ʻಅಧಿಕಾರ ಹಂಚಿಕೆʼ ಎಂಬ ʻನಾಟಕ-ಕರ್ನಾಟಕʼಕ್ಕೆ ಡಾ ಯತೀಂದ್ರ ತೆರೆ ಎಳೆದರೇ?

Date:

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅಧಿಕಾರ ಹಂಚಿಕೆ ಪ್ರಸ್ತಾಪವನ್ನು ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿಲ್ಲ ಎಂದು ಘೋಷಿಸುವ ಮೂಲಕ ಮುಖ್ಯಮಂತ್ರಿಗಳ ಸುಪುತ್ರ, ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಕೆಂಡದ ಮೇಲಿನ ಬೂದಿಯನ್ನು ಕೊಡವಿದಂತೆ ಕಾಣಿಸುತ್ತಿದೆ. ಕುರ್ಚಿ ಕಿತ್ತಾಟ ಅಂತ್ಯ ವಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಅತ್ತ ದರಿ ಇತ್ತ ಪುಲಿ ಎನ್ನು ಸ್ಥಿತಿಯಲ್ಲಿದ್ದು, ಇಂದು ಪಕ್ಷದ ರಾಷ್ಟ್ರದ, ರಾಜ್ಯಗಳ ಸ್ಥಿತಿಯಲ್ಲಿ ಹೈಕಮಾಂಡ್‌ ಎಚ್ಚರಿಕೆಯ ಹೆಜ್ಜೆಗಳನ್ನು ಇರಿಸುತ್ತಿದೆ. ಜೊತೆಯಲ್ಲಿ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ

 “ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವ” ಪ್ರವೃತ್ತಿ ಇಲ್ಲದ ರಾಜಕೀಯ ಪಕ್ಷಗಳಿಲ್ಲ. ಆದರೆ, ಬಿಜೆಪಿಗೆ ಹಾಕಿಕೊಂಡ ಕಲ್ಲನ್ನು ಕಾಲಿಗೆ ಪೆಟ್ಟಾಗದಂತೆ ಸರಿಸುವ ಜಾಣತನವಿದೆ. ಇಂದಿನ ದೇಶದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ, ಬಿದ್ದಕಲ್ಲಿನಿಂದ ಕಾಲಿಗೆ ಪೆಟ್ಟು ಮಾಡಿಕೊಳ್ಳುವುದೇ ಅಲ್ಲದೆ, ಪೆಟ್ಟು ಗಾಯವಾಗಿ, ವ್ರಣವಾಗಿ, ಗ್ಯಾಂಗ್ರೀನ್‌ ಗೆ ತಿರುಗಿ, ಕಾಲನ್ನೇ ಕತ್ತರಿಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ತಂದುಕೊಳ್ಳುವುದು ರಾಷ್ಟ್ರೀಯ ಕಾಂಗ್ರೆಸ್‌ ನ ಜಾಯಮಾನವಾಗಿರುವಂತೆ ಕಾಣುತ್ತದೆ.

 ಆಗಿರುವ ಗಾಯವನ್ನು ಪದೇ ಪದೇ ಕೆರೆದುಕೊಳ್ಳುವ ಜಾಯಮಾನ ಕಾಂಗ್ರೆಸ್ ನದು. ಇದು ಕರ್ನಾಟಕ ಕಾಂಗ್ರೆಸ್‌ ಗೆ ಹೆಚ್ಚು ಅನ್ವಯವಾಗುತ್ತದೆ.  ʻಬೂದಿ ಮುಚ್ಚಿದ ಕೆಂಡದಂತಿದ್ದ, ಮುಖ್ಯಮಂತ್ರಿ ಕುರ್ಚಿಯ ಕಿತ್ತಾಟಕ್ಕೆ ವಿಧಾನ ಸಭಾ ಅಧಿವೇಶನ ಮುಗಿಯುವವರೆಗೂ ವಿರಾಮವೆಂದು ಘೋಷಿಸಿಕೊಂಡ ಬೆನ್ನಲ್ಲೇ ಮುಖ್ಯಮಂತ್ರಿಗಳ ಸುಪುತ್ರ ಹಾಗೂ ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಸೋಮವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅಧಿಕಾರ ಹಂಚಿಕೆ ಪ್ರಸ್ತಾಪವನ್ನು ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿಲ್ಲ ಎಂದು ಘೋಷಿಸುವ ಮೂಲಕ ಕೆಂಡದ ಮೇಲಿನ ಬೂದಿಯನ್ನು ಕೊಡವಿದಂತೆ ಕಾಣಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಯತೀಂದ್ರ ಹೀಗೇಕೆ ಹೇಳಿದರು?

ಅವರು ಹೀಗೆ ಹೇಳಿಕೆ ನೀಡಲು ಸ್ವತಃ ಸಿದ್ದರಾಮಯ್ಯ ಕಾರಣರೇ? ಎಂಬ ಪ್ರಶ್ನೆಯೂ ಕಾಡುತ್ತದೆ. ಆದರೆ, ಅಧಿಕಾರ ಹಂಚಿಕೆ ಕುರಿತು ವಿಧಾನ ಸಭಾ ಅಧಿವೇಶನ ಮುಗಿಯುವವರೆಗಾದರೂ, ಎಲ್ಲರೂ ʻಮೌನʼವಾಗಿರಿ ಎಂದು ಕಾಂಗ್ರೆಸ್‌ ಹೈ ಕಮಾಂಡ್‌ ಸೂಚಿಸಿದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಡಗೈ, ಬಲಗೈಯಂತಿರುವ ಶಾಸಕ, ಸಚಿವರನ್ನು ಡಿ.ಕೆ. ಶಿವಕುಮಾರ್‌ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಭೇಟಿ ಮಾಡಿ ತಮ್ಮನ್ನು ಬೆಂಬಲಿಸುವಂತೆ ಕೋರುತ್ತಿರುವುದೇ ಅಲ್ಲದೆ, ಅವರಿಗೆ ತಾವು ಮುಖ್ಯಮಂತ್ರಿಯಾದಲ್ಲಿ ಸಿಗಬಹುದಾದ ಸ್ಥಾನಮಾನಗಳ ಆಸೆ ತೋರಿಸಿರುವುದೂ, ಸಿದ್ದರಾಮಯ್ಯನವರ ಈ ನಡೆಗೆ ಸ್ಫೂರ್ತಿಯಾಗಿರಬಹುದೆಂದು ಅನ್ನಿಸದೇ ಇರುವುದಿಲ್ಲ.

ಇಡ್ಲಿ-ಉಪ್ಪಿಟ್ಟು Breakfast Diplomacy

ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾದರೂ ಏನು? ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ತಮಗೂ ಮುಖ್ಯಮಂತ್ರಿಯಾಗಲು ಅವಕಾಶಕೊಡಿ ಎಂದು ಕೋರಿರುವುದು ನಿಜ. ಆದರೆ ಹೈಮಾಂಡ್‌ ಅದಕ್ಕೆ ಸಮ್ಮತಿ ಸೂಚಿಸಿಲ್ಲ. ಈಗ ನಾಯಕತ್ವದ ಬದಲಾವಣೆಗೆ ಪರಿಸ್ಥಿತಿ ಸೂಕ್ತವಾಗಿಲ್ಲ. ಹಾಗಾಗಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ ಐದು ವರ್ಷದ ಅವಧಿಯನ್ನು ಪೂರೈಸುತ್ತಾರೆ. ನಾಯಕತ್ವದ ಬದಲಾವಣೆ ಎಂಬುದು ಈಗ ಮುಗಿದ ಅಧ್ಯಾಯ. ಮುಂದಿನ ವರ್ಷ ಜನವರಿಯಲ್ಲಿ ಅಧಿಕಾರ ಬದಲಾವಣೆಯಾಗಲಿದೆ ಎಂಬ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ನಾಯಕತ್ವದ ಬದಲಾವಣೆಯ ʻನಾಟಕ-ಕರ್ನಾಟಕʼಕ್ಕೆ ಅಂತಿಮ ತೆರೆ ಎಳೆಯಲು ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ Breakfast Diplomacy ಭೇಟಿಯಲ್ಲಿ ಡಿ.ಕೆ. ಶಿವಕುಮಾರ್‌, ಉಪ್ಪಿಟ್ಟು ಇಡ್ಲಿ ಸೇವಿಸಿದರು, ಡಿ.ಕೆ. ಶಿವಕುಮಾರ್‌ ಮನೆಯಲ್ಲಿ ನಡೆದ  ಅದೇ ಮಾದರಿಯ ಭೇಟಿಯಲ್ಲಿ ಸಿದ್ದರಾಮಯ್ಯ ನಾಟಿಕೋಳಿ ಸಾರು ಮತ್ತು ಇಡ್ಲಿ ಸೇವಿಸಿದರು. ನಂತರ ಇಬ್ಬರೂ ಹಸನ್ಮುಖರಾಗಿ ನಾವಿಬ್ಬರೂ ಜೋಡೆತ್ತು. ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧ ಎಂದು ಸಾರ್ವಜನಿಕವಾಗಿ ಘೋಷಿಸಿದರು. ಅಲ್ಲಿಗೆ ಅಧಿಕಾರ ಹಂಚಿಕೆ ನಾಟಕ ಕರ್ನಾಟಕಕ್ಕೆ ಅಂತಿಮ ತೆರೆ ಬಿದ್ದಿದೆ ಎಂಬ ಅರ್ಥದ ಮಾತುಗಳನ್ನಾಡಿದ್ದಾರೆ.

ಹೈಕಮಾಂಡ್‌ ಎಂಬ ʻತಂತ್ರ-ಮಂತ್ರʼ ದಂಡ

ಸದಸ್ಯರ ಬಲಾ-ಬಲ ಪ್ರದರ್ಶನಕ್ಕೆ ಯತೀಂದ್ರರದ್ದೇ ಆದ ಸಮರ್ಥನೆ ಇದೆ: ಶಾಸಕಾಂಗ ಪಕ್ಷದ ಸಭೆಯಲ್ಲಿ ನಾಯಕರನ್ನು ಇಷ್ಟು ವರ್ಷಕ್ಕೆ ಸೀಮಿತ ಎಂದು ಆಯ್ಕೆ ಮಾಡುವುದಿಲ್ಲ. ಶಾಸಕರು ಐದು ವರ್ಷಆಯ್ಕೆಯಾದ ರೀತಿಯಲ್ಲಿ ಶಾಸಕಾಂಗ ಪಕ್ಷದ ನಾಯಕರು ಐದು ವರ್ಷಕ್ಕೆ ಆಯ್ಕೆಯಾಗುತ್ತಾರೆ. ಇದು ಕಾನೂನು ಬದ್ಧವಾಗಿ, ಮತ್ತು ಸಂವಿಧಾನದ ನಿಯಮಗಳ ಅಡಿಯಲ್ಲಿ ನೋಡಿದರೆ ತಪ್ಪೆಂಬಂತೆ ಕಾಣಿಸುವುದಿಲ್ಲ. ಆದರೆ ಆಗಿನಿಂದಲೂ, ತೆರೆಮರೆಯಲ್ಲಿ ನಡೆದ ಸಂಧಾನ, ಮಾತುಕತೆ ಇತ್ಯಾದಿಗಳ ಬಗ್ಗೆ ಇದ್ದ ಗುಮಾನಿಯನ್ನು ಆಗಲೇ ಶುದ್ಧಗೊಳಿಸಿದ್ದರೆ, ಈಗಿನ ಸಂದರ್ಭ ನಿರ್ಮಾಣವಾಗುತ್ತಿರಲಿಲ್ಲ. ಹಾಗಾಗಿ ಕಳೆದ ಎರಡೂವರೆ ವರ್ಷದಿಂದ ʻಒಳಕುದಿʼ ಈಗ ಇದ್ದೂ ಇಲ್ಲದಂತೆ ಸದ್ದುಮಾಡುತ್ತಿದೆ. ಹಲವು ನಾಯಕರಲ್ಲಿ ಮುಖ್ಯಮಂತ್ರಿ ಪದವಿಯ ಆಸೆಯನ್ನೂ ಹುಟ್ಟು ಹಾಕಿದೆ. ಈ ರೀತಿ ಸ್ಪಷ್ಟತೆ ನೀಡದೇ, ಇದನ್ನು ಮುಂದುವರಿಸಲು ಕಾರಣಕ್ಕೆ ಹೈಕಮಾಂಡ್‌ ಅಲ್ಲದೆ ಯಾರನ್ನು ದೂಷಿಸಬೇಕು?  ಸಾಮಾನ್ಯವಾಗಿ ಹೈಕಮಾಂಡ್‌ ಗೆ ಬಲ ಇರುವುದೇ, ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷದಲ್ಲಿ ಅತಂತ್ರ ಸ್ಥಿತಿಯನ್ನು ಉಂಟು ಮಾಡಿ, ಅವರು ಸದಾ ಹೈಕಮಾಂಡ್‌ ಕೃಪಕಟಾಕ್ಷದಲ್ಲಿ ಇರುವಂತೆ ಮಾಡುವುದು. ಇದು ಬಿಜೆಪಿ ಮತ್ತು ಕಾಂಗ್ರೆಸ್‌ ಗೆ ಸಮನಾಗಿ ಅನ್ವಯಿಸುತ್ತದೆ ಎನ್ನುವುದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ವಿರುದ್ಧ ಎದ್ದಿರುವ ಭಿನ್ನಮತದಿಂದ ಸಾಬೀತಾಗಿದೆ.

ಹೈಕಮಾಂಡ್‌ ದ್ವಂದ್ವ ಸ್ಥಿತಿ

ಯತೀಂದ್ರ ಹೀಗೆ ಹೇಳಿಕೆ ನೀಡಲು ಮತ್ಯಾವ ಕಾರಣವಿದೆ ಎಂದು ಸ್ವಲ್ಪ ಯೋಚಿಸಿದರೆ, ದೃಷ್ಟಿ ಮತ್ತೆ ದೆಹಲಿಯತ್ತ ತಿರುಗುತ್ತದೆ. ದೇಶದ ಅತೀ ಪುರಾತನ ರಾಜಕೀಯ ಪಕ್ಷವಾದ ಕಾಂಗ್ರೆಸ್‌ ದೆಹಲಿಯ ಅಧಿಕಾರ ಕಳೆದುಕೊಂಡು ದಶಕವೇ ಕಳೆದಿದೆ. ಈ ನಡುವೆ ಹಿಮಾಚಲ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕೊನೆಯಕೊಂಡಿಯಂತೆ ಅಧಿಕಾರದಲ್ಲಿದೆ. ಬಿಹಾರದಲ್ಲಿ ಹೀನಾಯ ಹಿನ್ನಡೆ ಅನುಭವಿಸಿ, ಸದ್ಯ ನಡೆಯುತ್ತಿರುವ ಸಂಸತ್‌ ಅಧಿವೇಶನದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಇತರ ʻಸ್ನೇಹಿತʼ ಪಕ್ಷಗಳೊಂದಿಗೆ ಸೇರಿ ಸೆಣಸುತ್ತಿರುವ ಹೊತ್ತಿನಲ್ಲಿ, ಕರ್ನಾಟಕದ ಈ ಅಧಿಕಾರದ ಕಚ್ಚಾಟ ಕಾಂಗ್ರೆಸ್‌ ಹೈ ಕಮಾಂಡ್‌ ಗೆ ನುಂಗಲಾರದ ತುತ್ತಾಗಿದೆ. ನೂರಾ ಮೂವತ್ತಕ್ಕೂ ಹೆಚ್ಚು ಶಾಸಕರ ಬೆಂಬಲವಿರುವ ಕರ್ನಾಟಕ, ಅದಕ್ಕೆ ಗಟ್ಟಿಯಾದ ಆಸರೆ. ಪರಿಸ್ಥಿತಿ ಹೀಗಿರುವಾಗ ಹೈಕಮಾಂಡ್‌ ಯಾವುದೇ ತಪ್ಪು ಹೆಜ್ಜೆ ಇಡದಂತೆ ಎಚ್ಚರವಹಿಸಿದಂತೆ ಕಾಣುತ್ತಿದೆ. ಜೊತೆಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರ ಬಲಾಬಲಗಳನ್ನು ತೂಗಿ ನೋಡುತ್ತಿದೆ.

ಸೋನಿಯಾ ತ್ಯಾಗದ ನೆನಪು

ಕರ್ನಾಟಕ ಕಾಂಗ್ರೆಸ್‌ ನ ಮೂಲಗಳ ಪ್ರಕಾರ ಕರ್ನಾಟಕದ ಇಂದಿನ ಅಧಿಕಾರ ಕಿತ್ತಾಟ ಕುರಿತು ದೆಹಲಿಯಲ್ಲಿ ಶನಿವಾರ ತಡರಾತ್ರಿಯ ವರೆಗೂ ಸಭೆ ನಡೆದಿದೆ. ಈ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಧಿನಾಯಕಿ ಸೋನಿಯಾ ಗಾಂಧಿ, ನಿಜ ಅರ್ಥದ ಅಧಿನಾಯಕ ರಾಹುಲ್‌ ಗಾಂಧಿ, ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಹಾಜರಿದ್ದರು.  ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಂಡರೂ, ಅದು ಡಿಸೆಂಬರ್‌ 19 ನಂತರ. ಸದ್ಯ ಈಗ ನಡೆಯುತ್ತಿರುವ ವಿಧಾನ ಸಭಾ ಅಧಿವೇಶನ ಮತ್ತು ಸಂಸತ್‌ ಅಧಿವೇಶನ ಮುಗಿಯುವ ತನಕ ಒಂದು ರೀತಿಯಲ್ಲಿ ಕದನ ವಿರಾಮ ಘೋಷಿಸಬೇಕು. ಪಕ್ಷದ ಶಾಸಕರು ಯಾವುದೇ ರೀತಿಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು. ಇದು ನಾಯಕರಿಗೂ ಮತ್ತು ಸಚಿವರಿಗೂ ಅನ್ವಯಿಸುತ್ತದೆ. ಮಾಧ್ಯಮದಿಂದ ಈ ವಿಚಾರದಲ್ಲಿ ಅಂತರ ಕಾಯ್ದುಕೊಳ್ಳಬೇಕು.  ಸದ್ಯದಲ್ಲಿಯೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಇರುವುದರಿಂದ ಪಕ್ಷದ ವರ್ಚಸ್ಸಿಗೆ ಯಾವುದೇ ರೀತಿಯ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಅಲ್ಲದೆ ರಾಹುಲ್‌ ಗಾಂಧಿ ಅವರು ಡಿಸೆಂಬರ್‌ 25 ರಿಂದ ಜನವರಿ 4 ರವರೆಗೆ ವಿದೇಶ ಪ್ರವಾಸದಲ್ಲಿರುತ್ತಾರೆ. ಇದೆಲ್ಲ ಕಳೆದ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಹೈಕಮಾಂಡ್‌ ನಾಯಕರು ಮಾತುಕತೆ ನಡೆಸಲಿದ್ದಾರೆ. ಈ ನಡುವೆ ಕೇರಳದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಪಕ್ಷಕ್ಕೆ ಮುಖ್ಯವಾಗಿದೆ. ಅಲ್ಲಿ ಜನರ ತೀರ್ಪ ಯಾವ ರೀತಿಯದಾಗಿರುತ್ತದೆ ಎಂಬುದನ್ನು ಹೈಕಮಾಂಡ್‌ ಕಾದು ನೋಡುತ್ತಿದೆ. ಇವೆಲ್ಲವೂ, ಮುಗಿಯಲು ಜನವರಿ ಅಂತ್ಯವೇ ಆಗುತ್ತದೆ. ಅಲ್ಲಿಯವರೆಗೆ ಎಲ್ಲರೂ ಸುಮ್ಮನಿರಿ ಎಂದು ಸೂಚಿಸಿದೆ ಎನ್ನುವುದು ಕಾಂಗ್ರೆಸ್‌ ಮೂಲಗಳು ಹೇಳುತ್ತಿರುವುದರಲ್ಲಿ ಹುರುಳಿದೆ ಅನ್ನಿಸುತ್ತಿದೆ. ಏಕೆಂದರೆ ಹೈಕಮಾಂಡ್‌ ಕಾಂಗ್ರೆಸ್‌ ಬಹುಮತಗಳಿಸಿದ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಮನಮೋಹನ್‌ ಸಿಂಗ್‌ ಅವರಿಗಾಗಿ ಮಾಡಿದ ತ್ಯಾಗವನ್ನು ನೆನಪಿಸಿ, ಸಹಕರಿಸುವಂತೆ ಕರ್ನಾಟಕದ ನಾಯಕರಿಗೆ ಸೂಚನೆ ನೀಡಿರುವುದೇ ಇದಕ್ಕೆ ಸಾಕ್ಷಿ.

ದಲಿತರ ಹಕ್ಕೊತ್ತಾಯ

ಇವೆಲ್ಲದರ ಹಿನ್ನೆಲೆಯಲ್ಲಿಯೇ ನಡೆದದ್ದು Breakfast Diplomacy. ಆದರೆ ಈ Breakfast Diplomacy ಯಶಸ್ವಿಯಾದಂತೆ ಕಾಣುತ್ತಿಲ್ಲ. ಕಾರಣ, ಇದಾದ ನಂತರ, ಡಿ.ಕೆ. ಶಿವಕುಮಾರ್‌, ಅವರು ಸಿದ್ದರಾಮಯ್ಯನವರ ಬೆಂಬಲಿಗ ಸಚಿವರಾದ, ಸತೀಶ್‌ ಜಾರಕಿಹೊಳಿ, ಎಂ.ಬಿ. ಪಾಟೀಲ್‌, ಎಚ್.‌ ಸಿ. ಮಹದೇವಪ್ಪ ಅವರನ್ನು ಭೇಟಿ ಮಾಡಿ ನಾಯಕತ್ವದ ಪ್ರಶ್ನೆ ಉದ್ಭವವಾದರೆ, ತಮ್ಮನ್ನು ಬೆಂಬಲಿಸುವತೆ ಮನವೊಲಿಸುತ್ತಿರುವುದು ಸಿದ್ದರಾಮಯ್ಯನವರ ಗಮನಕ್ಕೆ ಬಂದಿರುವ ಕಾರಣ, ಅದಕ್ಕೆ ಪ್ರತ್ಯುತ್ತರವೆಂಬಂತೆ ತಮ್ಮ ಸುಪುತ್ರ ಯತೀಂದ್ರರ ಮೂಲಕ ಈ ಮಾತುಗಳನ್ನಾಡಿಸಿದ್ದಾರೆ ಎನ್ನುವುದು ಹಿರಿಯ ಕಾಂಗ್ರೆಸ್ಸಿಗರ ಸಮಜಾಯಿಷಿ.

Breakfast at DKS home

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಈ ರೀತಿ ರಾಜಕೀಯ ಮೇಲಾಟದಲ್ಲಿ ತೊಡಗಿರುವಾಗ, ದಲಿತ ಸಮುದಾಯ ತನ್ನ ಹಕ್ಕನ್ನು ಮಂಡಿಸಿದೆ. ಕರ್ನಾಟಕದಲ್ಲಿ ಇದುವರೆಗೆ ನಡೆದಿರುವುದು ಪ್ರಬಲ ಕೋಮುಗಳ ಮೇಲುಗೈ ಆಟ. ಒಮ್ಮೆಯಾದರೂ ದಲಿತರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಡಿ ಎಂದು ಡಾ. ಪರಮೇಶ್ವರ ತಮ್ಮ ವಾದ ಮಂಡಿಸುತ್ತಿರುವುದು, ಹೈಕಮಾಂಡ್‌ ಇಕ್ಕಟ್ಟಿನಲ್ಲಿ ಸಿಲುಕಿದೆ. ಜೊತೆಯಲ್ಲಿ ಮಲ್ಲಿಕಾರ್ಜನ ಖರ್ಗೆ ಅವರು ಪಕ್ಷದ ರಾಷ್ಟ್ರಾಧ್ಯಕ್ಷರ ಸ್ಥಾನದಲ್ಲಿರುವಾಗ ದಲಿತರಿಗೆ ನ್ಯಾಯ ದೊರಕಬೇಕು ಎನ್ನುವುದು ದಲಿತ ನಾಯಕರಾದ ಕೆ.ಎಚ್. ಮುನಿಯಪ್ಪರಂಥವರ ವಾದ. ಅವರ  ಬೇಡಿಕೆಯಲ್ಲಿ ತಥ್ಯವಿದೆ.

ಅತ್ತ ದರಿ, ಇತ್ತ ಪುಲಿ

ಹಾಗೆ ನೋಡಿದರೆ, ಇಡೀ ಅಹಿಂದಾ ಸಮುದಾಯ ಸಿದ್ದರಾಮಯ್ಯನವರ ಬೆಂಬಲಕ್ಕಿದೆ. ಅವರೇ ಮುಖ್ಯಮಂತ್ರಿಯಾಗಿ ಮುಂದುವರೆದರೆ, ದಲಿತ ಸಮುದಾಯಕ್ಕೆ ಯಾವುದೇ ಅಭ್ಯಂತರವಿರುವಂತೆ ಕಾಣಿಸುತ್ತಿಲ್ಲ. ಆದರೆ ರಾಜ್ಯದ ಅಧ್ಯಕ್ಷರಾಗಿದ್ದರೂ, ಡಿ.ಕೆ. ಶಿವಕುಮಾರ್‌ ಒಕ್ಕಲಿಗ ಸಮುದಾಯದ ನಾಯಕರಂತೆ ಕಾಣಿಸುತ್ತಿರುವುದು. ಅವರ ಪರವಾಗಿ ಒಕ್ಕಲಿಗ ಸ್ವಾಮೀಜಿಗಳು ಧ್ವನಿ ಎತ್ತುತ್ತಿರುವುದು, ಲಿಂಗಾಯತ ಸಮುದಾಯವನ್ನು ಕೆರಳಿಸಿದೆ. ಆದರೆ ನಾಯಕತ್ವದ ವಿಷಯಕ್ಕೆ ಬಂದರೆ, ಡಿ.ಕೆ. ಶಿವಕುಮಾರ್‌ ನಾಯಕತ್ವದಲ್ಲಿ ಪಕ್ಷ ಬೆಳೆದಿರುವ ರೀತಿ ಅವರು ಪಕ್ಷವನ್ನು ಗಟ್ಟಿಗೊಳಿಸಿರುವ ರೀತಿಯನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಕಾಂಗ್ರೆಸ್‌ ಪಕ್ಷದ ನಿಜವಾದ, trouble shooter ಡಿ.ಕೆ. ಶಿವಕುಮಾರ್‌ ಎಂಬುದು ಸಾಬೀತಾಗಿದೆ. ದೇಶದ ಯಾವುದೇ ಭಾಗದಲ್ಲಿ ಪಕ್ಷಕ್ಕೆ ಆತಂಕ ಎದುರಾದಾಗ ಡಿ.ಕೆ. ಶಿವಕುಮಾರ್‌ ಧುಮುಕಿ, ತಮ್ಮ ಶಕ್ತಿಗೂ ಮೀರಿ ಶ್ರಮಿಸಿ, ಪಕ್ಷ ನಿಷ್ಠೆ ಮೆರೆದಿದ್ದಾರೆ. National Herald ತೊಂದರೆಯಲ್ಲಿ ಸಿಲುಕಿದಾಗ ಆರ್ಥಿಕವಾಗಿ ಅದರ ಬೆಂಬಲಕ್ಕೆ ನಿಂತು ಈಗ Enforcement Directorate ಕೈಯಲ್ಲಿ ಸಿಲುಕಿಕೊಂಡಿದುರಿಂದ ಪಕ್ಷಕ್ಕೆ ಡಿ.ಕೆ. ಶಿವಕುಮಾರ್‌ ಅವರಿಗೆ ಋಣ ಸಂದಾಯ ಮಾಡಬೇಕಾಗುತ್ತದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೆ ʻಅತ್ತ ದರಿ, ಇತ್ತ ಪುಲಿʼ ಎನ್ನುವಂಥ ಸ್ಥಿತಿ ಇದೆ.

ಅಹಿಂದ ಶಕ್ತಿ

ಹಾಗಾದರೆ ಈ ಗೊಂದಲಕ್ಕೆ ತೆರೆ ಎಳೆದು, ಮತದಾರರಲ್ಲಿ ಮತ್ತೆ ವಿಶ್ವಾಸ ಮೂಡಿಸುವುದು ಹೇಗೆ? ಎಂಬ ಪ್ರಶ್ನೆ ಹೈಕಮಾಂಡನ್ನು ಕಾಡುತ್ತಿದೆ. ಸಿದ್ದರಾಮಯ್ಯನವರನ್ನೇನಾದರೂ, ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಒತ್ತಾಯಕ್ಕೆ ಮಣಿದು ಸ್ಥಾನಪಲ್ಲಟಗೊಳಿಸಿದರೆ, ಆಗಬಹುದಾದ ʻರಾಜಕೀಯ ವಿಪ್ಲವʼವನ್ನು ಊಹಿಸಲೂ ಕೂಡ ಹೈಕಮಾಂಡ್‌ ಗೆ ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಅಥವಾ ಯಾವುದೇ ಜಾತಿ ಸಮೀಕ್ಷೆಯನ್ನು ಆಧರಿಸಿ ಯೋಚಿಸಿದರೂ, ಅಹಿಂದ ಶಕ್ತಿ ಎಲ್ಲ ಜಾತಿಗಳನ್ನು ಮೀರಿಸಿರುವುದು ಖಚಿತ. ಆ ಸಮುದಾಯವನ್ನು ಎದುರು ಹಾಕಿಕೊಳ್ಳುವುದು ಕಾಂಗ್ರೆಸ್‌ ಗೆ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಎಳೆದುಕೊಂಡಂತೆ ಎಂಬುದು ಹೈಕಮಾಂಡ್‌ ಗೆ ಗೊತ್ತಿದೆ. ಹಾಗೆಂದು ಡಿ.ಕೆ. ಶಿವಕುಮಾರ್‌ ಅವರನ್ನು ಸಮಾಧಾನಗೊಳಿಸುವ ಸ್ಥಿತಿಯಲ್ಲಿಯೂ ಹೈಕಮಾಂಡ್‌ ಇಲ್ಲ. ಹೈಕಮಾಂಡ್‌ಗೂ ಈಗ ಒಂದು ಸ್ಪಷ್ಟವಾದ ನಿಲುವು ತೆಗೆದುಕೊಳ್ಳುವುದು ಕಷ್ಟ-ಸಾಧ್ಯ ಎನ್ನುವುದು, ಕಾಂಗ್ರೆಸ್‌ ನ ಹಿರಿಯ ನಾಯಕರ ತಿಳಿವಳಿಕೆ.

ಖರ್ಗೆ 13

ಹೈಕಮಾಂಡ್‌ ಅತಂತ್ರ

ಹಾಗಾಗಿ ಹೈಕಮಾಂಡ್‌ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ. ಹಾಗೆಂದು ಇರುವ ರಾಜಕೀಯ ಸಂದಿಗ್ಧದ ಹಿನ್ನಲೆಯಲ್ಲಿ ಹೈಕಮಾಂಡನ್ನೂ ದೂರುವ ಸ್ಥಿತಿಯಲ್ಲಿಯೂ ಕರ್ನಾಟಕ ಕಾಂಗ್ರೆಸ್‌ ನಾಯಕರಿಲ್ಲ. ಜೊತೆಯಲ್ಲಿ ರಾಜ್ಯದ ವಿಧಾನ ಸಭಾ ಚುನಾವಣೆಗೆ ಇನ್ನು ಉಳಿದಿರುವುದು ಹೆಚ್ಚೂ ಕಡಿಮೆ ಎರಡು ವರ್ಷ. ಅದರಲ್ಲಿ ಕೊನೆಯ ವರ್ಷ ಚುನಾವಣಾ ಸಿದ್ಧತೆಗೆ ಮೀಸಲಾಗುತ್ತದೆ. ಈ ಹೊತ್ತಿನಲ್ಲಿ ಹೈಕಮಾಂಡ್‌ ಯಾವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ? ನೀವೇ ಹೇಳಿ ಎಂದು ನಾಯಕರು ಪ್ರಶ್ನಿಸುತ್ತಾರೆ. ಪಕ್ಷದ ಒಳಿತನ್ನು ಹೊರತುಪಡಿಸಿ, ಬೇರಾವುದೇ ರೀತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಹುಡುಕುವುದು ಕಷ್ಟ ಎನ್ನುವುದು ಅವರ ವಾದ.

ಇದನ್ನೂ ಓದಿ ಮೋದಿ ಹಾದಿಯಲ್ಲಿ ನಿರ್ಮಲಾ ಸೀತಾರಾಮನ್ – ದರ್ಪದ ಮಾತು, ವಿಪಕ್ಷಗಳ ಗೇಲಿ ಮಾಡೋ ಚಾಳಿ

ಈ ಸಮಸ್ಯೆಗೆ ಹಿರಿಯ ನಾಯಕರೊಬ್ಬರು ಹೇಳುವ ಪರಿಹಾರ ಆಸಕ್ತಿಕರವಾಗಿದೆ. ಒಂದು ವೇಳೆ ಸಿದ್ದರಾಮಯ್ಯನವರನ್ನು ಸ್ಥಾನಪಲ್ಲಟಗೊಳಿಸುವುದೇ ಆದಲ್ಲಿ ಎಲ್ಲರೂ ಒಪ್ಪುವ, ಯಾರಿಗೂ ಮಾನಸಿಕವಾಗಿ ನೋವಾಗದಂತೆ, ಪಕ್ಷವೂ ಉಳಿಯುವಂಥ, ನಾಯಕರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವುದು. ಅಂಥ ನಾಯಕರು; ಮಲ್ಲಿಕಾರ್ಜುನ ಖರ್ಗೆ ಎಂದು ಅವರ ಅನಿಸಿಕೆ. ಏಕೆಂದರೆ ಕಾಂಗ್ರೆಸ್ ನ ರಾಷ್ಟಾಧ್ಯಕ್ಷರಾಗಿ ಖರ್ಗೆ ಅವರ ಮೂರು ವರ್ಷದ ಅವಧಿ ಅಕ್ಟೋಬರ್‌ 2027ಕ್ಕೆ ಅಂತ್ಯವಾಗುತ್ತದೆ. ಅವರನ್ನು ಮುಖ್ಯಮಂತ್ರಿ ಮಾಡಿದರೆ, ಖರ್ಗೆ ಅವರ ರಾಜಕೀಯ ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗಿದ್ದರೆನ್ನುವುದು ಶಾಶ್ವತವಾಗಿ ಇತಿಹಾಸದಲ್ಲಿ ದಾಖಲಾಗುತ್ತದೆ. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿಯ ಕೂಗಿಗೂ ಅರ್ಥ ಬರುತ್ತದೆ. ಆ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಬದಲಿಗೆ ಪರಮೇಶ್ವರ ಅವರನ್ನಾಗಲಿ, ಸತೀಶ್‌ ಜಾರಕಿಹೊಳಿ ಅವರನ್ನು ಊಹಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಿದರೆ, ಸಿದ್ದರಾಮಯ್ಯನವರಾಗಲಿ, ಡಿ.ಕೆ. ಶಿವಕುಮಾರ್‌ ಅವರಾಗಲಿ ಆಕ್ಷೇಪಿಸುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಜೊತೆಯಲ್ಲಿ ಇದರಿಂದ ಕಾಂಗ್ರೆಸ್‌ ಮತ್ತೆ 2028ರಲ್ಲಿ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಸಹಕಾರಿಯಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರ.

“ಆದರೆ, ನಮ್ಮ ಪರಿಹಾರ ಯಾರು ಕೇಳುತ್ತಾರೆ” ಎಂಬುದು ಅವರ ಪ್ರಶ್ನೆ. ಜನರಲ್ಲಿಯೂ, ಪಕ್ಷದಲ್ಲಿರುವವರಿಗೂ ಇದೇ ಸರಿ ಎನ್ನಿಸಿದರೂ, ಬಾಯಿಬಿಟ್ಟು ಹೇಳುವ ಧೈರ್ಯ ಯಾರಿಗೂ ಇಲ್ಲ. ಹಾಗಾಗಿ ಸದ್ಯಕ್ಕೆ ಈ ನಾಯಕತ್ವದ ಗೊಂದಲ ಮುಂದುವರೆಸುವುದು ಹೈಕಮಾಂಡ್‌ ಗೆ ಅನಿವಾರ್ಯ ಎಂಬಂಥ ಸ್ಥಿತಿ ಕಾಂಗ್ರೆಸ್‌ನದಾಗಿದೆ. ಮತ್ತೆ ಕಾಯಬೇಕು, ಮತ್ತಷ್ಟು ಕಾಯಬೇಕು, ಕಾದರೂ ಉತ್ತರ ಸಿಗುವ ಸಾಧ್ಯತೆಗಳು ದೂರ.

IMG 20251121 WA0005
ಮುರಳೀಧರ ಖಜಾನೆ
+ posts

ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಮುರಳೀಧರ ಖಜಾನೆ
ಮುರಳೀಧರ ಖಜಾನೆ
ಹಿರಿಯ ಪತ್ರಕರ್ತ. ಉದಯವಾಣಿ, ಪ್ರಜಾವಾಣಿ, ದಿ ಹಿಂದೂ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದಾರೆ. ಸದ್ಯ ಸ್ವತಂತ್ರ ಪತ್ರಕರ್ತರಾಗಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...