"ಅತ್ಯಂತ ಹಿಂದುಳಿದ ವರ್ಗಗಳು ಒಗ್ಗಟ್ಟಾಗಿ ದನಿ ಎತ್ತದಿದ್ದರೆ, ಈಗ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯೂ ಮೂಲೆಗೆ ಸೇರುತ್ತದೆ. ಈ ಎಚ್ಚರಿಕೆ ಒಬಿಸಿಗಳಿಗೆ ಇರಬೇಕಿದೆ" ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಎ.ನಾರಾಯಣ.
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸುತ್ತಿರುವ ಜಾತಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಿಲ್ಲಿಸುವ ಪ್ರಯತ್ನಗಳು ನಿರಂತರ ನಡೆದವು. ಸರ್ಕಾರದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ಆದರೆ ಕೆಲವು ನಿಬಂಧನೆಗಳನ್ನು ವಿಧಿಸಿರುವ ನ್ಯಾಯಾಲಯ, ಸಮೀಕ್ಷೆಯನ್ನು ಮುಂದುವರಿಸಲು ಅನುಮತಿ ನೀಡಿದೆ.
ಅವಕಾಶ ವಂಚಿತ ಯಾವುದೇ ಸಮುದಾಯಗಳ ಭವಿಷ್ಯವನ್ನು ನಿರ್ಧರಿಸುವ ಮಹತ್ವದ ಹೆಜ್ಜೆಗಳನ್ನಿಟ್ಟಾಗಲೆಲ್ಲ ಪ್ರಬಲ ಜಾತಿಗಳಿಂದ ವಿರೋಧಗಳು ಬಂದೇ ಬರುತ್ತವೆ. ಬ್ರಿಟಿಷರು ಜನಗಣತಿಯೊಂದಿಗೆ ಜಾತಿಗಣತಿಯನ್ನು 1891ರಲ್ಲಿ ಸೇರಿಸಿದಾಗ ಆಗಲೂ, “ಇದು ಹಿಂದೂ ಸಮುದಾಯವನ್ನು ಒಡೆಯುವ ಹುನ್ನಾರ” ಎಂದು ಬಿಂಬಿಸಲಾಗಿತ್ತು. ಆದರೆ ಇಂತಹ ಆಕ್ಷೇಪಗಳ ಹಿಂದೆ ಇದ್ದದ್ದು ಮೇಲ್ಜಾತಿಗಳ ಹಿತಾಸಕ್ತಿಯಷ್ಟೇ ಎಂಬುದನ್ನು ಅರಿತ ಬ್ರಿಟಿಷರು ಯಾವುದಕ್ಕೂ ತಲೆಗೊಡದೆ ಜಾತಿಗಣತಿ ಮುಂದುವರಿಸಿದರು. ಈ ಚರಿತ್ರೆಯನ್ನು ದಾಖಲಿಸುವ ಡಾ.ಬಿ.ಆರ್.ಅಂಬೇಡ್ಕರ್ ಅವರು, ಜಾತಿ ಗಣತಿಯನ್ನು ವಿರೋಧಿಸುವ ಮನಸ್ಥಿತಿಗಳ ವಿರುದ್ಧ ಬರೆಯುತ್ತಾ ಹೋಗುತ್ತಾರೆ. ನಿಮ್ನವರ್ಗಗಳಿಗೆ ಪ್ರತ್ಯೇಕ ಮೀಸಲಾತಿ ವಿಚಾರ ಬಂದಾಗಲೂ ಬ್ರಿಟಿಷರು ಅವಲಂಬಿಸಿದ್ದು ಇದೇ ಜಾತಿ ಗಣತಿ ವರದಿಯನ್ನು ಎಂಬುದನ್ನು ಗಮನಿಸಬೇಕು.
ಮೈಸೂರು ಸಂಸ್ಥಾನದಲ್ಲಿ ಮೊದಲಿನಿಂದಲೂ ಬ್ರಾಹ್ಮಣರ ಹಿಡಿತವಿತ್ತು. ಆದರೆ ಬಹುಸಂಖ್ಯಾತ ಲಿಂಗಾಯತ ಮತ್ತು ಒಕ್ಕಲಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎದ್ದಿತು. ಮುಸ್ಲಿಮರೂ ಈ ತಾರತಮ್ಯವನ್ನು ಖಂಡಿಸಿದರು. ಅಂದು ಆಳ್ವಿಕೆ ನಡೆಸುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸಮುದಾಯಗಳ ಪ್ರತಿರೋಧವನ್ನು ಗಮನಿಸಿದರು. 1919ರಲ್ಲಿ ಮಿಲ್ಲರ್ ಸಮಿತಿ ರಚಿಸಿ, ಅದು ಕೊಟ್ಟ ವರದಿಯ ಅನ್ವಯ ಬ್ರಾಹ್ಮಣೇತರರಿಗೆ ಮೀಸಲಾತಿ ಜಾರಿಗೆ ತಂದರು. “ಒಡೆಯರ್ ನಿರ್ಧಾರದಿಂದ ಪ್ರತಿಭಾವಂತರಿಗೆ ಅನ್ಯಾಯವಾಗುತ್ತದೆ, ಅನರ್ಹರು ಉದ್ಯೋಗಗಳನ್ನು ಪಡೆಯುತ್ತಾರೆ” ಎಂಬ ವಾದವನ್ನು ಬ್ರಾಹ್ಮಣರು ಹೂಡಿದರು. ಅಂದರೆ ಅಧಿಕಾರದ ರುಚಿ ಕಂಡವರು ಹಂಚಿತಿನ್ನುವ ವಿಚಾರದಲ್ಲಿ ಮೊದಲಿನಿಂದಲೂ ವಿರೋಧಿಗಳಾಗಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಇದನ್ನೂ ಓದಿರಿ: ಧರ್ಮಸ್ಥಳ ಪ್ರಕರಣ; ಎಸ್ ಐಟಿ ತನಿಖೆ ಮತ್ತು ರಾಜಕೀಯ ಲೆಕ್ಕಾಚಾರ…!
1953ರಲ್ಲಿ ಅಸ್ತಿತ್ವಕ್ಕೆ ಬಂದ ಮೊದಲ ಹಿಂದುಳಿದ ವರ್ಗಗಳ ಆಯೋಗ (ಕಾಕಾ ಕಾಲೇಲ್ಕರ್ ಆಯೋಗ) ಕೊಟ್ಟ ಶಿಫಾರಸ್ಸುಗಳನ್ನು ಅಂದಿನ ಕಾಂಗ್ರೆಸ್ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 1979ರಲ್ಲಿ ರಚನೆಯಾದ ಎರಡನೇ ಹಿಂದುಳಿದ ವರ್ಗಗಳ ಆಯೋಗದ ಮುಂದಾಳತ್ವ ವಹಿಸಿದ್ದವರು ಬಿ.ಪಿ.ಮಂಡಲ್. ದೇಶದ ರಾಜಕಾರಣದ ದಿಕ್ಕನ್ನೇ ಬದಲಿಸುವ ವರದಿಯನ್ನು ಮಂಡಲ್ ಕಮಿಷನ್ ನೀಡಿತ್ತು. ಅದನ್ನು ಜಾರಿಗೆ ತರಲು ವಿ.ಪಿ.ಸಿಂಗ್ ಬರಬೇಕಾಯಿತು. ದುರಾದೃಷ್ಟವಶಾತ್ ಮಂಡಲ್ ಕಮಿಷನ್ ಯಾರ ಹಿತ ಕಾಯುತ್ತದೆ ಎಂಬುದನ್ನು ಅರಿಯದ ಒಬಿಸಿಗಳೇ ಮಂಡಲ್ ವಿರುದ್ಧ ಬೀದಿಯಲ್ಲಿ ನಿಂತಿದ್ದರು. ಜನರ ದಿಕ್ಕು ತಪ್ಪಿಸುವುದರಲ್ಲಿ ಸಂಘಪರಿವಾರ ವ್ಯವಸ್ಥಿತವಾಗಿ ಕೆಲಸ ಮಾಡಿತ್ತು. ಮಂಡಲ್ ವಿರೋಧಿ ಆಂದೋಲನದಲ್ಲಿ ಸುಮಾರು 250ಕ್ಕೂ ಹೆಚ್ಚು ಒಬಿಸಿಗಳು ಆತ್ಮಾಹುತಿಯಾಗಿದ್ದರು. ಮಂಡಲ್ ರಾಜಕಾರಣದ ವಿರುದ್ಧ ಕಮಂಡಲ ರಾಜಕಾರಣ ಮೇಲುಗೈ ಸಾಧಿಸಿತ್ತು.
ಮಂಡಲ್ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದವರು ಒಬಿಸಿಗಳಿಗೆ ನೀಡಲಾಗಿದ್ದ ಮೀಸಲಾತಿಯನ್ನು ಪ್ರಶ್ನಿಸಿದರು. ಇಂದ್ರಾ ಸಹಾನಿ ಪ್ರಕರಣದಲ್ಲಿ ಒಬಿಸಿಗಳ ಮೀಸಲಾತಿಯನ್ನು ಎತ್ತಿಹಿಡಿಯಲಾಯಿತು. “ರಾಜ್ಯಗಳು ಶಾಶ್ವತ ಹಿಂದುಳಿದ ವರ್ಗಗಳ ಆಯೋಗಗಳನ್ನು ಸ್ಥಾಪಿಸಬೇಕಿತ್ತು ಮತ್ತು ಅವುಗಳು ಕಾಲಕಾಲಕ್ಕೆ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗಳನ್ನು ನಡೆಸಬೇಕು” ಎಂದಿತ್ತು ಸುಪ್ರೀಂಕೋರ್ಟ್. 1992ರಲ್ಲಿ ತೀರ್ಪು ಹೊರಬಿದ್ದು, ರಾಜ್ಯಗಳಲ್ಲಿ ಹಿಂದುಳಿದ ವರ್ಗಗಳ ಆಯೋಗಗಳನ್ನು ಚಾಲ್ತಿಗೆ ತಂದರೂ ಕಾಲಕಾಲಕ್ಕೆ ಸಮೀಕ್ಷೆಗಳನ್ನು ನಡೆಸಲಿಲ್ಲ. ಕರ್ನಾಟಕದಲ್ಲಿ ಜಾತಿ ಸಮೀಕ್ಷೆ ಮುನ್ನೆಲೆಗೆ ಬರಬೇಕಾದರೆ ಸಿದ್ದರಾಮಯ್ಯನವರ ಅವಧಿಯವರೆಗೆ ಕಾಯಬೇಕಾಯಿತು.
2013ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಅಹಿಂದ ನಾಯಕ ಸಿದ್ದರಾಮಯ್ಯನವರು ಸಮೀಕ್ಷೆಗೆ ಗ್ರೀನ್ ಸಿಗ್ನಲ್ ನೀಡಿದರು. ಕಾಂತರಾಜ್ ಅವರು ಆಯೋಗದ ಅಧ್ಯಕ್ಷರಾಗಿದ್ದರು. ನಮ್ಮ ಕೈಲಾದ ಮಟ್ಟಿಗೆ ಪ್ರಾಮಾಣಿಕವಾಗಿ ಮಾಡಿದ ಸಮೀಕ್ಷೆಯ ವಿರುದ್ಧವೂ ಅಪಸ್ವರಗಳು ಬಂದವು. ವರದಿ ಅಧಿಕೃತವಾಗಿ ಬಿಡುಗಡೆಯಾಗಲು ಬಿಡಲೇ ಇಲ್ಲ. ಮುಂದೆ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಕಾಂತರಾಜ್ ಆಯೋಗದ ವರದಿಯನ್ನು ಪರಿಷ್ಕರಣೆ ಮಾಡಿ ನೀಡಿದಾಗಲೂ ಸರ್ಕಾರ ಜನರೆದುರು ಇಡಲಿಲ್ಲ.
ಜಾತಿ ಸಮೀಕ್ಷೆ ಮಾಡುವುದು ಕಾಂಗ್ರೆಸ್ ಕೊಟ್ಟಿದ್ದ ಭರವಸೆ. ಮೊದಲ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವಿರುದ್ಧ ಅಪಸ್ವರಗಳು ಬಂದ ಹಿನ್ನೆಲೆಯಲ್ಲಿ ಹೊಸದೊಂದು ಸಮೀಕ್ಷೆ ಮಾಡುವುದಾಗಿ ಸರ್ಕಾರ ಘೋಷಿಸಿತು. ಆದರೆ ಸಮೀಕ್ಷೆಯ ಆರಂಭದಲ್ಲೇ ಕ್ಯಾತೆ ತೆಗೆಯುವುದು ಶುರುವಾಗಿದೆ. “ಇದೊಂದು ಅವೈಜ್ಞಾನಿಕ ಸಮೀಕ್ಷೆ” ಎಂದು ಬಿಂಬಿಸುವ ಯತ್ನ ಕಾನೂನಾತ್ಮಕವಾಗಿಯೂ ನಡೆದಿದೆ. ಕಾಂತರಾಜ್ ಆಯೋಗ ಸಮೀಕ್ಷೆಗೆ ಮುಂದಾಗಿದ್ದಾಗಲೂ ಇಂತಹದ್ದೇ ಪ್ರಯತ್ನ ನಡೆದಿತ್ತು. ಆದರೆ ಸಮೀಕ್ಷೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂಬುದು ಬೇರೆಯೇ ಮಾತು.
ಈಗ ಇರುವ ಪ್ರಶ್ನೆ: ಕಾಂತರಾಜ್ ಆಯೋಗದ ವರದಿ ಸಂಬಂಧ ಎದ್ದ ಅಸಹನೆಯ ಸಂದರ್ಭದಲ್ಲಿ ಹಿಂದುಳಿದ ವರ್ಗಗಳು ಏನು ಮಾಡಿದವು? ಈ ಆಕ್ಷೇಪಗಳನ್ನು ದಿಟ್ಟವಾಗಿ ಎದುರಿಸಿದ್ದರೆ ವರದಿಯನ್ನು ಮೂಲೆಗೆ ತಳ್ಳಲು ಸಾಧ್ಯವಾಗುತ್ತಿತ್ತೇ? ಮುಂದೆ ಜಯಪ್ರಕಾಶ್ ಹೆಗ್ಡೆಯವರು ಪರಿಷ್ಕರಿಸಿ ಕೊಟ್ಟ ವರದಿಯನ್ನೂ ಒಪ್ಪಲಿಲ್ಲ. ಈಗಲಾದರೂ ಹಿಂದುಳಿದ ವರ್ಗಗಳು ಒಂದಾಗುತ್ತವೆಯೇ?
ಕಾಂಗ್ರೆಸ್ ಪಕ್ಷದಲ್ಲಿರುವ ಹಿಂದುಳಿದ ವರ್ಗಗಳ ನಾಯಕರು ಗುರುವಾರ ಒಟ್ಟಾಗಿ ಒಂದು ಸಭೆಯನ್ನು ನಡೆಸಿ, “ನಾವೆಲ್ಲ ಸಿದ್ದರಾಮಯ್ಯನವರ ಜೊತೆ ನಿಲ್ಲುತ್ತೇವೆ. ಜಾತಿ ಸಮೀಕ್ಷೆಯನ್ನು ತಡೆಯುವುದಕ್ಕೆ ಬಿಡುವುದಿಲ್ಲ” ಎಂಬ ಸಂದೇಶ ರವಾನಿಸಿದ್ದಾರೆ. ಶಾಸಕರು, ಸಚಿವರು, ಮಾಜಿ ಮುಖ್ಯಮಂತ್ರಿಗಳು, ಹಿಂದುಳಿದ ವರ್ಗಗಳ ಮುಖಂಡರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿರಿ: ʼನಾನು ರೇವತಿʼ – ಅಸ್ತಿತ್ವಕ್ಕಾಗಿ ಹೋರಾಡಿದ ಟ್ರಾನ್ಸ್‌ಜೆಂಡರ್ ಜೀವನಗಾಥೆ
“ಹಿಂದುಳಿದ ಜಾತಿಗಳು ಶಿಕ್ಷಣ, ಉದ್ಯೋಗ, ರಾಜಕೀಯ, ಆರ್ಥಿಕ ಸೌಲಭ್ಯ ಪಡೆಯಲು ಈ ಸಮೀಕ್ಷೆ ಅಗತ್ಯವಾಗಿದೆ. ಹೀಗಾಗಿ, ಹಿಂದುಳಿದ ವರ್ಗಗಳ ಜನರು ಸಮೀಕ್ಷೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಲು ಒಕ್ಕೊರಲಿನಿಂದ ನಿರ್ಧರಿಸಲಾಯಿತು” ಎಂದಿದ್ದಾರೆ ಸಚಿವ ಎನ್.ಎಸ್. ಬೋಸರಾಜು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, “ಈ ಸಭೆ ಮೊದಲೇ ಆಗಬೇಕಿತ್ತು. ನಮ್ಮ ದೇಶ ಪ್ರಜಾಪ್ರಭುತ್ವ ಅಡಿಯಲ್ಲಿ ನಡೆಯಬೇಕು. ಹಿಂದುಳಿದ ವರ್ಗಗಳಿಗೆ ಸರಿಯಾದ ಮೀಸಲಾತಿ ಸಿಗಬೇಕು. ಸಾಮಾಜಿಕ, ಶೈಕ್ಷಣಿಕ ಹಕ್ಕು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಅದನ್ನು ವಿರೋಧಿಸುವ ಕೆಲಸ ಆಗಬಾರದು” ಎಂದಿದ್ದಾರೆ.
ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, “ಜನಜಾಗೃತಿಗಾಗಿ ಅಹಿಂದ ನಾಯಕರು ಸಭೆ ಸೇರಿದ್ದೇವೆ. ಪ್ರಣಾಳಿಕೆಯಲ್ಲಿ ಕೊಟ್ಟಿದ್ದ ಆಶ್ವಾಸನೆಯಂತೆ ಸಮೀಕ್ಷೆ ಮಾಡಲು ಹೊರಟಿದ್ದೇವೆ. ಅಹಿಂದ, ಮೀಸಲಾತಿ ವಿರುದ್ಧ ಇರುವವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಚಿವರಾದ ಸಂತೋಷ್ ಲಾಡ್, ಮಧು ಬಂಗಾರಪ್ಪ, ಬೈರತಿ ಸುರೇಶ್, ಶಾಸಕರಾದ ಎ.ಎಸ್. ಪೊನ್ನಣ್ಣ, ಭೀಮಣ್ಣ ನಾಯ್ಕ, ಶ್ರೀನಿವಾಸ್, ಪ್ರದೀಪ್ ಈಶ್ವರ್, ಪುಟ್ಟರಂಗ ಶೆಟ್ಟಿ, ಬಸವರಾಜ್ ಶಿವಣ್ಣನವರ್, ಗವಿಯಪ್ಪ, ಪರಿಷತ್ ಸದಸ್ಯರಾದ ಯತೀಂದ್ರ ಸಿದ್ದರಾಮಯ್ಯ, ಉಮಾಶ್ರೀ, ರಮೇಶ್ ಬಾಬು, ತಿಪ್ಪಣ್ಣ ಕಮಕನೂರು, ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಮೊದಲಾದವರು ಸಭೆಯಲ್ಲಿ ಭಾಗಿಯಾಗಿದ್ದರು. ಪಕ್ಷಭೇದ ಮರೆತು ಪ್ರಬಲ ಸಮುದಾಯಗಳ ನಾಯಕರು ತಮ್ಮ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಿರುವಾಗ, ಒಬಿಸಿಗಳು ಇಷ್ಟಾದರೂ ದನಿ ಎತ್ತಿರುವುದು ಆಶಾದಾಯಕ ಬೆಳವಣಿಗೆ.
ಇದನ್ನೂ ಓದಿರಿ: ಲಂಕೇಶರು ಕಟ್ಟಿದ ಗೋಡೆಯಲ್ಲಿ ಬಿರುಕು ಮೂಡಿಸಿದ ‘ಗೃಹಭಂಗ’
“ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಜಾಗೃತಿ ಇದ್ದಿದ್ದರೆ ಮೊದಲ ಸಮೀಕ್ಷೆಯ ವರದಿ ಮೂಲೆಗೆ ಸೇರುತ್ತಿರಲಿಲ್ಲ. ಕಾಂತರಾಜ ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಹಾಕಿ ಎನ್ನುವ ಮಟ್ಟಕ್ಕೆ ಸಮೀಕ್ಷೆಯ ವಿರೋಧಿಗಳು ಮಾತನಾಡುತ್ತಿರಲಿಲ್ಲ. ಆದರೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಈಗ ನಡೆಯುತ್ತಿರುವ ಸಮೀಕ್ಷೆಯ ವಿರುದ್ಧವೂ ಇಂತಹದ್ದೇ ಅಪಸ್ವರ ಎತ್ತುತ್ತಾರೆ. ಒಟ್ಟಾರೆಯಾಗಿ ಅತ್ಯಂತ ಹಿಂದುಳಿದ ವರ್ಗಗಳನ್ನು ದಮನ ಮಾಡುವ ಕೆಲಸ ಮುಂದುವರಿಯುತ್ತದೆ ಎಂಬ ಜಾಗೃತಿ ಒಬಿಸಿ ಮುಖಂಡರುಗಳಲ್ಲಿ ಬಂದಿರುವಂತಿದೆ. ಈ ಒಗ್ಗಟ್ಟು ಮತ್ತಷ್ಟು ದೊಡ್ಡದಾಗಬೇಕು. ಇಲ್ಲವಾದರೆ ಈಗ ನಡೆಯುತ್ತಿರುವ ಸಮೀಕ್ಷೆಯ ವಿರುದ್ಧವೂ ಅಪಪ್ರಚಾರ ಶುರುವಾಗುತ್ತದೆ” ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಎ.ನಾರಾಯಣ.
ಚರಿತ್ರೆಯುದ್ದಕ್ಕೂ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಮುದಾಯಗಳ ಹಕ್ಕುಗಳನ್ನು ಕಸಿಯುವ ಕೆಲಸ ನಡೆದಿದೆ. ಮುಖ್ಯವಾಗಿ ಒಬಿಸಿಗಳ ಭವಿಷ್ಯ ನಿರ್ಧರಿಸುವ ಸಾಮಾಜಿಕ- ಶೈಕ್ಷಣಿಕ ಸಮೀಕ್ಷೆಯು ಯಶಸ್ವಿಯಾಗುವಂತೆ ಮತ್ತು ಅದನ್ನು ಸರ್ಕಾರ ಧೈರ್ಯವಾಗಿ ಬಿಡುಗಡೆ ಮಾಡುವಂತೆ ಬಲ ತುಂಬುವ ಹೊಣೆಗಾರಿಕೆ ಒಬಿಸಿಗಳ ಮೇಲೆಯೇ ಇದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.




