ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ(ಎನ್‌ಸಿಆರ್‌ಬಿ) ದತ್ತಾಂಶವನ್ನು ಆಧರಿಸಿ 'ಈ ದಿನ' ಸಂಶೋಧನಾ ತಂಡ 2019ರಿಂದ 2023ರವರೆಗೆ ರಾಜ್ಯದಲ್ಲಿ ನಡೆದಿರುವ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ತುಲನೆಯನ್ನು ಮಾಡಿದೆ. ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ಬರೋಬ್ಬರಿ ಶೇ.40-44ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ.
ಸದ್ಯ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಕೃಷಿಯಿಂದ ಹಿಡಿದು ಬಾಹ್ಯಾಕಾಶದವರೆಗೂ ಮಹಿಳೆಯರ ಕೊಡುಗೆ ಅಗಾಧ. ಆದರೆ ದೇಶದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಮಾತ್ರ ಕಡಿಮೆಯಾಗುತ್ತಿಲ್ಲ, ಬದಲಾಗಿ ಇನ್ನಷ್ಟೂ ಹೆಚ್ಚಳವಾಗುತ್ತಿದೆ. ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಿಂದ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು ಏರುಗತಿಯಲ್ಲೇ ಸಾಗುತ್ತಿದೆ. ಅದರಲ್ಲೂ ಪತಿಯಿಂದ ಅಥವಾ ಮನೆಯವರಿಂದಲೇ ನಡೆಯುವ ದೌರ್ಜನ್ಯಗಳ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.
ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊ(ಎನ್‌ಸಿಆರ್‌ಬಿ) ದತ್ತಾಂಶವನ್ನು ಆಧರಿಸಿ ‘ಈ ದಿನ’ ಸಂಶೋಧನಾ ತಂಡ 2019ರಿಂದ 2023ರವರೆಗೆ ರಾಜ್ಯದಲ್ಲಿ ನಡೆದಿರುವ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳ ತುಲನೆಯನ್ನು ಮಾಡಿದೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಾದ ಬದಲಾವಣೆ, ಕೋವಿಡ್ ನಂತರದಲ್ಲಿ ನಡೆದ ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ಎನ್‌ಸಿಆರ್‌ಬಿ ದತ್ತಾಂಶ ಸಹಿತ ಮಾಹಿತಿಯನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಹೆಚ್ಚಾದ ರಸ್ತೆ ಅಪಘಾತ ಪ್ರಕರಣಗಳು: ಏರುತ್ತಲೇ ಸಾಗಿದೆ ಸಾವಿನ ಪ್ರಮಾಣ
2019ರಿಂದ 2023ರವರೆಗಿನ ಎನ್‌ಸಿಆರ್‌ಬಿ ದತ್ತಾಂಶ ಪರಿಶೀಲಿಸಿದಾಗ ಪತಿ ಅಥವಾ ಸಂಬಂಧಿಕರಿಂದ ನಡೆಯುವ ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ಬರೋಬ್ಬರಿ ಶೇ.40-44ರಷ್ಟು ಹೆಚ್ಚಾಗಿರುವುದು ಕಂಡುಬಂದಿದೆ. ಅಂದರೆ ಮನೆಯೇ ಮಹಿಳೆಯರಿಗೆ ಅಪಾಯಕಾರಿ ಸ್ಥಳವಾಗಿದೆ ಎನ್ನುವುದೇ?
ಯಾವುದೇ ಕಾಲದಲ್ಲೇ ಇರಲಿ ಆಗುವ ಬದಲಾವಣೆಗಳಿಗೆ ಮೊದಲು ಬಲಿಯಾಗುವುದು ಮಹಿಳೆ. ಸದ್ಯ ಡಿಜಟಲೀಕರಣದ ಅಪಾಯಕ್ಕೂ ಮಹಿಳೆಯರೇ ತುತ್ತಾಗುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳು 2022ರಿಂದ 2023ರವರೆಗಿನ ಅವಧಿಯಲ್ಲಿ ಶೇ.80ರಷ್ಟು ಹೆಚ್ಚಳವಾಗಿದೆ. ಈ ಅಪರಾಧಗಳು ಇನ್ನಷ್ಟು ಬೆಳೆಯುವ ಅಪಾಯವೂ ಇದೆ.
ರಾಜ್ಯದಲ್ಲಿ ಮಹಿಳಾ ವಿರೋಧಿ ದೌರ್ಜನ್ಯಗಳ ಹೆಚ್ಚಳ
ರಾಜ್ಯದಲ್ಲಿ 2019ರಲ್ಲಿ 17,522 ಮಹಿಳಾ ವಿರೋಧಿ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, ಪ್ರತಿ ಲಕ್ಷ ಮಹಿಳೆಯರಿಗೆ ಅಪರಾಧ ದರವು 61.9 ಆಗಿತ್ತು. 2020ರಲ್ಲಿ ಕೋವಿಡ್ ಸಂದರ್ಭದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳು 14,258ಕ್ಕೆ ಇಳಿಕೆಯಾಗಿದ್ದು ಶೇ.18.6ರಷ್ಟು ಪ್ರಕರಣಗಳ ಪ್ರಮಾಣ ಇಳಿಕೆಯಾಗಿದೆ. ಅಪರಾಧ ದರವೂ 49.7ಕ್ಕೆ ಇಳಿಕೆಯಾಗಿದೆ. ಆದರೆ ಕೋವಿಡ್ ನಂತರ 2021ರಲ್ಲಿ ಮತ್ತೆ ಅಪರಾಧಗಳ ಸಂಖ್ಯೆ 16,445ಕ್ಕೆ, ಅಪರಾಧ ದರ 56.5ಕ್ಕೆ ಏರಿಕೆಯಾಗಿದೆ. 2022ರಲ್ಲಿ 16,342 ಮತ್ತು 2023ರಲ್ಲಿ 17,765 ಪ್ರಕರಣಗಳು ದಾಖಲಾಗಿವೆ. ಅಂದರೆ 2022ರಿಂದ 2023ಕ್ಕೆ ಶೇ.8.7ರಷ್ಟು ಪ್ರರಕಣ ಏರಿಕೆಯಾಗಿದೆ. ಸದ್ಯ ಭಾರತದಲ್ಲಿ ಎಂಟನೇ ಸ್ಥಾನದಲ್ಲಿ ಕರ್ನಾಟಕವಿದೆ.

ಇನ್ನು ಪತಿಯಿಂದ ಅಥವಾ ಕುಟುಂಬಸ್ಥರಿಂದ ನಡೆಯುವ ದೌರ್ಜನ್ಯವು 2020 ಹೊರತುಪಡಿಸಿ ಮತ್ತೆಲ್ಲಾ ವರ್ಷಗಳಲ್ಲಿ ನಿರಂತರವಾಗಿ ಹೆಚ್ಚಳವಾಗುತ್ತಾ ಸಾಗಿದೆ. ಇನ್ನು ಸೆಕ್ಷನ್ 354ರ ಅಡಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವು 2023ರಲ್ಲಿ(3,891 ಪ್ರಕರಣಗಳು) ಸಾರ್ವಕಾಲಿಕ ಏರಿಕೆಯನ್ನು ಕಂಡಿದೆ. ಇನ್ನು 2021ರ ನಂತರ ಮಹಿಳೆಯರ ವಿರುದ್ಧ ಸೈಬರ್ ಕ್ರೈಮ್ ಪ್ರಕರಣವು ಹೆಚ್ಚಾಗುತ್ತಾ ಸಾಗಿದ್ದು 2023ರಲ್ಲಿ 763 ಪ್ರಕರಣಗಳು ದಾಖಲಾಗಿವೆ. ಅತ್ಯಾಚಾರ ಪ್ರಕರಣಗಳು ಕಳೆದ ಮೂರು ವರ್ಷಗಳಿಂದ 1,580ರಷ್ಟು ದಾಖಲಾಗುತ್ತಿವೆ.

ರಾಜ್ಯದಲ್ಲೇ ಅಧಿಕ ಪ್ರಕರಣ ಬೆಂಗಳೂರಿನಲ್ಲಿ ದಾಖಲು
ರಾಜ್ಯದಲ್ಲೇ ಅಧಿಕ ಸೈಬರ್ ಕ್ರೈಮ್ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ಅದೂ ನಿರಂತರವಾಗಿ ಹೆಚ್ಚಾಗುತ್ತಲೆ ಸಾಗುತ್ತಿದೆ. 2019ರಲ್ಲಿ 5,200 ಮಹಿಳೆಯರ ವಿರುದ್ಧದ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 2023ರ ವೇಳೆಗೆ 6,069ಕ್ಕೆ ಏರಿಕೆಯಾಗಿದೆ. ಒಟ್ಟು ರಾಜ್ಯದಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಶೇ.34.2ರಷ್ಟು ಬೆಂಗಳೂರಿನಲ್ಲಿಯೇ ಕಂಡುಬರುತ್ತಿದೆ. ಅದರಲ್ಲೂ ಸೈಬರ್ ಪ್ರಕರಣಗಳು ಅಧಿಕವಾಗಿದೆ. ಬೆಂಗಳೂರಿನ ನಂತರದ ಸ್ಥಾನದಲ್ಲಿ ಕ್ರಮವಾಗಿ ಬೆಳಗಾವಿ, ಮೈಸೂರು ಜಿಲ್ಲೆ, ದಕ್ಷಿಣ ಕನ್ನಡ, ತುಮಕೂರು ಇದೆ. ಒಟ್ಟಾರೆಯಾಗಿ ನೋಡಿದಾಗ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಏರಿಕೆಯಾಗುತ್ತಲೇ ಇದೆ.


ಹೀಗಿರುವಾಗ ಮಹಿಳೆಯರಿಗೆ ನಿಜವಾಗಿಯೂ ಸುರಕ್ಷಿತವಾದ ಸ್ಥಳ ಯಾವುದು? ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಿದೆ ಎಂಬ ಪ್ರಶ್ನೆಯನ್ನು ಸದ್ಯ ಎತ್ತಬೇಕಾಗುತ್ತದೆ. ಮಹಿಳೆಯರಿಗಾಗಿ 181 ಸಹಾಯವಾಣಿ ಸಂಖ್ಯೆ ಇದೆ. ಆದರೆ ಅದು ಎಷ್ಟರಮಟ್ಟಿಗೆ ಕಾರ್ಯರೂಪದಲ್ಲಿದೆ, ಮಹಿಳೆಯರಿಗೆ ಸಹಾಯವಾಗುತ್ತಿದೆಯೇ ಎಂಬ ಬಗ್ಗೆ ಸರ್ಕಾರ ಪರಿಶೀಲನೆ ನಡೆಸುವುದು ಅಗತ್ಯ. ಇದರೊಂದಿಗೆ ಸದ್ಯ ಕಾರ್ಯನಿರ್ವಹಿಸುತ್ತಿರುವ ಸಖಿ ಕೇಂದ್ರಗಳ ಕಾರ್ಯವೈಖರಿ ಬಗ್ಗೆಯೂ ಸರ್ಕಾರ ನಿಗಾ ವಹಿಸಬೇಕಿದೆ. ಅವೆಲ್ಲವುದಕ್ಕೂ ಮುಖ್ಯವಾಗಿ ಸರ್ಕಾರ ಎಲ್ಲಾ ಕಚೇರಿಗಳಲ್ಲಿ ಲಿಂಗ ಸಮಾನತೆ, ಸೂಕ್ಷ್ಮತೆ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ಕಡ್ಡಾಯಗೊಳಿಸಬೇಕು.
ಸದ್ಯ ರಾಜ್ಯದಲ್ಲೇ ಅಧಿಕ ಮಹಿಳಾ ವಿರೋಧಿ ದೌರ್ಜನ್ಯಗಳು ನಡೆಯುವ ಬೆಂಗಳೂರಿನಲ್ಲಿ ಪೊಲೀಸರು ಮಹಿಳೆಯರ ಸುರಕ್ಷತೆಗಾಗಿ ‘ಸುರಕ್ಷಾ’ ಎಂಬ SOS ಅಪ್ಲಿಕೇಶನ್ ಅನ್ನು ಪರಿಚಯಿಸಿದ್ದಾರೆ. ಆದರೆ ಈ ಅಪ್ಲಿಕೇಶನ್ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡುವ ಕಾರ್ಯ ಇನ್ನೂ ನಡೆದಿಲ್ಲ. ಇನ್ನು ಈ ಅಪ್ಲಿಕೇಶನ್‌ಗಳು ಸ್ಮಾರ್ಟ್ ಮೊಬೈಲ್ ಬಳಸುವ ಮಹಿಳೆಯರಿಗೆ ಸಹಾಯವಾಗುವುದಾದರೆ ಈ ಡಿಜಿಟಲ್ ಸೌಲಭ್ಯಗಳನ್ನು ಹೊಂದಿರದ ಮಹಿಳೆಯರಿಗೆ ಯಾವ ಸುರಕ್ಷತೆಯಿದೆ? ಇಲ್ಲಿ ಸರ್ಕಾರದ ಕ್ರಮ ಮಾತ್ರವಲ್ಲ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಅದಕ್ಕಾಗಿ ಹೆಣ್ಣು, ಗಂಡು ಮಕ್ಕಳಿಗೆ ಸಣ್ಣ ವಯಸ್ಸಲ್ಲೇ ಲೈಂಗಿಕ ಶಿಕ್ಷಣ ನೀಡುವುದು ಮುಖ್ಯ.




