‘ವಂದೇ ಮಾತರಂ’ಗೆ ಕತ್ತರಿ; ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್ ಪಾತ್ರವೇನು?

Date:

‘ವಂದೇ ಮಾತರಂ’ ಗೀತೆಗೆ 150 ವರ್ಷಗಳಾದ ಹಿನ್ನೆಲೆಯಲ್ಲಿ ವಿಶೇಷ ಚರ್ಚೆಯನ್ನು ಎನ್‌ಡಿಎ ನೇತೃತ್ವದ ಒಕ್ಕೂಟ ಸರ್ಕಾರ ಹಮ್ಮಿಕೊಂಡಿದ್ದು ಏತಕ್ಕೆ? ಇದಕ್ಕೆ ಎರಡು ರೀತಿಯ ಅಭಿಪ್ರಾಯಗಳು ಬಂದಿವೆ. ಒಂದು- ಪ್ರಚಲಿತ ಗಂಭೀರ ಸಮಸ್ಯೆಗಳನ್ನು ಮೂಲೆಗುಂಪು ಮಾಡುವುದು, ಎರಡು- ಬಿಜೆಪಿಯ ಕೋಮು ರಾಜಕಾರಣಕ್ಕೆ ವಂದೇ ಮಾತರಂ ಮೂಲ ಪೋಷಕವಾಗಿದೆ ಎನ್ನುವುದು. ಎರಡನೇ ಉದ್ದೇಶದ ಬಗ್ಗೆ ಪ್ರಶ್ನಿಸಿದರೆ, “ಮುಚ್ಚಿಟ್ಟ ಇತಿಹಾಸವನ್ನು ಯುವತಲೆಮಾರಿಗೆ ಹೇಳುತ್ತಿದ್ದೇವೆ. ಇದರ ಹಿಂದೆ ಯಾವುದೇ ರಾಜಕಾರಣವಿಲ್ಲ” ಎಂದು ಬಿಜೆಪಿ ನಾಯಕರು ವಾದಿಸುತ್ತಾರೆ. ಆದರೆ ಇವರು ಹೇಳುವ ಇತಿಹಾಸವು ಅರ್ಧ ಸತ್ಯಗಳಿಂದ ಕೂಡಿದೆ ಎಂಬುದನ್ನು ತಿಳಿಸದಿದ್ದರೆ ಅಪಾಯಗಳು ಕಾದಿವೆ.

ಬ್ರಿಟಿಷ್ ಸರ್ಕಾರದಲ್ಲಿ ಅಧಿಕಾರಿಯಾಗಿದ್ದ ‘ಬಂಕಿಮ ಚಂದ್ರ’ರ ‘ವಂದೇ ಮಾತರಂ’ ಮತ್ತು ಅದರ ಹಿನ್ನಲೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳದೆ, ಬಿಜೆಪಿಯ ಇಂದಿನ ಕೋಮು ರಾಜಕಾರಣ ಗೊತ್ತಾಗುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಬಗ್ಗೆ ಯಾವುದೇ ಚರಿತ್ರೆಯನ್ನು ಹೊಂದಿಲ್ಲದ ಸಂಘಪರಿವಾರವು ‘ವಂದೇ ಮಾತರಂ’ ಗೀತೆಯನ್ನು ವೈಭವೀಕರಿಸುವುದು ಸಹಜವೂ ಹೌದು. “ಈ ಗೀತೆಯ ಕೆಲ ಸಾಲುಗಳನ್ನಷ್ಟೇ ಉಳಿಸಿಕೊಂಡು, ಉಳಿದದ್ದನ್ನು ನೆಹರೂ ಮತ್ತು ಕಾಂಗ್ರೆಸ್ ಕಿತ್ತು ಬಿಸಾಡಿತು. ಆ ಮೂಲಕ ದೇಶ ವಿಭಜನೆ ಮಾಡಲಾಯಿತು” ಎಂಬುದು ಮೋದಿ ಮತ್ತು ಅವರ ಕೇಸರಿ ಪರಿವಾರದ ಕೂಗಾಟ. ಆದರೆ ವಂದೇ ಮಾತರಂ ಸಾಲುಗಳಲ್ಲಿ ಕತ್ತರಿ ಹಾಕಿದ್ದು ಕೇವಲ ನೆಹರೂ ಮಾತ್ರವೇ? ನೆಹರೂ ಜೊತೆಗೆ ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್ ಮತ್ತು ರವೀಂದ್ರನಾಥ್ ಟ್ಯಾಗೋರ್ ಇದ್ದರಲ್ಲವೇ? ಇದಕ್ಕೇನು ಹೇಳುತ್ತೀರಿ? ಎಂದು ಪ್ರಶ್ನಿಸಿದರೆ- “ಅದು ಸುಳ್ಳು ಇತಿಹಾಸ, ಎಡಪಂಥೀಯರು ಬರೆದ ಚರಿತ್ರೆ” ಎಂದು ಮೊಂಡುವಾದ ಮಾಡುತ್ತಾರೆ. ಆದರೆ ಇತಿಹಾಸವನ್ನು ಕಪ್ಪುಬಿಳುಪಿನಲ್ಲಿ ನೋಡಲು ಸಾಧ್ಯವಿಲ್ಲ ಎಂಬುದಷ್ಟೇ ನಮ್ಮ ಮುಂದಿರುವ ಸತ್ಯ.

ಬಂಕಿಮಚಂದ್ರ ಚಟರ್ಜಿಯವರು ‘ವಂದೇ ಮಾತರಂ’ ಗೀತೆ ಬರೆದದ್ದು 1872ರಲ್ಲಿ. ಅದು ಮೊದಲ ಬಾರಿಗೆ ಚಾಲ್ತಿಗೆ ಬಂದಿದ್ದು 1875ರಲ್ಲಿ. ಆಗ ಇದ್ದದ್ದು ಕೇವಲ 12 ಸಾಲುಗಳು. ಅವುಗಳಲ್ಲಿ ಯಾವುದೇ ಕೋಮುವಾದಿ ದೃಷ್ಟಿಕೋನವೇನೂ ಇರಲಿಲ್ಲ. ಆದರೆ 1876ರ ನಂತರದಲ್ಲಿ ‘ಆನಂದ ಮಠ’ ಕಾದಂಬರಿಯನ್ನು ‘ಬಂಗದರ್ಶನ’ ಮಾಸಿಕದಲ್ಲಿ ಧಾರವಾಹಿಯಾಗಿ ಬರೆಯುತ್ತಾರೆ. ‘ವಂದೇ ಮಾತರಂ’ಗೆ 15 ಹೆಚ್ಚುವರಿ ಸಾಲುಗಳನ್ನು ಬರೆದು ಕಾದಂಬರಿಯಲ್ಲಿ ಬಳಸುತ್ತಾರೆ. ಮುಸ್ಲಿಮರನ್ನು ಶತ್ರುಗಳಂತೆ ಚಿತ್ರಿಸಿ ರಚನೆಯಾದ ‘ಆನಂದಮಠ’ ಕೃತಿಯು 1882ರಲ್ಲಿ ಬಿಡುಗಡೆಯಾಗುತ್ತದೆ. ಅದರಲ್ಲಿ ಸೇರಿಸಲಾದ ‘ವಂದೇ ಮಾತರಂ’ಗೂ, 1875ರಲ್ಲಿ ಚಾಲ್ತಿಗೆ ಬಂದ ‘ವಂದೇ ಮಾತರಂ’ಗೂ ವ್ಯತ್ಯಾಸಗಳಿದ್ದವು. ‘ಆನಂದಮಠ’ ಕಾದಂಬರಿಯ ಕಥೆಯು ಬ್ರಿಟಿಷರ ಒಡೆದು ಆಳುವ ನೀತಿಗೆ ಪೂರಕವಾಗಿತ್ತು. ಇದು 1882ರಲ್ಲಿ ರಚನೆಯಾದ ಕೃತಿಯಾದರೂ 1757ರ ನಂತರದ ಕಾಲಘಟ್ಟದಲ್ಲಿನ ಅರೆಬರೆ ಚರಿತ್ರೆಯ ಕಥೆಯನ್ನು ಒಳಗೊಂಡಿತ್ತು. 1757ರ ಪ್ಲಾಸಿಕದನ ನಡೆದು, ಬಂಗಾಳವು ಬ್ರಿಟಿಷರ ವಶವಾಗುತ್ತದೆ. ಇನ್ನಿಲ್ಲದ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲಾರಂಭಿಸಿದ ಬ್ರಿಟಿಷರು, ಗುಲಾಮಿ ನವಾಬರ ಮೂಲಕ ಜನಸಾಮಾನ್ಯರನ್ನು ಶೋಷಣೆ ಮಾಡುತ್ತಾ ಹೋಗುತ್ತಾರೆ. ಆ ಕಾಲದ ಕಥನವನ್ನು ಹೇಳುವ ‘ಆನಂದಮಠ’ವು ಮುಸ್ಲಿಮರ ವಿರುದ್ಧ ಸೇಡು ತೀರಿಸಿಕೊಳ್ಳುವ ಹಪಾಹಪಿ ತೋರುತ್ತದೆ ಮತ್ತು ಈ ದೇಶದ ನಿಜಶತ್ರುಗಳಾದ ಬ್ರಿಟಿಷರನ್ನು ತಮ್ಮ ಸನಾನತಾ ಬ್ರಾಹ್ಮಣೀಯ ಸಂಸ್ಕೃತಿಯ ಪೋಷಕರೆಂಬಂತೆ ಬಿಂಬಿಸುತ್ತದೆ. ಇದಕ್ಕೆ ಪೂರಕವಾಗಿ ಚಿತ್ರಿತವಾಗಿದ್ದೇ ‘ವಂದೇ ಮಾತರಂ’ನ ಹೊಸ ಸಾಲುಗಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
Anad Mat
‘ಆನಂದಮಠ’ ಕಾದಂಬರಿ

ಆನಂದ ಮಠ ಬರೆದ ಬಂಕಿಮ ಚಂದ್ರರನ್ನು ಬ್ರಿಟಿಷ್ ಆಡಳಿತದ ಅಧಿಕೃತ ಗೆಜೆಟ್‌ನಲ್ಲೂ ಪ್ರಶಂಸಿಸಲಾಗಿತ್ತು. ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದ ಬ್ರಿಟಿಷರ ಆಶಯಗಳನ್ನೇ ಈ ಕಾದಂಬರಿ ಪೋಷಿಸುತ್ತಿದ್ದರಿಂದ, “ಭಾರತದ ಮೇಲೆ ಬ್ರಿಟಿಷರು ಸಂಪೂರ್ಣ ಸ್ವಾಮ್ಯವನ್ನು ಪಡೆಯಬೇಕೆಂಬುದು ಕೃತಿಯ ಆಶಯ ಮತ್ತು ಮುಸ್ಲಿಮರ ಆಳ್ವಿಕೆಯ ಅಂತ್ಯವನ್ನು ಬಯಸುವ ಕೃತಿ ಇದು” ಎಂದೂ ಬ್ರಿಟಿಷರು ಬಣ್ಣಿಸಿದ್ದರು. ಮತ್ತೊಂದೆಡೆ ಅದೇ ಕಾಲಘಟ್ಟದಲ್ಲಿ ಬ್ರಿಟಿಷ್ ದುರಾಡಳಿತವನ್ನು ತೀಕ್ಷ್ಣವಾಗಿ ಕುಟುಕಿದ್ದ ಲೇಖಕರನ್ನು ಬ್ರಿಟಿಷರು ಜೈಲಿಗೆ ದೂಡಿ ಚಿತ್ರಹಿಂಸೆ ನೀಡುತ್ತಿದ್ದರು ಎಂಬುದನ್ನೂ ಸೂಕ್ಷ್ಮವಾಗಿ ನೋಡಬೇಕಾಗುತ್ತದೆ. ಇಷ್ಟೆಲ್ಲದರ ನಡುವೆಯೂ ಮುಸ್ಲಿಂ ವಿರೋಧಿ ಧೋರಣೆಯ ‘ಆನಂದಮಠ’ ಮತ್ತು ಅದರೊಳಗೆ ಹೊಸದಾಗಿ ಬಳಸಲಾದ ‘ವಂದೇ ಮಾತರಂ’ ಜನಸಾಮಾನ್ಯರನ್ನೇನೂ ಬಾಧಿಸಲಿಲ್ಲ, ಗಂಭೀರ ಸಮಸ್ಯೆ ಎಂಬಂತೆಯೂ ತಲೆದೋರಲಿಲ್ಲ.

ಆಗಿನ್ನೂ ಕೋಮುವಾದಿ ರಾಜಕಾರಣ ಅಷ್ಟು ಬಿರುಸು ಪಡೆದಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದೂ ಮುಸ್ಲಿಮರೆಲ್ಲರೂ ಒಂದಾಗಿ ಮುನ್ನಡೆಯುತ್ತಿದ್ದ ಕಾಲದಲ್ಲಿ ‘ವಂದೇ ಮಾತರಂ’ನ ಹಿನ್ನಲೆ ರಾಜಕೀಯ ಕೇಂದ್ರಿತವೂ ಆಗಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ಘೋಷಣೆಯಾಗಿ ಹೊಮ್ಮಿದ್ದ ‘ವಂದೇ ಮಾತರಂ’ ಜೊತೆಗೆ ‘ಅಲ್ಲಾ ಓ ಅಕ್ಬರ್’ ಕೂಡ ಮೊಳಗುತ್ತಿತ್ತು. ಆದರೆ 1909ರ ನಂತರದಲ್ಲಿ ಮತೀಯ ಭಾವನೆಗಳು ಮೊಳೆತು, ಅದೇ ಬಲವಾಗುತ್ತಾ ಹೋದಂತೆ, ಮೂರ್ತಿಪೂಜೆಯನ್ನು ಆರಾಧಿಸುವ ‘ವಂದೇ ಮಾತರಂ’ ಮತ್ತು ಮುಸ್ಲಿಮರ ಅಂತ್ಯಕ್ಕೆ ಹಾತೊರೆಯುವ ‘ಆನಂದಮಠ’ದ ಕುರಿತು ತೀವ್ರ ಚರ್ಚೆಗಳು ಎದ್ದು ಬಂದವು.

ಇದನ್ನೂ ಓದಿರಿ: ನಿರಂತರ ಕಣ್ಗಾವಲಿನ ಸರ್ಕಾರಿ ಸಾಧನ – ‘ಸಂಚಾರ್ ಸಾಥಿ’ ಅಪ್ಲಿಕೇಶನ್

ಹೇಳಬೇಕೆಂದರೆ ‘ವಂದೇಮಾತರಂ’ ಸಾಲುಗಳಿಗೆ ಮೊದಲಿಗೆ ಸಂಗೀತ ಸಂಯೋಜನೆ ಮಾಡಿ ಹಾಡಿದ್ದು ‘ರವೀಂದ್ರ ನಾಥ ಟ್ಯಾಗರ್’. ಪರಿಷ್ಕರಿಸಲ್ಪಟ್ಟ ವಂದೇ ಮಾತರಂನಲ್ಲಿ ರಾಷ್ಟ್ರೀಯ ಏಕತೆಗೆ ದಕ್ಕೆ ತರುವ ಸಾಲುಗಳಿವೆ ಎಂಬ ವಿವಾದ ಎದ್ದಾಗ, ಅದನ್ನು ಒಪ್ಪಿಕೊಂಡು, ಮೊದಲ ಚರಣಗಳನ್ನಷ್ಟೇ ಉಳಿಸಿಕೊಳ್ಳಲು ಹೇಳಿದ್ದು ಕೂಡ ‘ರವೀಂದ್ರನಾಥ ಟ್ಯಾಗರ್’ ಎಂಬುದನ್ನು ಸಂಘಪರಿವಾರ ಮರೆಮಾಚುತ್ತದೆ!

ಈ ಚರ್ಚೆಗಳ ಫಲಿತವೇನು? ಮುಖ್ಯವಾಗಿ ರಾಷ್ಟ್ರೀಯವಾದಿ ಮುಸ್ಲಿಮರು, ಮತೀಯವಾದಿ ದೃಷ್ಟಿಕೋನದ ಮುಸ್ಲಿಮರ ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು. ಈ ಸಂದಿಗ್ಧತೆಯೇ ದೇಶದ ಏಕತೆಯನ್ನು ಉಳಿಸುವುದಕ್ಕಾಗಿ ‘ವಂದೇ ಮಾತರಂ’ನ ಪ್ರತಿಗಾಮಿ ಸಾಲುಗಳಲ್ಲಿ ಕತ್ತರಿ ಆಡಿಸುವ ಮಟ್ಟಕ್ಕೆ ಕೊಂಡೊಯ್ದಿತು. ಹಿಂದುತ್ವ ರಾಜಕಾರಣವು ಇದನ್ನು ಅಂದು ಕೂಡ ವಿರೋಧಿಸಿತು ಮತ್ತು ಇಂದು ಕೂಡ ಅದನ್ನೇ ಹಿಡಿದುಕೊಂಡು ಆಟ ಆಡಲು ಯತ್ನಿಸುತ್ತಿದೆ. ಸದಾ ನೆಹರೂ ಅವರ ಮೇಲೆ ಹಗೆಸಾಧಿಸುವ ಸಂಘಪರಿವಾರವು ಉದ್ದೇಶಪೂರ್ವಕವಾಗಿ, ‘ವಂದೇ ಮಾತರಂ’ ತುಂಡಿರಿಸಿದ್ದು ‘ನೆಹರೂ’ ಮಾತ್ರ ಎಂಬಂತೆ ಪ್ರಚಾರ ಮಾಡುತ್ತಿದೆ. ಆದರೆ ಈ ಹಾಡಿನ ಕೆಲವು ಸಾಲುಗಳಷ್ಟೇ ಪ್ರಚಾರದಲ್ಲಿರಬೇಕು ಎಂದು ತೀರ್ಮಾನವಾಗಿದ್ದು ಹೇಗೆಂಬುದನ್ನು ಬುದ್ಧಿವಂತಿಕೆಯಿಂದ ಮರೆಮಾಚಲಾಗುತ್ತದೆ.

ದ್ವೇಷವನ್ನು ಉದ್ಧೀಪಿಸುವ ಮತ್ತು ಬ್ರಿಟಿಷರೊಂದಿಗೆ ಕೈಜೋಡಿಸುವ ಮತೀಯವಾದ ಬೆಳೆಯತೊಡಗಿದ್ದ ಕಾಲಘಟ್ಟವದು. ಇನ್ನೊಂದೆಡೆ 1935ರ ಗವರ್ನಮೆಂಟ್ ಆಫ್ ಇಂಡಿಯಾ ಆಕ್ಟ್ ಭಾಗವಾಗಿ 1937ರಲ್ಲಿ ಚುನಾವಣೆ ನಡೆದಿತ್ತು. ಬ್ರಿಟಿಷ್ ಆಡಳಿತ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಜಾರಿಗೆ ಬಂದಿದ್ದವು. ಆದರೆ ಮುಸ್ಲಿಮರು ಮತೀಯವಾದಿ ಜಿನ್ನಾರನ್ನು ಬೆಂಬಲಿಸದೆ ಕಾಂಗ್ರೆಸ್ ಜೊತೆ ನಿಂತಿದ್ದರು. ಇದು ಜಿನ್ನಾ ಅವರಿಗೆ ದೊಡ್ಡ ಆಘಾತ ತಂದಿತ್ತು.

Jinna savarakar

ಹಿಂದುತ್ವವನ್ನು ಪ್ರತಿಪಾದಿಸುತ್ತಾ, ಸ್ವಾತಂತ್ರ್ಯ ಹೋರಾಟದಿಂದ ವಿಮುಖರಾಗಿದ್ದ ವಿ.ಡಿ.ಸಾವರ್ಕರ್ 1937ರಲ್ಲಿ ‘ದೇಶದ್ಯಾಂತ ವಂದೇ ಮಾತರಂ ದಿನವನ್ನು ಎಲ್ಲ ನಿಜವಾದ ಭಾರತೀಯರು ಆಚರಿಸಬೇಕು’ ಎಂದು ಕರೆ ನೀಡಿದ್ದರು. ಈಗಾಗಲೇ ವಂದೇ ಮಾತರಂ ಕುರಿತು ಹುಟ್ಟಿಕೊಂಡಿದ್ದ ಅಸಹನೆಯನ್ನು ಬಳಸಿಕೊಂಡು, ಹಿಂದೂ- ಮುಸ್ಲಿಮರನ್ನು ಒಡೆದು ಆಳುತ್ತಾ, ಬ್ರಿಟಿಷರಿಗೆ ಸಹಕರಿಸುವ ಹುನ್ನಾರ ಇದರ ಹಿಂದೆ ಇತ್ತು. ಸಾವರ್ಕರರ ಹಿಂದೂ ಮಹಾಸಭಾದಲ್ಲಿದ್ದ ಹಲವರು ಕಾಂಗ್ರೆಸ್‌ನಲ್ಲೂ ಗುರುತಿಸಿಕೊಂಡಿದ್ದ ಕಾಲಘಟ್ಟವದು. ಇಂಥವರು ವಂದೇ ಮಾತರಂ ಆಡುವುದನ್ನು ಶಾಲೆ ಕಾಲೇಜುಗಳಲ್ಲಿ ಕಡ್ಡಾಯ ಮಾಡಿದರು. ಜಿನ್ನಾ ಅವರು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳತೊಡಗಿದರು. ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್‌, ಕಾಂಗ್ರೆಸ್ ವಿರುದ್ಧ ಕತ್ತಿಮಸೆಯಲು ಶುರುಮಾಡಿತು. ಅಡಕತ್ತರಿಗೆ ಸಿಲುಕಿದ ಕಾಂಗ್ರೆಸ್ ನಾಯಕರು ಸಮಸ್ಯೆಯನ್ನು ಬಗೆಹರಿಸಲು ಮುಂದಾದರು. ಆಗ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ನರೇಂದ್ರ ದೇವ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ವಂದೇ ಮಾತರಂ ಬಗ್ಗೆ ಅಭಿಪ್ರಾಯ ತಿಳಿಸಲು ‘ಟ್ಯಾಗೋರ’ರಲ್ಲಿ ಸಮಿತಿ ವಿನಂತಿ ಮಾಡಿಕೊಂಡಿತು.

ಇದನ್ನೂ ಓದಿರಿ: ವಂದೇ ಮಾತರಂ | ಲೋಕಸಭೆಯ ಬಿಜೆಪಿ ನಿಲುವಿನಿಂದ ಅಂತರ ಕಾಯ್ದುಕೊಂಡ ಜೆಡಿಯು!

ಈ ಕುರಿತು ಬರೆದಿರುವ ಚಿಂತಕ ಶಿವಸುಂದರ್, “ಟಾಗೂರರು ಅತ್ಯಂತ ಸ್ಪಷ್ಟವಾಗಿ ವಂದೇ ಮಾತರಂನ ಮೊದಲೆರಡು ಚರಣಗಳನ್ನು ಬಿಟ್ಟರೆ ಉಳಿದವು ಅತ್ಯಂತ ಸಮಸ್ಯಾತ್ಮಕ ಹಾಗೂ ಮುಸ್ಲಿಮರ ಧಾರ್ಮಿಕ ಮನಸ್ಸಿಗೆ ಅಂಗೀಕಾರವಾಗದ್ದು ಎಂದು ಅಭಿಪ್ರಾಯಪಟ್ಟಿದ್ದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಂದೇ ಮಾತರಂ ಘೋಷಣೆ ಕೊಟ್ಟಿರುವ ಸ್ಪೂರ್ತಿಯನ್ನು ಗಮನಿಸುತ್ತಲೇ, ಅದರ ಉಳಿದ ಭಾಗಗಳಿಲ್ಲಿರುವ ಸ್ಪಷ್ಟ ಹಿಂದೂ ಧಾರ್ಮಿಕ ಸಂಕೇತಗಳು ಮತ್ತು ಪ್ರತಿಮೆಗಳು ಮುಸ್ಲಿಮರಿಗೆ ಕಸಿವಿಸಿಯುಂಟು ಮಾಡುತ್ತದೆ ಎಂಬುದನ್ನು ಸಮಿತಿ ಗ್ರಹಿಸುತ್ತದೆ. ಹೀಗಾಗಿ ಕಾಂಗ್ರೆಸ್ಸಿನ ಅಧಿವೇಶನಗಳಲ್ಲಿ ಮತ್ತು ಬಹಿರಂಗ ಸಭೆಗಳಲ್ಲಿ ವಂದೇ ಮಾತರಂನ ಮೊದಲೆರಡು ಚರಣಗಳನ್ನು ಮಾತ್ರ ಹಾಡತಕ್ಕದ್ದು ಹಾಗೂ ಅದರ ಜೊತೆಗೆ ಅಥವಾ ಅದರ ಬದಲಿಗೆ ಇನ್ಯಾವುದೇ ಧಾರ್ಮಿಕ ಧಕ್ಕೆ ತರದ ಗೀತೆಗಳನ್ನು ಹಾಡಬಹುದು ಎಂದು ತೀರ್ಮಾನಿಸಲಾಗುತ್ತದೆ. ಹೀಗಾಗಿ ಇದು ಕೇವಲ ನೆಹರೂ ಚಿತಾವಣೆಯೋ – ತೀರ್ಮಾನವೋ ಅಲ್ಲ. ಸಂಘಿಗಳು ಮೆಚ್ಚಿಕೊಳ್ಳುವ ಕಾಂಗ್ರೆಸ್ಸಿಗರಾದ ಸರ್ದಾರ್ ಪಟೇಲರು ಮತ್ತು ಸುಭಾಷರೂ ಒಪ್ಪಿ ಮಾಡಿದ ತೀರ್ಮಾನ. ಸುಭಾಷರಂತೂ ಸಿಂಗಾಪುರದಲ್ಲಿ ಆಜಾದ್ ಹಿಂದ್ ಫೌಜ್ ಮಾಡಿದಾಗಲೂ ವಂದೇ ಮಾತರಂ ಹಾಡನ್ನು ಸಿಪಾಯಿ ಗೀತೆ ಮಾಡಲು ನಿರಾಕರಿಸುತ್ತಾರೆ” ಎಂದು ದಾಖಲಿಸಿದ್ದಾರೆ.

ಇದುವೇ, ‘ವಂದೇ ಮಾತರಂ’ ತುಂಡಾದ ಹಿಂದಿರುವ ಸಂಕ್ಷಿಪ್ತ ಇತಿಹಾಸ. ಈ ಕುರಿತು ಸಂಶೋಧನಾ ಗ್ರಂಥಗಳು, ವಿದ್ವತ್‌ಪೂರ್ಣ ಬರೆಹಗಳು ಬಂದಿವೆ. ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯೇ ಆಗದ ಸಂಘಪರಿವಾರವು, ಪುಂಕಾನುಪುಂಕವಾಗಿ ‘ವಂದೇ ಮಾತರಂ’ ಬಗ್ಗೆ ಇನ್ನಿಲ್ಲದ ಪ್ರೀತಿಯನ್ನು ಹರಿಸುತ್ತಿರುವುದರ ಹಿಂದೆ ಇರುವುದು ಪಕ್ಕಾ ಕೋಮುವಾದಿ ದೃಷ್ಟಿಕೋನ. ಭಾರತವನ್ನು ಸಾವಿರಾರು ವರ್ಷಗಳ ಹಿಂದಕ್ಕೆ ಕರೆದೊಯ್ಯುವ ಸಂಕಲ್ಪ ಹೊಂದಿರುವ ಇವರಿಗೆ, ಇಂತಹ ಸರಕಲ್ಲದೆ ಮತ್ತೇನು ಬೇಕಿದೆ ಹೇಳಿ?

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...