ಡಿಜಿಟಲ್‌ ಡಿಟಾಕ್ಸ್‌ | ಪರದೆಯಾಚೆಗಿನ ಬದುಕ ಬದುಕೋಣ!

Date:

ಇಂದಿನ ತಂತ್ರಜ್ಞಾನ ಆಧಾರಿತ ಜೀವನದಲ್ಲಿ ಸ್ಮಾರ್ಟ್‌ಫೋನ್‌ಗಳು, ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್‌ನೆಟ್‌ ಇಲ್ಲದೆ ದಿನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯವೆನಿಸುತ್ತದೆ. ಆದರೆ ಇದೇ ತಾಂತ್ರಿಕತೆಯ ಜೊತೆಗಿನ ಸುದೀರ್ಘ ಸಂಪರ್ಕ ಜೀವನದ ಬಹುತೇಕ ತೊಂದರೆಗಳ ಮೂಲವಾಗಿದೆ ಎಂಬುದನ್ನು ಭಾರತ ಸೇರಿದಂತೆ ಹಲವು ದೇಶಗಳ ಸಂಶೋಧನೆಗಳು ದೃಢಪಡಿಸುತ್ತಿವೆ.

ಹೀಗೊಮ್ಮೆ ಯೋಚಿಸಿ ನೋಡೋಣ… ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ನಾವು ಮೊದಲು ಏನು ಮಾಡ್ತೀವಿ? ನೀರು ಕುಡಿಯೋದು? – ಅಲ್ಲ, ಕಿಟಕಿ ತೆರೆದು ಸನ್‌ರೈಸ್‌ ನೋಡೋದು? – ಅಲ್ಲ, ಫ್ರೆಶ್ ಗಾಳಿ ತಗೊಳ್ಳೋದು? – ಅಲ್ಲ, ಹಾಗೇ ಸುಮ್ಮನೆ ಬೆಳಗನ್ನ ಆಸ್ವಾದಿಸೋದು? – ಅಲ್ಲ, ಧ್ಯಾನ ಮಾಡೋದಾ? – ಅಲ್ಲವೇ ಅಲ್ಲ! ನಾವು ಮೊದಲು ಮಾಡೋದು, ಹಾಸಿಗೆ ತಡಕಾಡಿ ಮೊಬೈಲ್ ಹಿಡಿಯೋದು. ವಾಟ್ಸಾಪ್, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಸ್ಕ್ರಾಲ್ ಮಾಡೋದು.‌ ಸೂರ್ಯನ ಬೆಳಕು ಅಲ್ಲಿರಲಿ, ಮೋರೆ ಮೇಲೆ ಮೊದಲು ಮೊಬೈಲ್‌ ಸ್ಕ್ರೀನ್‌ ಬೆಳಕೇ ಬೀಳಬೇಕು. ನಮ್ಮ ಸ್ಟೇಟಸ್‌ ಬಗ್ಗೆ ಗೊತ್ತಿಲ್ಲ; ಬೇರೆಯವರ ಸ್ಟೇಟಸ್‌, ಸ್ಟೋರಿ ಬಗ್ಗೆಯೇ ತುಸು ಹೆಚ್ಚು ಇಂಟರೆಸ್ಟು. ಇದೇ ನಮ್ಮ ದಿನದ ಆರಂಭ. ಅಷ್ಟೇ ಅಲ್ಲ, ರಾತ್ರಿ ನಿದ್ರೆಗೆ ಹೋಗೋದು ಕೂಡ ಪರದೆ ನೋಡಿಕೊಂಡೇ.

ಇದು ನಮ್ಮ ನಿತ್ಯದ ರುಟೀನ್.‌ ಈ ಕಾಲದ ನೈಜ ಚಿತ್ರವೂ. ನಮಗೆ ಎಲ್ಲವೂ ಮೊಬೈಲ್‌ನಲ್ಲೇ ಆಗಬೇಕು. ಲ್ಯಾಪ್‌ಟಾಪ್‌ ಬಿಟ್ಟರೆ ಕೆಟ್ವಿ! ಕೆಲಸ, ಸ್ನೇಹ, ಮನರಂಜನೆ, ಸುದ್ದಿ ಎಲ್ಲವೂ ಅಂಗೈಯಲ್ಲೇ ಆಗಬೇಕು. ಕಡೇಪಕ್ಷ ಶಾಪಿಂಗ್ಗಾದರೂ ಹೊರಗೆ ಹೋಗ್ತೀವಾ ಅಂದುಕೊಂಡ್ರೆ, ಅದೂ ಇಲ್ಲ. ಆದರೆ ಹೀಗೆ ಎಲ್ಲವೂ ಸಲೀಸಾಗಿ, ಬೆರಳತುದಿಯಲ್ಲೇ ಸಿಕ್ಕಿಬಿಡುತ್ತಿರುವುದರಿಂದ ನಮ್ಮೊಳಗಿನದೇನೋ ಕಳೆದು ಹೋಗಿದೆ ಅನ್ನಿಸೋದಿಲ್ಲವೇ? ಏನಿರಬಹುದು? ಆಸಕ್ತಿ, ಅಭಿರುಚಿ, ನೆಮ್ಮದಿ, ಕ್ರಿಯಾಶೀಲತೆ, ಉತ್ಸಾಹ.. ಇನ್ನು ಸಾಕಷ್ಟು. ಹಾಗಾದರೆ ಏನು ಮಾಡಬೇಕು? ಈ ಡಿಜಿಟಲ್‌ ಓವರ್‌ಲೋಡ್‌ನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಿದೆ. ಅದಕ್ಕಾಗಿ ನಿತ್ಯ ತಾಂತ್ರಿಕ ಸಾಧನಗಳೊಂದಿಗೇ ಸಿಕ್ಕಿಹಾಕಿಕೊಂಡಿರುವ ನಮ್ಮ ದೇಹ ಮತ್ತು ಮನಸುಗಳನ್ನು ಡಿಜಿಟಲ್‌ ಡಿಟಾಕ್ಸ್‌ ಮಾಡಿಕೊಳ್ಳಬೇಕಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾಮಾನ್ಯವಾಗಿ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಗೆಡವಲು ಅನುಸರಿಸುವ ಪ್ರಕ್ರಿಯೆಗೆ ನಿರ್ವಿಶೀಕರಣ, ವಿಷನಿವಾರಣೆ ಅಥವಾ ಡಿಟಾಕ್ಸಿಫಿಕೇಶನ್‌ ಎನ್ನುತ್ತೇವೆ. ಈ ಡಿಜಿಟಲ್ ಡಿಟಾಕ್ಸ್ ಎಂದರೆ ಸ್ಮಾರ್ಟ್‌ಫೋನ್‌, ಟೆಲಿವಿಷನ್‌, ಕಂಪ್ಯೂಟರ್‌, ಟ್ಯಾಬ್ಲೆಟ್‌, ಸಾಮಾಜಿಕ ಮಾಧ್ಯಮ, ವೆಬ್‌ ಪೋರ್ಟಲ್‌ಗಳಂತಹ ತಾಂತ್ರಿಕ ಸಾಧನಗಳನ್ನು ಬಳಸುವುದನ್ನು ಸಾಧ್ಯವಾಗುವ ಮಟ್ಟಿಗಾದರೂ ಕೆಲ ಹೊತ್ತು ತಡೆಹಿಡಿಯುವ ಪ್ರಕ್ರಿಯೆ. ಅಂದರೆ, ತಾತ್ಕಾಲಿಕವಾಗಿ ಎಲ್ಲ ಡಿಜಿಟಲ್ ಉಪಕರಣಗಳಿಂದ ದೂರ ಉಳಿದು ನಿಜಜೀವನದ ಅನುಭವಗಳಿಗೆ ಹೆಚ್ಚು ಗಮನ ಕೊಡುವುದು. ಈ ವಿರಾಮ ಕೇವಲ ಸಾಧನಗಳಿಂದ ದೂರವಿರುವುದಲ್ಲ; ಅದು ಒತ್ತಡದ ಮನಸ್ಥಿತಿಗೆ ವಿಶ್ರಾಂತಿ ಕೊಡುವ ಪ್ರಯತ್ನ. ದಿನವೂ ನೂರಾರು ನೋಟಿಫಿಕೇಶನ್‌ಗಳು, ಮೆಸೇಜ್‌ಗಳು, ನ್ಯೂಸ್‌ ಅಲರ್ಟ್‌ಗಳು ಇವೆಲ್ಲ ಸೇರಿ ಮನಸ್ಸನ್ನು ಕಲಸುಮೇಲೋಗರ ಮಾಡಿರುತ್ತವೆ. ಈ ಒತ್ತಡದ ಮೊಟ್ಟೆಯೊಳಗಿಂದ ಹೊರಬಂದು ಜಗತ್ತು ನೋಡುವುದೇ ಡಿಟಾಕ್ಸೀಕರಣ.

WhatsApp Image 2025 11 14 at 3.45.39 PM

ಡಿಜಿಟಲ್‌ ಡಿಟಾಕ್ಸ್‌ ಕುರಿತ ಸಂಶೋಧನೆಗಳು ಹೇಳೋದೇನು?

ಇಂದಿನ ತಂತ್ರಜ್ಞಾನ ಆಧಾರಿತ ಜೀವನದಲ್ಲಿ ಸ್ಮಾರ್ಟ್‌ಫೋನ್‌ಗಳು, ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್‌ನೆಟ್‌ ಇಲ್ಲದೆ ದಿನವನ್ನು ಕಲ್ಪಿಸಿಕೊಳ್ಳುವುದೂ ಅಸಾಧ್ಯವೆನಿಸುತ್ತದೆ. ಆದರೆ ಇದೇ ತಾಂತ್ರಿಕತೆಯ ಜೊತೆಗಿನ ಸುದೀರ್ಘ ಸಂಪರ್ಕ ಜೀವನದ ಬಹುತೇಕ ತೊಂದರೆಗಳ ಮೂಲವಾಗಿದೆ ಎಂಬುದನ್ನು ಭಾರತ ಸೇರಿದಂತೆ ಹಲವು ದೇಶಗಳ ಸಂಶೋಧನೆಗಳು ದೃಢಪಡಿಸುತ್ತಿವೆ. ಈ ಹಿನ್ನೆಲೆಯಲ್ಲಿ ʼಡಿಜಿಟಲ್‌ ಡಿಟಾಕ್ಸ್‌ʼ ಪರಿಕಲ್ಪನೆಯು ನಿಜ ಜೀವನದ ಸಂಪರ್ಕವನ್ನು ಪುನಃ ಅನುಭವಿಸುವ ಚಳವಳಿಗೆ ವೇಗ ನೀಡುತ್ತಿದೆ.

ಬೆಂಗಳೂರಿನ ನಿಮ್ಹಾನ್ಸ್‌ (NIMHANS) ನಡೆಸಿದ ಸಂಶೋಧನೆ (2023) ಪ್ರಕಾರ, ಸಾಮಾಜಿಕ ಮಾಧ್ಯಮ ಹಾಗೂ ಮೊಬೈಲ್‌ ಬಳಕೆ ಕಡಿಮೆ ಮಾಡಿದವರು (ಸಂಶೋಧನೆಯಲ್ಲಿ ಒಳಗೊಂಡವರು) ಕೇವಲ ಎರಡು ವಾರಗಳಲ್ಲಿ 28% ಕಡಿಮೆ ಒತ್ತಡ ಅನುಭವಿಸಿದ್ದಾರೆ. ಈ ಅವಧಿಯಲ್ಲಿ ನಿದ್ರೆಯ ಗುಣಮಟ್ಟ ಮತ್ತು ಕುಟುಂಬದೊಟ್ಟಿಗಿನ ಸಂವಹನದಲ್ಲಿ ಸ್ಪಷ್ಟ ಸುಧಾರಣೆ ಕಂಡುಬಂದಿದೆ. ʼಡಿಜಿಟಲ್‌ ಡಿಟಾಕ್ಸ್‌ನಿಂದ ತಕ್ಷಣದ ಸಂತೃಪ್ತಿ ಸಿಗದಿದ್ದರೂ, ಅದರಲ್ಲಿ ಮಾನಸಿಕ ಸಮತೋಲನವನ್ನು ಹಿಂತಿರುಗಿಸುವ ಶಕ್ತಿಯಿದೆʼ ಎಂಬುದನ್ನು ಸಂಶೋಧನೆ ದೃಢಪಡಿಸಿದೆ.

ಅಮೆರಿಕದ ಸ್ಟ್ಯಾನ್ಫರ್ಡ್ ವಿಶ್ವವಿದ್ಯಾಲಯದ 2022ರ ಅಧ್ಯಯನವು ಇದೇ ವಿಷಯವನ್ನು ದೃಢಪಡಿಸಿದೆ. ಆ ಸಂಸ್ಥೆಯ ಸೈಕಾಲಜಿ ವಿಭಾಗವು 160 ಕಾಲೇಜು ವಿದ್ಯಾರ್ಥಿಗಳ ಮೇಲೆ ಪ್ರಯೋಗ ನಡೆಸಿದಾಗ, ಒಂದು ವಾರ ಕಾಲ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದವರು ತಮ್ಮ ಏಕಾಗ್ರತೆ ಮತ್ತು ಆತ್ಮತೃಪ್ತಿಯಲ್ಲಿ 40% ಹೆಚ್ಚಳ ಕಂಡಿದ್ದಾರೆ. ದಿನಕ್ಕೆ 90 ನಿಮಿಷಗಳಿಗಿಂತ ಹೆಚ್ಚು ಕಾಲ ಮೊಬೈಲ್‌ ಬಳಸುವವರು ʼಮೈಂಡ್ ಫಟೀಗ್ʼ ಅಥವಾ ಬೌದ್ಧಿಕ ಆಯಾಸದಿಂದ ಬಳಲುತ್ತಾರೆ, ಮತ್ತು ಡಿಟಾಕ್ಸ್ ಮಾಡಿದವರು ಆ ಲಕ್ಷಣಗಳಲ್ಲಿ ಎರಡು ವಾರಗಳಲ್ಲಿ ಬದಲಾವಣೆ ಕಂಡಿದ್ದಾರೆ ಎಂದು ಯುಕೆಯ ಡಿಜಿಟಲ್‌ ವೆಲ್‌ಬೀಯಿಂಗ್ ಇನ್‌ಸ್ಟಿಟ್ಯೂಟ್ ವರದಿ ಹೇಳುತ್ತದೆ.

ಬಿಹೇವಿಯರಲ್ ಸೈನ್ಸ್‌ನಲ್ಲಿ ಪ್ರಕಟವಾದ ಅಧ್ಯಯನವೊಂದು, “ಸಾಮಾಜಿಕ ಮಾಧ್ಯಮದ ಸೀಮಿತ ಬಳಕೆಯನ್ನು ಒಳಗೊಂಡಿರುವ ಡಿಜಿಟಲ್ ಡಿಟಾಕ್ಸ್‌ಗಳು ಆರೋಗ್ಯ ಮತ್ತು ಫೋನ್ ವ್ಯಸನದಿಂದ ಹೋರಾಡುತ್ತಿರುವವರ ಮೇಲೆ ಪ್ರಯೋಜನಕಾರಿ ಪರಿಣಾಮಗಳನ್ನು ಪ್ರದರ್ಶಿಸಿವೆ” ಎಂದು ಕಂಡುಹಿಡಿದಿದೆ.

WhatsApp Image 2025 11 14 at 6.22.54 PM
ನಿಮ್ಹಾನ್ಸ್‌ ಕ್ಲಿನಿಕ್

ಡಿಜಿಟಲ್‌ ಡಿಟಾಕ್ಸಿಫಿಕೇಶನ್‌ ಕುರಿತು ಆಪ್ತ ಸಮಾಲೋಚಕಿ ಅನುಪಮಾ ಪ್ರತಿಕ್ರಿಯಿಸಿ, “ಆರೋಗ್ಯದೆಡೆ ಗಮನವಿಲ್ಲದೆ ರುಚಿಯಾದದ್ದು ತಿಂದು ದೇಹವನ್ನು ಟಾಕ್ಸಿಕ್‌ ಮಾಡಿಕೊಂಡಿರ್ತೇವೆ. ನಮ್ಮ ದೇಹವೇ ನಮಗೆ ಹಿಂಟ್‌ ಕೊಡುತ್ತೆ. ಆಗ ದೇಹವನ್ನು ಡಯೆಟ್‌, ವ್ಯಾಯಾಮಗಳಂತಹ ಸರ್ಕಸ್ ಮಾಡಿ ಡಿಟಾಕ್ಸ್‌ ಮಾಡಿಕೊಳ್ಳಲು ಮುಂದಾಗುತ್ತೇವೆ. ಅದೇ ರೀತಿ ಈ ಡಿಜಿಟಲ್‌ ಡಿಟಾಕ್ಸ್‌. ಟೆಕ್ನಾಲಜಿ ಎಷ್ಟು ವೇಗವಾಗಿ ಬೆಳೀತಿದ್ಯೋ ಅಷ್ಟೇ ವೇಗವಾಗಿ ನಮ್ಮ ಜೀವನಶೈಲಿ ಹಾಳಾಗ್ತಿದೆ. ಗ್ಯಾಜೆಟ್ಸ್‌ ಬಳಕೆ ಹೆಚ್ಚಾಗಿದೆ. ಇದರಿಂದ ಫಿಸಿಕಲ್‌ ಆಕ್ಟಿವಿಟಿಗಳೂ ಕೂಡ ಕಡಿಮೆಯಾಗಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆ ಅನುಭವಿಸ್ತೀವಿ. ಈ ತೊಂದರೆಯಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳೋದು ಡಿಜಿಟಲ್‌ ಡಿಟಾಕ್ಸ್.‌ ದಿನದ ಇಷ್ಟು ಗಂಟೆ ನಾನು ಸ್ಕ್ರೀನ್‌ ನೋಡಲ್ಲ, ವಾರದಲ್ಲಿ ಇಷ್ಟು ದಿನ ಇಂಟರ್‌ನೆಟ್‌ ಬಳಸಲ್ಲ.. ಹೀಗೆ ನಮಗೆ ನಾವೇ ಮೋಟಿವೇಟ್‌ ಮಾಡಿಕೊಂಡರೆ ಇದನ್ನು ಸಾಧಿಸುವುದು ಕಷ್ಟವಲ್ಲ. ಡಿಜಿಟಲ್‌ ಬಳಕೆ ಹೆಚ್ಚಾಗುತ್ತಿದೆ ಎನ್ನುವುದರ ಕುರಿತು ಅರಿವಿರುವವರು ಇದನ್ನ ಸುಲಭವಾಗಿ ಸಾಧಿಸುತ್ತಾರೆ. ನಿಮ್ಹಾನ್ಸ್‌ನಲ್ಲಿರುವ SHUT ಕ್ಲಿನಿಕ್‌ನಲ್ಲಿ ಟೆಕ್‌ ಅಡಿಕ್ಟ್‌ಗಳನ್ನು ಟ್ರೀಟ್‌ ಮಾಡಲಾಗುತ್ತೆ. ಇದೊಂದು ಅಡಿಕ್ಷನ್‌ ಆಗಿದೆ ಎಂದರೆ ಅದರ ಯೂಸೇಜ್‌ ಎಷ್ಟಿರಬಹುದು ಎನ್ನುವುದನ್ನು ಗಮನಿಸಬೇಕು. ಇದು ಡಿಜಿಟಲ್‌ ಯುಗ, ಇದರಲ್ಲೇ ಕೆಲಸ ಮಾಡುವವರು ಆಗಾಗ ಸ್ಕ್ರೀನ್‌ನಿಂದ ವಿರಾಮ ತೆಗೆದುಕೊಳ್ಳುವುದು, ಚಿಕ್ಕ ವಾಕ್‌ ಮಾಡಿಕೊಳ್ಳುವುದು, ಸಣ್ಣ ವ್ಯಾಯಾಮ ಮಾಡಿಕೊಳ್ಳುವುದು ಸೂಕ್ತ. ಕೆಲಸ ಹಾಗೂ ಮೆಂಟಲ್‌ ಹೆಲ್ತ್‌ ಎರಡನ್ನೂ ಸಮಾನವಾಗಿ ನೋಡಿಕೊಳ್ಳುವುದು ಮುಖ್ಯ” ಎಂದರು.

ಬೆಳಗಾದ್ರೆ ನಾವು ಹೆಚ್ಚಾಗಿ ನೋಡೋದು ಎರಡು ರೀತಿಯ ವಿಡಿಯೋಸ್/ರೀಲ್ಸ್‌. ಒಂದು, ಈ ಆಹಾರ ತಿನ್ನಿ, ಆ ಡ್ರಿಂಕ್ಸ್‌ ಟ್ರೈ ಮಾಡಿ, ಇಷ್ಟು ವರ್ಕೌಟ್‌ ಮಾಡಿ, ಅಷ್ಟು ವಾಕ್‌ ಮಾಡಿ ಎಂದು ಎಲ್ಲದಕ್ಕೂ ಒಂದು ಚಾರ್ಟ್‌ ನಿಗದಿಸಿ ಫ್ರೀಯಾಗಿ ಸಿಗುವ ಡಯೆಟ್‌ ಪ್ಲ್ಯಾನ್‌ಗಳು. ಇನ್ನೊಂದು- ಜೀವನ ತುಂಬಾ ಚಿಕ್ಕದು, ಒಳ್ಳೆ ಫುಡ್‌ ಸಿಕ್ಕಾಗ ತಿಂದುಬಿಡಿ, ಏನು ಸಿಗ್ತದೋ ಅದನ್ನೇ ಎಂಜಾಯ್‌ ಮಾಡೋಣ ಎನ್ನುವ ಪರ್ಸನಲ್‌ ಫುಡ್‌, ಟ್ರಾವೆಲ್‌ ವ್ಲಾಗ್‌ಗಳು. ಎರಡರಲ್ಲೂ ಒಂದು ಸಾಮಾನ್ಯ ವಿಷಯ ಮಾತ್ರ ಸ್ಪಷ್ಟ. ಇವುಗಳ ಉಪಯೋಗಕ್ಕಿಂತ ಹೆಚ್ಚು ನಾವು ಅದಕ್ಕೆ ಹೂಡುವ ಸಮಯ ದೊಡ್ಡದು. ಏನು ತಿನ್ನಬೇಕು, ಎಲ್ಲಿ ಹೋಗಬೇಕು, ಹೇಗೆ ಬದುಕಬೇಕು ಎನ್ನುವ ನಮ್ಮ ಜೀವನಶೈಲಿಯನ್ನು ರೀಲ್‌ಗಳು ನಿರ್ಧರಿಸುವ ಈ ಕಲ್ಚರ್‌ ನಿಧಾನವಾಗಿ ನಮ್ಮ ದಿನದ ನೈಸರ್ಗಿಕ ಲಯವನ್ನೇ ಏರುಪೇರು ಮಾಡುತ್ತಿದೆ. ಇವುಗಳಿಂದ ಮಾಹಿತಿ ದೊರಕುತ್ತದೆ, ಜ್ಞಾನವೂ ಸಿಗಬಹುದು, ಹೊಸ ಜಾಗಗಳ ಪರಿಚಯವಾಗಬಹುದು ನಿಜ. ಆದರೆ, ನಿಜವಾಗಿ ನಾವು ಅಲ್ಲಿದ್ದು ಪಡೆದುಕೊಳ್ಳುವ ಅನುಭವಕ್ಕೆ ಬೆಲೆ ಕಟ್ಟಲಾದೀತೆ? ನಮ್ಮ ಮನಸ್ಸಿನ ಮೇಲೆ ಇವುಗಳು ಬೀರುವ ಪರಿಣಾಮವನ್ನೊಮ್ಮೆ ಅಂದಾಜಿಸಿ ನೋಡಲೇಬೇಕು.

ಡಿಜಿಟಲ್‌ ಕೋಣೆಯಿಂದ ಹೊರಬರುವುದೇಗೆ? ಎಂಬುದಕ್ಕೆ ತಜ್ಞರು ಕೆಲ ಟ್ರಿಕ್ಸ್‌ ಹೇಳಿದ್ದಾರೆ. ಅವುಗಳನ್ನು ನೋಡುವುದಾದರೆ…

WhatsApp Image 2025 11 14 at 3.49.47 PM 1
  1. ಸಂಪೂರ್ಣ ವಿರಾಮವಲ್ಲ; ಮಿತಬಳಕೆಯಿರಲಿ: ಅಷ್ಟು ಹಚ್ಚಿಕೊಂಡ ಫೋನ್‌, ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಏಕಾಏಕಿ ಬಿಟ್ಟುಬಿಡುವುದು ಸಾಧ್ಯವಿಲ್ಲ. ಹಾಗೆ ಬಿಡುವುದೂ ಮಾನಸಿಕವಾಗಿ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮಿತಬಳಕೆ ಸರಿಯಾದ ಮಾರ್ಗ. ದಿನಕ್ಕೆ 10–15% ಬಳಕೆ ಕಡಿಮೆ ಮಾಡುವುದು ಅಂದರೆ, ದಿನಕ್ಕೆ 3 ಗಂಟೆ ಫೋನ್‌ ಬಳಸುತ್ತಿದ್ದರೆ, ಅದನ್ನು 10–15 ನಿಮಿಷ ಕಡಿಮೆ ಮಾಡುವುದು.
  2. ಪದೇ ಪದೇ ಫೋನ್‌ ಚೆಕ್‌ ಮಾಡುವ ಅಭ್ಯಾಸ ಯಾತಕ್ಕಾಗಿ ಎನ್ನುವುದನ್ನು ಕಂಡುಕೊಳ್ಳುವುದು: ನೋಟಿಫಿಕೇಶನ್‌ ಪಾಪ್‌ ಆದಾಗ, ಒಂಟಿಯಾಗಿದ್ದಾಗ, ಆತಂಕಕ್ಕೊಳಗಾದಾಗ, ಬೇಸರವಾದಾಗ, ಒಮ್ಮೊಮ್ಮೆ ಕಾರಣವಿಲ್ಲದೆಯೂ ಸ್ಕ್ರೋಲಿಂಗ್‌ ಮಾಡುತ್ತೇವೆ. ಕೆಲವು ದಿನ ಫೋನ್‌ ತೆಗೆಯುವ ಪ್ರತಿಯೊಂದು ಸಂದರ್ಭದ ಕಾರಣವನ್ನು ಗಮನಿಸಿ ಬರೆದಿಟ್ಟುಕೊಳ್ಳುವುದು, ಇದನ್ನು Digital Trigger Journal ಎನ್ನಲಾಗುತ್ತದೆ. ಕಾರಣ ಅರಿವಾಗಿಬಿಟ್ಟರೆ, ಅಪೇಕ್ಷೆ ಮೇಲೆ ನಿಯಂತ್ರಣ ಸುಲಭವಾಗುತ್ತದೆ.
  3. ಟೆಕ್‌ ಅಸಿಸ್ಟೆಡ್‌ ಡಿಟಾಕ್ಸ್‌- ಅಂದರೆ ಫೋನ್‌ ಬಳಕೆ ಕಡಿಮೆ ಮಾಡಲು ಫೋನ್‌ನಲ್ಲೇ ಇರುವ ಸಾಧನಗಳನ್ನು ಉಪಯೋಗಿಸುವುದು: ನಮ್ಮ ಕೈಯಲ್ಲಿರುವ ಸಾಧನವೇ ಸಮಸ್ಯೆಯ ಮೂಲವಾಗಿದ್ದರೂ, ಅದರೊಳಗಿನ ಕೆಲವು ಸೆಟ್ಟಿಂಗ್‌ಗಳು ಅದೇ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗುತ್ತವೆ. ಉದಾಹರಣೆಗೆ: Screen Time Limits ಮತ್ತು App Timers ಬಳಸಿ ಕೆಲವು ಆ್ಯಪ್‌ಗಳ ಬಳಕೆಗೆ ದಿನಕ್ಕೆ ನಿಗದಿತ ಮಿತಿ ಹಾಕಬಹುದು; ಮಿತಿ ಮುಗಿದಾಗ ಫೋನ್‌ ಸ್ವತಃ ಆ ಆ್ಯಪ್‌ಗಳನ್ನು ಬ್ಲಾಕ್‌ ಮಾಡುತ್ತದೆ. ಇದೇ ರೀತಿ Focus Mode ನೋಟಿಫಿಕೇಶನ್‌ಗಳನ್ನು ತಡೆಯುವುದು, ಹೊರಗಿನ ವ್ಯತ್ಯಯಗಳನ್ನು ಬಹಳ ಮಟ್ಟಿಗೆ ಕಡಿಮೆ ಮಾಡುತ್ತದೆ. ತಜ್ಞರು ವಿಶೇಷವಾಗಿ ಸೂಚಿಸುವ Greyscale Mode ಆನ್‌ ಮಾಡಿಕೊಳ್ಳುವುದು, ಅಂದ್ರೆ, ಸ್ಕ್ರೀನ್‌ನ ಬಣ್ಣಗಳನ್ನು ಪೂರ್ಣವಾಗಿ ತೆಗೆದು ಕಪ್ಪು–ಬಿಳಿಯಲ್ಲಿಡುವುದು. ಸ್ಕ್ರೋಲಿಂಗ್‌ಗೆ ಇರುವ ಆಕರ್ಷಣೆಯನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡುತ್ತದೆ.
  4. ಮಲಗುವ ಮುನ್ನ 1 ಗಂಟೆ No-screen Zone: ಸಮೀಕ್ಷೆಗಳ ಪ್ರಕಾರ, ರಾತ್ರಿ 30–60 ನಿಮಿಷ ಸ್ಕ್ರೀನ್‌ ತಪ್ಪಿಸಿದರೆ, ನಿದ್ರೆ ಗುಣಮಟ್ಟ ಹೆಚ್ಚುತ್ತದೆ, ಮನಸ್ಸಿನ ಉದ್ವಿಗ್ನತೆ 40% ಕುಸಿಯುತ್ತದೆ, ಮುಂದಿನ ದಿನದ ಒತ್ತಡ ಕಡಿಮೆಯಾಗುತ್ತದೆ. ತಜ್ಞರು ಇದನ್ನೇ The Golden Hour Rule ಎನ್ನುತ್ತಾರೆ.
  5. Slow Media Diet ಅಂದರೆ, ವೇಗದ ರೀಲ್ಸ್‌ ಬದಲಿಗೆ ಇವುಗಳನ್ನು ಸೇರಿಸಿಕೊಳ್ಳುವುದು: 10–15 ನಿಮಿಷ ಪಾಡ್‌ಕಾಸ್ಟ್‌, ದೀರ್ಘ ಲೇಖನ, ಡಾಕ್ಯುಮೆಂಟರಿ… ಇದು brain ಅನ್ನು over-stimulation ನಿಂದ ಹೊರತೆಗೆದು ಸ್ಥಿರಗೊಳಿಸುತ್ತದೆ.
  6. ವಾರಕ್ಕೆ ಒಂದು Half-day Detox: ಪೂರ್ಣ ದಿನ ಡಿಟಾಕ್ಸ್‌ ಅಸಾಧ್ಯವಾದರೂ, ಭಾನುವಾರ/ರಜೆಯ ದಿನ ಬೆಳಗ್ಗೆ 8ರಿಂದ ಮಧ್ಯಾಹ್ನ 12ವರೆಗೆ ಅಥವಾ ಸಂಜೆ 5ರಿಂದ ರಾತ್ರಿ 9ರವರೆಗೆ ನಿಗದಿತ ‘ಡಿಜಿಟಲ್‌ ವಿರಾಮ’ ಪಡೆಯಬಹುದು. ತಜ್ಞರ ಪ್ರಕಾರ, ಈ 4 ಗಂಟೆಗಳು ವಾರದ ಒತ್ತಡವನ್ನು ಮರುಹೊಂದಿಸುತ್ತವೆಯಂತೆ.
  7. ನೈಜ ಜಗತ್ತಿನ ಸಂಪರ್ಕಗಳನ್ನು ಹೆಚ್ಚಿಸುವುದು: ಸೋಶಿಯಲ್ ಕನೆಕ್ಷನ್‌ಗಳು ಮಿದುಳು ಬಿಡುಗಡೆ ಮಾಡುವ oxytocin ಅನ್ನು ಹೆಚ್ಚಿಸುತ್ತವೆ, ಇದು ಸೋಶಿಯಲ್ ಮೀಡಿಯಾ addictionಗೆ ಉತ್ತಮ ಪ್ರತಿರೋಧ. ಹೀಗಾಗಿ, ಸ್ನೇಹಿತರ ಜೊತೆ 20 ನಿಮಿಷ ಮುಖಾಮುಖಿ ಮಾತುಕತೆ, ಕುಟುಂಬದೊಂದಿಗೆ ಊಟ, ಏನಾದರೊಂದು ಹವ್ಯಾಸ.. ಎಲ್ಲವೂ ಡಿಟಾಕ್ಸ್‌ ಪ್ರಕ್ರಿಯೆಗೆ ನೇರವಾಗಿ ಸಹಾಯ ಮಾಡುತ್ತವೆ. ಮನಸ್ಸು ಮಾಡಿದರೆ ಇನ್ನೂ ಹಲವು ಮಾರ್ಗಗಳಿವೆ. ದೃಢ ಸಂಕಲ್ಪ ಬೇಕು.

ಇದನ್ನೂ ಓದಿ: ಈ ದಿನ ಸಂಪಾದಕೀಯ | ಮೋದಿಯಡಿ ದೇಶ ಸುರಕ್ಷಿತವೆಂಬ ಸುಳ್ಳುಗುಳ್ಳೆಯ ಒಡೆದ ಸ್ಫೋಟ

ತಂತ್ರಜ್ಞಾನವನ್ನು ದೂರ ಮಾಡಬೇಕೆಂದಲ್ಲ, ಬದುಕನ್ನು ಆಳವಾಗಿ ಅನುಭವಿಸಬೇಕೆಂಬ ಇಚ್ಛೆಯಿಂದ ನಾವು ಡಿಜಿಟಲ್ ಮಿತಿ ಹಾಕಲು ಪ್ರಾರಂಭಿಸಬೇಕು. ಈ ಅರಿವೇ ನಮ್ಮನ್ನು ಹೆಚ್ಚು ಜಾಗೃತರಾಗುವತ್ತ ಕರೆದೊಯ್ಯುತ್ತದೆ. ಡಿಜಿಟಲ್ ಡಿಟಾಕ್ಸ್ ಎಂಬುದು ಟ್ರೆಂಡ್‌ ಅಲ್ಲ, ಜೀವನದ ಗುಣಮಟ್ಟವನ್ನು ಮರುಸ್ಥಾಪಿಸುವ ಮಾರ್ಗ, ನಮ್ಮದೇ ಜೀವನವನ್ನು ಮತ್ತೆ ಅಪ್ಪಿಕೊಳ್ಳುವ ಪರಿಪಾಠ. ಪರದೆ ನಮ್ಮನ್ನು‌ ಬೇರೆಯದೇ ಜಗತ್ತಿಗೆ ಕೊಂಡೊಯ್ಯಬಹುದು, ಆದರೆ ಅದೇ ಸಮಯದಲ್ಲಿ ನಮ್ಮೊಳಗಿನ ಜಗತ್ತಿನಿಂದ ದೂರ ಮಾಡುವ ಸಾಮರ್ಥ್ಯವನ್ನೂ ಹೊಂದಿದೆ ಎನ್ನುವುದನ್ನು ಮರೆಯಕೂಡದು. ಈ ನಡುವೆ ಸಮತೋಲನ ಕಂಡುಕೊಳ್ಳುವ ಶಕ್ತಿ ನಮ್ಮಲ್ಲಿಯೇ ಇದೆ. ತಂತ್ರಜ್ಞಾನವನ್ನು ನಿಯಂತ್ರಣದಲ್ಲಿಡುವ ಕಲೆಯನ್ನು ಕಲಿತಾಗ, ನಾವು ವರ್ಚುವಲ್ ಮತ್ತು ವಾಸ್ತವ ಎರಡು ಜಗತ್ತನ್ನೂ ಸಮೃದ್ಧವಾಗಿ ಬದುಕಲು ಸಾಧ್ಯ. ತಂತ್ರಜ್ಞಾನ ನಮ್ಮ ಶತ್ರು ಅಲ್ಲ; ಅದು ನಮ್ಮ ಸೇವಕ. ಆದರೆ, ನಾವು ಅದಕ್ಕೆ ಸ್ವಾಮಿಯಾಗಬೇಕಾದರೆ, ಮೊದಲು ನಮ್ಮ ಸಮಯ ಮತ್ತು ಗಮನದ ಮೇಲೆ ನಮ್ಮ ಸ್ವಾಧೀನವನ್ನು ಮರಳಿ ಪಡೆಯಬೇಕು. ಅದಕ್ಕಾಗಿ ಡಿಜಿಟಲ್ ಡಿಟಾಕ್ಸ್ ಅಗತ್ಯ. ಅದು ಜೀವನದ ವೇಗವನ್ನು ನಿಧಾನಗೊಳಿಸುವುದಿಲ್ಲ. ಅದರ ಅರ್ಥವನ್ನು ಆಳಗೊಳಿಸುತ್ತದೆ. ಆ ಆಳವನ್ನು ಅನುಭವಿಸಬೇಕಷ್ಟೇ!

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...

ಒಂದು ಕಡೆ ಖಾದ್ಯತೈಲ ಬೆಲೆ ಏರಿಕೆ; ಮತ್ತೊಂದು ಕಡೆ ಕುಸುಬೆ ಬೆಲೆ ಕುಸಿತದಿಂದ ರೈತರಿಗೆ ಹೊರೆ

ಖಾದ್ಯತೈಲ ಬೆಲೆ ಏರಿಕೆ ಗ್ರಾಹಕರ ಜೇಬಿಗೆ ಭಾರವಾದರೆ, ಕುಸುಬೆ ಬೆಲೆ ಕುಸಿತ...

ಡಾಲರ್ V/s ಯುವಾನ್: ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಾಡಾಗುತ್ತಿದೆಯೇ?

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್...