ಶಕ್ತಿ ಯೋಜನೆಯಿಂದಾಗಿ ಬೆಂಗಳೂರಿನಲ್ಲಿ ದುಡಿಯಲು ಹೋಗುವ ಮಹಿಳೆಯರ ಸಂಖ್ಯೆ 23% ಹೆಚ್ಚಿದೆ ಎಂದು ಇತ್ತೀಚೆಗೆ ಸಮೀಕ್ಷಾ ವರದಿಯೊಂದು ಹೇಳಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕ ಸಾರಿಗೆಯನ್ನು ಬೆಂಬಲಿಸದೇ ಖಾಸಗಿ ಕಂಪನಿಗಳ ಪರವಾಗಿ, ಬಂಡವಾಳಶಾಹಿಗಳಿಗೆ ಬೆಂಬಲ ನೀಡುತ್ತಿರುವುದು ಅಕ್ಷಮ್ಯ.
ಸರ್ಕಾರಗಳಿರುವುದೇ ಜನರ ಕಲ್ಯಾಣಕ್ಕೋಸ್ಕರ. ಸಾರ್ವಜನಿಕ ಸಾರಿಗೆ, ಆಸ್ಪತ್ರೆ, ಶಾಲೆ, ಕಾಲೇಜುಗಳು ಶೋಷಿತರ ಮತ್ತು ಬಡವರ ಪಾಲಿನ ಆಸರೆ. ದೇಶ ಎಷ್ಟೇ ಮುಂದುವರಿಯಲಿ ಸಾರ್ವಜನಿಕ ಸಾರಿಗೆಯನ್ನು ನೆಚ್ಚಿಕೊಂಡು ಬದುಕುವ ಜನ ಇದ್ದೇ ಇರುತ್ತಾರೆ. ಅವುಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ನಡೆಸಬೇಕಿರುವುದು, ಹೊಸ ಹೊಸ ಸಾಧ್ಯತೆಗಳನ್ನು, ಯೋಜನೆಗಳನ್ನು ರೂಪಿಸುವುದು ಜನಪ್ರತಿನಿಧಿಗಳು ಮತ್ತು ಸರ್ಕಾರಗಳ ಜವಾಬ್ದಾರಿ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿಶ್ವ ಮಟ್ಟದಲ್ಲಿ ಹತ್ತಾರು ಪ್ರಶಸ್ತಿಗಳನ್ನು ಪಡೆದಿದೆ. ಇಷ್ಟು ದೊಡ್ಡ ನಗರ ಸಾರಿಗೆ ಜಾಲ ದೇಶದಲ್ಲಿಯೇ ಇಲ್ಲ. ನಗರದಲ್ಲಿ ಸಂಚರಿಸುವ ಬಸ್‌ಗಳು ತೀರಾ ಹದಗೆಟ್ಟಿಲ್ಲ. ಎರಡು ವರ್ಷಗಳಲ್ಲಿ ಸಾವಿರದಷ್ಟು ಹೊಸ ಬಸ್‌ಗಳನ್ನು ಖರೀದಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ವಿಶ್ವದಾಖಲೆ ಬರೆದಿದೆ. ಉಚಿತವಾಗಿ ಮಹಿಳೆಯರು ಓಡಾಡುವ ವ್ಯವಸ್ಥೆ ಸರ್ಕಾರ ಕಲ್ಪಿಸಿದ ನಂತರ ಉದ್ಯೋಗ ಮಾಡುವ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಯಿಂದಾಗಿ ಕುಟುಂಬಗಳ ಆದಾಯ ಹೆಚ್ಚಿದೆ. ಒಟ್ಟಿನಲ್ಲಿ ನಗರದಲ್ಲಿ ದುಡಿಯುವ ಮಹಿಳೆಯರ ಪಾಲಿಗೆ ಬಿಎಂಟಿಸಿ ಬಸ್‌ಗಳು ಮತ್ತು ಉಚಿತ ಪ್ರಯಾಣ ಯೋಜನೆ ಹೆಚ್ಚಿನ ಬಲ ತುಂಬಿದೆ.
ಇವೆಲ್ಲ ಪಾಸಿಟಿವ್ ಅಂಶಗಳು ರಾಜ್ಯದಲ್ಲಿ ನಡೆಯುತ್ತಿರುವಾಗ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಉದ್ಯಮಿ ಮೋಹನದಾಸ ಪೈ ಸೇರಿಕೊಂಡು ಖಾಸಗಿ ಸಂಸ್ಥೆಗಳಿಗೆ ಕಾರು ಬಸ್ ವ್ಯವಸ್ಥೆ ಕಲ್ಪಿಸುವ ಖಾಸಗಿ ಸಂಸ್ಥೆಯ ವಿಚಾರಸಂಕಿರಣದಲ್ಲಿ ಮಾತನಾಡುತ್ತಾ “ನೋ ಮೋರ್ ಬಿಎಂಟಿಸಿ, ನೋ ಮೋರ್ ಮಾನೋಪೊಲಿ” ಎಂದು ಹೇಳಿದ್ದಾರೆ. ಇದು ಅಚ್ಚರಿಯ ಹೇಳಿಕೆಯೇನಲ್ಲ. ಯಾಕೆಂದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನೆಲ್ಲ ಅದಾನಿ- ಅಂಬಾನಿಗಳಿಗೆ ಮಾರಾಟ ಮಾಡಿದ್ದು ಗೊತ್ತೇ ಇದೆ. ಏರ್ಪೋರ್ಟ್, ರೈಲ್ವೆಯನ್ನೂ ಮೋದಿಯವರು ತಮ್ಮ ನೆಚ್ಚಿನ ಗೆಳೆಯ ಗೌತಮ್ ಅದಾನಿಗೆ ತಟ್ಟೆಯಲ್ಲಿಟ್ಟು ಕೊಟ್ಟು ಬಿಟ್ಟಿದ್ದಾರೆ. ಹೀಗೆ ಖಾಸಗೀಕರಣದ ಪರ ನಿಲುವಿರುವ ಬಿಜೆಪಿಯ ಸಂಸದ ಮತ್ತು ಬಿಜೆಪಿಯ ಬೆಂಬಲಿಗ ಬಿಎಂಟಿಸಿಯನ್ನು ಖಾಸಗೀಕರಣ ಮಾಡಬೇಕು, ಖಾಸಗಿ ಬಸ್‌ಗಳಿಗೆ ನಗರದಲ್ಲಿ ಅವಕಾಶ ಕಲ್ಪಿಸಬೇಕು ಎಂದು ಹೇಳದೇ ಇನ್ನೇನು ಹೇಳಲು ಸಾಧ್ಯ. ಈಗ ಬಸ್ ನಂತರ ಆಸ್ಪತ್ರೆ, ಶಾಲೆ ಎಲ್ಲವನ್ನೂ ಖಾಸಗಿಯವರಿಗೆ ಧಾರೆ ಎರೆದುಕೊಟ್ಟು ಬಡವರನ್ನು ಸಮಾಧಿ ಮಾಡುವ ಹುನ್ನಾರ ಇವರದ್ದು ಎಂದು ಹೇಳಲೇಬೇಕಾಗಿದೆ.

ಸಂಸದ ತೇಜಸ್ವಿ ಸೂರ್ಯ ಕಳೆದ ವರ್ಷವೂ ಬಿಎಂಟಿಸಿ ಖಾಸಗೀಕರಣ ಮಾಡಬೇಕು, ನಗರದಲ್ಲಿ ಖಾಸಗಿಯವರು ಬಸ್ ಓಡಿಸಿದರೆ ಅವರಿಗೂ ಅನುಕೂಲವಾಗುತ್ತದೆ ಎಂದು ಹೇಳಿದ್ದರು. ತೇಜಸ್ವಿ ಸೂರ್ಯ ಬಡವರಿಗೆ ಅನುಕೂಲವಾಗುವ ಅಥವಾ ಬಿಎಂಟಿಸಿಯನ್ನು ಸುಧಾರಿಸುವ ಯಾವುದಾದರೂ ಸಲಹೆ ನೀಡಿದ್ದಾರೆಯೇ! ಇಲ್ಲ. ಕಾಂಗ್ರೆಸ್ ಸರ್ಕಾರವನ್ನು ಟೀಕಿಸಬೇಕು ಎಂಬ ಏಕೈಕ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ. ಜೊತೆಗೆ ತಾವು ಅತಿಥಿಯಾಗಿ ಹೋದ ಸಂಸ್ಥೆಯ ಪರವಾಗಿ ಮಾತನಾಡಿದ್ದಾರೆ. ತೇಜಸ್ವಿ ಸೂರ್ಯಗೆ ಬಿಎಂಟಿಸಿ ನಷ್ಟದಲ್ಲಿದೆ ಎಂದು ಈಗ ಅನಿಸಿತ್ತೇ? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಲಾಭದಲ್ಲಿತ್ತೇ? ತಮ್ಮದೇ ಸರ್ಕಾರ ಇದ್ದಾಗ ಈ ಸಲಹೆ ಯಾಕೆ ಕೊಟ್ಟಿಲ್ಲ ಎಂಬ ಸಾರ್ವಜನಿಕರ ಹಲವು ಪ್ರಶ್ನೆಗಳಿಗೆ ಉತ್ತರಿಸುವರೇ?
ಸೂರ್ಯ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸರಿಯಾದ ತಿರುಗೇಟು ನೀಡಿದ್ದಾರೆ. ಅವರ ಹೇಳಿಕೆಯ ಪ್ರಕಾರ ಬೆಂಗಳೂರಿನಲ್ಲಿ 1.44ಕೋಟಿ ಜನಸಂಖ್ಯೆ ಇದೆ. ಅದರಲ್ಲಿ ಮೂರನೇ ಒಂದು ಭಾಗ ಅಂದ್ರೆ, 48 ಲಕ್ಷ ಮಂದಿ ಬಸ್‌ನಲ್ಲೇ ಸಂಚರಿಸುತ್ತಾರೆ. 10-20% ಶ್ರೀಮಂತರೂ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ.
ಶಕ್ತಿ ಯೋಜನೆಯಿಂದಾಗಿ ಬೆಂಗಳೂರಿನಲ್ಲಿ ದುಡಿಯಲು ಹೋಗುವ ಮಹಿಳೆಯರ ಸಂಖ್ಯೆ 23% ಹೆಚ್ಚಿದೆ ಎಂದು ಇತ್ತೀಚೆಗೆ ಸಮೀಕ್ಷಾ ವರದಿಯೊಂದು ಹೇಳಿದೆ. ಇಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸಾರ್ವಜನಿಕ ಸಾರಿಗೆಯನ್ನು ಬೆಂಬಲಿಸದೇ ಖಾಸಗಿ ಕಂಪನಿಗಳ ಪರವಾಗಿ, ಬಂಡವಾಳಶಾಹಿಗಳಿಗೆ ಬೆಂಬಲ ನೀಡುತ್ತಿರುವುದು ಅಕ್ಷಮ್ಯ.
ಈ ಬಗ್ಗೆ ಕಾಂಗ್ರೆಸ್ ವಕ್ತಾರ ಮತ್ತು ಬಿಎಂಟಿಸಿ ನೂತನ ಉಪಾಧ್ಯಕ್ಷ ನಿಕೇತ್‌ರಾಜ್ ಮೌರ್ಯ ಮತ್ತು ಬೆಂಗಳೂರು ಬಸ್ ಪ್ರಯಾಣಿಕರ ಸಂಘದ ಮುಖಂಡ, ಸಾಮಾಜಿಕ ಕಾರ್ಯಕರ್ತ, ವಕೀಲರೂ ಆಗಿರುವ ವಿನಯ್ ಶ್ರೀನಿವಾಸ್ ಅವರು ಈ ದಿನದ ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪೈ, ಸೂರ್ಯ ಸೇರಿ ಪಬ್ಲಿಕ್ ಸೆಕ್ಟರ್ ಮುಗಿಸಲು ಸುಪಾರಿ ಪಡೆದಿದ್ದಾರೆಯೇ?– ನಿಕೇತ್ ರಾಜ್
ಬಿಎಂಟಿಸಿ ಒಂದರಲ್ಲೇ ಸುಮಾರು 30,000 ಚಾಲರು, ನಿರ್ವಾಹಕರು ಸೇರಿದಂತೆ ಕಾರ್ಮಿಕರಿದ್ದಾರೆ. 30 ಸಾವಿರ ಜನ ಅಂದ್ರೆ 30 ಸಾವಿರ ಕುಟುಂಬಗಳು. ಅಷ್ಟು ಕುಟುಂಬಗಳ ಬಾಯಿಗೆ ಮಣ್ಣು ಹಾಕಲು ಹೊರಟಿದ್ದಾರೆ ತೇಜಸ್ವಿ ಸೂರ್ಯ. ಇಂತಹ ಹೇಳಿಕೆ ಯಾಕೆ ಕೊಡುತ್ತಿದ್ದಾರೆ ಎಂದರೆ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಲ್ಲಿ ಇರುವ ನೌಕರರಲ್ಲಿ ಬಹುತೇಕರು ಹಿಂದುಳಿದ ಸಮುದಾಯಕ್ಕೆ ಸೇರಿದವರು ಮತ್ತು ದಲಿತರು. ಖಾಸಗೀಕರಣ ಮಾಡುವ ಮೂಲಕ ಅವರ ಬದುಕನ್ನು ಮುಗಿಸಲು ಯತ್ನಿಸುತ್ತಿದ್ದಾರೆ. ಇವರ ಹೇಳಿಕೆಗಳ ಹಿಂದೆ ಇರುವ ಷಡ್ಯಂತ್ರ ಇದು. ಡ್ರೈವರ್, ಕಂಡಕ್ಟರ್ ಕೆಲಸ ಮಾಡುವವರು ಯಾರೂ ಬ್ರಾಹ್ಮಣರು ಅಲ್ಲ. ಪೈ ಮತ್ತು ಸೂರ್ಯ ಇಬ್ಬರು ಸೇರಿ ಎಲ್ಲ ಪಬ್ಲಿಕ್ ಸೆಕ್ಟರ್ ಮುಗಿಸಲು ಸುಪಾರಿ ತೆಗೆದುಕೊಂಡಂತೆ ಕಾಣುತ್ತಿದೆ. ಹಾಗಾಗಿ ಸಾರಿಗೆ ಕಾರ್ಮಿಕರು ದಂಗೆ ಏಳಬೇಕು. ಇವರ ಷಡ್ಯಂತ್ರದ ವಿರುದ್ಧ ನೌಕರರು ಪ್ರತಿಭಟಿಸಬೇಕಿದೆ ಎಂದು ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಮೌರ್ಯ ಹೇಳಿದರು.

ಅದಾನಿಗೆ ಬಿಎಂಟಿಸಿಯನ್ನು ಕೊಡಿಸುವ ಹುನ್ನಾರವೇ?- ವಿನಯ್ ಶ್ರೀನಿವಾಸ್
ಮೊದಲನೆಯದಾಗಿ ತೇಜಸ್ವಿ ಸೂರ್ಯ ಅವರಿಗೆ ಬಿಎಂಟಿಸಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನಲು ನೈತಿಕ ಅಧಿಕಾರ ಇಲ್ಲ. ಯಾಕೆಂದರೆ ಅವರು ಬಸ್‌ನಲ್ಲಿ ಓಡಾಡಿದವರಲ್ಲ, ಅವರ ಪಕ್ಷ ಸರ್ಕಾರ ಇದ್ದಾಗ ಬಿಎಂಟಿಸಿ ನೇಮಕಾತಿಯನ್ನು ನಿಲ್ಲಿಸಿದ್ರು, ಬಿಎಂಟಿಸಿ ಬಸ್ ಸಂಖ್ಯೆ ಹೆಚ್ಚಿಸಲಿಲ್ಲ, ಬಿಎಂಟಿಸಿಗೆ ಯಾವುದೇ ಬೆಂಬಲ ನೀಡದ ಪಕ್ಷದವರಿಗೆ ಈಗ ಬಂದು ಬಿಎಂಟಿಸಿ ಸರಿಯಾಗಿ ಕೆಲಸ ಮಾಡ್ತಿಲ್ಲ ಎಂದು ಹೇಳಲು ಯಾವ ಅಧಿಕಾರ ಇದೆ. ಈ ಬಸ್‌ನದ್ದು ಮೂರು ಸಮಸ್ಯೆ ಇದೆ. ಕಳೆದ ಹತ್ತು ವರ್ಷಗಳಲ್ಲಿ ಬಸ್‌ಗಳನ್ನು ಖರೀದಿ ಮಾಡಿಲ್ಲ. 2015ರಲ್ಲಿ ಆರು ಸಾವಿರ ಇತ್ತು. ಈ ಸರ್ಕಾರ ಬಂದ ಮೇಲೆ ಏಳು ಸಾವಿರ ಬಸ್ ಇದೆ. ಕಾರುಗಳ ಸಂಖ್ಯೆ ಡಬಲ್ ಆಗಿದೆ. ಬಸ್‌ಗಳ ಸಂಖ್ಯೆ ಕಡಿಮೆ ಅಂದ್ರೂ ಐವತ್ತು ಪರ್ಸಂಟ್ ಜಾಸ್ತಿಯಾಗಬೇಕಿತ್ತು. ಕಾರುಗಳ ಸಂಖ್ಯೆ ಜಾಸ್ತಿ ಆಗಿ ಟ್ರಾಫಿಕ್ ಸಮಸ್ಯೆ ಆಗಿದೆ. ಅದಕ್ಕೆ ಕಡಿವಾಣ ಹಾಕುವವರು ಯಾರೂ ಇಲ್ಲ. ಖಾಸಗಿ ಬಸ್‌ಗಳನ್ನು ಬಿಟ್ಟರೂ ಅವು ಇದೇ ರಸ್ತೆಗಳಲ್ಲಿ ಓಡಾಡಬೇಕು. ಆಕಾಶದಲ್ಲಿ ಓಡಲು ಆಗಲ್ಲ. ಖಾಸಗಿ ಬಸ್‌ಗಳು ಎಲ್ಲಿ ರೆವಿನ್ಯೂ ಹೆಚ್ಚು ಸಿಗುತ್ತೋ ವೈಟ್‌ಫೀಲ್ಡ್, ಇಲೆಕ್ಟ್ರಾನಿಕ್ ಸಿಟಿ ಕಡೆ ಬಸ್ ಬಿಡ್ತಾರೆ. ಬ್ಯಾಟರಾಯನಪುರ, ಗಂಗೊಂಡನಹಳ್ಳಿ, ಕೆ ಆರ್ ಮಾರ್ಕೆಟ್, ಕೊಡಿಗೇಹಳ್ಳಿಗೆ ಖಾಸಗಿ ಬಸ್ ಹಾಕಲ್ಲ. ಆಗ ಬಿಎಂಟಿಸಿ ಇನ್ನಷ್ಟು ಬಲಹೀನ ಆಗ್ತದೆ. ಕಡೆಗೆ ಮುಚ್ಚೇ ಹೋಗ್ತದೆ. ಬಿಬಿಎಂಪಿಗೆ ನಾವು ಹಲವು ವರ್ಷಗಳಿಂದ ಬಸ್‌ಗೆ ಪ್ರತ್ಯೇಕ ಲೇನ್ ಮಾಡಿ ಅಂತ ಕೇಳ್ತಿದ್ದೇವೆ. ಸೂರ್ಯ ಮತ್ತು ಪೈ ಸೇರಿ ಬಿಬಿಎಂಪಿಗೆ ಇಂತಹ ಒತ್ತಾಯ ಮಾಡಲಿ. ಕೆಲವು ಏರಿಯಾಗಳಿಗೆ ಮಿನಿ ಬಸ್ ಬಿಡಬೇಕು. ಶ್ರೀರಾಮ್‌ಪುರ ತರಹದ ಏರಿಯಾಗಳಿಗೆ ಬಸ್ ಎಷ್ಟು ಹೋಗುತ್ತೆ? ರೆವಿನ್ಯೂ ಲೇಔಟ್‌ಗಳಲ್ಲಿ ಮಿನಿ ಬಸ್ ಅನುಕೂಲ. ಇದಕ್ಕೆಲ್ಲ ಹೋರಾಟ ಮಾಡಲಿ.

ದೆಹಲಿಯಲ್ಲಿ ಗ್ಯಾಂಗ್ ರೇಪ್ ಆಗಿದ್ದು ಖಾಸಗಿ ಬಸ್‌ನಲ್ಲಿ. ಸರ್ಕಾರಿ ಬಸ್‌ನಲ್ಲೂ ಮಹಿಳೆಯರಿಗೆ ಕಿರುಕುಳ ಆಗುತ್ತೆ, ಆದ್ರೆ ಸರ್ಕಾರವನ್ನು ಪ್ರಶ್ನೆ ಮಾಡಬಹುದು, ಹೋರಾಟ ಮಾಡಬಹುದು. ಖಾಸಗಿ ಬಸ್ ಆದ್ರೆ ಯಾರ ವಿರುದ್ದ ಹೋರಾಟ ಮಾಡೋದು. ತೇಜಸ್ವಿ ಸೂರ್ಯ ಅಥವಾ ಮೋಹನ್‌ದಾಸ್ ಪೈ ಜವಾಬ್ದಾರಿ ತೆಗೆದುಕೊಳ್ತಾರಾ? ಇಬ್ಬರೂ ಕ್ಯಾಪಿಟಲಿಸ್ಟ್ ಮೈಂಡ್‌ಸೆಟ್ ಇರೋರು. ಇರೋ ವ್ಯವಸ್ಥೆ ತುಂಬಾ ಕಳಪೆ ಮಟ್ಟದಲ್ಲಿದೆ, ನಾವೇ ಹೊಸ ಐಡಿಯಾ ಕೊಟ್ಟು ಏನೋ ಮಾಡಲು ಹೊರಟಿದ್ದೇವೆ ಎಂಬ ಯೋಚನೆ ಅವರದ್ದು. ಯಾರಿಗೆ ಗೊತ್ತು ಅದಾನಿಯವರಿಗೆ ಬಸ್ ಕೊಡಬೇಕು ಎಂದೂ ಇರಬಹುದು. ಈಗಾಗಲೇ ಏರ್‌ಪೋರ್ಟ್‌ಗಳನ್ನು ಕೊಟ್ಟಾಗಿದೆ, ಇದನ್ನೂ ಅವರಿಗೆ ಬೇಕಿದ್ದವರಿಗೆ ಕೊಡಬೇಕು ಎಂಬ ಹುನ್ನಾರ ಇರಬಹುದು ಎಂದು ಬಿಎಂಟಿಸಿ ಪ್ರಯಾಣಿಕರ ಸಂಘದ ಮುಖಂಡ ವಿನಯ್ ಶ್ರೀನಿವಾಸ್ ಹೇಳಿದರು.
ಖಾಸಗಿಯವರು ಹೇಗೆ ಲಾಭದಲ್ಲಿ ನಡೆಸುತ್ತಾರೆ? – ಶಹೀನ್
ಸರ್ಕಾರ ಬಸ್ ಓಡಿಸುವಾಗ ನಷ್ಟವಾಗುತ್ತದೆ ಎಂದಾದರೆ ಖಾಸಗಿಯವರು ಹೇಗೆ ಲಾಭದಲ್ಲಿ ನಡೆಸುತ್ತಾರೆ ಎಂದು ಸೂರ್ಯ ಅವರು ಹೇಳಬೇಕು. ಎಲ್ಲ ರೂಟ್‌ಗಳು ಖಾಸಗಿಯವರ ಹಿಡಿತದಲ್ಲಿದ್ದರೆ ಸರ್ಕಾರಕ್ಕೆ ಹಿಡಿತ ತಪ್ಪಲಿದೆ. ಖಾಸಗಿ ಚಾಲಕರಿಗೆ ಸರ್ಕಾರಿ ವೇತನಕ್ಕಿಂತ ಕಡಿಮೆ ವೇತನ ಇರುತ್ತದೆ. ತರಬೇತಿಯ ಕೊರತೆ ಇರುತ್ತದೆ. ಇದರಿಂದಾಗಿ ಅಪಘಾತ ಹೆಚ್ಚುವ ಅಪಾಯವಿದೆ. ಬಿಎಂಟಿಸಿಯನ್ನು ಸುಧಾರಣೆ ಮಾಡುವ ಬಗ್ಗೆ ಮಾತನಾಡಬೇಕೇ ವಿನಃ ಖಾಸಗೀಕರಣ ಮಾಡುವುದಲ್ಲ. ಟ್ರಾಫಿಕ್ ಸಮಸ್ಯೆ ತಡೆಯಲು ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸಬೇಕು. ಬೆಂಗಳೂರಿನಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಕಾಮಗಾರಿಗಳಿಂದ ಟ್ರಾಫಿಕ್ ಜಾಮ್ ಹೆಚ್ಚುತ್ತಿದೆ. ಬಸ್ ಪ್ರಯಾಣಿಕರ ಸಮಯ ಟ್ರಾಫಿಕ್‌ನಲ್ಲೇ ವ್ಯರ್ಥವಾಗುತ್ತಿದೆ. ಇದನ್ನು ತಪ್ಪಿಸಲು ಪ್ರತ್ಯೇಕ ಲೇನ್ ಮಾಡಬೇಕು. ಇವೆಲ್ಲ ಬಸ್ ಪ್ರಯಾಣಿಕರ ವೇದಿಕೆಯ ಬಹುದಿನದ ಬೇಡಿಕೆಯಾಗಿದೆ. ಇಂತಹ ಅಭಿವೃದ್ಧಿಗಳೆಲ್ಲ ಎಲ್ಲರೂ ಸೇರಿ ಮಾಡಬೇಕಿದೆ ಎಂದು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಶಹೀನ್ ಹೇಳಿದರು.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.




