ಬ್ರಿಟಿಷ್ ವಿದ್ವಾಂಸ ಉರ್ಸುಲಾ ಹುವ್ಸ್ ದಶಕಗಳ ಹಿಂದೆ, ಜೀವನಕ್ಕೆ ಅಗತ್ಯವಾದದ್ದನ್ನು ಬಂಡವಾಳಶಾಹಿಗಳು ಮಾರಾಟ ಮಾಡಬೇಕಾದ ವಸ್ತುವನ್ನಾಗಿ ಪರಿವರ್ತಿಸುತ್ತಾರೆ ಎಂದು ಎಚ್ಚರಿಸಿದ್ದರು. ಬಿಕ್ಕಟ್ಟುಗಳನ್ನು ಎದುರಿಸಿದಾಗಲೆಲ್ಲಾ ಹೊಸ ಸರಕುಗಳನ್ನು ಸೃಷ್ಟಿಸುತ್ತದೆ ಎಂದಿದ್ದರು. ಆ ಹಾದಿಯಲ್ಲಿ ಇದೀಗ ಗಾಳಿಯೂ ಮಾರಾಟದ ಸರಕಾಗಿದೆ.
ದೆಹಲಿಯಲ್ಲಿ ಜನರು ಸದ್ಯ ಉಸಿರಾಡುತ್ತಿಲ್ಲ, ತಮ್ಮನ್ನು ತಾವು ಉಳಿಸಿಕೊಳ್ಳಲು ಏದುಸಿರುವ ಬಿಡುತ್ತಿದ್ದಾರೆ. ಏಕೆಂದರೆ ವಾಯುಮಾಲಿನ್ಯ ಸಂಕಟಕ್ಕೆ ಸಿಲುಕಿರುವ ದೆಹಲಿ ಈಗ ಅಪಾಯಕಾರಿಯಾದ ಪರಿಸರ ಬಿಕ್ಕಟ್ಟಿನಲ್ಲಿದೆ. ವಾಯು ಗುಣಮಟ್ಟವು ಹಲವು ಕಡೆಗಳಲ್ಲಿ 500ರ ಗಡಿ ದಾಟಿದ್ದು ‘ಗಂಭೀರ’ ಸ್ಥಿತಿಗೆ ತಲುಪಿದೆ. ಆರೋಗ್ಯದ ತುರ್ತು ಪರಿಸ್ಥಿತಿ ಎದುರಾಗಿದೆ. ಉಸಿರಾಡಲು ಜನರು ತಡಕಾಡುವಂತಾಗಿದೆ. ಚಳಿಗಾಲದಲ್ಲಿ ದೆಹಲಿಯಲ್ಲಿರಬೇಡಿ ಎಂದು ವೈದ್ಯರೇ ಸಲಹೆ ನೀಡುತ್ತಿದ್ದಾರೆ. ಈ ನಡುವೆ ಗಾಳಿಯೂ ಮಾರಾಟದ ವಸ್ತುವಾಗಿದೆ. ದೆಹಲಿಯಲ್ಲಿ ಉಸಿರಾಡುವ ಶುದ್ಧ ಗಾಳಿಯೂ ಮಶೀನ್ ಮೂಲಕ ಮಾರಾಟ ಮಾಡಲಾಗುತ್ತದೆ.
ಶಾಲೆಗಳನ್ನು ಮುಚ್ಚಲಾಗಿದೆ. ಈ ಚಳಿಗಾಲದಲ್ಲಿ ಮಂಜಿನ ಜತೆಗೆ ಕಲುಷಿತ ಗಾಳಿಯಿಂದಾಗಿ ವಾಯು ಮಾರ್ಗ ಸ್ಪಷ್ಟವಾಗಿರದ ಕಾರಣ ವಿಮಾನಗಳ ಸಂಚಾರ ವಿಳಂಬವಾಗುತ್ತಿದೆ. ಜನರಿಗೆ ಶ್ವಾಸಕೋಶದ ಸಮಸ್ಯೆ ಕಾಡುತ್ತಿವೆ, ಕಣ್ಣುಗಳು ಉರಿಯುತ್ತಿವೆ. ಆದರೂ ಸರ್ಕಾರಗಳು ಕೈಗೊಳ್ಳಬೇಕಾದ ಕ್ರಮಗಳತ್ತ ಗಮನಹರಿಸದೆ ‘ಪ್ರತಿ ವರ್ಷವೂ ಇದೇ ಗೋಳು ಬಿಡಪ್ಪ ಇರಲಿ’ ಎಂಬ ಮನೋಭಾವ ಹೊಂದಿರುವಂತಿದೆ.
ಇದನ್ನು ಓದಿದ್ದೀರಾ? ದೆಹಲಿಯಲ್ಲಿ ‘ಅತ್ಯಂತ ಕಳಪೆ’ ಮಟ್ಟಕ್ಕೆ ಕುಸಿದ ಗಾಳಿಯ ಗುಣಮಟ್ಟ
ದೆಹಲಿ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ, ಪ್ರತಿ ಚಳಿಗಾಲದಲ್ಲಿಯೂ ದೆಹಲಿಯ ಸ್ಥಿತಿ ಹೀಗಿಯೇ, ‘ಇದು ತಾತ್ಕಾಲಿಕ ವಿದ್ಯಮಾನ’ ಎಂದು ಹೇಳಿಕೊಂಡಿದ್ದಾರೆ. ವಾಯುಮಾಲಿನ್ಯ ವಿಚಾರವನ್ನೇ ಮುಂದಿಟ್ಟುಕೊಂಡು ದೆಹಲಿಯಲ್ಲಿ ಈ ಹಿಂದಿನ ಎಎಪಿ ಸರ್ಕಾರವನ್ನು ಟೀಕಿಸುತ್ತಿದ್ದ ಬಿಜೆಪಿ ಈಗ ಆಡಳಿತಕ್ಕೆ ಬಂದ ಮೇಲೆ “ದೆಹಲಿಯಲ್ಲಿ ವಾಯುಮಾಲಿನ್ಯ ಸಾಮಾನ್ಯ” ಎಂದು ಹೇಳುತ್ತಿದೆ. ಅಧಿಕಾರಕ್ಕೆ ಬಂದ 9-10 ತಿಂಗಳಲ್ಲೇ ವಾಯುಮಾಲಿನ್ಯವನ್ನು ತಡೆಗಟ್ಟಲು ಸಾಧ್ಯವಿಲ್ಲ, ಅದು ಅವಾಸ್ತವಿಕ ಎಂದು ಪರಿಸರ ಸಚಿವರು ಹೇಳಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಗಾಳಿಯ ದಿಕ್ಕು, ಗಾಳಿಯ ವೇಗ ಕಡಿಮೆಯಾಗಿರುವುದರಿಂದ ಮಲಿನಗೊಂಡ ಗಾಳಿ ಒಂದೇ ಕಡೆ ಸ್ಥಗಿತವಾಗುತ್ತಿದೆ ಎಂದು ಹೇಳುತ್ತಿದ್ದಾರೆ.
ಇವೆಲ್ಲವುದರ ನಡುವೆ ಇನ್ನೂ ಕೆಲವುರು ನೆರೆಯ ರಾಜ್ಯಗಳ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ನೆರೆಯ ರಾಜ್ಯಗಳು ಕೃಷಿ ತ್ಯಾಜ್ಯಕ್ಕೆ ಹಾಕುವ ಬೆಂಕಿಯ ಹೊಗೆ, ಇತರೆ ಹೊಗೆಗಳೇ ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಕಾರಣ ಎಂದು ದೂರಿದ್ದಾರೆ. ಯಾರು ಯಾರನ್ನು ದೂರಿದರೂ, ಯಾವುದೇ ಕಾರಣವನ್ನು ಕೊಟ್ಟರೂ ಸದ್ಯ ದೆಹಲಿಯಲ್ಲಿ ಜನರು ಕಲುಷಿತ ಗಾಳಿಯನ್ನು ಉಸಿರಾಡಲು ನಾಗರಿಕರೂ ಕಾರಣ. ಅಷ್ಟು ಮಾತ್ರವಲ್ಲದೆ ನೆಪ ಮಾತ್ರಕ್ಕೆ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕೈಗೊಂಡಿರುವ, ಕೈಗೊಳ್ಳುತ್ತಿರುವ ಈ ಹಿಂದಿನ ಮತ್ತು ಇಂದಿನ ಸರ್ಕಾರಗಳೂ ಕಾರಣ.
ದೇಶದಲ್ಲಿ ಯಾವುದೇ ಬಿಕ್ಕಟ್ಟು ಬಂದಾಗಲೂ ಆ ಸ್ಥಿತಿಯಿಂದಲೂ ವ್ಯಾಪಾರ, ವ್ಯವಹಾರ ನಡೆಸುವ ಲಾಭ ಪಡೆಯವುದು ಈ ಹಿಂದಿನಿಂದಲೂ ನಡೆದಿದೆ, ಅದು ಮುಂದುವರೆಯುತ್ತದೆ. ಬ್ರಿಟಿಷ್ ವಿದ್ವಾಂಸ ಉರ್ಸುಲಾ ಹುವ್ಸ್ ದಶಕಗಳ ಹಿಂದೆ, ಬಂಡವಾಳಶಾಹಿ ವ್ಯವಸ್ಥೆಯು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಹೇಗೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದೆ ಎಂಬ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದರು. ಜೀವನಕ್ಕೆ ಅಗತ್ಯವಾದದ್ದನ್ನು ಬಂಡವಾಳಶಾಹಿಗಳು ಮಾರಾಟ ಮಾಡಬೇಕಾದ ವಸ್ತುವನ್ನಾಗಿ ಪರಿವರ್ತಿಸುತ್ತಾರೆ ಎಂದು ಹೇಳಿದ್ದರು. ಬಂಡವಾಳಶಾಹಿ ವ್ಯವಸ್ಥೆಯು ಬಿಕ್ಕಟ್ಟುಗಳನ್ನು ಎದುರಿಸಿದಾಗಲೆಲ್ಲಾ ಹೊಸ ಸರಕುಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದರು. ಆ ಹಾದಿಯಲ್ಲಿ ದೇಶದಲ್ಲಿ ಈಗಾಗಲೇ ನೀರು ಮಾರಾಟದ ಸರಕಾಗಿದೆ. ಈಗ ಗಾಳಿಯೂ ಮಾರಾಟದ ಸರಕಾಗುತ್ತಿದೆ.
ಇದನ್ನು ಓದಿದ್ದೀರಾ? ಅತೀವ ಸಂಕಟದಲ್ಲಿ ಸಿಲುಕಿವೆ ದೇಶದ ರಾಜಧಾನಿ ದೆಹಲಿಯ ಶ್ವಾಸಕೋಶಗಳು!
ನೀರು ಶುದ್ಧೀಕರಿಸಲು ವಾಟರ್ ಪ್ಯೂರಿಫೈಯರ್ ಬಳಸುವಂತೆ ಇದೀಗ ವಾಯು ಶುದ್ಧೀಕರಣ ಯಂತ್ರ(Air Purifier) ಮಾರುಕಟ್ಟೆಗೆ ಬರುತ್ತಿದೆ. ಇದು ತಂತ್ರಜ್ಞಾನ ಬೆಳವಣಿಗೆ ಅಂದುಕೊಂಡರೂ ಈ ಗಾಳಿಯನ್ನು ಕಲುಷಿತಗೊಳಿಸಿದ್ದು ನಾವೇ ಅಲ್ಲವೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಳ್ಳಬೇಕಾಗುತ್ತದೆ. ವಾಸ್ತವದಲ್ಲಿ ಇದು ತಾಂತ್ರಿಕ ಪ್ರಗತಿಯೇ? ಅಥವಾ ಗಾಳಿ ಖರೀದಿಗಾಗಿ ಗ್ರಾಹಕರ ಸೃಷ್ಟಿಯೇ? ಗಾಳಿ ಎಷ್ಟು ಕಲುಷಿತವಾದರೂ ಪರವಾಗಿಲ್ಲ ನಾವು ಈ ಯಂತ್ರದ ಮೂಲಕ ಶುದ್ಧಗೊಳಿಸುತ್ತೇವೆ ಎಂಬ ಉಡಾಫೆಯ ಮನಸ್ಥಿತಿಗೆ ಸರ್ಕಾರ ಮತ್ತು ನಾಗರಿಕರನ್ನು ದೂಡುವುದೇ? ಏನೇ ಆದರೂ ಇದೀಗ ನೀರಿನಂತೆ ಗಾಳಿಯೂ ಮಾರಾಟದ ವಸ್ತು!
ಇಂತಹ ಸಂದರ್ಭದಲ್ಲಿ ನಮ್ಮ ಕಣ್ಣು ಹಾಯಬೇಕಾಗಿದ್ದು ಬಡ ಕೂಲಿ ಕಾರ್ಮಿಕನೆಡೆ. ದೆಹಲಿಯಲ್ಲಿ ಕಾರ್ಮಿಕರು ಹೊಟ್ಟೆಬಟ್ಟೆಗಾಗಿ ಬೇರೆ ದಾರಿಯಿಲ್ಲದೆ ವಿಷ ಗಾಳಿಯನ್ನು ಉಸಿರಾಡುತ್ತಾ ಕೂಲಿ ಕೆಲಸ ಮಾಡುತ್ತಾ ದಿನದೂಡುತ್ತಾರೆ. ಆದರೆ ಉಲ್ಲವರು ಸ್ವಚ್ಛ ಗಾಳಿಯನ್ನೂ ಕೊಂಡು ಉಸಿರಾಡಿ ಬದುಕುತ್ತಾರೆ. ‘ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯಾ’ ಎಂದು ಬಸವಣ್ಣರು ಹೇಳಿದಂತೆ ಇದೀಗ ದೆಹಲಿಯ ಬಡವರ ಸ್ಥಿತಿ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




