ಧರ್ಮಸ್ಥಳ ಪ್ರಕರಣ; ಈ ದಾಖಲೆಗಳಿಗೆ ಬಿಜೆಪಿ, ಜೆಡಿಎಸ್ ನಾಯಕರು ಏನು ಹೇಳುತ್ತಾರೆ?

Date:

"35-40 ವರ್ಷ ವಯೋಮಾನದ ಈ ಮಹಿಳೆಯನ್ನು ಅಪರಿಚಿತೆ ಎನ್ನಲು ಸಾಧ್ಯವೇ? ಯಾವ ದಾಖಲೆಯನ್ನು ಪಡೆದು ವಸತಿ ಗೃಹದಲ್ಲಿ ಆಕೆಗೆ ಕೊಠಡಿ ನೀಡಲಾಗಿತ್ತು? ಕೊಲೆಯಾಗಿದೆ ಎಂದು ಗೊತ್ತಿದ್ದರೂ ದಹನ ಮಾಡಿದ್ದೇಕೆ?"

“ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಿದ್ದೇನೆ, ಅವುಗಳನ್ನು ಹೊರಗೆ ತೆಗೆಯಲು ಸಿದ್ಧನಿದ್ದೇನೆ” ಎಂದು ಅಲ್ಲಿ ಸ್ವಚ್ಛತಾ ಕಾರ್ಮಿಕನಾಗಿದ್ದ ಚಿನ್ನಯ್ಯ ಎಂಬ ವ್ಯಕ್ತಿ ದೂರು ನೀಡಿದ ಬಳಿಕ ರಾಜ್ಯವು ವಿಶಿಷ್ಟ ವಿದ್ಯಮಾನಕ್ಕೆ ಸಾಕ್ಷಿಯಾಗಿದ್ದು ಸುಳ್ಳಲ್ಲ. ಜನಾಗ್ರಹ ಮತ್ತು ಮಹಿಳಾ ಆಯೋಗದ ಪತ್ರದ ಮೇರೆಗೆ ಸರ್ಕಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಿ, ತನಿಖೆ ಶುರು ಮಾಡಿತು. “ಸದರಿ ದೂರಿನ ತನಿಖೆ ಮತ್ತು ಇದಕ್ಕೆ ಸಂಬಂಧಿಸಿದಂತೆ ರಾಜ್ಯದ ಯಾವುದೇ ಮೂಲೆಯಲ್ಲಿ ದಾಖಲಾಗಿರುವ ಹಾಗೂ ದಾಖಲಾಗುವ ಪ್ರಕರಣಗಳನ್ನು ಎಸ್‌ಐಟಿ ಕೈಗೆತ್ತಿಕೊಳ್ಳಲಿದೆ” ಎಂದು ಸರ್ಕಾರ ಆದೇಶಿಸಿತು. ಹೀಗಾಗಿ ಇದೊಂದು ಮಹತ್ತರ ಬೆಳವಣಿಗೆಯಾಗಿತ್ತು. ಆರಂಭದಲ್ಲಿ ಸುಮ್ಮನಿದ್ದ ರಾಜಕೀಯ ಪಕ್ಷಗಳು ನಿಧಾನಕ್ಕೆ ಪ್ರಕರಣದ ಸುತ್ತ ರಾಜಕೀಯ ಮಾಡಲು ಶುರು ಮಾಡಿದ್ದು ದೃರಾದೃಷ್ಟಕರ.

ಧಾರ್ಮಿಕ ಕ್ಷೇತ್ರದ ಹೆಸರನ್ನು ಹಾಳು ಮಾಡುವುದಕ್ಕಾಗಿಯೇ ಈ ಪ್ರಕರಣವನ್ನು ಹುಟ್ಟು ಹಾಕಲಾಗಿದೆ, ಇದರ ಹಿಂದೆ ಕಮ್ಯುನಿಸ್ಟರು, ಇಸ್ಲಾಂ ಮೂಲಭೂತವಾದಿಗಳು ಇದ್ದಾರೆಂಬ ಪಿತೂರಿ ಕಥನವನ್ನು ಕಟ್ಟುವ ಪ್ರಯತ್ನಗಳು ಬಿಜೆಪಿಯಿಂದ ಶುರುವಾದವು. ಧರ್ಮಸ್ಥಳದ ಪ್ರಭಾವಿಗಳ ವಿರುದ್ಧ ಆರೋಪಗಳು ಬಂದ ತಕ್ಷಣ, ಇಡೀ ದೇವರಿಗೆ ಅಪಮಾನ ಮಾಡಲಾಗುತ್ತಿದೆ ಎಂದು ಬಿಂಬಿಸಲಾಗುತ್ತಿದೆ. ಬಿಜೆಪಿ ನಾಯಕರು ಧರ್ಮಸ್ಥಳದತ್ತ ಯಾತ್ರೆ ಕೈಗೊಂಡಿದ್ದಾರೆ. ಇತ್ತ ಜೆಡಿಎಸ್ ನಾಯಕರು ತಾವೇನೂ ಕಮ್ಮಿ ಇಲ್ಲವೆಂಬಂತೆ ‘ಧಾರ್ಮಿಕ ರಾಜಕಾರಣ’ದ ದಾಳ ಉದುರಿಸಲು ಶುರು ಮಾಡಿದ್ದಾರೆ. ಇಂಥವರ ನಿಜಕ್ಕೂ ನಿಷ್ಪಕ್ಷಪಾತ ತನಿಖೆಯನ್ನು ಬಯಸುತ್ತಿದ್ದಾರಾ? ಪ್ರಕರಣದ ಆಳ-ಅಗಲವನ್ನು ಒಮ್ಮೆಯಾದರೂ ಯೋಚಿಸಿದ್ದಾರಾ? ಒಂದು ವೇಳೆ ಸತ್ಯ ಗೊತ್ತಿದ್ದರೂ ಧರ್ಮದ ಸೋಗುಹಾಕಿ ಯಾರನ್ನು ರಕ್ಷಿಸುವ ಹೊರಟಿದ್ದಾರೆ? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ಪ್ರತಿಪಕ್ಷಗಳ ಈ ಸೋಗಲಾಡಿತನವನ್ನು ಬಯಲಿಗೆಳೆಯಲೇಬೇಕು.

ದೂರುದಾರ ಗುರುತಿಸಿದ 13 ಜಾಗಗಳ ಪೈಕಿ ಎರಡಲ್ಲಿ ಮನುಷ್ಯನ ಕಳೇಬರಗಳು ಸಿಕ್ಕವು. 13ನೇ ಸ್ಪಾಟ್‌ನಲ್ಲಿ ಹೆಚ್ಚಿನ ಅಸ್ಥಿಗಳು ಸಿಗುತ್ತವೆ ಎಂಬ ನಿರೀಕ್ಷೆ ಇತ್ತು. ಆದರೆ ಒಂದು ಮೂಳೆಯೂ ಸಿಗಲಿಲ್ಲವೆಂಬ ಸುದ್ದಿ ಹಬ್ಬಿದ ಬಳಿಕ ಮಾಧ್ಯಮಗಳು ವಿರೋಧ ಪಕ್ಷಗಳ ಕೂಗಾಟಕ್ಕೆ ಹೆಚ್ಚು ಒತ್ತು ನೀಡುತ್ತಾ ಹೋದವು. ವಿ‍ಧಾನಮಂಡಲ ಅಧಿವೇಶನವು ಧರ್ಮಸ್ಥಳದ ಗದ್ದಲದಲ್ಲೇ ಕಳೆದು ಹೋಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಸ್‌ಐಟಿ ತನಿಖೆಯೆಂದರೆ ಕೇವಲ ಮೂಳೆ ಹುಡುಕುವುದು ಎಂಬುದಷ್ಟೇ ಎನ್ನುವಂತೆ ಪ್ರಚಾರ ನಡೆಯುತ್ತಿದೆ. ಗಮನಿಸಬೇಕಾದ ಸಂಗತಿ ಎಂದರೆ- ದಕ್ಷಿಣ ಕನ್ನಡದ ‘ಲ್ಯಾಟರೈಟ್’ (ಜಂಬಿಟ್ಟಿಗೆ ಮಣ್ಣು) ಬಹುಬೇಗನೇ ಮೂಳೆಗಳನ್ನು ಕರಗಿಸುವ ಗುಣವನ್ನು ಹೊಂದಿದೆ. ಹೀಗಾಗಿ ಚಿನ್ನಯ್ಯ ತೋರಿಸಿರುವ ಹಲವೆಡೆ ಯಾವುದೇ ಮೂಳೆಗಳು ಸಿಗದ ಮಾತ್ರಕ್ಕೆ, ಇಡೀ ಪ್ರಕರಣವೇ ಮುಗಿದು ಹೋಯಿತು ಎಂದಲ್ಲ. ಮಣ್ಣಿನ ಮಾದರಿಯನ್ನು ಪರೀಕ್ಷಿಸಿ, ಅದರೊಳಗೆ ಬೆರೆತಿರಬಹುದಾದ ಡಿಎನ್‌ಎ ಟೆಸ್ಟ್ ಮಾಡಲಾಗುತ್ತದೆ. ಎಸ್‌ಐಟಿಯು ಈ ನಿಟ್ಟಿನಲ್ಲಿ ಮುಂದುವರಿದಿದ್ದರೆ ಅದು ನಿಜವಾದ ತನಿಖೆಯಾಗುತ್ತದೆ. ಮೊದಲೇ ತಿಳಿಸಿದಂತೆ ಈಗ ನಡೆಯುತ್ತಿರುವ ಎಸ್‌ಐಟಿ ತನಿಖೆಯು ಕೇವಲ ಚಿನ್ನಯ್ಯನ ದೂರಿಗೆ ಸೀಮಿತವಾಗುವುದಿಲ್ಲ. ಸರ್ಕಾರಿ ಆದೇಶದ ಪ್ರಕಾರ, ಈ ಹಿಂದೆ ಧರ್ಮಸ್ಥಳದಲ್ಲಿ ವರದಿಯಾಗಿರುವ ಎಲ್ಲ ಅಪರಿಚಿತ ಶವಗಳಿಗೆ ಈ ಕೇಸ್ ಸಂಬಂಧಿಸಿದೆ. ಹೀಗಾಗಿ ಕಳೆದ 20 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ದಾಖಲಾಗಿರುವ ಅಪರಿಚಿತ ಶವಗಳ ಪ್ರಕರಣಗಳು ಮತ್ತೆ ಮುನ್ನೆಲೆಗೆ ಬಂದಿವೆ. ಧರ್ಮವನ್ನು ರಕ್ಷಿಸುತ್ತೇವೆ, ಧರ್ಮಸ್ಥಳ ಚಲೋ ಮಾಡುತ್ತೇವೆ ಎನ್ನುತ್ತಿರುವವರು ಗಂಭೀರ ಸ್ವರೂಪದ ದಾಖಲೆಗಳನ್ನು ಗಮನಿಸಬೇಕಾಗುತ್ತದೆ. ಯಾರದೋ ಹಿತಕಾಯಲು ಧರ್ಮವನ್ನು ಎಳೆದು ತಂದರೆ, ಈಗ ಎದ್ದಿರುವ ಪ್ರಶ್ನೆಗಳು ಮಣ್ಣಾಗುವುದಿಲ್ಲ ಎಂಬುದನ್ನು ಪ್ರತಿಪಕ್ಷಗಳು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಸಾಮಾಜಿಕ ಕಾರ್ಯಕರ್ತ ಟಿ. ಜಯಂತ್ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಸಂಬಂಧಿಸಿದಂತೆ ಧರ್ಮಸ್ಥಳ ಗ್ರಾಮ ಪಂಚಾಯಿತಿಯು ಕೊಟ್ಟಿರುವ ದಾಖಲೆಗಳು ಗಾಬರಿ ಮತ್ತು ಹಲವು ಅನುಮಾನಗಳನ್ನು ಹುಟ್ಟುಹಾಕಿವೆ. ‘1994ರಿಂದ 2014ರ ಅವಧಿಯಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯಿಂದ ಧರ್ಮಸ್ಥಳ ಗ್ರಾಮ ಪಂಚಾಯಿತಿಗೆ ತಂದು, ದಫನ್ ಮಾಡಲ್ಪಟ್ಟ ಅನಾಥ ಶವಗಳ ಯುಡಿಆರ್ ಮತ್ತು ಎಫ್‌ಐಆರ್ ನಂಬರ್‌ಗಳ ವಿವರ, ಪೊಲೀಸ್ ಮಹಜರಿನ ದಾಖಲೆ ಕೊಡಬೇಕು’ ಎಂದು ಜಯಂತ್ ಕೋರಿದ್ದರು. ಕೊನೆಗೂ ಮಾಹಿತಿ ಬಿಡುಗಡೆ ಮಾಡಿರುವ ಗ್ರಾಮ ಪಂಚಾಯಿತಿ, ಹತ್ತಾರು ಪುಟಗಳ ದಾಖಲೆಯನ್ನು ಒದಗಿಸಿದೆ. ಅವುಗಳನ್ನು ಕೂಲಂಕಶವಾಗಿ ಅಧ್ಯಯನ ಮಾಡಿದರೆ, ಅನುಮಾನಾಸ್ಪದ ಸಂಗತಿಗಳು ಬೆಳಕಿಗೆ ಬರುತ್ತವೆ.

ಇದನ್ನೂ ಓದಿರಿ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿ ಜೆ, ದ್ವೇಷಭಾಷಣ ಎಷ್ಟು ಸರಿ?

ಈ ಸಂಬಂಧ ‘ಡಿಟಾಕ್ಸ್’ ಯೂಟ್ಯೂಬ್ ಚಾನೆಲ್‌ನ ಹಿರಿಯ ಪತ್ರಕರ್ತ ಎಸ್‌.ಸಿ. ದಿನೇಶ್ ಕುಮಾರ್ ಅವರು ಮಾಡಿರುವ ವಿಡಿಯೊ ಅನೇಕ ವಿಚಾರಗಳತ್ತ ಬೆಳಕು ಚೆಲ್ಲಿದೆ. ದಿನೇಶ್ ಅವರು ಅಸಲಿ ದಾಖಲೆಗಳ ಪೋಸ್ಟ್ ಮಾರ್ಟಮ್ ಮಾಡಿ, ಓದುಗರ ಮುಂದಿಟ್ಟಿರುವ ವಿಚಾರಗಳು ಹೆಚ್ಚು ಚರ್ಚೆ ಆಗಬೇಕಾಗಿದೆ. ಪ್ರತಿಪಕ್ಷಗಳು ಇವುಗಳನ್ನು ಗಮನಿಸಬೇಕಾಗುತ್ತದೆ. ಧರ್ಮಸ್ಥಳಕ್ಕೆ ಅಪಚಾರ ತಂದಿರುವುದು ಯಾರು? ಈ ಅನುಮಾನಗಳಿಗೆ ಉತ್ತರ ನಿರೀಕ್ಷಿಸುವುದೇ ಅಪರಾಧವೇ?

ಧರ್ಮಸ್ಥಳದ ವಸತಿ ಗೃಹಗಳಾದ ಶರಾವತಿ, ಗಂಗೋತ್ರಿ, ಸಾಕೇತ್‌ ಇತ್ಯಾದಿ ಕಡೆ, ನೇತ್ರಾವತಿ ನದಿ, ನೇತ್ರಾವತಿ ಸ್ನಾನಘಟ್ಟ, ನೇತ್ರಾವತಿ ಮಣ್ಣಸಂಕ, ಗೊಮ್ಮಟೇಶ್ವರ ಬೆಟ್ಟದ ಮೆಟ್ಟಿಲಿನ ಬದಿ, ನೇತ್ರಾವತಿ ನದಿಯ ಸೇತುವೆಯ ಬದಿ, ಧರ್ಮಸ್ಥಳದ ಕಾಂಪ್ಲೆಕ್ಸ್ ಬಳಿ, ಕೆಎಸ್‌ಆರ್‌ಟಿಸಿ ಹಳೇ ತಂಗುದಾಣದ ಸಮೀಪ, ನೇತ್ರಾವತಿ ಅಣೆಕಟ್ಟೆಯ ಮೇಲೆ, ನೇತ್ರಾವತಿ ಕಿಂಡಿ ಅಣೆಕಟ್ಟೆಯ ಮೇಲ್ಭಾಗ, ಕನ್ಯಾಡಿ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಧರ್ಮಸ್ಥಳದ ಮುಖ್ಯದ್ವಾರ, ಯತ್ರಾರ್ಥಿಗಳು ನಿಲ್ಲುವ ಹೊಳೆಬದಿ, ಧರ್ಮಸ್ಥಳದ ಬೋಳಿಯಾರು ಸೇತುವೆ ಬಳಿ, ಆವಕ್ಕಿಯಲ್ಲಿ, ಬಾಹುಬಲಿ ಬೆಟ್ಟಕ್ಕೆ ಹೋಗುವ ಮಾರ್ಗದ ಬದಿಯಲ್ಲಿ, ಮಾಹಿತಿ ಕಚೇರಿಯ ಜಗುಲಿಯಲ್ಲಿ,  ಶಾಂತಿವನ ಪ್ರಕೃತಿ ಚಿಕಿತ್ಸಾಯದ ಸಮೀಪ, ಮಾಹಿತಿ ಕಚೇರಿಯ ಶೌಚಾಲಯ- ಹೀಗೆ ಹಲವೆಡೆ ಶವಗಳು ಸಿಕ್ಕಿರುವುದನ್ನು ದಾಖಲೆಗಳು ಸ್ಪಷ್ಟಪಡಿಸುತ್ತವೆ.

ಧರ್ಮಸ್ಥಳದ ಯುಡಿಆರ್ ಪ್ರಕರಣಗಳ ವಿಲೇವಾರಿಯಲ್ಲಿ ಒಂದು ಪ್ಯಾಟರ್ನ್‌ ಇರುವುದನ್ನು ಗಮನಿಸಬೇಕಾಗುತ್ತದೆ. ಧರ್ಮಸ್ಥಳದಲ್ಲಿ ಹೊರ ಠಾಣೆ ಇತ್ತು. ಅಲ್ಲಿ ಒಬ್ಬ ಎಎಸ್‌ಐ ದರ್ಜೆಯ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದ. ಅಪರಿಚಿತ ಮೃತದೇಹ ಸಿಕ್ಕಾಗ, ಆ ಠಾಣಾಧಿಕಾರಿ ಗ್ರಾಮ ಪಂಚಾಯಿತಿಗೆ ಪತ್ರ ಬರೆಯುತ್ತಿದ್ದ. ಗ್ರಾಪಂನವರು ಶವಸಂಸ್ಕಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ಒಂದು ‘ವೋಚರ್’ ನಮೂದಿಸಿಕೊಳ್ಳುತ್ತಿದ್ದರು. ಇನ್ನುಳಿದಂತೆ ಯಾವುದೇ ಸೂಕ್ತ ವಿಶೇಷ ದಾಖಲೆಯನ್ನು ಗ್ರಾಪಂನವರು ಇಟ್ಟುಕೊಂಡಂತೆ ಕಾಣುವುದಿಲ್ಲ. ಹೆಣ ಹೂತುಹಾಕಿದ ವ್ಯಕ್ತಿಯ ಹೆಸರು ಮತ್ತು ಸಹಿ ಇರುವುದನ್ನು ಆ ವೋಚರ್‌ಗಳಲ್ಲಿ ಕಾಣಬಹುದು. ಇದರ ಜೊತೆಗೆ ಗ್ರಾಮ ಪಂಚಾಯಿತಿ ಖರ್ಚು ಮಾಡಿರುವ ಹಣದ ವಿವರಗಳ ಲೆಡ್ಜರ್ ನಮಗೆ ಲಭ್ಯವಾಗುತ್ತದೆ. ಪ್ರತಿ ಲೆಕ್ಕಪತ್ರದಲ್ಲೂ ‘ಬಿಲ್ಲು ನಂಬ್ರ’ ಎಂದು ಬರೆಯಲಾಗಿದೆ.

ಸುಮಾರು ಇಪ್ಪತ್ತು ವರ್ಷದ ದಾಖಲೆಗಳನ್ನು ನೋಡಿದರೆ, ಎಲ್ಲ ಬಿಲ್‌ಗಳನ್ನು ಒಬ್ಬನೇ ವ್ಯಕ್ತಿ ಬರೆದಿರುವಂತೆ ಕಾಣಿಸುವುದು ಅನುಮಾನಾಸ್ಪದ ಸಂಗತಿ. ‘ಬಿಲ್ಲು ನಂಬ್ರ’ ಎಂಬುದನ್ನು ಗಮನಿಸಿದರೆ ಎಲ್ಲ ಲೆಕ್ಕಪತ್ರದಲ್ಲೂ ಒಬ್ಬನೇ ವ್ಯಕ್ತಿಯ ಕೈಬರಹ ತಾಳೆಯಾಗುತ್ತದೆ. ಬಹುಶಃ ಹಲವು ವರ್ಷ ಒಬ್ಬನೇ ವ್ಯಕ್ತಿ ಗ್ರಾಮ ಪಂಚಾಯಿತಿಯಲ್ಲಿ ಈ ಕೆಲಸಗಳನ್ನು ನಿರ್ವಹಿಸುತ್ತಿದ್ದ ಎಂದು ಭಾವಿಸಬಹುದಾದರೂ, ಅದಕ್ಕಿಂತ ಗುಮಾನಿ ಹುಟ್ಟಿಸುವ ಇತರ ಮುಖ್ಯವಿಚಾರಗಳು ಗೊತ್ತಾಗುತ್ತವೆ.

billu numbera

ಹೆಣ ಹೂತು ಹಾಕಿರುವ ವ್ಯಕ್ತಿಯ ಹೆಸರು ಮತ್ತು ಸಹಿಯನ್ನು ಈ ವೋಚರ್‌ಗಳಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ; ವೋಚರ್ ತುಂಬಿದ ವ್ಯಕ್ತಿಯೇ ಹೆಣ ಹೂತ ವ್ಯಕ್ತಿಯ ಸಹಿ ಹಾಕಿರುವಂತೆ ಕಂಡು ಬರುತ್ತದೆ. ಉದಾಹರಣೆಗೆ ಶವ ಹೂತುಹಾಕಿರುವ ವ್ಯಕ್ತಿಯ ಹೆಸರು ‘ಕಾಂಜಾ’ ಎಂದಿದ್ದರೆ, ಸಹಿ ಮಾಡಿರುವಲ್ಲಿ ಇರುವ ಕೈಬರಹವೂ ‘ಕಾಂಜಾ’ ಎಂದಿದೆ. ಆದರೆ ಮೂಲಿನ ಅಕ್ಷರಗಳಿಗೂ ಕೆಳಗಿನ ಸಹಿಗೂ ಸಾಮ್ಯತೆ ಕಾಣುತ್ತದೆ. ಹರೀಶ ಎಂಬ ಹೆಸರಿಗೆ ನೀಡಿರುವ ವೋಚರ್‌ನಲ್ಲಿನ ಸಹಿಯಲ್ಲಿಯೂ ಇಂತಹದ್ದೇ ಗುಮಾನಿ ಉಂಟಾಗುತ್ತದೆ. ಕೈಬರಹ ತಜ್ಞರು ಈ ವೋಚರ್‌ಗಳನ್ನು ಪರಿಶೀಲಿಸಿದ್ದಲ್ಲಿ ಮತ್ತಷ್ಟು ಸತ್ಯ ಹೊರಬೀಳಬಹುದು.

ಶವ ಹೂತವನೇ ವೋಚರ್ ಬರೆದು, ಆತನೇ ಸಹಿಹಾಕಿದ್ದಾನೆಂದು ಭಾವಿಸಬಹುದಾದರೂ ವೋಚರ್‌ನ ಸಹಿಗಳಲ್ಲಿ ಒಂದೇ ಕೈಬರಹದ ಮಾದರಿ ಕಂಡು ಬರುವುದು ಕಾಕತಾಳೀಯ. ಶವ ಹೂಳುತ್ತಿದ್ದ ಬಹುತೇಕರು ಪೌರಕಾರ್ಮಿಕರೆಂದು ಹೇಳಲಾಗುತ್ತದೆ. ಇವರಲ್ಲಿ ಎಷ್ಟು ಜನ ಸಹಿ ಹಾಕಬಲ್ಲವರಾಗಿದ್ದರು, ಅಕ್ಷರ ಅರಿತ್ತಿದ್ದರು ಅಥವಾ ಹೆಬ್ಬೆಟ್ಟು ಒತ್ತುತ್ತಿದ್ದರು ಎಂಬುದನ್ನು ತನಿಖೆ ಮಾಡಬೇಕಾಗುತ್ತದೆ.

kanja
jubu

ಚಿನ್ನಯ್ಯ ಈಗಾಗಲೇ ನೀಡಿರುವ ಸಂದರ್ಶನಗಳಲ್ಲಿ ‘ಶವ ಹೂಳುವ ಸಂಬಂಧ ನನಗೆ ಧರ್ಮಸ್ಥಳ ಮಾಹಿತಿ ಕೇಂದ್ರದಿಂದ ಸಂದೇಶ ಬರುತ್ತಿತ್ತು’ ಎಂದು ಹೇಳಿಕೊಂಡಿದ್ದಾನೆ. ಆತ ಎಲ್ಲಿಯೂ ಗ್ರಾಮ ಪಂಚಾಯಿತಿಯವರಿಂದ ಶವದ ಮಾಹಿತಿ ಬರುತ್ತಿತ್ತು ಎಂದಿಲ್ಲ. ಇನ್ನೊಬ್ಬ ವ್ಯಕ್ತಿ ಸುವರ್ಣ ಟಿವಿಯಲ್ಲಿ ನೀಡಿರುವ ಸಂದರ್ಶನದಲ್ಲಿ, “ಚಿನ್ನಯ್ಯನೊಂದಿಗೆ ನಾನು ಕೂಡ ಶವ ಹೂತು ಹಾಕಿದ್ದೇನೆ. ನಮಗೆ ಮಾಹಿತಿ ಕಚೇರಿಯಿಂದ ಸಂದೇಶ ಬರುತ್ತಿತ್ತು. ಚಿನ್ನಯ್ಯ ಶವದ ಮೇಲಿನ ಆಭರಣ ಕದಿಯುತ್ತಿದ್ದ” ಎಂದಿದ್ದಾನೆ. ಚಿನ್ನಯ್ಯನ ಮೇಲೆ ಇನ್ನೊಬ್ಬ ವ್ಯಕ್ತಿ ಕಳ್ಳತನದ ಆರೋಪ ಹೊರಿಸುತ್ತಿದ್ದಾನೆಂದು ಭಾವಿಸಬಹುದಾದರೂ, ಶವ ವಿಲೇವಾರಿಯ ಕರೆ ಧರ್ಮಸ್ಥಳ ದೇವಸ್ಥಾನದ ಮಾಹಿತಿ ಕೇಂದ್ರದಿಂದ ಬರುತ್ತಿತ್ತು ಎಂಬುದಂತೂ ಸ್ಪಷ್ಟ. ಮೃತದೇಹಗಳನ್ನು ದಫನ್ ಮಾಡಿದವರ ಪಟ್ಟಿಯಲ್ಲಿ ಎಲ್ಲಿಯೂ ‘ಚಿನ್ನಯ್ಯ’ನ ಹೆಸರಿರುವ ದಾಖಲೆ ಇಲ್ಲ. ಆದರೆ ಚಿನ್ನಯ್ಯ ಹೆಣಗಳನ್ನು ಹೂಳುತ್ತಿದ್ದ ಎಂಬುದನ್ನು ಸ್ಥಳೀಯರೆಲ್ಲರೂ ಒಪ್ಪುತ್ತಾರೆ. ಹಾಗಾದರೆ ಗ್ರಾಮ ಪಂಚಾಯಿತಿ ಹೂತಿರುವ ಶವಗಳು ಯಾವುವು? ಚಿನ್ನಯ್ಯ ಹೂತಿರುವ ಶವಗಳು ಯಾವುವು? ಕಾನೂನು ಪ್ರಕಾರವೇ ಎಲ್ಲವೂ ನಡೆದಿದ್ದರೆ ಶವ ಹೂತು ಹಾಕಿದ ಸ್ಥಳಗಳ ಮಾಹಿತಿ ಗ್ರಾಪಂ ಬಳಿ ಇದೆಯೇ? ಶವಗಳ ಚಹರೆಗಳನ್ನು ದಾಖಲಿಸಿಕೊಂಡಿದ್ದಾರೆಯೇ? ಹಣ ಖರ್ಚು ಮಾಡಿದ ವಿವರ ಹಾಗೂ ಶವಸಂಸ್ಕಾರ ಮಾಡಿದವರಿಗೆ ನೀಡಿದ ವೋಚರ್ ಮಾತ್ರ ಇರುವುದಾದರೆ ಏನಾದರೂ ಫೋರ್ಜರಿ ಕೆಲಸವನ್ನು ಗ್ರಾಮ ಪಂಚಾಯಿತಿ ಮಾಡಿದೆಯೇ?- ಈ ಪ್ರಶ್ನೆಗಳಿಗೆ ‘ಧರ್ಮಸ್ಥಳ ಚಲೋ’ ಹಮ್ಮಿಕೊಂಡಿರುವವರ ಉತ್ತರವೇನು?

ಇದನ್ನೂ ಓದಿರಿ: ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

“ಚಿನ್ನಯ್ಯ ತೋರಿಸಿರುವ ಜಾಗಗಳಲ್ಲೇ ನಾವು ಹೆಣಗಳನ್ನು ಹೂತು ಹಾಕಿಸಿದ್ದೇವೆ” ಎಂದಿದ್ದರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್. ಆದರೆ ಇಷ್ಟು ದಾಖಲೆಗಳಲ್ಲಿ ಎಲ್ಲಿಯೂ ಚಿನ್ನಯ್ಯನ ಹೆಸರೇ ಇಲ್ಲ. ಆತ ಹೂತು ಹಾಕಿರುವುದು ನಿಜವಾದರೆ, ಗ್ರಾಮ ಪಂಚಾಯಿತಿ ಸಮ್ಮುಖದಲ್ಲಿ ಚಿನ್ನಯ್ಯ ದಫನ್ ಮಾಡಿದ್ದು ಎಲ್ಲಿ?

ಅನುಮಾನ ಹುಟ್ಟುಹಾಕುವ ಅಂತ್ಯಕ್ರಿಯೆ

ಗ್ರಾಮ ಪಂಚಾಯಿತಿಯು ಆರ್‌ಟಿಐ ಅರ್ಜಿಗೆ ನೀಡಿರುವ ಅಪರಿಚಿತ ಶವಗಳ ಕೆಲವು ವಿವರಗಳನ್ನು ನೋಡೋಣ. 2010ರ ನವೆಂಬರ್‌ 23ರಂದು ನೇತ್ರಾವತಿ ಸ್ನಾನಘಟ್ಟದ ಬಳಿ ಅನಾಥ ಶವ ಸಿಗುತ್ತದೆ. ಮಾರನೇ ದಿನ (ಅಂದರೆ 24ನೇ ತಾರೀಕು) ಮಹಾದ್ವಾರದ ಬಳಿ ಒಂದು ಅನಾಥ ಶವ ಪತ್ತೆಯಾಗುತ್ತದೆ. ಮರುದಿನ (ಅಂದರೆ 25ನೇ ತಾರೀಕು) ಕಲ್ಲೇರಿ ಬಳಿ ಮತ್ತೊಂದು ಅನಾಥ ಶವ ದೊರಕುತ್ತದೆ! ದಿನಕ್ಕೊಂದು ಹೆಣ ಸಿಗುವುದು ಆತಂಕಕಾರಿಯಲ್ಲವೇ?

ಠಾಣಾಧಿಕಾರಿಯ ಒಂದು ಪತ್ರದ ಸಾರಾಂಶವನ್ನೇ ನೋಡಿ. 21- 05- 2011ರಂದು ನೇತ್ರಾವತಿ ನದಿಯಲ್ಲಿ ಅಪರಿಚಿತ ಹೆಂಗಸಿನ ಮೃತದೇಹ ಸಿಗುತ್ತದೆ. ಬೆಳ್ತಂಗಡಿ ಠಾಣೆಯಲ್ಲಿ ಯುಡಿಆರ್ ದಾಖಲಾಗುತ್ತದೆ. 25-05-2011ರಲ್ಲಿ ಧರ್ಮಸ್ಥಳ ಮುಖ್ಯದ್ವಾರದ ಬಳಿ ಮತ್ತೊಬ್ಬ ಅಪರಿಚಿತ ಹೆಂಗಸು ಮೃತಪಟ್ಟಿರುವುದು ಕಂಡುಬರುತ್ತದೆ. ಹಾಗೆಯೇ 27-05-2011ರಂದು ನೇತ್ರಾವತಿ ಕಾಡಿನ ಬಳಿ ಅಪರಿಚಿತ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗುತ್ತದೆ. ಎಲ್ಲವೂ ಬೆಳ್ತಂಗಡಿ ನಗರಸಭೆಯಿಂದ ಯುಡಿಆರ್ ಆಗುತ್ತದೆ. ಆದರೆ ಎಲ್ಲ ಕೇಸ್‌ನಲ್ಲೂ ಧರ್ಮಸ್ಥಳ ಗ್ರಾಮ ಪಂಚಾಯಿತಿಯವರೇ ಪೇಮೆಂಟ್ ಮಾಡುತ್ತಾರೆ!

2-09-2009ರಲ್ಲಿ ಮತ್ತೊಂದು ಘಟನೆ ವರದಿಯಾಗಿದೆ. ನೇತ್ರಾವತಿಯ ಕಿಂಡಿ ಅಣೆಕಟ್ಟೆಯಲ್ಲಿ 35-40 ವರ್ಷ ವಯಸ್ಸಿನ ಗಂಡಸಿನ ಅಪರಿಚಿತ ಶವ ಮತ್ತು 10-12 ವರ್ಷದ ಹುಡುಗಿಯ ಅಪರಿಚಿತ ಮೃತದೇಹ ಸಿಗುತ್ತದೆ. ಅದೇ ದಿನ ಬೆಳ್ತಂಗಡಿ ನಗರಸಭೆ ದಫನ್ ಮಾಡುತ್ತದೆ. ಎರಡು ಶವಗಳು ಒಟ್ಟಿಗೆ ಸಿಗುವುದರಿಂದ ತಂದೆ- ಮಗಳು ಸಾವಿಗೀಡಾಗಿರಬಹುದು ಎಂದು ಊಹಿಸಬಹುದು. ಹೀಗಿರುವಾಗ ಆ ಮಗುವಿಗೆ ತಾಯಿ ಇರುವ ಸಾಧ್ಯತೆ ಇರುತ್ತದೆ. ಆಕೆಯನ್ನು ಹುಡುಕಿ ಶವಗಳನ್ನು ವರ್ಗಾಯಿಸುವ ಕೆಲಸ ಮಾಡುವುದಿಲ್ಲ. ಗುರುತು ಪತ್ತೆಹಚ್ಚುವ ಮತ್ತು ಶವಗಳನ್ನು ವಾರಸುದಾರರಿಗೆ ಕಾಯ್ದಿರಿಸುವ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಈ ತರಾತುರಿ ಏತಕ್ಕೆ? ಅಪರಿಚಿತ ಶವಗಳನ್ನು ಒಂದು ವಾರವಾದರೂ ಇಟ್ಟುಕೊಳ್ಳಬೇಕಲ್ಲವೇ? ಶವ ಕೊಳೆತ ಸ್ಥಿತಿಯಲ್ಲಿದ್ದರೆ, ಒಂದೆರಡು ದಿನವಾದರೂ ಕಾಯ್ದಿರಿಸಬಹುದಲ್ಲವೇ? ಅದ್ಯಾವುದೂ ಮಾಡುವುದಿಲ್ಲ.

15-06-2009ರಲ್ಲಿ ಅಪರಿಚಿತ 15 ವರ್ಷದ ಬಾಲಕಿಯ ಶವ ಪತ್ತೆಯಾಗುತ್ತದೆ. ಅದರ ವಾರಸುದಾರರನ್ನು ಹುಡುಕುವುದಿಲ್ಲ. 15 ವರ್ಷದ ಮಗು ಎಂದರೆ ಆ ಮಗುವಿನ ಪೋಷಕರು ಇರಲಿಲ್ಲವೇ? ಧರ್ಮಸ್ಥಳಕ್ಕೆ ಬಂದು ಕಾಣೆಯಾಗಿದ್ದರೆ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲವೇ?

29-11-2000ರಂದು 25 ವರ್ಷದ ಯುವತಿಯ ಮೃತದೇಹ ಧರ್ಮಸ್ಥಳ ಗ್ರಾಮದ ಆವಕ್ಕಿ ಎಂಬಲ್ಲಿ ದೊರಕುತ್ತದೆ. ವಾರಸುದಾರರನ್ನು ಹುಡುಕುವುದಿಲ್ಲ. ಒಂದು ದಿನವೂ ಶವ ಇರಿಸದೆ ದಫನ್ ಮಾಡಲಾಗುತ್ತದೆ. 13-10-2014ರಂದು ನೇತ್ರಾವತಿ ನದಿಯ ಸೇತುವೆ ದಡದಲ್ಲಿ ಜಯಮ್ಮ ಎಂಬ ಪರಿಚಿತ ಹೆಂಗಸಿನ ಮೃತ ದೇಹ ಸಿಗುತ್ತದೆ. ಅದನ್ನು ಅನಾಥ ಶವವೆಂದು ವಿಲೇವಾರಿ ಮಾಡಲಾಗುತ್ತದೆ. ಆಕೆಯ ವಿಳಾಸವಿದ್ದರೂ ಸಂಬಂಧಿಕರಿಗೆ ವರ್ಗಾಯಿಸದಿರುವುದು ಕಂಡುಬರುತ್ತದೆ.

jayamma

07-04-2010ರಂದು ಎರಡು ಹೆಣ ಸಿಗುತ್ತವೆ. ಒಬ್ಬ ಪುರುಷ ಧರ್ಮಸ್ಥಳದ ಮಹೋತ್ಸವ ಮೈದಾನದಲ್ಲಿ ಅಸ್ವಸ್ಥನಾಗಿ ಬಿದ್ದಿದ್ದನು. ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆತ ಮೃತಪಡುತ್ತಾನೆ. ಅದೇ ದಿನ ಶರಾವತಿ ವಸತಿ ಗೃಹದಲ್ಲಿ ಅಪರಿಚಿತ ಮಹಿಳೆಯ ಕೊಲೆಯಾದ ಮೃತದೇಹ ಸಿಗುತ್ತದೆ. ನಗರ ಸಭೆಯಿಂದ ದಫನ ಮಾಡುತ್ತಾರೆ. ಒಂದೇ ದಿನದಲ್ಲಿ ಅಂತ್ಯಕ್ರಿಯೆ ಆಗುತ್ತದೆ. ಮಣ್ಣು ಮಾಡುವ ಬದಲು ಸುಟ್ಟು ಹಾಕುತ್ತಾರೆ. ದಫನ್ ಎಂದು ಬರೆದು ಆವರಣ ಚಿಹ್ನೆಯೊಳಗೆ ‘ದಹನ’ ಎಂದು ನಮೂದಿಸಲಾಗುತ್ತದೆ. ಹಾಗಾದರೆ 35-40 ವರ್ಷ ವಯೋಮಾನದ ಈ ಮಹಿಳೆಯನ್ನು ಅಪರಿಚಿತೆ ಎನ್ನಲು ಸಾಧ್ಯವೇ? ಯಾವ ದಾಖಲೆಯ ಆಧಾರದಲ್ಲಿ ವಸತಿ ಗೃಹದಲ್ಲಿ ಆಕೆಗೆ ಕೊಠಡಿ ನೀಡಲಾಗಿತ್ತು? ಕೊಲೆಯಾಗಿದೆ ಎಂದು ಗೊತ್ತಿದ್ದರೂ ದಹನ ಮಾಡಿದ್ದೇಕೆ? ಶವವನ್ನು ಹೂಳದೆ ಸುಟ್ಟು ಹಾಕುವ ಮೂಲಕ ಯಾವ ಸಾಕ್ಷ್ಯಗಳನ್ನು ನಾಶ ಮಾಡಲಾಯಿತು? ಕೊಲೆ ಪ್ರಕರಣವಾಗಿದ್ದರೆ ತನಿಖೆ ಏನಾಯಿತು?

ಈ ಎಲ್ಲ ಪ್ರಶ್ನೆಗಳಿಗೆ ಪ್ರತಿಪಕ್ಷಗಳು ಉತ್ತರಿಸುತ್ತವೆಯೇ? ಸೆಪ್ಟೆಂಬರ್ 1ರಂದು ಧರ್ಮಸ್ಥಳ ಚಲೋ ಹಮ್ಮಿಕೊಂಡಿರುವ ಬಿಜೆಪಿ ಮತ್ತು ಅದರ ತಾಳಕ್ಕೆ ಕುಳಿಯುತ್ತಿರುವ ಜೆಡಿಎಸ್‌ ಪ್ರಕರಣದ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳಬೇಕು. ಧರ್ಮಸ್ಥಳ ಪ್ರಕರಣ ಕೇವಲ ಗುಂಡಿ ಅಗೆಯುವುದಕ್ಕೆ ಸೀಮಿತವಲ್ಲ, ಕೇವಲ ಮೂಳೆ ಸಿಗುವುದಕ್ಕೆ ಸಂಬಂಧಿಸಿದ್ದಲ್ಲ. ಈ ಪ್ರಕರಣದ ಸುತ್ತ ಹಲವು ಪದರಗಳಿವೆ. ಒಂದಕ್ಕೊಂದು ಬೆಸೆದುಕೊಂಡಿವೆ.

(ಮಾಹಿತಿ ಕೃಪೆ: ‘ಡಿಟಾಕ್ಸ್’ ಯೂಟ್ಯೂಬ್ ಚಾನೆಲ್)

yathiraj 3
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...