ವಿಶ್ವ ಗೋರಕ್ಷಣ ಮಹಾಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರ ಇತ್ತೀಚಿನ ಹೇಳಿಕೆ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಚರ್ಚೆಗೆ ಗುರಿಯಾಗಿದೆ. ಭಾರತ ದೇಶದಲ್ಲಿ ಗೋ ಮಾಂಸ ರಫ್ತು ಹಾಗೂ ಜಾನುವಾರು ಹತ್ಯೆಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ನಿಷೇಧ ಮಾಡಬೇಕು. ಈ ನಿಟ್ಟಿನಲ್ಲಿ ದೇಶಾದ್ಯಂತ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಕಾಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರಕಾರದ ಗೋಮಾಂಸ ರಫ್ತು ಹಾಗೂ ಗೋಹತ್ಯೆ ನಿಷೇಧ ಮಾಡದ ಬಗ್ಗೆ ಟೀಕಿಸಿದ್ದ ನರೇಂದ್ರ ಮೋದಿ, ಮೂರು ಬಾರಿ ಪ್ರಧಾನಿಯಾದರೂ ಇನ್ನೂ ಯಾಕೆ ಗೋಹತ್ಯೆಯನ್ನು ದೇಶದಲ್ಲಿ ನಿಷೇಧ ಮಾಡುತ್ತಿಲ್ಲ. ದುರಂತ ಅಂದರೆ ಮೋದಿ ಅವಧಿಯಲ್ಲಿ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗೋಮಾಂಸ ರಫ್ತು ಆಗುತ್ತಿದೆ. ಭಾರತ ಗೋಮಾಂಸ ರಫ್ತು ಆಗುತ್ತಿದೆ. ಭಾರತ ಗೋಮಾಂಸ ರಫ್ತಿನಲ್ಲಿ ಇಡೀ ಜಗತ್ತಿನಲ್ಲಿಯೇ ಇಂದು ಎರಡನೇ ಸ್ಥಾನದಲ್ಲಿದೆ ಎಂದು ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ, ಬೆಂಗಳೂರು ವಿಶ್ವ ಗೋರಕ್ಷಾ ಮಹಾಪೀಠದ ದಯಾನಂದ ಸ್ವಾಮೀಜಿ ಟೀಕಿಸಿದ್ದಾರೆ.

ಭಾರತವು ಇಂದು ವಿಶ್ವದ ಎರಡನೇ ದೊಡ್ಡ ಗೋಮಾಂಸ ರಫ್ತುದಾರ ರಾಷ್ಟ್ರವಾಗಿ ಬೆಳೆದಿದ್ದು, ಬಿಜೆಪಿ ಆಡಳಿತದಲ್ಲಿ ಈ ಉದ್ಯಮವು ಏರಿಕೆಗೊಂಡಿದೆ. ಆದರೆ ದೇಶದೊಳಗೆ ಆಹಾರ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ, ಗೋರಕ್ಷಣೆಯ ಹೆಸರಿನಲ್ಲಿ ಕೊಲೆಗಳು ನಡೆಯೋದಾದ್ರೂ ಯಾಕೆ? ತಿನ್ನೋ ಆಹಾರಕ್ಕೂ ಕಡಿವಾಣ ಹಾಕೋದು, ಅದರ ಹೆಸರಲ್ಲೇ ಕೊಲೆಗಳನ್ನ ಮಾಡೋದು ನಮ್ಮಲ್ಲಿ ಮಾತ್ರ ಅಂತ ಅನಿಸತ್ತೆ. ಫ್ರಿಡ್ಜ್‌ನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 11 ಮನೆಗಳನ್ನು ಪೊಲೀಸರು ಕೆಡವಿದ ಘಟನೆ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಮಂಡ್ಲಾದಲ್ಲಿ ನಡೆದಿತ್ತು. ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕನೋರ್ವ ಗೋಮಾಂಸ ತಿಂದಿದ್ದಾನೆ ಎಂಬ ಶಂಕೆಯಿಂದ ಆತನಿಗೆ ಥಳಿಸಿ ಕೊಂದ ಘಟನೆಯು ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯಲ್ಲಿ ನಡೆದಿತ್ತು. ಆಂಧ್ರಪ್ರದೇಶದ ಹಿಂದೂಪುರದಿಂದ ಬೆಂಗಳೂರಿಗೆ ಗೋಮಾಂಸ ಸಾಗಾಣಿಕೆ ಮಾಡುತ್ತಿದ್ದ ವಾಹನಗಳನ್ನು ಶ್ರೀರಾಮಸೇನೆ ಸಂಘಟನೆ ಕಾರ್ಯಕರ್ತರು ತಡೆದು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರ(ಐಬಿ) ವೃತ್ತದಲ್ಲಿ ಒಂದು ಕಾರಿಗೆ ಬೆಂಕಿ ಹಚ್ಚಿರುವ ಪ್ರಕರಣ ನಡೆದಿದೆ.
ಮಹಾರಾಷ್ಟ್ರ ನಾಸಿಕ್ ಜಿಲ್ಲೆಯಲ್ಲಿ ಗೋಮಾಂಸ ಕಳ್ಳಸಾಗಣೆ ಆರೋಪದಲ್ಲಿ ಗೋರಕ್ಷಕರ ಗುಂಪೊಂದು ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿದ್ದಾರೆ. ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ನಿಷೇಧಿತ ಗೋಮಾಂಸ ಹೊಂದಿದ್ದ ಆರೋಪದಲ್ಲಿ ಗುಂಪು ದಾಳಿ ನಡೆದಿತ್ತು,. ಇಂತಹ ಘಟನೆಗಳು ನಮ್ಮ ಸುತ್ತಮುತ್ತ ಪ್ರತಿದಿನವೂ ನಡೀತಾನೇ ಇರತ್ತೆ.
2014 ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದಾಗ, ಭಾರತದ ಗೋಮಾಂಸ ರಫ್ತು ಬೆಳೆಯುತ್ತಿತ್ತು. ಈಗ ಮೋದಿ ಸರ್ಕಾರದ ಅವಧಿಯಲ್ಲಿ ಈ ರಫ್ತು ದ್ವಿಗುಣಗೊಂಡಿದೆ. 2014ರ ಮೊದಲು, ಭಾರತ ವಿಶ್ವದ ನಾಲ್ಕನೇ ದೊಡ್ಡ ಗೋಮಾಂಸ ರಫ್ತುದಾರನಾಗಿತ್ತು. 2014-15ರಲ್ಲಿ ರಫ್ತು ಪ್ರಮಾಣ 2.08 ಮಿಲಿಯನ್ ಮೆಟ್ರಿಕ್ ಟನ್‌ಗಳಿಗೆ ತಲುಪಿತ್ತು. ಆದರೆ ಮೋದಿ ಆಡಳಿತದಲ್ಲಿ, ಈ ರಫ್ತು ದುಪ್ಪಟ್ಟಾಗಿದೆ. ಭಾರತ ವಿಶ್ವದ ಎರಡನೇ ಅತೀ ಹೆಚ್ಚು ಗೋಮಾಂಸ ರಫ್ತು ಮಾಡುವ ದೇಶವಾಗಿ ಬೆಳೆದುನಿಂತಿದೆ. 2025ರಲ್ಲಿ ರಫ್ತು ಮೌಲ್ಯ 5.1 ಬಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ, ಇದು ದೇಶದ ಒಟ್ಟು ಆಹಾರ ರಫ್ತಿನ 1.5% ಆಗಿದೆ. ವಿಯೆಟ್ನಾಂ, ಮಲೇಷ್ಯಾ, ಈಜಿಪ್ಟ್‌ನಂತಹ ದೇಶಗಳು ಭಾರತದ ಪ್ರಮುಖ ಗ್ರಾಹಕರು. ಈ ಬೆಳವಣಿಗೆಯು ಆರ್ಥಿಕವಾಗಿ ಲಾಭದಾಯಕವಾದರೂ, ಅದರ ಹಿನ್ನೆಲೆಯಲ್ಲಿ ರಾಜಕೀಯ ದ್ವಂದ್ವವಿದೆ.

ಬಿಜೆಪಿ ಆಡಳಿತದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ನಡೆದ ಹಿಂಸೆಗಳು ದೇಶವನ್ನು ಸಂಚಲನಗೊಳಿಸತ್ತೆ. 2015ರಿಂದ ಇಂದಿನವರೆಗೆ, ಗೋಮಾಂಸ ಸೇವನೆಯ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಲಿಂಚಿಂಗ್ ಕೇಸ್‌ಗಳು ನಡೆದಿದೆ. ಈ ಪ್ರಕರಣದಲ್ಲಿ ಮುಸ್ಲಿಮ್ ಮತ್ತು ದಲಿತ ಸಮುದಾಯಗಳ ಮೇಲೆನೇ ಹೆಚ್ಚಿನ ದಾಳಿಗಳಾಗಿವೆ. ಕೇಂದ್ರ ಸರ್ಕಾರವು 2017ರಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದ ತಿದ್ದುಪಡಿ ತಂದರೂ, ಅದು ರಾಜ್ಯಗಳಿಗೆ ಬಿಟ್ಟಿದ್ದು ಅಂತ ಹೇಳಿತ್ತು. ಆದರೆ ಗೋಮಾಂಸ ರಫ್ತುಗೆ ಯಾವುದೇ ನಿರ್ಬಂಧವಿಲ್ಲ. ತಿನ್ನುವ ಆಹಾರಕ್ಕೂ ಕಡಿವಾಣ ಹಾಕುವ, ಅದರ ಹೆಸರಿನಲ್ಲಿ ಕೊಲೆ ಮಾಡುವ ಈ ವ್ಯವಸ್ಥೆ ನಮ್ಮ ದೇಶದಲ್ಲಿ ಮಾತ್ರ ಇದ್ದಂತೆ ಅನ್ಸತ್ತೆ. ಇದು ಆಹಾರದ ಮೂಲಭೂತ ಹಕ್ಕನ್ನು (ರೈಟ್ ಟು ಫುಡ್) ಉಲ್ಲಂಘಿಸುತ್ತದೆ.
ಬಿಜೆಪಿಯ ರಾಜಕೀಯವು ಗೋಮಾಂಸವನ್ನು ಚುನಾವಣಾ ಆಯುಧವಾಗಿ ಬಳಸುತ್ತದೆ. “ಗೋಹತ್ಯೆ ನಿಷೇಧಿಸುವ” ಭಾಷಣಗಳು ಚುನಾವಣೆಗಳಲ್ಲಿ ಧರ್ಮೀಕರಣಕ್ಕೆ ಕಾರಣವಾಗುತ್ತವೆ. ಆದರೆ ಅದೇ ಸರ್ಕಾರದಲ್ಲಿ, ಗೋಮಾಂಸ ಉದ್ಯಮವು ಲಾಭವನ್ನ ಗಿಟ್ಟಿಸಿಕೊಡುತ್ತಿದೆ. ಇದೇ ವಿಷಯಕ್ಕೆ ಸ್ವಾಮೀಜಿ ಮೋದಿಯನ್ನು ಟೀಕಿಸಿರೋದು. ಇದು ಸಾಮಾನ್ಯ ಜನರಿಗೆ ಆಹಾರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಒಬ್ಬರಿಗೆ ತಿನ್ನಲು ಅನುಮತಿ ಇಲ್ಲ, ಆದರೆ ಇತರ ದೇಶಗಳಿಗೆ ಮಾರಲು ಸಿದ್ಧ ಇದು ಮೋದಿ ಸರ್ಕಾರದ ಅಜೆಂಡಾವೇ?

ಗೋಮಾಂಸ ರಫ್ತು ಭಾರತದ ಆರ್ಥಿಕತೆಗೆ ಲಾಭ ತರುತ್ತದೆ. ಇದು ರೈತರಿಗೆ ಆದಾಯ ಮೂಲವಾಗಿದ್ದು, ವಯಸ್ಸಾದ ಪಶುಗಳನ್ನ ಸಾಕುವುದಕ್ಕೆ ಕಷ್ಟ ಪಡುತ್ತಿರುವ ರೈತರಿಗೆ ಇದು ಉಪಯೋಗವಾಗತ್ತೆ. ಆದರೆ ಈ ಲಾಭವು ಕೇವಲ ಕೆಲವು ಉದ್ಯಮಿಗಳಿಗೆ ಸೀಮಿತವಾಗಿದೆ. ದೇಶದೊಳಗಿನ ಬಡತನ, ಆಹಾರ ಭದ್ರತೆಯ ಸಮಸ್ಯೆಗಳ ನಡುವೆ, ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸೆಯು ಸಾಮಾಜಿಕ ವಿಭಜನೆಯನ್ನು ಹೆಚ್ಚಿಸುತ್ತದೆ. ಸಂವಿಧಾನದ 21ನೇ ವಿಧಿ- ದೇಶದ ಪ್ರತಿಯೊಬ್ಬ ನಾಗರಿಕ ಆಹಾರದ ಹಕ್ಕನ್ನ ರಕ್ಷಣೆ ಮಾಡುತ್ತಿದೆ. ಆದರೆ ಬಿಜೆಪಿ ಸಂವಿಧಾನದವನ್ನೇ ದುರ್ಬಳಕೆ ಮಾಡುತ್ತವೆ.
ಗೋರಕ್ಷಣೆಯ ಹೆಸರಿನಲ್ಲಿ ಹಿಂಸೆಗೆ ತಡೆಯೊಡ್ಡುವ, ಆಹಾರದ ಹಕ್ಕನ್ನು ರಕ್ಷಿಸುವ, ರಫ್ತು ನೀತಿಗಳನ್ನು ಸ್ಪಷ್ಟಗೊಳಿಸುವುದು ಯಾವಾಗ? ಈಗಲೇ ಇದನ್ನ ಪ್ರತಿಯೊಬ್ಬ ಪ್ರಜೆಯೂ ಪ್ರಶ್ನೆ ಮಾಡಬೇಕು ಇಲ್ಲದಿದ್ದರೆ, “ತಿನ್ನುವುದಕ್ಕೆ ಕಡಿವಾಣ, ಮಾರುವುದಕ್ಕೆ ಸ್ವಾತಂತ್ರ್ಯ” ಎಂಬ ಈ ದ್ವಂದ್ವವು ದೇಶದ ಚಿತ್ರಣವನ್ನೇ ಬದಲಾಯಿಸುತ್ತದೆ.
ಮನೆಯ ಫ್ರಿಡ್ಜ್‌ನಲ್ಲಿ ಗೋಮಾಂಸ ಇದೆ ಎಂದು ಹಿಂದೂ ಪ್ರತಿಭಟನಾಕಾರರ ಗುಂಪು ಮನೆಯ ಯಜಮಾನ ಅಖ್ಲಾಕ್ ಅವರನ್ನು ಹೊಡೆದು ಸಾಯಿಸಿತ್ತು. ಇದೀಗ ಈ ಪ್ರಕರಣವನ್ನು ವಾಪಸ್ ಪಡೆಯಲು ಯೋಗಿ ಸರ್ಕಾರ ಮುಂದಾಗಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಮನೆಯಲ್ಲಿದ್ದದ್ದು ಗೋಮಾಂಸ ಅಲ್ಲ, ಕುರಿಯ ಮಾಂಸ ಎಂದು ವಿಚಾರಣೆಯ ವೇಳೆ ಸತ್ಯ ಬಯಲಾಗಿದೆ. ಅದೇನೇ ಇರಲಿ, ಒಂದು ಕಡೆ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಗೋ ಮಾಂಸ ರಫ್ತುದಾರರಿದ್ದಾರೆ, ಅದಕ್ಕೆ ಯೋಗಿಸರ್ಕಾರದ ಯಾವುದೇ ನಿಷೇಧ ಇಲ್ಲ, ಆದರೆ ತಿನ್ನುವವರನ್ನು ಹೊಡೆದು ಸಾಯಿಸಲಾಗುತ್ತದೆ, ಇದು ಯಾವ ಬಗೆಯ ನೀತಿ ಎಂಬುದಕ್ಕೆ ಬಿಜೆಪಿಯವರಲ್ಲಿ ಉತ್ತರ ಇದೆಯೇ?
ಇದೀಗ ದಯಾನಂದ ಸ್ವಾಮಿ ಪಟ್ಟು ಹಿಡಿದು, ಉಡುಪಿಗೆ ಭೇಟಿ ನೀಡಲಿರುವ ಮೋದಿಯವರ ಬಳಿ ತಮ್ಮ ಹಕ್ಕೊತ್ತಾಯ ಮಂಡಿಸಲು ಸಿದ್ಧರಾಗಿದ್ದಾರೆ. ಮೋದಿ ಮತ್ತವರ ಪಕ್ಷದ ಕೋಮುವಾದಿ ಹುನ್ನಾರಕ್ಕೆ, ಗೋ ರಕ್ಷಣೆಯ ಹೆಸರಿನ ಸ್ವಘೋಷಿತ ಗೋರಕ್ಷಕರ ಕ್ರೌರ್ಯಕ್ಕೆ ಅವರೇ ಉತ್ತರ ಕೊಡಬೇಕಿದೆ.





