ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ: ಸಾಧನೆ ಮತ್ತು ಸಂಪಾದನೆಗಳತ್ತ ಒಂದು ನೋಟ

Date:

ರಾಜಕಾರಣವೆಂದರೆ ಏರಿಳಿತದ ಜತೆಗೆ ಮುಳ್ಳಿನ ಮೇಲಿನ ನಡಿಗೆ ಕೂಡ ಎನ್ನುವುದನ್ನು ಅನುಭವದಿಂದ ಅರಿತಿರುವ ಡಿ.ಕೆ. ಶಿವಕುಮಾರ್, ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿಕೊಂಡ ರಾಜಕಾರಣಿ. ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಡಿ.ಕೆ ಶಿವಕುಮಾರ್, ಪಕ್ಷವನ್ನೂ ಬೆಳೆಸಿದ್ದಾರೆ. ತಾವೂ ಬೆಳೆದಿದ್ದಾರೆ. ಅದೇ ರೀತಿ ಬೆಳೆಸಿದ ನಾಡನ್ನೂ ಬೆಳೆಸಲಿ.

2020ರ ಮಾರ್ಚ್ 11ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಿ.ಕೆ ಶಿವಕುಮಾರ್, ಆರು ವರ್ಷಗಳ ಕಾಲ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿ, ಸಂಘಟಿಸಿ, ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಸಂಘಟನಾ ಚತುರ ಎನಿಸಿಕೊಂಡಿದ್ದಾರೆ. ಅಧ್ಯಕ್ಷರಾಗಿ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಭೋಜನ ಮತ್ತು ಭೋಪರಾಕ್‌ಗಳ ಸಂಭ್ರಮಾಚರಣೆಯಲ್ಲಿದ್ದಾರೆ.

ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭದಲ್ಲಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರವಿತ್ತು. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದರು. ಆಗ ಕಾಂಗ್ರೆಸ್ ಪಕ್ಷ ಕಳಾಹೀನವಾಗಿತ್ತು. ಪಕ್ಷದ ಕಚೇರಿ ಹಾಳು ಸುರಿಯುತ್ತಿತ್ತು. ಕಾರ್ಯಕರ್ತರಲ್ಲಿ ಉತ್ಸಾಹ ಉಡುಗಿಹೋಗಿತ್ತು. ಅಂತಹ ಸಂದರ್ಭದಲ್ಲಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಾಡಿದರು. ಕಾರ್ಯಕರ್ತರಿಗೆ ಹುರುಪು ತುಂಬಿದರು. ಜಡತ್ವದಿಂದ ನರಳುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೀವ ತುಂಬಿದರು. ಪಕ್ಷಕ್ಕಾಗಿ ಅಪಾರ ಹಣ, ಶ್ರಮ ಮತ್ತು ಸಮಯ ಸುರಿದರು. ಬಲಾಢ್ಯ ಬಿಜೆಪಿಯ ಎದುರು 2023ರ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣದಲ್ಲಿ, ಶೆಟ್ಟರ್-ಸವದಿಗಳಂತಹ ನಾಯಕರನ್ನು ಪಕ್ಷಕ್ಕೆ ಸೆಳೆದು ಶಕ್ತಿ ಕುಂದಿಸಿದರು. ಬಿಜೆಪಿಯ ಭ್ರಷ್ಟಾಚಾರವನ್ನು ಬಯಲಿಗೆಳೆದರು. ರಾಜ್ಯದ ಜನತೆಯ ಮನಗೆದ್ದು 135 ಸ್ಥಾನ ಗೆಲ್ಲಿಸಿಕೊಂಡು ಬರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಹಾಗಾಗಿ ಇಂದಿನ ಸಂಭ್ರಮದ ಹಿಂದೆ, ಡಿ.ಕೆ. ಶಿವಕುಮಾರ್ ಅವರ ಕಠಿಣ ಶ್ರಮವಿದೆ. ತ್ಯಾಗವಿದೆ. ಸೇವೆಯಿದೆ. ಅವರ ಕೆಲಸಕ್ಕೆ ಕೂಲಿ ಕೇಳುವಂತೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಡುವುದು ಕೂಡ ಸಹಜವಾಗಿಯೇ ಇದೆ. ಅದು ರಾಜಕಾರಣದಲ್ಲಿ ಸರಿಯಾದ ನಡೆ ಕೂಡ. ಸ್ಥಾನ ಸಿಗುತ್ತದೋ ಇಲ್ಲವೋ, ಅದು ಬೇರೆ ಪ್ರಶ್ನೆ. ಆದರೆ ಬೇಡಿಕೆ ಇಡುವುದು, ಅದಕ್ಕಾಗಿ ಸಮರ್ಥ ಕಾರಣಗಳನ್ನು ಕೊಟ್ಟು ಪಟ್ಟು ಹಿಡಿಯುವುದು ರಾಜಕಾರಣದಲ್ಲಿ ಸರ್ವೇಸಾಮಾನ್ಯ. ಆ ನಿಟ್ಟಿನಲ್ಲಿ ಶಿವಕುಮಾರ್ ಅವರ ಪಕ್ಷ ನಿಷ್ಠೆ, ಹೋರಾಟ ಮತ್ತು ಸಮಸ್ಯೆ-ಸವಾಲುಗಳನ್ನು ಎದುರಿಸಿದ ರೀತಿಯನ್ನು ಪರಿಗಣಿಸಲೇಬೇಕಾಗುತ್ತದೆ. ಅಕಸ್ಮಾತ್ ಅವರ ಬೇಡಿಕೆ ಈಡೇರದಿದ್ದರೆ ಭವಿಷ್ಯಕ್ಕೆ ಬುನಾದಿ ಎನ್ನುವುದು ಡಿಕೆಗೂ ಗೊತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ತೆರಿಗೆ ಹಂಚಿಕೆ | ಕೇಂದ್ರದ ವಿರುದ್ಧ ಕಾನೂನು ಸಮರ; ಸಿಎಂ ಸಿದ್ದರಾಮಯ್ಯರಿಗೆ ಕಾಂಗ್ರೆಸ್ ಶಾಸಕರ ಒತ್ತಾಯ

ಇವೆಲ್ಲವನ್ನು ಅಳೆದು ಸುರಿದ ಡಿ.ಕೆ ಶಿವಕುಮಾರ್, ಹೈಕಮಾಂಡಿನ ಆದೇಶಕ್ಕೆ ತಲೆಬಾಗಿ, ಉಪಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಕೈ ಜೋಡಿಸಿ, ಸರ್ಕಾರ ಸರಾಗವಾಗಿ ಸಾಗಲು ಸಹಕರಿಸುತ್ತಿದ್ದಾರೆ. ಅಸಮಾಧಾನವಿದ್ದರೂ, ಕ್ಯಾಮರಾಗಳಿಗೆ ಹಲ್ಕಿರಿದು ನುರಿತ ಕಲಾವಿದನಂತೆ ನಟಿಸುತ್ತಿದ್ದಾರೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಅನುಭವದಿಂದ ಅರಿತಿದ್ದಾರೆ.

ಡಿಕೆ ಶಿವಕುಮಾರ್20

ಡಮ್ಮಿ ಕ್ಯಾಂಡಿಡೇಟ್
ಕನಕಪುರ ತಾಲೂಕಿನ ದೊಡ್ಡಾಲಳ್ಳಿಯ ಸಾಮಾನ್ಯ ಕೃಷಿ ಕುಟುಂಬದಲ್ಲಿ 1962ರಲ್ಲಿ ಜನಿಸಿದ ಶಿವಕುಮಾರ್, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹತ್ತಿರದ ಬೆಂಗಳೂರಿಗೆ ಬಂದವರು. ಕಾಲೇಜು ದಿನಗಳಲ್ಲಿ ಹೋರಾಟಗಳಲ್ಲಿ ಭಾಗಿಯಾಗಿ ರಾಜಕಾರಣದತ್ತ ಆಕರ್ಷಿತರಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಇದೇ ಸಮಯದಲ್ಲಿ ರೌಡಿ ಕೊತ್ವಾಲ್ ಸಹಚರನಾಗಿದ್ದು, ಆ ಜಗತ್ತಿನೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದರು. ಯುವ ಘಟಕದ ಕಾರ್ಯದರ್ಶಿಯಾಗಿ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.

ಅದೇ ಸಮಯಕ್ಕೆ 1985ರಲ್ಲಿ ಎದುರಾದ ವಿಧಾನಸಭಾ ಚುನಾವಣೆಗೆ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾದರು. ಆಗ ರಾಜ್ಯದಲ್ಲಿ ಜನತಾಪಕ್ಷ ಆಡಳಿತದಲ್ಲಿತ್ತು. ದೇವೇಗೌಡರು ಬಲಿಷ್ಠ ಒಕ್ಕಲಿಗ ನಾಯಕರಾಗಿದ್ದು, ಹೆಗಡೆಯವರೊಂದಿಗೆ ರಾಜಕೀಯ ಕಾದಾಟಕ್ಕಿಳಿದಿದ್ದ ಸಂದರ್ಭವದು. ಆ ಚುನಾವಣೆಯಲ್ಲಿ ಗೌಡರು ಹೊಳೆನರಸೀಪುರ ಮತ್ತು ಸಾತನೂರು- ಎರಡೂ ಕಡೆಯಿಂದ ಸ್ಪರ್ಧಿಸಿದರು. ಸುಲಭವಾಗಿ ಗೆಲ್ಲಲು ಅಂದಿನ ಕಾಂಗ್ರೆಸ್ ಮುಖಂಡರಾದ ವೀರಪ್ಪ ಮೊಯ್ಲಿ ಮತ್ತು ಕೆ.ಎಚ್. ಪಾಟೀಲರೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಆ ಹೊಂದಾಣಿಕೆಯ ಫಲವಾಗಿ ಸಾತನೂರು ಕ್ಷೇತ್ರಕ್ಕೆ ಡಮ್ಮಿ ಕ್ಯಾಂಡಿಡೇಟ್ ಆಗಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದವರು ಡಿ.ಕೆ ಶಿವಕುಮಾರ್.  

ಇದನ್ನು ಓದಿದ್ದೀರಾ?: ಒಳ ಮೀಸಲಾತಿ : ಪ್ರಶ್ನೆಗೊಳಗಾದ ಕಾಂಗ್ರೆಸ್ ಸರ್ಕಾರದ ಬದ್ಧತೆ

ದೊಡ್ಡವರ ಹೊಂದಾಣಿಕೆ ಮತ್ತು ಲೆಕ್ಕಾಚಾರದ ಫಲವಾಗಿ ಶಿವಕುಮಾರ್ ಸೋತರೂ, ದೊಡ್ಡಗೌಡರೊಂದಿಗೆ ಸೆಣೆಸಿದ ಪುಟ್ಟ ಪೈಲ್ವಾನ ಎಂದು ಪ್ರಚಾರ ಪಡೆದು ರಾಜಕೀಯವಾಗಿ ನೆಲೆಯೂರಿದರು. 1987ರಲ್ಲಿ ಸಾತನೂರು ಜಿಲ್ಲಾ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದರು. 1989ರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷದಿಂದ ಸಾತನೂರು ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಮೊತ್ತ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದರು.

ಮೊದಲ ಅವಧಿಯಲ್ಲಿಯೇ ಮಂತ್ರಿ
ವಿಧಾನಸೌಧ ಪ್ರವೇಶಿಸಿದ ಮೊದಲ ಅವಧಿಯಲ್ಲಿಯೇ ಡಿಕೆಯವರ ಅದೃಷ್ಟ ಖುಲಾಯಿಸಿ, ಬಂದೀಖಾನೆ ಖಾತೆ ಸಚಿವರೂ ಆದರು. 1991ರಲ್ಲಿ ಮುಖ್ಯಮಂತ್ರಿಯಾದ ಎಸ್.ಬಂಗಾರಪ್ಪನವರು, ಡಿಕೆಗೆ ಸಚಿವ ಸ್ಥಾನ ನೀಡಿ, ರಾಜಕೀಯವಾಗಿ ಬೆಳೆಯಲು ಅವಕಾಶ ಕಲ್ಪಿಸಿಕೊಟ್ಟರು. ಆದರೆ 1994ರಲ್ಲಿ ಎದುರಾದ ಚುನಾವಣೆಗೆ ಡಿಕೆಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನಿರಾಕರಿಸಿತು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದ ಡಿಕೆ, ಮತ್ತೆ ಕಾಂಗ್ರೆಸ್ ಸೇರಿದರು. 1999ರಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಎಸ್.ಎಂ.ಕೃಷ್ಣ ಪಾಂಚಜನ್ಯ ಮೊಳಗಿಸಿ, ಕಾಂಗ್ರೆಸ್ ಬಹುಮತ ಗಳಿಸಿ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿ ಮುಖ್ಯಮಂತ್ರಿಯಾದರು. ಎಸ್.ಎಂ ಕೃಷ್ಣರ ನೀಲಿಗಣ್ಣಿನ ಹುಡುಗನಾದ ಶಿವಕುಮಾರ್, ನಗರಾಭಿವೃದ್ಧಿ, ಸಹಕಾರ ಸಚಿವರಾಗಿ ರಾಜಕಾರಣದ ಒಳ-ಹೊರಗನ್ನು ಅರ್ಥ ಮಾಡಿಕೊಳ್ಳತೊಡಗಿದರು. ಅಧಿಕಾರವನ್ನು ಅಸ್ತ್ರವನ್ನಾಗಿ ಪ್ರಯೋಗಿಸಿ ಹಣ ಮಾಡುವ ಕಲೆಯನ್ನು ಕರಗತ ಮಾಡಿಕೊಂಡರು. ಕೃಷ್ಣರು ಕಲ್ಪಿಸಿದ ಅವಕಾಶವನ್ನು ಕೊಂಚ ಹೆಚ್ಚಾಗಿಯೇ ದುರುಪಯೋಗಪಡಿಸಿಕೊಂಡು ವಿರೋಧಿಗಳನ್ನು ಮಟ್ಟಹಾಕಿದರು. ಕಾಂಗ್ರೆಸ್ಸಿನ ಹಿರಿಯರನ್ನು ಹಿಂಬದಿಗೆ ಸರಿಸಿ ಮುಂಚೂಣಿ ನಾಯಕನಾಗಿ ಹೊರಹೊಮ್ಮಿದರು.  

ಪ್ರಭಾವಿ ಒಕ್ಕಲಿಗರ ನಾಯಕ
ಹಳೇ ಮೈಸೂರು ಭಾಗದಲ್ಲಿ ಕೃಷ್ಣ-ಶಿವಕುಮಾರ್ ಒಂದಾಗಿ ಒಕ್ಕಲಿಗರನ್ನು ಒಗ್ಗೂಡಿಸುವ, ಸಮುದಾಯದ ಮುಖಂಡರಾಗಿ ಪ್ರಭಾವಿ ನಾಯಕರಾಗಿ ಹೊರಹೊಮ್ಮುವುದು ಮತ್ತೊಬ್ಬ ಒಕ್ಕಲಿಗ ನಾಯಕ ದೇವೇಗೌಡರಿಗೆ ಸಹಿಸಲಸಾಧ್ಯವಾದ ಸಂಕಟವಾಯಿತು. ಅದರ ಫಲವಾಗಿ 2004ರಲ್ಲಿ ರಚನೆಯಾದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಶಿವಕುಮಾರ್‍‌ಗೆ ಸ್ಥಾನ ನೀಡದೆ ಅವಮಾನಿಸಿ, ಅಧಿಕಾರದಿಂದ ದೂರವಿಡಲಾಯಿತು. ಆದರೆ ಸೈಡಿಗೆ ಸರಿಸಿದ್ದನ್ನೇ ಡಿಕೆ ಸವಾಲನ್ನಾಗಿ ಸ್ವೀಕರಿಸಿ, 2006ರ ಲೋಕಸಭಾ ಚುನಾವಣೆಯಲ್ಲಿ, ಕನಕಪುರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ವಿರುದ್ಧ ರಾಜಕೀಯವಾಗಿ, ಸಾರ್ವಜನಿಕವಾಗಿ ಅಷ್ಟೇನೂ ಪರಿಚಿತರಲ್ಲದ ತೇಜಸ್ವಿನಿ ಎಂಬ ಪತ್ರಕರ್ತೆಯನ್ನು ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸುವ ಮೂಲಕ ಸೇಡು ತೀರಿಸಿಕೊಂಡಿದ್ದರು. ಇದಷ್ಟೇ ಅಲ್ಲ, ಚಿತ್ರನಟಿ ರಮ್ಯಾ ಅವರನ್ನೂ ರಾಜಕೀಯಕ್ಕೆ ಕರೆತಂದು, ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿ, ಗೆಲ್ಲಿಸಿಕೊಂಡು ಬರುವಲ್ಲಿ ಶಿವಕುಮಾರ್ ಯಶಸ್ವಿಯಾದರು. ಮಂಡ್ಯವನ್ನೂ ಮರಳಿ ಪಕ್ಷದ ತೆಕ್ಕೆಗೆ ತೆಗೆದುಕೊಂಡರು.

ಸೋತ ದೇವೇಗೌಡರು, ತಮ್ಮ ಹಿಡಿತದಲ್ಲಿದ್ದ ಧರಂಸಿಂಗ್ ಸರ್ಕಾರದಲ್ಲಿ 2008ರಲ್ಲಿ ಕ್ಷೇತ್ರ ಮರುವಿಂಗಡಣೆ ಮಾಡುವಾಗ, ಡಿಕೆಯವರ ಸಾತನೂರು ಕ್ಷೇತ್ರವನ್ನು ಇಲ್ಲದಂತೆ ಮಾಡಿ, ರಾಜಕೀಯ ಅಸ್ತಿತ್ವಕ್ಕೇ ಧಕ್ಕೆ ತಂದರು. ಎದೆಗುಂದದ ಡಿಕೆ, ಕನಕಪುರ ಕ್ಷೇತ್ರದಿಂದಲೂ ಗೆದ್ದರು. ಅಷ್ಟೇ ಅಲ್ಲ, 2013ರಲ್ಲಿಯೂ ಗೆಲುವು ಸಾಧಿಸಿದರು. ಆದರೆ, 2004ರಿಂದ 2014ರವರೆಗೆ ಯಾವುದೇ ಅಧಿಕಾರದ ಸ್ಥಾನವಿಲ್ಲದೆ ಇದ್ದ ಶಿವಕುಮಾರ್, ಆ ವೇಳೆಯಲ್ಲಿ ತೋರಿದ ಪಕ್ಷನಿಷ್ಠೆ ಪ್ರಶ್ನಾತೀತವಾದುದು.

2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರೂ, ಡಿಕೆ ಶಿವಕುಮಾರ್ ಮಂತ್ರಿ ಮಾಡಲು ಒಂದು ವರ್ಷ ಸತಾಯಿಸಲಾಯಿತು. ಕೊನೆಗೆ ಹೈಕಮಾಂಡ್ ಮೇಲೆ ಒತ್ತಡ ಹೇರಿ, 2014ರಲ್ಲಿ ಇಂಧನ ಖಾತೆ ಸಚಿವರಾದರು. ಜಡ್ಡುಗಟ್ಟಿದ ಇಂಧನ ಇಲಾಖೆಗೆ ಚುರುಕು ಮುಟ್ಟಿಸಿ, ಆಡಳಿತದಲ್ಲಿ ಸುಧಾರಣೆ ತಂದರು. ರೈತ ಸೂರ್ಯ ಯೋಜನೆ ಜಾರಿಗೆ ತಂದು, 3 ಮೆಗಾ ವ್ಯಾಟ್‌ವರೆಗೆ ವಿದ್ಯುತ್ ಉತ್ಪಾದಿಸುವ, ಹೆಚ್ಚುವರಿ ವಿದ್ಯುತ್ತನ್ನು ಸರ್ಕಾರಕ್ಕೆ ಮಾರುವ ಅವಕಾಶ ಕಲ್ಪಿಸಿದರು. ರಾಜ್ಯ ಸರ್ಕಾರದ ಈ ಯೋಜನೆಯನ್ನು ಕೇಂದ್ರ ಕೂಡ ಶ್ಲಾಘಿಸಿ, ಉಳಿದ ರಾಜ್ಯಗಳಿಗೂ ವಿಸ್ತರಿಸಿತು, ಕರ್ನಾಟಕದ ಮಾದರಿ ಅನುಸರಿಸುವಂತೆ ಕರೆ ನೀಡಿತು.

ಡಿಕೆ ಶಿವಕುಮಾರ್30

ಟ್ರಬಲ್ ಶೂಟರ್‍‌ಗೇ ಟ್ರಬಲ್
ರಾಜಕೀಯವಾಗಿ ಬೆಳೆಯುತ್ತಲೇ ಹೋದ ಡಿಕೆ ಶಿವಕುಮಾರ್ ಅವರಿಗೆ ಬ್ರೇಕ್ ಹಾಕಲೋ ಎಂಬಂತೆ, 2017ರಲ್ಲಿ ಒಂದು ಘಟನೆ ಜರುಗಿತು. ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ, ಪಕ್ಷದ ಸೂಚನೆಯಂತೆ ಅಲ್ಲಿನ ಶಾಸಕರನ್ನು ಬೆಂಗಳೂರಿಗೆ ಕರೆತಂದು, ಆಗಬಹುದಾಗಿದ್ದ ಕುದುರೆ ವ್ಯಾಪಾರವನ್ನು ತಪ್ಪಿಸಿದವರು ಇದೇ ಡಿಕೆ ಶಿವಕುಮಾರ್. ಅಂದು ಅಹ್ಮದ್ ಪಟೇಲ್ ಗೆದ್ದು ರಾಜ್ಯಸಭಾ ಸದಸ್ಯರಾದರೆ, ಡಿಕೆ ಟ್ರಬಲ್ ಶೂಟರ್ ಎಂಬ ಹೆಸರು ಗಳಿಸಿದರು. ಅತ್ತ ಬಿಜೆಪಿಯ ಸೋಲನ್ನು ಸಹಿಸಿಕೊಳ್ಳಲಾಗದ ಅಮಿತ್ ಶಾ ಕೆಂಡಾಮಂಡಲರಾದರು. ಇದರ ಪ್ರತೀಕಾರವಾಗಿ, ಕೇಂದ್ರದ ಐಟಿ ಇಲಾಖೆಯ 300 ಅಧಿಕಾರಿಗಳು ಡಿಕೆ ಮನೆ, ಕಚೇರಿಗಳ ಮೇಲೆ ಏಕಾಏಕಿ ದಾಳಿ ಇಟ್ಟರು. ಲೆಕ್ಕವಿಲ್ಲದ 8 ಕೋಟಿ ಹಣವನ್ನು ವಶಪಡಿಸಿಕೊಂಡು ಕೇಸು ದಾಖಲಿಸಿದರು. ಡಿಕೆಗೆ ರಾಜಕಾರಣದಲ್ಲೊಂದು ಕಪ್ಪು ಚುಕ್ಕೆ ಅಂಟಿಕೊಂಡಿತು.

ಇದನ್ನು ಓದಿದ್ದೀರಾ?: ಬಜೆಟ್-2026: ಸಾಮಾಜಿಕ ಪರಿವರ್ತನೆಯ ಸಾಧನ

ಇದರಿಂದ ವಿಚಲಿತರಾದರೂ ತೋರ್ಪಡಿಸಿಕೊಳ್ಳದ ಡಿಕೆ, 2018ರ ಚುನಾವಣೆಯಲ್ಲಿ ಮತ್ತೆ ಗೆದ್ದು, ಕಾಂಗ್ರೆಸ್ ಬಹುಮತ ಗಳಿಸುವಲ್ಲಿ ವಿಫಲವಾದಾಗ, ಕ್ಷಿಪ್ರಕ್ರಾಂತಿಗೆ ಕೈಹಾಕಿ, ಬಿಜೆಪಿ ವಿರುದ್ಧ ಬಹಿರಂಗ ಸಮರ ಸಾರಿದರು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಾತ್ಯತೀತ ಶಕ್ತಿಗಳು ಒಂದಾಗಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಈ ತಂತ್ರ ಫಲಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಡಿಕೆ ಶಿವಕುಮಾರ್ ಜಲ ಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದರು. ಆದರೆ ಈ ಸರ್ಕಾರ ಬಹಳ ದಿನ ಬದುಕಲಿಲ್ಲ. 2019ರಲ್ಲಿ ಕುದುರೆ ವ್ಯಾಪಾರಕ್ಕೆ ಕೈಹಾಕಿದ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೇರುತ್ತಿದ್ದಂತೆ, ಕೇಂದ್ರದ ತೆರಿಗೆ ಇಲಾಖೆಯ ದೂರಿನನ್ವಯ ಸೆಪ್ಟೆಂಬರ್ 2019ರಂದು ಡಿಕೆ ಶಿವಕುಮಾರ್ ಬಂಧನವಾಯಿತು. ಡಿಕೆ ನೋಡಿ ಧೈರ್ಯ ತುಂಬಲು ತಿಹಾರ್ ಜೈಲಿಗೇ ತೆರಳಿದ ಸೋನಿಯಾ ಗಾಂಧಿ, ಹೊರಬಂದು ಕೆಪಿಸಿಸಿ ಅಧ್ಯಕ್ಷ ಸ್ಥಾನದಂತಹ ಮಹತ್ವದ ಜವಾಬ್ದಾರಿಯನ್ನು ಡಿಕೆ ಹೆಗಲಿಗೆ ಹಾಕಿದ್ದರು.

ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ
2020ರಿಂದ ಇಲ್ಲಿಯವರೆಗೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂತ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷವನ್ನು ಸಂಘಟಿಸುವಲ್ಲಿ ಶ್ರಮ ಸುರಿದಿದ್ದಾರೆ. ಜಡತ್ವದಿಂದ ನರಳುತ್ತಿದ್ದ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿದ್ದಾರೆ. ಕೋವಿಡ್ ಕಾಲದಲ್ಲಿ ಆಡಳಿತ ಪಕ್ಷ ಬಿಜೆಪಿ ಕೈ ಚೆಲ್ಲಿ ಕೂತಾಗ, ರಸ್ತೆಗಿಳಿದು ಜನರಲ್ಲಿ ಧೈರ್ಯ ತುಂಬಿದ್ದಾರೆ. ಜೇಬಿನಿಂದ ಒಂದು ಕೋಟಿ ಕೊಟ್ಟು ವಲಸೆ ಕಾರ್ಮಿಕರನ್ನು ಮನೆ ಸೇರಿಸಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ 160 ಕಿ.ಮೀ. ಪಾದಯಾತ್ರೆ ಕೈಗೊಂಡು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಕೇಂದ್ರದ ಕೆಂಗಣ್ಣಿಗೂ ಗುರಿಯಾಗಿ ಇಡಿ, ಸಿಬಿಐ, ಐಟಿ ದಾಳಿಗೂ ಒಳಗಾಗಿದ್ದಾರೆ. ಜೈಲಿಗೂ ಹೋಗಿ ಬಂದಿದ್ದಾರೆ. ಹತ್ತಾರು ವಿವಾದಗಳು, ಕೋರ್ಟ್‌ ಪ್ರಕರಣಗಳು ಡಿಕೆಶಿಯವರನ್ನು ಸುತ್ತುವರಿದಿವೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಹಲವು ಕೇಸ್‌ಗಳಿವೆ.

ಇವುಗಳ ನಡುವೆಯೇ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲರಾಗಿದ್ದಾರೆ. ಒಕ್ಕಲಿಗ ನಾಯಕನಾಗಿ ಶಿವಕುಮಾರ್, ಅಹಿಂದ ನಾಯಕನಾಗಿ ಸಿದ್ದರಾಮಯ್ಯನವರು ಜೋಡೆತ್ತಿನಂತೆ ಒಟ್ಟಾಗಿ ಓಡಾಡಿದ ಫಲವಾಗಿ, ಕಾಂಗ್ರೆಸ್ ಅಧಿಕಾರಕ್ಕೇರುವಂತಾಗಿದೆ. ಆ ನಂತರ 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವನ್ನು ಬಲಗೊಳಿಸಿದ್ದಾರೆ. ಆದರೆ ಅತಿಯಾದ ಆತ್ಮವಿಶ್ವಾಸಕ್ಕೆ ಬಿದ್ದು, ಸಹೋದರ ಡಿ.ಕೆ. ಸುರೇಶ್ ಸೋಲಿಗೂ ಕಾರಣರಾಗಿದ್ದಾರೆ. ರಾಜಕಾರಣದಲ್ಲಿ ಇದೆಲ್ಲ ಸಾಮಾನ್ಯ ಎಂದುಕೊಂಡು, ಉಪಚುನಾವಣೆಯಲ್ಲಿ ಮೂರಕ್ಕೆ ಮೂರು ಸ್ಥಾನಗಳನ್ನು ಗೆಲ್ಲಿಸಿಕೊಂಡುಬಂದಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿಯಲ್ಲಿದ್ದ ಸಿ.ಪಿ. ಯೋಗೇಶ್ವರ್ ಅವರನ್ನು ಕಾಂಗ್ರೆಸ್‌ಗೆ ಕರೆತಂದು, ಗೆಲ್ಲಿಸುವ ಮೂಲಕ ಜೆಡಿಎಸ್‌ಗೂ ಶಾಕ್ ನೀಡಿದ್ದಾರೆ.

ಈಗ ಉಪ ಮುಖ್ಯಮಂತ್ರಿ, ಬೆಂಗಳೂರು ನಗರ ಅಭಿವೃದ್ಧಿ, ಜಲಸಂಪನ್ಮೂಲ ಸಚಿವರೂ ಆಗಿದ್ದಾರೆ. ಹಿರಿಯ ನಾಯಕರು, ಬಲಾಢ್ಯರು, ಹಣವಂತರು ಎಂಬ ಕಾರಣಕ್ಕೆ ಆನೆ ನಡೆದದ್ದೇ ದಾರಿ ಎನ್ನುವಂತಾಗಿದೆ. ಹೈಕಮಾಂಡ್ ಅಂಕೆ, ಮುಖ್ಯಮಂತ್ರಿಗಳ ಶಂಕೆಯಿಲ್ಲದಿದ್ದರೂ, ಸಚಿವರಾಗಿ ಮೂರು ವರ್ಷಗಳು ಕಳೆದರೂ ಬೆಂಗಳೂರು ಮಾತ್ರ ಬದಲಾಗಲಿಲ್ಲ. ಬಡವರೂ ಬದುಕುವ ನಗರವಾಗಲಿಲ್ಲ. ಇನ್ನು ಜಲಸಂಪನ್ಮೂಲ ಖಾತೆಯಲ್ಲಿ ಮೇಕೆದಾಟು, ಮಹದಾಯಿ ಯೋಜನೆಗಳಿಗೆ ಕಾಯಕಲ್ಪ ಸಿಗಲೇ ಇಲ್ಲ. ಎತ್ತಿನಹೊಳೆ ಎತ್ತುವಳಿಗೆ ಅನುಕೂಲವಾಗಿದ್ದು ಬಿಟ್ಟರೆ, ಬಯಲುಸೀಮೆಗೆ ನೀರು ಹರಿಯಲಿಲ್ಲ. ಆದರೂ ಡಿ.ಕೆ. ಶಿವಕುಮಾರ್ ಅವರ ‘ಅಭಿವೃದ್ಧಿ ಮಂತ್ರ’ವೇನೂ ನಿಂತಿಲ್ಲ.

ಇದನ್ನು ಓದಿದ್ದೀರಾ?: ಸರ್ಕಾರಿ ಹುದ್ದೆಗಳನ್ನು ಹರಾಜು ಹಾಕಿ, ಇಲ್ಲ ಕೆಪಿಎಸ್‌ಸಿಯನ್ನು ಮುಚ್ಚಿ

ಪಾದರಸದಂತೆ ಓಡಾಡುವ, ಸದಾ ಸುದ್ದಿಯಲ್ಲಿರುವ, 8 ಸಲ ಗೆದ್ದು ಶಾಸಕರಾಗಿ, ಮಂತ್ರಿಯಾಗಿ ಪ್ರಭಾವಿ ನಾಯಕ ಎನಿಸಿಕೊಂಡಿರುವ ಡಿ.ಕೆ ಶಿವಕುಮಾರ್‌, ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಸಾವಿರ ಚಿಲ್ಲರೆ ಕೋಟಿಯ ಒಡೆಯನೆಂದು ಘೋಷಿಸಿಕೊಂಡಿದ್ದಾರೆ. ಸಾಮಾನ್ಯ ಕೃಷಿ ಕುಟುಂಬದಿಂದ ಬಂದ ಡಿಕೆ, ಅಧಿಕೃತವಾಗಿಯೇ ಸಾವಿರ ಕೋಟಿಯ ಆಸ್ತಿವಂತನಾಗಿದ್ದು ಹೇಗೆ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಜೊತೆಗೆ ಅವರ ನ್ಯಾಷನಲ್ ಎಜುಕೇಶನ್ ಫೌಂಡೇಷನ್‌, ಇಂಜಿನಿಯರಿಂಗ್, ನರ್ಸಿಂಗ್ ಕಾಲೇಜುಗಳು, ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಹಾಗೂ ಹತ್ತು ಹಲವು ಉದ್ದಿಮೆಗಳು ಅವರು ಸಂತರಲ್ಲ, ಶುದ್ಧಹಸ್ತರಲ್ಲ ಎನ್ನುವುದನ್ನೂ ಸಾರುತ್ತವೆ.

ಡಿಕೆ ಶಿವಕುಮಾರ್40

ರಾಜಕಾರಣವೆಂದರೆ ಏರಿಳಿತದ ಜತೆಗೆ ಮುಳ್ಳಿನ ಮೇಲಿನ ನಡಿಗೆ ಕೂಡ ಎನ್ನುವುದನ್ನು ಅನುಭವದಿಂದ ಅರಿತಿರುವ ಡಿ.ಕೆ ಶಿವಕುಮಾರ್, ಬಿಕ್ಕಟ್ಟುಗಳನ್ನೇ ಮೆಟ್ಟಿಲುಗಳನ್ನಾಗಿ ಬಳಸಿಕೊಂಡ ರಾಜಕಾರಣಿ. ತಮ್ಮ ರಾಜಕೀಯ ಚಾಣಾಕ್ಷತನ, ದಾಢಸೀತನದ ಜೊತೆಗೆ ಅಹಂಕಾರದ ಮುದ್ದೆಯಂತೆ ಕಾಣುವ ಡಿಕೆ, ಅಪಾರ ದೈವಭಕ್ತರು. ಕೆಂಕೇರಮ್ಮನ ಕುಲದವರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ನಂಬಿಯೂ, ನೊಣವಿನಕೆರೆ ಅಜ್ಜಯ್ಯನ ಪಾದಕ್ಕೆ ಅಡ್ಡಬೀಳುವವರು. ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ಡಿ.ಕೆ ಶಿವಕುಮಾರ್, ಬೆಳೆಸಿದ ಪಕ್ಷವನ್ನು ಬೆಳೆಸಿದ್ದಾರೆ. ಅದೇ ರೀತಿ ಬೆಳೆಸಿದ ನಾಡಿನ ಜನತೆಯನ್ನೂ ನೆನಪಿನಲ್ಲಿಟ್ಟುಕೊಳ್ಳಲಿ, ನಾಡನ್ನೂ ಬೆಳೆಸಲಿ.

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳ

ಹಣದುಬ್ಬರಕ್ಕೆ ಅನುಗುಣವಾಗಿ ನಡೆಯುವ ವಾರ್ಷಿಕ ದರ ಪರಿಷ್ಕರಣೆಯ ಭಾಗವಾಗಿ ಏಪ್ರಿಲ್ 1ರಿಂದ...

ಮಧ್ಯಪ್ರಾಚ್ಯ ಸಂಘರ್ಷ | ಕದನ ವಿರಾಮ ಎಂದ ಟ್ರಂಪ್; ಮಾತುಕತೆ ನಡೆದಿಲ್ಲವೆಂದ ಇರಾನ್

ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷವನ್ನು ಕೊನೆಗಾಣಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಾನಾ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...