ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು ಮರೆತಂತೆ ಕಾಣುತ್ತದೆ. ವಾರಣಾಸಿಯ ಘಾಟ್‌ಗಳಲ್ಲಿ ನಿತ್ಯವೂ ನೂರಾರು ಮೃತದೇಹಗಳನ್ನು ಸುಡಲಾಗುತ್ತದೆ. ಈ ಹೆಣಗಳ ಬೂದಿ, ಅರ್ಧ ಸುಟ್ಟ ದೇಹಗಳು ಮತ್ತು ಅನ್ಯ ಪೂಜಾ ಸಾಮಗ್ರಿಗಳನ್ನು ನೇರವಾಗಿ ನದಿಯೊಳಗೆ ಬಿಡಲಾಗುತ್ತದೆ. ಇದು ನದಿಯ ನೀರನ್ನು ಅತ್ಯಂತ ಕಲುಷಿತಗೊಳಿಸಿ, ಸಾಧಾರಣ ಸ್ನಾನಕ್ಕೂ ಯೋಗ್ಯವಿಲ್ಲದ ಸ್ಥಿತಿಗೆ ತಂದಿಟ್ಟಿದೆ
ವಾರಣಾಸಿಯ ಪವಿತ್ರ ಗಂಗಾ ನದಿಗೆ ಕಾನೂನು ಮತ್ತು ನ್ಯಾಯದ ಎರಡು ಮುಖಗಳಿವೆಯೇ? ನದಿಯ ಒಡಲಲ್ಲಿ ತೇಲುವ ಐಷಾರಾಮಿ ಹಡಗುಗಳಲ್ಲಿ ಉಳ್ಳವರು ಬಗೆಬಗೆಯ ಮಾಂಸಾಹಾರ ಸವಿಯುತ್ತಾ ಮೋಜು ಮಾಡಿದರೆ ಅದು ‘ಪ್ರವಾಸೋದ್ಯಮ’ ಎನಿಸಿಕೊಳ್ಳುತ್ತದೆ. ಕೈಗಾರಿಕೆಗಳ ವಿಷಕಾರಿ ರಾಸಾಯನಿಕಗಳು, ಸಾವಿರಾರು ಮೃತದೇಹಗಳ ಬೂದಿ ನಿರಂತರವಾಗಿ ನದಿ ಸೇರುತ್ತಿದ್ದರೂ ವ್ಯವಸ್ಥೆ ಜಾಣಕುರುಡು ಪ್ರದರ್ಶಿಸುತ್ತದೆ. ಆದರೆ, ದಿನವಿಡೀ ದುಡಿದು ಸುಸ್ತಾದ 14 ಮಂದಿ ಬಡ ಸೀರೆ ಅಂಗಡಿ ಕಾರ್ಮಿಕರು ಅದೇ ಗಂಗೆಯ ಮೇಲೊಂದು ಸಣ್ಣ ದೋಣಿಯಲ್ಲಿ ಕುಳಿತು ರಂಜಾನ್ ಹಬ್ಬದ ‘ಇಫ್ತಾರ್’ ಆಚರಿಸಿ ಚಿಕನ್ ಬಿರಿಯಾನಿ ತಿಂದರೆ, ಅದು ‘ನಂಬಿಕೆಯ ಅಪಮಾನ’ವಾಗಿ ಬಿಂಬಿತವಾಗುತ್ತದೆ! ಸಾವಿರಾರು ಕೋಟಿ ಸುರಿದರೂ ಕಲ್ಮಶ ಮುಕ್ತವಾಗದ ಗಂಗೆಯ ನೈಜ ಮಾಲಿನ್ಯವನ್ನು ಮುಚ್ಚಿಹಾಕಲು, ಈಗ ‘ಕೋಮು ರಾಜಕಾರಣ’ದ ಬಣ್ಣ ಬಳಿಯಲಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಹುಟ್ಟಿಕೊಂಡಿದೆ. ವಾರಣಾಸಿಯಲ್ಲಿ ಇತ್ತೀಚೆಗೆ ನಡೆದ 14 ಯುವಕರ ಬಂಧನ ಪ್ರಕರಣ, ವ್ಯವಸ್ಥೆಯ ಇಬ್ಬಗೆಯ ನೀತಿಗೆ ಕನ್ನಡಿ ಹಿಡಿದಿದೆ.
ವಾರಣಾಸಿಯ ಗಂಗಾ ನದಿಯಲ್ಲಿ ದೋಣಿಯ ಮೇಲೆ ಇಫ್ತಾರ್ ಆಚರಿಸಿ, ತ್ಯಾಜ್ಯವನ್ನು ನದಿಗೆ ಎಸೆದರು ಎಂಬ ಆರೋಪದ ಮೇಲೆ 20-25 ವರ್ಷ ವಯಸ್ಸಿನ 14 ಮಂದಿ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ ಆಧರಿಸಿ, ಭಾರತೀಯ ಜನತಾ ಯುವ ಮೋರ್ಚಾ (BJYM) ಮುಖಂಡರು ನೀಡಿದ ದೂರಿನ ಮೇರೆಗೆ, ಬಿಎನ್‌ಎಸ್ ಸೆಕ್ಷನ್ 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೆಲವು ರಾಷ್ಟ್ರೀಯ ವಾಹಿನಿಗಳು ಇದನ್ನು “ಕಾಶಿಯಲ್ಲಿ ನಂಬಿಕೆಯ ಅಪಮಾನ” ಎಂದು ಭಾರಿ ಚರ್ಚೆ ನಡೆಸುತ್ತಿವೆ. ಆದರೆ, ಇದರ ಹಿಂದಿನ ಕಠೋರ ವಾಸ್ತವ ಬೇರೆಯೇ ಇದೆ.
ಗಂಗಾ ನದಿಯಲ್ಲಿ ಕೇವಲ ಸಣ್ಣ ದೋಣಿಗಳು ಮಾತ್ರ ಸಂಚರಿಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅನೇಕ ಐಷಾರಾಮಿ ಕ್ರೂಸ್‌ಗಳು ಮತ್ತು ಪ್ರವಾಸೋದ್ಯಮ ಹಡಗುಗಳು ಗಂಗಾ ನದಿಯ ಮೇಲೆ ಯಥೇಚ್ಛವಾಗಿ ಪ್ರಯಾಣಿಸುತ್ತಿವೆ. ಈ ಐಷಾರಾಮಿ ಹಡಗುಗಳಲ್ಲಿ ದೇಶ-ವಿದೇಶದ ಪ್ರವಾಸಿಗರಿಗೆ ಚಿಕನ್, ಹಂದಿ ಮಾಂಸ , ಕುರಿ ಮಾಂಸ ಸೇರಿದಂತೆ ವಿವಿಧ ಬಗೆಯ ಮಾಂಸಾಹಾರಿ ಖಾದ್ಯಗಳನ್ನು ನೀಡಲಾಗುತ್ತದೆ. ಈ ಪ್ರಯಾಣದ ಸಂದರ್ಭದಲ್ಲಿ ಉಳಿದ ಆಹಾರ, ಮಾಂಸದ ತ್ಯಾಜ್ಯಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನದಿಯ ದಡಕ್ಕೆ ಅಥವಾ ನೇರವಾಗಿ ನದಿಯೊಳಗೆ ಎಸೆಯುತ್ತಿರುವ ಉದಾಹರಣೆಗಳಿವೆ. ಆದರೆ, ಅವರ ಮೇಲೆ ಯಾವುದೇ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಆರೋಪ ಹೊರಿಸಲಾಗುತ್ತಿಲ್ಲ ಅಥವಾ ಬಂಧನವಾಗುತ್ತಿಲ್ಲ. ಕೇವಲ ಕೆಲವು ಸ್ಥಳೀಯ ಯುವಕರು ತಮ್ಮ ಪವಿತ್ರ ರಂಜಾನ್ ತಿಂಗಳಲ್ಲಿ ಇಫ್ತಾರ್ ಆಚರಿಸಿದ್ದು, ಭಾರಿ ಅಪರಾಧವಾಗಿ ಕಂಡಿದೆ.
ಗಂಗಾ ನದಿಯ ಪವಿತ್ರತೆಯ ಬಗ್ಗೆ ಮಾತನಾಡುವವರು, ನದಿಯ ನೈಜ ಮಾಲಿನ್ಯದ ಮೂಲಗಳನ್ನು ಮರೆತಂತೆ ಕಾಣುತ್ತದೆ. ವಾರಣಾಸಿಯ ಘಾಟ್‌ಗಳಲ್ಲಿ ನಿತ್ಯವೂ ನೂರಾರು ಮೃತದೇಹಗಳನ್ನು ಸುಡಲಾಗುತ್ತದೆ. ಈ ಹೆಣಗಳ ಬೂದಿ, ಅರ್ಧ ಸುಟ್ಟ ದೇಹಗಳು ಮತ್ತು ಅನ್ಯ ಪೂಜಾ ಸಾಮಗ್ರಿಗಳನ್ನು ನೇರವಾಗಿ ನದಿಯೊಳಗೆ ಬಿಡಲಾಗುತ್ತದೆ. ಇದು ನದಿಯ ನೀರನ್ನು ಅತ್ಯಂತ ಕಲುಷಿತಗೊಳಿಸಿ, ಸಾಧಾರಣ ಸ್ನಾನಕ್ಕೂ ಯೋಗ್ಯವಿಲ್ಲದ ಸ್ಥಿತಿಗೆ ತಂದಿಟ್ಟಿದೆ.
ಇದನ್ನು ಓದಿದ್ದೀರಾ? ಪೆಟ್ರೋಲ್-ಡೀಸೆಲ್ ಧಾರಾಳ; ಭಾರತದಲ್ಲಿ ಅಡುಗೆ ಅನಿಲಕ್ಕೆ ಹಾಹಾಕಾರ ಎದ್ದಿರುವುದೇಕೆ?
ಕಳೆದ ಹತ್ತಾರು ವರ್ಷಗಳಿಂದ, ವಿವಿಧ ಸರ್ಕಾರಗಳು ಗಂಗಾ ನದಿಯನ್ನು ಶುದ್ಧಿಗೊಳಿಸಲು ಸಾವಿರಾರು ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿವೆ. ಆದರೂ ನದಿಯು ಮಾಲಿನ್ಯ ಮುಕ್ತವಾಗಿಲ್ಲ. ನದಿಯ ಉದ್ದಕ್ಕೂ ಇರುವ ಕೈಗಾರಿಕೆಗಳ ತ್ಯಾಜ್ಯ ಮತ್ತು ಒಳಚರಂಡಿ ನೀರು ನೇರವಾಗಿ ಗಂಗೆಯನ್ನು ಸೇರುತ್ತಿದೆ. ಈ ವಾಸ್ತವಗಳನ್ನು ಬದಿಗಿಟ್ಟು, ಕೇವಲ 14 ಮಂದಿ ಸ್ಥಳೀಯ ಕಾರ್ಮಿಕರನ್ನು ಬಂಧಿಸಿ ‘ಗಂಗಾ ಪವಿತ್ರತೆ’ಯ ಹೆಸರಿನಲ್ಲಿ ಕೋಮು ರಾಜಕೀಯ ಮಾಡುವುದು ಎಷ್ಟರಮಟ್ಟಿಗೆ ನ್ಯಾಯ?
ಗಂಗಾ ನದಿಯನ್ನು ಒಂದು ವಿಶೇಷ ಧಾರ್ಮಿಕ ಸಂಕೇತವಾಗಿ ಬಿಂಬಿಸಿ, ಅದರಲ್ಲಿ ಇಫ್ತಾರ್ ಮಾಡಿದ್ದು ನಂಬಿಕೆಗೆ ಅಪಮಾನ ಎಂದು ಬಿಎನ್‌ಎಸ್ 298 ಅಡಿಯಲ್ಲಿ ಕೇಸು ದಾಖಲಿಸುವ ಮೂಲಕ, ಒಂದು ನಿರ್ದಿಷ್ಟ ಸಮುದಾಯವನ್ನು ಗುರಿ ಮಾಡಲಾಗಿದೆ. ನದಿ ಎಂದರೆ ಅದು ಎಲ್ಲರಿಗೂ ಸೇರಿದ್ದು. ಅದರಲ್ಲಿ ಸ್ನಾನ ಮಾಡುವುದು, ದೋಣಿ ವಿಹಾರ ಮಾಡುವುದು ಅಥವಾ ತಮ್ಮ ಆಹಾರವನ್ನು ಸೇವಿಸುವುದು ಎಲ್ಲರಿಗೂ ಇರುವ ಹಕ್ಕು. ಈ 14 ಯುವಕರು ತ್ಯಾಜ್ಯವನ್ನು ನದಿಯ ನೀರಿಗೆ ಎಸೆದಿದ್ದರೆ, ಅದನ್ನು ಸಾಮಾನ್ಯ ಸಾರ್ವಜನಿಕ ಸ್ವಚ್ಛತೆಯ ಅಥವಾ ಪರಿಸರ ನಿಯಮಗಳ ಉಲ್ಲಂಘನೆ ಎಂದು ಪರಿಗಣಿಸಿ ದಂಡಿಸಬಹುದಿತ್ತು. ಆದರೆ ಅದನ್ನು ಧಾರ್ಮಿಕ ಭಾವನೆಗೆ ಬೇಕೆಂತಲೇ ಧಕ್ಕೆ ತರಲು ಮಾಡಿದ ಕೃತ್ಯ ಎಂದು ಬಿಂಬಿಸುವುದು ಸ್ಪಷ್ಟವಾಗಿ ಯುವಕರನ್ನು ಭಯದಲ್ಲಿ ಇಡುವ ಮತ್ತು ಕೋಮು ದ್ವೇಷವನ್ನು ಸೃಷ್ಟಿಸುವ ಪ್ರಯತ್ನವಾಗಿದೆ.
‘ಗಂಗೆ’ ಕೇವಲ ಒಂದು ನದಿಯಲ್ಲ, ಅದು ಈ ದೇಶದ ಜೀವನಾಡಿ. ಅದನ್ನು ಕಲುಷಿತ ಮುಕ್ತ ಮಾಡಬೇಕು ಎಂಬುದು ಪ್ರತಿಯೊಬ್ಬ ಭಾರತೀಯನ ಆಶಯ. ಆದರೆ ಐಷಾರಾಮಿ ಪ್ರವಾಸಿ ಹಡಗುಗಳಿಗೆ ಒಂದು ನ್ಯಾಯ, ಶ್ರಮಿಕ ಯುವಕರಿಗೆ ಒಂದು ನ್ಯಾಯ ಎಂಬ ಭೇದಭಾವ ಇರಬಾರದು. ಸಾವಿರಾರು ಕೋಟಿ ರೂ.ಗಳ ಯೋಜನೆಗಳು ನದಿಯ ಮಾಲಿನ್ಯವನ್ನು ತೊಲಗಿಸಲು ವಿಫಲವಾಗಿರುವ ಈಗಿನ ಸ್ಥಿತಿಯಲ್ಲಿ, ವ್ಯವಸ್ಥೆ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ಜನರ ಗಮನವನ್ನು ಬೇರೆಡೆ ಸೆಳೆಯಲು ‘ಕೋಮು ಭಾವನೆಯನ್ನು’ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರ ಮನಸ್ಸಿನಲ್ಲಿ ಮೂಡುತ್ತಿದೆ. ಕಾನೂನು ಮತ್ತು ಸಮಾನ ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು, ಅಲ್ಲದೆ ಅದು ಸಮಾಜದಲ್ಲಿ ಕೋಮು ದ್ವೇಷ ಸೃಷ್ಟಿಸುವ ಸಾಧನವಾಗಬಾರದು.





