ಇತ್ತೀಚೆಗೆ ಡಿಸೆಂಬರ್ 23-24 ರಂದು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ನೀನಾಸಂ ತಿರುಗಾಟದ ಎರಡು ನಾಟಕಗಳನ್ನು ಆಯೋಜಿಸಲಾಗಿತ್ತು. ಮೊದಲನೆಯ ದಿನ ಡಾ. ಎಂ. ಗಣೇಶ್ ನಿರ್ದೇಶನದ, ಬಾನು ಮುಸ್ತಾಕ್ ಅವರ ಕತೆಯ ಆಧರಿಸಿದ ‘ಹೃದಯದ ತೀರ್ಪು’ ಮತ್ತು ಎರಡನೆಯ ದಿನ ಮಲಯಾಳಂನ ಜಿ. ಶಂಕರ್ ಪಿಳ್ಳೆ ಅವರ ನಾ. ದಾ. ಶೆಟ್ಟಿಯವರ ಅನುವಾದಿತ ಮತ್ತು ಶಂಕರ್ ವೆಂಕಟೇಶ್ವರ್ ನಿರ್ದೇಶನದ, ನಾಟಕ ‘ಅವತರಣಮ್ ಭ್ರಾಂತಾಲಯಂ’. ನೀನಾಸಂನ ಕಲಾವಿದರು ಅದ್ಭುತವಾಗಿ ಅಭಿನಯಿಸಿದರು. ಆದರೂ, ಹಿಂದೆ ಇದ್ದ ಪ್ರೊಫೆಷನಲ್ ಕಸುಬುದಾರಿಕೆಯ ಕೊರತೆ, ದಿವಿನಾದ ರಂಗಶಿಸ್ತಿನ ಕೊರತೆ ಇತ್ತು. ಕೆಲವೊಮ್ಮೆ ಬಯಲು ನಾಟಕವೇನೋ ಅನ್ನಿಸಿತು. ಮೊದಲ ನಾಟಕಕ್ಕೆ ಉತ್ತಮ ಪ್ರತಿಕ್ರಿಯೆ ಇತ್ತು. ಆದರೆ ಎರಡನೇ ನಾಟಕ ವಿಭಿನ್ನ ಪ್ರಯೋಗವಾಗಿತ್ತು. ನಾಟಕ ಮುಗಿದ ಮೇಲೆ. ಯಾಕಾಗಿ ಈ ನಾಟಕ? ಎಂದು ನನ್ನ ಪಿಎಚ್ಡಿ ವಿದ್ಯಾರ್ಥಿ ಕೇಳಿದ. ನಕ್ಕೆ. ಅವನೂ ನಕ್ಕ. ಮತ್ತೆ ನಕ್ಕೆ, ಅವನು ಸುಮ್ಮನಾದ. ಗೊಂದಲ ಮತ್ತು ಯೋಚನೆಗೆ ಹಚ್ಚುವುದೇ ನಾಟಕ ಎಂದೆ. ಎಲ್ಲರೂ ನಕ್ಕೆವು. ಮತ್ತೆ ಯಾರೂ ಮಾತನಾಡಲಿಲ್ಲ, ಆದರೆ, ಆ ವಿದ್ಯಾರ್ಥಿಯ ಪ್ರಶ್ನೆ ತಲೆಯಲ್ಲಿ ಹಾಗೇ ಉಳಿಯಿತು.
ಕಳೆದ ಮೂರು ದಶಕಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ತಿರುಗಾಟದ ನಾಟಕಗಳನ್ನು ನೋಡಿದ್ದೇನೆ. ಅವುಗಳಲ್ಲಿ ನೆನಪಿಗೆ ಬರುವಂತಹವು “ಹಬ್ಬದ ಹನ್ನೆರಡನೆ ರಾತ್ರಿ”. ಮೀಡಿಯಾ, ಗುಣಮುಖ, ಸಾಂಗ್ಯಾ ಬಾಳ್ಯಾ, ವಿಗಡವಿಕ್ರಮ, ಕೃಷ್ಣಗೌಡರ ಆನೆ ಹೀಗೆ ಹತ್ತು ಹಲವಾರು. ನಾನು ಹಿಂದೆ ಆಯೋಜಿಸಿದ್ದ ಕಡೆಗಳಲ್ಲಿ ಅಂದರೆ ಮೈಸೂರು, ಮಂಡ್ಯ, ಮಂಗಳೂರು, ಕನಕಪುರ, ಉಡುಪಿ, ಸುರತ್ಕಲ್ ಕಡೆಗಳಲ್ಲಿ ನೀನಾಸಂ ನಾಟಕಗಳನ್ನು ನೋಡಿದ್ದೇನೆ.

(ಮಲಯಾಳಂನ ಜಿ. ಶಂಕರ್ ಪಿಳ್ಳೆ ಅವರ, ನಾ. ದಾ. ಶೆಟ್ಟಿಯವರ ಅನುವಾದಿತ ಮತ್ತು ಶಂಕರ್ ವೆಂಕಟೇಶ್ವರ್ ನಿರ್ದೇಶನದ, ನಾಟಕ ‘ಅವತರಣಮ್ ಭ್ರಾಂತಾಲಯಂ’ ನಾಟಕ)
ಅಲ್ಲಿ ಸೃಜನಶೀಲ ವ್ಯಕ್ತಿಗಳನ್ನು ಇತರೆ ಪ್ರಮುಖರು ಮತ್ತು ಮಾಧ್ಯಮದವರನ್ನು ಕರೆಸಿ, ಸಣ್ಣ ಔಪಚಾರಿಕ ಸಭೆ ನಡೆಸಿ, ಅಯ್ದ ಮತ್ತು ಆಸಕ್ತ ಸಭಿಕರ ಮುಂದೆ ನಾಟಕ ಪ್ರದರ್ಶನ ಮಾಡಲಾಗುತ್ತಿತ್ತು, ಅಳ್ವಾಸ್ ಸಂಸ್ಥೆಯವರಂತೂ ತಮ್ಮ ಸಂಘಟನಾ ಚತುರತೆಯಿಂದ ಸಾವಿರಾರು ಮಂದಿ ನಾಟಕವನ್ನು ನೋಡುವಂತೆ ಮಾಡುತ್ತಿದ್ದರು ಮತ್ತು ಹೀಗೆಯೇ ಮುಂದುವರೆಸುವ ಶಕ್ತಿಯನ್ನೂ ಹೊಂದಿದ್ದಾರೆ. ಮಂಡ್ಯದಲ್ಲಂತೂ ಡಾ. ಜಯಪ್ರಕಾಶ್ ಗೌಡ. ಶಿವರಾಮು, ಡಾ. ಮುದ್ದೇಗೌಡರು ಸೇರಿ ಟಿಕೆಟುಗಳನ್ನಿಟ್ಟೆ ತುಂಬಿದ ಮಂದಿರಗಳಲ್ಲಿ ನೀನಾಸಂ ನಾಟಕ ಆಯೋಜಿಸುತ್ತಿದ್ದರು. ಶಿವಮೊಗ್ಗ, ದಾವಣಗೆರೆ, ತುಮಕೂರು. ಮೈಸೂರಿನಲ್ಲಿಯೂ ನಾಟಕಗಳನ್ನು ಆಸ್ವಾದಿಸುವ ಬಳಗ ದೊಡ್ಡದಿದೆ. ಯಾಕೆ ನಾಟಕಗಳನ್ನು ಉಚಿತವಾಗಿ ಪ್ರದರ್ಶಿಸಬೇಕು ಅನ್ನುವುದೇ ನನ್ನ ಪ್ರಶ್ನೆ. ದುಡ್ಡು ಕೊಟ್ಟು ನೋಡುವ ಪ್ರೇಕ್ಷಕರನ್ನು ಹುಡುಕುವ ಮತ್ತು ತಲುಪುವ ಜವಾಬ್ದಾರಿ ನಮ್ಮ ಮೇಲಿದೆ.

ನಾಟಕಗಳ ಗೆಲುವು ನಿಂತಿರುವುದು ಕತೆ, ನಿರ್ದೇಶನ, ಪಾತ್ರವರ್ಗದ ಮೇಲಲ್ಲ. ಬದಲಿಗೆ ಅವುಗಳನ್ನು ಮಾರುಕಟ್ಟೆ ಮಾಡುವ ವಿಧಾನಗಳಲ್ಲಿ, ಅದಕ್ಕೆ ಉದಾಹರಣೆಯೆಂದರೆ ಬೆಂಗಳೂರಿನ ರಂಗಶಂಕರ, ಅವುಗಳ ಪ್ರಮೋಷನ್, ಬ್ರಾಂಡಿಗ್, ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ ಮತ್ತು ಇತರೆ ಪೂರಕ ವಿಧಾನಗಳು. ಅಲ್ಲಿ ತೀರಾ ಅಸಂಬದ್ಧ ಅಥವಾ ಅಸಂಗತ ನಾಟಕಗಳಿಗೆ ಸಾಮಾನ್ಯವಾಗಿ ಅವಕಾಶವಿಲ್ಲ. ಯಾಕಂದ್ರೆ, ಜನ ಮನೆಯಿಂದ ಹೊರ ಬರುವುದು ಕೇವಲ ಮನರಂಜನೆಗಾಗಿ, ಖಂಡಿತ ಸಂಶೋಧನೆಗಾಗಿ ಅಲ್ಲ. ಸಿನಿಮಾಗಳಾಗಲಿ, ನಾಟಕಗಳಾಗಲಿ ತೀರಾ ಅಬ್ಲ್ಯಾಕ್ಸ್ ಗಳಾಗಬಾರದು. ಚಿತ್ರಕಲೆಗೆ ಅದು ಸಲ್ಲಬಹುದು. ಅಥವಾ ಕೇವಲ ನಾಟಕದ ವೃತ್ತಿಪರ ಆಸಕ್ತರಿಗಾಗಿ ಆಯೋಜಿಸಬಹುದು. ಇದರ ಪ್ರಯೋಗ ಮಾಡಲು, ನಾನು ನನ್ನ ಜೊತೆ ಯಾವಾಗಲೂ ನನ್ನ ವಿದ್ಯಾರ್ಥಿಗಳಾದ ಯುವಕ ಯುವತಿಯರನ್ನು ಕರೆದುಕೊಂಡು ನಾಟಕಗಳಿಗೆ ಹೋಗುತ್ತೇನೆ. ನಂತರ ಅವರ ಅಭಿಪ್ರಾಯಗಳನ್ನು ಪಡೆಯುತ್ತೇನೆ. ಈ ರೀತಿ ಹಲವಾರು ಬಾರಿ ಪ್ರಯೋಗ ಮಾಡಿದ್ದೇನೆ. ತೀರಾ ವಿಡಂಬನಾತ್ಮಕ ನಾಟಕಗಳು ಬಹುಪಾಲು ಪ್ರೇಕ್ಷಕರನ್ನು ತಲುಪುವುದಿಲ್ಲ. ಸಿನಿಮಾಗಳಂತೆ ನಾಟಕಗಳು ಪ್ರೇಕ್ಷಕರ ನಾಡಿಮಿಡಿತ ಅರಿಯಬೇಕಿಲ್ಲ. ಆದರೆ ನೋಡಿದ ಹೆಚ್ಚು ಜನಕ್ಕೆ ಅರ್ಥವಾಗಬೇಕು. ಒಂದು ಜಿಲ್ಲಾ ಕೇಂದ್ರದಲ್ಲಿ ಕೇವಲ ಎಂಬತ್ತರಿಂದ ನೂರು ಜನ ಸೇರುತ್ತಾರೆ ಎಂದರೆ, ಅದು ನಾಟಕದ ಸೋಲಲ್ಲ. ಆಯೋಜನೆಯ ಸೋಲು. ಅಲ್ಲಿ ಆಯೋಜಕರ ದಂಡೇ ಇತ್ತು. ಅರೆಹೊಳೆ ಪ್ರತಿಷ್ಠಾನ, ಅಸ್ತಿತ್ವ, ಮಂಗಳೂರು, ರಂಗಸಂಗಾತಿ, ಮಂಗಳೂರು, ಕೆನರಾ ಕಲ್ಚರಲ್ ಅಕಾಡೆಮಿ ಮತ್ತು ರೂವಾರಿ ಡಾಟ್ ಕಾಮ್ ಎಲ್ಲರೂ ಇದ್ದರು. ಒಂದೊಂದು ತಂಡವೂ 50 ಜನರನ್ನೂ ತಂದಿದ್ದರೂ ಅಲ್ಲಿ ಸಂಭ್ರಮವೇ ಇರುತ್ತಿತ್ತು. ಈ ಊರಿನಲ್ಲಿ ಹಣವಂತ ಸಂಸ್ಥೆಗಳಿಗೇನೂ ಕಮ್ಮಿಯಿಲ್ಲ. ಅವರ ಪ್ರಾಯೋಜಕತ್ವವನ್ನು ಪಡೆಯಬೇಕು. ನಾಟಕ ನೋಡದ ಸ್ಥಿತಿವಂತರಿಗೆ ದುಬಾರಿ ಬೆಲೆಗೆ ಟಿಕೇಟುಗಳನ್ನು ಮಾರಬೇಕು. ಇಂತಹ ಮೋಸ್ಟ್ ವೈಬ್ರೆಂಟ್ ಸಿಟಿಯಲ್ಲಿ ಪ್ರೇಕ್ಷಕರ ಕೊರತೆ ನನಗೆ ವೈಯಕ್ತಿಕವಾಗಿ ನೋವಾಯಿತು.
ಇದನ್ನು ಓದಿದ್ದೀರಾ? ಮೆಕ್ಕಾ | ಕಾಬಾದ ಮಸೀದಿಯಲ್ಲಿ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ: ಜೀವದ ಹಂಗು ತೊರೆದು ರಕ್ಷಿಸಿದ ಭದ್ರತಾ ಸಿಬ್ಬಂದಿ
ಆಯೋಜಕರ ಸಮರ್ಥನೆ, ಸಮಜಾಯಿಷಿಗಳು ಏನೇ ಇದ್ದರೂ, ನನ್ನ ನೋವು ಹೀಗೆ ಇರುತ್ತದೆ. ಆದರೆ, ನಾವು ನಾಟಕಕಾರರು, ರಂಗಾಸಕ್ತರು, ನಟನಟಿಯರು, ಆಯೋಜಕರು ಸೋಲುವುದಿಲ್ಲ. ಬದಲಾದ ರೂಪುರೇಷೆಗಳೊಂದಿಗೆ ಮತ್ತೆ ಬರುತ್ತೇವೆ. ನೀವೂ ಬದಲಾಗಿ. ಸೃಜನಶೀಲ ಕಲೆಗಳಿಂದ ವಿಮುಕ್ತರಾಗಬೇಡಿ, ಬದುಕು ನೀರಸವಾಗಿಬಿಡುತ್ತದೆ. ಒಂದು ಕೆಟ್ಟ ಸಿನಿಮಾ ನೋಡುವ ಬದಲು, ಹತ್ತು ನಾಟಕಗಳನ್ನು ನೋಡಿ, ಬದುಕು ಗೆಲ್ಲುತ್ತದೆ…ಜೊತೆಗೆ ನಾಟಕವೂ.

ಡಾ. ಶಿವಕುಮಾರ್ ಮಗದ
ಜಲ ಕೃಷಿಯಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ 32 ವರ್ಷಗಳ ಅನುಭವ ಹೊಂದಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿಯೂ 30 ವರ್ಷಗಳ ಅನುಭವ ಹೊಂದಿದ್ದಾರೆ. ಮಂಗಳೂರಿನ ಎಕ್ಕೂರಿನಲ್ಲಿರುವ ಮೀನುಗಾರಿಕೆ ಕಾಲೇಜಿನಲ್ಲಿ ಡೀನ್ ಆಗಿದ್ದರು. ಸದ್ಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 16 ಪುಸ್ತಕಗಳು ಸೇರಿದಂತೆ 22 ಸಂಶೋಧನಾ ಪ್ರಬಂಧಗಳು, ಹಲವಾರು ಲೇಖನಗಳನ್ನೂ ಬರೆದಿದ್ದಾರೆ.




