ಬಿಹಾರದ ಆಡಳಿತವನ್ನು ನೇರವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಬಿಜೆಪಿಯ ತಂತ್ರ ಬಹುತೇಕ ಫಲಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ರಾಜ್ಯಸಭೆಗೆ ದಬ್ಬುವಲ್ಲಿ ಬಿಜೆಪಿ ಯಶಸ್ಸು ಕಾಣುತ್ತಿದೆ. ಬಿಹಾರದಲ್ಲಿ ದೀರ್ಘಕಾಲಕ್ಕೆ ಮುಖ್ಯಮಂತ್ರಿಯಾಗಿದ್ದ ನಿತೀಶ್ ಕುಮಾರ್ ಅವರ ರಾಜ್ಯಾಡಳಿತ ಕೆಲವೇ ದಿನಗಳಲ್ಲಿ ಅಂತ್ಯಗೊಳ್ಳಲಿದೆ. ಇದು, ಕೇವಲ ನಿತೀಶ್ ಅವರ ಯುಗದ ಅಂತ್ಯ ಮಾತ್ರವಲ್ಲ, ಬರೋಬ್ಬರಿ 35 ವರ್ಷಗಳ ಕಾಲ ಬಿಹಾರವನ್ನು ತಮ್ಮ ತೆಕ್ಕೆಯಲ್ಲಿಯೇ ಹಿಡಿದಿಟ್ಟುಕೊಂಡಿದ್ದ ಲಾಲೂ-ನಿತೀಶ್ ಅವರ ಸೋಷಿಯಲಿಸ್ಟ್ ಹಿನ್ನೆಲೆಯುಳ್ಳ ಯುಗದ ಅಂತ್ಯವೆಂದೇ ಕರೆಯಲಾಗುತ್ತಿದೆ.
1970ರ ದಶಕದಲ್ಲಿ ಹಾಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಯುಡಿಯು ನಾಯಕ ನಿತೀಶ್ ಕುಮಾರ್ ಏಕಕಾಲದಲ್ಲಿ ರಾಜಕಾರಣಕ್ಕೆ ಬಂದು, ಸ್ನೇಹಿತರಾಗಿ ಬೆಳೆದವರು. ಈ ಇಬ್ಬರೂ ಜಂಟಿಯಾಗಿ 35 ವರ್ಷಗಳ ಹಿಂದೆ, ಬಿಹಾರದಲ್ಲಿ ಕಾಂಗ್ರೆಸ್‌ನ ಅಧಿಪತ್ಯ ಕೊನೆಗಾಣಿಸಿದ್ದರು. ಅಂದಿನಿಂದ ಇಂದಿನವರೆಗಿನ ದೀರ್ಘಾವಧಿಯ ಬಿಹಾರ ರಾಜಕಾರಣದಲ್ಲಿ ಇವರಿಬ್ಬರದ್ದೇ ಪಾರುಪತ್ಯವಿದೆ. ಬಿಹಾರದಲ್ಲಿ, 1990ರ ನಂತರದಲ್ಲಿ 15 ವರ್ಷಗಳ ಕಾಲ ಲಾಲೂ ಪ್ರಸಾದ್ ಮತ್ತವರ ಆರ್‌ಜೆಡಿ ಆಡಳಿತ ನಡೆಸಿದರೆ, ನಂತರದ ಈ 20 ವರ್ಷಗಳಿಂದ ನಿತೀಶ್ ಕುಮಾರ್ ಅಧಿಕಾರದ ಗದ್ದುಗೆಯಲ್ಲಿ ಮೆರೆಯುತ್ತಿದ್ದರು ಪದೇ-ಪದೇ ಮೈತ್ರಿಯನ್ನು ಬದಲಿಸುತ್ತಿರುವ ನಿತೀಶ್, ಮುಖ್ಯಮಂತ್ರಿ ಹುದ್ದೆಯನ್ನು ಭದ್ರವಾಗಿ ಹಿಡಿದಿಟ್ಟುಕೊಂಡಿದ್ದರು.
1989ರಲ್ಲಿ ನಿತೀಶ್‌ರ ಬೆಂಬಲದೊಂದಿಗೆ ವಿಪಕ್ಷ ನಾಯಕರಾಗಿದ್ದ ಲಾಲೂ, 1990ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದ ಅಭೂತಪೂರ್ವ ಗೆಲುವಿನಿಂದಿಗೆ ಮುಖ್ಯಮಂತ್ರಿಯಾದರು. ಲಾಲೂ ಮುಖ್ಯಮಂತ್ರಿ ಗದ್ದುಗೆ ಏರುವಲ್ಲಿ ನಿತೀಶ್ ಕುಮಾರ್ ಅವರ ಪಾತ್ರ ಬಹುಮುಖ್ಯವಾಗಿತ್ತು. ಆದಾಗ್ಯೂ, ಕೆಲವೇ ವರ್ಷಗಳಲ್ಲಿ ಲಾಲೂ ಮತ್ತು ನಿತೀಶ್ ಅವರ ಸಂಬಂಧ ಹಳಸಿತು. 1994ರಲ್ಲಿ ಜನತಾ ಪಕ್ಷ ತೊರೆದ ನಿತೀಶ್ ಅವರು ಜಾರ್ಜ್ ಫರ್ನಾಂಡಿಸ್ ಜೊತೆಗೂಡಿ ಸಮತಾ ಪಕ್ಷವನ್ನು ಆರಂಭಿಸಿದರು. ಅದಾದ 10 ವರ್ಷಗಳ ಬಳಿಕ, 2004ರಲ್ಲಿ ಲಾಲೂ ಮತ್ತವರ ಕುಟುಂಬದ ಆಡಳಿತಕ್ಕೆ ಅಂತ್ಯಹಾಡಿ, ನಿತೀಶ್ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡು ಮುಖ್ಯಮಂತ್ರಿ ಗದ್ದುಗೆ ಏರಿದರು. ಅಂದಿನಿಂದ ಇಂದಿನವರೆಗೂ ನಿತೀಶ್ ನಿರಂತರ ಮುಖ್ಯಮಂತ್ರಿಯಾಗಿದ್ದಾರೆ.

ಬಿಹಾರದಲ್ಲಿ 1990ರಿಂದ ಮೊದಲ 15 ವರ್ಷ ಲಾಲೂ ಮತ್ತವರ ಪತ್ನಿ ರಾಬ್ರಿ ದೇವಿ ಹಾಗೂ ಇತ್ತೀಚಿನ ಕಡೆದ 20 ವರ್ಷ ನಿತೀಶ್ ಕುಮಾರ್ ಅವರು ಅಡಳಿತ ನಡೆಸಿದ್ದಾರೆ. ಈ 35 ವರ್ಷಗಳು ಆರ್‌ಜೆಡಿ ಮತ್ತು ಜೆಡಿಯು ನಡುವೆಯೇ ಅಧಿಕಾರ ಹಂಚಿಕೆಗಳಾಗಿವೆ. ಆದರೆ, ಇದೀಗ, ನಿತೀಶ್ ಅವರನ್ನು ರಾಜ್ಯ ರಾಜಕಾರಣದಿಂದ ಹೊರದಬ್ಬಿ, ರಾಜ್ಯಸಭೆಗೆ ದೂಡುವ ಮೂಲಕ ಬಿಹಾರದ ಅಧಿಕಾರವು ಬಿಜೆಪಿಯ ಕೈಸೇರುತ್ತಿದೆ. ಇದರೊಂದಿಗೆ ಲಾಲೂ-ನಿತೀಶ್ ಅವರ ಆಡಳಿತ ಪರ್ವ ಮುಗಿಯಲಿದೆ. ಬಿಜೆಪಿ ಈಗ ಬಿಹಾರದಲ್ಲಿ ಏಕಪಕ್ಷೀಯ ಆಧಿಪತ್ಯ ಸಾಧಿಸಿದೆ.ನಿತೀಶ್ ಅವರ ಜೆಡಿಯು ಜೂನಿಯರ್ ಪಾಲ್ಟನರ್ ಆಗಿ ಮಾರ್ಪಟ್ಟಿದೆ.
ಬಿಜೆಪಿ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು, ಆ ರಾಜ್ಯದಲ್ಲಿ ನೆಲೆ ಕಂಡುಕೊಂಡು ಬಳಿಕ, ಪ್ರಾದೇಶಿಕ ಪಕ್ಷಗಳೇ ಕಬಳಿಸಿ, ಸರ್ವಾಧಿಕಾರಿಯಂತೆ ರಾಜ್ಯಾಧಿಕಾರದ ಚುಕ್ಕಾಣಿಯನ್ನು ತನ್ನ ತೆಕ್ಕೆಗೆ ತಗೆದುಕೊಂಡಿರುವುದು ಬಿಹಾರದಲ್ಲಿ ಮಾತ್ರವಲ್ಲ. ಬಿಜೆಪಿಯ ಅಧಿಕಾರ ದಾಹ ಮತ್ತು ತಂತ್ರ-ಕುತಂತ್ರಗಳಿಗೆ ಹಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಬಲಿಯಾಗಿವೆ. ಸ್ಥಳೀಯ ಪಕ್ಷಗಳ ಪ್ರಾಬಲ್ಯತೆಯನ್ನು ನುಂಗಿ ಬಿಜೆಪಿ ತನ್ನ ಪ್ರಭಾವ-ಅಧಿಕಾರವನ್ನು ಬೆಳೆಸಿಕೊಂಡಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ, ಪಂಜಾಬ್, ಒಡಿಶಾ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಬಿಜೆಪಿಯ ಹಿಡಿತಕ್ಕೆ ಸಿಲುಕಿ ನಲುಗಿರುವ ಉದಾಹರಣೆಗಳಿವೆ.
ಮುಖ್ಯವಾಗಿ, ಉತ್ತರ ಮತ್ತು ಪಶ್ಚಿಮ ಭಾರತದ ಹಿಂದಿ ಬೆಲ್ಟ್‌ನ ಹಲವು ರಾಜ್ಯಗಳನ್ನು ಬಿಜೆಪಿ ತನ್ನ ವಶಕ್ಕೆ ಪಡೆದುಕೊಂಡಿದೆ. ಆದಾಗ್ಯೂ, ಅತೀ ಹೆಚ್ಚು ಸಂಸತ್ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ತನ್ನ ಆಡಳಿತದ ಅಧೀನದಲ್ಲಿರಬೇಕೆಂದು ಬಿಜೆಪಿ ಹಪಾಹಪಿಸುತ್ತಲೇ ಇತ್ತು. ಮಯಾವತಿ ಅವರ ಕೃಪಾಕಟಾಕ್ಷದಿಂದ ಉತ್ತರ ಪ್ರದೇಶವನ್ನು ದಶಕಗಳ ಹಿಂದೆಯೇ ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಆದರೂ, ಕೇಸರಿ ಪಡೆಗೆ ಬಿಹಾರ ಮತ್ತು ಪಶ್ಚಿಮ ಬಂಗಾಳ ದಕ್ಕಿರಲಿಲ್ಲ.
ಹೇಗಾದರೂ, ಬಿಹಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಹವಣಿಸಿದ ಮೋದಿ-ಶಾ ಜೋಡಿ, ಅಂತಿಮವಾಗಿ ನಿತೀಶ್ ಅವರನ್ನು ರಾಜ್ಯ ರಾಜಕಾರಣದಿಂದ ಅಪಹರಿಸಿ, ರಾಜ್ಯಸಭೆಗೆ ಹೊತ್ತೊಯ್ದಿವೆ. ಬಿಹಾರವನ್ನು ತನ್ನ ಅಧೀನಕ್ಕೆ ತೆಗೆದುಕೊಂಡಿವೆ.
ಈಗ, ಬಿಜೆಪಿಗೆ ದೊಡ್ಡ ಕಂಟಕವಾಗಿರುವುದು ಪಶ್ಚಿಮ ಬಂಗಾಳ. ಬಿಜೆಪಿಯ ಮುಂದಿನ ಗುರಿಯೂ ಪಶ್ಚಿಮ ಬಂಗಾಳವೇ ಆಗಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಈಗಾಗಲೇ ನಗಣ್ಯವಾಗಿರುವ ಬಂಗಾಳದಲ್ಲಿ, ಮಮತಾ ಬ್ಯಾನರ್ಜಿ ಅವರ 15 ವರ್ಷಗಳ ಆಡಳಿತವನ್ನು ಕೊನೆಗಾಣಿಸಿ, ಟಿಎಂಸಿ ಕೋಟೆಯನ್ನು ಬೇಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹವಣಿಸುತ್ತಿದೆ. ಈ ಹಿಂದೆ, 2021ರ ವಿಧಾನಸಭಾ ಚುನಾವಣೆಗೂ ಮುನ್ನ ಆಪರೇಷನ್ ಕಮಲ ನಡೆಸಿ ಮಮತಾ ಬ್ಯಾನರ್ಜಿ ಅವರ ಬಲಗೈ ಭಂಟ ಸುವೇಂದು ಅಧಿಕಾರ ಸೇರಿದಂತೆ ಟಿಎಂಸಿಯ ಹಲವು ಶಾಸಕರನ್ನು ಬಿಜೆಪಿ ಅಹಪರಿಸಿತು. ಸುವೇಂದು ಅಧಿಕಾರಿ ನೇತೃತ್ವದಲ್ಲಿ ಅಂದಿನ ಚುನಾವಣೆಯನ್ನು ಎದುರಿಸಿತು. ಆದರೂ, ಬಂಗಾಳದ ಜನರು ಬಿಜೆಪಿಗೆ ಮಣೆ ಹಾಕಲಿಲ್ಲ.

ಇದೀಗ, ಬಂಗಾಳದಲ್ಲಿ ಕೆಲವೇ ವಾರಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಬಾರಿಯಾದರೂ ಅಧಿಕಾರ ಧಕ್ಕಿಸಿಕೊಳ್ಳಬೇಕೆಂಬ ಧಾವಂತ ಬಿಜೆಪಿಯಲ್ಲಿದೆ. ಅದಕ್ಕಾಗಿ, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ ‘ಮಿಷನ್ ಬಂಗಾಳ’ ಹೆಸರಿನಲ್ಲಿ ತಂತ್ರ-ಕುತಂತ್ರಗಳನ್ನು ಹೆಣಿದಿದೆ.
ಮೋದಿ ಸರ್ಕಾರದ ಕೈಗೊಂಬೆಯಾಗಿರುವ ಚುನಾವಣಾ ಆಯೋಗವು, ಬಂಗಾಳದಲ್ಲಿ ಬಿಜೆಪಿಗೆ ಅನುಕೂಲವಾಗುವಂತೆ ಎಸ್‌ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿದೆ. ಇತರ ರಾಜ್ಯಗಳಿಂದ ಭಿನ್ನವಾಗಿ ಎಎಸ್‌ಐಆರ್‌ನ ಮಾರ್ಗಸೂಚಿಗಳನ್ನು ಬದಲಿಸಿದೆ ಎಂಬ ಆರೋಪಗಳಿವೆ.
ಪಶ್ಚಿಮ ಬಂಗಾಳದ ಚುನಾವಣಾ ಅಧಿಕಾರಿಗಳು ಹೇಳುವಂತೆ; “ಎಸ್‌ಐಆರ್ ಹಂತದಲ್ಲಿ ಸಮೂನೆಗಳ ಜೊತೆಗೆ ಮತದಾರರ ದಾಖಲೆಗಳನ್ನು ಸಂಗ್ರಹಿಸದಂತೆ ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಮತದಾರರಿಂದ ಕೇವಲ ಅವರ ಪೋಷಕರು ಅಥವಾ ಅಜ್ಜ-ಅಜ್ಜಿಯರೊಂದಿಗೆ ಸಂಬಂಧ ಸಾಬೀತು ಮಾಡುವ ದಾಖಲೆಗಳನ್ನು ಮಾತ್ರವೇ ಪಡೆಯಬೇಕೆಂದು ಸೂಚಿಸಲಾಗಿತ್ತು.” ಆದರೆ, ಇತರ ರಾಜ್ಯಗಳಲ್ಲಿ ಹೀಗಿರಲಿಲ್ಲ. ಉತ್ತರ ಪ್ರದೇಶದಲ್ಲಿ ಬಿಎಲ್‌ಒಗಳು ಮೊದಲ ಹಂತದಲ್ಲೇ ಮತದಾರರ ದಾಖಲೆಗಳನ್ನು ಸಂಗ್ರಹಿಸಿದ್ದರು. ಬಿಹಾರದಲ್ಲಿ ಮತದಾರರು ಹಿಂದಿನ ಪಟ್ಟಿಯಲ್ಲಿದ್ದ ಚಿಕ್ಕಪ್ಪ ಅಥವಾ ಅತ್ತೆಯಂತಹ ಯಾವುದೇ ವಯಸ್ಕ ಸಂಬಂಧಿಗಳೊಂದಿಗೆ ತಮ್ಮ ಸಂಬಂಧವನ್ನು ಗುರುತಿಸಿ, ಮತದಾನದ ಅರ್ಹತೆಯನ್ನು ದೃಢಪಡಿಸಲು ಅವಕಾಶ ನೀಡಲಾಗಿತ್ತು.
ಈ ಲೇಖನ ಓದಿದ್ದೀರಾ?: ಬಂಗಾಳದಲ್ಲಿ ಬದಲಾಯ್ತು SIR ವರಸೆ; ದೇಶದ ಉಳಿದ ರಾಜ್ಯಗಳ ಮೇಲಿನ ಪ್ರಭಾವವೇನು?
ಜೊತೆಗೆ, 2025ರ ಡಿಸೆಂಬರ್ 19 ರಂದು, ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದು, ವಿಚಾರಣೆ ಹಂತದಲ್ಲಿ ಇಆರ್‌ಒಗಳ ಮೇಲೆ ಕಣ್ಣಿಡಲು 8,100 ‘ಮೈಕ್ರೋ-ಅಬ್ಸರ್ವರ್’ಗಳನ್ನು (ಸೂಕ್ಷ್ಮ ವೀಕ್ಷಕರು) ನೇಮಿಸಿತು. ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಮೈಕ್ರೋ-ಅಬ್ಸರ್ವರ್‌ಗಳನ್ನು ನಿಯೋಜಿಸಿದ್ದು ಇದೇ ಮೊದಲು ಮತ್ತು ಇದು ನಡೆದಿದ್ದು ಪಶ್ಚಿಮ ಬಂಗಾಳದಲ್ಲಿ ಮಾತ್ರ. ಇದೆಲ್ಲವೂ ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ನಡೆದ ಕೃತ್ಯಗಳು.
ಆಯೋಗದ ಧೋರಣೆಯ ವಿರುದ್ಧ ಬಂಗಾಳದ ಆಡಳಿತಾರೂಢ ಟಿಎಂಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯ ಸರ್ಕಾರ ಮತ್ತು ಆಯೋಗದ ನಡುವಿನ ‘ವಿಶ್ವಾಸದ ಕೊರತೆ’ಯನ್ನು ಗಮನಿಸಿದ ಸುಪ್ರೀಂ ಕೋರ್ಟ್, ಸಂವಿಧಾನದ 142ನೇ ವಿಧಿಯಡಿ ತನ್ನ ವಿಶೇಷ ಅಧಿಕಾರವನ್ನು ಬಳಸಿ, ಬಾಕಿ ಇರುವ ಪ್ರಕರಣಗಳನ್ನು ನಿರ್ಧರಿಸಲು ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಆದೇಶಿಸಿದೆ.
ಸದ್ಯ, 60.06 ಲಕ್ಷ ಮತದಾರರನ್ನು ‘ವಿಚಾರಣಾಧೀನ’ ಎಂದು ಆಯೋಗವು ವರ್ಗೀಕರಿಸಿದೆ. ಈ ಎಲ್ಲರ ಮತದಾನದ ಅರ್ಹತೆಯನ್ನು ನ್ಯಾಯಾಂಗ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಈ ಸಂದರ್ಭವನ್ನು ಬಳಸಿಕೊಂಡು, ಬಂಗಾಳದಲ್ಲಿ ರಾಷ್ಟ್ರಪತಿ ಅಡಳಿತ ಹೇರಲು ಮೋದಿ ಸರ್ಕಾರ ಹೊಂಚುಹಾಕಿದೆ. ಅದಕ್ಕಾಗಿ, ತಮಿಳುನಾಡಿನ ರಾಜ್ಯಪಾಲರಾಗಿದ್ದ ಆರ್.ಎನ್ ರವಿ ಅವರನ್ನು ಬಂಗಾಳಕ್ಕೆ ವರ್ಗಾವಣೆ ಮಾಡಿದೆ.
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರ ರಾಜೀನಾಮೆ ಮತ್ತು ರವಿ ಅವರ ವರ್ಗಾವಣೆಯು ಆಕಸ್ಮಿಕ ಮತ್ತು ಕಾಕತಾಳಿಯವಲ್ಲ. ಬಂಗಾಳದಲ್ಲಿ ಅಕ್ರಮಣಕಾರಿಯಾಗಿ ಸರ್ಕಾರದೊಂದಿಗೆ ಹಗ್ಗ-ಜಗ್ಗಾಟ ನಡೆಸಲು ಕಠುವಾಗಿರುವ ರಾಜ್ಯಪಾಲರ ಅಗತ್ಯ ಬಿಜೆಪಿಗಿತ್ತು. ಅಂತಹ ಸಾಮರ್ಥ್ಯ ಆರ್.ಎನ್ ರವಿ ಅವರಿಗಿದೆ. ಆರ್.ಎನ್. ರವಿ ಅವರು ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ಸರ್ಕಾರದೊಂದಿಗೆ ನಿರಂತರ ಸಂಘರ್ಷ ನಡೆಸಿದ್ದವರು, ಮಸೂದೆಗಳನ್ನು ತಡೆಹಿಡಿಯುವುದು, ಸರ್ಕಾರದ ವಿರುದ್ಧ ಸಾರ್ವಜನಿಕ ಟೀಕೆಗಳನ್ನು ಮಾಡುವ ಮೂಲಕ ರಾಜ್ಯದ ಕೆಂಗಣ್ಣಿಗೆ ಗುರಿಯಾಗಿದ್ದವರು. ಅವರನ್ನು ಬಂಗಾಳಕ್ಕೆ ಕೇಂದ್ರ ಸರ್ಕಾರ ವರ್ಗಾಯಿಸಿಕೊಂಡಿದೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಾಗುತ್ತಿರುವ ವಿಳಂಬವನ್ನು ಬಳಸಿಕೊಂಡು, ತನ್ನ ಕೈಗೊಂಬೆ ಚುನಾವಣಾ ಆಯೋಗದ ಮೂಲಕ ಚುನಾವಣೆಯನ್ನು ವಿಳಂಬಗೊಳಿಸಿ, ಬಂಗಾಳದ ಮೇಲೆ ರಾಷ್ಟ್ರಪತಿ ಆಡಳಿತ ಹೇರುವುದು. ಆರ್.ಎನ್ ರವಿ ಮೂಲಕ ಕೇಂದ್ರ ಸರ್ಕಾರವೇ ಬಂಗಾಳದ ಆಡಳಿತ ನಡೆಸುವುದು. ಚುನಾವಣೆ ಘೋಷಣೆಗೂ ಮುನ್ನ ಬಂಗಾಳದಲ್ಲಿ ಬಿಜೆಪಿ ಎಡೆಗೆ ಮತದಾರರು ಒಲವು ಹೊಂದುವಂತೆ ಪ್ರಭಾವ ಬೀರುವುದು ಮೋದಿ ಸರ್ಕಾರದ ಕುತಂತ್ರವಾಗಿದೆ. ಇದೆಲ್ಲವನ್ನೂ ಮೆಟ್ಟಿ, ಬಂಗಾಳವನ್ನು ಗೆಲ್ಲುವುದು ಮಮತಾ ಮತ್ತು ಟಿಎಂಸಿಗೂ, ಬಂಗಾಳವು ಕೋಮುವಾದಿಗಳ ಕೈಸೇರದಂತೆ ಎಚ್ಚರಿಕೆ ವಹಿಸುವುದು ಬಂಗಾಳದ ಮತದಾರರಿಗೂ ಇರುವ ಸವಾಲು!





