2025ರಲ್ಲಿ ಹಿಂದುತ್ವವಾದಿ ಸಂಘಟನೆಗಳು ಮತ್ತು ಬಿಜೆಪಿ ನಡೆಸಿರುವ ಮೆರವಣಿಗೆಗಳಿಂದ ಹಿಡಿದು ವೇದಿಕೆಗಳವರೆಗೆ ಎಲ್ಲೆಡೆ ಕೋಮುದ್ವೇಷವೇ ದಿನಚರಿಯಾಗಿತ್ತು. ಕಳೆದ ವರ್ಷ ನಡೆದ ಒಟ್ಟು ಕಾರ್ಯಕ್ರಮಗಳಲ್ಲಿ ಪರಿಶೀಲಿಸಲಾದ 1,318 ವ್ಯಕ್ತಿಗತ ಕಾರ್ಯಕ್ರಮಗಳು ಕೋಮುದ್ವೇಷ ಭಾಷಣವನ್ನು ಹೊಂದಿದ್ದವು. ಈ ಪೈಕಿ, 88%ರಷ್ಟು ದ್ವೇಷ ಪ್ರಚಾರದ ಸಭೆ, ಕಾರ್ಯಕ್ರಮ, ರ್ಯಾಲಿಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆದಿವೆ ಎಂದು ವರದಿಯೊಂದು ಬಹಿರಂಗಪಡಿಸಿದೆ.
ಇಂಡಿಯಾ ಹೇಟ್ ಲ್ಯಾಬ್ (ಐಎಚ್‌ಎಲ್) ಇತ್ತೀಚೆಗೆ ವರದಿಯನ್ನು ಬಿಡುಗಡೆ ಮಾಡಿದೆ. ವರದಿಯು ಸಾರ್ವಜನಿಕ ಸಭೆ, ಸಮಾವೇಶಗಳಂತಹ ಜನಸಮೂಹವಿದ್ದ ಸ್ಥಳಗಳಲ್ಲಿ ದ್ವೇಷ ಭಾಷಣವನ್ನು ವಿಶ್ಲೇಷಿಸಿದೆ. ಸಾಮಾಜಿಕ ಜಾಲತಾಣದಲ್ಲಿನ ದ್ವೇಷ ಭಾಷಣಗಳನ್ನು ವಿಶ್ಲೇಷಿಸಿಲ್ಲ. 2025ರಲ್ಲಿ ದೇಶಾದ್ಯಂತ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು 1,318 ದ್ವೇಷ ಭಾಷಣ ಕಾರ್ಯಕ್ರಮ/ಘಟನಾವಳಿಗಳು ನಡೆದಿವೆ ಎಂಬುದನ್ನು ವರದಿ ಬಹಿರಂಗಪಡಿಸಿದೆ. 21 ರಾಜ್ಯಗಳು, 1 ಕೇಂದ್ರಾಡಳಿತ ಪ್ರದೇಶ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಘಟನೆಗಳನ್ನು ವಿಶ್ಲೇಷಿಸಿದೆ. 2024ಕ್ಕೆ ಹೋಲಿಸಿದರೆ 13%ರಷ್ಟು ದ್ವೇಷ ಭಾಷಣಗಳು ಹೆಚ್ಚಾಗಿವೆ. 2023ಕ್ಕೆ ಹೋಲಿಸಿದರೆ ಬರೋಬ್ಬರಿ 97% ಹೆಚ್ಚಾಗಿದೆ. ಆ ವರ್ಷ 668 ಘಟನೆಗಳು ದಾಖಲಾಗಿದ್ದವು, 2025ರಲ್ಲಿ 1,318 ಘಟನೆಗಳು ದಾಖಲಾಗಿವೆ. ಪ್ರತಿದಿನ ಸರಾಸರಿ 4 ದ್ವೇಷ ಭಾಷಣಗಳು ದಾಖಲಾಗಿವೆ.
ಇದು, ಕೇವಲ ಸಂಖ್ಯೆಯಲ್ಲಿನ ಏರಿಕೆ ಮಾತ್ರವಲ್ಲ. ದ್ವೇಷ ಭಾಷಣವು ಇನ್ನು ಮುಂದೆ ಚುನಾವಣಾ ಪ್ರಚಾರಗಳು ಅಥವಾ ಹಠಾತ್ ಘರ್ಷಣೆಗಳಿಗೆ ಸೀಮಿತವಾಗಿಲ್ಲ. ಅವು ಸಾರ್ವಜನಿಕ ಸಭೆಗಳಲ್ಲಿ – ರಾಜಕೀಯ ರ್ಯಾಲಿಗಳು, ಧಾರ್ಮಿಕ ಮೆರವಣಿಗೆಗಳು, ಪ್ರತಿಭಟನಾ ಮೆರವಣಿಗೆಗಳು ಹಾಗೂ ರಾಷ್ಟ್ರೀಯತಾವಾದಿ ಕಾರ್ಯಕ್ರಮಗಳಲ್ಲಿ – ನಿರಂತರವಾಗಿ ವ್ಯಾಪಿಸುತ್ತಿವೆ ಎಂಬುದನ್ನು ಸೂಚಿಸುತ್ತದೆ.
2023ಕ್ಕೆ ಹೋಲಿದರೆ, 2024 ಮತ್ತು 2025ರಲ್ಲಿ ದ್ವೇಷ ಭಾಷಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗಿದೆ. ಇದು, ತೀವ್ರ ಬಲಪಂಥೀಯ ಪ್ರಚೋದನೆಯನ್ನು ಹೆಚ್ಚುತ್ತಿದೆ. ಚುನಾವಣಾ ಸಂದರ್ಭಗಳ ಹೊರತಾಗಿಯೂ ದ್ವೇಷ ಭಾಷಣಗಳು ವ್ಯಾಪಕವಾಗಿ ನಡೆದಿವೆ. ಧಾರ್ಮಿಕ ಕಾರ್ಯಕ್ರಮಗಳಿಗೂ ದ್ವೇಷವು ವಿಸ್ತರಿಸಿದೆ ಎಂದು ವರದಿ ವಿವರಿಸಿದೆ.
ವರದಿಯ ಮುಖ್ಯ ಅಂಶಗಳಲ್ಲಿ ಭೌಗೋಳಿಕ ಮತ್ತು ರಾಜಕೀಯವೂ ಒಂದು. 1,318 ಘಟನೆಗಳಲ್ಲಿ, 1,164 ಘಟನೆಗಳು (88%) ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದಿವೆ. ಅದರಲ್ಲೂ, ಉತ್ತರ ಪ್ರದೇಶ (266), ಮಹಾರಾಷ್ಟ್ರ (193), ಮಧ್ಯಪ್ರದೇಶ (172), ಉತ್ತರಾಖಂಡ (155) ಹಾಗೂ ದೆಹಲಿ (76) – ಒಟ್ಟಾರೆಯಾಗಿ ಮೂರನೇ ಎರಡರಷ್ಟು ಪಾಲು ಹೊಂದಿವೆ. ಅಂತಹ ಘಟನೆಗಳಲ್ಲಿ ಬಿಜೆಪಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿದೆ. 2024ರಲ್ಲಿ ಬಿಜೆಪಿ ಆಡಳಿತದಲ್ಲಿರುವ ಪ್ರದೇಶಗಳಲ್ಲಿ ದಾಖಲಾಗಿದ್ದ 931 ಘಟನೆಗಳಿಗೆ ಹೋಲಿಸಿದರೆ, 25% ಹೆಚ್ಚಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ, ವಿರೋಧ ಪಕ್ಷಗಳು ಆಡಳಿತದಲ್ಲಿರುವ ಏಳು ರಾಜ್ಯಗಳಲ್ಲಿ 154 ದ್ವೇಷ ಭಾಷಣ ಘಟನೆಗಳು ದಾಖಲಾಗಿವೆ. 2024ರಲ್ಲಿ ಆ ರಾಜ್ಯಗಳಲ್ಲಿ 234 ಘಟನೆಗಳು ದಾಖಲಾಗಿದ್ದವು. ಅಂದರೆ, ಕಳೆದ ವರ್ಷ 34% ಕಡಿಮೆಯಾಗಿದೆ.
ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ಸಂಖ್ಯೆಗಳು ಕೇವಲ ದ್ವೇಷ ಭಾಷಣದ ಹೆಚ್ಚಳವನ್ನು ಮಾತ್ರ ಸೂಚಿಸುವುದಿಲ್ಲ. ಜೊತೆಗೆ, ರಾಜಕೀಯ ಅನುಮತಿಯನ್ನೂ ಒಳಗೊಂಡಿದೆ. ಆ ರಾಜ್ಯಗಳಲ್ಲಿ ಸಾರ್ವಜನಿಕ ದ್ವೇಷವನ್ನು ಪ್ರಚೋದಿಸಲು ಮತ್ತು ಸಂಘಟಿಸಲು ಸುಲಭ ಅವಕಾಶಗಳಿವೆ.
2025ರಲ್ಲಿ ದಾಖಲಾದ ಒಟ್ಟು ದ್ವೇಷ ಘಟನೆಗಳಲ್ಲಿ 98% ಘಟನೆಗಳು ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ. ಜೊತೆಗೆ, ವಿಶೇಷ ಸಂದರ್ಭಗಳಲ್ಲಿ ಕ್ರಿಶ್ಚಿಯನ್ ವಿರೋಧಿ ದ್ವೇಷವೂ ತೀವ್ರವಾಗಿ ಏರಿಕೆ ಕಂಡಿದೆ. ದಾಖಲಾಗಿರುವ 1,318 ಘಟನೆಗಳಲ್ಲಿ 1,289 (98%) ಮುಸ್ಲಿಮರನ್ನು ಗುರಿಯಾಗಿಸಿಕೊಂಡಿವೆ. 162 ಪ್ರಕರಣಗಳಲ್ಲಿ ಕ್ರಿಶ್ಚಿಯನ್ನರ ವಿರುದ್ಧದ ದ್ವೇಷವನ್ನು ಪ್ರಚೋದಿಸಿವೆ. ಈ ಪೈಕಿ, 29 ಘಟನೆಗಳು ಕ್ರಿಶ್ಚಿಯನ್ನರನ್ನು ನೇರವಾಗಿ ಗುರಿಯಾಗಿಸಿಕೊಂಡಿದ್ದರೆ, 133 ಪ್ರಕರಣಗಳು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡಿವೆ.
ಮುಸ್ಲಿಂ ವಿರೋಧಿ ಪ್ರಚೋದನೆಯು ಸಮಾಜದೊಳಗೆ ಸೈದ್ಧಾಂತಿಕ ತಿರುಳಾಗಿ ಉಳಿದಿದ್ದರೂ, ಕ್ರಿಶ್ಚಿಯನ್ನರ ವಿರುದ್ಧದ ದ್ವೇಷವನ್ನು ಸಾಮಾನ್ಯೀಕರಿಸಲಾಗುತ್ತಿದೆ.
2025ರಲ್ಲಿ ದಾಖಲಾದ ದ್ವೇಷ ಭಾಷಣದ ಬಹುಪಾಲು ಭಾಗವು ಪಿತೂರಿ ನಿರೂಪಣೆಗಳನ್ನು ಅವಲಂಬಿಸಿದೆ. ಒಟ್ಟು ಘಟನೆಗಳಲ್ಲಿ 656 ದ್ವೇಷ ಭಾಷಣಗಳು (50%) ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಜನಸಂಖ್ಯಾ ಜಿಹಾದ್, ವೋಟ್ ಜಿಹಾದ್, ಶಿಕ್ಷಣ ಜಿಹಾದ್, ಡ್ರಗ್ ಜಿಹಾದ್ ಹಾಗೂ ಉಗುಳು ಜಿಹಾದ್ ನಂತರ ಹೊಸ ಕಲ್ಪನೆಗಳನ್ನು ಸೃಷ್ಟಿಸಿವೆ.
ಈ ಜಿಹಾದ್ ಆಧಾರಿತ ದ್ವೇಷವು ದೈನಂದಿನ ಸಂಘಟಿತ ಅಲ್ಪಸಂಖ್ಯಾತ ಆಕ್ರಮಣದ ಆತಂಕಗಳನ್ನು ಸೃಷ್ಟಿಸಿವೆ. ನಂತರ, ಆತ್ಮರಕ್ಷಣೆಯ ಹೆಸರಿನಲ್ಲಿ ಬಹುಸಂಖ್ಯಾತರು ಪ್ರತೀಕಾರ – ಸಾಮಾಜಿಕ ಹೊರಗಿಡುವಿಕೆ, ಬಹಿಷ್ಕಾರ ಹಾಗೂ ಹಿಂಸಾಚಾರದಲ್ಲಿ – ತೊಡಗುವಂತೆ ಪ್ರೇರೇಪಿಸಿವೆ.
308 ಭಾಷಣಗಳು (23%) ಹಿಂಸಾಚಾರಕ್ಕೆ ಸ್ಪಷ್ಟ ಕರೆ ನೀಡಿವೆ.
136 ಭಾಷಣಗಳು ಶಸ್ತ್ರಾಸ್ತ್ರ ಹೊಂದಲು ನೇರ ಕರೆ ಕೊಟ್ಟಿವೆ.
120 ಭಾಷಣಗಳು ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರಗಳಿಗೆ ಕರೆ ನೀಡಿವೆ (2024ಕ್ಕಿಂತ 8% ಹೆಚ್ಚಳ).
276 ಭಾಷಣಗಳು ಮಸೀದಿಗಳು ಹಾಗೂ ಚರ್ಚ್‌ಗಳು ಸೇರಿದಂತೆ ಪೂಜಾ ಸ್ಥಳಗಳನ್ನು ಧ್ವಂಸಗೊಳಿಸಲು ಅಥವಾ ನಾಶಮಾಡಲು ಕರೆ ನೀಡಿವೆ.
141 ಭಾಷಣಗಳು ಅಮಾನವೀಯ ಭಾಷೆಯನ್ನು ಒಳಗೊಂಡಿವೆ – ಅಲ್ಪಸಂಖ್ಯಾತರನ್ನು ಗೆದ್ದಲುಗಳು, ಪರಾವಲಂಬಿಗಳು, ಕೀಟಗಳು, ಹಂದಿಗಳು, ಹುಚ್ಚು ನಾಯಿಗಳು, ಹಾವು-ಮೃಗಗಳು, ಹಸಿರು ಹಾವುಗಳು ಹಾಗೂ ರಕ್ತಪಿಪಾಸುಗಳು ಎಂದು ನಿಂದಿಸಿವೆ.
ಇಂತಹ ಅವಾಚ್ಯ, ಅಮಾನವೀಯ ಭಾಷೆಯು ಸಾರ್ವಜನಿಕ ಜೀವನದಲ್ಲಿ ಪರಿಚಿತವಾದಾಗ, ಅದು ‘ಭಾಷಣ’ವಾಗಿ ಉಳಿಯುವುದಿಲ್ಲ. ಅದು, ದಾಳಿ, ಕಿರುಕುಳ, ದೌರ್ಜನ್ಯ ಎಸಗಲು ಅನುಮತಿ ನೀಡುತ್ತದೆ ಎಂದು ವರದಿ ವಿವರಿಸಿದೆ.
ಮಹಾರಾಷ್ಟ್ರವು ಅತಿ ಹೆಚ್ಚು ‘ಅಪಾಯಕಾರಿ’ ಭಾಷಣಗಳನ್ನು ವರದಿ ಮಾಡಿದೆ. ರಾಜ್ಯದಲ್ಲಿ ದಾಖಲಾದ 193 ದ್ವೇಷ ಭಾಷಣ ಘಟನೆಗಳಲ್ಲಿ ಸುಮಾರು 40%ರಷ್ಟು ಘಟನೆಗಳು ಹಿಂಸಾಚಾರಕ್ಕೆ ಸ್ಪಷ್ಟ ಕರೆ ನೀಡಿವೆ. 2024ರಲ್ಲಿ 64 ಘಟನೆಗಳಿಂದ 2025ರಲ್ಲಿ 78 ಘಟನೆಗಳಿಗೆ ಹೆಚ್ಚಾಗಿದೆ. ಅತ್ಯಂತ ಅಪಾಯಕಾರಿ ಭಾಷಣಗಳನ್ನು ನೀಡುವ ವ್ಯಕ್ತಿಗಳಲ್ಲಿ, ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮೊದಲಿಗರಾಗಿದ್ದಾರೆ.
ದ್ವೇಷ ಭಾಷಣ ಮಾಡಿದವರಲ್ಲಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ – 71 ಭಾಷಣಗಳು, ಪ್ರವೀಣ್ ತೊಗಾಡಿಯಾ – 46 ಭಾಷಣಗಳು, ಬಿಜೆಪಿ ನಾಯಕಿ ಅಶ್ವಿನಿ ಉಪಾಧ್ಯಾಯ – 35 ಭಾಷಣಗಳನ್ನು ಮಾಡಿದ್ದಾರೆ.
2025ರಲ್ಲಿ ದ್ವೇಷ ಭಾಷಣ ಕಾರ್ಯಕ್ರಮಗಳ ಸಂಘಟಕರು ಅಥವಾ ಸಹ-ಸಂಘಟಕರು ಎಂದು 160ಕ್ಕೂ ಹೆಚ್ಚು ಸಂಸ್ಥೆಗಳು ಮತ್ತು ಅನೌಪಚಾರಿಕ ಗುಂಪುಗಳನ್ನು ಗುರುತಿಸಲಾಗಿದೆ. ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗ ದಳ ಅತಿ ಹೆಚ್ಚು – 289 – ಕೋಮುದ್ವೇಷ ಭಾಷಣ ಮಾಡಿದ ಕಾರ್ಯಕ್ರಮಗಳನ್ನು ಆಯೋಜಿಸಿವೆ. ಈ ಪೈಕಿ ವಿಶ್ವ ಹಿಂದೂ ಪರಿಷತ್ 138 ಕಾರ್ಯಕ್ರಮಗಳನ್ನು ಆಯೋಜಿಸಿದೆ.
2025ರ ಏಪ್ರಿಲ್‌ನಲ್ಲಿ ಅತೀ ಹೆಚ್ಚು, ಅಂದರೆ, 158 ದ್ವೇಷ ಭಾಷಣ ಘಟನೆಗಳು ನಡೆದಿವೆ. ಆ ಸಂದರ್ಭದಲ್ಲಿ ನಡೆದಿದ್ದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಆಯೋಜಿಸಲಾದ ರಾಮ ನವಮಿ ಮೆರವಣಿಗೆಗಳು ಮತ್ತು ರ್ಯಾಲಿಗಳಲ್ಲಿ ದ್ವೇಷ ಭಾಷಣವು ಹೆಚ್ಚಾಗಿದೆ. ಏಪ್ರಿಲ್ 22 ಮತ್ತು ಮೇ 7ರ ನಡುವಿನ 16 ದಿನಗಳಲ್ಲಿ 98 ದ್ವೇಷ ಭಾಷಣ ಘಟನೆಗಳು ದಾಖಲಾಗಿವೆ. ಇದು ತ್ವರಿತ ಮುಸ್ಲಿಂ ವಿರೋಧಿ ಕ್ರೋಢೀಕರಣವನ್ನು ಸೂಚಿಸುತ್ತದೆ.
ಇನ್ನು, ರೋಹಿಂಗ್ಯಾ ನಿರಾಶ್ರಿತರನ್ನು ಗುರಿಯಾಗಿಸಿಕೊಂಡು 69 ದ್ವೇಷ ಭಾಷಣ ಘಟನೆಗಳು ದಾಖಲಾಗಿದ್ದರೆ, ಬಂಗಾಳಿ ಮುಸ್ಲಿಮರನ್ನು ಬಾಂಗ್ಲಾ ನುಸುಳುಕೋರರು ಎಂದುದಾಗಿ ಬಿಂಬಿಸುವ 192 ಭಾಷಣಗಳನ್ನು IHL ವರದಿ ಗುರುತಿಸಿದೆ.
ಈ ಲೇಖನ ಓದಿದ್ದೀರಾ?: ಭಾರತದಲ್ಲಿ ದ್ವೇಷವೆಂಬುದು ಹೇಗೆಲ್ಲ ಅಧಿಕಾರಸ್ಥರ ವ್ಯಾಕರಣ ಆಗಿ ಹೋಯಿತು!
ಗಮನಾರ್ಹವಾಗಿ, ಈ ಜನಸಮೂಹವನ್ನು ಒಳಗೊಂಡಿದ್ದ 1,318 ದ್ವೇಷ ಭಾಷಣ ಘಟನೆಗಳಲ್ಲಿ 1,278 ಘಟನೆಗಳ ವೀಡಿಯೊಗಳನ್ನು ತ್ವರಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ವ್ಯಕ್ತಿಗತ ಕಾರ್ಯಕ್ರಮಗಳು ಇನ್ನು ಮುಂದೆ, ಆ ಸ್ಥಳಕ್ಕೆ ಸೀಮಿತವಲ್ಲ ಎಂಬುದನ್ನು ಇದು ಖಾತ್ರಿಪಡಿಸುತ್ತದೆ. ಸ್ಥಳೀಯ ಸಭೆಯು ನಿಮಿಷಗಳಲ್ಲಿ ರಾಷ್ಟ್ರೀಯ ವಿಷಯವಾಗುತ್ತದೆ. ದೇಶಾದ್ಯಂತ ವ್ಯಾಪಿಸುತ್ತದೆ. ದೇಶಾದ್ಯಂತ ದ್ವೇಷ ಪ್ರಚೋದನೆಗೆ ಬಳಕೆಯಾಗುತ್ತದೆ.
ಈ ದ್ವೇಷ ಭಾಷಣಗಳು ಪ್ರಜಾಪ್ರಭುತ್ವವನ್ನು ಸಾಂಸ್ಥಿಕವಾಗಿ ಅಪಾಯಕ್ಕೆ ದೂಡುತ್ತಿವೆ. ಸಮಾಜವು ದ್ವೇಷಪೂರಿತ ವ್ಯಕ್ತಿಗಳನ್ನು ಸಹಿಸಿಕೊಳ್ಳಬಲ್ಲದು. ಆದರೆ, ಕಾನೂನು ಪರಿಣಾಮಗಳಿಲ್ಲದೆ ಊಹಿಸಬಹುದಾದ ಸಾರ್ವಜನಿಕ ಪ್ರಚೋದನೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಆದಾಗ್ಯು, ದ್ವೇಷ ಭಾಷಣ ಮಾಡುವವರ ಮೇಲಿನ ಕಾನೂನು ಕ್ರಮವು ನಗಣ್ಯವಾಗುತ್ತಿದೆ. ದ್ವೇಷ ಭಾಷಣವು ಹಿಂದುತ್ವ ಕೋಮುವಾದಿಗಳ ದಿನಚರಿಯಾಗುತ್ತಿದೆ. ದ್ವೇಷವು ಸಾಮಾನ್ಯವಾಗಲು ಅನುಮತಿಸಿದಾಗ ಏನಾಗುತ್ತದೆ ಮತ್ತು ಸಾಮಾನ್ಯರು ಎಷ್ಟು ಬೇಗನೆ ಅಪಾಯಕಾರಿಯಾಗಬಹುದು ಎಂಬುದರ ಬಗ್ಗೆ ವರದಿ ಕಳವಳ ವ್ಯಕ್ತಪಡಿಸಿದೆ.




