ದೇಶದ ಒಟ್ಟು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯ ಹೊಣೆಯಲ್ಲಿ ಶೇ.14 ರಷ್ಟನ್ನು ತಾನೇ ಹೊತ್ತುಕೊಳ್ಳುತ್ತಿರುವ ಕರ್ನಾಟಕ, ಉತ್ಪಾದನೆಯಲ್ಲಿ ಮೊದಲ ಸ್ಥಾನ ಪಡೆದಿದ್ದರೂ ಸಂಸ್ಕರಣೆಯಲ್ಲಿ ಕೊನೆಯ ಸಾಲಿಗೆ ಸರಿದಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ(CPCB) ಯ ಇತ್ತೀಚಿನ ವರದಿಯೊಂದು ಈ ಆತಂಕಕಾರಿ ಅಂಕಿಅಂಶಗಳನ್ನು ಬಹಿರಂಗಪಡಿಸಿದೆ.
ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಮುಂಚೂಣಿ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿದ್ದ ಕರ್ನಾಟಕ, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ವಿಷಯದಲ್ಲಿ ಮತ್ತೆ ಆತಂಕಕಾರಿ ಕಾರಣಕ್ಕೆ ಸುದ್ದಿಯಲ್ಲಿದೆ. CPCB ಬಿಡುಗಡೆ ಮಾಡಿರುವ ಇತ್ತೀಚಿನ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ವರದಿ ಪ್ರಕಾರ, ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ಪ್ಲಾಸ್ಟಿಕ್ ತ್ಯಾಜ್ಯದ ಶೇ.14 ರಷ್ಟನ್ನು ಕರ್ನಾಟಕವೇ ಉತ್ಪಾದಿಸುತ್ತಿದೆ. ಅಂದರೆ, ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ಈ ತ್ಯಾಜ್ಯವನ್ನು ಸಂಸ್ಕರಿಸುವಲ್ಲಿ ರಾಜ್ಯ ಹಿಂದೆಬಿದ್ದಿದೆ. ಅಂದರೆ ಹಿಂದಿನಿಂದ ಮೂರನೇ ಸ್ಥಾನದಲ್ಲಿದೆ.

ಅಂಕಿಅಂಶಗಳ ಪ್ರಕಾರ, 2021–22ನೇ ಸಾಲಿನಲ್ಲಿ ಕರ್ನಾಟಕದಲ್ಲಿ ಸುಮಾರು 5.28 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗಿದೆ. ಈ ಪೈಕಿ ಕೇವಲ 18,243 ಟನ್ ಮಾತ್ರ ಸಂಸ್ಕರಣೆಗೆ ಒಳಪಟ್ಟಿದೆ. ಉಳಿದಂತೆ, ಸುಮಾರು 5.1 ಲಕ್ಷ ಟನ್, ಅಂದರೆ ಶೇ.97ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ಲ್ಯಾಂಡ್‌ಫಿಲ್ (ತ್ಯಾಜ್ಯ ವಿಲೇವಾರಿ ಮಾಡಲು ನಿಗದಿಪಡಿಸಿದ ಜಾಗ/ಭೂಕುಸಿತದ ಜಾಗ)ಗಳಲ್ಲೇ ವಿಲೇವಾರಿಯಾಗಿಬಿಡುತ್ತದೆ. ಇದು ನಗರಗಳಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಅನುಸರಿಸುವ ಒಂದು ವಿಧಾನ. ಆದರೆ ಈ ವಿಧಾನದಲ್ಲಿ ಕಸವನ್ನು ಮಣ್ಣಿನಡಿಯಲ್ಲಿ ಹೂಳುವ ವ್ಯವಸ್ಥೆ ಮಾಡುವುದರಿಂದ ತ್ಯಾಜ್ಯ ನೀರು ಮಣ್ಣಿಗೆ ಸೇರಿ ಪರಿಸರಕ್ಕೆ ಹಾನಿ ಮಾಡುವ ಸಾಧ್ಯತೆಗಳು ಬಹಳಿರುತ್ತವೆ. ಹಾಗಾಗಿ ಇದರ ನಿರ್ವಹಣೆಯೂ ಅತ್ಯಂತ ಅಗತ್ಯ.
ಸಂಸ್ಕರಿಸಲಾದ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಸುಮಾರು 70% ಮರುಬಳಕೆ (ರಿಸೈಕ್ಲಿಂಗ್) ಆಗುತ್ತಿದ್ದರೂ, ಒಟ್ಟು ಉತ್ಪಾದನೆಯ ಹೋಲಿಕೆಯಲ್ಲಿ ನೋಡಿದರೆ, ಕರ್ನಾಟಕದಲ್ಲಿ ಕೇವಲ ಶೇ.3ರಷ್ಟು ಪ್ಲಾಸ್ಟಿಕ್ ಮಾತ್ರ ರಿಸೈಕಲ್ ಆಗುತ್ತಿದೆ ಎಂಬುದೇ ನಿಜಾಂಶ. ಪರಿಸರ ಸಂರಕ್ಷಣೆಯ ಬಗ್ಗೆ ದೊಡ್ಡ ಘೋಷಣೆಗಳನ್ನು ಮಾಡುವ ರಾಜ್ಯಕ್ಕೆ ಇದು ತೀರಾ ಅವಮಾನಕರ ಸ್ಥಿತಿ. ಬೆಂಗಳೂರಿನಂತಹ ನಗರಗಳಲ್ಲೂ ಇಂದಿಗೂ ನಿತ್ಯ ರಸ್ತೆ ಬದಿಯಲ್ಲಿ ಕಸ ಹಾಕುವುದು ನಿಂತಿಲ್ಲ. ಮೇಲಾಗಿ, ಆ ಕಸವನ್ನು ವಿಲೇವಾರಿ ಮಾಡುವ ವ್ಯವಸ್ಥೆ ಸರಿಯಾಗಿಲ್ಲ. ಹಸಿ-ಒಣ ಕಸ ವಿಂಗಡಣೆಯ ಅರಿವು ಜನರಿಗಿದ್ದರೂ ಅದನ್ನು ಕಾರ್ಯಗತಗೊಳಿಸುತ್ತಿಲ್ಲ. ನಗರಗಳ ಬೀದಿಯಲ್ಲಿ ಓಡಾಡುವ ಎಷ್ಟೋ ಹಸುಗಳಿಗೆ ಈ ತ್ಯಾಜ್ಯವೇ ಹುಲ್ಲು, ನಾಯಿಗಳಿಗೆ ಅದೇ ಊಟ.

2016ರಲ್ಲಿ ಕರ್ನಾಟಕ ದೇಶದಲ್ಲೇ ಮೊದಲ ಬಾರಿಗೆ ಎಲ್ಲಾ ರೀತಿಯ ಪ್ಲಾಸ್ಟಿಕ್ ಮತ್ತು ಕಾಂಪೋಸ್ಟಬಲ್ (ನೈಸರ್ಗಿಕವಾಗಿ ಕೊಳೆಯುವ, ಮಣ್ಣಿನೊಂದಿಗೆ ಬೆರೆಯುವ ವಸ್ತು) ಕ್ಯಾರಿ ಬ್ಯಾಗ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿತು. ಈ ನಿಷೇಧದಲ್ಲಿ ಬ್ಯಾಗ್‌ಗಳಷ್ಟೇ ಅಲ್ಲದೆ, ಪ್ಲಾಸ್ಟಿಕ್ ಬ್ಯಾನರ್‌ಗಳು, ಫ್ಲೆಕ್ಸ್, ಬಂಟಿಂಗ್‌ಗಳು, ಕಪ್-ಪ್ಲೇಟ್‌ಗಳು, ಚಮಚಗಳು, ಥರ್ಮೋಕಾಲ್‌ನಿಂದ ತಯಾರಿಸಲಾದ ವಸ್ತುಗಳು, ಮೈಕ್ರೋಬೀಡ್ಸ್‌ಗಳವರೆಗೆ ಎಲ್ಲವೂ ಸೇರಿದ್ದವು. ಅಂದಿನ ಸರ್ಕಾರದ ನಿರ್ಧಾರವನ್ನು ದೇಶವೇ ಮೆಚ್ಚಿತ್ತು.
ಆದರೆ, ನೀತಿ ಜಾರಿಗೆ ಬಂದರೂ, ಜಾರಿಗೆ ಬಂದಿಲ್ಲ ಎಂಬ ಸ್ಥಿತಿ ಇಂದಿಗೂ ಮುಂದುವರೆಯುತ್ತಲೇ ಇದೆ. ಇದೇ ಇಂದಿನ ಸಮಸ್ಯೆಗೆ ಮೂಲ. ಮಾರುಕಟ್ಟೆಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳು ಸಹ ಸುಲಭವಾಗಿ ದೊರೆಯುತ್ತಿವೆ. ಮಾರಾಟವೂ ನಿರ್ಬಂಧವಿಲ್ಲದೆ ನಡೆಯುತ್ತಿದೆ; ಬಳಕೆಯೂ ಮುಂದುವರಿದಿದೆ. 2022ರ ಜುಲೈನಲ್ಲಿ ಕೇಂದ್ರ ಪರಿಸರ ಸಚಿವಾಲಯ ದೇಶವ್ಯಾಪಿ 19 ಏಕಬಳಕೆ ಪ್ಲಾಸ್ಟಿಕ್ (Single Use Plastic– SUP) ವಸ್ತುಗಳನ್ನು ನಿಷೇಧಿಸಿತು. ಇದರಲ್ಲಿ ಪ್ಲಾಸ್ಟಿಕ್ ಸ್ಟಿಕ್ ಇರುವ ಇಯರ್‌ಬಡ್‌ಗಳು, ಬಲೂನ್ ಸ್ಟಿಕ್‌ಗಳು, ಪ್ಲಾಸ್ಟಿಕ್ ಧ್ವಜ, ಐಸ್‌ಕ್ರೀಂ ಸ್ಟಿಕ್‌ಗಳು, ಥರ್ಮೋಕೋಲ್ ಅಲಂಕಾರಿಕ ವಸ್ತುಗಳು, ಪ್ಲಾಸ್ಟಿಕ್ ಪ್ಲೇಟ್‌ಗಳು, ಕಪ್‌ಗಳು, ಸ್ಟ್ರಾ, ಟ್ರೇಗಳು, ರ್ಯಾಪಿಂಗ್ ಫಿಲ್ಮ್‌ಗಳು, ಆಹ್ವಾನ ಪತ್ರಿಕೆ, ಸಿಗರೇಟ್ ಪ್ಯಾಕೆಟ್ ಸೇರಿದಂತೆ 100 ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪಿವಿಸಿ ಬ್ಯಾನರ್‌ಗಳು ಸೇರಿವೆ. ನಂತರ ಈ ಮಿತಿಯನ್ನು 120 ಮೈಕ್ರಾನ್‌ಗೆ ಹೆಚ್ಚಿಸಲಾಯಿತು. ಈ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದಾಗಿ ಸ್ಪಷ್ಟ ಸೂಚನೆ ನೀಡಲಾಗಿತ್ತು. ಆದರೆ, ಕರ್ನಾಟಕವೂ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಈ ನಿಷೇಧ ಸರಿಯಾಗಿ ಅನುಷ್ಠಾನವಾಗದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ನಗರಗಳು, ಪಟ್ಟಣಗಳು, ಹಳ್ಳಿಗಳ ಮಾರುಕಟ್ಟೆಗಳಲ್ಲಿ ಈ ಎಲ್ಲಾ ನಿಷೇಧಿತ ವಸ್ತುಗಳು ಸಾರಾಸಗಟಾಗಿ ಮಾರಾಟವಾಗುತ್ತಿವೆ.

ರಾಜಕೀಯ ಪಕ್ಷಗಳು ಚುನಾವಣೆ, ಪ್ರತಿಭಟನೆ, ಸಮಾರಂಭಗಳ ಸಂದರ್ಭದಲ್ಲಿ ಫ್ಲೆಕ್ಸ್ ಬ್ಯಾನರ್‌ಗಳು ಮತ್ತು ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ವ್ಯಾಪಕವಾಗಿ ಬಳಸುತ್ತಿವೆ, ಇದು ಪ್ಲಾಸ್ಟಿಕ್ ನಿಷೇಧದ ವಿಚಾರದಲ್ಲಿ ಅತಿ ದೊಡ್ಡ ವ್ಯಂಗ್ಯ. ಇದು ಸಾಮಾನ್ಯ ನಾಗರಿಕರಿಗೆ ತಪ್ಪು ಸಂದೇಶ ನೀಡುವುದರ ಜೊತೆಗೆ ಆಡಳಿತ ವ್ಯವಸ್ಥೆಯ ನೈತಿಕತೆ ಮೇಲೆ ಪ್ರಶ್ನೆ ಹುಟ್ಟಿಸುತ್ತದೆ. “ನಾವು ನಿಷೇಧವನ್ನು ಜಾರಿಗೊಳಿಸುವಲ್ಲಿ ವಿಫಲವಾಗಿದ್ದೇವೆ. ಕೇವಲ ನಿಯಮ ಜಾರಿಗೊಳಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ; ಕಠಿಣ ಅನುಷ್ಠಾನ, ನಿರಂತರ ಮೇಲ್ವಿಚಾರಣೆ ಮತ್ತು ಸಾರ್ವಜನಿಕ ಜಾಗೃತಿ ಅತ್ಯಗತ್ಯ” ಎನ್ನುವುದು ಹಲವು ನಗರಾಧಾರಿತ ಘನ ತ್ಯಾಜ್ಯ ನಿರ್ವಹಣಾ ತಜ್ಞರ ಅಭಿಪ್ರಾಯ.
ಕರ್ನಾಟಕದಲ್ಲಿ ನೋಂದಾಯಿಸದ ಪ್ಲಾಸ್ಟಿಕ್ ಉತ್ಪಾದನಾ ಮತ್ತು ರಿಸೈಕ್ಲಿಂಗ್ ಘಟಕಗಳು ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಗಂಭೀರ ಅಂಶವನ್ನೂ CPCB ವರದಿ ಬಹಿರಂಗಪಡಿಸಿದೆ. ಇವು ನಿಯಮ ಪಾಲನೆ ಮಾಡದೇ, ಪರಿಸರ ಮಾಲಿನ್ಯಕ್ಕೆ ನೇರ ಕಾರಣವಾಗುತ್ತಿವೆ. ಇಂತಹ ಘಟಕಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ, ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಇನ್ನಷ್ಟು ಗಂಭೀರವಾಗುವುದು ನಿಶ್ಚಿತ.
ಇದನ್ನೂ ಓದಿ: ಪ್ಲಾಸ್ಟಿಕ್ ಚೀಲ ಮುಕ್ತ ದಿನ | ಪರಿಸರ ಸ್ನೇಹಿ ಭವಿಷ್ಯಕ್ಕಾಗಿ ಜಾಗತಿಕ ಹೋರಾಟ
ಈ ಕುರಿತು ಪರಿಸರ ಪತ್ರಕರ್ತೆ ಶ್ರೀನಿಧಿ ಅಡಿಗ ಹೀಗೆನ್ನುತ್ತಾರೆ, “ನಗರಗಳಲ್ಲಿ, ಮನೆಗಳಲ್ಲಿ ತ್ಯಾಜ್ಯ ವಿಂಗಡಣೆ, ಸಂಗ್ರಹಿಸಿದ ವಾಹನಗಳಲ್ಲಿ ವಿಂಗಡಿಸಿದ ತ್ಯಾಜ್ಯ ಬೇರೆ ಬೇರೆಯಾಗಿಯೇ ತೆಗೆದುಕೊಂಡು ಹೋಗುವ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ. ಪ್ಲಾಸ್ಟಿಕ್ ನಿಷೇಧಗೊಂಡಿದ್ದರೂ ಅದು ಇನ್ನೂ ಬಳಕೆಯಲ್ಲಿದೆ. ಬೆಂಗಳೂರಿನಂತಹ ನಗರ ಹೊರತುಪಡಿಸಿದರೆ ಉಳಿದೆಡೆ ಇ-ವೇಸ್ಟ್ ಸಂಗ್ರಹಣಾ ವ್ಯವಸ್ಥೆಗಳಿಲ್ಲ. ಹೆಚ್ಚಿನ ಗ್ರಾಮಪಂಚಾಯಿತಿಗಳಲ್ಲಿ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಪ್ರಕ್ರಿಯೆ ನಡೆಯುತ್ತಿದ್ದರೂ, ಸಂಗ್ರಹಿಸಿದ ಘನ ತ್ಯಾಜ್ಯ ವಿಲೇವಾರಿಗೆ ಸೂಕ್ತ ಪರಿಹಾರೋಪಾಯಗಳಾಗಲೀ, ನಿದರ್ಶನಗಳಾಗಲೀ ಇಲ್ಲ. ಪ್ಲಾಸ್ಟಿಕ್ ತ್ಯಾಜ್ಯವಾಗಲೀ ಇತರ ತ್ಯಾಜ್ಯವಾಗಲೀ ಅದರ ಮರುಬಳಕೆ ಇನ್ನೂ ಪ್ರಯೋಗಾವಸ್ಥೆಯಲ್ಲಿಯೇ ಇದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಿಮೆಂಟ್ ಫ್ಯಾಕ್ಟರಿಗಳಿಗೆ ಕಳುಹಿಸುವುದು ವಿಲೇವಾರಿಯ ಒಂದು ಮಾರ್ಗ. ಆದರೆ, ಅದರ ಸಾಗಣಿಕೆಯ ದುಬಾರಿ ವೆಚ್ಚವನ್ನು ಗ್ರಾಮಪಂಚಾಯಿತಿಗಳಿಗೆ ಭರಿಸುವುದು ಕಷ್ಟ. ಎಲ್ಲಾ ಗ್ರಾಮ ಪಂಚಾಯಿತಿಗಳ ಪ್ಲಾಸ್ಟಿಕ್ ತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸಿ ಅದನ್ನು ಕಳುಹಿಸುವ ವ್ಯವಸ್ಥೆ ಸರ್ಕಾರದಲ್ಲಿ ಇಲ್ಲ. ಹೀಗಾಗಿ ಟನ್‌ಗಟ್ಟಲೆ ಪ್ಲಾಸ್ಟಿಕ್ ಘನತ್ಯಾಜ್ಯ ನಿರ್ವಹಣಾ ಘಟಕಗಳಲ್ಲಿಯೇ ಸಂಗ್ರಹವಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ತ್ಯಾಜ್ಯ ವಿಲೇವಾರಿ ಹಾಗೂ ಪ್ಲಾಸ್ಟಿಕ್ ನಿಷೇಧದ ಕುರಿತು ಕಠಿಣ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಅಗತ್ಯವಾಗಿದೆ” ಎಂದರು.
2016ರಲ್ಲಿ ದೇಶಕ್ಕೆ ಮಾದರಿಯಾಗಿದ್ದ ಪ್ಲಾಸ್ಟಿಕ್ ನಿಷೇಧ ಇಂದು ಕಾಗದದ ಮೇಲಿನ ಘೋಷಣೆಯಾಗಿ ಉಳಿದಿರುವುದು ದುರಂತ. ತ್ಯಾಜ್ಯ ಉತ್ಪಾದನೆಯನ್ನು ನಿಯಂತ್ರಿಸುವಲ್ಲಿ, ಸಂಸ್ಕರಣಾ ಮೂಲಸೌಕರ್ಯ ವಿಸ್ತರಿಸುವಲ್ಲಿ ಹಾಗೂ ನಿಷೇಧಿತ ವಸ್ತುಗಳ ಬಳಕೆಗೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸರ್ಕಾರದ ನಿರಂತರ ವಿಫಲತೆ ಸ್ಪಷ್ಟವಾಗಿ ಕಾಣುತ್ತಿದೆ. ನೋಂದಾಯಿಸದ ಉತ್ಪಾದನಾ ಮತ್ತು ರಿಸೈಕ್ಲಿಂಗ್ ಘಟಕಗಳ ಮೇಲಿನ ನಿಯಂತ್ರಣ, ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಸಂಪೂರ್ಣ ತಡೆ, ಸ್ಥಳೀಯ ಸಂಸ್ಥೆಗಳ ಹೊಣೆಗಾರಿಕೆ ನಿಗದಿ ಮತ್ತು ಜನಜಾಗೃತಿ ಸೇರಿದಂತೆ ಕಠಿಣ ಕ್ರಮಗಳ ಅನುಷ್ಠಾನದಿಂದ ಮಾತ್ರ ತ್ಯಾಜ್ಯ ವಿಲೇವಾರಿಯನ್ನು ವ್ಯವಸ್ಥಿತವಾಗಿ ಮಾಡಲು ಸಾಧ್ಯ. ಇವು ಜಾರಿಗೆ ಬರದಿದ್ದರೆ, ಲ್ಯಾಂಡ್‌ಫಿಲ್‌ಗಳಲ್ಲಿ ಹೂತುಹೋಗುತ್ತಿರುವ ಪ್ಲಾಸ್ಟಿಕ್ ಪರಿಸರವನ್ನಷ್ಟೇ ಅಲ್ಲ, ಮುಂದಿನ ಪೀಳಿಗೆಯ ಭವಿಷ್ಯವನ್ನೂ, ಪ್ರಾಣಿ ಸಂಕುಲವನ್ನೂ ಅಪಾಯಕ್ಕೆ ತಳ್ಳಲಿದೆ.





