ವಿದೇಶಕ್ಕೆ ಹೋದಾಗಲೆಲ್ಲಾ ಬುದ್ದ, ಗಾಂಧಿ ಎಂದು ಹೇಳುವ ಮೋದಿ ಅವರು ದೇಶದಲ್ಲಿ ಈ ಬಗ್ಗೆ ಮಾತೇ ಎತ್ತುವುದಿಲ್ಲ. ಹೀಗಿದ್ದರೂ, ವಿದೇಶಿ ನೆಲದಲ್ಲಿ ಮೋದಿಯವರು ಬಣ್ಣ ಬದಲಿಸುವುದೇಕೆ? ವಿದೇಶದಲ್ಲಿ ನುಡಿದಂತೆ ಸ್ವದೇಶದಲ್ಲಿ ಅವರು ನಡೆಯುವುದಿಲ್ಲ ಯಾಕೆ?
‘ವ್ಯವಸ್ಥೆ ಗತದಲ್ಲೇ ಹೂತು ಹೋದರೆ ವಿಶ್ವದ ಮುನ್ನಡೆ ಸಾಧ್ಯವಿಲ್ಲ’ (World cannot progress if systems locked in the past) ಎಂದು ವಿದೇಶದ ನೆಲದಿಂದ ಹೇಳಿದ್ದಾರೆ ಮೋದಿ. ಆದರೆ, ಸ್ವದೇಶದಲ್ಲಿ ಅವರಿಗಾಗಲಿ, ಅವರ ಪಾರ್ಟಿ ಬಿಜೆಪಿಗಾಗಲಿ, ಬಿಜೆಪಿಯ ತಾಯಿ ಆರ್ ಎಸ್ ಎಸ್‌ಗೇ ಇರಲಿ, ಗತವನ್ನು ಕೆದಕುವುದು ಸಾವು-ಬದುಕಿನ ಪ್ರಶ್ನೆ. ಗತವನ್ನು ಕೈ ಬಿಟ್ಟರೆ ಇವರ ರಾಜಕೀಯದ ನೆಲವೇ ಕುಸಿದು ಹೋಗುತ್ತದೆ. ಆದರೂ, ದೇಶದ ಹೊರಗೆ ಸೌಹಾರ್ದತೆ, ವರ್ತಮಾನದ ನಾಟಕ ಮಾಡುತ್ತಿದ್ದಾರೆ ನಮ್ಮ ಪ್ರಧಾನಿ ಮೋದಿ ಅವರು…
ಹೌದು, “ಅಭಿವೃದ್ಧಿಯನ್ನು ಪ್ರತಿನಿಧಿಸುವ, ಹಂಚಿಕೊಳ್ಳುವ ಮತ್ತು ಶಾಂತಿಯನ್ನು ರಕ್ಷಿಸುವ ಜಗತ್ತು ತನ್ನ ನಿರ್ಧಾರವನ್ನು ತೆಗೆದುಕೊಳ್ಳುವಾಗ ವಾಸ್ತವವನ್ನು ಪ್ರತಿನಿಧಿಸುತ್ತದೆಯೇ ಹೊರತು, 1945ರ ಹಿಂದಿನ ಗತದ ಪ್ರಪಂಚವನ್ನಲ್ಲ. ಏಕೆಂದರೆ, ವ್ಯವಸ್ಥೆಗಳು ಗತದಲ್ಲೇ ಹೂತು ಹೋದರೆ, ಜಗತ್ತು ಮುನ್ನಡೆಯಲು ಸಾಧ್ಯವಿಲ್ಲ” ಇವು ವಿದೇಶಿ ನೆಲದಲ್ಲಿ ಮೋದಿ ಅವರು ಉದುರಿಸಿದ ಮುತ್ತುಗಳು.
ಆದರೆ, ಇದೇ ಮೋದಿ ಅವರು ಭಾರತದ ನೆಲದಲ್ಲಿ ನೆಹರು ಮತ್ತು ಅವರ ಕಾಲವನ್ನೇ ಪದೇ-ಪದೇ ಕೆದಕುತ್ತಲೇ ಇರುತ್ತಾರೆ. ಗತವನ್ನು ಅಗೆದು-ತೋಡಿ ಗುಡ್ಡೆ ಹಾಕುತ್ತಾರೆ.
ವಿದೇಶಕ್ಕೆ ಹೋದಾಗಲೆಲ್ಲಾ ಬುದ್ದ, ಗಾಂಧಿ ಎಂದು ಹೇಳುವ ಮೋದಿ ಅವರು ದೇಶದಲ್ಲಿ ಈ ಬಗ್ಗೆ ಮಾತೇ ಎತ್ತುವುದಿಲ್ಲ. ಹೀಗಿದ್ದರೂ, ವಿದೇಶಿ ನೆಲದಲ್ಲಿ ಮೋದಿಯವರು ಬಣ್ಣ ಬದಲಿಸುವುದೇಕೆ? ವಿದೇಶದಲ್ಲಿ ನುಡಿದಂತೆ ಸ್ವದೇಶದಲ್ಲಿ ಅವರು ನಡೆಯುವುದಿಲ್ಲ ಯಾಕೆ?

ಗತದಲ್ಲಿ ಹೂತು ಹೋದರೆ, ವಿಶ್ವ ಮುನ್ನಡೆಯುವುದು ಸಾಧ್ಯವಿಲ್ಲ ಎನ್ನುವ ಮೋದಿ ಅವರೇ ಭಾರತದಲ್ಲಿ ಗತದಲ್ಲೇ ವಿಹರಿಸುತ್ತಿದ್ದಾರೆ. ಹೀಗಿರುವಾಗ, ಭಾರತ ಹೇಗೆ ಅಭಿವೃದ್ಧಿ ಹೊಂದುತ್ತದೆ?
ಭಾರತದಲ್ಲಿ ಮೋದಿ ಅವರು ಮಾಡುತ್ತಿರುವ ರಾಜಕೀಯ, ಅವರ ಅಜೆಂಡಾ ಎಲ್ಲವೂ ಗತದ್ದೆ ಆಗಿದೆ. ಅವರ ಆಡಳಿತದಲ್ಲಿ ಅವರು ವರ್ತಮಾನದ್ದೇನಾದರೂ ಮಾತನಾಡುವುದು ಇದೆಯಾ? ದೇಶದಲ್ಲಿ ಬಡತನ, ನಿರುದ್ಯೋಗ, ಅಸಮಾನತೆ, ಜಾತಿ ಭೇಧ – ಭಾವ, ತಾಂಡವವಾಡುತ್ತಿದೆ. ಇವೆಲ್ಲವೂ ಭಾರತದ ಕ್ರೂರ ವಾಸ್ತವಗಳು. ಆದರೆ, ಮೋದಿ ಅವರು ಈ ವಾಸ್ತವದ ಬಗ್ಗೆ ಎಂದಾದರೂ ತುಟಿಬಿಚ್ಚಿರುವುದು ಇದೆಯೇ? ಖಂಡಿತಾ ಇಲ್ಲ!
ಅಂದಮೇಲೆ, ಮೋದಿ ಅವರದ್ದು ಇದೆಂತಹ ಹಿಪಾಕ್ರಸಿ? ರಾಮ ಜನ್ಮಭೂಮಿ, ಕಾಶಿ, ಮಥುರಾ ಇವೆಲ್ಲ ಗತ ವಿಚಾರಗಳೇ ಆಗಿವೆ. ವರ್ಣಾಶ್ರಮ ವ್ಯವಸ್ಥೆ ಇದ್ದದ್ದು ಯಾವಾಗ? ಬ್ರಾಹ್ಮಣ ಕ್ಷತ್ರೀಯ ಶೂದ್ರ ವೈಶ್ಯ ಎಂಬ ಈ ನಾಲ್ಕು ವರ್ಣಗಳು ಇದ್ದದ್ದು ಯಾವ ಸಂದರ್ಭದಲ್ಲಿ? ಅದೇ ಗತದ ವರ್ಣಾಶ್ರಮ ವ್ಯವಸ್ಥೆಯ ಅಜೆಂಡಾಗಳಿಗೆ ಜೋತು ಬಿದ್ದಿರುವುದು ಮೋದಿ ಅವರ ಆರ್ ಎಸ್ ಎಸ್ ಮತ್ತು ಬಿಜೆಪಿ. ಈಗಲೇ ಆ ಗತದ ವರ್ಣಾಶ್ರಮ ವ್ಯವಸ್ಥೆಯನ್ನೇ ಜಾರಿಗೆ ತಂದು ಬ್ರಾಹ್ಮಣವೇ ಶ್ರೇಷ್ಠ ಎಂದು ಹೇಳಹೊರಟಿದ್ದಾರೆ. ಗತದ ಬ್ರಾಹ್ಮಣ ಶ್ರೇಷ್ಠತೆ ಇವರಿಗೆ ಈಗ ಯಾಕೆ ಬೇಕು?
ಈ ಸುದ್ದಿ ಓದಿದ್ದೀರಾ? ಚಿತ್ರರಂಗದಲ್ಲಿ ಸ್ತ್ರೀ ಪೀಡನೆ- ಇಲ್ಲಿ ಶ್ರುತಿ ಹರಿಹರನ್, ಅಲ್ಲಿ ಮತ್ತೊಬ್ಬರು… ಅಷ್ಟೇ ವ್ಯತ್ಯಾಸ
ಪ್ರಜಾಪ್ರಭುತ್ವ ಮತ್ತು ಬಾಬಾ ಸಾಹೇಬರು ಬರೆದಿರುವ ಸಂವಿಧಾನ ಇವೆರಡು ಹೊಸ ಭಾರತ ಚಹರೆಗಳು. ಭಾರತದ ದಿಕ್ಕು-ದಾರಿಯನ್ನು ಬದಲಿಸಿರುವ ಹೊಸ ಸಂಗತಿಗಳು. ಹೊಸ ಭಾರತದಲ್ಲಿ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂದು ಹೇಳುವಾಗ ಮತ್ತದೇ ಗತದ ಮನುವಾದವನ್ನು ಹೇರಲು ಹೊರಟಿದೆ ಮೋದಿ ಅವರ ಸಂಘಪರಿವಾರ.
ಗುರುಕುಲ ಪದ್ದತಿ ಚೆನ್ನಾಗಿತ್ತು ಎಂದು ಮೋದಿ ಅವರು ಹೇಳುತ್ತಾರೆ. ಆದರೆ, ಗುರುಕುಲದಲ್ಲಿ ಎಲ್ಲರಿಗೂ ಅವಕಾಶ ಇತ್ತಾ? ಗತದ 1945ಕ್ಕೂ ಹಿಂದೆ ಲಿಂಗ ಸಮಾನತೆ ಇತ್ತಾ? ಶೂದ್ರರು, ದಲಿತರಿಗೆ ಶಿಕ್ಷಣ ಇತ್ತಾ? ಅದರೆ, ಸಂವಿಧಾನದಲ್ಲಿ ಎಲ್ಲರಿಗೂ ಶಿಕ್ಷಣ ಕಲಿಯುವುದಕ್ಕೆ ಅವಕಾಶ ಇದೆ. ಎಲ್ಲರಿಗೂ ಸಿಗುವ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವ ಗತವನ್ನೇ ಮತ್ತೆ ಹೇರಲು ಹವಣಿಸುತ್ತಿರುವುದೇಯೇ?
ಈ ಮೋದಿ ಮತ್ತವರ ಭಕ್ತ ಗಣವು ಪ್ಲಾಸ್ಟಿಕ್ ಸರ್ಜರಿ ಬಹಳ ಹಿಂದೇಯೇ ಇತ್ತು ಎಂದು ಹೇಳುತ್ತಾರೆ. ಗಣೇಶನ ಮುಖ ತೆಗೆದು ಆನೆ ಮುಖ ಹಾಕಿರೋದು ಪ್ಲಾಸ್ಟಿಕ್ ಸರ್ಜರಿ ಎಂದು ಹೇಳುತ್ತಾರೆ. ಇದು ಗತದ ಮಾತಲ್ಲವೇ? ಮೋದಿ ಅವರೇ..
ಚುನಾವಣಾ ಪ್ರಚಾರದಲ್ಲಿ ಹಿಂದೂ ಮುಸ್ಲಿಂ ದ್ರುವೀಕರಣಕ್ಕೆ ಮೊಘಲರು, ಮುಸ್ಲಿಮರೇ ಈ ಮೋದಿ ಮತ್ತವರ ಪಕ್ಷದ ಬಂಡವಾಳ. ಪ್ರಜಾಪ್ರಭುತ್ವ ಸಮಾಜದಲ್ಲಿಯೂ 6ನೇ ಶತಮಾನದ ರಾಜಪ್ರಭುತ್ವದ ಗತವನ್ನೇ ಜಪಿಸುತ್ತಲೇ, ಅದನ್ನೇ ಹೇಳುತ್ತಲೇ ರಾಜಕೀಯ ಮಾಡುತ್ತಿದ್ದಾರೆ. ಅವರ ಇತಿಹಾಸವನ್ನು ಅಳಿಸಿ ಹಾಕುವ ಕುತಂತ್ರದಲ್ಲಿದ್ದಾರೆ.
ಹೀಗೆ, ಎಂದಿಗೂ ಎಂದೆಂದಿಗೂ ಭಾರತದಲ್ಲಿ ಗತದಲ್ಲಿಯೇ ಬದುಕುವ ಮೋದಿ ಯಾವತ್ತೂ ವರ್ತಮಾನಕ್ಕೆ ಬರುವುದಿಲ್ಲ. ಆದರೆ, ವಿದೇಶದಲ್ಲಿ ಗತದ ಬಗ್ಗೆ ಮಾತನಾಡಬಾರದು, ಗತದ ಹಿಂದೆ ಹೋಗಬಾರದು ಎಂದು ಹೇಳುತ್ತಾರೆ.
ಆದರೆ, ಮೋದಿ ಅವರು ಸಮಾನತೆ, ಜಾತಿ ನಿರ್ಮೂಲನೆ ಕುರಿತು ಮಾತನಾಡುವುದಿಲ್ಲ. ಇಂದಿಗೂ, ಭಾರತದ ನೆಲದಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿದೆ. ಅಸ್ಪ್ರಶ್ಯರನ್ನು ಹಳ್ಳಿ ಹಳ್ಳಿಗಳಲ್ಲಿ ಹೊಡೆಯುವುದು ನಿಂತಿಲ್ಲ. ಈ ಬಗ್ಗೆ ಮೋದಿ ಯಾಕೆ ಮಾತಾಡುವುದಿಲ್ಲ. ಅಂತರ್ಜಾತಿ ವಿವಾಹವಾದರೆ ಯಾಕೆ ಗುಂಪು ಹಲ್ಲೆ, ಹತ್ಯೆಗಳು ನಡೆಯುತ್ತಿವೆ. ಇಂದಿಗೂ ದಲಿತರಿಗೆ ಸ್ಮಶಾನ ಇಲ್ಲ. ಇರುವ ಸ್ಮಶಾನಗಳಲ್ಲಿ ಮಣ್ಣು ಮಾಡೋಕೆ ಅವಕಾಶ ಇಲ್ಲ, ನೀರು ಕುಡಿಯೋಕೆ ಅವಕಾಶ ಇಲ್ಲ. ದಲಿತ ಬಾಲಕ ನೀರು ಕುಡಿದ ಎಂದು ಆತನನ್ನ ಹೊಡೆದು ಸಾಯಿಸಿದ ಘಟನೆ ನಡೆದಿತ್ತು. ಇದರ ಬೇರುಗಳು ಎಲ್ಲಿವೆ. ಗತದಲ್ಲಿಯೇ ಇದೆ. ಈ ಗತವನ್ನು ಜನರ ಮನದಲ್ಲಿ ಶಾಶ್ವತವಾಗಿ ಉಳಿಸುತ್ತಿರುವುದು ಇದೇ ಮೋದಿ ಅವರ ಸಂಘಪರಿವಾರ.

1945 ಹೋಗೊದು ಬೇಡ ಎಂದು ಹೇಳುವ ಮೋದಿ ಅವರೇ, 500, 1000 ವರ್ಷಗಳ ಹಿಂದೆ ಹೋಗುತ್ತಾರೆ. ವಿಶ್ವದ ಮುನ್ನಡೆಗೆ ಗತ ಅಡ್ಡಿಯಾಗುತ್ತದೆ ಎಂಬ ಸತ್ಯವನ್ನು ವಿದೇಶಿ ವೇದಿಕೆಯಲ್ಲಿ ಘೋಷಿಸುವ ಮೋದಿ, ಅದೇ ಮಾತನ್ನು ಭಾರತಕ್ಕೆ ಅನ್ವಯಿಸಿಕೊಳ್ಳಲು ಮಾತ್ರ ಸಿದ್ಧರಿಲ್ಲ. ಏಕೆಂದರೆ, ಮೋದಿ ಅವರ ರಾಜಕೀಯಕ್ಕೂ, ಅವರ ಪಕ್ಷ ಬಿಜೆಪಿಗೂ, ಬಿಜೆಪಿಯ ಮಾತೃ ಸಂಸ್ಥೆ ಆರ್ ಎಸ್ ಎಸ್‌ಗೂ ಗತವನ್ನು ಕೆದಕಿದರೇ ಉಳಿಗಾಲ, ಗತವನ್ನು ಕೈಬಿಟ್ಟ ಕ್ಷಣದಲ್ಲೇ ಅವರ ರಾಜಕೀಯ ನೆಲ ಕುಸಿದು ಬೀಳುತ್ತದೆ.
ಆದ್ದರಿಂದಲೇ, ಮೋದಿ ಅವರು ಭಾರತದಲ್ಲಿ ಗತವನ್ನು ಬಿಟ್ಟು ಹೊರಬರುವುದಿಲ್ಲ, ರಾಜಕೀಯ ಮಾಡುವುದಿಲ್ಲ. ಆದರೆ, ವಿದೇಶಿ ನೆಲದಲ್ಲಿ ಮೋದಿ ಬಣ್ಣ ಬದಲಿಸುತ್ತಾರೆ. ಅಲ್ಲಿ ಅವರು ಶಾಂತಿ, ಸಮೃದ್ಧಿ, ಪ್ರಗತಿ, ಭವಿಷ್ಯ, ವರ್ತಮಾನ ಎಂದು ಮಾತನಾಡುತ್ತಾರೆ. ಆದರೆ, ಸ್ವದೇಶದಲ್ಲಿ ಮಾತ್ರ ಗತದ ಶವಗಳನ್ನು ಎಳೆದು ತಂದು ರಾಜಕೀಯ ಮೆರವಣಿಗೆ ನಡೆಸುತ್ತಾರೆ. ಶತಮಾನಗಳ ಹಿಂದಿನ ದ್ವೇಷ ರಾಜಕಾರಣವನ್ನೇ ಪೋಷಿಸುತ್ತಾರೆ. ವಿದೇಶದಲ್ಲಿ ವರ್ತಮಾನಕ್ಕೆ ತಕ್ಕ ನಿರ್ಧಾರಗಳ ಅಗತ್ಯದ ಬಗ್ಗೆ ಉಪನ್ಯಾಸ ನೀಡುವ ಮೋದಿ, ದೇಶದೊಳಗೆ ವರ್ತಮಾನ ಸಮಸ್ಯೆಗಳತ್ತ ಕಣ್ಣು ಮುಚ್ಚಿಕೊಂಡೇ ಇದ್ದಾರೆ.
ಪ್ರಶ್ನೆ ಸರಳವಾಗಿದೆ: ಗತದಲ್ಲೇ ಹೂತು ಹೋದರೆ ವಿಶ್ವ ಮುನ್ನಡೆಯದು ಎಂದಾದರೆ, ವರ್ತಮಾನಕ್ಕೆ ಬಾರದೆ ಗತದಲ್ಲೇ ವಿಹರಿಸುತ್ತಿರುವ ಮೋದಿ ಮತ್ತು ಅವರ ಆಡಳಿತದಲ್ಲಿ ಭಾರತ ಹೇಗೆ ಅಭಿವೃದ್ಧಿ ಹೊಂದುತ್ತದೆ? ಕಳೆದ ಹನ್ನೆರಡು ವರ್ಷಗಳಲ್ಲಿ ದೇಶವನ್ನು ಸುಡುತ್ತಿರುವ ಯಾವ ವರ್ತಮಾನ ಸಮಸ್ಯೆಗಳನ್ನು ಮೋದಿ ಸರ್ಕಾರ ಗಂಭೀರವಾಗಿ ಕೈಗೆತ್ತಿಕೊಂಡು ಬಗೆಹರಿಸಿದೆ? ನಿರುದ್ಯೋಗ, ಬೆಲೆ ಏರಿಕೆ, ರೈತರ ಸಂಕಷ್ಟ, ಶಿಕ್ಷಣ–ಆರೋಗ್ಯದ ಕುಸಿತ, ಅಸಮಾನತೆ, ಸಾಮಾಜಿಕ ವಿಭಜನೆ – ಇವುಗಳಲ್ಲಿ ಯಾವುದಕ್ಕೆ ಗತದ ಕಥೆ ಉತ್ತರ ಕೊಡುತ್ತದೆ?
ಮೋದಿ ಅವರು ವಿದೇಶಿ ವೇದಿಕೆಯಲ್ಲಿ ಹೇಳುವ ತಮ್ಮದೇ ಮಾತುಗಳನ್ನು ಭಾರತದಲ್ಲಿಯೂ ಅನ್ವಯಿಸಬೇಕು ಎಂಬುದು ಕನಿಷ್ಠ ರಾಜಕೀಯ ನೈತಿಕತೆ. ಆದರೆ, ಇಲ್ಲಿಯ ವಾಸ್ತವ ಬೇರೆ. ದೇಶದೊಳಗೆ ಚುನಾವಣೆ ಗೆಲ್ಲಲು ಗತವನ್ನು ಕೆದಕುವ ಮೋದಿ, ದೇಶದಾಚೆಗೆ ‘ವಿಶ್ವಗುರು’ ಆಗಲು ವರ್ತಮಾನ ಮತ್ತು ಭವಿಷ್ಯ ಕುರಿತು ಮಾತನಾಡುತ್ತಾರೆ. ಇದು ಕೇವಲ ನಾಟಕವಲ್ಲದೇ ಮತ್ತೇನು? ವಿದೇಶದಲ್ಲಿ ನುಡಿದಂತೆ ಸ್ವದೇಶದಲ್ಲಿ ನಡೆಯುವ ಧೈರ್ಯ ಮೋದಿ ಅವರಿಗೆ ಇಲ್ಲ ಎಂಬುದು ಕಠು ವಾಸ್ತವ.
ವಿಶ್ವದ ಮುಂದೆ ಪ್ರಗತಿಯ ಪಾಠ ಹೇಳುವ ಮೊದಲು, ಅದನ್ನೇ ತಮ್ಮ ದೇಶದಲ್ಲಿ ಜಾರಿಗೊಳಿಸುವ ಧೈರ್ಯ ಬೇಕು. ಇಲ್ಲದಿದ್ದರೆ, ವಿದೇಶಿ ನೆಲದಲ್ಲಿ ಉದುರಿಸುವ ಈ ‘ಮುತ್ತುಗಳು’ ದೇಶದ ಜನರಿಗೆ ಕೇವಲ ಖಾಲಿ ಮಾತುಗಳಾಗಿಯೇ ಉಳಿಯುತ್ತವೆ.




