ದೇಶಭಕ್ತಿ ಯಾವುದೇ ಧರ್ಮದ ಸ್ವತ್ತಲ್ಲ. ಅದು ಸಂವಿಧಾನದಲ್ಲಿ ನಂಬಿಕೆ ಇಡುವುದು, ದೇಶದ ಕಾನೂನನ್ನು ಗೌರವಿಸುವುದು, ಸಹಚರರನ್ನು ಮಾನವೀಯತೆಯಿಂದ ನೋಡುವುದಾಗಿದೆ. ಆದರೆ, ದ್ವೇಷ ರಾಜಕಾರಣಕ್ಕೆ ಇದು ಅಡ್ಡಿಯಾಗುತ್ತದೆ. ಅದಕ್ಕಾಗಿಯೇ ಧರ್ಮವನ್ನು ಆಯುಧವನ್ನಾಗಿ ಮಾಡಿಕೊಂಡು, ದೇಶಭಕ್ತಿಯನ್ನೇ ಶಸ್ತ್ರವಾಗಿ ಬಳಸಲಾಗುತ್ತಿದೆ.
ದ್ವೇಷವನ್ನು ಬಿಟ್ಟು ದೇಶವನ್ನು ಕಟ್ಟಬೇಕಾಗಿರುವ ಕಾಲಘಟ್ಟದಲ್ಲೂ, ಕೆಲವರು ಧರ್ಮ ಎಂಬ ಬೇಗುದಿಗೆ ಬಿದ್ದು ಸಮಾಜವನ್ನು ವಿಭಜಿಸುವ ಕೃತ್ಯಕ್ಕೆ ಇಳಿದಿದ್ದಾರೆ. ದೇಶಭಕ್ತಿಯನ್ನು ಧರ್ಮದ ಆಧಾರದ ಮೇಲೆ ಅಳೆಯುವ ಈ ಮನಸ್ಥಿತಿ ಅತ್ಯಂತ ಅಪಾಯಕಾರಿ. ಇವರ ದೃಷ್ಟಿಯಲ್ಲಿ ಒಂದು ಧರ್ಮದವರು ಮಾತ್ರ ದೇಶಭಕ್ತರು, ಇನ್ನೊಂದು ಧರ್ಮದವರು ದೇಶವಿರೋಧಿಗಳು ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದಾರೆ.
ಹಿಂದೂ ಎಂದರೆ ದೇಶಕ್ಕಾಗಿ ಬದುಕುವವರು, ಮುಸ್ಲಿಂ ಎಂದರೆ ದೇಶವನ್ನು ನಾಶಮಾಡಲು ಹುಟ್ಟಿದವರು ಎಂಬ ಸುಳ್ಳು ನರೇಟಿವ್ ಅನ್ನು ಮೂಲಭೂತವಾದಿಗಳು ಜಾಣ್ಮೆಯಿಂದ ನಿರ್ಮಿಸುತ್ತಿದ್ದಾರೆ. ಇದು ಇತಿಹಾಸಕ್ಕೂ, ವಾಸ್ತವಕ್ಕೂ ಸಂಪೂರ್ಣ ವಿರುದ್ಧವಾಗಿದೆ. ಈ ದೇಶದ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು, ಸೇನೆ, ವಿಜ್ಞಾನ, ಶಿಕ್ಷಣ, ಕ್ರೀಡೆ, ಸಾಹಿತ್ಯದವರೆಗೆ ಎಲ್ಲ ಕ್ಷೇತ್ರಗಳಲ್ಲೂ ಎಲ್ಲ ಧರ್ಮದವರೂ ಸಮಾನವಾಗಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕೊಟ್ಟ ಕೊಡುಗೆಗಳು ಕಡಿಮೆಯೇನಿಲ್ಲ. ಮುಸ್ಲಿಂರು ದೇಶಕ್ಕಾಗಿ ದುಡಿದಿದ್ದಾರೆ. ದುಡಿಯುತ್ತಿದ್ದಾರೆ. ಈ ದೇಶ ಎಲ್ಲರದ್ದೂ…. ಇದನ್ನ ಅರೆಯದೇ ಇರುವ ಹುಳಿ ಹಿಂಡುವ ಮನಸ್ಥಿತಿ ಉಳ್ಳವರು ತಮ್ಮ ಕೀಳು ಮನಸ್ಥಿತಿಯನ್ನ ಹೊರಹಾಕುತ್ತ ಮುಸ್ಲಿಮರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಹೌದು, “ಮುಸ್ಲಿಮರು ಭಾರತದಲ್ಲಿ ಉಳಿಯಬೇಕೆಂದ್ರೆ ಕಡ್ಡಾಯವಾಗಿ ವಂದೇ ಮಾತರಂ ಹಾಡು ಹಾಡಬೇಕು” ಎಂಬ ಎಚ್ಚರಿಕೆಯನ್ನ ಬಿಜೆಪಿ ಸಂಸದ ಅನುರಾಗ್ ಠಾಕೂರ್ ದೇಶವಾಸಿಗಳಾದ ಮುಸ್ಲಿಮರಿಗೆ ನೀಡಿದ್ದಾರೆ. ಅನುರಾಗ್ ಠಾಕೂರ್ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ವಿರೋಧ ವ್ಯಕ್ತವಾಗಿದೆ.
2026ರ ಜನವರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಸಂಸದ ಅನುರಾಗ್ ಠಾಕೂರ್, “ಭಾರತದಲ್ಲಿ ವಾಸಿಸಲು ಬಯಸುವವರು ರಾಷ್ಟ್ರಧ್ವಜಕ್ಕೆ ನಮಸ್ಕರಿಸಿ ‘ವಂದೇ ಮಾತರಂ’ ಹೇಳಬೇಕು. ಇಲ್ಲದಿದ್ದರೆ, ಅವರು ದೇಶವನ್ನು ತೊರೆಯಬೇಕು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಮಾನ ದುರಂತ | ಪೈಲಟ್ ಶಾಂಭವಿ ಅಜ್ಜಿಗೆ ಕಳುಹಿಸಿದ ಕೊನೆಯ ಸಂದೇಶದಲ್ಲೇನಿದೆ?
ಕ್ಷಣಾರ್ಧದಲ್ಲಿ ವೈರಲ್ ಆದ ಈ ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆಗಳು ಬಂದಿವೆ. ಠಾಕೂರ್ ಬೆಂಬಲಿಗರು ಈ ಹೇಳಿಕೆಯನ್ನ ಸಮರ್ಥಿಸುತ್ತ ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯಂತಹ ಚಿಹ್ನೆಗಳ ಗೌರವ, ರಾಷ್ಟ್ರೀಯ ಏಕತೆ ಹಾಗೂ ಸಾಮೂಹಿಕ ನಾಗರಿಕ ಮೌಲ್ಯಗಳ ಒತ್ತಿ ಹೇಳುವ ಮಾತು ಎಂದು ಹೇಳುತ್ತಿದ್ದರೇ, ಹಲವರು ಈ ಹೇಳಿಕೆಯನ್ನ ಕಟುವಾಗಿ ಟೀಕಿಸಿದ್ದಾರೆ. ದೇಶಭಕ್ತಿಯನ್ನು ಧರ್ಮದ ಆಧಾರದ ಮೇಲೆ ನಿರ್ಧರಿಸುವುದು ಸಂವಿಧಾನ ವಿರೋಧಿ ಎಂದು ಹೇಳಿದ್ದಾರೆ.
“ದೇಶಭಕ್ತಿ ಯಾವುದೇ ಧರ್ಮದ ಸ್ವತ್ತಲ್ಲ. ಭಾರತದಲ್ಲಿ ಬದುಕುವ ಹಕ್ಕು ಸಂವಿಧಾನ ನೀಡಿದ ಹಕ್ಕು, ಯಾವುದೇ ಘೋಷಣೆ ಅಥವಾ ಗೀತೆ ಹಾಡುವುದಕ್ಕೆ ಅದು ಅವಲಂಬಿತವಲ್ಲ” ಎಂದು ಹಲವರು ಅನುರಾಗ್ ಠಾಕೂರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇದು ದ್ವೇಷ ಭಾಷಣ ಎಂದು ಖಂಡಿಸಿರುವ ನಾಗರಿಕ ಸಂಘಟನೆಗಳು, ಧರ್ಮದ ಆಧಾರದ ಮೇಲೆ ನಾಗರಿಕರನ್ನು ದೇಶಭಕ್ತರು–ದೇಶದ್ರೋಹಿಗಳು ಎಂದು ವಿಭಜಿಸುವ ಪ್ರಯತ್ನಗಳು ದೇಶದ ಏಕತೆಗೆ ಅಪಾಯಕಾರಿಯೆಂದು ಎಚ್ಚರಿಕೆ ನೀಡಿವೆ.
ವಂದೇ ಮಾತರಂ ಹಾಡದ ಮುಸ್ಲಿಂರು ದೇಶ ಬಿಟ್ಟು ಹೋಗಬೇಕು ಎಂದು ಹೇಳುವ ಇವರುಗಳಿಗೆ ವಂದೇ ಮಾತರಂ ಬಗ್ಗೆ ಎಷ್ಟು ಗೊತ್ತಿದೆ. ವಾಸ್ತವವಾಗಿ ವಂದೇ ಮಾತರಂ ಗೀತೆಯ ಇತಿಹಾಸ, ಅದರ ಅರ್ಥ ಮತ್ತು ಸಂವಿಧಾನಾತ್ಮಕ ಸ್ಥಾನಮಾನ ಕುರಿತು ಎಷ್ಟು ತಿಳಿದಿದೆ.
ವಂದೇ ಮಾತರಂ ಎಂಬ ವಿಚಾರವನ್ನ ಇಟ್ಟುಕೊಂಡು ಮುಸ್ಲಿಂರ ಮೇಲೆ ಹರಿಹಾಯುವ ಈ ಹಿಂದುತ್ವವಾದಿಗಳಿಗೆ ವಂದೇ ಮಾತರಂ ಬಗ್ಗೆ ಗಂಧ – ಗಾಳಿಯೂ ತಿಳಿದಿಲ್ಲ. ಇದಕ್ಕೆ ಹಲವಾರು ಉದಾಹರಣೆಗಳಿವೆ.
ಎಬಿಪಿ ನ್ಯೂಸ್‌ನಲ್ಲಿ ಚರ್ಚೆ ನಡೆಯುವ ಸಮಯದಲ್ಲಿ ನಿರೂಪಕರು ವಂದೇ ಮಾತರಂ ಬಗ್ಗೆ ಆ ಹಾಡಿನಲ್ಲಿರುವ ಅರ್ಥದ ಬಗ್ಗೆ ವಿಶ್ವ ಹಿಂದೂ ಪರಿಷತ್ ನಾಯಕ ವಿನೋದ್ ಬನ್ಸಾಲ್ ಅವರಿಗೆ ಪ್ರಶ್ನೆ ಮಾಡುತ್ತಾರೆ. ಆದರೆ, ಇದಕ್ಕೆ ಉತ್ತರಿಸಲು ತಡವರಿಸಿದ ಅವರು ನನ್ನನ್ನ ಪರೀಕ್ಷೆ ಮಾಡುತ್ತಿದ್ದೀರಾ ಎಂದು ಸಿಟ್ಟಿಗೇಳುತ್ತಾರೆ. ಅವರಿಗೆಯೇ ವಂದೇ ಮಾತರಂ ಗೀತೆ ಬಗ್ಗೆ ತಿಳಿದಿಲ್ಲ. ಆದರೆ, ಮುಸ್ಲಿಮರ ಮೇಲೆ ಹೇರಲು ಬಯಸುತ್ತಾರೆ.
ಮತ್ತೊಂದು, ಟಿವಿ ಚರ್ಚೆಯಲ್ಲಿ ಬಿಹಾರದ ಭಾರತೀಯ ಜನತಾ ಪಕ್ಷದ ವಕ್ತಾರ ನವೀನ್ ಕುಮಾರ್ ಸಿಂಗ್ ಅವರಿಗೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಸದಸ್ಯರೊಬ್ಬರು ತಮ್ಮ ದೇಶಭಕ್ತಿಯನ್ನು ಸಾಬೀತುಪಡಿಸಲು ವಂದೇ ಮಾತರಂ ಹಾಡುವಂತೆ ಸವಾಲು ಹಾಕುತ್ತಾರೆ. ಈ ಸವಾಲನ್ನ ಸ್ವೀಕರಿಸಿದ ಸಿಂಗ್ ವಂದೇ ಮಾತರಂ ಹಾಡು ಹಾಡಲು ಶುರು ಮಾಡಿದ್ದಾರೆ. ಆ ನಂತರವೇ ಇವರ ಬಂಡವಾಳ ಬಯಲಾಗಿದೆ. ವಂದೇ ಮಾತರಂ ಹಾಡು ಹಾಡಲು ಕಷ್ಟ ಪಟ್ಟಿರುವ ಇವರು ನೋಡಿಕೊಂಡು ಕೂಡ ತಪ್ಪು ತಪ್ಪಾಗಿ ಹಾಡಿ ತಮ್ಮ ದೇಶ ಪ್ರೇಮವನ್ನು ಪ್ರದರ್ಶನ ಮಾಡಿದ್ದಾರೆ. ತಪ್ಪು ತಪ್ಪಾಗಿ ಹಾಡನ್ನು ಹಾಡಿ ಬಿಜೆಪಿ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದರು ಎಂದು ಬಿಜೆಪಿ ಮುಖಂಡರು ಇವರ ವಿರುದ್ಧ ಕಿಡಿಕಾರಿದ ಘಟನೆಯೂ ಕೂಡ ನಡೆದಿತ್ತು.
ಮೊಬೈಲ್ ಫೋನ್‌ನಲ್ಲಿ ಓದುತ್ತ ತಪ್ಪಾಗಿ ಹಾಡಿದ ಅವರು ‘ವಂದೇ ಮಾತರಂ’ ಬದಲಾಗಿ ‘ಬಂದೇ ಮಾತರಂ’ ಎಂದಿದ್ದಾರೆ. ‘ಪುಲಕಿತ್ ಯಾಮಿನಿಮ್‘ ಎಂಬ ಪದವನ್ನು ‘ಪುಲ್ಕಿತ್ಯಾಮ್‘ ಎಂದು ಉಚ್ಚರಿಸಿದ್ದಾರೆ. ಕೇಲವೇ ಗಂಟೆಗಳಲ್ಲಿ ಇವರ ವಿಡಿಯೋ ವೈರಲ್ ಆಗಿ ಹಲವಾರು ಟೀಕೆಗಳಿಗೆ ಗುರಿಯಾಗಿತ್ತು.

ವಂದೇ ಮಾತರಂಗೆ ಗೌರವ ನೀಡಲಾಗುತ್ತದೆ. ಆದರೆ, ಈ ಹಾಡನ್ನ ಹಾಡುವುದು ಕಡ್ಡಾಯವಲ್ಲ ಎಂಬ ತತ್ವವನ್ನು ದೇಶ ಅಳವಡಿಸಿಕೊಂಡಿದೆ. ಇದನ್ನ ತಿಳಿದಿರುವ ಹಿಂದುತ್ವವಾದಿಗಳು ಮುಸ್ಲಿಮರನ್ನು ನಿರ್ನಾಮ ಮಾಡಲು ಈ ದಾರಿಯೇ ಸರಿ ಎಂದು ಮುನ್ನುಗ್ಗುತ್ತಿದ್ದಾರೆ.
ದೇಶಭಕ್ತಿ ಯಾವುದೇ ಧರ್ಮದ ಸ್ವತ್ತಲ್ಲ. ಅದು ಸಂವಿಧಾನದಲ್ಲಿ ನಂಬಿಕೆ ಇಡುವುದು, ದೇಶದ ಕಾನೂನನ್ನು ಗೌರವಿಸುವುದು, ಸಹಚರರನ್ನು ಮಾನವೀಯತೆಯಿಂದ ನೋಡುವುದಾಗಿದೆ. ಆದರೆ, ದ್ವೇಷ ರಾಜಕಾರಣಕ್ಕೆ ಇದು ಅಡ್ಡಿಯಾಗುತ್ತದೆ. ಅದಕ್ಕಾಗಿಯೇ ಧರ್ಮವನ್ನು ಆಯುಧವನ್ನಾಗಿ ಮಾಡಿಕೊಂಡು, ದೇಶಭಕ್ತಿಯನ್ನೇ ಶಸ್ತ್ರವಾಗಿ ಬಳಸಲಾಗುತ್ತಿದೆ.
ಇಂತಹ ವಿಭಜನೆಯ ರಾಜಕಾರಣ ದೇಶವನ್ನು ಬಲಪಡಿಸುವುದಿಲ್ಲ. ಒಳಗೊಳಗೇ ಕುಸಿಯುವಂತೆ ಮಾಡುತ್ತದೆ. ದೇಶ ಉಳಿಯಬೇಕಾದರೆ, ದೇಶಭಕ್ತಿ ಧರ್ಮಕ್ಕಿಂತ ದೊಡ್ಡದು ಎಂಬ ಸತ್ಯವನ್ನು ಸಮಾಜ ಮತ್ತೆ ನೆನಪಿಸಿಕೊಳ್ಳಬೇಕು. ಇಲ್ಲವಾದರೆ, ದೇಶದ ಹೆಸರಿನಲ್ಲಿ ನಡೆಯುವ ಈ ದ್ವೇಷವೇ ದೇಶಕ್ಕೆ ಅತಿ ದೊಡ್ಡ ಅಪಾಯವಾಗುತ್ತದೆ.




