ಬಿಹಾರ | ಮತದಾನಕ್ಕೆ ಮೊದಲೇ ಬಿಜೆಪಿ ಜೋಳಿಗೆಯಲ್ಲಿತ್ತೇ ದೈತ್ಯ ಗೆಲುವಿನ ಜನಾದೇಶ?

Date:

ಕಳೆದ ಚುನಾವಣೆಯಲ್ಲಿ ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ ಯಾದವ್. ಕಳೆದ ಸಲ ಬಿಹಾರದ ಇದೇ ಚುನಾವಣೆಯಲ್ಲಿ ಅತಿರಥ- ಮಹಾರಥರನ್ನು ಹೊಂದಿದ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟ ಗೆಲುವಿಗಾಗಿ ಬೆವರು ಹರಿಸುವಂತೆ ಮಾಡಿದ್ದರು. ಈ ಸಲವೂ ಮುಖ್ಯಮಂತ್ರಿ ಹುದ್ದೆ ಈತನಿಂದ ದೂರವೇ ಉಳಿಯಿತು.

ಹರಿಯಾಣ, ಮಹಾರಾಷ್ಟ್ರ, ದೆಹಲಿಯ ಭಾರೀ ಗೆಲುವುಗಳ ನಂತರ ಬಿಹಾರವನ್ನೂ ಬುಟ್ಟಿಗೆ ಹಾಕಿಕೊಂಡು ಬೀಗಿದೆ ಮೋಶಾ  ಬಿಜೆಪಿ. ಮೋದಿ ಭಜನೆ ಮಾಡುವ ಗೋದಿ ಮೀಡಿಯಾ ಕೂಡ ಊಹಿಸದಷ್ಟು ದೈತ್ಯ ಗೆಲುವು NDA ಪಾಲಾಗಿದೆ.

ಲಾಲೂ ಅವರ ರಾಷ್ಟ್ರೀಯ ಜನತಾದಳ, ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳು ನೆಲಕಚ್ಚಿವೆ. ಮುಸ್ಲಿಮ್- ಯಾದವ್ ಬೆಂಬಲ ನೆಲೆಯ ಆಚೆಗೆ ಹಿಂದುಳಿದವರು ಮತ್ತು ದಲಿತ ಮತಗಳನ್ನು ಒಲಿಸಿಕೊಳ್ಳುವ ತೇಜಸ್ವಿ ಯಾದವ್ ಪ್ರಯತ್ನಕ್ಕೆ ಘೋರ ನಿರಾಶೆಯೇ ಎದುರಾಗಿದೆ. ಚುನಾವಣಾ ಆಯೋಗ ಮತ್ತು ಆಳುವ ಪಕ್ಷಗಳು ಶಾಮೀಲಾಗಿ ನಡೆಸುವ ಚುನಾವಣೆಗಳನ್ನು ಪ್ರತಿಪಕ್ಷಗಳು ಬಹಿಷ್ಕರಿಸಬೇಕೆಂಬ ತೀವ್ರತಮ ವಾದ ಮೇಲೆದ್ದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ನಿತೀಶ್ ಅವರ ಹಳೆಯ ಗೆಳೆಯ ಲಾಲೂಪ್ರಸಾದ್ ಯಾದವ್ ಅವರ ಪಕ್ಷ ರಾಷ್ಟ್ರೀಯ ಜನತಾದಳ ಕಂಗೆಡುವಷ್ಟು ಕೆಳಕ್ಕೆ ಕುಸಿದಿದೆ. ಬಿಹಾರ ವಿಧಾನಸಭೆಯಲ್ಲಿ ಅಧಿಕೃತ ಪ್ರತಿಪಕ್ಷದ ಸ್ಥಾನ ಕೈ ತಪ್ಪುವ ಭೀತಿಯಿಂದ ಸ್ವಲ್ಪದರಲ್ಲೇ ಪಾರಾಗಿದೆ. ಈ ಸ್ಥಾನ ಉಳಿಸಿಕೊಳ್ಳಲು 24 ಕ್ಷೇತ್ರಗಳಲ್ಲಾದರೂ ಗೆಲ್ಲಬೇಕು.

ಕಳೆದ ಚುನಾವಣೆಯಲ್ಲಿ ಗೆಲುವಿನ ಗೆರೆಯ ಬಳಿ ಸಾರಿ ಕಾಲು ಸೋತ ಸಾರಥಿ ತೇಜಸ್ವಿ ಯಾದವ್. ಕಳೆದ ಸಲ ಬಿಹಾರದ ಇದೇ ಚುನಾವಣೆಯಲ್ಲಿ ಅತಿರಥ- ಮಹಾರಥರನ್ನು ಹೊಂದಿದ ಬಿಜೆಪಿ-ಸಂಯುಕ್ತ ಜನತಾದಳ ಮೈತ್ರಿಕೂಟ ಗೆಲುವಿಗಾಗಿ ಬೆವರು ಹರಿಸುವಂತೆ ಮಾಡಿದ್ದರು. ಈ ಸಲವೂ ಮುಖ್ಯಮಂತ್ರಿ ಹುದ್ದೆ ಈತನಿಂದ ದೂರವೇ ಉಳಿಯಿತು.

ರಾಷ್ಟ್ರವ್ಯಾಪಿ ರಾಜಕೀಯ ಕುತೂಹಲ ಕೆರಳಿಸಿದ್ದ  ಚುನಾವಣೆಯಿದು. ಈ ಮತಸಮರದ ತರಂಗಗಳು ಬಿಹಾರದ ಸರಹದ್ದುಗಳನ್ನು ಮೀರಿರುವಂತಹವು. ಅಸ್ಸಾಮ್, ಕೇರಳ, ಪುದುಚೆರಿ, ತಮಿಳುನಾಡು, ಪಶ್ಚಿಮ ಬಂಗಾಳದ ವಿಧಾನಸಭೆಗಳ ಚುನಾವಣೆಗಳು ನಾಲ್ಕೇ ತಿಂಗಳ ದೂರದಲ್ಲಿ ಕದ ಬಡಿದಿವೆ. ಎಲ್ಲ ರಾಜ್ಯಗಳ ನೆಲದ ವಾಸ್ತವ ಬೇರೆಯೇ ಇರುತ್ತದೆ ಹೌದು. ಆದರೆ ಬಿಹಾರದ ಫಲಿತಾಂಶಗಳು ರಾಜಕೀಯ ಪಕ್ಷಗಳ ಚುನಾವಣಾ ರಣತಂತ್ರ ಮತ್ತು ಮೈತ್ರಿಗಳ ಸ್ವರೂಪವನ್ನು ಒಂದು ಹಂತಕ್ಕೆ ಪ್ರಭಾವಿಸುವುದು ಸುಳ್ಳೇನಲ್ಲ.

Rahul tejaswi 2

ಬಿಜೆಪಿಯ ಮಹಾಗೆಲುವಿನ ಈ ದಾಖಲೆಗೆ ದಪ್ಪಕ್ಷರಗಳಲ್ಲಿ ಬರೆಯಬೇಕಿರುವ ಪುಟ್ಟ ವಾಕ್ಯದ ಅಡಿ ಟಿಪ್ಪಣಿ- ಮೋಶಾ ಬಿಜೆಪಿಯು ಯುದ್ಧಕ್ಕೆ ಮೊದಲೇ ಗೆಲುವನ್ನು ಗಂಟು ಕಟ್ಟಿ ಇಟ್ಟುಕೊಂಡಿತ್ತು. ಬೀದಿಬೀದಿಗಳಲ್ಲಿ ಹರಿದಿದ್ದ ಜನಾಕ್ರೋಶ ಮತಗಟ್ಟೆಗೆ ಬರುವ ಹೊತ್ತಿಗೆ ಆರಿ ಹೋಗಿದ್ದಾದರೂ ಹೇಗೆ?

2020ರ ಕಳೆದ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದರೆ ಈ ಸಲ ಎನ್ ಡಿ ಎ ಮೈತ್ರಿಕೂಟ 80 ಸೀಟುಗಳು ಏರಿಕೆ ಕಂಡಿದೆ. ಮಹಾಘಟಬಂಧನವು 79 ಸೀಟುಗಳ ಇಳಿಕೆ ಕಂಡಿದೆ. ಎನ್ ಡಿ ಎ ಶೇಕಡಾವಾರು ಮತಗಳಿಕೆ 2020ರಲ್ಲಿ 41.4ರಿಂದ 2025ರಲ್ಲಿ ಶೇ.46.9ಕ್ಕೆ ಏರಿದೆ. ಮಹಾಘಟಬಂಧನದ ಇದೇ ಶೇಕಡಾವಾರು ಮತಗಳಿಕೆ 38.8ರಿಂದ 37.9ಕ್ಕೆ ಇಳಿದಿದೆ. ಅರ್ಥಾತ್ ಶೇ.0.9ರಷ್ಟು ಇಳಿಕೆ ಮಾತ್ರ!

ಮೊದಲ ಸಲ ಕಣಕ್ಕೆ ಇಳಿದಿರುವ ಜನಸುರಾಜ್ ಪಕ್ಷ ಶೇ.3.3ರಷ್ಟು ಮತ ಗಳಿಸಿದೆ. ಪಕ್ಷೇತರರು ಮತ್ತು ಸಣ್ಣ ಪಕ್ಷಗಳು ಕಳೆದ ಸಲಕ್ಕೆ ಹೋಲಿಸಿದರೆ ಈ ಚುನಾವಣೆಯಲ್ಲಿ ಶೇ.7.9ರಷ್ಟು ಮತಗಳನ್ನು ಕಳೆದುಕೊಂಡಿವೆ. ಈ 7.9ರಲ್ಲಿ 5.5 ರಷ್ಟು ಮತಗಳು ನೇರ ಎನ್ ಡಿ ಎ ಗೆ ಹೋಗಿವೆ. ಮಹಾಘಟಬಂಧನ ತನ್ನ ವೋಟುಗಳನ್ನು ಕಳೆದುಕೊಂಡಿಲ್ಲ. ಇದೇ ಪಕ್ಷೇತರರು ಮತ್ತು ಸಣ್ಣ ಪಕ್ಷಗಳ ಖಾತೆಯ 2.4 ರಷ್ಟು ಮತಗಳು ಜನಸುರಾಜ್ ಪಕ್ಷಕ್ಕೆ ಸಂದಿವೆ. ಮಹಾಘಟಬಂಧನದಿಂದ 0.9ರಷ್ಟು ಮತಗಳು ಕೂಡ ಪ್ರಶಾಂತ್ ಕಿಶೋರ್ ಪಕ್ಷಕ್ಕೇ ಜಮೆಯಾಗಿವೆ. ಪಕ್ಷೇತರರು ಮತ್ತು ಸಣ್ಣ ಪಕ್ಷಗಳು ಧೂಳೀಪಟವಾಗಿರುವ ಕತೆಯಿದು ಎನ್ನುತ್ತಾರೆ ಹಿರಿಯ ಪತ್ರಕರ್ತ ಮತ್ತು ಚುನಾವಣಾ ವಿಶ್ಲೇಷಕ ಪ್ರಣೋಯ್ ರಾಯ್. 2024ರ ಲೋಕಸಭಾ ಚುನಾವಣೆಗಳಲ್ಲಿ ನಡೆದದ್ದೂ ಇದೇ ಎಂಬುದು ಅವರ ವಿಶ್ಲೇಷಣೆ.

ಗೆದ್ದೇತೀರಬೇಕೆಂದು ಪ್ರತಿಪಕ್ಷಗಳಿಗೆ ಬಗೆಬಗೆಯ ಖೆಡ್ಡಾಗಳನ್ನು ತೋಡಿತ್ತು ಬಿಜೆಪಿ. ಇವುಗಳ ಜೊತೆಗೆ ಆರ್.ಜೆ.ಡಿ. ಕಾಂಗ್ರೆಸ್ಸುಗಳು ತಮ್ಮ ಪಾಲಿನ ಖೆಡ್ಡಾಗಳನ್ನು ಕೂಡ ತೋಡಿಕೊಂಡಿದ್ದವು. ರಾಷ್ಟ್ರೀಯ ಜನತಾದಳ ಗಳಿಸಿರುವ ವೋಟುಗಳ ಸಂಖ್ಯೆ ಬಿಜೆಪಿಗಿಂತ ಹೆಚ್ಚು. ಆದರೆ ಈ ವೋಟುಗಳು ಸೀಟುಗಳಾಗಿ ಪರಿವರ್ತನೆ ಆಗುವಷ್ಟು ವ್ಯಾಪಕವಾಗಿ ಹಂಚಿಕೆಯಾಗಿಲ್ಲ. ರಾಷ್ಟ್ರೀಯ ಜನತಾದಳದ ಅಭ್ಯರ್ಥಿಗಳ ಗೆಲುವಿನ ಅಂತರ ದೊಡ್ಡದಾಗಿರುವ ಕಾರಣ ಹೆಚ್ಚು ಮತಗಳನ್ನು ಗಳಿಸಿದರೂ ಸೀಟುಗಳ ಸಂಖ್ಯೆಯಲ್ಲಿ ಏರಿಕೆ ಆಗಿಲ್ಲ.

ಚುನಾವಣೆಯ ಹೊಸ್ತಿಲಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆಸಿ ಅರ್ಧ ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲಾಯಿತು. ಹೀಗೆ ಹೊರಗಿಟ್ಟವರ ಸಂಖ್ಯೆಯು, 78 ಕ್ಷೇತ್ರಗಳಲ್ಲಿ ಎನ್ ಡಿ ಎ ಗೆಲುವಿನ ಅಂತರದ ಮತಗಳ ಸಂಖ್ಯೆಗೆ ಸಮನಾಗಿದೆ ಎಂದು  ದಿ ಕ್ವಿಂಟ್ ವರದಿ ಮಾಡಿದೆ. ಎಣಿಕೆಯಾದ ಒಟ್ಟು ಮತಗಳ ಸಂಖ್ಯೆಯು ಚಲಾಯಿಸಲಾದ ಒಟ್ಟು ಮತಗಳ ಸಂಖ್ಯೆಗಿಂತ ಹೆಚ್ಚು ಎಂಬ ಲೆಕ್ಕಾಚಾರಗಳು ದಿನ ಕಳೆದಂತೆ ಬೆಳಕಿಗೆ ಬರತೊಡಗಿವೆ.

bihar elections

ಲಕ್ಷಾಂತರ ಮತದಾರರನ್ನು ಸೇರಿಸಲಾಯಿತು. ಹೊರರಾಜ್ಯದವರು ಬಿಹಾರಕ್ಕೆ ತೆರಳಿ ಮತದಾನ ಮಾಡಿರುವ ಸೋಜಿಗಗಳು ಜರುಗಿವೆ. ಅನಿವಾಸಿ ಬಿಹಾರಿಗಳಿಗೆ ವಿಶೇಷ ರೈಲುಗಳನ್ನು ಏರ್ಪಡಿಸಿ ಅವರ ಬೆಂಬಲ ಖರೀದಿಸಿದೆ ಬಿಜೆಪಿ. ಈ ಎಲ್ಲ ಕಸರತ್ತುಗಳ ಜಂಟಿ ನಿರ್ಮಾಪಕರು ಬಿಜೆಪಿ ಮತ್ತು ಪಕ್ಷಪಾತಿ ಚುನಾವಣಾ ಆಯೋಗ. ನಿತೀಶ್ ನೇತೃತ್ವದ ಬಿಹಾರ ಸರ್ಕಾರ ಚುನಾವಣೆಗೆ ಕೆಲವೇ ದಿನಗಳಿರುವಾಗ ಒಂದೂವರೆ ಕೋಟಿ ಮಹಿಳೆಯರ ಖಾತೆಗಳಿಗೆ ತಲಾ ಹತ್ತು ಸಾವಿರ ರುಪಾಯಿಗಳ ಹಣ ವರ್ಗಾವಣೆ ಮಾಡಿತು. ಮಹಿಳಾ ರೋಜ್ಗಾರ್ ಯೋಜನೆಯ ಮೊದಲ ಕಂತು ಎಂದು ಅದನ್ನು ಕರೆಯಿತು. 25 ಲಕ್ಷಕ್ಕೂ ಹೆಚ್ಚು ಮಂದಿಯ ಪಿಂಚಣಿಯನ್ನು ದುಪ್ಪಟ್ಟಿಗೂ ಹೆಚ್ಚು ಏರಿಸಿತು. ಹೀಗೆ ಮತದಾರರ ಜೇಬುಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಹಣ ತುಂಬಲೆಂದೇ ಯೋಜನೆಗಳನ್ನು ಹುಟ್ಟಿ ಹಾಕಲಾಯಿತು. ಇಲ್ಲಿ ಖಾತೆಗಳಿಗೆ ತುಂಬಬೇಕಾದ ಹಣಕ್ಕೆ ತಕ್ಕಂತೆ ಯೋಜನೆಗಳನ್ನು ಹೊಂದಿಸಲಾಯಿತೇ ವಿನಾ, ಯೋಜನೆಗಳಿಗೆ ಹಣ ಹೊಂದಿಸಲಿಲ್ಲ. ಮಾಸಿಕ ತಲಾದಾಯ ಕೇವಲ ಐದು ಸಾವಿರ ರುಪಾಯಿಗಳಷ್ಟಿರುವ ಬಿಹಾರದ ಬಡಜನರ ಪಾಲಿಗೆ ಸರ್ಕಾರ ತಮ್ಮ ಖಾತೆಗಳಿಗೆ ಹಾಕಿದ ಹಣ ಭಾರೀ ಬೆಲೆಯುಳ್ಳದ್ದು ಎಂಬುದು ದಕ್ಷಿಣದ ರಾಜ್ಯಗಳಿಗೆ ಸುಲಭಕ್ಕೆ ಅರ್ಥವಾಗುವಂತಹುದಲ್ಲ. ಮೈತ್ರಿಕೂಟ ಸರ್ಕಾರದಿಂದ ಹಣದ ಸುರಿಮಳೆಯೇ ಆಯಿತೆಂಬ ಮಾತು ಅತಿರಂಜಿತವೇನೂ ಅಲ್ಲ.

ಜಾತಿಗಳ ಗೋಡೆಗಳನ್ನು ಮೀರಿ ಮತ ನೀಡುವ ಮಹಿಳೆಯರ ಬೃಹತ್ ಕ್ಷೇತ್ರ ಕಾಲಕ್ರಮೇಣ ಎಲ್ಲ ರೂಪು ರೇಖೆಗಳನ್ನು ತಳೆದು ತಲೆಯೆತ್ತಿದೆ. ಬಿಹಾರದಲ್ಲಿ ಇಂತಹ ಕ್ಷೇತ್ರವನ್ನು ಪಾನನಿಷೇಧ, ಶಾಲಾ ಬಾಲಕಿಯರಿಗೆ ಉಚಿತ ಸೈಕಲ್ ವಿತರಣೆ, ಶಿಕ್ಷಕಿಯರ ನೇಮಕಾತಿಯಲ್ಲಿ ಶೇ.35ರಷ್ಟು ಮೀಸಲಾತಿ, ಪಂಚಾಯಿತಿಗಳಲ್ಲಿ ಮೀಸಲಾತಿ, ಚುನಾವಣೆಯ ಹೊಸ್ತಿಲಿನಲ್ಲಿ ಒಂದೂವರೆ ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10 ಸಾವಿರ ರುಪಾಯಿಗಳ ವರ್ಗಾವಣೆ ಮಾಡಿ ಈ ಕ್ಷೇತ್ರವನ್ನು ಗಟ್ಟಿ ಮಾಡಿಕೊಂಡಿದ್ದಾರೆ ನಿತೀಶ್. ಮಧ್ಯಪ್ರದೇಶ ಮಹಾರಾಷ್ಟ್ರದಲ್ಲಿ ಇಂತಹುದೇ ಪ್ರಯತ್ನಗಳಿಂದಾಗಿ ಸೋಲುವ ಚುನಾವಣೆಗಳನ್ನೂ ಗೆದ್ದುಕೊಂಡಿದೆ ಬಿಜೆಪಿ. ಆಡಳಿತ ವಿರೋಧಿ ಭಾವನೆಯನ್ನು ಮೆಟ್ಟಿದೆ. ಜಾತಿಗಳ ಅಸ್ಮಿತೆಯ ರಾಜಕಾರಣವನ್ನು ತನ್ನ ರಾಜಕೀಯ ಬೆಳವಣಿಗೆಗೆ ದೊಡ್ಡ ಅಡ್ಡಿ ಎಂದು ಗುರುತಿಸಿಕೊಂಡಿದೆ ಬಿಜೆಪಿ. ಯೂಪಿ ಬಿಹಾರದಲ್ಲಿ ಯಾದವೇತರ ಓಬಿಸಿಗಳು, ಎಮ್.ಬಿ.ಸಿಗಳು ಕೈವಶವಾದರೂ ಅವುಗಳನ್ನು ಹಿಂದುತ್ವದ ಅಸ್ಮಿತೆಯ ದಾರಕ್ಕೆ ಪೋಣಿಸಿ ಬಂಧಿಸಲು ಶತಪ್ರಯತ್ನ ಮಾಡುತ್ತದೆ. ಆದರೆ ಯೋಜನೆಗಳ ಹೆಸರಿನಲ್ಲಿ ನಗದು ವರ್ಗಾವಣೆಯಿಂದ ಕೋಟ್ಯಂತರ ಮಹಿಳೆಯರನ್ನು ಜಾತಿಗಳ ಮುಲಾಜಿಲ್ಲದೆ ಹಿಡಿಯುವ ಹೆದ್ದಾರಿಯೇ ತೆರೆದಿದೆ.

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ನೆವದಲ್ಲಿ ಹತ್ತಾರು ಲಕ್ಷ ಹೆಸರುಗಳನ್ನು ಕೈಬಿಟ್ಟು, ಲಕ್ಷಾಂತರ ಹೆಸರುಗಳನ್ನು ಸೇರಿಸುವ ಹುನ್ನಾರಕ್ಕೆ ಬಿಹಾರದ ಮತದಾರರು ಸ್ಪಂದಿಸಿಲ್ಲ. 2024ರಲ್ಲಿ ನಡೆದ ಹರಿಯಾಣಾ ವಿಧಾನಸಭಾ ಚುನಾವಣೆಗಳಲ್ಲಿ 25 ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಕಳವು ಮಾಡಲಾಗಿದ್ದು, ಈ ಮೂಲಕ ಸರ್ಕಾರವನ್ನೇ ಅಪಹರಿಸಲಾಗಿದೆ ಎಂಬ ಅವರ ಆಪಾದನೆಯೂ ಈ ಚುನಾವಣೆಯಲ್ಲಿ ಗಾಳಿಪಾಲಾಗಿದೆ. ಈ ವಿಷಯದ ಆಳ ಅಗಲಗಳನ್ನು ಜನಸಾಮಾನ್ಯ ಮತದಾರರಿಗೆ ಮನವರಿಕೆ ಮಾಡುವಲ್ಲಿ ರಾಹುಲ್ ಗಾಂಧಿ ವಿಫಲರಾಗಿದ್ದಾರೆ. ತೀವ್ರ ಮತಪರಿಷ್ಕರಣೆಯ ಚುನಾವಣಾ ಹುನ್ನಾರವಾದ ಮತಗಳ್ಳತನದ ವಿಷಯವನ್ನು ರಾಹುಲ್ ಇತ್ತೀಚಿನ ದಿನಗಳಲ್ಲಿ ಬಲವಾಗಿ ಹಿಡಿದಿದ್ದರು. ಬಿಹಾರದಲ್ಲಿ ವೋಟು ಅಧಿಕಾರ ಯಾತ್ರೆಗೆ ಭಾರೀ ಬೆಂಬಲ ದೊರೆತಿತ್ತು. ಆದರೆ ಅದರ ಬಿಸಿ ಆರದಂತೆ ಕಾಪಾಡಿ ಬಳಸುವ ಚಾತುರ್ಯ ಕಾಂಗ್ರೆಸ್ ಗೆ ಇಲ್ಲದೆ ಹೋಯಿತು. ಚುನಾವಣೆಯಿಂದ ಚುನಾವಣೆಗೆ ಕಾಂಗ್ರೆಸ್ ಸೀಟು ಗಳಿಕೆ ಇಳಿಯುತ್ತಲೇ ಹೊರಟಿದೆ. ಇದೀಗ 19ರಿಂದ 6ಕ್ಕೆ ಕುಸಿದಿದೆ. ಕಳೆದ ಚುನಾವಣೆಗಳಲ್ಲಿ 70 ಸ್ಥಾನಗಳಿಗೆ ಸ್ಪರ್ಧಿಸಿ 19 ಗೆದ್ದಿತ್ತು. ಈ ಸಲ ಸ್ಪರ್ಧಿಸಿದ 61 ಸೀಟುಗಳಲ್ಲಿ ಕೇವಲ 6ನ್ನು ಗೆದ್ದಿದೆ. ಮೈತ್ರಿಕೂಟದ ಕೊರಳಿಗೆ ಜೋತು ಬಿದ್ದ ಉರುಳು ಕಲ್ಲಾಗಿ ಪರಿಣಮಿಸಿದೆ. ಪಕ್ಷವನ್ನು ಪುನಃ ಬೇರುಮಟ್ಟದಿಂದ ಕಟ್ಟಬೇಕಿದೆ. ಆರ್.ಜೆ.ಡಿ.ಯ ಬೆನ್ನೇರಿದ ಕೂಸುಮರಿಯಾಗದೆ, ಸ್ವತಂತ್ರವಾಗಿ ಸ್ಪರ್ಧಿಸಿ ತನ್ನ ನೆಲೆಯನ್ನು ಕಂಡುಕೊಳ್ಳಬೇಕಿದೆ.

ತನ್ನ ಮಿತ್ರಪಕ್ಷಗಳನ್ನು ಭಕ್ಷಿಸಿ ಕಾಲಕ್ರಮೇಣ ಅವುಗಳ ರಾಜಕೀಯ ಆವರಣವನ್ನು ತಾನೇ ಆಕ್ರಮಿಸುವ ಆಕ್ರಮಣಕಾರಿ ರಾಜಕಾರಣ ಬಿಜೆಪಿಯದು. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳು ಈ ಮಾತಿಗೆ ಉದಾಹರಣೆ.

Vote chori 2

ನಿತೀಶ್ ಅವರ ಸಂಯುಕ್ತ ಜನತಾದಳ ಈ ಚುನಾವಣೆಯಲ್ಲಿ ಮರುಹುಟ್ಟನ್ನೇ ಪಡೆದು ತನ್ನ ಪತನದ ಅವಧಿಯನ್ನು ಮುಂದೂಡಿದೆ. ಈಗಾಗಲೆ ಬಿಹಾರ ಎನ್ ಡಿ ಎ ಕೂಟದ ದೊಡ್ಡಣ್ಣನಾಗಿರುವ ಬಿಜೆಪಿ, ನಿತೀಶ್ ಅವರನ್ನು ನುಂಗಲು ಸಮಯ ಕಾಯುತ್ತಿದೆ. ಅಧಿಕಾರದಲ್ಲಿ ಉಳಿಯಲು ಸಂಯುಕ್ತ ಜನತಾದಳವು ಬಿಜೆಪಿಯ ಮರ್ಜಿ ಕಾಯಬೇಕಿದೆಯೇ ವಿನಾ ಬಿಜೆಪಿಯು ಜನತಾದಳದ ಮರ್ಜಿಯಲ್ಲಿ ಇಲ್ಲ. ಫಲಿತಾಂಶಗಳ ಗಣಿತವು ಜನತಾದಳವನ್ನು ಬಿಜೆಪಿಗೆ ಕಟ್ಟಿ ಹಾಕಿವೆ. ಆದರೆ ಬಿಜೆಪಿ ಮನಸ್ಸು ಮಾಡಿದರೆ ಸಂಯುಕ್ತ ಜನತಾದಳವನ್ನು ಹೊರಗಿಟ್ಟು ಸರ್ಕಾರ ರಚನೆಯ ದುಸ್ಸಾಹಸಕ್ಕೆ ಕೈ ಹಾಕಬಹುದು. ಈ ಕಸರತ್ತಿನಲ್ಲಿ ಯಶಸ್ವಿ ಆಗಲೂ ಬಹುದು. ಕೇಂದ್ರದಲ್ಲಿ ನಿತೀಶ್ ಜನತಾದಳ ಮೋದಿ ಸರ್ಕಾರಕ್ಕೆ ಬೆಂಬಲ ನೀಡಿದೆ ಹೌದು. ಆದರೆ ನಿತೀಶ್ ಜನತಾದಳದ ಒಳಗೆ ತನ್ನ ಜನರನ್ನು ಸ್ಥಾಪಿಸಿದೆ ಬಿಜೆಪಿ. ಅಗತ್ಯ ಬಿದ್ದಾಗ ಬಿಜೆಪಿಗೆ ಕೈ ಎತ್ತುವ ಜನರಿವರು. ಈ ಕಟುಸತ್ಯ ನಿತೀಶ್ ಗೂ ಗೊತ್ತಿದೆ. ತಮ್ಮ ಜಾಗವನ್ನು ತುಂಬಬಹುದಾದ ನಾಯಕತ್ವವನ್ನು ನಿತೀಶ್ ಬೆಳೆಸಿಲ್ಲ. ಮುಪ್ಪು ಅಡರಿರುವ ನಿತೀಶ್ ಇಂದಲ್ಲ ನಾಳೆ ತೆರೆಮರೆಗೆ ಸರಿಯಲೇಬೇಕು. ಬಿಜೆಪಿ ಅವಸರದಲ್ಲೇನೂ ಇಲ್ಲ, ಅಂತಹ ದಿನಗಳನ್ನು ತಾಳ್ಮೆಯಿಂದ ಎದುರು ನೋಡುವ ಸೂಚನೆಯಿದೆ.

ಇದನ್ನೂ ಓದಿ ಈ ದಿನ ಸಂಪಾದಕೀಯ | ಬಿಹಾರದಲ್ಲಿ ಗೆದ್ದಿದ್ದು ಜನತಂತ್ರವವೋ ಅಥವಾ ಮತಗಳ್ಳತನವೋ?

ಕೂಸುಮರಿಯಾಗಿ ಮಿತ್ರಪಕ್ಷಗಳ ಬೆನ್ನೇರುವ ಬಿಜೆಪಿ, ಕಡೆಗೆ ಅಂತಹ ಮಿತ್ರಪಕ್ಷಗಳನ್ನೇ ಕೂಸುಮರಿ ಮಾಡಿ ಹೊತ್ತುಕೊಳ್ಳುತ್ತದೆ. ಕಾಲ ಕೂಡಿ ಬಂದಾಗ ಶಿವಸೇನೆಯನ್ನು ಸೀಳಿದಂತೆ ಎರಡು ಹೋಳಾಗಿ ಸೀಳಿ, ಒಂದರೊಂದಿಗೆ ಕೈಕಲೆಸಿ ಸರ್ಕಾರ ರಚಿಸುತ್ತದೆ.  ತಾನು ಬಲಿತಾಗ ಅವುಗಳನ್ನು ಸಾರಾಸಗಟಾಗಿ ಮೂಲೆಗುಂಪು ಮಾಡುತ್ತದೆ. ಮಹಾರಾಷ್ಟ್ರ ಮತ್ತು ಒಡಿಶಾ ಈ ಮಾತಿಗೆ ಇತ್ತೀಚಿನ ನಿದರ್ಶನಗಳು.

ಬಿಜೆಪಿಯೊಂದಿಗೆ ದೋಸ್ತಿಯ ಕುಸ್ತಿಯಾಡಿ, ಕಡೆಗೆ ನೆಲಕಚ್ಚಿರುವ ಬಿಜು ಜನತಾದಳದ ನವೀನ್ ಪಟ್ನಾಯಕ್ ಪತನ ನಿತೀಶ್ ಕಣ್ಣ ಮುಂದಿದೆ. ಹಾಗೆಯೇ ದೋಸ್ತಿ ಮಾಡಿದ್ದು, ಈಗ ಮತ್ತೆ ಬಿಜೆಪಿಯನ್ನು ಕೂಸುಮರಿಯಂತೆ ಹೊತ್ತುಕೊಂಡಿರುವ ಅಣ್ಣಾ ಡಿಎಂಕೆ ಮತ್ತು ಹಳೆಯ ಪಾದವೇ ಗತಿಯೆಂದು ಬಿಜೆಪಿಗೆ ಶರಣಾಗಿರುವ ಚಂದ್ರಬಾಬು ನಾಯ್ಡು ಉದಾಹರಣೆಗಳಿವೆ.

ಮಹಾರಾಷ್ಟ್ರದ ಶಿವಸೇನೆಯಂತೆ ಬಿಹಾರದ ಸಂಯುಕ್ತ ಜನತಾದಳ ಕೂಡ ಒಂದು ಕಾಲಕ್ಕೆ ಬಿಜೆಪಿ ಮೈತ್ರಿಕೂಟದ ದೊಡ್ಡಣ್ಣ ಆಗಿತ್ತು. ಕಾಲಕ್ರಮೇಣ ದೊಡ್ಡಣ್ಣನ ಜಾಗವನ್ನು ಬಿಜೆಪಿ  ಆಕ್ರಮಿಸಿತು. ಶಿವಸೇನೆಗೆ ಆದ ಗತಿಯೇ ಸಂಯುಕ್ತ ಜನತಾದಳಕ್ಕೂ ಒದಗಿತು. ಮುಂದಿನ ಚಿತ್ರನಾಟಕದ ಊಹೆ ಕಷ್ಟವೇನಲ್ಲ.

ರಾಜಕಾರಣ ಕುರಿತ ದೇಶಾವರಿ ಚರ್ಚೆ ನಡೆದಾಗ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳನ್ನು ಒಟ್ಟೊಟ್ಟಿಗೆ ಪ್ರಸ್ತಾಪಿಸುವ ರೂಢಿಯುಂಟು. ಜನಸಂಖ್ಯೆ, ಹಿಂದುಳಿದಿರುವಿಕೆ, ಊಳಿಗಮಾನ್ಯ ವ್ಯವಸ್ಥೆ, ದಟ್ಟ ಜಾತಿ ರಾಜಕಾರಣ ಎರಡೂ ರಾಜ್ಯಗಳ ಸಮಾನ ಅಂಶಗಳು. ಹೋಲಿಕೆ ಇಲ್ಲಿ ಅಂತ್ಯಗೊಳ್ಳುತ್ತದೆ.

Modi 78

ವಿಶೇಷವಾಗಿ ಕಳೆದ ಎರಡು ದಶಕಗಳಲ್ಲಿ ಉತ್ತರಪ್ರದೇಶದಲ್ಲಿ ಏಕಪಕ್ಷ ಸರ್ಕಾರಗಳು ಅಧಿಕಾರ ನಡೆಸಿವೆ. ಹಾಲಿ ಭಾರತೀಯ ಜನತಾಪಾರ್ಟಿಯ ಸರ್ಕಾರ ದೈತ್ಯಜನಮತ ಹೊಂದಿದೆ. ಬಿಹಾರ ರಾಜಕಾರಣಕ್ಕೆ ಸಮ್ಮಿಶ್ರ ಸರ್ಕಾರಗಳು ಇಲ್ಲವೇ ಮೈತ್ರಿಕೂಟಗಳ ಸರ್ಕಾರಗಳು- ಮೈತ್ರಿಕೂಟ ರಾಜಕಾರಣ ಅನಿವಾರ್ಯ ಆಗಿದೆ. ಬಿಜೆಪಿಯ ಬೆಂಬಲಿಗ ಮೇಲ್ಜಾತಿಗಳಿಗೆ ಬಿಹಾರದಲ್ಲಿ ಜನಸಂಖ್ಯಾಬಲವಿಲ್ಲ. ಉತ್ತರಪ್ರದೇಶದಲ್ಲಿ ಅವುಗಳ ಜನಸಂಖ್ಯೆ ಗಣನೀಯ. ಬಿಹಾರ ರಾಜಕಾರಣ ಹೀಗೆ ಹಲವು ಪಕ್ಷಗಳಲ್ಲಿ ಹಂಚಿಹೋಗಿರುವ ಕಾರಣವಾಗಿ ಮೈತ್ರಿ ರಾಜಕಾರಣ ಇಲ್ಲಿ ಬೇರು ಬಿಟ್ಟಿದೆ. ರಾಷ್ಟ್ರೀಯ ಜನತಾದಳ, ಸಂಯುಕ್ತ ಜನತಾದಳ ಹಾಗೂ ಬಿಜೆಪಿ ಈ ರಾಜಕಾರಣದ ಮೂರು ಮುಖ್ಯ ಪಾತ್ರಧಾರಿಗಳು. ಈ ಪೈಕಿ ಇಬ್ಬರು ಒಂದಾದರೆ ಮೂರನೆಯವರು ತಿಣುಕಬೇಕಾಗುವ ಸ್ಥಿತಿ. ಸಂಯುಕ್ತ ಜನತಾದಳ ಮತ್ತು ಬಿಜೆಪಿ ಮೈತ್ರಿಯು ಲಾಲೂಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳವನ್ನು ಕಳೆದ 20 ವರ್ಷಗಳ ಕಾಲ ಅಧಿಕಾರದಿಂದ ದೂರ ಇರಿಸಿದೆ. ಹಾಲಿ ಚುನಾವಣೆಯಲ್ಲಿ ಹಲವಾರು ಆತಂಕಗಳ ನಡುವೆಯೂ ಬಿಜೆಪಿ-ಸಂಯುಕ್ತ ಜನತಾದಳ ಗೆಲುವಿನ ಗೆರೆಯತ್ತ ತೆವಳುವುದು ಸಾಧ್ಯವಾಗಿದ್ದರೆ ಅದಕ್ಕೆ ಬಿಜೆಪಿ-ಸಂಯುಕ್ತ ಜನತಾದಳದ ಮೈತ್ರಿಯೂ ಕಾರಣ. ಈ ಮೈತ್ರಿಯ ಹಿಂದೆ ಕೆಲಸ ಮಾಡುವ ವ್ಯಾಪಕ ತಳಹದಿಯ ಪ್ರಬಲ ಜಾತಿ ಸಮೀಕರಣವೂ ಕಾರಣ.

WhatsApp Image 2025 11 17 at 4.03.10 PM
ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...