ದೇವರಾಜ ಅರಸು, ಸುಬ್ಬಯ್ಯ ಶೆಟ್ಟಿ ಮತ್ತು ಉಳುವವನೇ ಭೂಮಿಯ ಒಡೆಯ

Date:

ಸುಬ್ಬಯ್ಯ ಶೆಟ್ಟರು ಭೂ ರಹಿತರಿಗೆ ಭೂಮಿ ಕೊಡಲು ಹಗಲು-ರಾತ್ರಿ ಹೋರಾಡಿದ ಧೀಮಂತ ವ್ಯಕ್ತಿ. ಇಂಥ ಮಹಾನ್ ನಾಯಕನನ್ನು ಕನ್ನಡ ಮನಸ್ಸು ತನ್ನ ಆದ್ಯ ಕರ್ತವ್ಯವೆಂಬಂತೆ ಮತ್ತೆ ಮತ್ತೆ ನೆನೆಯಬೇಕಿದೆ. ಇಂದು ಸುಬ್ಬಯ್ಯ ಶೆಟ್ಟರು ಇಲ್ಲವಾದ ದಿನ...

ಕನ್ನಡ ನಾಡು ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪ, ಎಸ್.ನಿಜಲಿಂಗಪ್ಪ, ದೇವರಾಜ ಅರಸು, ಎನ್.ಎನ್.ಕಲ್ಲಣ್ಣನವರ್, ನಜೀರ್‌ಸಾಬ್, ಬಿ.ಬಸವಲಿಂಗಪ್ಪನವರಂತಹ ವೈಚಾರಿಕ ಹಾಗೂ ಆದರ್ಶ ರಾಜಕಾರಣಿಗಳಿಗೆ ಹೆಸರುವಾಸಿಯಾಗಿದೆ. ಅದೇ ರೀತಿ  ಕನ್ನಡ ನಾಡಿನ ಘನತೆ, ಗೌರವಕ್ಕೆ ಕೀರ್ತಿ ತಂದುಕೊಟ್ಟವರಲ್ಲಿ ಸುಬ್ಬಯ್ಯ ಶೆಟ್ಟಿ ಕೂಡ ಒಬ್ಬರು.

ಕರ್ನಾಟಕದಲ್ಲಿ ‘ಉಳುವವನೇ ಭೂಮಿಯ ಒಡೆಯ’ ಎಂಬ ಕ್ರಾಂತಿಕಾರಕವಾದ ಕಾನೂನು ಜಾರಿಗೊಳಿಸಲು ಶ್ರಮಿಸಿದವರಲ್ಲೊಬ್ಬರಾದ ಬಿ.ಸುಬ್ಬಯ್ಯ ಶೆಟ್ಟಿ(ಬಾಕ್ರಬೈಲು ಸುಬ್ಬಯ್ಯ ಶೆಟ್ಟಿ) 10 ಮಾರ್ಚ್ 2025ರಂದು 90ನೇ ವಯಸ್ಸಿನಲ್ಲಿ ನಿಧನರಾದರು. ಇಂದಿಗೆ ಅವರು ನಿಧನರಾಗಿ ಒಂದು ವರ್ಷ ಆಯಿತು. ದೀನ-ದುರ್ಬಲರ ಪರವಾಗಿ ದನಿ ಎತ್ತಿ, ಭೂ ರಹಿತ ಬಡವ ಮತ್ತು ನಿರ್ಗತಿಕರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ ಸುಬ್ಬಯ್ಯ ಶೆಟ್ಟಿಯವರ ಸಾವು ಕನ್ನಡ ನಾಡಿಗಾದ ಬಹುದೊಡ್ಡ ನಷ್ಟ ಎಂದು ಎಷ್ಟು ಜನರಿಗೆ ಅನಿಸಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸುಬ್ಬಯ್ಯ ಶೆಟ್ಟಿಯವರು ಮಾತ್ರ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಯಾರಿಗೆ ಸ್ವಂತ ಭೂಮಿ ಇರಲಿಲ್ಲವೋ ಅಂಥವರಿಗೆ ಭೂಮಿಯನ್ನು ದೊರಕಿಸಿಕೊಲು ಅವಿರತವಾಗಿ ಶ್ರಮಿಸಿದರು.

ಇಂಥ ಮಹಾನ್ ನಾಯಕ ಸುಬ್ಬಯಯ್ಯ ಶೆಟ್ಟಿಯವರ ಬಗ್ಗೆ ಲೇಖಕರೂ ಮತ್ತು ಪತ್ರಕರ್ತರಾದ ಬಸವರಾಜ ಮೇಗಲಕೇರಿಯವರು ರಚಿಸಿರುವ ‘ನಮ್ಮ ಅರಸು’ ಕೃತಿಯಲ್ಲಿನ ‘ಅಂದು ಕೊಂದರು ಇಂದು ಪೂಜಿಸುತ್ತಿದ್ದಾರೆ’ ಎಂಬ ಬರಹದಲ್ಲಿ ಅನಾವರಣವಾಗಿರುವ ದೇವರಾಜ ಅರಸು ಮತ್ತು ಸುಬ್ಬಯ್ಯ ಶೆಟ್ಟಿಯವರ ವ್ಯಕ್ತಿಚಿತ್ರ ನನ್ನನ್ನು ಹೆಚ್ಚು ಆಕರ್ಷಿಸಿತು. ಅದು ಬಿಟ್ಟರೆ, ಸುಬ್ಬಯ್ಯ ಶೆಟ್ಟಿಯವರ ಬಗ್ಗೆ ಹೆಚ್ಚಿನ ಬರಹಗಳು ಬಂದಿಲ್ಲದಿರುವುದು ವಿಷಾದನೀಯ ಸಂಗತಿ ಅನಿಸಿತು. ನಾನು ಗಮನಿಸಿದ ಹಾಗೆ ಪತ್ರಕರ್ತರಾದ ದಿನೇಶ್ ಅಮೀನಮಟ್ಟು ಫೇಸ್‌ಬುಕ್‌ನಲ್ಲಿ ಸುಬ್ಬಯ್ಯ ಶೆಟ್ಟಿಯವರ ನಿಧನಾನಂತರ ಅವರ ವ್ಯಕ್ತಿತ್ವ, ಸಾಧನೆಯ ಬಗ್ಗೆ ಬರೆದರು. ಇನ್ನುಳಿದಂತೆ ಕನ್ನಡದ ಬಹುತೇಕ ಪತ್ರಿಕೆಗಳು ಸುಬ್ಬಯ್ಯ ಶೆಟ್ಟಿಯವರ ಸಾವಿನ ಸುದ್ದಿಯನ್ನು ಬಿತ್ತರಿಸಿದ್ದು ಕೂಡ ಅಪರೂಪವೆಂದೇ ಹೇಳಬಹುದು. ಅದೂ ಹೋಗಲಿ ಯಾವ ಲೇಖಕನೂ ಅವರ ಬಗ್ಗೆ ಬರೆದಿದ್ದು ನನಗೆ ಕಂಡಿಲ್ಲ!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಆರು ವರ್ಷ: ಸಾಧನೆ ಮತ್ತು ಸಂಪಾದನೆಗಳತ್ತ ಒಂದು ನೋಟ

ಜಾತಿಬಲ, ಹಣಬಲ, ತೋಳ್ಬಲಗಳೇ ರಾಜಕಾರಣದಲ್ಲಿ ಮೇಲುಗೈ ಸಾಧಿಸುತ್ತಿರುವ ಈ ಸಂದರ್ಭದಲ್ಲಿ ಸುಬ್ಬಯ್ಯಶೆಟ್ಟಿಯವರಂತಹ ನಿಷ್ಠಾವಂತ, ಸಜ್ಜನ ರಾಜಕಾರಣಿಗಳನ್ನು ನೆನೆಯುವುದು ಪ್ರಜ್ಞಾವಂತರ ಕರ್ತವ್ಯ ಎಂಬುದನ್ನು ಜನತೆ ಅರ್ಥಮಾಡಿಕೊಳ್ಳಬೇಕು. ಆ ಕಾರಣಕ್ಕಾಗಿ ಸುಬ್ಬಯ್ಯ ಶೆಟ್ಟಿಯವರನ್ನು ಮತ್ತೆ ಮತ್ತೆ ನೆನೆಯಬೇಕಾಗಿದೆ.

ಇಡೀ ದೇಶದಲ್ಲಿಯೇ ಕರ್ನಾಟಕದಲ್ಲಿ ಮಾತ್ರ ಅತ್ಯಂತ ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ‘ಭೂ ಸುಧಾರಣಾ ಕಾಯ್ದೆ’ ಜಾರಿಯಾಯಿತು. ಇಂಥ ಜನಪರ ಕಾಯ್ದೆಯನ್ನು ಜಾರಿಗೊಳಿಸಿದ ದೇವರಾಜ ಅರಸು, ಸುಬ್ಬಯ್ಯ ಶೆಟ್ಟಿ, ಹುಚ್ಚಮಾಸ್ತಿಗೌಡರನ್ನು ಮರೆತರೆ ಕರ್ನಾಟಕದ ಜನತೆ ಇನ್ನೆಂಥ ರಾಜಕಾರಣಿಗಳನ್ನು ನೆನಪಿಟ್ಟುಕೊಳ್ಳಬಲ್ಲರು? ಹಾಗೆಯೇ ಈ ಕಾಯ್ದೆ ಜಾರಿಯಾಗುವ ಮುನ್ನ ಗೇಣಿದಾರರ ಪರವಾಗಿ ಹೋರಾಟ ಮಾಡಿದ ಶಾಂತವೇರಿ ಗೋಪಾಲಗೌಡ, ಕಡಿದಾಳ್ ಮಂಜಪ್ಪರಂತವರನ್ನೂ ಕನ್ನಡಿಗರು ಮರೆಯುವಂತಿಲ್ಲ.

ಬಾಲ್ಯ ಮತ್ತು ವಿದ್ಯಾಭ್ಯಾಸ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಬಾಕ್ರಬೈಲು ಎಂಬ ಸಣ್ಣ ಹಳ್ಳಿಯಲ್ಲಿ 4 ಏಪ್ರಿಲ್ 1934ರಂದು ಹುಟ್ಟಿದ ಸುಬ್ಬಯ್ಯ ಶೆಟ್ಟಿ ಮೂಲತಃ ಜಮೀನ್ದಾರಿ ಕುಟುಂಬದಲ್ಲಿ ಜನಿಸಿದವರು. ತುಳುನಾಡಿನ ಬಂಟ ಸಮುದಾಯದವರಾದ ಇವರು ಆಗರ್ಭ ಶ್ರೀಮಂತರು. ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಹಾಗೂ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪೂರೈಸಿದ ನಂತರ ವಕೀಲ ವೃತ್ತಿ ಆರಂಭಿಸಿ, ಜನಪ್ರಿಯ ವಕೀಲರೆಂದೇ ಜನಮನ್ನಣೆ ಪಡೆದರು.

ಅಂದಿನ ಹೆಸರಾಂತ ವಕೀಲರಾದ ಸೂರ್ಯನಾರಾಯಣ ಅಡಿಗ ಮತ್ತು ವೈಕುಂಠ ಬಾಳಿಗ ಅವರ ಬಳಿ ಮಂಗಳೂರಿನಲ್ಲಿ ವೃತ್ತಿಜೀವನ ಆರಂಭಿಸಿದ ಸುಬ್ಬಯ್ಯ ಶೆಟ್ಟಿ ಬಹುಬೇಗ ಜನಪ್ರಿಯ ವಕೀಲರಾಗಿ ಹೆಸರುವಾಸಿಯಾದರು. ಅದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದ ಯುವಕ ಸುಬ್ಬಯ್ಯ ಶೆಟ್ಟಿ ಹಿಂದುಳಿದ ವರ್ಗಗಳ ಹರಿಕಾರರಾದ ದೇವರಾಜ ಅರಸುರವರ ಶಿಷ್ಯರಾಗಿ ಗುರುತಿಸಿಕೊಂಡು ಸಕ್ರಿಯ ರಾಜಕಾರಣಕ್ಕೆ ಪ್ರವೇಶಿಸಿದರು. ಮೊಟ್ಟಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ನೇಮಕಗೊಳ್ಳುವ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆದರು. ಆನಂತರ 1972, 1978ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಸಚಿವರೂ ಆದರು.

ತುಳುನಾಡಿನ ಕಣ್ಮಣಿ
ಸದಾ ಶೋಷಿತರ ಪರವಾಗಿ ಚಿಂತಿಸುತ್ತಿದ್ದ ಸುಬ್ಬಯ್ಯ ಶೆಟ್ಟಿಯವರು ಜೀವನದುದ್ದಕ್ಕೂ ತಾವು ನಂಬಿದ್ದ ತತ್ವ ಮತ್ತು ಆದರ್ಶಗಳಿಗೆ ಅನುಸಾರವಾಗಿಯೇ ಬದುಕಿದರು. ತುಳುನಾಡಿನ ಸಾಹಿತ್ಯ ಸಂಸ್ಕೃತಿಯ ಏಳಿಗೆಗೆ ಸುಬ್ಬಯ್ಯ ಶೆಟ್ಟಿ ನೀಡಿದ ಕೊಡುಗೆ ಅಪಾರ. ಕೆಲವೇ ವರ್ಷಗಳ ಕಾಲ ರಾಜಕಾರಣದಲ್ಲಿದ್ದರೂ ಇವರು ಕೈಗೊಂಡ ಸಮಾಜ ಸುಧಾರಣೆ ಮತ್ತು ಅಭಿವೃದ್ಧಿ ಕಾರ್ಯಗಳಿಂದ ಜನರ ಮನಸ್ಸಿನಿಂದ ಮರಯಾಗಲಾರರು.

ಇಡೀ ಕರ್ನಾಟಕದಲ್ಲಿಯೇ ಭೂ ಸುಧಾರಣೆ ಕಾಯ್ದೆಯನ್ನು ಹೆಚ್ಚು ಯಶಸ್ವಿಯಾಗಿ ದಕ್ಷಿಣ ಕನ್ನಡದಲ್ಲಿ ಜಾರಿಗೊಳಿಸಿದ ಕೀರ್ತಿ ಸುಬ್ಬಯ್ಯ ಶೆಟ್ಟಿಯವರದು. ಇದು ಸುಬ್ಬಯ್ಯ ಶೆಟ್ಟಿಯವರ ಇಚ್ಚಾಶಕ್ತಿ ಹಾಗೂ ಕರ್ತವ್ಯಬದ್ಧತೆಗೊಂದು ನಿದರ್ಶನ. ತುಳುನಾಡಿನವರೇ ಆದ ಶಿವರಾಮ ಕಾರಂತರು ತಮ್ಮ ‘ಚೋಮನ ದುಡಿ’ ಕಾದಂಬರಿಯಲ್ಲಿ ಭೂರಹಿತ ‘ಚೋಮ’ರ ದಾರುಣ ಸ್ಥಿತಿಯನ್ನು ಚಿತ್ರಿಸಿರುವರು. ಅದೇ ತುಳುನಾಡಿನ ಸುಬ್ಬಯ್ಯ ಶೆಟ್ಟಿ ನಿಜಜೀವನದಲ್ಲಿ ಲಕ್ಷಾಂತರ ಜನ ಚೋಮರ ಬಾಳಿಗೆ ದಾರಿದೀಪವಾದರು.

ಅದೂ ಅಲ್ಲದೆ, ತುಳುನಾಡಿನ ಹಿರಿಮೆ-ಗರಿಮೆಯನ್ನು ಇಡೀ ನಾಡಿಗೆ ಸಾರಿದ ಹಾಗೂ ತುಳು ನಾಡಿನ ಆಗುಹೋಗುಗಳ ಬಗ್ಗೆ ಧ್ವನಿ ಎತ್ತುತ್ತಿದ್ದ ಬಿ.ಎ.ಮೋಯಿದ್ದಿನ್, ಎ.ಕೆ.ಸುಬ್ಬಯ್ಯರಂತಹ ಅಪರೂಪದ ರಾಜಕಾರಣಿಗಳ ಸಾಲಿನಲ್ಲಿ ಸೇರುವ ಶೆಟ್ಟರು ತುಳುನಾಡಿನ ಅಗ್ರಗಣ್ಯ ನಾಯಕ ಮಾತ್ರವಲ್ಲ, ಧೀಮಂತ ರಾಜಕಾರಣಿ ಎಂದರೆ ಅತಿಶಯ ಎನಿಸದು.

ಸುಬ್ಬಯ್ಯ ಶೆಟ್ಟಿ

ಅರಸು, ಸುಬ್ಬಯ್ಯ ಶೆಟ್ಟಿ ಮತ್ತು ಉಳುವವನೇ ಭೂಮಿಯ ಒಡೆಯ
ದೇವರಾಜ ಅರಸು ಸಂಪುಟದಲ್ಲಿ ಭೂ ಸುಧಾರಣೆ, ಇಂಧನ ಮತ್ತು ವಾರ್ತಾ ಇಲಾಖೆ ಹಾಗೂ ಶಿಕ್ಷಣ ಖಾತೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಶೆಟ್ಟಿಯವರು ಅರಸರ ಕನಸನ್ನು ನನಸು ಮಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಐತಿಹಾಸಿಕವಾದ ‘ಉಳುವವನೇ ಭೂಮಿಯ ಒಡೆಯ’ ಎಂಬ ಕಾನೂನು ಜಾರಿಗೊಳಿಸುವ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಮಾತ್ರವಲ್ಲ; ಇಡೀ ಇಂಡಿಯಾದಲ್ಲಿಯೇ ಒಂದು ಅಪೂರ್ವವಾದ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು.

ಅರಸರ ಕನಸನ್ನು ನನಸು ಮಾಡಿದ ಸುಬ್ಬಯಯ್ಯ ಶೆಟ್ಟಿಯವರು ಆ ಸಂದರ್ಭದ ಐತಿಹಾಸಿಕ ಕ್ಷಣಗಳನ್ನು ಈ ರೀತಿ ನೆನಪು ಮಾಡಿಕೊಂಡಿದ್ದಾರೆ: 1973ರಲ್ಲಿ ಅರಸರು ನನ್ನ ಭೂಸುಧಾರಣಾ ಖಾತೆಯ ಮಂತ್ರಿ ಮಾಡಿದರು. ರಾಜಕಾರಣಕ್ಕೇ ಹೊಸಬ, ಗೆದ್ದಿರುವುದು ಅದೇ ಮೊದಲ ಸಲ. ‘ನಿಮ್ಮಲ್ಲಿ ಆ ಶಕ್ತಿ ಮತ್ತು ಬುದ್ಧಿ ಇದೆ; ನಿಮ್ಮ ಕೈಯಲ್ಲಿ ಸಾಧ್ಯವಿದೆ ಮಾಡಿ…’ ಎಂದು ಅರಸು ಪ್ರೋತ್ಸಾಹಿಸಿದರು. ಅಷ್ಟೇ ಅಲ್ಲ; ಮಂತ್ರಿ ಕುರ್ಚಿಯಲ್ಲಿ ಕೂರಿಸುವ ಮುನ್ನ ದೇವರಾಜ ಅರಸರು, ‘ನಿಮಗೆ ಜಮೀನು ಎಷ್ಟಿದೆ’ ಎಂದಿದ್ದರು. ಪುತ್ತೂರಿನ ಕೇರಳ-ಕರ್ನಾಟಕ ಗಡಿಭಾಗದಲ್ಲಿ ಪಿತ್ರಾರ್ಜಿತವಾಗಿ ಬಂದ 200 ಚಿಲ್ಲರೆ ಎಕರೆ ಜಮೀನಿತ್ತು. ಜತೆಗೆ ನನ್ನ ಪತ್ನಿ ಕಡೆಯಿಂದ ಬಂದಿದ್ದ ಆಸ್ತಿಯೂ ಅಪಾರವಾಗಿತ್ತು. ಅನುಕೂಲಸ್ಥ ಬಂಟ ಜನಾಂಗದ ಜಮೀನ್ದಾರರು ಎಂದು ಜನ ನಮ್ಮನ್ನು ಗುರುತಿಸಿದ್ದರು. ಹಾಗಾಗಿ, ಯಾವುದನ್ನೂ ಮರೆಮಾಚದೆ ಅವರ ಮುಂದಿಟ್ಟಿದ್ದೆ.

‘ಸುಬ್ಬಯ್ಯ ಶೆಟ್ಟರೇ, ಡೈಮಂಡ್ ಕಟ್ಸ್ ಡೈಮಂಡ್ ಎನ್ನುವುದರ ಅರ್ಥ ಗೊತ್ತೇನ್ರಿ ನಿಮಗೆ?’ ಎಂದು ಪ್ರಶ್ನಿಸಿದ್ದರು. ನಂತರ ಅವರೇ, ‘ಕಟ್ಟುನಿಟ್ಟಾಗಿ ಭೂಸುಧಾರಣಾ ಕಾನೂನನ್ನು ಜಾರಿಗೆ ತನ್ನಿ; ನಿಸ್ಸಂಕೋಚದಿಂದ, ನಿರ್ದಾಕ್ಷಿಣ್ಯದಿಂದ ಶತಶತಮಾನಗಳಿಂದ ಶೋಷಣೆಗೊಳಗಾದ ಗೇಣಿದಾರನಿಗೆ ನ್ಯಾಯ ದೊರಕಿಸಿ ಕೊಡಿ…’ ಎಂದರು. ಇದು ಅರಸರು ಮಂತ್ರಿಯಾದ ನನಗೆ ಹೇಳಿದ ಮೊದಲ ಮಾತು(ಬಸವರಾಜ ಮೇಗಲಕೇರಿ, ನಮ್ಮ ಅರಸು, ಪುಟ 3, 2020).

ಈ ರೀತಿ ಶ್ರೀಮಂತರು ಹಾಗೂ ಭೂಮಾಲೀಕರ ದಬ್ಬಾಳಿಕೆಯ ನಡುವೆಯೂ ಸದನದ ಒಳಗೆ ಮತ್ತು ಹೊರಗಿನ ಹಲವು ರೀತಿಯ ವಿರೋಧಗಳು ಮತ್ತು ಟೀಕೆಗಳನ್ನು ಮೆಟ್ಟಿನಿಂತು ಭೂನ್ಯಾಯ ಮಂಡಳಿ ರಚಿಸಿ, ಭೂ ರಹಿತರಿಗೆ ಭೂಮಿಯನ್ನು ವಿತರಿಸಿದರು. ಅದರಲ್ಲೂ ತನ್ನನ್ನು ಗೆಲ್ಲಿಸಿದ ಹಾಗೂ ಕರಾವಳಿ ಭಾಗದಲ್ಲಿ ಪ್ರಬಲವಾಗಿರವ ಬಂಟ ಸಮುದಾಯದ ಜನರನ್ನೇ ಎದುರು ಹಾಕಿಕೊಂಡು ಆಗಿನ ಮುಖ್ಯಮಂತ್ರಿ ಅರಸು ಮತ್ತು ಕಂದಾಯ ಮಂತ್ರಿಗಳಾದ ಹುಚ್ಚಮಾಸ್ತಿಗೌಡರ ಬೆಂಬಲದಿಂದ ಅತ್ಯಂತ ಜನಪರವಾದ ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದರು. ಬಡವ-ಶ್ರೀಮಂತರೆಂಬ ಭೇದಭಾವಗಳನ್ನು ತೊಡೆದುಹಾಕಿ ಸಮಸಮಾಜವನ್ನು ನಿರ್ಮಿಸಲು ಅರಸರಿಗೆ ಹೆಗಲುಕೊಟ್ಟು ದುಡಿದರು.

ಸ್ವಜನಪಕ್ಷಪಾತ, ಜಾತೀಯತೆ, ಕುಟುಂಬ ರಾಜಕಾರಣ, ಭ್ರಷ್ಟಾಚಾರ ಹಾಗೂ ಲಂಚಾವತಾರಗಳಂತಹ ಕೀಳುಮಟ್ಟದ ರಾಜಕಾರಣದಿಂದ ಇಡೀ ನಾಡಿನ ರಾಜಕೀಯ ವಲಯ ಇತ್ತೀಚೆಗೆ ಕಲುಷಿತವಾಗುತ್ತಿರುವುದು ದುರದೃಷ್ಟಕರ ಸಂಗತಿ. ಬಹುತೇಕ ರಾಜಕಾರಣಿಗಳು ಕನಿಷ್ಟಪಕ್ಷ ಲಜ್ಜೆಯನ್ನೂ ಮೀರಿ ಸಾರ್ವಜನಿಕ ಆಸ್ತಿಪಾಸ್ತಿಗಳನ್ನೇ ಸೂರೆ ಹೊಡೆಯುತ್ತಿರುವ ಈ ಹೊತ್ತಿನಲ್ಲಿ ಸುಬ್ಬಯ್ಯ ಶೆಟ್ಟರಂತಹ ಸಚ್ಚಾರಿತ್ರ್ಯವುಳ್ಳ ನಿಷ್ಕಲ್ಮಷ ಮನಸ್ಸಿನ ಸಜ್ಜನ ರಾಜಕಾರಣಿ ಭೂ ರಹಿತರ ನೋವಿಗೆ ಮಿಡಿದಿದ್ದು ಒಂದು ಸೋಜಿಗವೇ ಸರಿ. ಅದರಲ್ಲೂ ಮುಖ್ಯವಾಗಿ ತಮ್ಮ ಸ್ವಂತ ಆಸ್ತಿಯನ್ನೇ ರೈತರಿಗೆ ದಾನ ಮಾಡಿದ್ದು ದೊಡ್ಡ ಸಾಧನೆಯೇ ಸರಿ.

ಸಮಾಜದ ಒಳಿತಿಗಾಗಿ ಸ್ವಂತ ಜಮೀನನ್ನು ನೀಡಿ, ಸ್ವತಃ ಕಾನೂನನ್ನು ಪರಿಪಾಲನೆ ಮಾಡಿದ ಸುಬ್ಬಯ್ಯ ಶೆಟ್ಟರು ನುಡಿದಂತೆ ನಡೆದರು. ಅದರಲ್ಲೂ ಸಮಾಜಸೇವೆಯೇ ರಾಜಕಾರಣಿಗಳ ಮೂಲ ಉದ್ದೇಶವಾಗಬೇಕು. ಆಗ ಮಾತ್ರ ನಮ್ಮ ಪ್ರಜಾತಂತ್ರ ವ್ಯವಸ್ಥೆಗೆ ಅರ್ಥ ಬರುತ್ತದೆ ಎಂದು ನಂಬಿದ್ದರು.

ಅಧಿಕಾರದ ಹಿಂದೆ ಓಡಲಿಲ್ಲ!
ದೇವರಾಜ ಅರಸರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ಶೆಟ್ಟರು ಕಾಂಗ್ರೆಸ್ ಇಬ್ಭಾಗವಾದಾಗ ಅರಸು ಜೊತೆಗೆ ನಿಂತರು. ಬಹುತೇಕ ರಾಜಕಾರಣಿಗಳು ಅಧಿಕಾರದ ಒಡ್ಡೋಲಗದ ಹಿಂದೆ ಓಡುತ್ತಿರಬೇಕಾದರೆ ಶೆಟ್ಟರು ಮಾತ್ರ ತನ್ನ ರಾಜಕೀಯ ಗುರುವಿನ ಜೊತೆ ನಿಂತು ನಿಷ್ಠೆ ಮೆರೆದರು. ಸ್ವಜನಪಕ್ಷಪಾತಿಯಲ್ಲದ ಶೆಟ್ಟರು ತಮ್ಮ ಅಧಿಕಾರಾವಧಿಯುದ್ಧಕ್ಕೂ ಯಾವುದೇ ಒತ್ತಡಗಳಿಗೂ ಮಣಿಯಲಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಚುನಾವಣಾ ಖರ್ಚಿಗಾಗಿ ಪಕ್ಷ ನೀಡಿದ್ದ ಹಣದಲ್ಲಿ ಉಳಿಕೆಯಾದ ಹಣವನ್ನು ಕಾಂಗ್ರೆಸ್‌ನ ಹೈಕಮಾಂಡ್‌ಗೆ ಹಿಂತಿರುಗಿಸಿದ ಪ್ರಾಮಾಣಿಕ ವ್ಯಕ್ತಿ. ಯಾರನ್ನೂ ದ್ವೇಷಿಸದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸಿದರು. ಆದರ್ಶ ಮತ್ತು ತಾತ್ವಿಕ ರಾಜಕಾರಣಕ್ಕೆ ಹೆಸರಾಗಿದ್ದ ಇವರು ಎಂದೂ ಅಧಿಕಾರಕ್ಕಾಗಿ ಅಂಟಿಕೂರಲಿಲ್ಲ. ರಾಜಕೀಯದಲ್ಲಿ ಮುಂದುವರೆಯುವ ಅರ್ಹತೆ, ಸಾಮರ್ಥ್ಯವಿದ್ದರೂ ತಾವಾಗಿಯೇ ರಾಜಕೀಯ ನಿವೃತ್ತಿ ಪಡೆದರು.

ಅರಸುಯುಗದ ಕೊನೆಯ ಕೊಂಡಿ
‘ಉಳುವವನೇ ಭೂಮಿಯ ಒಡೆಯ ಕಾನೂನು’ ಜಾರಿಗೆ ತಂದಿದ್ದು ಸೇರಿದಂತೆ ಪ್ರೌಢಶಾಲೆಯ ಶಿಕ್ಷಕರ ಸಂಘ, ಕೊಳೆಗೇರಿ ನಿರ್ಮೂಲನಾ ಮಂಡಳಿ ರಚನೆ, ಋಣಮುಕ್ತ ಕಾಯ್ದೆ ಜಾರಿ- ಇವು ಕರ್ನಾಟಕ ರಾಜ್ಯಕ್ಕೆ ಸುಬ್ಬಯ್ಯ ಶೆಟ್ಟಿಯವರು ನೀಡಿದ ಇನ್ನಿತರ ಬಹುಮುಖ್ಯ ಕೊಡುಗೆಗಳು.

ತಲೆ ತಲಾಂತರದಿಂದ ಜಮೀನ್ದಾರರ ಹೊಲದಲ್ಲಿ ಬಡ ಗೇಣಿದಾರರು ಪಶುಗಳಂತೆ ದುಡಿಯುತ್ತಿದ್ದರು. ಆದ್ದರಿಂದ ‘ಉಳುವವನೆ ಭೂಮಿಯ ಒಡೆಯನಾಗಬೇಕು’ ಎಂಬ ಕೂಗು ಸ್ವಾತಂತ್ರ್ಯಪೂರ್ವದಿಂದಲೂ ಕೇಳಿಬರುತ್ತಿತ್ತು. ಈ ಕೂಗು ದೇವರಾಜ ಅರಸು ಕಾಲದಲ್ಲಿ ಕಾಯಿದೆಯಾಗಿ ಜಾರಿಯಾಯಿತು. ಭೂ ರಹಿತರಿಗೆ ಭೂಮಿ ದೊರಕಿಸಿ ಕೊಡುವುದೇ ಈ ಭೂ ಸುಧಾರಣಾ ಕಾಯಿದೆಯ ಮುಖ್ಯ ಗುರಿಯಾಗಿತ್ತು. ದೇವರಾಜ ಅರಸು ಕಾಲದಲ್ಲಿ ಸುಬ್ಬಯ್ಯ ಶೆಟ್ಟಿಯವರ ಕಾಳಜಿಯಿಂದ ಆ ಗುರಿ ಸಾಕಾರಗೊಂಡಿತು.

ದೇವರಾಜ ಅರಸು ಅಸಂಖ್ಯ ಜನರನ್ನು ರಾಜಕೀಯಕ್ಕೆ ತಂದರು; ಮಂತ್ರಿಸ್ಥಾನವನ್ನೂ ನೀಡಿ ಬೆಳೆಸಿದರು. ಆದರೆ ಅಂಥ ಘಟಾನುಘಟಿ ರಾಜಕಾರಣಿಗಳಲ್ಲಿ ಸುಬ್ಬಯ್ಯ ಶೆಟ್ಟಿಯವರಿಗೆ ತನ್ನದೇ ಆದ ವಿಶಿಷ್ಟತೆ ಇದೆ.

ಭೂ ಸುಧಾರಣಾ ಚಳವಳಿಯ ಸುತ್ತ ಮುತ್ತ
ಕರ್ನಾಟಕದಲ್ಲಿ ಭೂ ಸುಧಾರಣೆ ಏಕಾಏಕಿ 1973ರಲ್ಲಿ ಆಗಲಿಲ್ಲ. ಅದಕ್ಕೂ ಹಿಂದೆ ಟಿಪ್ಪುಸುಲ್ತಾನ್, ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲೂ ಭೂಮಿ ಹಂಚಿಕೆ ನಡೆದಿತ್ತು. ಆದರೆ ಈ ಘೋಷಣೆಯು ಶಾಂತವೇರಿ ಗೋಪಾಲಗೌಡರ ಕಾಲದಲ್ಲಿ ಹೆಚ್ಚು ವೇಗ ಪಡೆಯಿತು. ಎಲ್.ಜಿ.ತಿಮ್ಮಪ್ಪ ಹೆಗ್ಗಡೆಯವರು ‘ಅರಸು: ಭೂ ಸುಧಾರಣೆ’ ಎಂಬ ಲೇಖನದಲ್ಲಿ ದಾಖಲಿಸಿರುವಂತೆ- ”ಶಾಂತವೇರಿ ಗೋಪಾಲಗೌಡರು ‘ಉಳುವವನೇ ಭೂಮಿಯ ಒಡೆಯ’ ಎಂಬ ಧ್ವನಿಗೆ ಹೆಚ್ಚಿನ ಶಕ್ತಿ ತುಂಬಿರದಿದ್ದರೆ, ಕರ್ನಾಟಕದಲ್ಲಿ ಭೂಸುಧಾರಣೆ ಬಹುಶಃ ಭೂಗತವಾಗುತ್ತಿತ್ತೇನೋ. ಆದರೆ, ಕರ್ನಾಟಕದ ಕಾಗೋಡು ಹೋರಾಟಕ್ಕೆ ರಾಷ್ಟ್ರೀಯ ಮಟ್ಟದ ಶಕ್ತಿಯನ್ನು ಕೊಡುವಲ್ಲಿ ಮಲೆನಾಡಿನ ಹಳ್ಳಿ ಹಳ್ಳಿ ತಿರುಗಿ ಸಮಾಜವಾದಿ ಚಳವಳಿಯನ್ನು ಮನೆಮಾತಾಗಿಸುವಲ್ಲಿ, ಭೂಮಿಯ ಒಡೆತನ ಸಿಕ್ಕುವವರೆಗೆ ಎಂಥಾ ಹೋರಾಟಕ್ಕೂ ಇಳಿಯಲು, ಗೇಣಿದಾರ ವರ್ಗಕ್ಕೆ ಅಂತಃಶಕ್ತಿಯನ್ನು ಕೊಟ್ಟು ಸಂಘಟಿಸುವಲ್ಲಿ ಶಾಂತವೇರಿಯವರ ಪಾತ್ರ ಅಸಾಧಾರಣವಾದುದು”(ಪರಿವರ್ತನೆಯ ಹರಿಕಾರ, ಸಂ: ಕೋಣಂದೂರು ವೆಂಕಪ್ಪಗೌಡ, ಪುಟ-355, ಯಶಸ್ವಿ ಪ್ರಕಾಶನ, ಬೆಂಗಳೂರು, 1984). ಅದೇ ವೇಳೆಯಲ್ಲಿ ಕರ್ನಾಟಕದಾದ್ಯಂತ ವ್ಯಾಪಿಸಿದ ಈ ಕೂಗು ಕಾಯ್ದೆಯಾಗಿ ಹೊರಹೊಮ್ಮಲು ನಾಡು ಎದುರು ನೋಡುತ್ತಿತ್ತು. ಆಗ ”ಗೋಪಾಲಗೌಡರು ಹೊತ್ತಿಸಿದ ಕಾಗೋಡು ಕ್ರಾಂತಿಯ ಕಿಡಿ ಮಹಾನ್ ಶಕ್ತಿಯಾಗಿ ಬೆಳೆದು ದೇವರಾಜ ಅರಸು ಅವರಿಂದ ಗುರಿ ತಲುಪಿ ಸಾರ್ಥಕವಾಯಿತು”(ಅದೇ, ಪುಟ-366).

ಭೂ ಸುಧಾರಣೆಯ ಸಂಪೂರ್ಣ ಶ್ರೇಯಸ್ಸು ದೇವರಾಜ ಅರಸು ಅವರಿಗೆ ಸಲ್ಲುತ್ತಿದ್ದರೂ ಈ ಕ್ರಾಂತಿಕಾರಕ ಕಾನೂನು ಅನುಷ್ಠಾನಗೊಳ್ಳಲು ಅನೇಕ ಜನ ರಾಜಕಾರಣಿಗಳು, ವಕೀಲರು, ಹೋರಾಟಗಾರರು ಶ್ರಮಿಸಿರುವವರಲಲ್ಲಿ ಸುಬ್ಬಯ್ಯ ಶೆಟ್ಟಿ ಕೂಡ ಅಗ್ರಗಣ್ಯರು ಎಂಬುದನ್ನು ಮರೆಯಬಾರದು.

ಇದನ್ನು ಓದಿದ್ದೀರಾ?: ಸರ್ಕಾರಿ ಹುದ್ದೆಗಳನ್ನು ಹರಾಜು ಹಾಕಿ, ಇಲ್ಲ ಕೆಪಿಎಸ್‌ಸಿಯನ್ನು ಮುಚ್ಚಿ

ಕನ್ನಡ ನಾಡು ಕಂಡ ಅಪರೂಪದ, ಸಜ್ಜನ ಹಾಗೂ ಆದರ್ಶ ರಾಜಕಾರಣಿಯಾದ ಸುಬ್ಬಯ್ಯ ಶೆಟ್ಟಿಯವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಸರ್ಕಾರವು 2014ರಲ್ಲಿ ಪ್ರತಿಷ್ಠಿತ ‘ದೇವರಾಜ ಅರಸು ಪ್ರಶಸ್ತಿ’ ನೀಡಿ ಗೌರವಿಸಿದೆ. ಹಾಗೆಯೇ ಕನ್ನಡ ಜನಶಕ್ತಿ ಕೇಂದ್ರವು 2019ರಲ್ಲಿ ‘ಶಾಂತವೇರಿ ಗೋಪಾಲಗೌಡ ಪ್ರಶಸ್ತಿ’ ನೀಡಿ  ಸತ್ಕರಿಸಿದೆ. ಇದರ ಜೊತೆಗೆ ದ.ರಾ.ಬೇಂದ್ರೆ ಪ್ರಶಸ್ತಿ ಸೇರಿದಂತೆ ಇನ್ನೂ ಮೊದಲಾದ ಪ್ರಶಸ್ತಿ, ಪುರಸ್ಕಾರಗಳು ಸುಬ್ಬಯ್ಯ ಶೆಟ್ಟಿಯವರಿಗೆ ಸಂದಿವೆ. ಒಟ್ಟಾರೆ ರಾಜಕಾರಣವೂ ಸೇರಿದಂತೆ ಸಾಮಾಜಿಕ ಹಾಗೂ  ಶಿಕ್ಷಣ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಸೇವೆ ಅಪಾರ. ಇಂಥ ಉದಾತ್ತ ನಾಯಕ ನಿರ್ಗಮಿಸಿದ್ದು ನಿಜಕ್ಕೂ  ಬಹದೊಡ್ಡ ನಷ್ಟವೇ ಸರಿ.

ಸುಬ್ಬಯ್ಯ ಶೆಟ್ಟರು ಭೂ ರಹಿತರಿಗೆ ಭೂಮಿ ಕೊಡಲು ಹಗಲು-ರಾತ್ರಿ ಹೋರಾಡಿದ ಧೀಮಂತ ವ್ಯಕ್ತಿ. ಇಂಥ ಮಹಾನ್ ನಾಯಕನನ್ನು ಕನ್ನಡ ಮನಸ್ಸು ತನ್ನ ಆದ್ಯ ಕರ್ತವ್ಯವೆಂಬಂತೆ ಮತ್ತೆ ಮತ್ತೆ ನೆನೆಯಬೇಕಿದೆ. ಏಕೆಂದರೆ ಸುಬ್ಬಯ್ಯ ಶೆಟ್ಟರು ಅಧಿಕಾರಕ್ಕಾಗಿ ಎಂದೂ ಆಸೆ ಪಡಲಿಲ್ಲ. ಸಿಕ್ಕ ಅವಕಾಶವನ್ನೆ ಸಮರ್ಥವಾಗಿ ಬಳಸಿಕೊಂಡು  ‘ಉಳುವವನೇ ಭೂಮಿಯ ಒಡೆಯ’ ಎಂಬ ಕಾನೂನನ್ನು ಜಾರಿಗೆ ತರಲು ಶ್ರಮಿಸಿದರು. ಆ ಮೂಲಕ ಕೆಲವೇ ಕೆಲವು ಜನರ ಸ್ಮರಣೆಯಲ್ಲೂ ಉಳಿದರು. ಇದು ಎಲೆಮರೆಯ ಕಾಯಿಯಂತಿದ್ದ ಸುಬ್ಬಯ್ಯ ಶೆಟ್ಟಿಯವರ ಜೀವನಗಾಥೆ.

Narasimhamurthy halehatti
ನರಸಿಂಹಮೂರ್ತಿ ಹಳೇಹಟ್ಟಿ
+ posts

ಲೇಖಕ ಮತ್ತು ಅಧ್ಯಾಪಕ‌. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹಳೇಹಟ್ಟಿ ಗ್ರಾಮದವರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದು, 'ಸಮಕಾಲೀನ ಕನ್ನಡ ಕಾವ್ಯ: ಸ್ವರೂಪ ಮತ್ತು ಧೋರಣೆಗಳು' ಎಂಬ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ., ಪದವಿ ನೀಡಿದೆ. ’ಕಾಗದದ ದೋಣಿ’ ಇವರ ವಿಮರ್ಶಾ ಕೃತಿ. 'ಅಂಬೇಡ್ಕರ್ ವಿಚಾರಧಾರೆ', 'ಕನ್ನಡದ ತೇಜಸ್ಸು' ಇವರ ಸಂಪಾದಿತ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ನರಸಿಂಹಮೂರ್ತಿ ಹಳೇಹಟ್ಟಿ
ನರಸಿಂಹಮೂರ್ತಿ ಹಳೇಹಟ್ಟಿ
ಲೇಖಕ ಮತ್ತು ಅಧ್ಯಾಪಕ‌. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಹಳೇಹಟ್ಟಿ ಗ್ರಾಮದವರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿ ಪಡೆದಿದ್ದು, 'ಸಮಕಾಲೀನ ಕನ್ನಡ ಕಾವ್ಯ: ಸ್ವರೂಪ ಮತ್ತು ಧೋರಣೆಗಳು' ಎಂಬ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ., ಪದವಿ ನೀಡಿದೆ. ’ಕಾಗದದ ದೋಣಿ’ ಇವರ ವಿಮರ್ಶಾ ಕೃತಿ. 'ಅಂಬೇಡ್ಕರ್ ವಿಚಾರಧಾರೆ', 'ಕನ್ನಡದ ತೇಜಸ್ಸು' ಇವರ ಸಂಪಾದಿತ ಕೃತಿಗಳು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...