಗಳ ಸಾಲಿಗೆ ಪತ್ರಕರ್ತರೂ ಸೇರುತ್ತಾರೆ. ಒಂದು ಕಾಲಕ್ಕೆ ಬಹುಗಣ್ಯ ಕಸುಬು ಎಂದು ಪರಿಗಣಿಸಲಾಗಿದ್ದ ಪತ್ರಿಕೋದ್ಯಮ ಈಗ ತಿಪ್ಪೆಯಾಗಿ ಬದಲಾಗಿದೆ. ಒಬ್ಬರ ವಿರುದ್ಧ ಮತ್ತೊಬ್ಬರು ತಲೆಬರೆಹಗಳಲ್ಲಿ ಕೂಗಿ ಕಿರುಚುತ್ತಾರೆ, ಪರಸ್ಪರರನ್ನು ಕೊಲ್ಲುವ ಉನ್ಮಾದಗಳನ್ನು ಜನರಲ್ಲಿ ಪ್ರಚೋದಿಸುತ್ತಿದ್ದಾರೆ. ಪತ್ರಿಕೆಗಳು ತೀವ್ರತರದ ಆಸ್ಫೋಟಕ ಮತ್ತು ಅತೀವ ಪ್ರಚೋದಕ ಲೇಖನಗಳನ್ನು ಪ್ರಕಟಿಸಿ ಕೋಮುವಾದೀ ಜ್ವಾಲೆಯನ್ನು ಹತ್ತು ಹಲವು ಸ್ಥಳಗಳಲ್ಲಿ ಭುಗಿಲೆಬ್ಬಿಸುತ್ತಿವೆ. ತಳಮಳ ತಳ್ಳಂಕಗಳ ಈ ಸ್ಥಿತಿಯಲ್ಲಿ ಸಮಚಿತ್ತವನ್ನು, ಸಮತೂಕವನ್ನು ಪ್ರದರ್ಶಿಸಿದ ಪತ್ರಕರ್ತರು ಕೆಲವೇ ಕೆಲವರು. ಜನತೆಯಲ್ಲಿ ಅರಿವು ಮೂಡಿಸಿ ಅವರ ಮೆದುಳುಗಳನ್ನು ನಿರ್ಮಲವಾಗಿ ಇರಿಸುವುದು, ಸಂಕುಚಿತವಾದದ ಬಿಲಗಳಿಂದ ಹೊರಗೆಳೆದು ತರುವುದು, ಕೋಮುವಾದೀ ಭಾವನೆಗಳನ್ನು ಕೆರೆದು ತೆಗೆದು ತೊಳೆದು ಪರಸ್ಪರ, ಸಾಮರಸ್ಯ ಮೂಡಿಸುವುದು ಪತ್ರಿಕೆಗೆಳ ಅಸಲು ಕರ್ತವ್ಯ. ….ಬದಲಾಗಿ ಅರಿವುಗೇಡಿತನ, ಸಂಕುಚಿತ ಪಂಥವಾದ- ಕೋಮುವಾದಗಳನ್ನು ಜನರ ಮನಸುಗಳಲ್ಲಿ ಬಿತ್ತಿ ಗಲಭೆಗಳನ್ನು ಎಬ್ಬಿಸುವುದೇ ಅವರ ಮುಖ್ಯ ಗುರಿ ಎನ್ನಿಸುತ್ತಿದೆ’.

ಅಂದು ಆತ ವಿರೋಧಿಸಿದ್ದ ಅದೇ ಕೋಮುವಾದಿ ಶಕ್ತಿಗಳು ಇಂದು ಆತನನ್ನು ಕಬ್ಜಾ ಮಾಡಿಕೊಳ್ಳುವ ಕಸರತ್ತು ನಡೆಸಿರುವುದು ಬಹು ದೊಡ್ಡ ವಿಡಂಬನೆ. 

WhatsApp Image 2025 11 17 at 4.03.10 PM
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...