ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್ ಅಥವಾ ಇತರೆ ಕರೆನ್ಸಿಗಳಲ್ಲಿ ತೈಲ ವ್ಯವಹಾರ ಆರಂಭಿಸಬಹುದು. ಜಾಗತಿಕ ಹಣಕಾಸು ವ್ಯವಸ್ಥೆ ಅವರವರ ಅನುಕೂಲ ತಕ್ಕಂತೆ 'ಬಹು-ಕರೆನ್ಸಿ' ವ್ಯವಸ್ಥೆಯಾಗಿ ಬದಲಾಗಬಹುದು. ಇದು ನಿಧಾನವಾಗಿ ಡಾಲರ್ ವರ್ಸಸ್ ಯುವಾನ್ ಸ್ಪರ್ಧೆಯನ್ನು ಗಟ್ಟಿಗೊಳಿಸಬಹುದು.
ಜಾಗತಿಕ ತೈಲ ವ್ಯಾಪಾರ ಬಹಳ ಹಿಂದಿನಿಂದಲೂ ಅಮೆರಿಕನ್ ಡಾಲರ್‌ನಲ್ಲೇ ನಡೆಯುತ್ತಿತ್ತು. ಇದರಿಂದ ಡಾಲರ್ ಜಾಗತಿಕ ಮನ್ನಣೆ ಗಳಿಸಿತ್ತು. ಪ್ರಾಬಲ್ಯ ಹೆಚ್ಚಿಸಿಕೊಂಡಿತ್ತು. ದೇಶಗಳ ಮೇಲೆ ಸವಾರಿ ಮಾಡುತ್ತಿತ್ತು. ಆದರೆ, ಈಗ ಇಸ್ರೇಲ್ ಜೊತೆ ಸೇರಿ ಇರಾನ್ ಮೇಲೆ ಮಾಡುತ್ತಿರುವ ಯುದ್ಧದಿಂದಾಗಿ ಅಮೆರಿಕನ್ ಡಾಲರ್ ಪ್ರಾಬಲ್ಯ ಕುಸಿಯತೊಡಗಿದೆ. ಜಾಗತಿಕ ಮಟ್ಟದಲ್ಲಿ ಡಾಲರ್ ಸ್ಥಾನವನ್ನು ಚೈನಾದ ಯುವಾನ್ ಕರೆನ್ಸಿ ನಿಧಾನವಾಗಿ ಆಕ್ರಮಿಸಿಕೊಳ್ಳುವ ದಿಕ್ಕಿನಲ್ಲಿ ಸಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕೊಲ್ಲಿ ಯುದ್ಧ ಕರೆನ್ಸಿ ಯುದ್ಧವಾಗಿ ಮಾರ್ಪಟ್ಟಿದೆ. ಜಾಗತಿಕ ಮಟ್ಟದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.
ಸಾಂಪ್ರದಾಯಿಕವಾಗಿ ಕರೆನ್ಸಿ ಯುದ್ಧ ಎಂದರೆ ದೇಶಗಳು ತಮ್ಮ ಕರೆನ್ಸಿಯ ಮೌಲ್ಯವನ್ನು ಕಡಿಮೆ ಮಾಡಿ ರಫ್ತನ್ನು ಉತ್ತೇಜಿಸುವುದು. ಆದರೆ ಈಗ ಅದು ತೈಲ ಮತ್ತು ಇಂಧನ ವ್ಯಾಪಾರವನ್ನು ಯಾವ ಕರೆನ್ಸಿಯಲ್ಲಿ ಮಾಡಬೇಕು ಎಂಬುದರ ಮೇಲೆ ಅವಲಂಬಿಸಿದೆ. ಕೊಲ್ಲಿ ಯುದ್ಧ ಆರಂಭವಾಗಿ ನಾಲ್ಕು ವಾರಗಳ ನಂತರ ಇರಾನ್ ತನ್ನ ತೈಲದ ಬಹುಭಾಗವನ್ನು ಚೈನಾಗೆ ಮಾರುತ್ತಿದೆ. ಚೈನಾದ ಕರೆನ್ಸಿ ಯುವಾನ್‌ನಲ್ಲಿ ಸ್ವೀಕರಿಸುತ್ತಿದೆ. ಈ ಸಂದರ್ಭವನ್ನು ಬಳಸಿಕೊಂಡ ಚೈನಾ, ಜಾಗತಿಕ ವ್ಯಾಪಾರದಲ್ಲಿ ಯುವಾನ್ ಬಳಕೆ ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದು ಪೆಟ್ರೋ-ಡಾಲರ್ ವ್ಯವಸ್ಥೆಗೆ ಸವಾಲು ಒಡ್ಡುತ್ತಿದೆ. ಡಾಲರ್ ಪ್ರಾಬಲ್ಯಕ್ಕೆ ಪೆಟ್ಟು ನೀಡುತ್ತಿದೆ.
ಇದಕ್ಕೆ ಪೂರಕವಾಗಿ, ಅಮೆರಿಕದೊಳಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಪುಷ್ಟಿ ನೀಡುತ್ತಿವೆ. ಇಸ್ರೇಲ್ ಸರ್ಕಾರವು ಅಮೆರಿಕಾವನ್ನು ಈ ಯುದ್ಧಕ್ಕೆ ಹೇಗೆ ಎಳೆಯಿತು ಎಂಬ ಪ್ರಶ್ನೆಗಳು ಈಗ ಮುನ್ನಲೆಗೆ ಬಂದಿವೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಲುವಿಗೆ ಅವರದೇ ಪಕ್ಷ ವಿರುದ್ಧ ನಿಲುವು ತಳೆದಿದೆ. ಪಕ್ಷದ ಇಸ್ರೇಲ್ ಪರ ನಿಲುವನ್ನು ಯುವ ಪೀಳಿಗೆ ವಿರೋಧಿಸುತ್ತಿದೆ. ಉಪಾಧ್ಯಕ್ಷ ಜೆ.ಡಿ. ವಾನ್ಸ್, ಯುದ್ಧ ನಿರ್ಧಾರದಿಂದ ದೂರ ಉಳಿದಿದ್ದಾರೆ. ಇದು ಡೆಮಾಕ್ರಾಟ್ ಪಕ್ಷದಲ್ಲಿ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿದೆ.

ಹೀಗಾಗಿ, ಈ ಯುದ್ಧ ಹೇಗೆ ಅಂತ್ಯಗೊಂಡರೂ, ಅಮೆರಿಕಾ-ಇಸ್ರೇಲ್ ಸಂಬಂಧಗಳು ಮೊದಲಿನಂತಿರುವುದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಇರಾನ್ ಸಂಪೂರ್ಣವಾಗಿ ಶರಣಾದರೂ ಸಹ, ಮುಂದಿನ ದಿನಗಳಲ್ಲಿ ಅಮೆರಿಕ, ಇಸ್ರೇಲ್ ಬೆಂಬಲಿಸುವುದು ಕಷ್ಟವಾಗಬಹುದು. ಇಸ್ರೇಲ್ ವಿರೋಧಿಯಾಗಿ ಮಾರ್ಪಡುವುದು ಅಸಾಧ್ಯವಾದರೂ, ಅದು ನೀಡುವ ರಾಜತಾಂತ್ರಿಕ ಮತ್ತು ಸೈನಿಕ ಬೆಂಬಲ- ಇದೇ ರೀತಿ ಮುಂದುವರೆಯುತ್ತದೆ ಎನ್ನುವುದರ ಬಗ್ಗೆ ಅನುಮಾನಗಳಿವೆ. ಅಮೆರಿಕ ಸೈನಿಕರ ಸಾವು, ಶಸ್ತ್ರಾಸ್ತ್ರಗಳ ನಾಶ, ಆರ್ಥಿಕ ಹಾನಿಯ ಪ್ರಮಾಣ, ಡಾಲರ್ ಪ್ರಾಬಲ್ಯ ಕುಸಿತ- ಅಮೆರಿಕದ ರಾಜಕಾರಣದಲ್ಲಿ ಯಾವ ಮಟ್ಟದ ಭಿನ್ನಾಭಿಪ್ರಾಯವನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುವುದಿಲ್ಲ. ಹಾಗೆಯೇ ಯುರೋಪ್ ಹಾಗೂ ಅರಬ್ ರಾಷ್ಟ್ರಗಳ ನಿಲುವು ಕೂಡ ಬದಲಾಗಬಹುದು. ಅದು ಅಮೆರಿಕದ ದೊಡ್ಡಣ್ಣನ ಸ್ಥಾನಕ್ಕೆ ಸಂಚಕಾರ ತರಬಹುದು.
ಯುದ್ಧದಿಂದಾಗಿ ಇಸ್ರೇಲ್, ಯುರೋಪಿಯನ್ ಒಕ್ಕೂಟದ ಪ್ರಮುಖ ರಾಷ್ಟ್ರಗಳ ಬೆಂಬಲವನ್ನೂ ಕಳೆದುಕೊಳ್ಳುತ್ತಿದೆ. ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳಾದ ನೆದರ್ಲಂಡ್ಸ್, ಬೆಲ್ಜಿಯಂ, ಸ್ವೀಡನ್, ಡೆನ್ಮಾರ್ಕ್, ಇಟಲಿ, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಇಸ್ರೇಲ್ ವಿರುದ್ಧ ರಾಜತಾಂತ್ರಿಕ ನಿಲುವು ತಳೆದಿವೆ. ಮತ್ತು ಆರ್ಥಿಕ ದಿಗ್ಬಂಧನಕ್ಕೆ ಮುಂದಾಗಿವೆ. ಗಲ್ಪ್ ರಾಷ್ಟ್ರಗಳ ತೈಲ ಸಂಗ್ರಹಗಾರಗಳ ಮೇಲೆ ಇರಾನ್ ದಾಳಿಯನ್ನು ಯುರೋಪ್ ನಾಯಕರು ಸಾರ್ವಜನಿಕವಾಗಿ ಟೀಕಿಸಿದರೂ, ಈ ಆರ್ಥಿಕ ಆಘಾತಗಳಿಗೆ ಅಮೆರಿಕಾ ಮತ್ತು ಇಸ್ರೇಲ್ ಕೈಗೊಂಡ ನಿರ್ಧಾರವೇ ಕಾರಣ ಎಂಬುದನ್ನು ಯುರೋಪಿಯನ್ ಒಕ್ಕೂಟ ಗಮನಿಸುತ್ತಿದೆ. ಆದರೂ, ಈ ವಿಷಯದಲ್ಲಿ ಯುರೋಪಿಯನ್ ರಾಷ್ಟ್ರಗಳು ಅಮೆರಿಕದ ಹಾದಿಯನ್ನು ಅನುಸರಿಸುವ ಸಾಧ್ಯತೆ ಹೆಚ್ಚಾಗಿದೆ.
ಈ ಯುದ್ಧವು ಗಲ್ಪ್ ಸಹಕಾರ ಮಂಡಳಿ (GCC) ರಾಷ್ಟ್ರಗಳ ಭದ್ರತಾ ವ್ಯವಸ್ಥೆಯ ಮೇಲೆ ಮಹತ್ವದ ಪರಿಣಾಮ ಬೀರಿದೆ. ಯುದ್ಧದಿಂದಾಗಿ ಗಲ್ಫ್ ರಾಷ್ಟ್ರಗಳು ಅಮೆರಿಕದ ಭದ್ರತಾ ವ್ಯವಸ್ಥೆಯ ನೈಜ ಲಾಭ-ನಷ್ಟಗಳನ್ನು ಅಳೆಯುವಂತಾಗಿದೆ. ಸೈನಿಕ ಸಹಾಯ, ಶಸ್ತ್ರಾಸ್ತ್ರ ಸರಬರಾಜು, ತಂತ್ರಜ್ಞಾನದಲ್ಲಿ ಅಸಮಾನತೆ ಬಹಿರಂಗಗೊಂಡಿದೆ. ಆದರೂ, ಸಹಿಸಿಕೊಂಡು ಸುಮ್ಮನಿರಬೇಕಾದ ಸಂದರ್ಭ ಸೃಷ್ಟಿಯಾಗಿದೆ.
ಇದನ್ನು ಓದಿದ್ದೀರಾ?: ಇರಾನ್-ಕತಾರ್ ಅನಿಲ ಘಟಕಗಳಿಗೆ ಹತ್ತಿದ ಕಿಚ್ಚು: ಭಾರತಕ್ಕೂ ತಟ್ಟಲಿದೆಯಾ ಬಿಸಿ?
ಏತನ್ಮಧ್ಯೆ, ಇರಾನ್ ಹಾರ್ಮುಜ್ ಜಲಸಂಧಿ ತೆರೆದಿದೆ. ಮಾರ್ಚ್ ತಿಂಗಳಲ್ಲಿ ದಿನಕ್ಕೆ ಸುಮಾರು 1.3–1.4 ಮಿಲಿಯನ್ ಬ್ಯಾರೆಲ್ ತೈಲ ರಫ್ತು ನಡೆದಿದೆ. ಇದರಲ್ಲಿ ಬಹುಪಾಲು ಚೈನಾ ಕಡೆಗೆ ಹೋಗಿದೆ, ಯುವಾನ್ ಕರೆನ್ಸಿಯಲ್ಲಿ ಪಾವತಿಸಿದೆ. ಇದಕ್ಕೆ ವಿರುದ್ಧವಾಗಿ, ಡಾಲರ್‌ನಲ್ಲಿ ತೈಲ ಮಾರಾಟ ಮಾಡುವ ಗಲ್ಪ್ ರಾಷ್ಟ್ರಗಳು- ಸೌದಿ ಅರೇಬಿಯಾ, ಕುವೈತ್, ಯುಎಇ, ಕತಾರ್, ಒಮನ್, ಬಹರೇನ್- ತೊಂದರೆಗೆ ಸಿಲುಕಿಕೊಂಡಿವೆ. ದಶಕಗಳಿಂದ ತೈಲ ವ್ಯಾಪಾರ ಡಾಲರ್ ಮೂಲಕ ನಡೆಯುತ್ತಿದ್ದುದು, ಈಗ ಯುವಾನ್ ಕಡೆಗೆ ವಹಿವಾಟು ತಿರುಗುವ ಸಾಧ್ಯತೆ ಇದೆ. ಇದು ಕರೆನ್ಸಿ ಯುದ್ಧಕ್ಕೆ ದಾರಿ ಮಾಡಬಹುದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ.
ಹಾಗೆ ನೋಡಿದರೆ, ಡಾಲರ್ ಈಗಲೂ ಜಾಗತಿಕ ರಿಸರ್ವ್ ಕರೆನ್ಸಿಯಾಗಿ ಅಮೆರಿಕಾಗೆ ದೊಡ್ಡ ಆರ್ಥಿಕ ಲಾಭವನ್ನು ತಂದುಕೊಡುತ್ತಿದೆ. ಡಾಲರ್ ಸಂಪೂರ್ಣವಾಗಿ ಫ್ರೀ-ಫ್ಲೋಟಿಂಗ್ ಕರೆನ್ಸಿ. ಅಮೆರಿಕದ ಕಾನೂನು ವ್ಯವಸ್ಥೆ, ಪಾರದರ್ಶಕ ಹಣಕಾಸು ಮಾರುಕಟ್ಟೆಗಳು ಹಾಗೂ ಸ್ಥಿರ ರಾಜಕೀಯ ವ್ಯವಸ್ಥೆಯಿಂದಾಗಿ ಡಾಲರ್ ಮೇಲೆ ವಿಶ್ವದ ದೇಶಗಳಿಗೆ ವಿಶ್ವಾಸ ಹೆಚ್ಚು. ಅಮೆರಿಕ ಜಾಗತಿಕ ಮಟ್ಟದಲ್ಲಿ ಪ್ರಬಲ ಸೈನಿಕ ಶಕ್ತಿ ಹೊಂದಿದೆ, ರಾಜತಾಂತ್ರಿಕ ಒತ್ತಡಗಳನ್ನು ಹೇರುವುದಕ್ಕೆ ಮುಂದಾಗುತ್ತದೆ. ಆರ್ಥಿಕ ಸಹಾಯಹಸ್ತ ಚಾಚುತ್ತದೆ. ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡುತ್ತದೆ. ಹೂಡಿಕೆ ಮಾಡಲು ಸುರಕ್ಷಿತ ಮತ್ತು ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ದೇಶಗಳು ತಮ್ಮ ವಿದೇಶಿ ವಿನಿಮಯ ಸಂಗ್ರಹವನ್ನು ಡಾಲರ್‌ನಲ್ಲಿ ಇಡುತ್ತವೆ. ದಶಕಗಳಿಂದ ಜಾಗತಿಕ ತೈಲ ವ್ಯಾಪಾರ ಪೆಟ್ರೋ-ಡಾಲರ್‌ನಲ್ಲಿ ನಡೆಯುತ್ತಿದೆ. ಪೆಟ್ರೋಲಿಯಂ ಉತ್ಪನ್ನವನ್ನು ರಫ್ತು ಮಾಡುವ ದೇಶಗಳು(OPEC) ಡಾಲರ್ ಬಳಸುತ್ತವೆ. ಇದರಿಂದ ಡಾಲರ್‌ಗೆ ನಿರಂತರ ಬೇಡಿಕೆ ಇದೆ. ಅಮೆರಿಕದ ಬಾಂಡ್ ಮಾರುಕಟ್ಟೆ ಜಗತ್ತಿನಲ್ಲಿ ಅತಿ ದೊಡ್ಡದು. ಅಮೆರಿಕ ಡಾಲರ್ ಅನ್ನು ‘ಶಕ್ತಿಯ ಸಾಧನ’ವಾಗಿಯೂ ಬಳಸುತ್ತದೆ. ಹಾಗಾಗಿ ಜಾಗತಿಕ ಮಟ್ಟದಲ್ಲಿ ಹಣಕಾಸು ವ್ಯವಸ್ಥೆಯಲ್ಲಿ ಡಾಲರ್ ಪ್ರಾಬಲ್ಯ ಈಗಲೂ ಮುಂದುವರಿದಿದೆ.
ವಿಶ್ವದಾದ್ಯಂತ ಯುವಾನ್‌ಗೆ ಈ ಮಟ್ಟದಲ್ಲಿ ವಿಶ್ವಾಸ ಇನ್ನೂ ನಿರ್ಮಾಣವಾಗಿಲ್ಲ. ಯುವಾನ್ ತೈಲ ಖರೀದಿಯಲ್ಲಿ ಈಗ ಬಳಕೆ ಹೆಚ್ಚಾದರೂ, ಅದು ಸಂಪೂರ್ಣ ಪರ್ಯಾಯವಾಗಿಲ್ಲ.

ಅಕಸ್ಮಾತ್ ಈ ಯುದ್ಧ ಮುಂದುವರೆದರೆ, ಕೆಲವು ದೇಶಗಳು ಡಾಲರ್ ಬದಲಿಗೆ ಯುವಾನ್ ಅಥವಾ ಇತರೆ ಕರೆನ್ಸಿಗಳಲ್ಲಿ ತೈಲ ವ್ಯವಹಾರ ಆರಂಭಿಸಬಹುದು. ಜಾಗತಿಕ ಹಣಕಾಸು ವ್ಯವಸ್ಥೆ ಅವರವರ ಅನುಕೂಲ ತಕ್ಕಂತೆ ‘ಬಹು-ಕರೆನ್ಸಿ’ ವ್ಯವಸ್ಥೆಯಾಗಿ ಬದಲಾಗಬಹುದು. ಇದು ನಿಧಾನವಾಗಿ ಡಾಲರ್ ವರ್ಸಸ್ ಯುವಾನ್ ಸ್ಪರ್ಧೆಯನ್ನು ಗಟ್ಟಿಗೊಳಿಸಬಹುದು. ಅದು ಯುದ್ಧ ನಿಂತ ನಂತರ ಸ್ಪಷ್ಟವಾಗಬಹುದು.
ಪ್ರಶ್ನೆ ಏನೆಂದರೆ, ಈ ಹೊಸ ಜಾಗತಿಕ ಬದಲಾವಣೆಗಳು ಭಾರತಕ್ಕೆ ಎಂತಹ ಅವಕಾಶಗಳನ್ನು ಮತ್ತು ಅನಾಹುತಗಳನ್ನು ಸೃಷ್ಟಿಸಬಹುದು ಎಂಬುದಾಗಿದೆ. ಈಗಲೂ ಭಾರತ ಕಚ್ಚಾ ತೈಲವನ್ನು ಡಾಲರ್ ಮೂಲಕವೇ ಖರೀದಿಸುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಲೇ ಸಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ತಳೆಯುವ ನಿಲುವು ಮತ್ತು ವಿದೇಶಾಂಗ ನೀತಿಯ ಮೇಲೆ ಭಾರತದ ಭವಿಷ್ಯ ನಿರ್ಧಾರವಾಗಲಿದೆ.

ಲೇಖಕ, ಪತ್ರಕರ್ತ




