ಪ್ರಾಚೀನ ಕಾಲದ ಬುದ್ಧನ ತತ್ವಗಳಿಂದ ಹಿಡಿದು, ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನದವರೆಗೂ ಈ ನೆಲದಲ್ಲಿ ಜಾತ್ಯತೀತ ಮತ್ತು ಸಮಾಜವಾದದ ಧಾರೆಗಳು ಹರಿದು ಬಂದಿವೆ.
“ಜಾತ್ಯತೀತತೆ (ಸೆಕ್ಯುಲರಿಸಂ) ಮತ್ತು ಸಮಾಜವಾದ (ಸೋಷಿಯಲಿಸಂ) ಭಾರತದ ನೆಲದಲ್ಲಿ ಹುಟ್ಟಿದ್ದಲ್ಲ” ಎನ್ನುತ್ತಿದೆ ಆರ್‌ಎಸ್‌ಎಸ್ ಕೂಟ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆಕ್ಯುಲರಿಸಂ ಮತ್ತು ಸೋಷಿಯಲಿಸಂ ಎಂಬ ಪದಗಳನ್ನು ಸಂವಿಧಾನದಲ್ಲಿ ಸೇರಿಸಲಾಗಿದ್ದು, ಅವುಗಳನ್ನು ತೆಗೆದು ಹಾಕಬೇಕು ಎಂದು ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಇತ್ತೀಚೆಗೆ ಹೇಳಿದ್ದಾರೆ. ಆದರೆ ಇವರೆಂತಹ ಸುಳ್ಳು ಬುರುಕರು, ಇತಿಹಾಸವನ್ನು ತಿರುಚುವವರು ಎಂಬುದನ್ನು ಬಯಲಿಗೆಳೆಯದಿದ್ದರೆ ಭಾರತದ ಅಸಲಿ ತತ್ವಗಳಿಗೆ ಅಪಚಾರ ಎಸಗಿದಂತೆ.
ಭಾರತಕ್ಕೆ ಮುಸ್ಲಿಮರ ಆಗಮನದ ನಂತರದಲ್ಲಿ ಸಮಾಜವಾದ ಮತ್ತು ಜಾತ್ಯತೀತತೆ ಹುಟ್ಟಿದ್ದಲ್ಲ. ಇಲ್ಲಿ ಸಹೋದರತೆ, ಸಮಾನತೆಗೆ ಬಹುದೊಡ್ಡ ಇತಿಹಾಸವಿದೆ. ಈ ನೆಲದ ಮೊದಲ ಜಾತ್ಯತೀತ, ಸಮಾಜವಾದಿ ಸಾಂಸ್ಕೃತಿಕ ನಾಯಕನೆಂದರೆ ಭಗವಾನ್ ಗೌತಮ ಬುದ್ಧ. “ಸಮಾಜವಾದ ಮತ್ತು ಜಾತ್ಯತೀತತೆ ಈ ನೆಲದಲ್ಲಿ ಹುಟ್ಟಿದ್ದಲ್ಲ” ಎನ್ನುವವರಿಗೆ ಬುದ್ಧನ ತತ್ವಗಳು, ಸಾಮಾಜಿಕ ಕ್ರಾಂತಿಗಳು ನುಂಗಲಾರದ ತುತ್ತು! ಹಳಿ ತಪ್ಪಿದ್ದ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವನು ಗೌತಮ ಬುದ್ಧ. ಆದರೆ ಪುಷ್ಯಮಿತ್ರ ಶುಂಗನ ಆಳ್ವಿಕೆಯಲ್ಲಿ ಪ್ರತಿಗಾಮಿ ಪದ್ಧತಿಗಳನ್ನು ಹೇರಲಾಗಿದ್ದು ಕಣ್ಣಮುಂದಿನ ಇತಿಹಾಸ.
ಜಾತ್ಯತೀತತೆ ಅಂದರೆ ಧರ್ಮ ನಿರಪೇಕ್ಷತೆ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಜೊತೆಗೆ ಜಾತ್ಯತೀತತೆ ಎಂದರೆ ಸ್ವಜನಪಕ್ಷಪಾತವನ್ನು ಮೀರುವ ಸಂಗತಿಯಾಗಿದೆ. ಸರ್ಕಾರಕ್ಕೆ ಸ್ವಜನ ಪಕ್ಷಪಾತವಿರಬಾರದು, ಅದು ಯಾವುದೇ ಒಂದು ಗುಂಪಿನ ವಕಾಲತ್ತು ವಹಿಸಬಾರದು, ಸತ್ಯದ ಪರ ನಿಲ್ಲಬೇಕು ಎಂಬುದು ಜಾತ್ಯತೀತತೆಯ ಆಶಯ. ಹೀಗಾಗಿ ನ್ಯಾಯಪ್ರಜ್ಞೆಯ ಮೂಲಕ ಎಲ್ಲ ಜನ ವರ್ಗದ ಮೇಲೂ ಪ್ರೀತಿ, ಕಾರುಣ್ಯವನ್ನು ಹೊಂದಿರಬೇಕಾಗುತ್ತದೆ.
ಬುದ್ಧ ಎಂದಿಗೂ ಸ್ವಜನಪಕ್ಷಪಾತಿಯಾಗಿರಲಿಲ್ಲ. ಶಾಕ್ಯರು ಮತ್ತು ಕೋಲಿಯಾರ ನಡುವೆ ನಡೆದ ಜಲ ವಿವಾದದ ಸಂದರ್ಭದಲ್ಲಿ ಸಿದ್ಧಾರ್ಥ (ಬುದ್ಧ) ತೆಗೆದುಕೊಂಡ ನಿರ್ಧಾರವೇ ಆತನ ಯುದ್ಧವಿರೋಧಿ ನಿಲುವಿನ ಜೊತೆಗೆ ಹಂಚಿ ತಿನ್ನುವ ಸ್ವಭಾವವನ್ನು ಹೇಳುತ್ತದೆ. ಶಾಕ್ಯ ಮತ್ತು ಕೋಲಿಯರು ಮಾತುಕತೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕೆಂಬ ನಿಲುವು ತಾಳಿ, ಗಡಿಪಾರು ಶಿಕ್ಷೆಗೂ ಆತ ಒಳಗಾಗುತ್ತಾನೆ.
ಕೋಲಿಯಾ ಮತ್ತು ಶಾಕ್ಯ ರಾಜ್ಯಗಳ ನಡುವೆ ಹರಿಯುತ್ತಿದ್ದ ರೋಹಿಣಿ ನದಿಯ ನೀರನ್ನು ಯಾರು ಮೊದಲು ಪಡೆಯಬೇಕು ಮತ್ತು ಎಷ್ಟು ಪ್ರಮಾಣದಲ್ಲಿ ಪಡೆಯಬೇಕು ಎಂಬ ಬಗ್ಗೆ ಹಲವು ವರ್ಷಗಳಿಂದಲೂ ಘರ್ಷಣೆಗಳು ನಡೆಯುತ್ತಿದ್ದವು. ಶಾಕ್ಯ ರಾಜ್ಯದ ಸೇನಾಧಿಪತಿ ಈ ವ್ಯಾಜ್ಯವನ್ನು ಶಾಶ್ವತವಾಗಿ ಪರಿಹರಿಸಬೇಕೆಂಬ ವಾದ ಮಂಡಿಸಿ, ಯುದ್ಧದ ಹೊರತಾಗಿ ಬೇರೆ ಮಾರ್ಗವಿಲ್ಲ ಎಂದು ನಿರ್ಧರಿಸುತ್ತಾನೆ. ಸಿದ್ಧಾರ್ಥನಿಗೆ ಈ ನಿರ್ಧಾರ ಸರಿ ಎನಿಸುವುದಿಲ್ಲ. ಎರಡೂ ರಾಜ್ಯಗಳ ಕಡೆಯೂ ತಪ್ಪುಗಳಾಗಿರುವುದರಿಂದ ಕೋಲಿಯಾರನ್ನು ಸಹೋದರರೆಂದು ಪರಿಗಣಿಸಿ ಸಂಧಾನದ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂಬುದು ಸಿದ್ಧಾರ್ಥನ ಸಲಹೆಯಾಗುತ್ತದೆ. ಎರಡೂ ಕಡೆಯಿಂದ ಐವರು ಪ್ರತಿನಿಧಿಗಳನ್ನು ಕಳುಹಿಸಿ ಮಾತುಕತೆ ನಡೆಸಬೇಕೆಂಬ ಅವನ ತೀರ್ಮಾನವನ್ನು ಸಂಘ ಒಪ್ಪುವುದಿಲ್ಲ. ಸಿದ್ಧಾರ್ಥನನ್ನು ಬಿಟ್ಟು ಉಳಿದವರೆಲ್ಲ ಯುದ್ಧದ ಪರವಾಗಿ ಮತ ಹಾಕುತ್ತಾರೆ. ಬಹುಮತದ ನಿರ್ಧಾರವನ್ನು ವಿರೋಧಿಸಿದ ಕಾರಣ ಸಂಘದ ನಿಯಮಗಳ ಅನ್ವಯ ಸಿದ್ಧಾರ್ಥನಿಗೆ ಶಿಕ್ಷೆಯಾಗುತ್ತದೆ. ಮೂರು ಆಯ್ಕೆಗಳನ್ನು ಆತನಿಗೆ ನೀಡಲಾಗುತ್ತದೆ. ಮೊದಲನೆಯದು- ಬಹುಮತದ ನಿರ್ಧಾರಕ್ಕೆ ಮಣಿದು ಯುದ್ಧದಲ್ಲಿ ಪಾಲ್ಗೊಳ್ಳುವುದು. ಎರಡನೆಯದು- ಶುದ್ಧೋದನನ ಕುಟುಂಬವನ್ನು ಬಹಿಷ್ಕರಿಸಿ ಅವನ ಆಸ್ತಿಯನ್ನು ವಶಪಡಿಸಿಕೊಳ್ಳುವುದು. ಮೂರನೆಯದು- ಗಡಿಪಾರು ಮಾಡುವುದು. ಅಂತಿಮವಾಗಿ ಸಿದ್ಧಾರ್ಥ ಸ್ವಯಿಚ್ಛೆಯಿಂದ ಪರಿವ್ರಾಜಕನಾಗಿ ರಾಜ್ಯದಿಂದ ಹೊರಹೋಗುವ ನಿರ್ಧಾರಕ್ಕೆ ಬರುತ್ತಾನೆ. ಇದು ಬುದ್ಧನಿಗಿದ್ದ ಸಾಮುದಾಯಿಕ ಸಮತಾ ಪ್ರಜ್ಞೆ. ಎರಡು ರಾಜ್ಯಗಳ ನಡುವೆ ಯುದ್ಧವಾದರೆ ಆಗುವ ಅಪಾಯಗಳು, ನಷ್ಟಗಳು ಆತನ ಅರಿವಿನಲ್ಲಿದ್ದವು.
ಇದನ್ನೂ ಓದಿರಿ: ಹಿಂದುಗಳ ಅಮರನಾಥ ಯಾತ್ರೆಗೆ ಮುಸ್ಲಿಮರ ಸಾಥ್; ಇದಲ್ಲವೇ ಬದುಕುವ ಮಾರ್ಗ!
ಮತ್ತೊಂದು ಸಂದರ್ಭವನ್ನು ಗಮನಿಸಬಹುದು. ಸಿದ್ಧಾರ್ಥನ ಸಹೋದರ ದೇವದತ್ತನು ಹಕ್ಕಿಯೊಂದಕ್ಕೆ ಬಾಣದಿಂದ ಹೊಡೆದು ಉರುಳಿಸುತ್ತಾನೆ. ಅದು ಸಿದ್ಧಾರ್ಥನ ಬಳಿ ಬಂದು ಬೀಳುತ್ತದೆ. ಶುಶ್ರೂಷೆ ಮಾಡಿದ ಸಿದ್ಧಾರ್ಥ ಆ ಜೀವವನ್ನು ಕಾಪಾಡುತ್ತಾನೆ. ಆ ಹಕ್ಕಿ ಯಾರಿಗೆ ಸೇರುತ್ತದೆ ಎಂದು ಪಂಚಾಯಿತಿಯಾದಾಗ, ಜೀವ ಉಳಿಸಿದ ಸಿದ್ಧಾರ್ಥನಿಗೆ ಗೆಲುವಾಗುತ್ತದೆ. ಇದೆಲ್ಲವೂ ಗೌತಮ ಬುದ್ಧನ ಕಾರುಣ್ಯ ಮತ್ತು ಪ್ರೀತಿಗೆ ಸಂಬಂಧಿಸಿವೆ. ಇದನ್ನೇ ವಿಸ್ತೃತ ಅರ್ಥದಲ್ಲಿ ಬುದ್ಧಧಮ್ಮ ‘ಮೈತ್ರಿ’ ಎಂದು ಕರೆದಿದೆ. ಬುದ್ಧನು ಪ್ರಥಮ ಉಪದೇಶದಲ್ಲಿ ಸದ್ಗುಣಗಳ ಮಾರ್ಗದ ಬಗ್ಗೆ ಹೇಳುವಾಗ ‘ಮೈತ್ರಿ’ಯನ್ನು ವಿವರಿಸುತ್ತಾನೆ. ಆತನ ಪ್ರಕಾರ ಮೈತ್ರಿ ಎಂದರೆ ಎಲ್ಲರಿಗೂ ಸಹಭಾವನೆಯನ್ನು ವಿಸ್ತರಿಸುವುದೇ ಆಗಿದೆ. ಕೇವಲ ಮಿತ್ರರಿಗಷ್ಟೇ ಅಲ್ಲ, ವೈರಿಗಳಿಗೂ ಸಹ. ಮಾನವರಿಗಷ್ಟೇ ಅಲ್ಲ, ಎಲ್ಲಾ ಜೀವಿಗಳಿಗೂ ಸಹಭಾವನೆಯನ್ನು ಹೊಂದಬೇಕು ಎಂಬುದು ಬುದ್ಧನ ಆಶಯವಾಗಿತ್ತು. ‘ಮನುಷ್ಯನಿಗೆ ಪ್ರೀತಿ ಅಗತ್ಯ. ಆದರೆ ಅದೊಂದೇ ಸಾಲದು, ನಮಗೆ ಬೇಕಾದದ್ದು ಮೈತ್ರಿ. ಅದು ಪ್ರೀತಿಗಿಂತ ಹೆಚ್ಚು ವಿಶಾಲ. ಮನುಷ್ಯರೊಂದಿಗೆ ಮಾತ್ರವಲ್ಲ, ಎಲ್ಲಾ ಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು ಎಂಬುದೇ ಮೈತ್ರಿಯ ಅರ್ಥ’ ಎಂದು ಪ್ರತಿಪಾದಿಸುತ್ತಾನೆ. ಬುದ್ಧನ ಮೈತ್ರಿಯ ಆಳಕ್ಕಿಳಿದು ನೋಡಿದರೆ ಆತನ ಸೆಕ್ಯುಲರಿಸಂ ಅಗಾಧತೆ ತಿಳಿಯುತ್ತದೆ.
ಬುದ್ಧನ ಸಮಾಜವಾದ
‘ಬೌದ್ಧಧಮ್ಮದ ಸಮಾಜವಾದ’ (ಧಮ್ಮಿಕ್ ಸೋಷಿಯಲಿಸಂ) ಎಂಬ ಸಿದ್ಧಾಂತವನ್ನು ಬೌದ್ಧಬಿಕ್ಕುಗಳು ತೊಂಬತ್ತು ವರ್ಷಗಳ ಹಿಂದೆಯೇ ಚಾಲ್ತಿಗೆ ತಂದಿದ್ದಾರೆ. ಬೌದ್ಧನ ಸಮಾಜವಾದದ ಆಳ ಅಗಲಗಳು ಎಷ್ಟೆಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ.
ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನವೆಂಬರ್ 26, 1956ರಂದು ನೇಪಾಳದ ಕಠ್ಮಂಡುವಿನಲ್ಲಿ ನಡೆದ 4ನೇ ವಿಶ್ವ ಬೌದ್ಧ ಸಮ್ಮೇಳನದಲ್ಲಿ ಮಾಡಿದ ಭಾಷಣವೇ ‘ಬುದ್ಧ ಅಥವಾ ಕಾರ್ಲ್‌ಮಾರ್ಕ್ಸ್’. ಕಮ್ಯುನಿಸ್ಟ್ ಆಲೋಚನೆಗಳಿಗೂ ಬುದ್ಧನ ಚಿಂತನೆಗಳಿಗೂ ಇರುವ ಸಾಮ್ಯತೆಯನ್ನು ಗುರುತಿಸುವ ಅಂಬೇಡ್ಕರ್ ಅವರು, ಬುದ್ಧನ ಸಮಾಜವಾದದ ನೆಲೆಗಳನ್ನು ವಿವರಿಸುತ್ತಾರೆ.
“ಸಮಾಜದ ಒಳಿತಿಗಾಗಿ ದುಃಖವನ್ನು ನಿರ್ಮೂಲನೆ ಮಾಡಲು ಖಾಸಗಿ ಆಸ್ತಿಯನ್ನು ತೊಡೆದು ಹಾಕಬೇಕು” ಎಂಬುದು ಬುದ್ಧನ ಆಶಯ. “ವರ್ಗ-ವರ್ಗದ ನಡುವೆ ಹಿತಾಸಕ್ತಿಗಳ ಸಂಘರ್ಷವಿದೆ. ಆಸ್ತಿಯ ಖಾಸಗಿ ಒಡೆತನ, ಒಂದು ವರ್ಗಕ್ಕೆ ಅಧಿಕಾರವನ್ನೂ ಇನ್ನೊಂದು ವರ್ಗಕ್ಕೆ ದುಃಖವನ್ನೂ ಶೋಷಣೆಯ ಮೂಲಕ ತರುತ್ತದೆ” ಎಂದು ಬೌದ್ಧಿಸಂ ಪ್ರತಿಪಾದಿಸುತ್ತದೆ.
ಬುದ್ಧ ಮತ್ತು ಆನಂದನ ನಡುವಿನ ಸಂಭಾಷಣೆಯೇ ಇದಕ್ಕೆ ಉದಾಹರಣೆ: “ಸಂಗ್ರಹಣೆಯಿಂದ ದುರಾಸೆ ಉಂಟಾಗುತ್ತದೆಂದು ಹೇಳಿದ್ದೇನೆ. ಈಗ, ಆನಂದ, ಅದು ಯಾವ ರೀತಿ ಉಂಟಾಗುತ್ತದೆಂದು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ಯಾರಿಂದಲೂ ಅಥವಾ ಯಾವುದರಿಂದಲೂ, ಎಲ್ಲಿ ಯಾವುದೇ ಬಗೆಯ ಅಥವಾ ವಿಧದ ಸಂಗ್ರಹಣೆ ಇಲ್ಲವೋ ಆಗ, ಸಂಗ್ರಹಣೆಯ ನಿರ್ಮೂಲನೆಯಿಂದಾಗಿ, ಯಾವುದೇ ರೀತಿಯ ಸಂಗ್ರಹಣೆ ಇಲ್ಲದಿರುವುದರಿಂದ ದುರಾಸೆಯು ಯಾವ ರೂಪದಲ್ಲಿ ತಾನೆ ಇದ್ದೀತು?”
“ಇರಲಾರದು, ತಂದೆ.”
“ಆದ್ದರಿಂದ, ಆನಂದ, ಆಸ್ತಿಯೇ ಸಂಗ್ರಹಣೆಯ ಮೂಲ, ಮೂಲಕಾರಣ, ಮೂಲಾಧಾರ, ಮೂಲೋತ್ಪತ್ತಿಯಾಗಿದೆ.”
ʻಸಮಾಜದ ಒಳಿತಿಗಾಗಿ ದುಃಖವನ್ನು ನಿರ್ಮೂಲನೆ ಮಾಡಲು ಖಾಸಗಿ ಆಸ್ತಿಯನ್ನು ತೊಡೆದುಹಾಕಬೇಕು’ ಎಂಬುದು ಬುದ್ಧನ ಚಿಂತನೆಯಾಗಿತ್ತು. ಹೀಗಾಗಿ ಭಿಕ್ಕುಗಳ ಸಂಘಕ್ಕೆ ಖಾಸಗಿ ಆಸ್ತಿಯನ್ನಾಗಿ ಮೂರು ಬಟ್ಟೆಗಳು, ಸೊಂಟಕ್ಕೆ ಉಡುದಾರ, ಭಿಕ್ಷಾಪಾತ್ರೆ, ಕತ್ರಿ, ಸೂಜಿ ಮತ್ತು ನೀರು ಸೋಸುವ ಬಟ್ಟಲನ್ನು ಹೊರತುಪಡಿಸಿ ಬೇರಾವುದಕ್ಕೂ ಅನುಮತಿ ನೀಡಿರಲಿಲ್ಲ. ಅಧಿಕಾರ ಹೊಂದಿ ಇತರರನ್ನು ಶೋಷಿಸುವ ಖಾಸಗಿ ಆಸ್ತಿಯನ್ನು ಭಿಕ್ಕು ಸಂಘದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಡಾ.ಬಿ.ಆರ್. ಅಂಬೇಡ್ಕರ್ ಅವರು ನಮ್ಮ ಸಂವಿಧಾನದಲ್ಲಿ ಅಳವಡಿಸಲು ಯತ್ನಿಸಿದ್ದು ಬುದ್ಧನ ಆಶಯಗಳ ಸಮಾಜವಾದವನ್ನೇ ಎಂಬುದನ್ನು ಮತ್ತಷ್ಟು ಚರ್ಚಿಸಬೇಕಾಗಿದೆ.
ಇದನ್ನೂ ಓದಿರಿ: ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸುವುದರಿಂದ ಉಂಟಾಗುವ ಬಿಕ್ಕಟ್ಟುಗಳೇನು ಬಲ್ಲಿರಾ?
ನಮ್ಮ ಸಂವಿಧಾನದ ತಳಹದಿಯೇ ಜಾತ್ಯತೀತತೆ ಮತ್ತು ಸಮಾಜವಾದ ಎಂದಿದ್ದರು ಅಂಬೇಡ್ಕರ್. 1950ರ ಮೇ ತಿಂಗಳ ಒಂದು ಸಂಜೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಖ್ಯಾತ ಕಾದಂಬರಿಕಾರ ಮುಲ್ಕ್ ರಾಜ್ ಆನಂದ್ ಮುಂಬಯಿಯ ಕೊಲಬದಲ್ಲಿ ನಡೆಸಿದ ಮಾತುಕತೆಯೇ ಇದನ್ನು ಸ್ಪಷ್ಟವಾಗಿ ಹೇಳುತ್ತದೆ. ಆ ಸಂದರ್ಭದಲ್ಲಿ ಮುಲ್ಕ್ ರಾಜ್ ಆನಂದ್ ಅವರು, ಆಸ್ತಿ ಒಡೆತನದ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ಆಗ ಅಂಬೇಡ್ಕರ್, “ನಾವು ಸಂವಿಧಾನವನ್ನು ಜಾತ್ಯತೀತ ತತ್ವ, ಸಮಾಜವಾದ ಪ್ರಜಾಪ್ರಭುತ್ವ ಇವುಗಳ ತಳಹದಿಯ ಮೇಲೆ ಕಟ್ಟಿದ್ದೇವೆ. ಮುಂದೆ ಸರ್ಕಾರ ತೆಗೆದುಕೊಳ್ಳಬಹುದಾದ ನಿರ್ಧಾರಗಳಿಂದಾಗಿ ಗೇಣಿದಾರರಿಗೆ, ಉಳುವವರಿಗೆ ಭೂಮಿ ಸಿಕ್ಕರೆ, ಆಗ ವ್ಯಕ್ತಿಯ ಹಕ್ಕುಗಳನ್ನು ಕಾಪಾಡಿದಂತಾಗಿ, ಶೋಷಣೆಗೆ ಕಿಂಚಿತ್ತೂ ಎಡೆಯಿರುವುದಿಲ್ಲ” ಎನ್ನುತ್ತಾರೆ.
ಪ್ರಾಚೀನ ಕಾಲದ ಬುದ್ಧನ ತತ್ವಗಳಿಂದ ಹಿಡಿದು, ಅಂಬೇಡ್ಕರ್ ನೇತೃತ್ವದಲ್ಲಿ ರಚಿತವಾದ ಸಂವಿಧಾನದವರೆಗೂ ಈ ನೆಲದಲ್ಲಿ ಜಾತ್ಯತೀತ ಮತ್ತು ಸಮಾಜವಾದದ ಧಾರೆಗಳು ಹರಿದು ಬಂದಿವೆ. ನಮ್ಮ ವಚನಕಾರರ ಚಿಂತನೆಗಳಿಗೆ ಹೊರಳಿದರೆ ಜಾತ್ಯತೀತತೆ ಮತ್ತು ಸಮಾಜವಾದ ಮತ್ತಷ್ಟು ಆಳವಾಗಿ ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಈ ಎರಡು ಮಹೋನ್ನತ ಆಶಯಗಳಿಗೆ ಅಂದು, ಇಂದು, ಮುಂದು ವಿರೋಧಿಗಳು ಇದ್ದೇ ಇರುತ್ತಾರೆ. ಜಾತಿ, ವರ್ಗದ ಹಿತಾಸಕ್ತಿ ಉಳ್ಳವರು ಈ ನೆಲದ ಚಿಂತನೆಗಳನ್ನು ಇಲ್ಲವಾಗಿಸಿ, ಪ್ರತಿಗಾಮಿ ನೀತಿಗಳನ್ನು ಜಾರಿಗೆ ತರಲು ಅವಣಿಸುತ್ತಲೇ ಇರುತ್ತಾರೆ. ಆದರೆ ನಾವು ನಮ್ಮತನದ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿರುತ್ತದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




