ಇಲ್ಲಿಯವರೆಗೆ ಘನತೆಯಿಂದ ನಡೆದುಕೊಂಡಿರುವ ಕಾಂಗ್ರೆಸ್ ನಾಯಕರು ಇನ್ನು ಮುಂದೆಯೂ ಹಾಗೆಯೇ ನಡೆದುಕೊಳ್ಳುತ್ತಾರೆಯೇ ಎಂಬ ಬಗ್ಗೆ ಯಾವ ಗ್ಯಾರಂಟಿಯೂ ಇಲ್ಲ. ಆದರೆ, ಮಾಧ್ಯಮಗಳಂತೂ ಇದುವರೆಗೆ ಹೇಗೆ ನಡೆದುಕೊಂಡಿದ್ದಾರೋ ಹಾಗೆಯೇ ನಡೆದುಕೊಳ್ಳುತ್ತಾರೆ ಎಂಬುದಂತೂ ನಿಶ್ಚಿತ.
ಯಾವುದೇ ರಾಜ್ಯದಲ್ಲಿ ಒಂದೇ ಪಕ್ಷದ ಅಧಿಕಾರವಿದ್ದಾಗ್ಯೂ, ಕುರ್ಚಿಯ ಮೇಲೆ ಕುಳಿತ ಒಬ್ಬ ಮುಖ್ಯಮಂತ್ರಿಯನ್ನು ಇಳಿಸಿ ಇನ್ನೊಬ್ಬರು ಅದನ್ನೇರಬೇಕೆಂದುಕೊಂಡಾಗ– ರಾಜಕೀಯ ಅಸಹ್ಯಗಳು ಮೇಲೆದ್ದು ಕುಣಿಯುತ್ತವೆ. ಆದರೆ, ಕರ್ನಾಟಕದಲ್ಲಿ ಈ ಸದ್ಯ ನಡೆಯುತ್ತಿರುವುದು ಅಚ್ಚರಿಯ ಬೆಳವಣಿಗೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಈ ಸರ್ಕಾರದ ಎರಡೂವರೆ ವರ್ಷದ ಅವಧಿ ಮುಗಿಯುತ್ತಿರುವಾಗ, ತಮ್ಮ ಸ್ಥಾನ ಬಿಟ್ಟುಕೊಟ್ಟು, ಆ ಜಾಗದಲ್ಲಿ ತಾನು ಕೂರಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಯಸಿರುವುದು ಗುಟ್ಟಿನ ವಿಚಾರವಲ್ಲ. ಹಾಗೆ ನೋಡಿದರೆ, ಇದು ಈ ಸರ್ಕಾರ ಜಾರಿಗೆ ಬಂದಾಗಿನಿಂದಲೂ ಚಾಲ್ತಿಯಲ್ಲಿದ್ದ ʼಬಹಿರಂಗ ರಹಸ್ಯʼ. ಆದರೆ, ಅವರ ಬಯಕೆಗೆ ಸ್ವತಃ ಸಿದ್ದರಾಮಯ್ಯನವರು ಮತ್ತು ಪಕ್ಷದ ಹೈಕಮ್ಯಾಂಡ್‌ನ ಸಮ್ಮತಿ ಇತ್ತೇ ಇಲ್ಲವೇ ಇತ್ಯಾದಿ ಬಗ್ಗೆ ಅಂದೂ ನಿಗೂಢತೆ ಇತ್ತು; ಇಂದೂ ಇದೆ. ಅಂತಿಮವಾಗಿ ಏನೇ ಬೆಳವಣಿಗೆಗಳಾದರೂ, ಇಂತಹದೊಂದು ತೀರ್ಮಾನ ಆಗಿತ್ತೇ ಇಲ್ಲವೇ ಎಂಬುದು ನಮ್ಮ ಊಹೆಗೇ ಬಿಟ್ಟುಬಿಡುವ ಸಾಧ್ಯತೆಯಿದ್ದು, ಯಾರೂ ಅದರ ಬಗ್ಗೆ ಖಚಿತವಾದ ಮಾಹಿತಿ ಕೊಡದೆಯೂ ಹೋಗಬಹುದು. ಅವೆಲ್ಲವನ್ನೂ ಮುಂದಿನ ಕೆಲ ದಿನಗಳು ಅಥವಾ ವಾರಗಳಲ್ಲಿ ತೆರೆದುಕೊಳ್ಳಲಿರುವ ಬೆಳವಣಿಗೆಗಳಿಗೆ ಬಿಡೋಣ.
ಆದರೆ, ಈ ಲೇಖನದ ಉದ್ದೇಶ– ವಿವಿಧ ಟಿವಿ ಚಾನೆಲ್ಲುಗಳಲ್ಲಿ ಅಬ್ಬರಿಸುತ್ತಿರುವ ಬ್ರೇಕಿಂಗ್ ನ್ಯೂಸು, ವಿಶ್ಲೇಷಣೆಗಳ ನಡುವೆ ಗಮನಿಸದೇ ಹೋಗುತ್ತಿರುವ ಅಚ್ಚರಿಯ ಕೆಲವು ʼನಡವಳಿಕೆʼಗಳ ಕುರಿತು. ತೀರಾ ಚಿಕ್ಕವಯಸ್ಸಿನಿಂದಲೇ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿರುವ ನನಗೆ, ಕಳೆದ 40 ವರ್ಷಗಳ ರಾಜಕೀಯ ವಿದ್ಯಮಾನದ ನೆನಪು ಹಸಿಹಸಿಯಾಗಿದೆ. 91ರಿಂದ 94ರ ನಡುವೆ ನಡೆದ ಅಂತಹ ಬೆಳವಣಿಗೆಗಳನ್ನು ನಾನು ವಾಸವಿದ್ದ ಜಾಗದ ಕಾರಣದಿಂದ ʼಕಣ್ಣಾರೆʼ ಕಂಡಿದ್ದೇನೆ. ಈ ನಾಲ್ಕು ದಶಕಗಳಲ್ಲಿ ಒಂದೇ ಪಕ್ಷದ ಆಡಳಿತದ ಅವಧಿಯಲ್ಲಿ ಒಟ್ಟು ಏಳು ಸಾರಿ ಮುಖ್ಯಮಂತ್ರಿಗಳು ಬದಲಾಗಿದ್ದಾರೆ. ಈ ರೀತಿ ಬದಲಾದ ಎಲ್ಲಾ ಸಂದರ್ಭಗಳಲ್ಲೂ ಎದ್ದು ಕಾಣುತ್ತಿದ್ದ ಸಂಗತಿ ಏನೆಂದರೆ, ಬಹಿರಂಗವಾಗಿ ಆರೋಪ ಪ್ರತ್ಯಾರೋಪಗಳು, ಮುಖ್ಯಮಂತ್ರಿಯ ಮೇಲೆ ಅಥವಾ ಮುಖ್ಯಮಂತ್ರಿ ಆಕಾಂಕ್ಷಿಯ ಮೇಲೆ ವಾಚಾಮಗೋಚರ ಬೈಗುಳಗಳು, ಭ್ರಷ್ಟಾಚಾರದ ಆರೋಪಗಳು, ಗುಂಪು ಸಭೆಗಳು, ಭಿನ್ನಮತೀಯರ ಸಭೆಗಳು (ಸುಮಾರು ಹದಿನೈದು ವರ್ಷಗಳ ಕಾಲ ಕರ್ನಾಟಕದಲ್ಲಿ ನಿರಂತರವಾಗಿ ʼಭಿನ್ನಮತೀಯರ ಬಣʼ ಎಂಬುದು ಸದಾ ಅಸ್ತಿತ್ವದಲ್ಲಿತ್ತು), ದೆಹಲಿಯತ್ತ ಭಿನ್ನರ ದೌಡು ಎಂಬ ಸುದ್ದಿಗಳು, ಜಗಳಗಳು ಇತ್ಯಾದಿ. ಶೋಷಿತ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಮುಖ್ಯಮಂತ್ರಿಯೊಬ್ಬರನ್ನು, ಶಾಸಕರ ಗುಂಪೊಂದು ಒಮ್ಮೆ ವಿಧಾನಸೌಧದಲ್ಲಿ ಓಡಿಸಿಕೊಂಡು ಹೋಗಿದ್ದರು. ಯಡಿಯೂರಪ್ಪನವರ ಪರ ಮತ್ತು ವಿರುದ್ಧ ಇದ್ದ ಶಾಸಕರು ಆಡದ ಮಾತುಗಳಿಲ್ಲ. ಅವರ ಎರಡನೇ ಅವಧಿಯಲ್ಲಿ ಸಾವಿರ ಕೋಟಿ ಕೊಟ್ಟು ಸಿಎಂ ಆದವರು ಎಂಬ ಆರೋಪವನ್ನೂ ಮಾಡಲಾಯಿತು.
ರಾಜ್ಯದ ರಾಜಕೀಯ ಇತಿಹಾಸದಲ್ಲಿಈವರೆಗೆ ಮೂವರು ಮುಖ್ಯಮಂತ್ರಿಗಳು ಮಾತ್ರವೇ ತಮ್ಮ ಅವಧಿ ಪೂರೈಸಿದ್ದಾರೆ. ಎಸ್.ನಿಜಲಿಂಗಪ್ಪ, (1962-1968 ಬಹುತೇಕ ಆರು ವರ್ಷ), ಡಿ.ದೇವರಾಜ ಅರಸ್ (1972-1977) ಹಾಗೂ ಸಿದ್ದರಾಮಯ್ಯ (2013-2018).
ಕಾಂಗ್ರೆಸ್ ಪಕ್ಷದ ಒಳಜಗಳ ಸ್ವಾತಂತ್ರ್ಯ ಬಂದಾಗಿನಿಂದ 1983ರ ತನಕ ಮುಂದುವರೆದೇ ಇತ್ತು. 1983ರಲ್ಲಿ ಅಧಿಕಾರಕ್ಕೆ ಬಂದ ರಾಮಕೃಷ್ಣ ಹೆಗಡೆ, ಬೊಮ್ಮಾಯಿ ದೇವೇಗೌಡ, ಜೆ.ಎಚ್.ಪಟೇಲರ ಜನತಾ ಪಕ್ಷ- ಜನತಾದಳ ಸರ್ಕಾರಗಳೂ ಈ ಆಂತರಿಕ ಕಲಹ ಅಧಿಕಾರ ಹಸ್ತಾಂತರಕ್ಕೆ ಹೊರತಲ್ಲ. ಇನ್ನು ಈವರೆಗೂ ಸ್ವಂತ ಬಹುಮತದಿಂದ ಅಧಿಕಾರಕ್ಕೆ ಬರುವುದು ಸಾಧ್ಯವಾಗದೆ ಇರುವ ಬಿಜೆಪಿ ಕೂಡ ಇದೇ ಪಟ್ಟಿಗೆ ಸೇರುತ್ತದೆ.
2008ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ರಚಿಸಿದ ಬಿ.ಎಸ್. ಯಡಿಯೂರಪ್ಪ ಲೋಕಾಯುಕ್ತರು ಸಲ್ಲಿಸಿದ ಅಕ್ರಮ ಗಣಿ ಹಗರಣದ ವರದಿಯ ಹಿನ್ನೆಲೆಯಲ್ಲಿ 2011ರಲ್ಲಿ ರಾಜೀನಾಮೆ ನೀಡಬೇಕಾಯಿತು. ಯಡಿಯೂರಪ್ಪ ಅವರ ಶಿಫಾರಸಿನ ಮೇರೆಗೆ ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾದರು. 2012ರಲ್ಲಿ ಆಂತರಿಕ ಕಚ್ಚಾಟ ಮತ್ತು ಯಡಿಯೂರಪ್ಪ ಅವರ ಅಸಮಾಧಾನದ ಹಿನ್ನೆಲೆಯಲ್ಲಿ ಸದಾನಂದಗೌಡ ರಾಜೀನಾಮೆ ಸಲ್ಲಿಸಿದರು. ಗೌಡರ ಜಾಗಕ್ಕೆ ಪುನಃ ಯಡಿಯೂರಪ್ಪ ಅವರ ಸಮ್ಮತಿಯೊಂದಿಗೆ ಬಿಜೆಪಿ ವರಿಷ್ಠರು ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದರು. 2008-2013ರ ನಡುವೆ ಬಿಜೆಪಿ ನಾಲ್ವರು ಮುಖ್ಯಮಂತ್ರಿಗಳನ್ನು ಕಂಡಿತ್ತು. ಯಡಿಯೂರಪ್ಪ ಅವರೂ ಸೇರಿದಂತೆ ಬಿಜೆಪಿಯ ಯಾವುದೇ ಮುಖ್ಯಮಂತ್ರಿ ಅಥವಾ ಸರ್ಕಾರ ಐದು ವರ್ಷಗಳ ಅವಧಿಯನ್ನು ಪೂರೈಸಿಲ್ಲ.
ಇಂತಹ ಬೆಳವಣಿಗೆಗಳು ಎಂದೋ ಒಮ್ಮೆ ನಡೆಯಿತು ಎಂದಲ್ಲ; ವರ್ಷಗಟ್ಟಲೇ ನಡೆದವು. ಕೆಲವು ಸಾರಿ ಕ್ಯಾಬಿನೆಟ್ ಮಂತ್ರಿಗಳೇ ತಮ್ಮ ನಾಯಕ – ಮುಖ್ಯಮಂತ್ರಿಯ ಕುರಿತು ದುರದೃಷ್ಟಕರ ಮಾತುಗಳನ್ನು ಆಡಿದರು. ಬಹಿರಂಗ ಪತ್ರಗಳನ್ನು ಮುಖ್ಯಮಂತ್ರಿಯ ವಿರುದ್ಧ ಪಕ್ಷದ ವರಿಷ್ಠರಿಗೆ ಕಳಿಸಿದರು; ಅಥವಾ ಒಳಗಿನ ಪತ್ರಗಳನ್ನು ತಾವೇ ಲೀಕ್ ಮಾಡುತ್ತಿದ್ದರು. ಇಂತಹ ಹಲವು ಸಂದರ್ಭಗಳಲ್ಲಿ ಅಧಿಕಾರಸ್ಥ ಮುಖ್ಯಮಂತ್ರಿಯ ವಿರುದ್ಧ ತೊಡೆ ತಟ್ಟುತ್ತಿರುವವರಲ್ಲಿ, ನಂತರ ನಿರ್ದಿಷ್ಟವಾಗಿ ಇಂಥವರೇ ನಂತರ ಮುಖ್ಯಮಂತ್ರಿಯಾಗುತ್ತಾರೆಂದೂ ಖಚಿತವಿರುತ್ತಿರಲಿಲ್ಲ; ಕೆಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಯೇ ಮುಂದೆ ನಿಂತು ʼಭಿನ್ನಮತೀಯರ ಬಣʼಕ್ಕೆ ನಾಯಕತ್ವ ಕೊಡುತ್ತಿದ್ದರು.

ಆದರೆ, ಈಗ ಸ್ಪಷ್ಟವಾಗಿ ಸಿದ್ದರಾಮಯ್ಯನವರ ನಂತರ ತಾನೇ ಮುಖ್ಯಮಂತ್ರಿ ಮತ್ತು ಆ ಸಂದರ್ಭ ಈಗಲೇ ಎಂದು ನಿರ್ಧರಿಸಿಕೊಂಡಿರುವ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಲಾಢ್ಯರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು ಇದ್ದಾರೆ. ತೀರಾ ದೊಡ್ಡ ಸಂಖ್ಯೆಯಲ್ಲಿ ಅಲ್ಲದಿದ್ದರೂ, ಅವರಿಗೆ ಕೆಲವು ಶಾಸಕರ ಬೆಂಬಲವಿದೆ. ಹೀಗಿದ್ದೂ, ಇದುವರೆಗೆ ಒಂದೇ ಒಂದು ಸಾರಿಯೂ ಬಹಿರಂಗವಾಗಿ ಸಿದ್ದರಾಮಯ್ಯನವರನ್ನು ಟೀಕೆ ಮಾಡುವ ಅಥವಾ ತನ್ನ ʼಬಣʼದ ಶಾಸಕರ ಪ್ರತ್ಯೇಕ ಸಭೆ ಕರೆಯುವ ಗೋಜಿಗೆ ಅವರು ಹೋಗಿಲ್ಲ. ಲೋಕಸಭಾ ಚುನಾವಣೆಗೆ ಮುಂಚೆ ಒಕ್ಕಲಿಗ ಶಾಸಕರು, ಸಚಿವರ ಸಭೆ ಕರೆದಾಗಲೂ, ಆ ಸಭೆಗೆ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರ ಆಹ್ವಾನವಿರಲಿಲ್ಲ; ಸಿದ್ದರಾಮಯ್ಯನವರನ್ನೂ ಕರೆದು ʼಈ ಸರ್ಕಾರದಲ್ಲಿ ಒಕ್ಕಲಿಗರಿಗೆ ಸಿಕ್ಕಷ್ಟು ಪ್ರಾಧಾನ್ಯತೆ ಹಿಂದೆಂದೂ ಇರಲಿಲ್ಲʼ ಎಂದೆಲ್ಲಾ ಹೇಳಿ ಸನ್ಮಾನಿಸಲಾಗಿತ್ತು!
ಈ ಲೇಖನ ಬರೆಯುವುದಕ್ಕೆ ಎರಡು ದಿನಗಳ ಹಿಂದೆ ಡಿ.ಕೆ.ಶಿವಕುಮಾರ್ ಅವರ ಸಾಮಾಜಿಕ ಜಾಲತಾಣದ ಅಕೌಂಟಿನಲ್ಲಿ ʼಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿʼ ಎಂಬ ಒಂದು ಪೋಸ್ಟ್ ಪ್ರಕಟವಾಯಿತು. ಅದರ ಮರುದಿನ ಸಿದ್ದರಾಮಯ್ಯನವರ ಅಕೌಂಟಿನಿಂದ ‘ಮಾತೆಂಬುದು ಪ್ರಪಂಚದ ಜನರಿಗೆ ಒಳ್ಳೆಯದು ಮಾಡದಿದ್ದರೆ ಅದು ಶಕ್ತಿಯಲ್ಲʼ ಎಂಬ ಒಂದು ಕೌಂಟರ್ ಬಂದಿತು. ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವವರು ಈ ಇಬ್ಬರು ನಾಯಕರನ್ನು ಕೇಳಿ ಈ ಹೇಳಿಕೆ ಪ್ರಕಟಿಸಿದರೋ, ಹಾಗೆಯೇ ಪೋಸ್ಟ್ ಮಾಡಿದರೋ ಗೊತ್ತಿಲ್ಲವಾದರೂ, ಅದರ ಜವಾಬ್ದಾರಿಯಂತೂ ಯಾರ ಹೆಸರಿನಲ್ಲಿ ಅಕೌಂಟ್ ಇದೆಯೋ ಅವರದ್ದೇ ಆಗಿರುತ್ತದೆ. ಈ ಒಂದು ಪರೋಕ್ಷ ಕುಟುಕಿನ ಹೊರತಾಗಿ, ಈ ಇಬ್ಬರೂ ಇನ್ನೊಬ್ಬರ ಬಗ್ಗೆ ಸಾರ್ವಜನಿಕವಾಗಿ ಇದುವರೆಗಿನತನಕ ಒಂದೇ ಒಂದು ಸಡಿಲ ಮಾತನ್ನು ಆಡಿಲ್ಲ. ದೆಹಲಿಯಲ್ಲಿ ಮಾಧ್ಯಮವೊಂದರ ಸಂದರ್ಶನದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ ಎಂಬ ಒಂದು ಮಾತನ್ನು ಸಿದ್ದರಾಮಯ್ಯನವರು ಹೇಳಿದ್ದರು; ಸ್ವತಃ ಡಿಕೆಶಿಯವರಿಗೂ ಸೇರಿ ಇಡೀ ಲೋಕಕ್ಕೆ ಗೊತ್ತಿದ್ದ ಸತ್ಯವಾಗಿತ್ತದು. ಅದೇ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಬಯಸುವುದರಲ್ಲಿ ತಪ್ಪೇನೂ ಇಲ್ಲ ಎಂದೂ ಹೇಳಿದರು. ಸಿದ್ದರಾಮಯ್ಯನವರು ಮುಡಾ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾಗ, ಮುಂದೆ ನಿಂತು ಅದರ ವಿರುದ್ಧ ಕಾಂಗ್ರೆಸ್ ಯಾತ್ರೆಗೆ ಶಿವಕುಮಾರ್ ಅವರೇ ನೇತೃತ್ವ ಕೊಟ್ಟಿದ್ದರು. ʼಐದು ವರ್ಷ ನಾನೇ ಮುಖ್ಯಮಂತ್ರಿʼ ಎಂದು ಹೇಳಿದಾಗಲೂ ಶಿವಕುಮಾರ್ ಅವರು ʼಇಲ್ಲ ಬದಲಾಗುತ್ತಾರೆʼ ಎಂದು ಹೇಳಲಿಲ್ಲ.
ಡಿ.ಕೆ.ಶಿವಕುಮಾರ್ ಬೆಂಬಲಿಗರೆಂದು ಬಹಿರಂಗವಾಗಿಯೇ ಎಣಿಸಬಹುದಾದ ಹತ್ತು ಜನ ಶಾಸಕರಾದರೂ ಇದ್ದಾರೆ. ಆ ಹತ್ತು ಜನರಲ್ಲಿ ಒಬ್ಬರೂ ಸಹಾ (ಈ ಹಿಂದೆ ಯಡಿಯೂರಪ್ಪನವರ ಪರ ಅಥವಾ ವಿರುದ್ಧವಿದ್ದ, ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರ ಪರ ಅಥವಾ ವಿರುದ್ಧವಿದ್ದ ಶಾಸಕರು ಹೇಳಿದಂತೆ) ಸಿದ್ದರಾಮಯ್ಯನವರ ವಿರುದ್ಧ ಒಂದೇ ಒಂದು ಸಣ್ಣ ಮಾತನ್ನೂ ಹೇಳಿಲ್ಲ. ಮುಡಾ ಪ್ರಕರಣದ ಸಂದರ್ಭದಲ್ಲೂ ಆಡಲಿಲ್ಲ. ಸಾಧ್ಯವಿದ್ದರೆ ಸಿದ್ದರಾಮಯ್ಯನವರ ಆಶೀರ್ವಾದದಿಂದಲೇ ತಾನು ಸಿಎಂ ಆಗುತ್ತೇನೆ ಎಂಬ ರೀತಿಯಲ್ಲೇ ಶಿವಕುಮಾರ್ ಅವರು ಇದುವರೆಗೆ ನಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರ ಶಕ್ತಿಯೂ ಅದಕ್ಕೆ ಕಾರಣ ಎಂಬುದೂ ನಿಜವಿರಬಹುದು. ಆದರೆ, ಡಿಕೆಶಿ ಎಲ್ಲಿಯೂ ತುಟಿ ಮೀರಿ ಮಾತಾಡಿಲ್ಲ. ʼಕೊಟ್ಟ ಮಾತಿನ ಬಗ್ಗೆʼ ಬಂದ ಫೇಸ್‌ಬುಕ್ ಪೋಸ್ಟ್ ಸಹಾ ತನ್ನದಲ್ಲ ಎಂದು ಬಿಟ್ಟರು.
ಇನ್ನು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಇರುವ ಹಲವು ನಾಯಕರು ಆಗಿಂದಾಗ್ಗೆ, ʼಒಬ್ಬರಿಂದಲೇ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ; ಇದರಲ್ಲಿ ಬೇಕಾದಷ್ಟು ಜನರ ಶ್ರಮವಿದೆʼ ಎಂದು ಬಹಿರಂಗವಾಗಿಯೂ, ʼಸಿದ್ದರಾಮಯ್ಯನವರ ಮುಖ ನೋಡಿಕೊಂಡೇ ಕರ್ನಾಟಕದ ದೊಡ್ಡ ಸಂಖ್ಯೆಯ ಸಮುದಾಯಗಳು ಓಟು ಹಾಕಿದ್ದುʼ ಎಂದು ಖಾಸಗಿಯಾಗಿಯೂ ಮಾತಾಡಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷರನ್ನು ಬಲಿ ಹಾಕಿಬಿಡಬೇಕು ಎಂಬಂತೆ ಮಾತಾಡಲು ಯಾರೂ ಹೋಗಿಲ್ಲ. ಈ ʼವಿರೋಧಿಗಳೂʼ ಸಹ ವಿವಿಧ ಸಾಧನೆಗಳ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ತೆಗೆದುಕೊಂಡಾಗಲೆಲ್ಲಾ, ಉಪಮುಖ್ಯಮಂತ್ರಿಯ ಹೆಸರನ್ನೂ ಜಪಿಸಿದ್ದಾರೆ.
ಇದೆಲ್ಲಾ ಯಾವಾಗ? ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ದುರ್ಬಲ ಸ್ಥಿತಿಯಲ್ಲಿರುವಾಗಿನ ವಿದ್ಯಮಾನವಿದು. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿಯಲ್ಲಿ– ಅದರ ಹೈಕಮಾಂಡ್ ಇತಿಹಾಸದಲ್ಲೆ ಅತ್ಯಂತ ಪ್ರಬಲವೂ, ಯಾರ ಮೇಲೆ ಬೇಕಾದರೂ ಎರಗಿ ಸಂಹರಿಸಲು ಸಾಧ್ಯವಿರುವಷ್ಟು ಕಠಿಣವೂ ಆಗಿರುವ ಸಂದರ್ಭದಲ್ಲೇ, ಅದರ ಮುಖ್ಯಮಂತ್ರಿ ವಿರುದ್ಧ ಶಾಸಕರುಗಳು ಏನು ಬೇಕಾದರೂ ಮಾತಾಡುತ್ತಾರೆ.
ಇದ್ಯಾವುದರ ಅರ್ಥವೂ ಕಾಂಗ್ರೆಸ್ಸಿನಲ್ಲಿ ಈ ಹೊತ್ತು ಮುಖ್ಯಮಂತ್ರಿ ಬದಲಾವಣೆಯ ಕುರಿತು ಯಾವ ಗೊಂದಲವೂ ಇಲ್ಲ ಎಂದಲ್ಲ. ಸ್ಪಷ್ಟವಾಗಿ ಈ ವಿಚಾರದಲ್ಲಿ ಒಂದು ಗೊಂದಲ ಕಳೆದ ಕೆಲವು ದಿನಗಳಿಂದಂತೂ ಏರ್ಪಟ್ಟಿದೆ. ಆದರೆ, ಇದರ ಬಗ್ಗೆ ನೂರಾರು ಶಾಸಕರು ಮುಂದೆ ಯಾವಾಗ ಮೈಕ್ ಹಿಡಿದರೂ ಬಹುತೇಕರು ಸಮತೋಲನದಿಂದಲೇ ಉತ್ತರಿಸಿದ್ದಾರೆ ಎಂಬುದಂತೂ ನಿಜ. ಇಷ್ಟೆಲ್ಲಾ ಇದ್ದರೂ ಬಿಟ್ಟೂ ಬಿಡದೇ ಒಂದು ವರ್ಷದ ಕಾಲ ಮೈಕ್ ಹಿಡಿಯುತ್ತಿದ್ದದ್ದು ಯಾರು ಮತ್ತು ಏಕೆ? ಅವರೇ ಮುಖ್ಯಮಂತ್ರಿ ಬದಲಾವಣೆ ಸುದ್ದಿಯನ್ನು, ಅದರ ದಿನಾಂಕವನ್ನು, ಉಪಮುಖ್ಯಮಂತ್ರಿಯಾಗಿ ಯತೀಂದ್ರ ಅವರ ಹೆಸರನ್ನು ಎಲ್ಲವನ್ನೂ ನಿರ್ಧರಿಸಿ ಪ್ರಕಟಿಸಿಯೂ ಬಿಟ್ಟರು. ಇದೇ ದಿನಗಳಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಸಾವಿರಾರು ಬಡ ಮಹಿಳೆಯರು ಕೂತಾಗ ಅಥವಾ ಹತ್ತಾರು ಸಂಘಟನೆಗಳು ಒಟ್ಟು ಸೇರಿ ರೈತ, ಕಾರ್ಮಿಕ, ಭೂರಹಿತರ ವಿಷಯವನ್ನು ಮುಂದಿಟ್ಟು ಇದೇ ಸರ್ಕಾರವನ್ನು ಪ್ರಶ್ನಿಸುತ್ತಿದ್ದಾಗಲೂ– ಈ ಮಾಧ್ಯಮಗಳು ಅವಕ್ಕೆ ಕವಡೆ ಕಿಮ್ಮತ್ತು ಕೊಡಲಿಲ್ಲ.

ನಾಡಿನ ಜನಸಾಮಾನ್ಯರ ಬದುಕಿನ ವಿಚಾರ ಅಥವಾ ನಿಜವಾದ ಅಭಿವೃದ್ಧಿಯ ವಿಚಾರವನ್ನು ಬಹುತೇಕ ಮಾಧ್ಯಮಗಳು ತಮ್ಮ ಆದ್ಯತೆಯ ವಿಚಾರವಾಗಿಟ್ಟುಕೊಳ್ಳುತ್ತಾರೆ ಎಂಬ ನಿರೀಕ್ಷೆಯನ್ನು ಎಲ್ಲರೂ ಬಿಟ್ಟು ಎಷ್ಟೋ ಕಾಲವಾಗಿದೆ. ಇನ್ನು ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಪ್ರಶ್ನೆ ಮಾಡುವುದಿರಲಿ, ರಾಜ್ಯದ ವಿರುದ್ಧ ಮೋದಿ ಪರ ಭಜನೆಯನ್ನೂ ಮಾಡುತ್ತಾರೆ ಎಂದೇ ಜನರೂ ಭಾವಿಸುತ್ತಾರೆ. ಹಾಗಾಗಿ ಅಂತಹ ಅಪೇಕ್ಷೆಗಳೇ ಯಾರಿಗೂ ಇಲ್ಲ. ಆದರೆ, ಇದ್ದುದರಲ್ಲಿ– ಕಳೆದ 40 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಎಂದೂ ಕಾಣದ– ಘನತೆಯಿಂದ ಇಬ್ಬರು ನಾಯಕರೂ, ಕಾಂಗ್ರೆಸ್ಸಿನ ಮಂತ್ರಿ ಶಾಸಕರೂ ವರ್ತಿಸುತ್ತಿದ್ದಾಗಲೂ, ಜಿದ್ದಿಗೆ ಬಿದ್ದಂತೆ ಮಾಧ್ಯಮಗಳು ವರ್ತಿಸಿದವು. ದಿನ ಬೆಳಗಾದರೆ ಸಿಎಂ-ಡಿಸಿಎಂ ಇಬ್ಬರೂ ಜೊತೆ ಜೊತೆಗೇ ಓಡಾಡುತ್ತಿದ್ದಾಗಲೂ, ಡಿಸಿಎಂ ಅವರು ಜಾರಿ ಮಾಡಲು ಹೊರಟಿರುವ ವಿವಾದಾತ್ಮಕ ಸುರಂಗ ಮಾರ್ಗದಂತಹ ಯೋಜನೆಗಳೂ ಸೇರಿ ಎಲ್ಲದರ ಬಗ್ಗೆಯೂ ಪರಸ್ಪರ ಸಮ್ಮತಿಯಿಂದಲೇ ಹೊರಟಿರುವಾಗಲ – ಬಿಜೆಪಿಯ ನಾಯಕರು ಭಿನ್ನಮತ ತಾರಕಕ್ಕೆ ಎಂದು ಹೇಳುತ್ತಾ ಇದ್ದರು. ಇವೆಲ್ಲವನ್ನೂ ಹೊಸ ಸರ್ಕಾರ ಸ್ಥಾಪನೆಯಾದ ಮೊದಲ ದಿನದಿಂದಲೇ ಹೇಳಲು ಶುರು ಮಾಡಿದರು. ನಿಜಕ್ಕೂ ಈ ಮಾಧ್ಯಮಗಳು ಘನತೆಯಿಂದ ವರ್ತಿಸಲಿಲ್ಲ.
ಇನ್ನು ಘನತೆ ಕಳೆದುಕೊಂಡ ಇನ್ನೊಂದು ಪುಟ್ಟ ವಿಭಾಗ ಈ ರಾಜ್ಯದಲ್ಲಿದೆ. ಅದು ಜಾತಿ ಸ್ವಾಮಿಗಳದ್ದು. ಇಡೀ ನಾಡು ಹತ್ತು ಹಲವು ಕಾರಣಗಳಿಂದ ಅಪಾರವಾಗಿ ಗೌರವಿಸುತ್ತಿದ್ದ ಸಿದ್ದಗಂಗೆಯ ಶಿವಕುಮಾರ ಸ್ವಾಮೀಜಿಗಳೇ, ಯಡಿಯೂರಪ್ಪನವರು ಜೈಲಿನಲ್ಲಿದ್ದಾಗ ಅಲ್ಲಿಗೆ ಹೋಗಿ ಬಂದಿದ್ದರು. ಆ ಮೂಲಕ ಈ ನಾಡಿನ (ಅದರಲ್ಲೂ ಬಲಾಢ್ಯ ಜಾತಿಗಳ) ಸ್ವಾಮೀಜಿಗಳ ಗೌರವ ಮಣ್ಣುಪಾಲಾಗಿತ್ತು. ಸ್ವಾಮೀಜಿಗಳು ಬಹಿರಂಗವಾಗಿ ಧಮಕಿ ಹಾಕುವುದು ಶುರುವಾಗಿಯೂ ಬಹಳ ಕಾಲವಾಗಿದೆ. ಸದಾನಂದಗೌಡರನ್ನು ಇಳಿಸಲು ಯಡಿಯೂರಪ್ಪನವರು ತೀರ್ಮಾನಿಸಿದಾಗ, ನಂಜಾವಧೂತ ಸ್ವಾಮೀಜಿ ಎಂಬ ಶಿರಾ ತಾಲೂಕಿನ ಮಠಾಧೀಶರು ದೊಡ್ಡದಾಗಿ ಕಣ್ಣುಬಿಟ್ಟು, ಮೂಗಿನ ಹೊಳ್ಳೆ ಅರಳಿಸಿ ಕೂಗು ಹಾಕಿದ್ದು ಇನ್ನೂ ನೆನಪಿನಲ್ಲಿದೆ. ಅಲ್ಲಿಯವರೆಗೆ ಇವರು ಯಾರು ಎಂದೇ ಯಾರಿಗೂ ಗೊತ್ತಿರಲಿಲ್ಲ. ಮೆರವಣಿಗೆಯೊಂದರ ಮುಂದೆ ನಿಂತು, ʼ1994ರಲ್ಲಿ ಏನಾಗಿತ್ತೋ, ಅದು ನೆನಪಿರಲಿʼ ಎಂದು ಈ ಕಾವಿಧಾರಿ ಹೇಳಿದ್ದರು. ಇವರೆಲ್ಲಾ ತಾವೇ ತಾವಾಗಿ ಇಂತಹದ್ದನ್ನು ಮಾಡುತ್ತಾರೋ ಅಥವಾ ಯಾರೋ ಚಿತಾವಣೆ ಮಾಡುತ್ತಾರೋ ಗೊತ್ತಿಲ್ಲ; ಸ್ವತಃ ಡಿ.ಕೆ.ಶಿವಕುಮಾರ್ ಎಂಬ ದಾಢಸಿ ರಾಜಕಾರಣಿಯೂ ನಡೆದುಕೊಳ್ಳದ ರೀತಿಯಲ್ಲಿ ಇಂತಹ ಸ್ವಾಮೀಜಿಗಳು ಜಾತಿ ವಿಚಾರ ಎತ್ತಿ ಸಾರ್ವಜನಿಕವಾಗಿ ಮಾತಾಡುವುದು ದುರಂತ ಮತ್ತು ಖಂಡನೀಯ.
ಇನ್ನು ಸಿದ್ದರಾಮಯ್ಯನವರ ವಿಚಾರಕ್ಕೆ ಬರುವುದಾದರೆ, ಅವರು ಮುಖ್ಯಮಂತ್ರಿಯಾಗುವುದೇ ತಮಗಿಷ್ಟವಿಲ್ಲ ಎಂದು ಈ ರಾಜ್ಯದ ಮಾಧ್ಯಮಗಳ ಒಂದು ಗುಂಪು ನಡೆದುಕೊಳ್ಳುತ್ತಾ ಬಂದಿದೆ. ಅವರ ಮೊದಲ ಅವಧಿಯಲ್ಲೂ– ಪೂರಾ ನಾಲ್ಕು ವರ್ಷಗಳ ಕಾಲ– ಸಿಎಂ ಬದಲಾವಣೆ ಸನ್ನಿಹಿತ ಎಂಬ ಸುದ್ದಿಗಳು ಪ್ರಕಟವಾಗುತ್ತಲೇ ಇದ್ದವು. ಅವರು ಸಿಎಂ ಆಗಿದ್ದ ಕಾಲದಲ್ಲಿ ಇನ್ನೊಬ್ಬರು ಆಕಾಂಕ್ಷಿ ಇರದೇ ಇದ್ದಾಗಲೂ ಇಂತಹ ಸುದ್ದಿ-ವಿಶ್ಲೇಷಣೆ-ಬ್ರೇಕಿಂಗ್ ನ್ಯೂಸ್‌ಗಳಿಗೆ ಕೊರತೆಯೇ ಇರಲಿಲ್ಲ.
ಇದನ್ನೂ ಓದಿ KSCA ಅಧ್ಯಕ್ಷ ಚುನಾವಣೆ ನಡೆಯುವುದು ಹೇಗೆ? ಸಂಸ್ಥೆ ಇತಿಹಾಸ; ಸಮಗ್ರ ಒಳನೋಟ
ಈ ಸಾರಿಯೂ ಇದೇ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಅವರೇ ಮಾಧ್ಯಮಗಳಿಗೆ ಬೆದರಿಕೆ ರೂಪದ ಪಾಠ ಮಾಡುವುದೂ ನಡೆದು ಹೋಯಿತು. ಇನ್ನು ಸಾಕು ನಿಲ್ಲಿಸ್ರೀ, ಎಷ್ಟಂತ ಅವನ್ನೇ ಕೇಳ್ತೀರಿ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಮಾತಾಡ್ರೀ ಅಂತ ಸ್ವತಃ ರಾಜಕಾರಣಿಗಳು ಮಾಧ್ಯಮಗಳಿಗೆ ಪಾಠ ಮಾಡುವ ಮಟ್ಟಿಗೆ ಈ ರಾಜ್ಯದಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭದ ನಡವಳಿಕೆ ಇದೆ.
ʼಮತ್ತೆ ಮೇಲೆದ್ದಿತು ದಲಿತ ಮುಖ್ಯಮಂತ್ರಿ ಕೂಗುʼ- ಎಂದು ಮಾಧ್ಯಮವೊಂದು ಹೇಳುವಾಗ, ದಲಿತ ಸಮುದಾಯದಿಂದ ಒಬ್ಬರು ಮುಖ್ಯಮಂತ್ರಿ ಆಗಲಿ ಎಂಬ ಯಾವ ಕಾಳಜಿಯೂ ಇರುವುದಿಲ್ಲ. ಬದಲಿಗೆ ಹಿಂದುಳಿದ ಸಮುದಾಯಕ್ಕೆ ಸೇರಿದ ಜನಪ್ರಿಯ ಮುಖ್ಯಮಂತ್ರಿಯೊಬ್ಬರನ್ನು ಹೇಗಾದರೂ ಇಳಿಸಬೇಕು ಎಂಬುದೇ ಅದರ ಹಿಂದೆ ಧ್ವನಿಸುತ್ತಿರುತ್ತದೆ. ಒಂದು ವೇಳೆ ಪರಿಶಿಷ್ಟ ಜಾತಿ, ಪಂಗಡಗಳಿಂದ ಅಂತಹ ದನಿ ಎದ್ದರೆ ಅದನ್ನು ಸಕಾರಾತ್ಮಕವಾಗಿ ನೋಡಬೇಕು ಎಂಬ ಸಂವೇದನೆಯೂ ಅಲ್ಲಿಲ್ಲ.
ಅದೇನೇ ಇರಲಿ, ಇಲ್ಲಿಯವರೆಗೆ ಘನತೆಯಿಂದ ನಡೆದುಕೊಂಡಿರುವ ಕಾಂಗ್ರೆಸ್ ನಾಯಕರು ಇನ್ನು ಮುಂದೆಯೂ ಹಾಗೆಯೇ ನಡೆದುಕೊಳ್ಳುತ್ತಾರೆಯೇ ಎಂಬ ಬಗ್ಗೆ ಯಾವ ಗ್ಯಾರಂಟಿಯೂ ಇಲ್ಲ. ಆದರೆ, ಮಾಧ್ಯಮಗಳಂತೂ ಇದುವರೆಗೆ ಹೇಗೆ ನಡೆದುಕೊಂಡಿದ್ದಾರೋ ಹಾಗೆಯೇ ನಡೆದುಕೊಳ್ಳುತ್ತಾರೆ ಎಂಬುದಂತೂ ನಿಶ್ಚಿತ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಬಾಲಕಿಯರಿಗೆ ಲೈಂಗಿಕ ಕಿರುಕುಳ; ಪೋಕ್ಸೋ ಆರೋಪಿಯ ಖುಲಾಸೆ, ಕಾಯ್ದೆಯ ಅಣಕವಲ್ಲವೇ?
ಕಡೆಯದಾಗಿ: ಮುಖ್ಯಮಂತ್ರಿ ಯಾರೆಂದು ತೀರ್ಮಾನಿಸುವುದು ʼಹೈಕಮಾಂಡ್ ಮತ್ತು ಶಾಸಕಾಂಗ ಪಕ್ಷʼ ಅಂತ ಇದುವರೆಗೂ ಕಾಂಗ್ರೆಸ್ಸಿನವರು ಹೇಳುತ್ತಿದ್ದರು. ಅದು ಕೇವಲ ಶಾಸಕರ ಸಂಖ್ಯೆ ಮಾತ್ರ ಅಲ್ಲ; ಪಕ್ಷಕ್ಕೊಂದು ತಾತ್ವಿಕತೆ ಇರುತ್ತದೆ. ಅದನ್ನು ಪ್ರತಿನಿಧಿಸುವವರನ್ನೂ ಅದು ಹುಡುಕಿಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಹಾಗಂತ ಶಾಸಕರ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲ ಎಂಬಂತೆಯೂ ಆಗಬಾರದು. ಆದರೆ, ಸಿದ್ದರಾಮಯ್ಯನವರನ್ನೂ ಒಳಗೊಂಡು ಎಲ್ಲರೂ ಈಗ ʼಹೈಕಮ್ಯಾಂಡ್ʼ ತೀರ್ಮಾನಿಸುತ್ತದೆ ಎಂದು ಹೇಳುವುದು ಪ್ರಜಾತಾಂತ್ರಿಕ ನಡವಳಿಕೆ ಅಲ್ಲ. ಪಕ್ಷ (ಇದರಲ್ಲಿ ಹೈಕಮಾಂಡ್, ಶಾಸಕಾಂಗ ಪಕ್ಷ, ಕಾರ್ಯಕರ್ತ ಗಣದ ಅನಿಸಿಕೆ ಎಲ್ಲವೂ ಇರಬಹುದು)ವು ಜನರ ಹಿತಕ್ಕೆ ಪೂರಕವಾದ ನಿರ್ಣಯ ತೆಗೆದುಕೊಳ್ಳುವುದು ಎಲ್ಲಕ್ಕಿಂತ ಮುಖ್ಯ. ಕಾಂಗ್ರೆಸ್ ಪಕ್ಷವು ಈಗ ಅಂತಹ ಪ್ರಬುದ್ಧತೆಯನ್ನು ತೋರುತ್ತದೆಯೇ ಎಂಬುದನ್ನು ಕಾದು ನೋಡಬೇಕು.





