ಮೋದಿ ಮತ್ತು ಬಿಜೆಪಿಯ ಚುನಾವಣಾ ಪ್ರಾಬಲ್ಯ ವಿವಿಧ ರಾಜ್ಯಗಳಲ್ಲಿ ಅದರ ಪುನಾರಾವರ್ತಿತ ಗೆಲುವುಗಳ ಹಿಂದೆ ಆರ್‌ಎಸ್‌ಎಸ್ ಮಾಡಿರುವ ರಹಸ್ಯ ಕೆಲಸವನ್ನು “ದಿ ನ್ಯೂಯಾರ್ಕ್ ಟೈಮ್ಸ್” ಲೇಖನ ಹೇಳುತ್ತದೆ. ಈ ಲೇಖನದಲ್ಲಿ ‘ಮೋದಿ ಅಧಿಕಾರದಲ್ಲಿ ಇಲ್ಲದಿದ್ದರೂ, ಸಂಘಪರಿವಾರವು ರಾಜಕೀಯವಾಗಿ ಹಾಗೂ ಸಾಂಸ್ಕೃತಿಕವಾಗಿ ಹೊಂದಿರುವ ತನ್ನ ಪ್ರಾಬಲ್ಯವನ್ನು’ ವಿವರಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರು 2025ರ ಸ್ವಾತಂತ್ರ್ಯ ದಿನಾಚರಣೆಯಂದು (ಆ.15) ಕೆಂಪು ಕೋಟೆಯ ಮೇಲೆ ನಿಂತು ಮಾತನಾಡುವಾಗ “ಆರ್‌ಎಸ್‌ಎಸ್ ವಿಶ್ವದ ಅತಿದೊಡ್ಡ ಎನ್‌ಜಿಒ” ಎಂದು ಬಣ್ಣಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ವೇಳೆ ಮೋದಿ ಅವರ ಮಾತು ಸಂಘಕ್ಕೆ ಇರುವ ರಾಜಕೀಯದ ಅಜೆಂಡಾವನ್ನು ಬಯಲು ಮಾಡಿದೆ.
ಮೋದಿ ಮತ್ತು ಆರ್‌ಎಸ್‌ಎಸ್ ನಡುವಿನ ಸಂಬಂಧವು ಎಲ್ಲರಿಗೂ ಗೊತ್ತಿರುವಂಥದ್ದೆ. ಆದರೆ ಇದನ್ನು ಮೀರಿ ಜಗತ್ತು ಆರ್‌ಎಸ್‌ಎಸ್ ಅನ್ನು ಹೇಗೆ ನೋಡುತ್ತಿದೆ ಎಂಬುದು ಸದ್ಯ ಚರ್ಚೆಯಾಗುತ್ತಿದೆ. ಅಂತಾರಾಷ್ಟ್ರೀಯ ಪತ್ರಿಕೆಯಾದ “ದಿ ನ್ಯೂಯಾರ್ಕ್ ಟೈಮ್ಸ್” ತನ್ನ ಕವರ್ ಪೇಜ್ ನಲ್ಲಿ ಆರ್‌ಎಸ್‌ಎಸ್ ಜೊತೆಗಿನ ಪ್ರಧಾನಿ ನರೇಂದ್ರ ಮೋದಿಯ ಸಂಬಂಧವನ್ನು ಧೀರ್ಘವಾಗಿ ವಿಶ್ಲೇಷಣೆ ಮಾಡಿದೆ. “ಹಿನ್ನೆಲೆಯಿಂದ ಮುನ್ನೆಲೆಗೆ : ಹಿಂದೂ ಬಲಪಂಥೀಯರು ಭಾರತವನ್ನು ಹೇಗೆ ಪುನರ್‌ರೂಪಿಸಿದರು” (From the Shadows to Power: How the Hindu Right Reshaped India) ಎಂಬ ಲೇಖನವನ್ನು ಮುಜೀಬ್ ಮಶಲ್ ಮತ್ತು ಹರಿಕುಮಾರ್ ಬರೆದಿದ್ದಾರೆ.
ಚಿಕ್ಕ ಹುಡುಗನಾಗಿದ್ದಾಗಿನಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಕಾರ್ಯಕರ್ತನಾಗಿ ಬೆಳೆದ ಮೋದಿ ಇಂದು ದೇಶದ ಪ್ರಧಾನಿ ಹುದ್ದೆಗೆ ಏರುವಲ್ಲಿ ಸಂಘದ ಪಾತ್ರ ಬಹಳಷ್ಟಿದೆ. ತನ್ನ 11 ವರ್ಷಗಳ ‘ಪ್ರಧಾನಿ’ ಅಧಿಕಾರಾವಧಿಯಲ್ಲಿ ಮೋದಿ ತೀವ್ರವಾಗಿ ಬಲಪಂಥೀಯ ಸಿದ್ಧಾಂತವನ್ನು ಜನರ ಮೇಲೆ ಹೇರುತ್ತ ಬಂದರು. ಕೋಮುವಾದ, ಹಿಂಸೆ, ಜಾತ್ಯತೀತ ವ್ಯವಸ್ಥೆಯನ್ನು ದರ್ಬಲಗೊಳಿಸಿ ಅದರ ಮೇಲೆ ವರ್ಣ ವ್ಯವಸ್ಥೆಯನ್ನು ಹೇರುವ ದುರುದ್ದೇಶ ಹೊಂದಿರುವ ಸಂಘಪರಿವಾರ ಹೇಗೆ ತಾನೇ ವಿಶ್ವದ ಅತಿದೊಡ್ಡ ಎನ್‌ಜಿಒ ಆಗುತ್ತದೆ ಎಂಬ ಪ್ರಶ್ನೆ ಹುಟ್ಟಲೇಬೇಕು.
ಇದನ್ನು ಓದಿದ್ದೀರಾ? : RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ, ಸಂವಿಧಾನ ಮುಂದೆ ಯಾರೂ ದೊಡ್ಡವರಲ್ಲ: ಪ್ರಿಯಾಂಕ್ ಖರ್ಗೆ
ಅದೇ ರೀತಿಯಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಲೇಖನದಲ್ಲಿರುವ ವಿಷಯವು ಬಹಳ ಗಂಭೀರವಾದ ಆಲೋಚನೆಗೆ ಓದುಗರನ್ನು ಒಡ್ಡುತ್ತದೆ. ಆರ್‌ಎಸ್‌ಎಸ್ ಕುರಿತ ಬರಹಕ್ಕಾಗಿ ದಿ ನ್ಯೂಯಾರ್ಕ್ ಟೈಮ್ಸ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನೇಕ ನಾಯಕರೊಂದಿಗೆ ಮಾತನಾಡಿ, ಸಂದರ್ಶಿಸಿದೆ. ಮೋದಿಯವರು ಪ್ರಧಾನಿ ಹುದ್ದೆಗೆ ಹೇರಿದಾಗಿನಿಂದ ಭಾರತೀಯ ಸಮಾಜವನ್ನು ಆರ್‌ಎಸ್‌ಎಸ್ ಹೇಗೆ ಬದಲಾಯಿಸಿದೆ ಎಂದು ಚರ್ಚಿಸಲಾಗಿದೆ.

“1930 ಮತ್ತು 1940ರ ದಶಕಗಳಲ್ಲಿನ ಆರ್‌ಎಸ್‌ಎಸ್ ನಾಯಕರೆಲ್ಲರೂ ಯುರೋಪಿನ ಫ್ಯಾಸಿಸ್ಟ್ ಪಕ್ಷಗಳಿಂದ ಸ್ಫೂರ್ತಿ ಪಡೆದಿದ್ದಾರೆ. ಮಹಾತ್ಮ ಗಾಂಧಿಯವರ ಹತ್ಯೆಯ ನಂತರ ಪದೇ ಪದೇ ನಿಷೇಧಕ್ಕೆ ಒಳಪಟ್ಟ ಸಂಘಟನೆ, ಈಗ ವಿಶ್ವದ ಅತಿದೊಡ್ಡ ಶಕ್ತಿಶಾಲಿ ಬಲಪಂಥೀಯ ಸಂಘವಾಗಿ ಬೆಳೆದು ನಿಂತಿದೆ” ಎಂದು ಈ ಲೇಖನದಲ್ಲಿ ಉಲ್ಲೇಖಿಸಲಾಗಿದೆ.
“ಒಂದು ದಶಕಕ್ಕೂ ಹೆಚ್ಚು ಕಾಲ ಪ್ರಧಾನಿಯಾಗಿರುವ ನರೇಂದ್ರ ಮೋದಿ, ಕೆಂಪು ಕೋಟೆಯ ಮೇಲೆ ನಿಂತು ರಾಷ್ಟ್ರ ನಿರ್ಮಾಣದಲ್ಲಿ ಆರ್‌ಎಸ್‌ಎಸ್ ಪಾತ್ರವನ್ನು ಹೊಗಳುವ ಜೊತೆಗೆ, ರಹಸ್ಯದಿಂದ ಕೆಲಸ ಮಾಡುತ್ತಿದ್ದ ಸಂಘಟನೆಯನ್ನು ಬಹಿರಂಗವಾಗಿಯೇ ರಾಜಕೀಯದಲ್ಲಿ ಒಪ್ಪಲಾಗುತ್ತಿದೆ. ನಾನು(ಮೋದಿ) ಸಹ ಸ್ವಯಂ ಸೇವಕ ಎಂದು ಹೇಳುವ ಮೂಲಕ ಆರ್‌ಎಸ್‌ಎಸ್‌ಗಿರುವ ರಾಜಕೀಯ ಸ್ವೀಕಾರಾರ್ಹತೆಯನ್ನು ಹಾಗೂ ಭಾರತದ ಜಾತ್ಯಾತೀತ ಗಣರಾಜ್ಯವನ್ನು ತನ್ನ ಕಪಿಮುಷ್ಟಿಯಲ್ಲಿ ಹಿಡಿದು, ಹಿಂದೂ ರಾಷ್ಟ್ರವಾಗಿ ನಿರ್ಮಿಸಲು ಕಂಡಿದ್ದ ಕನಸನ್ನು ನನಸಾಗಿಸುವ ಹತ್ತಿರದಲ್ಲಿದೆ” ಎಂದು ಲೇಖನ ಹೇಳುತ್ತದೆ.
“ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಕೆಳಗಿಳಿದ ನಂತರವೂ ಆರ್‌ಎಸ್‌ಎಸ್ ಪ್ರಬಲವಾಗಿಯೇ ಉಳಿಯಲಿದೆ. ಭಾರತದ ತುಂಬಾ ತನ್ನ ಆಳವಾದ ಬೇರುಗಳನ್ನು ಬಿಟ್ಟಿದೆ. ಇದು ಸಮಾಜದಲ್ಲಿರುವ ಸರ್ಕಾರ, ನ್ಯಾಯಾಲಯ, ಪೊಲೀಸ್, ಮಾಧ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳೊಳಗೂ ತನ್ನ ಅಂಗಸಂಸ್ಥೆಗಳನ್ನು ನುಸುಳಲು ಬಿಟ್ಟು ಪ್ರಬಲ ಶಕ್ತಿಯಾಗಿ ರೂಪುಗೊಂಡಿದೆ. ಸಮಾಜದ ಎಲ್ಲಾ ಸ್ತರಗಳಲ್ಲಿಯೂ ಪ್ರಮುಖ ಸದಸ್ಯರನ್ನು ಇರಿಸಿ ರಾಜಕೀಯವಾಗಿ ರಾಷ್ಟ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಕಳೆದ ಹಲವು ದಶಕಗಳಲ್ಲಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್‌ಎಸ್‌ಎಸ್ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕವಾಗಿ ಮುನ್ನೆಲೆಗೆ ಬರುತ್ತಿದೆ. ಅದರ ಸದಸ್ಯರು ಮತ್ತು ಸಂಘಟನೆಯ ಪ್ರಭಾವ ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿದೆ” ಎಂಬುದು ಲೇಖನ ಧ್ವನಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆಗಳ ಕಾರ್ಯಕರ್ತರು ನಡೆಸಿದ ಕೋಮುವಾದಿ ಪ್ರಕರಣಗಳನ್ನು ದಿ ನ್ಯೂಯಾರ್ಕ್ ಟೈಮ್ಸ್ ಗಂಭೀರವಾಗಿ ಎತ್ತಿ ಹಿಡಿಯುತ್ತದೆ. “ಕ್ರಿಸ್ಮಸ್ ಸಂದರ್ಭದಲ್ಲಿ ಹಿಂದೂ ಸಂಘಟನೆಗಳು ಚರ್ಚ್‌ಗಳಿಗೆ ನುಗ್ಗಿ ಗಲಾಟೆ ಮಾಡಿದ್ದು, ಮಸೀದಿ ಹೊರಗೆ ಡಿಜೆ ಸಂಗೀತ ಹಾಕುವುದು ಹಾಗೂ ಹನುಮಾನ್ ಚಾಲೀಸ್ ಪಠಿಸೋದು ಸಾಮಾನ್ಯ ಎಂಬಂತೆ ಆಗಿದೆ. ಹಿಂದೂ ಜಾಗರಣಾ ವೇದಿಕೆಯವರು ಚರ್ಚ್‌ಗಳಲ್ಲಿ ಅಥವಾ ಮಸೀದಿಗಳ ಹೊರಗೆ ಇಂತಹ ದ್ವೇಷ ಕೃತ್ಯಗಳನ್ನು ಮಾಡಿದಾಗ, ಅದನ್ನು ‘ಆರ್‌ಎಸ್‌ಎಸ್‌ನ ಶ್ರೇಷ್ಠತೆ’ ಅಂತಲೂ ಭಾವಿಸಲಾಗುತ್ತದೆ” ಎಂದು ಲೇಖನ ಉಲ್ಲೇಖಿಸಿದೆ.
“ಆರ್‌ಎಸ್‌ಎಸ್ ತನ್ನ ರಾಜಕೀಯ ಪ್ರಾಬಲ್ಯದಿಂದ ಭಾರತದಲ್ಲಿರುವ 140 ಕೋಟಿ ಜನಸಂಖ್ಯೆಯಲ್ಲಿ ಧಾರ್ಮಿಕ ದ್ವೇಷವನ್ನು ಬಿತ್ತುತ್ತಿದೆ. ಭಾರತದಲ್ಲಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ವಿದೇಶಿ ಆಕ್ರಮಣಕಾರಿಗಳು ಎಂದು ಬಿಂಬಿಸಲಾಗುತ್ತಿದೆ” ಎಂದು ಲೇಖನದಲ್ಲಿ ಹೇಳಲಾಗಿದೆ.
“1980ರ ದಶಕದಲ್ಲಿ ಮೋದಿ ಸಂಘಟಕರಾಗಿ ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡು, ರಾಜಕೀಯವಾಗಿ ಅವಕಾಶ ಮಾಡಿಕೊಟ್ಟ ನಂತರ ವಿದ್ವಂಸಕಾರಿ ನದಿಯ ರೀತಿಯಲ್ಲಿ ಬೆಳೆದಿದ್ದಾರೆ. ಆ ನದಿಯಿಂದ ಹರಿಯುವ ಸಾವಿರಾರು ಹೊಳೆಗಳು ಭಾರತದ ಎಲ್ಲಾ ಮೂಲೆಗಳಲ್ಲಿಯೂ ನುಸುಳಿವೆ. ಸೇವೆ, ಸಮರ್ಪಣೆ, ಸಂಘಟನೆ ಮತ್ತು ಶಿಸ್ತು ಆರ್‌ಎಸ್‌ಎಸ್ ನ ವಿಶಿಷ್ಟ ಲಕ್ಷಣಗಳಾಗಿವೆ ಎಂದು ಮೋದಿ ಬಣ್ಣಿಸಿದ್ದಾರೆ. 10 ಕೋಟಿಗಿಂತಲೂ ಹೆಚ್ಚಿನ ಸದಸ್ಯರನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಸಂಘಟನೆ ವಿದ್ಯಾರ್ಥಿ ವಿಭಾಗ, ಕಾರ್ಮಿಕ ವಿಭಾಗ, ರೈತ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಮತ್ತು ದತ್ತಿ ಸಂಸ್ಥೆಗಳಲ್ಲೂ ಸೇರಿಕೊಂಡಿದೆ” ಎಂದು ಲೇಖನದಲ್ಲಿ ವಿವರಿಸಲಾಗಿದೆ.

“ಮೋದಿ ಮತ್ತು ಬಿಜೆಪಿಯ ಚುನಾವಣಾ ಪ್ರಾಬಲ್ಯ ವಿವಿಧ ರಾಜ್ಯಗಳಲ್ಲಿ ಅದರ ಪುನಾರಾವರ್ತಿತ ಗೆಲುವಿನ ಹಿಂದೆ ಆರ್‌ಎಸ್‌ಎಸ್ ಮಾಡಿರುವ ರಹಸ್ಯ ಕೆಲಸವನ್ನು” ಈ ಲೇಖನ ಹೇಳುತ್ತದೆ.
“ಇತ್ತೀಚಿನ ವರ್ಷಗಳಲ್ಲಿ ಆರ್‌ಎಸ್‌ಎಸ್ ನಾಯಕರು ಸಾರ್ವಜನಿಕವಾಗಿ ಕಾಣಿಸತೊಡಗಿದ್ದಾರೆ. ಅದೇ ರೀತಿಯಲ್ಲಿ ಸಾರ್ವಜನಿಕ ವಲಯಗಳಲ್ಲಿ ಮಾನವೀಯತೆ ಕಳೆದು ಹೋಗುತ್ತಿದೆ. ಯುವ ಪೀಳಿಗೆಯು ತೀವ್ರವಾದ ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುತ್ತಿದೆ. ಅಲ್ಪಸಂಖ್ಯಾತರ ವಿರುದ್ಧದ ಹಿಂಸೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಪ್ರಚೋದಿಸಲಾಗುತ್ತಿದೆ” ಎಂದು ಲೇಖನದಲ್ಲಿ ಹೇಳಲಾಗಿದೆ.
“ಕ್ರೈಸ್ತ ಧರ್ಮಕ್ಕೆ ಮತಾಂತರ ಆರೋಪದ ಮೇಲೆ ಚರ್ಚುಗಳಿಗೆ ನುಗ್ಗಿ ಗಲಾಟೆ ಮಾಡಿದ್ದು, ಕ್ರಿಸ್ಮಸ್ ಆಚರಣೆಗಳ ವೇಳೆ ಗಲಭೆ ಎಬ್ಬಿಸಿದ್ದು, ಮುಸ್ಲಿಮರ ಸಮಾಧಿಗಳನ್ನು ಪುಡಿಗಟ್ಟಿದ್ದು, ತಿನ್ನುವ ಆಹಾರದ ವಿಚಾರದಲ್ಲಿ ದ್ವೇಷವನ್ನು ಬಿತ್ತುವುದು, ಹಸುಗಳನ್ನು ಕೊಲ್ಲಲು ಸಾಗಿಸುತ್ತಿದ್ದಾರೆ ಎಂಬ ಆರೋಪಕ್ಕೆ ಮುಸ್ಲಿಮರನ್ನು ಗುರಿಯಾಗಿಸಿ ಹತ್ಯೆ ಮಾಡಿದ್ದು” ಲೇಖನ ಎತ್ತಿ ಹಿಡಿಯುತ್ತದೆ.
“ಧಾರ್ಮಿಕ ಮತಾಂಧತೆ ದ್ವೇಷವನ್ನು ಬಿತ್ತುವ ಎಲ್ಲ ವಿಚಾರಗಳನ್ನು ಇತಿಹಾಸದ ಪುಟಗಳಿಂದ ವಾಟ್ಸ್ಯಾಪ್ ಸಂದೇಶದ ಗುಂಪುಗಳವರೆಗೆ, ಟಿವಿ ಚರ್ಚೆಗಳಿಂದ ದೇಶದ ನ್ಯಾಯಾಲಯದ ಕೊಠಡಿಗಳವರೆಗೆ ಹಬ್ಬಿರುವ” ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್ ನ ಈ ಲೇಖನ ಓದುಗರನ್ನು ಗಂಭೀರ ಆಲೋಚನೆ ಒಡ್ಡುತ್ತದೆ.
“2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ‘ಬಿಜೆಪಿ’ಗೆ ಆರ್‌ಎಸ್‌ಎಸ್ ಅಗತ್ಯವಿಲ್ಲ ಎಂದು ಜೆ.ಪಿ.ನಡ್ಡಾ ಹೇಳಿದ್ದರು. ಹೇಳಿಕೆಯ ನಂತರ ಬಿಜೆಪಿ ಬಹುಮತವನ್ನೇ ಕಳೆದುಕೊಂಡು, ಬೇರೆ ಪಕ್ಷಗಳ ಜೊತೆ ಸೇರಿ ಸರ್ಕಾರ ರಚಿಸಬೇಕಾಯಿತು. ಅಲ್ಲಿಯವರೆಗೂ ರಹಸ್ಯವಾಗಿ ತನ್ನ ಕೆಲಸವನ್ನು ಮಾಡುತ್ತಿದ್ದ ಆರ್‌ಎಸ್‌ಎಸ್, ಆ ನಂತರ ಸಾರ್ವಜನಿಕವಾಗಿಯೇ ಕಾಣಿಸಿಕೊಳ್ಳಲು ಶುರು ಮಾಡಿತು. ಆರ್‌ಎಸ್‌ಎಸ್ ಇಲ್ಲದೆ ಬಿಜೆಪಿ ಇಲ್ಲ ಎಂಬುದನ್ನು ಅರಿತ ಮೋದಿ, ಸ್ವಾತಂತ್ರ್ಯ ದಿನಾಚರಣೆಯ ವೇಳೆ ‘ಆರ್‌ಎಸ್‌ಎಸ್ ರಾಷ್ಟ್ರ ನಿರ್ಮಾಣದಲ್ಲಿ ಬಹು ದೊಡ್ಡ ಪಾತ್ರ ವಹಿಸಿದೆ ಎನ್ನುವುದು, ವಿಶ್ವದ ಅತಿದೊಡ್ಡ ಎನ್‌ಜಿಒ ಎಂದು ಬಣ್ಣಿಸಿರುವುದು’ ಚರ್ಚಾರ್ಹ” ಎಂಬುದನ್ನು ಲೇಖನದಲ್ಲಿ ಹೇಳಲಾಗಿದೆ.
“ಆರ್‌ಎಸ್‌ಎಸ್ ಇಲ್ಲಿಯವರೆಗೂ ಒಂದು ಲಿಖಿತ ದಾಖಲೆಯನ್ನು ಹೊಂದಿಲ್ಲ. ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿದ್ದೇವೆ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್, ಯಾವುದೇ ದಾಖಲೆ ಇಲ್ಲದ, ನೋಂದಣಿ ಆಗದ ಸಂಘಟನೆ. ವಾಜಪೇಯಿ ಅವರ ಕಾಲದಲ್ಲೂ, ಎಲ್.ಕೆ.ಅಡ್ವಾಣಿ ಮತ್ತು ವಾಜಪೇಯಿ ಅವರ ಸಂಘದ ಜೊತೆಗಿನ ಬಾಂಧವ್ಯಕ್ಕೂ, ಸದ್ಯ ಮೋದಿ ಮತ್ತು ಭಾಗವತ್ ನಡುವಿನ ಸಂಬಂಧಕ್ಕೂ ಸಾಕಷ್ಟು ವ್ಯತ್ಯಾಸ ಇದೆ” ಎಂಬುದನ್ನು ಲೇಖನದಲ್ಲಿ ಗಮನಿಸಬಹುದು.
“ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರ್‌ಎಸ್‌ಎಸ್ ಅನ್ನು ನೇರವಾಗಿ ಎದುರು ಹಾಕಿಕೊಳ್ಳುತ್ತಾರೆ. ಸಿದ್ಧಾಂತದ ಹೋರಾಟ ಅಂತ ಹೇಳುತ್ತಾರೆ. ಆದರೆ, ಅವರ ಪಕ್ಷದ ಅನೇಕ ನಾಯಕರು ಯಾವುದೇ ಹಿಂಜರಿಕೆ ಇಲ್ಲದೆ ಆರ್‌ಎಸ್‌ಎಸ್ ಅನ್ನು ಹೊಗಳುತ್ತಾರೆ. ರಾಹುಲ್ ನೇರವಾಗಿ ಆರ್‌ಎಸ್‌ಎಸ್ ಹೆಸರನ್ನು ಹೇಳಿ ವಿರೋಧಿಸುತ್ತಾರೆ. ಆದರೆ ಬೇರೆ ಪಕ್ಷದ ಯಾವ ನಾಯಕರೂ ಆರ್‌ಎಸ್‌ಎಸ್ ಹೆಸರನ್ನು ಹೇಳಿ ವಿರೋಧಿಸಲು ಹೆದರುತ್ತಾರೆ. ಮಾಧ್ಯಮಗಳಲ್ಲಿ ಆರ್‌ಎಸ್‌ಎಸ್ ದೊಡ್ಡ ಪಾತ್ರ ನಿರ್ವಹಿಸುತ್ತಿರುವುದು ಮತ್ತು ಆರ್‌ಎಸ್‌ಎಸ್ ಇಲ್ಲದೆ ಕೆಲಸ ಮಾಡುವುದು ಯಾವುದೇ ರಾಜಕೀಯ ಪಕ್ಷಗಳಿಗೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣ ಆಗಿರುವುದು” ಈ ಲೇಖನ ಹೇಳುತ್ತದೆ.





