ವಾಸ್ತವವಾಗಿ ಸಿದ್ದರಾಮಯ್ಯನವರು ಒಬ್ಬರೇ ರಾಜ್ಯದಲ್ಲಿ ಸಾಲ ಮಾಡಿದ್ದಾರೆಯೇ? ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ-2003ರಂತೆ ಜಿ.ಎಸ್.ಡಿ.ಪಿಯ ಶೇ 25ರ ಮಿತಿಯೊಳಗೆ ಇದ್ದಾರೆಯೇ, ಅಥವಾ ಅದನ್ನು ದಾಟಿ ಸಾಲ ಮಾಡಿದ್ದಾರೆಯೇ ಎಂಬ ಪರಿಶೀಲನೆ ಸಹ ಮಾಡದೇ, ಮುಖ್ಯಮಂತ್ರಿಗಳು ಬಜೆಟ್ ಓದುತ್ತಿರುವಾಗಲೇ ಬಿಜೆಪಿ ನಾಯಕರು ಖಾಲಿ ಚೊಂಬು ಕೈಯಲ್ಲಿ ಹಿಡಿದುಕೊಂಡು ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುವ ಮೂಲಕ ತಮ್ಮ ಅಜ್ಞಾನವನ್ನು ರಾಜ್ಯದ ಜನರ ಮುಂದೆ ಪ್ರದರ್ಶಿಸಿದ್ದಾರೆ.
ಕರ್ನಾಟಕ ಸರಕಾರದ 2026-27ನೇ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಮಂಡಿಸಿದ್ದಾರೆ. 2026-27ನೇ ಸಾಲಿನ ಬಜೆಟ್ ಗಾತ್ರ 4,48,004 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರಲ್ಲಿ ಈ ಸಾಲಿನಲ್ಲಿ ಪಡೆದ ಸಾಲ 1,32,000 ಕೋಟಿ ರೂ. ಎಂದು ಇದು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ-2003ರಂತೆ ರಾಜ್ಯದ ಜಿ.ಎಸ್.ಡಿ.ಪಿ.ಯ ಶೇ. 25ಕ್ಕಿಂತ ಕಡಿಮೆ ಎಂದು ಹೇಳಲಾಗಿದೆ. ಅಲ್ಲದೇ ರಾಜಸ್ವವು ಜಿ.ಎಸ್.ಡಿ.ಪಿ.ಯ ಶೇ. 2.95ರಷ್ಟಿದ್ದು, ಇದು ಸಹ ಮಿತಿಯೊಳಗೆಯೇ ಇದೆ ಎಂದು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಬಜೆಟ್ ಮೂಲಕ ರಾಜ್ಯದ ಒಟ್ಟು ಸಾಲವು 2026-27ನೇ ಸಾಲಿನ ಕೊನೆಯವರೆಗೆ 8,24,389 ಕೋಟಿ ರೂ. ಇರುತ್ತದೆ. ಈ ಅವಧಿಯಲ್ಲಿ ಸಿದ್ದರಾಯ್ಯನವರ ಸರಕಾರ ಪ್ರತಿ ವರ್ಷ 56,000 ಕೋಟಿ ರೂ. ಗಳನ್ನು ರಾಜ್ಯದ ಬಡವರಿಗೆ ಗ್ಯಾರಂಟಿಗಳ ರೂಪದಲ್ಲಿ ಹಂಚುತ್ತಿದೆ. ಇದನ್ನೇ ದೇಶದ ಎಲ್ಲಾ ರಾಜ್ಯಗಳಲ್ಲಿ ಜಾರಿ ಮಾಡಲಾಗುತ್ತಿದೆ. ಎಲ್ಲಾ ಪಕ್ಷಗಳು ಅನುಸರಿಸುತ್ತಿವೆ. ಇದರಿಂದ ರಾಜ್ಯಕ್ಕೆ ಒಳ್ಳೆಯದಾಗುತ್ತದೋ, ಕೆಟ್ಟದಾಗುತ್ತದೋ ಎನ್ನುವ ವಿಷಯ ಚರ್ಚೆಯಲ್ಲಿದ್ದರೂ ಬಡವರಿಗೆ ಸಾಕಷ್ಟು ಉಪಯೋಗವಾಗಿದೆ ಎಂದು ಹೇಳಬಹುದು.
ಸುಪ್ರೀಂಕೋರ್ಟ್ ಸಹ ಉಚಿತ ಕೊಡುಗೆಗಳನ್ನು ನೀಡುವ ಬಗ್ಗೆ ಆಕ್ಷೇಪ ಎತ್ತಿದೆ. ಆದರೆ, ಅದೇ ಕೋರ್ಟ್ ಶ್ರೀಮಂತರಿಗೆ ನೀಡುವ ಸಬ್ಸಿಡಿ, ಸಾಲ ಮನ್ನಾ ಬಗ್ಗೆ ಮಾತನಾಡದೇ ಇರುವುದು ದುರಂತ. 2026-27ನೇ ಸಾಲಿನಲ್ಲಿ ರಾಜ್ಯ ಸರಕಾರ ಮಾಡಿದ ಒಟ್ಟು ಸಾಲದ ಪ್ರಮಾಣ ಕೇಳಿದ ತಕ್ಷಣ ಬಿಜೆಪಿಯ ಘಟಾನುಘಟಿ ನಾಯಕರು, ಕೇಂದ್ರದ ಸಚಿವರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಬಸವರಾಜ ಬೊಮ್ಮಾಯಿಯವರು ಗೊಳೋ ಎಂದು ಅಳತೊಡಗಿದ್ದಾರೆ. ಯಾರೂ ಮಾಡದ ಸಾಲ ಸಿದ್ದರಾಮಯ್ಯನವರು ಮಾಡಿಬಿಟ್ಟಿದ್ದಾರೆ, ಇದರಿಂದ ರಾಜ್ಯ ಹಾಳಾಗುತ್ತದೆ ಎಂದು ಬೊಬ್ಬೆ ಹೊಡೆಯಲು ಶುರು ಮಾಡಿಬಿಟ್ಟಿದ್ದಾರೆ. ಇವರ ಅನುಯಾಯಿಗಳ ಸಾಮಾಜಿಕ ಜಾಲತಾಣ ಸಾಲರಾಮಯ್ಯ ಎಂದು ಮುಖ್ಯಮಂತ್ರಿಗಳನ್ನು ಹೀಯಾಳಿಸುತ್ತಿವೆ. ಯಾರಾದರೂ ಪ್ರಧಾನಮಂತ್ರಿಗೆ ಪ್ರಶ್ನೆ ಮಾಡಿದರೆ, ದೇಶದ ಮಾನ ಹೋಗುತ್ತದ ಎಂದು ಹೇಳುವ ಈ ಜನ, ಮುಖ್ಯಮಂತ್ರಿಗಳಿಗೆ ಏಕವಚನದಲ್ಲಿ ಮಾತನಾಡತೊಡಗಿದ್ದಾರೆ.
ವಾಸ್ತವವಾಗಿ ಸಿದ್ದರಾಮಯ್ಯನವರು ಒಬ್ಬರೇ ರಾಜ್ಯದಲ್ಲಿ ಸಾಲ ಮಾಡಿದ್ದಾರೆಯೇ? ಸಾಲ ಮಾಡಿದ್ದಾದರೂ ಎಷ್ಟು ಪ್ರಮಾಣದಲ್ಲಿ ಸಾಲ ಮಾಡಿದ್ದಾರೆ, ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ-2003ರಂತೆ ಜಿ.ಎಸ್.ಡಿ.ಪಿಯ ಶೇ 25ರ ಮಿತಿಯೊಳಗೆ ಇದ್ದಾರೆಯೇ, ಅಥವಾ ಅದನ್ನು ದಾಟಿ ಸಾಲ ಮಾಡಿದ್ದಾರೆಯೇ ಎನ್ನುವದು ಪರಿಶೀಲನೆ ಸಹ ಮಾಡದೇ, ಮುಖ್ಯಮಂತ್ರಿಗಳು ಬಜೆಟ್ ಓದುತ್ತಿರುವಾಗಲೇ ಬಿಜೆಪಿ ನಾಯಕರು ಖಾಲಿ ಚೊಂಬು ಕೈಯಲ್ಲಿ ಹಿಡಿದುಕೊಂಡು ವಿಧಾನಸೌಧದ ಮುಂದೆ ಪ್ರತಿಭಟನೆ ಮಾಡುವ ಮೂಲಕ ತಮ್ಮ ಅಜ್ಞಾನವನ್ನು ರಾಜ್ಯದ ಜನರ ಮುಂದೆ ಇಟ್ಟಿದ್ದಾರೆ.
ಕಳೆದ ಇಪ್ಪತ್ತು ವರ್ಷಗಳ ಇತಿಹಾಸ ನೋಡಿದರೆ ಯಾರು ಎಷ್ಟು ಪ್ರಮಾಣದಲ್ಲಿ ಸಾಲ ಮಾಡಿದ್ದಾರೆ, ಇವರೆಷ್ಟು ಪ್ರಾಮಾಣಿಕರಿದ್ದಾರೆ ಎನ್ನುವುದು ಗೊತ್ತಾಗುತ್ತದೆ.
2006ರಲ್ಲಿ ಎಚ್ ಡಿ ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರ ರಾಜ್ಯದ ಸಾಲ 78,500 ಕೋಟಿ ರೂ.
2008ರಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಸಾಲ 78,500 ಕೋಟಿ ರೂ.
2013ರಲ್ಲಿ ಬಿಜೆಪಿ ಸರಕಾರದ ಅವಧಿ ಮುಗಿಯುವವರೆಗೆ ರಾಜ್ಯದ ಸಾಲ 1,36,000 ಕೋಟಿ ರೂ.
ಅಂದರೆ ಐದು ವರ್ಷದಲ್ಲಿ ಸುಮಾರು 57,500 ಕೋಟಿ ರೂಪಾಯಿವರೆಗೆ ಸಾಲ ಮಾಡಿದ್ದಾರೆ, ಇದು ಬಿಜೆಪಿ ಸರಕಾರ ಬಂದ ನಂತರ ಶೇ. 43ರಷ್ಟು ಸಾಲ ಮಾಡಲಾಗಿದೆ.
2013ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ರಾಜ್ಯದ ಒಟ್ಟು ಸಾಲ 1,36,000 ಕೋಟಿ ರೂ. ಸಿದ್ದರಾಮಯ್ಯನವರ ಅವಧಿ ಮುಗಿಯುವುದರೊಳಗೆ ರಾಜ್ಯದ ಸಾಲ 2,42,000 ಕೋಟಿ ರೂ., ಐದು ವರ್ಷದಲ್ಲಿ ಸುಮಾರು 1,06,000 ಕೋಟಿ ರೂಪಾಯಿವರೆಗೆ ಸಾಲ ಮಾಡಿದ್ದಾರೆ. ಅಂದರೆ ಆ ಐದು ವರ್ಷಗಳಲ್ಲಿ ರಾಜ್ಯದ ಸಾಲದ ಪ್ರಮಾಣ ಶೇ. 44ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಸಿದ್ದರಾಮಯ್ಯನವರು ದೇಶದಲ್ಲಿಯೇ ಉಚಿತವಾಗಿ 7 ಕೆಜಿ ಅಕ್ಕಿಯನ್ನು ಬಡವರಿಗೆ ನೀಡಿದ್ದು, ಅಲ್ಲದೇ ಹಲವಾರು ಯೋಜನೆಗಳನ್ನು ನೀಡಿ ಅನ್ನರಾಮಯ್ಯ ಎಂದು ಹೆಸರು ಪಡೆದ ಅವಧಿ.

ನಂತರ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾದ 2018-19ರ ಅವಧಿಯಲ್ಲಿ ರಾಜ್ಯದ ಸಾಲದ ಪ್ರಮಾಣ 2,68,000 ಕೋ.ರೂ ಆಗಿತ್ತು. ಅವರ ಅವಧಿಯಲ್ಲಿ ಶೇ 10 ರಷ್ಟು ಸಾಲ ಹೆಚ್ಚಾಗಿತ್ತು, ಆ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರು ರೈತರ ಸಾಲ ಮನ್ನಾ ಮಾಡಿದ್ದರು. 2019ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ ರಾಜ್ಯದ ಸಾಲ 2,68,000 ಕೋಟಿ ರೂ. ಇತ್ತು. ಅವರ ಮುಂದಿನ ನಾಲ್ಕು ವರ್ಷಗಳ ಅವಧಿಯಲ್ಲಿ ಸಾಲದ ಪ್ರಮಾಣ 2023ರ ಮಾರ್ಚವರೆಗೆ 5,28,494 ಕೋಟಿ ರೂ. ಮಾಡಲಾಗಿತ್ತು. ಇದು ಅವರ ಅವಧಿಯಲ್ಲಿ ಶೇ 68ರಷ್ಟು ಹೆಚ್ಚಿಸಲಾಗಿತ್ತು, ನಾಲ್ಕು ವರ್ಷಗಳಲ್ಲಿ ಸುಮಾರು 2,60,594 ಕೋಟಿ ರೂ. ವರೆಗೆ ಸಾಲ ಮಾಡಿದ್ದಾರೆ. ಅಂದರೆ ಬಹುತೇಕ ಎರಡು ಪಟ್ಟು ಸಾಲ ಮಾಡಿದ ಕೀರ್ತಿ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ. 2022-23ನೇ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸುಮಾರು 72000 ಕೋಟಿ ರೂ. ಸಾಲ ಮಾಡಿದ್ದು, ಅದು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ-2003ರ ಶೇ. 25 ಮಿತಿಯನ್ನು ದಾಟಿ ರಾಜ್ಯದ ಹಣಕಾಸು ವ್ಯವಸ್ಥೆ ಹಾಳು ಮಾಡಿದ್ದಾರೆ. ಅಂದು ಸಾಲದ ಪ್ರಮಾಣ ಜಿ.ಎಸ್.ಡಿ.ಪಿ. ಯ ಶೇ. 27.49 ರಷ್ಟು ಮಾಡಲಾಗಿದೆ, ರಾಜಸ್ವದ ವಿತ್ತೀಯ ಕೊರತೆ ಜಿ.ಎಸ್.ಡಿ.ಪಿ. ಯ ಶೇ. 3ಕ್ಕಿಂತ ಕಡಿಮೆ ಇರಬೇಕು ಎನ್ನಲಾಗುತ್ತದೆ. ಆದರೆ ಬಸವರಾಜ ಬೊಮ್ಮಾಯಿಯವರ ಸರಕಾರದ ರಾಜಸ್ವದ ಜಿ.ಎಸ್.ಡಿ.ಪಿ. ಯು ಶೇ. 3.26 ರಷ್ಟು ವಿತ್ತೀಯ ಕೊರತೆ ಹೊಂದಿದ ಬಜೆಟ್ ಮಂಡಿಸಿದ್ದು, ರಾಜ್ಯದ ಹಣಕಾಸು ಸ್ಥಿತಿಗತಿ ಹಾಳು ಮಾಡಿರುತ್ತಾರೆ.
ಯಾವುದೇ ಸರಕಾರ ಕೇಂದ್ರ ಸರಕಾರವಾಗಲೀ, ರಾಜ್ಯ ಸರಕಾರವಾಗಲೀ ಬಜೆಟ್ ಮಂಡಿಸುವಾಗ ಸಾಲ ಮಾಡಲು ಕೆಲವು ನಿಬಂಧನೆಗಳು ಹಾಕಲಾಗಿದೆ. ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ-2003ರಂತೆ ಸಾಲದ ಪ್ರಮಾಣವು ಜಿ.ಎಸ್.ಡಿ.ಪಿ./ಜಿ.ಡಿ.ಪಿ. ಯ ಶೇ. 25ಕ್ಕಿಂತ ಹೆಚ್ಚಾಗಬಾರದು ಮತ್ತು ವಿತ್ತೀಯ ಕೊರತೆಯು ಜಿ.ಎಸ್.ಡಿ.ಪಿ./ಜಿ.ಡಿ.ಪಿ. ಯ ಶೇ 3ಕ್ಕಿಂತ ಹೆಚ್ಚು ಇರಬಾರದು, ಇದು ನಿಯಮ, ಈ ಮಿತಿಯೊಳಗೆ ಯಾವುದೇ ಸರಕಾರ ಸಾಲ ಮಾಡಬಹುದು ಎಂದು ಕಾಯ್ದೆ ಮಾಡಲಾಗಿದೆ.

ದೇಶದಲ್ಲಿ ಯಾವುದೇ ರಾಜ್ಯ ಸರಕಾರ ಸಾಲವೇ ಮಾಡಿಲ್ಲವೇ ಎಂದು ನೋಡಿದಲ್ಲಿ, ಎಲ್ಲಾ ರಾಜ್ಯಗಳು ಸಾಲ ಮಾಡಿವೆ. ಹಲವು ರಾಜ್ಯ ಸರಕಾರಗಳು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ-2003ರ ಮಿತಿಯನ್ನು ಮೀರಿ ಸಾಲ ಮಾಡಿವೆಯೇ, ನೋಡಬೇಕಿದೆ.
ತಮಿಳುನಾಡು ಸರಕಾರದ 2026-27ನೇ ಸಾಲಿನ ಕೊನೆಯವರೆಗಿನ ಒಟ್ಟು ಸಾಲ 10,71,770 ಕೋಟಿ ರೂ. ಇದು ಜಿ.ಎಸ್.ಡಿ.ಪಿ.ಯ ಶೇ. 26ರಷ್ಟಿದೆ. ಕೇರಳ ಸರಕಾರದ ಒಟ್ಟು ಸಾಲ 3,10,000 ಕೋಟಿ ರೂ., ಇದು ಜಿ.ಎಸ್.ಡಿ.ಪಿ. ಯ ಶೇ. 34ರಷ್ಟಿದೆ. ಈ ಸರಕಾರದ ರಾಜಸ್ವದ ವಿತ್ತೀಯ ಕೊರತೆ ಶೇ. 3.8, ಆಂಧ್ರಪ್ರದೇಶ ಸರಕಾರ 2026-27ನೇ ಸಾಲಿನಲ್ಲಿ 7,11,000 ಕೋಟಿ ರೂ. ಸಾಲ ಮಾಡಿದೆ. ಇದು ಜಿ.ಎಸ್.ಡಿ.ಪಿ. ಯ ಶೇ. 36ರಷ್ಟಿದೆ.
- ಬಿಜೆಪಿ ಆಡಳಿತ ಇರುವ ಮಹಾರಾಷ್ಟ್ರ ರಾಜ್ಯದಲ್ಲಿ 2026-27 ನೇ ಸಾಲಿಗೆ 11,02,654 ಕೋಟಿ ರೂ. ಇದ್ದು, ಜಿ.ಎಸ್.ಡಿ.ಪಿ. ಯ ಶೇ. 20.38ರಷ್ಟಿದೆ.
- 2. ಮಧ್ಯಪ್ರದೇಶದಲ್ಲಿ 5,40,000 ಕೋಟಿ ರೂ. ಸಾಲವಿದೆ. ಇದು ಆ ರಾಜ್ಯದ ಜಿ.ಎಸ್.ಡಿ.ಪಿ. ಯ ಶೇ. 32.5 ರಷ್ಟಿದೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು 2003ರ ಡಿಸೆಂಬರ್‌ನಲ್ಲಿ, ಅಂದು ಆ ರಾಜ್ಯದ ಒಟ್ಟು ಸಾಲ 30,000 ಕೋಟಿ ರೂ., ಈಗ 5,40,000 ಕೋಟಿ ರೂ. ಆಗಿದೆ. (ನಡುವೆ ಒಂದು ವರ್ಷ ಕಾಂಗ್ರೆಸ್ ಪಕ್ಷದ ಕಮಲನಾಥ ಅವರ ಸರಕಾರ ಅಧಿಕಾರಕ್ಕೆ ಬಂದಿತ್ತು). ಕಳೆದ 23 ವರ್ಷಗಳಲ್ಲಿ ಅಲ್ಲಿಯ ಬಿಜೆಪಿ ಸರಕಾರ 5,00,000 ಕೋಟಿ ರೂ. ಸಾಲ ಮಾಡಿದೆ.
- ಗುಜರಾತ್ ರಾಜ್ಯದ ಸಾಲದ ಪ್ರಮಾಣವು 4,33,000 ಕೋಟಿ ರೂ. ಇದೆ. ಅಲ್ಲಿ ನರೆಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ 2002ರಲ್ಲಿ ಆ ರಾಜ್ಯದ ಸಾಲದ ಪ್ರಮಾಣ 52,572 ಕೋಟಿ ರೂ. ಮಾತ್ರ, 2014ರಲ್ಲಿ ಅವರು ಅಧಿಕಾರ ಬಿಟ್ಟು ತೆರಳುವಾಗ 1,47,000 ಕೋಟಿ ರೂ. ಸಾಲ ಮಾಡಿಟ್ಟು ಹೋಗಿದ್ದಾರೆ. 2026-27ನೇ ಸಾಲಿನಲ್ಲಿ ಆ ರಾಜ್ಯದ ಬಜೆಟ್ ಗಾತ್ರ 3,40,000 ಕೋಟಿ ರೂ. ಮಾತ್ರ.
- ಉತ್ತರಪ್ರದೇಶ ರಾಜ್ಯದ ಒಟ್ಟು ಬಜೆಟ್ ಗಾತ್ರ 2026-27ನೇ ಸಾಲಿಗೆ 9,12,000 ಕೋಟಿ ರೂ, ಆ ರಾಜ್ಯದ ಸಾಲದ ಪ್ರಮಾಣ ಈ ವರ್ಷ 1,12,000 ಕೋಟಿ ರೂ. ಒಟ್ಟು ಇಲ್ಲಿಯವರೆಗೆ ಮಾಡಿದ ಸಾಲ 8,20,000 ಕೋಟಿ ರೂ. ಆಗಿದೆ. ಉತ್ತರ ಪ್ರದೇಶದಲ್ಲಿ 2017ರಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗ 3,25,000 ಕೋಟಿ ರೂ. ಸಾಲ ಇತ್ತು. ಅದು ಈಗ 8,20,000 ಕೋಟಿ ರೂ. ಆಗಿದೆ. ಅಂದರೆ ಸುಮಾರು ಮೂರು ಪಟ್ಟು ಹೆಚ್ಚು ಸಾಲ ಅಲ್ಲಿಯ ಬಿಜೆಪಿ ಸರಕಾರ ಮಾಡಿದೆ.
- ರಾಜಸ್ಥಾನ ರಾಜ್ಯದ ಸಾಲವು 6,70,000 ಕೋಟಿ ರೂ. ಆಗಿದೆ. ರಾಜಸ್ಥಾನದಲ್ಲಿ ಬಿಜೆಪಿ ಸರಕಾರ 2024ರಲ್ಲಿ ಅಧಿಕಾರಕ್ಕೆ ಬಂದ ನಂತರ ಇಲ್ಲಿಯವರೆಗೆ ಮೂರು ವರ್ಷದಲ್ಲಿ 1,51,000 ಕೋಟಿ ರೂ. ಸಾಲ ಮಾಡಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯನವರು ಮಂಡಿಸಿದ ಈ 17ನೇ ಬಜೆಟ್‌ನಲ್ಲಿ ಕಾಣುವ ದೋಷಗಳನ್ನು ಹುಡುಕುವ ಬದಲು ವಿರೋಧ ಪಕ್ಷಗಳು ಇಲ್ಲದ ಸಮಸ್ಯೆ ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಾಲ ಮಾಡದೇ ಇರುವ ಒಂದೇ ಒಂದು ಸರಕಾರ ದೇಶದಲ್ಲಿ ಇಲ್ಲದೇ ಇರುವಾಗ, ಸಾಲ ಮಾಡಿಯೇ ಸರಕಾರ ನಡೆಸುತ್ತಿರುವ ಕೇಂದ್ರ ಸರಕಾರ ಇರುವಾಗ ಮಿತಿಯೊಳಗೆ ಸಾಲ ಮಾಡಿರುವ ಕರ್ನಾಟಕ ಸರಕಾರದ ಮುಖ್ಯಮಂತ್ರಿಯವರನ್ನು ಅನಗತ್ಯವಾಗಿ ಟೀಕೆ ಮಾಡುವ ಚಾಳಿ ವಿರೋಧ ಪಕ್ಷಗಳಿಗೆ ಬಂದಿರುವ ಉದ್ದೇಶವೇನು? ತನ್ನ ಅವಧಿಯಲ್ಲಿ ಮೀತಿ ಮಿರಿ ಸಾಲ ಮಾಡಿರುವ ಬಸವರಾಜ ಬೊಮ್ಮಾಯಿ ಈ ವಿಷಯದ ಬಗ್ಗೆ ಮಾತನಾಡುವದು ನಾಚಿಕೆಗೇಡಿನ ಸಂಗತಿ. ಸಾಲದಲ್ಲೇ ಮುಳಗಿರುವ ಕೇಂದ್ರ ಸರಕಾರದಲ್ಲಿ ಸಚಿವರಾಗಿರುವ ಕುಮಾರಸ್ವಾಮಿಯವರು ಮಾತನಾಡುವುದು ಅಪ್ರಬುದ್ದ ನಡವಳಿಕೆ ಎನ್ನಬಹುದಾಗಿದೆ. ಸಂಸ್ಕಾರವಿಲ್ಲದೇ ಏಕವಚನದಲ್ಲಿ ಸಿದ್ದರಾಮಯ್ಯನವರನ್ನು ಟೀಕೆ ಮಾಡುವ ವಿರೋಧ ಪಕ್ಷದ ನಾಯಕ ಆರ್.ಅಶೋಕ ಎಂತಹ ಮೇಧಾವಿ.
ರಾಜ್ಯದ ಬಗ್ಗೆಯಾಗಲೀ ದೇಶದ ಬಗ್ಗೆಯಾಗಲೀ ಕಾಳಜಿ ಇದ್ದಲ್ಲಿ ಸಾಲ ಮಾಡದೇ ಹೇಗೆ ಸರಕಾರ ನಡೆಸಬೇಕು ಎಂದು ತಮ್ಮ ಅವಧಿಯಲ್ಲಿ ಸಾಬೀತು ಮಾಡಿದವರು ರಾಜ್ಯ ಸರಕಾರವನ್ನು ಟೀಕೆ ಮಾಡಬಹುದು. ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ-2003ರಂತೆ ಜಿ.ಎಸ್.ಡಿ.ಪಿ ಯ ಶೇ. 25ರ ಮಿತಿ ಮೀರಿ ಸಾಲ ಮಾಡಿದಲ್ಲಿ ಖಂಡಿತವಾಗಿಯೂ ಟೀಕೆ ಮಾಡಬೇಕು. ರಾಜಸ್ವ ವಿತ್ತೀಯ ಕೊರತೆ ಪ್ರಮಾಣ ಶೇ 3ರ ಮಿತಿಯೊಳಗೆ ಇರುವಾಗ ಟೀಕೆ ಮಾಡುವುದು ಯಾವ ಬುದ್ದಿವಂತಿಕೆ? ಇನ್ನು ಬಸವರಾಜ ಬೊಮ್ಮಾಯಿಯವರು ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯ್ದೆ-2003ರಂತೆ ಜಿ.ಎಸ್.ಡಿ.ಪಿ ಯ ಶೇ 25ರ ಮಿತಿ ಶೇ 24.94 ಹೇಗಾಯಿತು? ಕೇವಲ ಶೇ 0.06 ಮಾತ್ರ ಕಡಿಮೆ ಮಾಡಲು ಹೇಗೆ ಸಾದ್ಯ ಎಂದು ಪ್ರಶ್ನೆ ಮಾಡಿದ್ದಾರೆ. ಅವರ ಅವಧಿಯಲ್ಲಿ ಶೇ 27.84 ಹೇಗಾಯಿತು ಎಂದು ಮೊದಲು ಹೇಳಬೇಕು. ಟೀಕೆಗಾಗಿ ಟೀಕೆ ಮಾಡುವುದು ಹವ್ಯಾಸ ಮಾಡಿಕೊಂಡು ರಾಜ್ಯ ಸರಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಕಡಿಮೆ ಮಾಡಲು ರಚಿಸಿರುವ ಷಡ್ಯಂತ್ರ ಎನ್ನುವಂತಿದೆ ಇವರೆಲ್ಲರ ನಡವಳಿಕೆ, ವಾಸ್ತವಾಂಶ ನೋಡಿ ಮಾತನಾಡಲಿ. ರಾಜ್ಯದ ಜನರಿಗೆ ಸತ್ಯ ತಿಳಿಸುವ ಪ್ರಯತ್ನ ಮಾಡಲಿ. ಉಚಿತ ಕೊಡುಗೆಯಿಂದ ಸಾಲವಾಗಿದೆ ಎಂದು ಹೇಳುವುದು, ಗ್ಯಾರಂಟಿಗಳನ್ನು ನಿಲ್ಲಿಸಬಾರದು ಎನ್ನುವುದು ಇಬ್ಬಗೆ ನೀತಿಯಲ್ಲವೇ, ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗಿದೆ ಎನ್ನುವಾಗ ಗ್ಯಾರಂಟಿಗಳನ್ನು ನಿಲ್ಲಿಸಿ ಎಂದು ಗಟ್ಟಿಯಾಗಿ ಬಿಜೆಪಿ ನಾಯಕರು ಹೇಳಬೇಕು. ಅದು ಹೇಳುವ ಧೈರ್ಯವಿಲ್ಲದೇ ಗ್ಯಾರಂಟಿಗಳನ್ನು ಟೀಕಿಸುವುದು ಅಪರಾಧವಾಗುತ್ತದೆ.

ಡಾ ರಝಾಕ್ ಉಸ್ತಾದ್
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಯಚೂರು




