ಭೈರಪ್ಪ- ‘ಗೃಹಭಂಗ’ ದಿಂದ ‘ಉತ್ತರಕಾಂಡ’ದವರೆಗೆ

Date:

ಭೈರಪ್ಪನವರು ಬಹುದೊಡ್ಡ ಕಲಾಕಾರರಾಗಿದ್ದರೂ ಅವರ ವೈಚಾರಿಕತೆ ಮತೀಯವಾದಕ್ಕೆ ಶರಣಾದ ಕಾರಣ ಓದುಗ ಲೋಕದ ಪ್ರಶ್ನಾತೀತ ಆರಾಧ್ಯ ಮೂರ್ತಿಯಾಗುವುದು ಸಾಧ್ಯವಾಗಲಿಲ್ಲ. 2029ಕ್ಕೂ ಮೋದಿಯೇ ಪ್ರಧಾನಿಯಾಗಲಿ ಎಂದು ಆಶಿಸುತ್ತಿದ್ದ, ಆಗ್ರಹಿಸುತ್ತಿದ್ದ ಭೈರಪ್ಪನವರಿಗೆ ಅದು ಮುಖ್ಯವೂ ಆಗಲಿಲ್ಲ ಎನ್ನುವುದು ಇನ್ನಷ್ಟು ದುರದೃಷ್ಟಕರ ಸಂಗತಿ.

‘ಗೃಹಭಂಗ’ದಿಂದ ‘ಉತ್ತರಕಾಂಡ’ ದವರೆಗೆ ಎಸ್ ಎಲ್ ಭೈರಪ್ಪನವರು ನಡೆದು ಸವೆಸಿದ ಅಲ್ಲ, ನಡೆದು ಮೂಡಿಸಿದ ಹಾದಿ ದೊಡ್ಡದು. ಅದು ‘ದೂರ ಸರಿದರು’ ‘ಜಲಪಾತ’ದಂತಹ ರೊಮ್ಯಾಂಟಿಕ್ ಕಾದಂಬರಿಗಳಿಂದ ಹಿಡಿದು, ‘ವಂಶವೃಕ್ಷ’ , ‘ಧರ್ಮಸೆರೆ’, ‘ದಾಟು’ ಮುಂತಾದವುಗಳ ಮೂಲಕ ನಮ್ಮ ಜಾತಿ ಸಂಪ್ರದಾಯಗಳ ಧರ್ಮಸೆರೆಯೊಳಗೆ, ಸಾಮಾಜಿಕ ಸೆರೆಯೊಳಗೆ ಪಯಣ ಮಾಡಿದೆ. ‘ಸಾರ್ಥ’ ದಂತಹ ಕಾದಂಬರಿಯ ಮೂಲಕ ದಕ್ಷಿಣದಿಂದ ಉತ್ತರ, ಈಶಾನ್ಯ ಭಾರತಗಳವರೆಗೆ ಹೋಗುವ ಸಾಹಸ ನಡೆಸಿದೆ; ಕಾಲದಲ್ಲಿಯೂ ಅಷ್ಟೇ: ಅದು ಚರಿತ್ರೆಯೊಳಗಿನ ಭೂತಕಾಲಕ್ಕೆ ಪಯಣಿಸುವ ಅದಮ್ಯವಾದ ಸಾಹಸ ನಡೆಸಿದೆ. ಪರ್ವದಂತಹ ಕಾದಂಬರಿಯ ಮೂಲಕ ಪುರಾಣಗಳ ಒಳಹೊಕ್ಕು ಪೌರಾಣಿಕ ಅವಕುಂಠನವನ್ನು ಕಿತ್ತೆಸೆಯುವ ಕೆಲಸಕ್ಕೂ ಕೈಹಾಕಿದೆ.

ಅತ್ಯಂತ ವ್ಯವಸ್ಥಿತವಾದ ಪೂರ್ವ ತಯಾರಿಯಿಂದ ಕಾದಂಬರಿ ರಚನೆಗೆ ಮುಂದಾಗುತ್ತಿದ್ದ ಭೈರಪ್ಪನವರ ಕಾದಂಬರಿಯ ಬದುಕು ಹೀಗಾಗಿ ಗೃಹಭಂಗ, ವಂಶವೃಕ್ಷ ಮತ್ತು ದಾಟುಗಳ ಜಗತ್ತಷ್ಟೇ ಆಗದೆ ಪರ್ವ ಹಾಗೂ ಸಾರ್ಥಗಳ ಜಗತ್ತಾಗಿ ಸಮಾಜ ಮತ್ತು ಕಾಲದ ದೃಷ್ಟಿಯಿಂದ ಬಹುದೊಡ್ಡ ಅವಕಾಶಕ್ಕೆ ತನ್ನ ಮೈಚಾಚುವ ಮಹತ್ವಾಕಾಂಕ್ಷೆಯನ್ನು ಪ್ರಕಟಿಸುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಷ್ಟಾದರೂ ಭೈರಪ್ಪನವರು ಕರ್ನಾಟಕದ ಸಾಂಸ್ಕೃತಿಕ ವಕ್ತಾರರೋ ಅಥವಾ ನಾಯಕ ಚೇತನವೋ ಆಗದೇ ಹೋದದ್ದೇಕೆ ಎಂಬುದನ್ನು ಯೋಚಿಸುತ್ತ ಮಾಡಿಕೊಂಡ ಟಿಪ್ಪಣಿಗಳು ಕೆಳಗಿವೆ.

ಟಿಪ್ಪಣಿ 1

ಎಸ್ ಎಲ್ ಭೈರಪ್ಪನವರ ಸಾವಿಗೆ ಎಡ-ಬಲ ಭೇದ ಮೀರಿ ಇಡೀ ಕರ್ನಾಟಕವೇ ದುಃಖಿಸುತ್ತಿದೆ, ಗೌರವ ಸಮರ್ಪಿಸುತ್ತಿದೆ. ಈ ದೃಷ್ಟಿಯಿಂದ ನೋಡಿದಾಗ ಜನತೆ ಎಂದೂ ದೊಡ್ಡತನವನ್ನೇ ಬದುಕುತ್ತದೆ ಅನ್ನಿಸುತ್ತದೆ. ಆದರೆ ಆ ಗೌರವಕ್ಕೆ ಭಾಜನರಾದವರು ತಮ್ಮ ಗೌರವವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಡಾ ರಾಜ್ ಅವರ ಉದಾಹರಣೆಯನ್ನು ನೋಡಬಹುದು. ಸಹೃದಯ ಸಮುದಾಯವನ್ನು ಅವರು ‘ಅಭಿಮಾನಿ ದೇವರುಗಳು’ ಎಂದು ಕರೆದಿದ್ದು ಮಹತ್ತಾದ ಕಾಣ್ಕೆ. ಆ ಮಾತು ಮುಖಸ್ತುತಿಯದಲ್ಲ ಎಂಬುದನ್ನು ಆಗಾಗ ಸ್ಪಷ್ಟಪಡಿಸುತ್ತಿದ್ದ ಡಾ ರಾಜ್, ಮಹತ್ತನ್ನು ಕಾಣಬಲ್ಲ ಮತ್ತು ಗುರುತಿಸಬಲ್ಲ ಪ್ರೇಕ್ಷಕ ಸಮುದಾಯದ ಬಗ್ಗೆ ತಾವು ಹೊಂದಿದ್ದ ದೃಷ್ಟಿಯನ್ನು ದೃಢೀಕರಿಸುತ್ತಿದ್ದರು. ಈ ಮೂಲಕ ಅವರು ಸಹೃದಯೀ ಸಮುದಾಯಕ್ಕೆ ತೋರಿದ ಕೃತಜ್ಞತೆ ಮತ್ತು ಗೌರವ ಎಷ್ಟು ಪ್ರಾಮಾಣಿಕವಾಗಿದ್ದವೆಂದರೆ ಆ ಗೌರವಕ್ಕೆ ಧಕ್ಕೆಯಾಗದ ವ್ಯಕ್ತಿತ್ವವನ್ನೂ ತಮ್ಮದಾಗಿಸಿಕೊಳ್ಳುವುದು ತಮ್ಮ ಕರ್ತವ್ಯವೆಂದೂ ಅವರು ತಿಳಿದಿದ್ದರು.

ಆದರೆ ಭೈರಪ್ಪನವರು ಬಹುದೊಡ್ಡ ಕಲಾಕಾರರಾಗಿದ್ದರೂ ಅವರ ವೈಚಾರಿಕತೆ ಮತೀಯವಾದಕ್ಕೆ ಶರಣಾದ ಕಾರಣ ಓದುಗ ಲೋಕದ ಪ್ರಶ್ನಾತೀತ ಆರಾಧ್ಯ ಮೂರ್ತಿಯಾಗುವುದು ಸಾಧ್ಯವಾಗಲಿಲ್ಲ. 2029ಕ್ಕೂ ಮೋದಿಯೇ ಪ್ರಧಾನಿಯಾಗಲಿ ಎಂದು ಆಶಿಸುತ್ತಿದ್ದ, ಆಗ್ರಹಿಸುತ್ತಿದ್ದ ಭೈರಪ್ಪನವರಿಗೆ ಅದು ಮುಖ್ಯವೂ ಆಗಲಿಲ್ಲ ಎನ್ನುವುದು ಇನ್ನಷ್ಟು ದುರದೃಷ್ಟಕರ ಸಂಗತಿ.

ಕರ್ನಾಟಕದ ತಮ್ಮ ಓದುಗ ಸಮುದಾಯ ಈ ಪ್ರಮಾಣದಲ್ಲಿ ತಮ್ಮ ವಿದಾಯಕ್ಕಾಗಿ ಮರುಗುತ್ತದೆ, ಗೌರವ ಸಮರ್ಪಿಸುತ್ತದೆ ಎಂಬುದನ್ನು ಕಾಣದೆ, ಊಹಿಸಲೂ ಹೋಗದೆ ಭೈರಪ್ಪನವರು ನಿರ್ಗಮಿಸಿದರು ಅನ್ನಿಸುತ್ತದೆ.

ಧಾರವಾಡ
ಧಾರವಾಡ ಸಾಹಿತ್ಯ ಸಂಭ್ರಮದಲ್ಲಿ ಡಾ ಯು ಆರ್‌ ಅನಂತಮೂರ್ತಿ, ಡಾ ಚಂದ್ರಶೇಖರ ಪಾಟೀಲ, ಡಾ ಎಸ್‌ ಎಲ್‌ ಭೈರಪ್ಪ

ಟಿಪ್ಪಣಿ 2

ಕೆಲವು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ದಿನ ಪ್ರೊ ರವಿವರ್ಮ ಕುಮಾರ್ ಅವರು ಫೋನ್ ಮಾಡಿ “ನಟರಾಜ್, ಭೈರಪ್ಪನವರ ಸಾರ್ಥ ಕಾದಂಬರಿ ಬಗ್ಗೆ ನಿಮ್ಮ ಅಭಿಪ್ರಾಯ ಏನು” ಅಂತ ಕೇಳಿದರು. ನಾನು ಆಗ ಸಾರ್ಥ ಕಾದಂಬರಿಯನ್ನು ಓದಿರಲಿಲ್ಲ‌…” ಸರ್, ನಾನು ಅದನ್ನಿನ್ನೂ ಓದಿಲ್ಲ, ಓದಿ ಹೇಳ್ತೀನಿ” ಅಂದೆ. ನಂತರ ಅದನ್ನು ತರಿಸಿ ಓದಿದೆ.

ನನಗೆ ಅದೊಂದು ಉತ್ತಮ ಕಾದಂಬರಿಯಾಗೇ ಕಂಡಿತು. ಕೆಲವರು ಅದು ಬೌದ್ಧ ಧರ್ಮದ ಅವಹೇಳನ ಮಾಡುವ ಕಾದಂಬರಿ ಎಂದು ಅದರ ವಿರುದ್ದ ಕೋರ್ಟಿಗೆ ಹೋಗುವವರಿದ್ದರಂತೆ. ನಾನು ಪ್ರೊ ರವಿವರ್ಮ ಕುಮಾರ್ ಅವರಿಗೆ ಫೋನ್ ಮಾಡಿ ”ಸರ್, ಸಾರ್ಥ, ನನ್ನ ಗ್ರಹಿಕೆಯಲ್ಲಿ ಬೌದ್ಧ ಧರ್ಮದ ಅವಹೇಳನಕ್ಕಿಂತ ವೈದಿಕರ ಪತನವನ್ನೂ, ಕರುಣಾಜನಕ ದುರಂತವನ್ನೂ ಚಿತ್ರಿಸುತ್ತದೆ. ಅದಕ್ಕಾಗಿ ಕಾದಂಬರಿ ಭೌಗೋಳಿಕವಾಗಿ ಅಖಿಲ ಭಾರತ ಮಟ್ಟದಲ್ಲಿ ಪಯಣ ಕೈಗೊಳ್ಳುತ್ತದೆ” ಅಂತ ಹೇಳಿದೆ. ಅಷ್ಟೆ ಅಲ್ಲ, ”ಅದು ಬೌದ್ದ ಧರ್ಮದ ಪ್ರಸರಣದ ವ್ಯಾಪ್ತಿಯನ್ನೂ, ವೈದಿಕರು ಕಳ್ಳರಂತೆ ಮಾರುವೇಶದಲ್ಲಿ ಬೌದ್ದ ವಿಶ್ವವಿದ್ಯಾಲಯಗಳಲ್ಲಿ ಓದಲು ಹೋಗಿ ಸಿಕ್ಕಿಬಿದ್ದು ಅಪಮಾನಿತರಾಗುತ್ತಿದ್ದ ಕತೆಯನ್ನೂ ಹೇಳುತ್ತದೆ. ಹಿಂಗಾಗಿ ಸಾರ್ಥ , ಮೇಲ್ನೋಟಕ್ಕೇ ವೈದಿಕರ ಅಥವಾ ಬೌದ್ಧರ ಪರ ಅಥವಾ ವಿರೋಧದ ನೆಲೆಯಲ್ಲಿ ನಿಲ್ಲದ ಒಂದು ಬಗೆಯಲ್ಲಿ ಮಹತ್ವಾಕಾಂಕ್ಷೆಯ ಶೋಧಕ ನೆಲೆಯ ಕಾದಂಬರಿ. ಅಂತಿಮವಾಗಿ, ಬೌದ್ಧ ತತ್ವದ ಮೇಲ್ಮೆಯನ್ನೇ ಹೇಳುವ ಕಾದಂಬರಿ” ಅಂತ ಅವರಿಗೆ ಹೇಳಿದೆ. ಹೌದಾ? ಎಂದು ಅವರು ಸುಮ್ಮನಾದರು, ಕೇಸ್ ಗೀಸ್ ಹಾಕಲು ಅವರು ಮುಂದಾದಂತೆ ಕಾಣಲಿಲ್ಲ‌.

ಟಿಪ್ಪಣಿ 3:

ಭೈರಪ್ಪನವರು ಕಲೆಯ ಸೆಳವಿನಲ್ಲಿ ಮುಂಜಗ್ಗುತ್ತಿದ್ದರೂ ಅವರ ವಿಚಾರ (ಲೌಕಿಕ, ಅರ್ಥಾತ್ ರಾಜಕೀಯ ಇಷ್ಟಾನಿಷ್ಟಗಳು) ಅವರನ್ನು ಹಿಂದೆಳೆಯುತ್ತಿದ್ದವು ಎಂದು ಕಾಣುತ್ತದೆ. ಈ ಬಗೆಯಲ್ಲಿ ಕಲೆಯ ವ್ಯಕ್ತಿತ್ವ ಮತ್ತು ವೈಚಾರಿಕ ವ್ಯಕ್ತಿತ್ವ ಸಾಮರಸ್ಯ ಸಾಧಿಸದೆ ಸೀಳಿಕೊಂಡ ಕಾರಣ ಅವರು ಒಮ್ಮೆಯಾಗದೆ ಹೋದರೇನೋ. ಕಲಾ ಸೃಷ್ಟಿಯ ರೊಮ್ಯಾಂಟಿಸಿಸ್ಮ್ ನ ಸಮ್ಮೋಹಿನಿಯಂತಹ ಅವಸ್ಥೆಯಲ್ಲಿ ಅವರು ಸ್ಥಾಪಿಸಿಬಿಡುತ್ತಿದ್ದ ಅಥವಾ ಹುದುಗಿಸಿಬಿಡುತ್ತಿದ್ದ ಮನುಪ್ರಣೀತ ಮೌಲ್ಯಗಳ ಯಥಾಸ್ಥಿತಿವಾದವು ಅವರ ಕಲೆಯನ್ನು ಮುಕ್ಕಾಗಿಸುತ್ತಿತ್ತು. ಆದರೆ ಕನ್ನಡದ ಕಣ್ಣು ಆ ಅನ್ಯಾಯಗಳನ್ನೆಲ್ಲ ಕಾಣದೆ ಹೋಗಲಿಲ್ಲ. ಈ ಕಾರಣಕ್ಕಾಗಿಯೇ ಅವರು ಪ್ರಜಾಪ್ರಭುತ್ವದ ಪ್ರಜ್ಞೆಗೆ ಅಪ್ರಸ್ತುತರಾಗುತ್ತಹೋದರು.

ಟಿಪ್ಪಣಿ 4:

ಎಸ್ ಎಲ್ ಭೈರಪ್ಪನವರ ಮರಣ ಪತ್ರದ ಹಾಳೆಗಳನ್ನು ನೋಡಿದಾಗ ನನಗೆ ಹೇಗೆ ಹೇಗೋ ಅನ್ನಿಸಿತು. ಅವರ ಯಾವುದೋ ಹಳೆಯ ಕಾದಂಬರಿಯ ಪುಟಗಳನ್ನು ಓದಿದ್ದು, ಓದಿ ವಾಕರಿಕೆ ಬರುವಂತಾಗಿದ್ದೆಲ್ಲ ನೆನಪಾಯ್ತು. ಆ ಕಾದಂಬರಿಯ ಹೆಸರು ಮರೆತುಹೋಗಿದೆ. ಆ ಕಾದಂಬರಿಯಲ್ಲಿ ಮಗ ಅಪ್ಪನನ್ನು ”ನನ್ನ ಯಾಕೆ ಹುಟ್ಟಿಸಿದೆ… ಹುಟ್ಟಿಸು ಅಂತ ಕೇಳಿದ್ದೆನಾ? ನಿನ್ನ ತೀಟೆಗೆ ಹುಟ್ಟಿಸಿದೆ…” ಅಂತೆಲ್ಲ ಕೇಳುವ ಸಾಲು; ಆಗ ಹರಡಿಕೊಂಡ ಅಸಹನೀಯ ಮೌನದ ನಡುವೆ ಹಾಗೂ ಆ ಹೋಟೆಲ್
ರೂಮಿನ ಫ್ಯಾನು ಕಟಕಟ ಸದ್ದುಮಾಡುತ್ತ ತಿರುಗುತ್ತಿತ್ತು. ಇತ್ಯಾದಿ ನಿರೂಪಣೆ ಇದೆಲ್ಲವನ್ನೂ ಓದುತ್ತಿದ್ದವನು, ಮುಂದೆ ಓದುವುದನ್ನು ನಿಲ್ಲಿಸಿ ಅಲ್ಲಿರಲಾಗದೆ ಓಟಕಿತ್ತಿದ್ದೆ.

ವಿಲ್
ಭೈರಪ್ಪ ಅವರ ಉಯಿಲು

ಅವರ ‘ವಂಶವೃಕ್ಷ’ ದ್ದೂ ಅದೇ ಕತೆ. ಮನೆಯ ಮಗನಿಗೆ ತಂದುಕೊಂಡ ಸೊಸೆಯ (ಕಾತ್ಯಾಯಿನಿ) ಬಗೆಗಿನ ಶ್ರೀನಿವಾಸ ಶ್ರೋತ್ರಿಯ ವಾದ ತಲೆ ಚಿಟ್ಟುಹಿಡಿಸುತ್ತದೆ (ಕ್ಷೇತ್ರ, ಬೀಜ ಇತ್ಯಾದಿ ವಾದ ಲಹರಿ). ವಾಸ್ತವವಾದಿ ಬರವಣಿಗೆಯ ಹೆಸರಲ್ಲಿ ಈ ತರದ ಸಾಲುಗಳನ್ನು ಭೈರಪ್ಪ ಬರೆದಿದ್ದಾರೆ ಮತ್ತು ಬರೆಯುತ್ತಿದ್ದರು. ಬಾಳಿ ಬದುಕುವವರು, ಲೋಕ ಜೀವನವನ್ನು ರಮ್ಯ ಆದರ್ಶಗಳ ಕನಸಿನಂತೆ ನೋಡುವವರು ಭೈರಪ್ಪನವರನ್ನು ಓದಬಾರದು ಎಂದು ಅಂದುಕೊಂಡು ದೂರವಾದವನು ನಾನು.

ಈಗ ನೋಡಿದರೆ ಅವರ ವಿಲ್ಲು, ಅಲ್ಲಿನ ವಿವರಗಳಲ್ಲಿ ಕಾಣಿಸುವ ಕೌಟುಂಬಿಕ ಒಡಕು, ಇವೆಲ್ಲ ನಾನು ಈ ಟಿಪ್ಪಣಿಯ ಆರಂಭದಲ್ಲಿ ದಾಖಲಿಸಿದ ಕಾದಂಬರಿಯ ಸಾಲುಗಳಂತೆ ಅಸಹನೀಯವಾಗಿ ಕಾಣುತ್ತವೆ. ಕನ್ನಡದ ದೊಡ್ಡ ಲೇಖಕರೊಬ್ಬರ ಬದುಕು ಈ ಬಗೆಯ ಅಸ್ವಸ್ಥತೆಯಲ್ಲಿ ಕೊನೆಯಾಗಬಾರದಾಗಿತ್ತು ಅನ್ನಿಸುತ್ತದೆ.

ಭೈರಪ್ಪನವರ ‘ಪರ್ವ ‘ ಕಾದಂಬರಿ ಒದುವ ನನ್ನ ಪ್ರಯತ್ನದ್ದೂ ಅದೇ ಕತೆ. ವಾಸ್ತವವಾದಿ ನಿರೂಪಣೆಯ ಹೆಸರಲ್ಲಿ ವ್ಯಾಸ ನಿರ್ಮಿತ ಭಾರತದ ಸೌಂದರ್ಯವನ್ನೇ ಹಾಳುಮಾಡಲಾಗಿದೆ ಅನ್ನಿಸಿತು. ಅಲ್ಲಿನ ಕೆಲವು ಪುಟಗಳಲ್ಲಿ ನಾನು ಓದುತ್ತ ಕಂಡ ಅರಮನೆಯೆಂದು ಕರೆಯಲಾಗುವ ವಿಶಾಲವಾಗಿ ಹರಡಿಕೊಂಡ ಕಟ್ಟಡ: ಬಿಸಿಲು, ಉಕ್ಕುವ ಬೆವರು ಅದನ್ನು ಶಮನ ಮಾಡಲು ಕಿಟಕಿಯ ಹಿಂದೆ ಇಳಿಬಿಟ್ಟಿದ್ದ ಬಟ್ಟೆಗೆ ನೀರು ಅದ್ದುವುದು ಅಥವಾ ಸುರಿಯುವುದು, ಆದರೂ ಕಿತ್ತುಕೊಂಡು ಬರುವ ಬೆವರು, ಆತಿಥ್ಯಕ್ಕಾಗಿ ಒಳ್ಳೆಯ ಹೋರಿಯನ್ನೇ ಕಡಿದು ಮಾಡಿರುವ ದನದ ಮಾಂಸದ ಪ್ರಸ್ತಾಪ, ಅದೂ ಇದೂ ಈ ನಡುವೆ ಅಸಹನೀಯ ಮೌನ.

ಮರ್ತ್ಯವನ್ನು ಅಮರ್ತ್ಯಕ್ಕೆತ್ತುವ, ಸಾಮ್ರಾಜ್ಯಗಳನ್ನು ಬೆಸೆಯುವ, ಕೃಷ್ಣನೆಂಬ ಜಗನ್ನಾಥನ ಅದ್ಭುತ ರಮ್ಯಾದರ್ಶಗಳ ಕಾರ್ಯಭೂಮಿಯಾದ ಮಹಾಭಾರತದ ಕಲಾತ್ಮಕ ಆವರಣವಲ್ಲವೇ ಅಲ್ಲ ಇದು ಎಂದು ಅನ್ನಿಸಿಬಿಟ್ಟಿತು. ಇದೇ ಸಂದರ್ಭದಲ್ಲಿ ಮರಾಠಿ ಲೇಖಕಿ ಇರಾವತಿ ಕರ್ವೆಯವರ ‘ಯುಗಾಂತ’ ವನ್ನು ನೆನೆಯಬಹುದು. ವ್ಯಾಸ ವಿರಚಿತ ‘ಮಹಾಭಾರತ’ ಸಹೃದಯೀ ಸ್ಪಂದನದಂತಿರುವ ಈ ಅದ್ಭುತ ಕೃತಿ, ಮೂಲ ಮಹಾಭಾರತವನ್ನು ಅಲ್ಲಿನ ಪಾತ್ರಗಳನ್ನು ಅದೆಂತಹ ಘನತೆಯಲ್ಲಿ ಚರ್ಚಿಸುತ್ತದೆ ! ‘ಮಹಾಭಾರತ’ ವನ್ನು ಅನನ್ಯವಾದ ಸಹೃದಯತೆಯಲ್ಲಿ, ಸಹ ಅನುಭೂತಿಯ ರೋಮಾಂಚನದಲ್ಲಿ ಎದುರಾದ ಕೃತಿ ಅದು.ಟ

ಇದನ್ನೂ ಓದಿ ಈ ದಿನ ಸಂಪಾದಕೀಯ | ಧರ್ಮಸ್ಥಳ ಪ್ರಕರಣ; ಎಸ್‌ಐಟಿ ತನಿಖೆಯನ್ನು ಸರ್ಕಾರವೇ ಹಳ್ಳ ಹಿಡಿಸದಿರಲಿ

ಪರ್ವಕ್ಕೆ ಆ ಬಗೆಯ ಕಲಾತ್ಮಕ ನೋಟವಿರಲಿಲ್ಲ. ಅದನ್ನು ನೆನೆದರೆ, ರಿಯಲಿಸ್ಟ್‌ ಬರವಣಿಗೆಯ ಬಂಜರು ಮಾತ್ರ ನೆನಪಾಗುತ್ತದೆ. ಮಾನವ ಭೂಗೋಳಗಳನ್ನು ಬೆಸೆಯುವ ಗುಣವಿದ್ದ ಮಹಾಭಾರತ ರಾಮಾಯಣಗಳ ಬಹುದೊಡ್ಡ ಮಹತ್ವಾಕಾಂಕ್ಷೆಗಳನ್ನು ಕಿತ್ತೆಸೆದ ಸುಂದರ ಕನಸುಗಳಿಲ್ಲದ ಬಂಜರು ಬಾಳ್ವೆಯ ಸ್ಥಿತಿಯಲ್ಲಿತ್ತೇನೊ ಅದು ಅನ್ನಿಸಿಬಿಡುತ್ತದೆ

ನನಗಂತೂ ‘ಪರ್ವ’ವನ್ನು ಪೂರ್ತಿ ಓದಲಾಗಲೇ ಇಲ್ಲ‌. ಸಾಹಿತ್ಯ ಕೃತಿಯೊಂದು ವಾಸ್ತವದ ಬೇಗೆಯಲ್ಲಿ ಬೇಯುವ ಜೀವಕ್ಕೆ ರಮ್ಯ ಲೋಕವೊಂದನ್ನು ಕಾಣಿಸಿ ಮೇಲೆತ್ತಬೇಕೆಂದು ಅಂದುಕೊಂಡವನು ನಾನು. ನಾನು ಓದಲೆತ್ನಿಸಿದ ಭೈರಪ್ಪನವರ ಕೆಲವು ಕೃತಿಗಳು ಹೀಗೆ ಓದು ನಿಲ್ಲಿಸಿ ಓಡಿಹೋಗುವಂತೆ ಮಾಡಿದವು.

k p nararaj
ಕೆ ಪಿ ನಟರಾಜ್‌
+ posts

ಲೇಖಕ

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...