ಅಂದು 1931ರ ಮಾರ್ಚ್ 23ರ ಸಂಜೆ 7:33 ಗಂಟೆ. ಭಾರತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಾಲವೇ ಅರೆಗಳಿಗೆ ಸ್ತಬ್ಧವಾದ ಕ್ಷಣ. ಇಪ್ಪತ್ತರ ಹರೆಯದ ಮೂವರು ಯುವಕರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ನೇಣುಗಂಬಕ್ಕೆ ಮುತ್ತಿಕ್ಕಿದ ಘಳಿಗೆ. ಬ್ರಿಟಿಷ್ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಆ ಸಿಡಿಲುಮರಿಗಳ ಅಂತಿಮ ಕ್ಷಣಗಳು ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ಈಗಲೂ ಹಸಿ ಹಸಿ!
ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಹಂಕಾರದ ಅಡಿಪಾಯವನ್ನು ಅಲ್ಲಾಡಿಸಿದ್ದ ಭಗತ್ ಸಿಂಗ್, ಸುಖದೇವ್ ಮತ್ತು ರಾಜ್‌ಗುರು ಎಂಬ ಕಲಿಗಳು ಸಾವನ್ನು ಎದುರಿಸಿದ ಪರಿಗೆ ಸಾವು ಕೂಡ ನಾಚುವಂತಿತ್ತು. ಇಂದಿಗೆ ಅವರ ಬಲಿದಾನವಾಗಿ ದಶಕಗಳು ಉರುಳಿದರೂ, ಆ ಕ್ರಾಂತಿಯ ಕಿಚ್ಚು ಇಂದಿಗೂ ಭಾರತೀಯನ ಧಮನಿಯಲ್ಲಿ ದೇಶಪ್ರೇಮದ ರಕ್ತ ಸಂಚಾರ ಮಾಡಿಸುತ್ತದೆ.
ಭಾರತದ ಆಡಳಿತದಲ್ಲಿ ಮೂಗು ತೂರಿಸಲು 1928ರಲ್ಲಿ, ಬ್ರಿಟಿಷರೇ ತುಂಬಿದ್ದ ʼಸೈಮನ್ ಕಮಿಷನ್ʼ ಭಾರತಕ್ಕೆ ಬಂತು. ಇದು ದೇಶಾದ್ಯಂತ ವ್ಯಾಪಕ ವಿರೋಧ, ಪ್ರತಿಭಟನೆಗಳಿಗೆ ಕಾರಣವಾಯಿತು. ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾದ ಲಾಲಾ ಲಜಪತ್ ರಾಯ್ ಅವರು 1928ರ ಅಕ್ಟೋಬರ್ 30ರಂದು ಲಾಹೋರ್‌ನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಆಗ ಪೊಲೀಸ್ ಅಧೀಕ್ಷಕ ಜೇಮ್ಸ್ ಎ. ಸ್ಕಾಟ್ ಲಾಠಿ ಪ್ರಹಾರಕ್ಕೆ ಆದೇಶಿಸಿದನು. ಇದರಿಂದ ಅವರು ತೀವ್ರವಾಗಿ ಗಾಯಗೊಂಡರು ಮತ್ತು 1928ರ ನವೆಂಬರ್ 17ರಂದು ನಿಧನರಾದರು. ಅವರ ಸಾವಿಗೆ ಸೇಡು ತೀರಿಸಿಕೊಳ್ಳಲು ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅವರ ಗುರಿ ಲಾಠಿ ಪ್ರಹಾರಕ್ಕೆ ಆದೇಶ ನೀಡಿದ್ದ ಪೊಲೀಸ್ ಅಧೀಕ್ಷಕ ಜೇಮ್ಸ್ ಸ್ಕಾಟ್ ಆಗಿದ್ದನು. ಆದರೆ, ಗುರುತು ಹಿಡಿಯುವಲ್ಲಿ ಎಡವಿ ಸ್ಕಾಟ್ ಬದಲಿಗೆ ಬ್ರಿಟಿಷ್ ಪೊಲೀಸ್ ಅಧಿಕಾರಿ ಜಾನ್ ಸ್ಯಾಂಡರ್ಸ್‌ನನ್ನು ಕೊಂದರು. ಸ್ಯಾಂಡರ್ಸ್ ಹತ್ಯೆಯ ಆರೋಪದ ಮೇಲೆ ಇವರನ್ನು ಬಂಧಿಸಿ, ವಿಚಾರಣೆ ನಡೆಸಿ ಅಂತಿಮವಾಗಿ ಮರಣದಂಡನೆ ವಿಧಿಸಲಾಯಿತು.
ಸ್ಯಾಂಡರ್ಸ್ ಹತ್ಯೆಯ ನಂತರ ಬ್ರಿಟಿಷ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಭಗತ್ ಸಿಂಗ್ ತಮ್ಮ ಉದ್ದನೆಯ ಗಡ್ಡ ಮತ್ತು ಕೂದಲನ್ನು ಕತ್ತರಿಸಿ, ಹ್ಯಾಟ್ ಧರಿಸಿ ಸಾಹೇಬನಂತೆ ವೇಷ ಬದಲಿಸಿದ್ದರು. ಈ ವೇಷದಲ್ಲಿ ಅವರಿಗೆ ಸಹಾಯ ಮಾಡಿದ್ದು ಕ್ರಾಂತಿಕಾರಿ ಭಗವತಿ ಚರಣ್ ವೋಹ್ರಾ ಅವರ ಪತ್ನಿ ದುರ್ಗಾ ದೇವಿ (ದುರ್ಗಾ ಭಾಭಿ). ಭಗತ್ ಜೈಲಿನಲ್ಲಿದ್ದಾಗ ಸುಮಾರು 404 ಪುಟಗಳ ದಿನಚರಿಯನ್ನು ಬರೆದಿದ್ದರು. ಅದರಲ್ಲಿ ವಿವಿಧ ದೇಶಗಳ ಕ್ರಾಂತಿಕಾರಿಗಳ ವಿಚಾರಗಳು, ಕವಿತೆಗಳು ಮತ್ತು ಸಮಾಜದ ಬಗ್ಗೆ ತಮ್ಮ ಆಳವಾದ ಅಧ್ಯಯನವನ್ನು ದಾಖಲಿಸಿದ್ದರು.
ಯಾವುದೇ ಕೈದಿಯನ್ನು ಗಲ್ಲಿಗೇರಿಸುವ ಮುನ್ನ ಅವರ ಮುಖಕ್ಕೆ ಕಪ್ಪು ಬಟ್ಟೆ ಹಾಕಿ, ಕೈಗಳನ್ನು ಹಿಂದೆ ಕಟ್ಟಿ ಕರೆದೊಯ್ಯಲಾಗುತ್ತದೆ. ಆದರೆ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದರು. “ನಮಗೆ ಕಪ್ಪು ಬಟ್ಟೆಯ ಅವಶ್ಯಕತೆಯಿಲ್ಲ, ನಾವು ಸಾವನ್ನು ಕಣ್ಣಾರೆ ನೋಡಲು ಬಯಸುತ್ತೇವೆ” ಎಂದು ಗರ್ಜಿಸಿದ್ದರು. ಅವರು ನೇಣುಗಂಬದತ್ತ ನಡೆದು ಬರುತ್ತಿದ್ದಾಗ ಅದು ಮರಣದಂಡನೆಗೆ ಹೋಗುವ ಮೆರವಣಿಗೆಯಂತೆ ಇರಲಿಲ್ಲ, ಬದಲಿಗೆ ಯಾವುದೋ ವಿಜಯೋತ್ಸವದ ಸಂಭ್ರಮದಂತೆ ಇತ್ತು. ಅವರು ಪರಸ್ಪರ ಆಲಿಂಗಿಸಿಕೊಂಡು, “ಇನ್ಕಿಲಾಬ್ ಜಿಂದಾಬಾದ್” ಎಂದು ಘೋಷಣೆ ಕೂಗುತ್ತಾ ತಾವೇ ಸ್ವತಃ ನೇಣುಹಗ್ಗಕ್ಕೆ ಮುತ್ತಿಕ್ಕಿ ಅದನ್ನು ತಮ್ಮ ಕೊರಳಿಗೆ ಹಾಕಿಕೊಂಡರು. ಇಂತಹ ಅಪ್ರತಿಮ ಧೈರ್ಯ, ದೇಶಪ್ರೇಮ ಕಂಡು ಅಂದು ಗಲ್ಲಿಗೇರಿಸುವವ ಕೂಡ ಬೆಚ್ಚಿಬಿದ್ದಿದ್ದನು ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ.
ಭಗತ್ ಸಿಂಗ್ ಅವರ ಜ್ಞಾನದಾಹ ಎಷ್ಟಿತ್ತೆಂದರೆ, ಸಾವಿನ ಕೇವಲ ಹದಿನೈದು ನಿಮಿಷಗಳ ಮೊದಲು ಅವರು ಜೈಲಿನಲ್ಲಿ ರಷ್ಯಾದ ಕ್ರಾಂತಿಕಾರಿ ʼಲೆನಿನ್ʼ ಅವರ ಜೀವನ ಚರಿತ್ರೆಯನ್ನು ಓದುತ್ತಿದ್ದರು. ಜೈಲರ್ ಬಂದು ಸಮಯವಾಯಿತು ನಡೆ ಎಂದು ಕರೆದಾಗ, ಭಗತ್ ಸಿಂಗ್ ಅತ್ಯಂತ ಶಾಂತವಾಗಿ, “ತಡಿ, ಒಬ್ಬ ಕ್ರಾಂತಿಕಾರಿ ಇನ್ನೊಬ್ಬ ಕ್ರಾಂತಿಕಾರಿಯನ್ನು ಭೇಟಿಯಾಗುತ್ತಿದ್ದಾನೆ” ಎಂದು ಹೇಳಿ ಪುಸ್ತಕದ ಪುಟವನ್ನು ಮಡಿಚಿಟ್ಟು ಎದ್ದು ನಿಂತರು. ಆ ಕ್ಷಣದಲ್ಲೂ ಅವರ ಮುಖದಲ್ಲಿ ಕಿಂಚಿತ್ತೂ ಭಯವಿರಲಿಲ್ಲ. ಅತ್ತ ಸುಖದೇವ್ ಅವರು ಸಂಘಟನಾ ಚತುರರಾಗಿದ್ದರೆ, ರಾಜಗುರು ಅವರು ನಿಖರ ಗುರಿಯ ಶೂಟರ್ ಆಗಿದ್ದರು. ಈ ಮೂವರ ಸ್ನೇಹ ಅದೆಷ್ಟು ಗಾಢವಾಗಿತ್ತೆಂದರೆ, ಇವರಲ್ಲಿ ಭಗತ್ ಮತ್ತು ಸುಖದೇವ್ ಹುಟ್ಟಿದ್ದು ಒಂದೇ ವರ್ಷ (1907), ಬೆಳೆದಿದ್ದು ಒಟ್ಟಿಗೆ ಮತ್ತು ದೇಶಕ್ಕಾಗಿ ಸಾವನ್ನಪ್ಪಿದ್ದೂ ಕೂಡ ಜೊತೆಯಾಗಿಯೇ.
ಬ್ರಿಟಿಷ್ ಸರ್ಕಾರ ಈ ವೀರರಿಗೆ ಗಲ್ಲು ಶಿಕ್ಷೆ ವಿಧಿಸಲು ಆದೇಶಿದ್ದು, ಮಾರ್ಚ್ 24ರ ಬೆಳಗ್ಗೆ. ಆದರೆ ಲಾಹೋರ್ ಜೈಲಿನ ಹೊರಗೆ ಲಕ್ಷಾಂತರ ಜನ ಸೇರಿ ಜೈಲಿನ ಗೋಡೆಗಳನ್ನು ಉರುಳಿಸಲು ಸಿದ್ಧರಾಗಿ ನಿಂತಿದ್ದರು. ತಮ್ಮ ವೀರರನ್ನು ಬಿಡಿಸಿಕೊಂಡು ಹೋಗಿಬಿಡುತ್ತಾರೆ ಎಂಬ ಭೀತಿ ಬ್ರಿಟಿಷರನ್ನು ಕಾಡತೊಡಗಿ, ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ನಿಯಮಗಳನ್ನು ಉಲ್ಲಂಘಿಸಿ, ನಿಗದಿತ ಸಮಯಕ್ಕಿಂತ 11 ಗಂಟೆಗಳ ಮೊದಲೇ, ಅಂದರೆ ಮಾರ್ಚ್ 23ರ ಸಂಜೆ 7:33ಕ್ಕೆ ಗುಟ್ಟಾಗಿ ಇವರನ್ನು ಗಲ್ಲಿಗೇರಿಸಲಾಯಿತು. ಬ್ರಿಟಿಷರ ಹೇಡಿತನ ಅಲ್ಲಿಗೆ ನಿಲ್ಲಲಿಲ್ಲ; ಗಲ್ಲಿಗೇರಿಸಿದ ನಂತರ ಈ ವೀರರ ಪವಿತ್ರ ದೇಹಗಳನ್ನು ಲಾಹೋರ್ ಜೈಲಿನ ಹಿಂಭಾಗದ ಗೋಡೆ ಒಡೆದು ಲಾರಿಗಳಲ್ಲಿ ತುಂಬಿಕೊಂಡು ಸಟ್ಲೆಜ್ ನದಿಯ ದಡಕ್ಕೆ ಕೊಂಡೊಯ್ದರು. ಅಲ್ಲಿ ಸೀಮೆಎಣ್ಣೆ ಸುರಿದು ಅರೆಬರೆ ಸುಡುತ್ತಿರುವಾಗ ಗ್ರಾಮಸ್ಥರು ವಿಷಯ ತಿಳಿದು ಧಾವಿಸಿದರು. ಆಗ ಬ್ರಿಟಿಷರು ಅರ್ಧ ಸುಟ್ಟ ದೇಹಗಳನ್ನು ನದಿಗೆ ಎಸೆದು ಓಡಿಹೋದರು. ನಂತರ ಗ್ರಾಮಸ್ಥರೇ ಆ ದೇಹಗಳನ್ನು ಹೊರತೆಗೆದು ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದರು.
ಭಗತ್ ಸಿಂಗ್ ಅವರು ಬಂದೂಕು ಹಿಡಿದ ಕ್ರಾಂತಿಕಾರಿ ಮಾತ್ರವಲ್ಲ, ಮಹಾನ್ ದಾರ್ಶನಿಕ ಕೂಡ. ಜೈಲಿನಲ್ಲಿದ್ದಾಗ ಅವರು ಬರೆದ “ನಾನೇಕೆ ನಾಸ್ತಿಕ?” (Why I am an Atheist) ಕೃತಿ ಮತ್ತು ಅವರ ಪತ್ರಗಳು ಇಂದಿಗೂ ಅವರ ಬೌದ್ಧಿಕ ಪ್ರಖರತೆಗೆ ಸಾಕ್ಷಿಯಾಗಿವೆ. ಅವರು ಸಾಯುವ ಮುನ್ನ ತಮ್ಮ ತಂದೆಗೆ ಬರೆದ ಪತ್ರದಲ್ಲಿ, ಮಗನನ್ನು ಉಳಿಸಿಕೊಳ್ಳಲು ತಂದೆ ಬ್ರಿಟಿಷರಿಗೆ ಸಲ್ಲಿಸಿದ್ದ ಅರ್ಜಿಯನ್ನು ಕಟುವಾಗಿ ವಿರೋಧಿಸಿದ್ದರು. “ನನ್ನ ಮರಣವು ನನ್ನ ಜೀವನಕ್ಕಿಂತ ಹೆಚ್ಚು ಪ್ರಬಲವಾಗಿ ದೇಶವನ್ನು ಜಾಗೃತಗೊಳಿಸುತ್ತದೆ” ಎಂಬ ಅವರ ಮಾತು ಅಕ್ಷರಶಃ ನಿಜವಾಯಿತು. ಅವರು ಗಲ್ಲಿಗೇರಿದ ಮರುದಿನ ಇಡೀ ಭಾರತ ದೇಶವೇ ಕಣ್ಣೀರಿಟ್ಟಿತು, ಪ್ರತಿ ಮನೆಯಲ್ಲೂ ಭಗತ್ ಫೋಟೋಗಳು ರಾರಾಜಿಸಿದವು. ಬ್ರಿಟಿಷರು ಈ ಮೂವರನ್ನು ಕೊಂದು ಕ್ರಾಂತಿಯನ್ನು ಹತ್ತಿಕ್ಕಬಹುದು ಎಂದುಕೊಂಡಿದ್ದರು, ಆದರೆ ಅವರ ಆ ಒಂದು ಕೃತ್ಯ ಲಕ್ಷಾಂತರ ಭಾರತೀಯರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಅಂತಿಮ ಕ್ಷಣಗಣನೆಯನ್ನು ಮೊದಲಿಟ್ಟಿತು.
ಇದನ್ನೂ ಓದಿ: ವಿಶ್ವ ಗುಬ್ಬಚ್ಚಿ ದಿನ | ಎತ್ತ ಹೋದಿರೇ ಪುಟ್ಟ ಗುಬ್ಬಿಗಳಾ…
ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಎಂಬ ಕೆಚ್ಚೆದೆಯ ಕ್ರಾಂತಿ ಕಿಡಿಗಳು ತಮ್ಮ ವೈಯಕ್ತಿಕ ಬದುಕನ್ನು ಬದಿಗೊತ್ತಿ, ಸಮಾಜದಲ್ಲಿನ ಅಸಮಾನತೆ, ಬಡತನ ಮತ್ತು ಗುಲಾಮಗಿರಿಯ ವಿರುದ್ಧ ಸೆಟೆದು ನಿಲ್ಲುವುದೇ ನಿಜವಾದ ಕ್ರಾಂತಿ ಎಂದು ಸಾರಿದರು. ಬೇಕಿದ್ದರೆ ಬ್ರಿಟಿಷರ ಮುಂದೆ ಮಂಡಿಯೂರಿ ಜೀವದಾನ ಪಡೆಯಬಹುದಿತ್ತು, ಆದರೆ ಅವರು ‘ಹುತಾತ್ಮ’ರಾಗುವುದನ್ನೇ ಆರಿಸಿಕೊಂಡರು. ಅವರ ಆ ತ್ಯಾಗ ವ್ಯರ್ಥವಾಗಬಾರದೆಂದರೆ, ನಾವು ಕಟ್ಟುವ ಭಾರತ ಅವರ ಕನಸಿನಂತೆ ಸಮಾನತೆ ಮತ್ತು ಸೌಹಾರ್ದತೆಯಿಂದ ಕೂಡಿರಬೇಕು. ಆ ಮಹಾನ್ ಚೇತನಗಳು ಇಂದಿಗೂ ನಮ್ಮ ಸುತ್ತಲ ಹವೆಯಲ್ಲಿ ವ್ಯಾಪಿಸಿವೆ. ಅವರು ಅಂದು ಕೂಗಿದ “ಇನ್ಕಿಲಾಬ್ ಜಿಂದಾಬಾದ್” ಘೋಷಣೆ ಇಂದಿಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಪ್ರತಿಯೊಬ್ಬರಿಗೂ ಸ್ಫೂರ್ತಿ. ಇಂದು ದೇಶಕ್ಕಾಗಿ ಕಿಂಚಿತ್ತಾದರೂ ಕೊಡುಗೆ ನೀಡುವ ಸಂಕಲ್ಪ ಮಾಡಬೇಕು. ಅವರ ಆಶಯದಂತೆ ಪ್ರಗತಿಪರ ಮತ್ತು ಸುಭದ್ರ ಭಾರತ ನಿರ್ಮಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿ ಅರ್ಪಿಸಬೇಕು.





