ಮಂಡ್ಯದಲ್ಲಿ ಕೋಮು ರಾಜಕಾರಣ: ಭದ್ರಕೋಟೆಯನ್ನು ಬಿಜೆಪಿಗೊಪ್ಪಿಸುವುದೇ ಜೆಡಿಎಸ್‌?

Date:

ಬಿಜೆಪಿಯ ಕೋಮು ರಾಜಕಾರಣವನ್ನು ಅರ್ಥ ಮಾಡಿಕೊಳ್ಳದ ಜೆಡಿಎಸ್‌, ಈ ಕ್ಷಣದ ಲಾಭಕ್ಕಾಗಿ ಬಿಜೆಪಿ ಜೊತೆ ನಿಂತಿದೆ. ಬಿಜೆಪಿಯ ಕೋಮು ರಾಜಕಾರಣಕ್ಕೆ ತನ್ನ ಕಾರ್ಯಕರ್ತರನ್ನು ಕಾಲಾಳುಗಳಾಗಿ ಕಳಿಸುತ್ತಿದೆ. ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿದೆ.

ಸೋಮವಾರ, ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರು ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆಸಿದ್ದಾರೆ. ಮೆರವಣಿಗೆ ವೇಳೆ, ಮಸೀದಿ ಎದುರು ಹಿಂದುತ್ವವಾದಿಗಳು ದಾಂಧಲೆ ನಡೆಸಿದ್ದಾರೆ. ಇಸ್ಲಾಂ ಧ್ವಜವನ್ನು ಕಿತ್ತು, ತುಳಿದು ಕೋಮು ಪ್ರಚೋದನಾಕಾರಿಯಾಗಿ ವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ಕಲ್ಲು ತೂರಾಟವೂ ನಡೆದಿದೆ. ಪೊಲೀಸರು ಗುಂಪುಗಳನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ. ಘಟನೆಯು ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಹಿಂದುತ್ವವಾದಿಗಳು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಉದ್ದೇಶಪೂರ್ವಕವಾಗಿ ಮಸೀದಿ ಇರುವ ಬೀದಿಯಲ್ಲಿಯೇ ಗಣಪತಿ ವಿಸರ್ಜನಾ ಮೆರವಣಿಗೆ ನಡೆಸಲು ಅನುಮತಿ ಪಡೆದಿದ್ದರು ಎಂದು ಆರೋಪಿಸಲಾಗಿದೆ. ಅಂದರೆ, ಕೋಮು ಘರ್ಷಣೆ ಹುಟ್ಟುಹಾಕುವುದು ಪೂರ್ವಯೋಜಿತ ಕೃತವಾಗಿತ್ತು ಎಂಬುದು ಸ್ಪಷ್ಟ. ಇದು ಮೊದಲ ಕೃತ್ಯವೇನು ಅಲ್ಲ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯಲ್ಲಿ ನಾಲ್ಕೈದು ಕೋಮುವಾದಿ ದ್ವೇಷದ ಕೃತ್ಯಗಳು ಘಟಿಸಿವೆ. ಇವು ಮಂಡ್ಯವನ್ನು ಕೋಮು ದ್ವೇಷದಿಂದ ಸದಾ ಉದ್ವಿಗ್ನ ಸ್ಥಿತಿಯಲ್ಲಿಡುವ ತಂತ್ರವನ್ನು ಬಹಿರಂಗಪಡಿಸಿದೆ.

ಅಂದಹಾಗೆ, ಮಂಡ್ಯ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಜಿಲ್ಲೆ. ಕಾವೇರಿ ನದಿ ವಿವಾದ, ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿನ ಹಲವಾರು ಹೋರಾಟಗಳಿಂದ ಗುರುತಿಸಿಕೊಂಡಿರುವ ಜಿಲ್ಲೆ. ಜೊತೆಗೆ, ದಲಿತರು, ಮಹಿಳೆಯರು ಹಾಗೂ ಕಾರ್ಮಿಕರ ಹಕ್ಕುಗಳ ಹೋರಾಟಕ್ಕೂ ನೆಲೆ. ರಾಜ್ಯಕ್ಕೆ ಓರ್ವ ಮುಖ್ಯಮಂತ್ರಿ (ಎಸ್‌.ಎಂ ಕೃಷ್ಣ) ಕೊಟ್ಟಿದ್ದಲ್ಲದೆ, ನಿತ್ಯಸಚಿವ ಕೆ.ವಿ.ಶಂಕರಗೌಡ, ಹೋರಾಟಗಾರ ಜಿ. ಮಾದೇಗೌಡ, ಪುಟ್ಟಣ್ಣಯ್ಯ, ಸಂಘಟಕ ಚೌಡಯ್ಯರಂತಹವರು ಹಾಗೂ ಸಿನಿಮಾ ಸ್ಟಾರ್‌ಗಳಾದ ಅಂಬರೀಶ್‌ – ರಮ್ಯಾ ಅವರಿಗೆ ರಾಜಕೀಯ ಬುನಾದಿಯನ್ನೂ ಹಾಕಿಕೊಟ್ಟಿದೆ. ಸಹಬಾಳ್ವೆ, ಕೋಮು ಸಾಮರಸ್ಯವನ್ನೇ ತನ್ನ ಜೀವಾಳವಾಗಿಸಿಕೊಂಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಆದರೆ, ಈಗ ಸಕ್ಕರೆಯ ನಾಡನ್ನು ದ್ವೇಷದ ನಾಡಾಗಿಸಿ, ಕೋಮು ವಿಷ ಬಿತ್ತುತ್ತಿರುವ ಬಿಜೆಪಿ-ಸಂಘಪರಿವಾರದ ಕುತಂತ್ರಕ್ಕೆ ಸಿಕ್ಕು ನಲುಗುತ್ತಿದೆ. ಕರ್ನಾಟಕದಲ್ಲಿ ಕರಾವಳಿ ನಂತರ ಸಂಘಪರಿವಾರದ 2ನೇ ಕೋಮು ಪ್ರಯೋಗಶಾಲೆಯಾಗಿ ಮಾರ್ಪಡುತ್ತಿದೆ.

ಮಂಡ್ಯ ಜಿಲ್ಲೆಯು ರಾಜಕೀಯವಾಗಿ ಕಳೆದ 2-3 ದಶಕಗಳಿಂದ ಜೆಡಿಎಸ್‌ಗೆ ಭದ್ರಕೋಟೆಯಾಗಿದ್ದರೂ, ಕಾಂಗ್ರೆಸ್‌ನ ಕೈಬಿಡದೆ ನೆಲೆ ಕೊಟ್ಟಿದೆ. ಜೆಡಿಎಸ್‌-ಕಾಂಗ್ರೆಸ್‌ ರಾಜಕೀಯ ಪೈಪೋಟಿಯ ಮಂಡ್ಯ ಜಿಲ್ಲೆಯನ್ನು ಆಕ್ರಮಿಸಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ. ಜಿಲ್ಲೆಯಲ್ಲಿ ಬಲಾಢ್ಯರಾದ ಒಕ್ಕಲಿಗರನ್ನು ಸೆಳೆಯಲು ತಂತ್ರ ಹೆಣೆಯುತ್ತಿದೆ. ಅದಕ್ಕಾಗಿ, ತನ್ನ ಏಕೈಕ ಅಸ್ತ್ರ ಕೋಮುದ್ವೇಷದ ದಾಳ ಪ್ರಯೋಗಿಸುತ್ತಿದೆ. ಕೋಮು ಧ್ರುವೀಕರಣಕ್ಕೆ ಮುಂದಾಗಿದೆ. ಕಳೆದ ಹತ್ತಾರು ವರ್ಷಗಳ ನಿರಂತರ ಪ್ರಯತ್ನದೊಂದಿಗೆ ಕರಾವಳಿ ಕರ್ನಾಟವನ್ನು ಬಿಜೆಪಿ ಕೋಮು ಸಂಘರ್ಷದ ಯುದ್ಧಭೂಮಿಯಾಗಿ ಬದಲಿಸಿದೆ.

ಇದೇ ತಂತ್ರವನ್ನು ಮಂಡ್ಯಕ್ಕೂ ಎಳೆದು ತಂದಿದೆ. ಆರಂಭದಲ್ಲಿ ಶ್ರೀರಾಮ ನವಮಿ, ಹನುಮ ಜಯಂತಿ ಆಚರಿಸುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಕೇಸರಿ ಧ್ವಜ ನೆಟ್ಟ ಬಿಜೆಪಿ-ಸಂಘಪರಿವಾರ, ಕಳೆದ ಐದಾರು ವರ್ಷಗಳಲ್ಲಿ ತನ್ನ ಕೋಮುವರಸೆಯನ್ನು ಬದಲಿಸಿದೆ. ಟಿಪ್ಪು ಸುಲ್ತಾನ್‌ರನ್ನು ಒಕ್ಕಲಿಗ ಸಮುದಾಯದ ಉರಿಗೌಡ-ನಂಜೇಗೌಡ ಕೊಂದರು ಎಂಬ ಕಾಲ್ಪನಿಕ ಕತೆ ಕಟ್ಟಿ ವಿವಾದ ಸೃಷಿಸಿತು. ಆ ಬಳಿಕ, ಶ್ರೀರಂಗಪಟ್ಟಣದಲ್ಲಿರುವ ಮಸೀದಿಯು ಈ ಹಿಂದೆ, ಶಿವನ ದೇವಾಲಯವಾಗಿತ್ತು ಎಂದು ಮತ್ತೊಂದು ವಿವಾದವನ್ನು ಹುಟ್ಟುಹಾಕಿತು. ಕಳೆದ ವರ್ಷ, ಕೆರಗೋಡಿನಲ್ಲಿ ಗ್ರಾಮ ಪಂಚಾಯತಿಯ ಧ್ವಜಸ್ತಂಭದಲ್ಲಿ ಹನುಮ ಧ್ವಜ ಹಾರಿಸಿ ಕೋಮು ಉದ್ವಿಗ್ನತೆ ಸೃಷ್ಟಿಸಿತು. ಬಳಿಕ, ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ಕಲ್ಲುತೂರಾಟ ನಡೆಸಿ ಕೋಮು ಗಲಭೆ ಹುಟ್ಟುಹಾಕಿತು. ಈಗ, ನಿನ್ನೆ ಮದ್ದೂರಿನಲ್ಲಿಯೂ ಕೋಮು ಹಿಂಸಾಚಾರ ನಡೆಸಿದೆ. ಮಂಡ್ಯದ ನೆಮ್ಮದಿಯನ್ನು ಹಾಳುಗೆಡವಿದೆ. ಕುವೆಂಪು ಅವರ ಆಶಯದಂತೆ ‘ಸರ್ವಜನಾಂಗದ ಶಾಂತಿಯ ತೋಟ’ವಾಗಿದ್ದ ಮಂಡ್ಯವು ಸಂಘದ ಹಿಂದುತ್ವವಾದಿ ದ್ವೇಷದ ನೆಲೆಯಾಗಿ ಬದಲಾಗುತ್ತಿದೆ.

ಹಿಂದುತ್ವದ ಹಿಕಮತ್ತಿನ ಲಾಭ ನೇರವಾಗಿ ತನಗೆ ಸಿಗುತ್ತದೆ ಎಂದು ಬಿಜೆಪಿ ಭಾವಿಸಿದೆ. ಆದರೆ, ಇದರ ಲಾಭ ಪಡೆಯಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜಾತ್ಯತೀತೆಯ ಹೆಸರಿಟ್ಟುಕೊಂಡು ಜಾತಿ ರಾಜಕಾರಣ, ವಂಶರಾಜಕಾರಣ ಮಾಡುತ್ತಿರುವ ಜೆಡಿಎಸ್‌ ಕೂಡ ಹವಣಿಸುತ್ತಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ಸ್ಥಾನಗಳನ್ನು ಕಳೆದುಕೊಂಡು ಜೆಡಿಎಸ್‌ ಹೀನಾಯವಾಗಿ ಸೋತಿತು. ತನ್ನ ನೆಲೆಯನ್ನು ಮರಳಿ ಪಡೆಯಬೇಕೆಂದು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತು. ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಕುಮಾರಸ್ವಾಮಿ ಕಣಕ್ಕಿಳಿದು ಗೆದ್ದರು. ತಮ್ಮ ಕಾರ್ಯಕರ್ತರಿಗೆ ಹಸಿರು ಶಾಲಿನ ಮೇಲೆ ಕೇಸರಿ ಶಾಲು ಹೊದಿಸಿದರು. ತಮ್ಮ ಕಾರ್ಯಕರ್ತರು ಕೇಸರಿ ರಾಜಕಾರಣದ ಪದತಲಕ್ಕೆ ಅರ್ಪಿಸಿದರು.

ಸದ್ಯ, ಬಿಜೆಪಿ-ಜೆಡಿಎಸ್‌ ಮೈತ್ರಿ ಮತ್ತು ಕಾಂಗ್ರೆಸ್‌ ನಡುವಿನ ಹಗ್ಗಜಗ್ಗಾಟದಲ್ಲಿ ಯಾರ ಕೈಹಿಡಿಯಬೇಕೆಂಬ ಗೊಂದಲದಲ್ಲಿದ್ದಾರೆ. ಬಿಜೆಪಿ-ಸಂಘದ ಹಿಂದುತ್ವ ರಾಜಕಾರಣವು ಒಕ್ಕಲಿಗರನ್ನು ತನ್ನತ್ತ ಸೆಳೆಯುತ್ತಿದೆ. ಕೇಸರಿ ಶಾಲು ಹೊದ್ದ ಜೆಡಿಎಸ್‌ ಬೆಂಬಲಿಗರು ಬಿಜೆಪಿ ಹಿಂದೆ ಓಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ‘ಸೆಕ್ಯುಲರ್‌’ ಅಜೆಂಡಾದೊಂದಿಗೆ ಜಿಲ್ಲೆಯ ಜನರನ್ನು ಹಿಡಿದಿಡಲು ಯತ್ನಿಸುತ್ತಿದೆ. ಬಿಜೆಪಿಯ ಹಿಂದುತ್ವ ಮತ್ತು ಕಾಂಗ್ರೆಸ್‌ನ ಜಾತ್ಯತೀತವಾದದ ತಿಕ್ಕಾಟದಲ್ಲಿ ತನಗೆ ಲಾಭವಾಗುತ್ತದೆ ಎಂದು ಜೆಡಿಎಸ್‌ ಎದುರು ನೋಡುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ, ತಕ್ಷಣಕ್ಕೆ ಮಂಡ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಅಥವಾ ಪ್ರಾಬಲ್ಯ ಪಡೆದುಕೊಳ್ಳುವುದು ಸುಲಭವಲ್ಲ. ಇದಕ್ಕೆ, ಕಾಂಗ್ರೆಸ್‌ನ ಕಳೆದ ಚುನಾವಣೆಯ ಯಶಸ್ಸು ಭಾರೀ ಸವಾಲಾಗಿ ಕಂಡುಬಂದಿದೆ. ಆದಾಗ್ಯೂ, ನಿರಂತರ ಕೋಮು ದಳ್ಳುರಿಯನ್ನು ಬಿತ್ತುವ ಮೂಲಕ, ಜನರಲ್ಲಿ ಹಿಂದುತ್ವದ ವಿಷವನ್ನು ಬಿತ್ತುವುದು ಈಗಿನ ಆದ್ಯತೆ. ಇದರ ತಕ್ಷಣದ ಲಾಭವನ್ನು ತನ್ನ ಮಿತ್ರ ಪಕ್ಷ ಜೆಡಿಎಸ್‌ ಪಡೆದುಕೊಳ್ಳುವ ಸಾಧ್ಯತೆ ಇದೆ.

ಬಿಜೆಪಿ ಜೊತೆ ಮೈತ್ರಿಯಲ್ಲಿರುವ ಜೆಡಿಎಸ್‌ ನೇರವಾಗಿ ಕೋಮು ರಾಜಕಾರಣಕ್ಕೆ ಇಳಿಯಲಿದ್ದರೂ, ಇಂತಹ ಗಲಭೆಗಳ ಸಮಯದಲ್ಲಿ ಹಿಂದುಗಳ ಮೇಲಿನ ದಾಳಿಯನ್ನಷ್ಟೇ ಖಂಡಿಸಿ, ಮೃದು ಹಿಂದುತ್ವವನ್ನು ಪ್ರದರ್ಶಿಸುತ್ತಿದೆ. ಕೇಸರಿ ಶಾಲು ಹಾಕಿಕೊಳ್ಳುತ್ತಿರುವ ಒಕ್ಕಲಿಗರ ಪರವಾಗಿ ತಾವಿದ್ದೇವೆಂದು ಸಾಬೀತು ಮಾಡಲು ಯತ್ನಿಸುತ್ತಿದೆ. ಸದ್ಯದ ಮೈತ್ರಿಯಲ್ಲಿ ಮಂಡ್ಯ ಜಿಲ್ಲೆಯ ಕ್ಷೇತ್ರಗಳನ್ನು ತನ್ನ ಪಾಲಿಗೆ ತೆಗೆದುಕೊಳ್ಳುವುದುರಿಂದ, ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಇರುವುದರಿಂದ ತಮಗೆ ಲಾಭವಾಗುತ್ತದೆ ಎಂದು ಜೆಡಿಎಸ್‌ ಭಾವಿಸಿದೆ. ಬಿಜೆಪಿಯ ಹಿಂದುತ್ವದ ಕಾರ್ಯತಂತ್ರದಿಂದ ಪರೋಕ್ಷ ಲಾಭ ಪಡೆದುಕೊಳ್ಳುವ ಧಾವಂತದಲ್ಲಿದೆ.

ತನ್ನ ತಂತ್ರದಿಂದ ಜೆಡಿಎಸ್‌ ಲಾಭ ಮಾಡಿಕೊಳ್ಳುತ್ತದೆ ಎಂಬ ಎಚ್ಚರಿಕೆ ಬಿಜೆಪಿಯಲ್ಲಿಯೂ ಇದೆ. ಆದರೂ, ಈಗಿನ ಸಂದರ್ಭದಲ್ಲಿ ಜೆಡಿಎಸ್‌ಗೇ ಲಾಭವಾದರೂ ಪರವಾಗಿಲ್ಲ, ದೀರ್ಘಕಾಲದ ಲಾಭವನ್ನು ಪಡೆಯಬಹುದು ಎಂಬುದು ಬಿಜೆಪಿಯ ಒಳ ಸಂಚು. ಮಾತ್ರವಲ್ಲದೆ, ಜೆಡಿಎಸ್‌ನ ಸಾಂಪ್ರದಾಯಿಕ ‘ಜಾತ್ಯತೀತ’ ಇಮೇಜ್‌ಗೆ ಕೋಮು ರಾಜಕಾರಣವು ದೀರ್ಘಕಾಲೀನವಾಗಿ ಹಾನಿ ಉಂಟುಮಾಡುತ್ತದೆ ಎಂಬುದೂ ಬಿಜೆಪಿ ಗೊತ್ತಿದೆ.

ಒಂದು ವೇಳೆ, ಮಂಡ್ಯ ಜಿಲ್ಲೆಯ ಅಥವಾ ಜಿಲ್ಲೆಯ ನೆರೆಹೊರೆಯ ಜಿಲ್ಲೆಯ ಜನರು ಬಿಜೆಪಿ-ಸಂಘಪರಿವಾರದ ಹಿಂದುತ್ವ ಕೋಮುವಾದಕ್ಕೆ ಮಾರುಹೋದರೆ, ಬಿಜೆಪಿಯ ಮೊದಲ ಅಜೆಂಡಾ ಫಲಿಸುತ್ತದೆ. ಆ ನಂತರದ ದಿನಗಳಲ್ಲಿ, ಹಿಂದುತ್ವವನ್ನು ಆವಾಹಿಸಿಕೊಂಡ ಜನರು (ಒಕ್ಕಲಿಗರು) ಕಟ್ಟಾ ಹಿಂದುತ್ವವಾದಿಗಳೇ ತಮ್ಮ ಮುಂದೆ ಪ್ರಬಲ ಆಯ್ಕೆಯಾಗಿ ಇರುವಾಗ, ಮೃದು ಹಿಂದುತ್ವದ ಧೋರಣೆ ಹೊಂದಿರುವ ಜೆಡಿಎಸ್‌ಅನ್ನು ಹೊರದಬ್ಬುತ್ತಾರೆ. ಇದೇ ಬಿಜೆಪಿಗೂ ಬೇಕಿರುವುದು.

ಈ ಲೇಖನ ಓದಿದ್ದೀರಾ?: ಡಿಜೆ ಬ್ಯಾನ್‌ನಿಂದ ಕಲೆಗೆ ಪ್ರೋತ್ಸಾಹ, ಕೋಮು ಉದ್ವಿಗ್ನತೆಗೆ ಕಡಿವಾಣ

ಮಂಡ್ಯ ಸೇರಿದಂತೆ ಒಕ್ಕಲಿಗರ ಪ್ರಬಲ್ಯವಿರುವ ಜಿಲ್ಲೆಗಳಲ್ಲಿ ಜೆಡಿಎಸ್‌ಅನ್ನು ಮುಗಿಸಿ, ಅದರ ಬೆಂಬಲಿಗರು ಮತ್ತು ಮತದಾರರನ್ನು ತನ್ನ ಸುಪರ್ದಿಗೆ ಪಡೆಯುವುದೇ ಬಿಜೆಪಿಯ ಮುಖ್ಯ ಗುರಿ. ಆದರೆ, ಬಿಜೆಪಿಯ ಈ ತಂತ್ರವನ್ನು ಅರ್ಥ ಮಾಡಿಕೊಳ್ಳದ ಜೆಡಿಎಸ್‌, ಈ ಕ್ಷಣದ ಲಾಭಕ್ಕಾಗಿ ಬಿಜೆಪಿ ಜೊತೆ ನಿಂತಿದೆ. ಬಿಜೆಪಿಯ ಕೋಮು ರಾಜಕಾರಣಕ್ಕೆ ತನ್ನ ಕಾರ್ಯಕರ್ತರನ್ನು ಕಾಲಾಳುಗಳಾಗಿ ಕಳಿಸುತ್ತಿದೆ. ತನ್ನ ಗುಂಡಿಯನ್ನು ತಾನೇ ತೋಡಿಕೊಳ್ಳುತ್ತಿದೆ.

ಇನ್ನು, ಕಾಂಗ್ರೆಸ್‌ ಕೂಡ, ಅರೆಬೆಂದಂತೆ ವರ್ತಿಸುತ್ತಿದೆ. ಕಾಂಗ್ರೆಸ್‌ ದೆಹಲಿ ಹೈಕಮಾಂಡ್‌ ಕೋಮುವಾದದ ವಿರುದ್ಧ ದೃಢ ನಿಲುವು ಹೊಂದಿದ್ದರೂ, ರಾಜ್ಯ ಕಾಂಗ್ರೆಸ್‌ ಕೋಮುವಾದವನ್ನು ನಿಷ್ಠುರವಾಗಿ ವಿರೋಧಿಸದೇ, ತೇಪೆ ಹಚ್ಚುವ ಕೆಲಸದಲ್ಲಿ ತೊಡಗಿದೆ. ಹೊಂದಾಣಿಕೆ ರಾಜಕಾರಣದ ಹೊಲಸಿನಲ್ಲಿ ಮುಳುಗಿದೆ. ಬಿಜೆಪಿ-ಸಂಘಪರಿವಾದ ಕೋಮು ರಾಜಕಾರಣದ ವಿರುದ್ಧ ಕಾಂಗ್ರೆಸ್‌ ದೃಢವಾಗಿ ನಿಲ್ಲದಿದ್ದರೆ, ಕಾಂಗ್ರೆಸ್‌ ಕೂಡ ಕೋಮುದ್ವೇಷದ ಅಲೆಯಲ್ಲಿ ಕೊಚ್ಚಿಹೋಗಲಿದೆ.

ಗಮನಿಸಬೇಕಾದ ಅಂಶವೆಂದರೆ, ಮಂಡ್ಯದ ಜನರು ಸಾಮಾಜಿಕ ಸಾಮರಸ್ಯವೇ ತಮ್ಮ ಜೀವಾಳವೆಂದು ನಂಬಿರುವವರು. ಹೀಗಾಗಿ, ಈ ಗಲಭೆಗಳನ್ನು ಬಿಜೆಪಿಯ ಕೋಮು ರಾಜಕಾರಣದ ಭಾಗವೆಂದು ಚಿತ್ರಿಸಿ, ತನ್ನ ಸೆಕ್ಯುಲರ್‌ ಇಮೇಜ್‌ಅನ್ನು ಕಾಂಗ್ರೆಸ್‌ ಬಲಪಡಿಸಿಕೊಳ್ಳುವ ಅವಕಾಶವಿದೆ. ಕೋಮುವಾದದ ವಿರುದ್ಧ ತ್ವರಿತ ಮತ್ತು ಗಂಭೀರ ಕ್ರಮಗಳನ್ನು ಕೈಗೊಳ್ಳುವ ಮೂಲಕ, ಸಾಮರಸ್ಯವನ್ನು ಗಟ್ಟಿಯಾಗಿ ಬಿತ್ತುವ ಮೂಲಕ ಒಕ್ಕಲಿಗರನ್ನು ತನ್ನ ಪಡಸಾಲೆಯಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್‌ಗೆ ಅವಕಾಶವಿದೆ. ಜೆಡಿಎಸ್‌ ಕೂಡ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ, ಜೆಡಿಎಸ್‌ ಕಾವೇರಿಯಲ್ಲಿ ಕೊಚ್ಚಿ ಹೋಗಬಹುದು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...