ಮಕ್ಕಳ ಗ್ರಾಮ ಸಭೆ ಒಂದು ಪ್ರಹಸನ!

Date:

ಫೇಸ್‌ಬುಕ್‌ ಪೇಜ್‌ ತಯಾರಿಸಬೇಕೆಂದೆಲ್ಲ ಬರೆದದ್ದು ನೋಡಿದರೆ ಇದು ಹಳ್ಳಿಗಳ ಮಕ್ಕಳ ಗ್ರಾಮ ಸಭೆಯ ವಿಚಾರವೋ ಅಥವಾ ವಿಧಾನ ಸಭೆಯ ವಿಚಾರವೋ ಎಂದು ಗಲಿಬಿಲಿಯಾಗಬಹುದು. ಮಕ್ಕಳ ದೂರು ದುಮ್ಮಾನಗಳನ್ನು ಕೇಳಲು ಆಕರ್ಷಕವಾದ ಮಕ್ಕಳ ದನಿಪೆಟ್ಟಿಗೆ ತಯಾರಿಸಿಡಬೇಕೆಂಬ ಬಲು ಉತ್ತಮವಾದ ವಿಚಾರವೂ ಇದರಲ್ಲಿದೆ.

ಇದೀಗ ಮುಗಿದ ನವೆಂಬರ್, ಮಕ್ಕಳ ದಿನಾಚರಣೆ ಮಾಡುವ ಮಕ್ಕಳ ತಿಂಗಳು, ಹಾಗೆಯೇ ಗ್ರಾಮಪಂಚಾಯತಿಗಳಲ್ಲಿ ಮಕ್ಕಳ ಗ್ರಾಮಸಭೆ ಮಾಡುವ ತಿಂಗಳು. ಗ್ರಾಮಸಭೆ ಮಾಡಲೆಂದು ಪ್ರತಿವರ್ಷದಂತೆ ಈ ವರ್ಷವೂ ಸರಕಾರ ಒಂದು ಅದ್ಭುತವಾದ ಒಕ್ಕಣೆಯ ಸುತ್ತೋಲೆಯನ್ನು ಹೊರಡಿಸಿದೆ!

ಸಂವಿಧಾನ ಕೊಡಮಾಡಿರುವ ಮಕ್ಕಳ ಹಕ್ಕುಗಳು, ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗಳನ್ನು ಜಾರಿಗೆ ತರುವ ಸಲುವಾಗಿ, ಗ್ರಾಮೀಣಾಭಿವೃದ್ಧಿಯಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಅವಕಾಶ ನೀಡಲೆಂದು 2006ರಿಂದಲೂ ಪ್ರತಿವರ್ಷವೂ ಮಕ್ಕಳ ಗ್ರಾಮ ಸಭೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.

ವಿಶ್ವ ಸಂಸ್ಥೆಯ ಸುಸುಸ್ಥಿರ ಅಭಿವೃದ್ಧಿ ಗುರಿಗಳಾದ ಮಕ್ಕಳ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಹಸಿವು-ತಾರತಮ್ಯ-ಶೋಷಣೆಯನ್ನು ಕೊನೆಗೊಳಿಸುವುದಕ್ಕಾಗಿ 2020ರಿಂದ ಮಕ್ಕಳ ಸ್ನೇಹೀ ʻಗ್ರಾಮ ಪಂಚಾಯತ್‌ ಅಭಿಯಾನʼವನ್ನು ನಡೆಸಿ ಅದರಲ್ಲಿ ಒಂದು ದಿನ ಮಕ್ಕಳ ಗ್ರಾಮ ಸಭೆಯನ್ನು ನಡೆಸಿಕೊಂಡು ಬರಲಾಗುತ್ತಿದೆಯಂತೆ. ಸುತ್ತೋಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿ, ಮಕ್ಕಳ ರಕ್ಷಣೆಯ ಕಾವಲು ಸಮಿತಿ ಮತ್ತು ಬಾಲ ವಿಕಾಸ ಸಮಿತಿಗಳ ಜೊತೆ ಚರ್ಚಿಸಿ ಮಹಿಳೆಯರ ಸ್ವಸಹಾಯ ಸಂಘಗಳನ್ನು, ಸಂಸ್ಥೆಯೊಂದು‌ ಅಲ್ಲಿ ಕೆಲಸ ಮಾಡುತ್ತಿದ್ದರೆ ಅದನ್ನೂ ಜೊತೆ ಸೇರಿಸಿಕೊಂಡು ಅಭಿಯಾನ ಮಾಡಬೇಕು ಎನ್ನುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಕ್ಕಳ ಗ್ರಾಮ ಸಭೆ ಆಯೋಜಿಸುವಾಗ ಮಹಿಳೆಯರ ಸಲಹೆ ಮತ್ತು ಪಾತ್ರವೂ ಇರಬೇಕು ಎನ್ನುವುದು ಎಷ್ಟು ಮಹತ್ವದ ವಿಚಾರ! ಸಾಮಾನ್ಯವಾಗಿ ಸ್ವಸಹಾಯ ಸಂಘವೆಂದರೆ ಹಣದ ಉಳಿತಾಯ ಮತ್ತು ಹೆಚ್ಚೆಂದರೆ ಅವರ ಆರ್ಥಿಕ ಅಭಿವೃದ್ಧಿಯ ವಿಚಾರವನ್ನಷ್ಟೇ ಮಾಡುವ ಸಂಘಗಳಾಗಿಬಿಟ್ಟಿವೆ. ಆರ್ಥಿಕವಾಗಿಯಷ್ಟೇ ಮುಂದುವರಿದರೆ ಸಮಾಜವೇನಾಗಬೇಕು? ಮಹಿಳಾಸಂಘಗಳು ತಮ್ಮ ಗ್ರಾಮಗಳ ಮಕ್ಕಳ ಬಗ್ಗೆಯೂ ವಿಚಾರ ಮಾಡುವಂತಾಗಲೆಂದು ಮಕ್ಕಳ ಗ್ರಾಮಸಭೆಗಳಲ್ಲಿ ಮಹಿಳಾಸಂಘಗಳನ್ನೂ ಜೊತೆಗೂಡಿಸಿಕೊಳ್ಳುವ ಸಲಹೆಯಿದೆ. ಹಾಗೆಯೇ ಮಕ್ಕಳ ಪೌಷ್ಟಿಕತೆ, ರಕ್ಷಣೆ ಮತ್ತು ಆರೋಗ್ಯದ ಸಲುವಾಗಿ ಇರುವ ಇತರ ಸಮಿತಿಗಳನ್ನೂ ಸೇರಿಸಿಕೊಂಡು ಅಭಿಯಾನ ಮುಂದುವರೆಯಬೇಕೆಂಬುದು ಅದೆಷ್ಟು ಮಹತ್ತರವಾದ ವಿಚಾರ! ಇವೆಲ್ಲ ಸಮಿತಿಗಳು ಒಟ್ಟಾಗಿ, ಒಗ್ಗಟ್ಟಿನಲ್ಲಿ ಕೆಲಸ ಮಾಡಿದ್ದಿದ್ದರೆ…!

೧೧

ನವೆಂಬರ್‌ 14ರಿಂದ ಆರಂಭಿಸಿ ಜನವರಿ 24ರವರೆಗೆ ʻಮಕ್ಕಳ ಸ್ನೇಹಿ ಗ್ರಾಮಪಂಚಾಯತ್‌ ಅಭಿಯಾನʼವನ್ನು ಪಂಚಾಯತಿ ಮಾಡಬೇಕೆಂದು ಹೇಳುತ್ತದೆ ಈ ಸುತ್ತೋಲೆ. ಎರಡು ತಿಂಗಳು ಹತ್ತು ದಿನಗಳ ಕಾಲ ಹಳ್ಳಿ ಹಳ್ಳಿಯಲ್ಲೂ ಮಗು ಹುಟ್ಟಿತೇ? ಅದರ ಜನನ ಪ್ರಮಾಣಪತ್ರವಾಗಬೇಕು. ಹಿಂದೆ ಹುಟ್ಟಿದ ಎಲ್ಲಾ ಮಕ್ಕಳದ್ದೂ ಜನನ ಪ್ರಮಾಣ ಪತ್ರಗಳು ಆಗಿವೆಯೇ? ಎಲ್ಲಾ ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿದೆಯೇ? ಅಂಗನವಾಡಿಯಲ್ಲಿ ಸಿಗುವ ಆಹಾರವನ್ನು ಮಗುವಿಗೇ ಕೊಡುತ್ತಿದ್ದಾರೆಯೇ ಅಥವಾ ಎಮ್ಮೆಗಳಿಗೆ ಹಾಕುತ್ತಿದ್ದಾರೆಯೇ? ಊರಿನ ಎಲ್ಲಾ ಮಕ್ಕಳಿಗೂ ಚುಚ್ಚುಮದ್ದು ಹಾಕಿಸಲಾಗಿದೆಯೇ? ಎಲ್ಲಾ ಮಕ್ಕಳೂ ಶಾಲೆಗೆ ಹೋಗುತ್ತಿವೆಯೇ? ೧೧ರಿಂದ ೧೪ ವರ್ಷ ವಯಸ್ಸಿನ ಬಾಲಕಿಯರ ಪಟ್ಟಿಯನ್ನು ಯಾರಾದರೂ ಶಾಲೆ ಬಿಟ್ಟಿದ್ದಾರೆಯೇ? ಬಿಟ್ಟಿದ್ದರೆ ಯಾಕೆ ಬಿಟ್ಟಿದ್ದಾರೆ? ಅವರನ್ನು ಪುನಃ ಶಾಲೆಗೆ ಸೇರಿಸಲು ಏನು ಮಾಡಬೇಕು? ಶಾಲೆಗೆ ಸೇರಿಸಲು ಸಾಧ್ಯವೇ ಇಲ್ಲದ ಪಕ್ಷದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ದಾಖಲು ಮಾಡಬಹುದೇ? ಇವೆಲ್ಲ ಈ ಅಭಿಯಾನದಲ್ಲಿ ಚರ್ಚೆಯಾಗಬೇಕು.

ಇದನ್ನು ಓದಿದ್ದೀರಾ? ಶಿರಾ | ಶಾಲೆಗಳಿಗೆ ಹೆಚ್ಚುವರಿ ಶೌಚಾಲಯ ನಿರ್ಮಿಸಿಕೊಡಿ : ಗ್ರಾಮ ಸಭೆಯಲ್ಲಿ ಮಕ್ಕಳ ಮನವಿ

ಈ ಸುತ್ತೋಲೆಯಲ್ಲಿ ಏನುಂಟು ಏನಿಲ್ಲ! ಮಕ್ಕಳ ಕ್ರೀಡಾಕೂಟಗಳ, ಚಿತ್ರಕಲಾ ಕೂಟಗಳ, ಸಾಂಪ್ರದಾಯಿಕ ಆಟೋಟಗಳ, ರಂಗಭೂಮಿ ಚಟುವಟಿಕೆಗಳ ಕಾರ್ಯಕ್ರಮಗಳಾಗಬೇಕು. ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳ ಹಕ್ಕುಗಳು, ಬಾಲಕಾರ್ಮಿಕತೆ, ಬಾಲ್ಯವಿವಾಹ ಇಂಥದ್ದರ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸುವಂಥ ಕಾರ್ಯಕ್ರಮಗಳನ್ನೂ ಮಾಡಬೇಕು.

ಫೇಸ್‌ಬುಕ್‌ ಪೇಜ್‌ ತಯಾರಿಸಬೇಕೆಂದೆಲ್ಲ ಬರೆದದ್ದು ನೋಡಿದರೆ ಇದು ಹಳ್ಳಿಗಳ ಮಕ್ಕಳ ಗ್ರಾಮ ಸಭೆಯ ವಿಚಾರವೋ ಅಥವಾ ವಿಧಾನ ಸಭೆಯ ವಿಚಾರವೋ ಎಂದು ಗಲಿಬಿಲಿಯಾಗಬಹುದು. ಮಕ್ಕಳ ದೂರು ದುಮ್ಮಾನಗಳನ್ನು ಕೇಳಲು ಆಕರ್ಷಕವಾದ ಮಕ್ಕಳ ದನಿಪೆಟ್ಟಿಗೆ ತಯಾರಿಸಿಡಬೇಕೆಂಬ ಬಲು ಉತ್ತಮವಾದ ವಿಚಾರವೂ ಇದರಲ್ಲಿದೆ.

ಅಂದರೆ ಈ ಎರಡೂವರೆ ತಿಂಗಳಲ್ಲಿ ಪ್ರತಿ ಗ್ರಾಮದಲ್ಲಿಯೂ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಮಕ್ಕಳ ವಿಚಾರಗಳ ಅಭಿವ್ಯಕ್ತಿಯಾಗಬೇಕು. ಕೇವಲ ಶಾಲಾ ಮಕ್ಕಳೊಂದೇ ಅಲ್ಲ, ಶಾಲೆಯಿಂದ ಹೊರಗುಳಿದ ಮಕ್ಕಳು, ಬಾಲ್ಯವಿವಾಹ, ಬಾಲಕಾರ್ಮಿಕತೆಗಳಿಗೊಳಗಾಗಬಹುದಾದ ಮಕ್ಕಳು, ಪ್ರೌಢಶಾಲೆಯಲ್ಲಿರುವ ಮಕ್ಕಳು, ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಇರುವಂಥ ಹದಿನೆಂಟು ವರ್ಷವಾಗದ ಎಲ್ಲರನ್ನೂ ಒಳಗೊಂಡಂತೆ ಊರಲ್ಲಿರುವ ಶಿಕ್ಷಕರು, ಅಂಗನವಾಡಿಯವರಷ್ಟೇ ಅಲ್ಲ, ಪಂಚಾಯತಿಯವರು, ಸ್ವಸಹಾಯ ಸಂಘಗಳು, ಎಲ್ಲರೂ ಸತತವಾಗಿ ಒಂದು ಅಭಿಯಾನ ರೂಪದಲ್ಲಿ ತಮ್ಮೂರಿನ ಮಕ್ಕಳ ಬಗ್ಗೆ ಚಿಂತನೆ, ಚರ್ಚೆ, ಕೆಲಸ ಮಾಡಬೇಕು ಎಂದು ಈ ಸುತ್ತೋಲೆ ಹೇಳುತ್ತದೆ.

ಬಹುತೇಕವಾಗಿ ಪಂಚಾಯತಿ ಇರುವ ಗ್ರಾಮದಲ್ಲಿ, ಒಂದು ಶಾಲೆಯ ಮಕ್ಕಳನ್ನು ಕರೆಸಿ ಗ್ರಾಮಸಭೆ ಮಾಡಿ ಮುಗಿಸುತ್ತಾರೆ. ಬೇರೆ ಹಳ್ಳಿಗಳ ಮಕ್ಕಳಿಗೆ ಅದರ ಸುದ್ದಿಯೂ ಇರುವುದಿಲ್ಲ. ಆದರೆ ಈ ಸುತ್ತೋಲೆಯ ಪ್ರಕಾರ ಪ್ರತಿ ಹಳ್ಳಿಯಲ್ಲೂ, ಜನವಸತಿಯಲ್ಲೂ, ವಾರ್ಡ್‌ ಮಟ್ಟದಲ್ಲೂ ಮೊದಲು ವಾರ್ಡ್‌ ಸಭೆಗಳಾಗಬೇಕು. ಜನವಸತಿ ಸಭೆಗಳಾಗಬೇಕು. ಅಂದಾಗ ಮಾತ್ರವಲ್ಲವೇ ಎಲ್ಲಾ ವಸತಿ ಪ್ರದೇಶಗಳ ಮಕ್ಕಳಿಗೂ ಅವಕಾಶ ಸಿಗುವುದು? ನಂತರ ಅವರ ಪ್ರತಿನಿಧಿಗಳನ್ನು ಗ್ರಾಮ ಸಭೆಗೆ ಅಲ್ಲಿಂದ ಆರಿಸಿ ಕಳಿಸಬೇಕೆನ್ನುವ, ಈ ಚಿಕ್ಕ ವಯಸ್ಸಿನಲ್ಲೇ ಪ್ರಾತ್ಯಕ್ಷಿಕೆಗಳ ಮೂಲಕ ಪ್ರಜಾಪ್ರಭುತ್ವದ ಬಗ್ಗೆ, ಅರಿವು ಮೂಡಿಸುವ ಎಂಥಾ ಅಪೂರ್ವ ಅವಕಾಶ!

ಇದನ್ನು ಓದಿದ್ದೀರಾ? ಹತ್ತು ವಾರಗಳ ಕಾಲ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ: ಸಚಿವ ಪ್ರಿಯಾಂಕ್‌ ಖರ್ಗೆ

ಈ ರೀತಿಯಲ್ಲಿ ಗ್ರಾಮಸಭೆಗಳಾದರೆ ನಮ್ಮ ಮಧ್ಯೆ ಮಕ್ಕಳ ಸಮಸ್ಯೆ ಎಂದಾದರೂ ಇದ್ದೀತೇ? ಬಾಲ್ಯ ವಿವಾಹಗಳು, ಬಾಲ ಗರ್ಭಿಣಿಯರು, ಅವರಿಗೆ ಹುಟ್ಟುವ ಮಕ್ಕಳಿಗೆ ಸಿಗದ ಜನನ ಪ್ರಮಾಣ ಪತ್ರ. ಅಪೌಷ್ಟಿಕತೆ, ಐದನೇಯತ್ತೆ ಮುಗಿಯುವುದರೊಳಗೆ ಶಾಲೆ ಬಿಟ್ಟೋಡುವ ಬಾಲ ಕಾರ್ಮಿಕರು… ಒಂದೇ ಎರಡೇ? ಅಂಕಿ ಅಂಶಗಳನ್ನು ತೆಗೆದು ನೋಡಿದರೆ ಪ್ರತಿಯೊಂದರಲ್ಲೂ ಜಾಗತಿಕವಾಗಿ ನಮ್ಮ ದೇಶ ಮೊದಲ ನಂಬರಾದರೆ, ದೇಶದಲ್ಲಿ ನಮ್ಮ ರಾಜ್ಯವೇ ಮೊದಲ ನಂಬರು!

ಯಾಕೆ ಇಂತಹ ಯಾರೂ ಓದದ ಆದೇಶಗಳನ್ನು ಹೊರಡಿಸುತ್ತದೆ ಸರಕಾರ? ಯಾರನ್ನು ಮೆಚ್ಚಿಸುವುದಕ್ಕಾಗಿ? ಯಾತಕ್ಕಾಗಿ ಈ ಸೋಗು? ಇಡೀ ರಾಜ್ಯದಲ್ಲಿ ಒಂದು ಪಂಚಾಯತಿಯಾದರೂ ಮಕ್ಕಳ ಗ್ರಾಮಸಭೆಯನ್ನು ಸರಿಯಾಗಿ ಮಾಡಿದ ದಾಖಲಿದೆಯೇ? ಎರಡು ತಿಂಗಳಿನ ಅಭಿಯಾನವಂತೂ ದೂರವೇ ಉಳಿಯಿತು. ಯಾರಿಗೂ ಅದಕ್ಕೆ ಪುರುಸೊತ್ತಿಲ್ಲ, ಬೆಳಗಾವಿ ಜಿಲ್ಲೆಯಲ್ಲೇ ನೋಡಿ, ಪ್ರತಿವರ್ಷ ಮಕ್ಕಳ ಗ್ರಾಮ ಸಭೆ ಆಗಬೇಕಾದ ಸಮಯಕ್ಕೇ ಸುವರ್ಣಸೌಧದಲ್ಲಿ ವಿಧಾನಸಭೆ ಅಧಿವೇಶನ. ಜಿಲ್ಲೆಯ ಪ್ರತಿಯೊಬ್ಬ ಅಧಿಕಾರಿಯೂ ಸುವರ್ಣಸೌಧದತ್ತ ಎಡತಾಕುತ್ತಿರಬೇಕು. ತಿಂಗಳೆಲ್ಲ ಅತ್ತಲೇ ದೌಡಾಯಿಸುವವರಿಗೆ ಮಕ್ಕಳ ಗ್ರಾಮಸಭೆಯ ನೆನಪಾದರೂ ಆಗಬೇಕೆಲ್ಲಿ?

ಅಧಿಕಾರಿಗಳಿಗೆ ನೆನಪು, ಪುರುಸೊತ್ತು ಎರಡೂ ಇದ್ದರೂ ಕೂಡ ಮಕ್ಕಳ ಗ್ರಾಮಸಭೆ ಆಗುವುದಿಲ್ಲ. ಒಬ್ಬ ಶಿಕ್ಷಕರೇ ಹೇಳುವಂತೆ ಮಕ್ಕಳು ಕೇಳಬಹುದಾದ ಪ್ರಶ್ನೆಗಳಿಗೆ ಹೆದರಿ ಗ್ರಾಮಸಭೆಯನ್ನೇ ಮಾಡುವುದಿಲ್ಲ ಅವರು. ಎಲ್ಲಾ ಶಾಲೆಗಳಿಗೂ ಶಿಕ್ಷಕರು ಬೇಕು, ಚಿತ್ರಕಲಾ ಶಿಕ್ಷಕರು ಬೇಕು. ಮಕ್ಕಳಿಗೆ ಹೊಡೆಯಬಾರದೆಂಬ ಕಾನೂನಿದ್ದರೂ ಹೊಡೆಯುತ್ತಿರುವುದರ ಕುರಿತು, ಹೊರಗಿನಿಂದ ತರಿಸುವ ಬಿಸಿಯೂಟದ ಬಗ್ಗೆ ತಕರಾರು ಹೇಳುವುದಿದೆ. ಪಾಠ ಅರ್ಥ ಆಗ್ತಾ ಇಲ್ಲ, ಪ್ರಶ್ನೆ ಕೇಳುವಂತಿಲ್ಲ. ಕುಡಿಯುವ ತಂದೆಯಿಂದಾಗಿ ಓದಲು ಆಗುತ್ತಿಲ್ಲ… ಒಂದೇ ಎರಡೇ? ನೂರು ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ಯಾವ ಗ್ರಾಮಪಂಚಾಯತಿ ಅಧಿಕಾರಿಯ ಬಳಿಯೂ ಉತ್ತರವಿಲ್ಲ. ಸಮಾಜದಲ್ಲೇ ಉತ್ತರವಿಲ್ಲ. ಪ್ರಶ್ನೆ ಎದುರಿಸಲು ಧೈರ್ಯವಿಲ್ಲ! ಧೈರ್ಯವೆಲ್ಲಿದೆ?

SHARADHA GOPAL
ಶಾರದಾ ಗೋಪಾಲ
+ posts

ಸಿದ್ದಾಪುರ ತಾಲೂಕಿನ ಬಕ್ಕೆಮನೆಯವರು. ಸದ್ಯ ಧಾರವಾಡ ನಿವಾಸಿ. ಗ್ರಾಮೀಣರ ಬದುಕುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗ್ರಾಮೀಣ ಅಭಿವೃದ್ಧಿಯ ವಾಸ್ತವ ಸಂಗತಿಗಳ ಕುರಿತು ನಿಖರವಾಗಿ ಬರೆಯಬಲ್ಲವರು.

ಪೋಸ್ಟ್ ಹಂಚಿಕೊಳ್ಳಿ:

ಶಾರದಾ ಗೋಪಾಲ
ಶಾರದಾ ಗೋಪಾಲ
ಸಿದ್ದಾಪುರ ತಾಲೂಕಿನ ಬಕ್ಕೆಮನೆಯವರು. ಸದ್ಯ ಧಾರವಾಡ ನಿವಾಸಿ. ಗ್ರಾಮೀಣರ ಬದುಕುಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು, ಗ್ರಾಮೀಣ ಅಭಿವೃದ್ಧಿಯ ವಾಸ್ತವ ಸಂಗತಿಗಳ ಕುರಿತು ನಿಖರವಾಗಿ ಬರೆಯಬಲ್ಲವರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...