ರಾಜಕೀಯ ಇಚ್ಛಾಶಕ್ತಿ ತೋರದಿದ್ದರೆ ಈ ಪ್ರದೇಶದ ಯುವಕರು ಗುಳೆ ಹೋಗುವುದು ನಿಲ್ಲುವುದಿಲ್ಲ. ಹಸಿವು-ಅಪೌಷ್ಟಿಕತೆ ಮತ್ತು ಅಸಮಾನತೆಯ ದುಷ್ಟಚಕ್ರ ಇನ್ನೂ ಹಲವು ದಶಕಗಳ ಕಾಲ ಉರುಳುವುದನ್ನು ತಡೆಯಲಾಗುವುದಿಲ್ಲ. ಹಾಗಾದರೆ, ಕಲ್ಯಾಣ ಕರ್ನಾಟಕದ ನಿಜವಾದ ಕಲ್ಯಾಣ ಆಗುವುದು ಎಂದು?
ಕಲ್ಯಾಣ ಕರ್ನಾಟಕ(ಹಿಂದಿನ ಹೈದರಾಬಾದ್ ಕರ್ನಾಟಕ) ಪ್ರದೇಶವು ಕರ್ನಾಟಕದ ಈಶಾನ್ಯ ಭಾಗದಲ್ಲಿದ್ದು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿದೆ. ಈ ಪ್ರದೇಶವು ರಾಜ್ಯದ ಇತರ ಭಾಗಗಳಿಗೆ ಹೋಲಿಸಿದರೆ ಆರ್ಥಿಕ, ಶೈಕ್ಷಣಿಕ, ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳಲ್ಲಿ ಗಮನಾರ್ಹ ಅಸಮತೋಲನಕ್ಕೆ ಒಳಗಾಗಿದೆ.
ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ 2002ರಲ್ಲಿ ಡಾ. ಡಿ ಎಂ ನಂಜುಂಡಪ್ಪ ಅಧ್ಯಕ್ಷತೆಯಲ್ಲಿ ರಚಿತವಾದ ಸಮಿತಿ ವರದಿಯು ಕೆಲವು ಪರಿಹಾರಗಳನ್ನು ಸೂಚಿಸಿತು. 2013ರಲ್ಲಿ ಸಂವಿಧಾನದ 371(ಜೆ) ಅಡಿ ವಿಶೇಷ ಸ್ಥಾನಮಾನ ನೀಡಲಾಯಿತು. ಆದರೂ ಕೂಡ ಸಮಸ್ಯೆಗಳು ಮುಂದುವರೆದಿವೆ.
2002ರಲ್ಲಿ, ಅರ್ಥಶಾಸ್ತ್ರಜ್ಞ ಡಿ ಎಂ ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿಯು ಅಂದು ರಾಜ್ಯದಲ್ಲಿದ್ದ 175 ತಾಲೂಕುಗಳ ಪೈಕಿ 114 ತಾಲೂಕುಗಳನ್ನು ಹಿಂದುಳಿದ ತಾಲೂಕುಗಳೆಂದು ಘೋಷಿಸಿತು. ಈ ಹಿಂದುಳಿದ ತಾಲೂಕುಗಳನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು, ಹಿಂದುಳಿದ, ಅತಿ ಹಿಂದುಳಿದ, ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಅಭಿವೃದ್ಧಿಯ ಯಾವುದೇ ಲಕ್ಷಣಗಳಿಲ್ಲದೆ ಇರುವಂತಹ ಪ್ರದೇಶಗಳ ಆಧಾರದಲ್ಲಿ ವಿಂಗಡಿಸಲಾಗಿದೆ. ಈ ಪೈಕಿ 35 ತಾಲೂಕುಗಳು ಹಿಂದುಳಿದವು, 40 ತಾಲೂಕುಗಳು ಹೆಚ್ಚು ಹಿಂದುಳಿದವು ಮತ್ತು 39 ತಾಲೂಕುಗಳನ್ನು ಅತ್ಯಂತ ಹಿಂದುಳಿದವು ಎಂದು ಗುರುತಿಸಿತ್ತು. ಈ ತಾಲೂಕುಗಳಲ್ಲಿ ಹೆಚ್ಚಿನವು ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಪ್ರದೇಶಕ್ಕೆ ಸೇರಿವೆ. ಅದರಲ್ಲಿ 28 ತಾಲೂಕುಗಳು ಕಲ್ಯಾಣ ಕರ್ನಾಟಕದ ತಾಲೂಕುಗಳಾಗಿವೆ.
ಅಂದಿನ ದಿನಕ್ಕೆ ಕಲ್ಯಾಣ ಕರ್ನಾಟಕದಲ್ಲಿ 31 ತಾಲೂಕುಗಳಿದ್ದವು. ಇದರಲ್ಲಿ 28 ತಾಲೂಕುಗಳ ಹಿಂದುಳಿದ ತಾಲೂಕುಗಳ ಪೈಕಿ 21 ತಾಲೂಕುಗಳು ಅತ್ಯಂತ ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಸೇರಿದ್ದವು. ಕಲ್ಯಾಣ ಕರ್ನಾಟಕದ ಶೇ. 93ರಷ್ಟು ಪ್ರದೇಶ ಎಲ್ಲ ಅಭಿವೃದ್ಧಿಗಳಿಂದಲೂ ಅತ್ಯಂತ ಹಿಂದುಳಿದಿದೆ ಎಂಬುದು ನಂಜುಂಡಪ್ಪ ವರದಿಯಲ್ಲಿದೆ.

ವರದಿಗೆ ಸಂಬಂಧಿಸಿದಂತೆ ರಾಯಚೂರಿನ ರಝಾಕ್ ಉಸ್ತಾದ್ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಂಜುಂಡಪ್ಪ ವರದಿ ಆಧಾರದ ಮೇಲೆ ಸರ್ಕಾರ ಕಳೆದ ಎರಡು ದಶಕದಲ್ಲಿ ಅಂದರೆ 2007-08ರಿಂದ ಪ್ರಾರಂಭ ಮಾಡಿ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ವಿಶೇಷ ಅಭಿವೃದ್ಧಿ ಯೋಜನೆ(ನಂಜುಂಡಪ್ಪನವರ ವಿಶೇಷ ಅಭಿವೃದ್ಧಿ ಯೋಜನೆ)ಯನ್ನು ರೂಪಿಸಿದರು. ಏಕೆಂದರೆ ಈ ಅಭಿವೃದ್ಧಿ ಯೋಜನೆ ರೂಪು ರೇಷೆಗಳನ್ನು ನೀಡಿದಂಥವರು ಡಾ. ನಂಜುಂಡಪ್ಪ, ಈ ಹಿನ್ನೆಲೆಯಲ್ಲಿ ನಂಜುಂಡಪ್ಪ ವರದಿ ಎಂದೇ ಹೇಳಲಾಗುತ್ತದೆ. ಅದರ ಆಧಾರದಲ್ಲಿಯೇ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿತ್ತು” ಎಂದು ತಿಳಿಸಿದರು.
“ಆದರೆ 2022-23ರಲ್ಲಿ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ವಿಶೇಷ ಅಭಿವೃದ್ಧಿ ಯೋಜನೆಯ ಅವಶ್ಯಕತೆ ಇಲ್ಲವೆಂದು ಈ ಯೋಜನೆಯನ್ನು ತೆಗೆದು ಹಾಕಿತು. ಅಲ್ಲಿಂದ ನಂಜುಂಡಪ್ಪ ವರದಿಯ ಅನುಷ್ಠಾನ ಸ್ಥಗಿತಗೊಂಡಿದೆ” ಎಂದು ತಿಳಿಸಿದರು.

ಈ 16 ವರ್ಷದಲ್ಲಿ ಅಂದರೆ 2007-08ರಿಂದ 2022-23ನೇ ಸಾಲಿನವರೆಗೆ ಸುಮಾರು 31 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯಾದ್ಯಂತ ವಿಶೇಷ ಅಭಿವೃದ್ಧಿ ಯೋಜನೆಗೆ ವ್ಯಯ ಮಾಡಲಾಗಿದೆ. ಈ ಒಟ್ಟಾರೆ ಅನುದಾನ ಏನಿದೆಯೋ ಅದರಲ್ಲಿ ಶೇ.40ರಷ್ಟು ಅನುದಾನವನ್ನು ಕಲ್ಯಾಣ ಕರ್ನಾಟಕಕ್ಕೆ ಖರ್ಚು ಮಾಡಬೇಕೆಂದು ಶಿಫಾರಸು ಮಾಡಲಾಗಿತ್ತು. ಅದರಂತೆ ಆಗಿಲ್ಲವಾದರೂ ಈ ಅನುದಾನವನ್ನು ವ್ಯಯಮಾಡಲಾಗಿದೆ. ಈವರೆಗೆ ₹32,774 ಕೋಟಿ ಖರ್ಚು ಮಾಡಿರುವುದಾಗಿ ವರದಿ ನೀಡಲಾಗಿದೆ.
2014ರಲ್ಲಿ ಕರ್ನಾಟಕ ಸರ್ಕಾರ ಧಾರವಾಡದಲ್ಲಿನ ಸೆಂಟರ್ ಫಾರ್ ಮಲ್ಟಿ ಡಿಸಿಪ್ಲಿನರಿ ರೀಸರ್ಚ್ ಇನ್ಸ್‌ಟಿಟ್ಯೂಟ್ ಹಿಂದುಳಿದ ತಾಲೂಕುಗಳಿಗೆ ಈವರೆಗೆ ಖರ್ಚು ಮಾಡಿರುವ ಅನುದಾನದಿಂದ ಏನೇನು ಬದಲಾವಣೆಗಳಾಗಿವೆ ಎಂದು ಪರಿಶೀಲಿಸಿದಾಗ ಆರು ತಾಲೂಕುಗಳು ಮಾತ್ರ ಹಿಂದುಳಿದ ತಾಲೂಕುಗಳ ಪಟ್ಟಿಯಿಂದ ಅಭಿವೃದ್ಧಿ ಹೊಂದಿದ ತಾಲೂಕುಗಳ ಪಟ್ಟಿಗೆ ಸೇರಿರುವುದು ಕಂಡುಬಂದಿದೆ. ಇದನ್ನು ಗಮನಿಸಿದಾಗ 2002ನಲ್ಲಿ ಈ ವರದಿ ಸಲ್ಲಿಸಿದಾಗ ಕರ್ನಾಟಕ ಸರ್ಕಾರದ ಬಜೆಟ್ ₹17,000 ಕೋಟಿ. ಇದರ ಜತೆಗೆ ಪ್ರತಿ ವರ್ಷ ₹2000 ಕೋಟಿ ಹೆಚ್ಚುವರಿ ಅನುದಾನ ನೀಡಬೇಕೆಂದು ಶಿಫಾರಸು ಮಾಡಲಾಗಿದೆ. ಸಾಮಾನ್ಯ ಅನುದಾನ ಮತ್ತು ಹೆಚ್ಚವರಿ ಅನುದಾನ ಒಟ್ಟು ₹31,000 ಕೋಟಿಯನ್ನು ಎಂಟು ವರ್ಷದಲ್ಲಿ ಖರ್ಚು ಮಾಡಬೇಕೆಂದು ತಿಳಿಸಲಾಗಿತ್ತು. ಅಂದರೆ ಸರಿಸುಮಾರು ಎರಡರಷ್ಟು.

ಇದನ್ನು ಅನುಷ್ಠಾನ ಮಾಡಿದ ಸಂದರ್ಭದಲ್ಲಿ ಅಂದರೆ 2007-08ರಂದು ರಾಜ್ಯದ ಒಟ್ಟಾರೆ ಬಜೆಟ್ ₹36,000 ಕೋಟಿ. ಸ್ಪೆಷಲ್ ಡೆವಲ್‌ಪೆಂಟ್ ಪ್ಲ್ಯಾನ್‌ಗೆ ಆರಂಭಿಸಿದ್ದೇ 1,500 ಕೋಟಿ ಬಜೆಟ್‌ನಿಂದ. ಒಟ್ಟಾರೆ ಬಜೆಟ್‌ನಲ್ಲಿ ಶೇ.11ರಷ್ಟು ವಿಶೇಷ ಅಭಿವೃದ್ಧಿ ಯೋಜನೆಗೆ ಖರ್ಚು ಮಾಡುವಂತೆ ಶಿಫಾರಸು ಮಾಡಲಾಗಿತ್ತು. ಆದರೆ 2022-23ರಲ್ಲಿ ₹3 ಲಕ್ಷ ಕೋಟಿ ಬಜೆಟ್ ಇದ್ದರೂ ಕೂಡ ಕೇವಲ ₹3,000 ಕೋಟಿ ಮಾತ್ರ ನೀಡಲಾಯಿತು. ಶಿಫಾರಸಿನ ಶೇ.1ರಷ್ಟು ಬಜೆಟ್ ಅನ್ನೂ ಖರ್ಚು ಮಾಡಲಿಲ್ಲ. ಹಾಗಾಗಿ ಬದಲಾವಣೆಯನ್ನು ಕಾಣಲು ಸಾಧ್ಯವಾಗಿಲ್ಲ.
ಕ್ರಮಬದ್ಧವಾಗಿ ಈ ಯೋಜನೆಗೆ ಶಿಫಾರಸು ಮಾಡಿದ್ದಂಥ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಖರ್ಚು ಮಾಡಲಾಗಿಲ್ಲ. ಒಟ್ಟಾರೆ ನಂಜುಂಡಪ್ಪ ವರದಿ ಅನುಷ್ಠಾನದಿಂದ ಬಹುದೊಡ್ಡ ಬದಲಾವಣೆಯಾಗಲಿಲ್ಲ ಎಂಬುದು ಕಂಡುಬರುತ್ತಿದೆ. ಇದಕ್ಕೆ ಸರ್ಕಾರಗಳ ಲೋಪ ದೋಷಗಳೇ ಕಾರಣ. 2008-13ರವರೆಗೆ ಇದ್ದಂತಹ ಸರ್ಕಾರ ಇತರೆ ಯೋಜನೆಗಳಿಗೆ ನಂಜಂಡಪ್ಪ ವರದಿಯ ಅನುದಾನವನ್ನೇ ಬಳಸಿಕೊಂಡಿತು. ಉದಾಹರಣೆಗೆ ಹೆಣ್ಣುಮಕ್ಕಳಿಗೆ ಸೈಕಲ್ ನೀಡುವುದು, ಕೃಷ್ಣಾ ಭಾಗದ ಜಲನಿಗಮದ ಸಾಲದ ಬಾಂಡ್‌ಗಳನ್ನು ತೀರಿಸುವುದಕ್ಕೆ ವಿಶೇಷ ಅಭಿವೃದ್ಧಿ ಅನುದಾನವನ್ನೇ ಖರ್ಚು ಮಾಡಲಾಯಿತು. ಇದರಿಂದ ಯೋಜನೆ ಅಭಿವೃದ್ಧಿಯ ಮೇಲೆ ಅಂಥ ದೊಡ್ಡ ಪರಿಣಾಮ ಬೀರದಂತಾಯಿತು. ಈ ಮೂಲಕ ನಂಜುಂಡ ವರದಿಯನ್ನು ಅಪ್ರಸ್ತುತ ಮಾಡಿದ್ದು ಸರ್ಕಾರಗಳೇ.

2015ರಲ್ಲಿ ಈ ಯೋಜನೆ ಕೊನೆಗೊಳ್ಳಬೇಕಿತ್ತು. ಆದರೆ ‘ಸಿದ್ದರಾಮಯ್ಯನವರು ಮುಂದಿನ 5 ವರ್ಷಗಳವರೆಗೆ ಪ್ರತಿ ವರ್ಷ ₹3,000 ಕೋಟಿ ಅನುಷ್ಠಾನ ಮಾಡುತ್ತೇವೆ’ ಎಂದು ಘೋಷಣೆ ಮಾಡಿದರು. ಅವರು ತೆಗೆದುಕೊಂಡಂತಹ ನಿರ್ಣಯ ಮುಂದುವರೆಯಿತು. 2021ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಇದನ್ನು ಇನ್ನೂ ಐದು ವರ್ಷ ಮುಂದುವರೆಸುವುದಾಗಿ ಹೇಳಬಹುದಿತ್ತು. ಏಕೆಂದರೆ ಹಿಂದುಳಿದ ತಾಲೂಕುಗಳ ಹಿಂದುಳಿಯುವಿಕೆಯನ್ನು ನಿವಾರಿಸುವುದೇ ನಂಜುಂಡಪ್ಪ ವರದಿಯ ಉದ್ದೇಶ. ಹಾಗಾಗಿ ಹಿಂದುಳಿಯುವಿಕೆಯಿಂದ ಅಭಿವೃದ್ಧಿ ಹೊಂದುವವರೆಗೂ ಈ ಯೋಜನೆ ಮುಂದುವರೆಯಬೇಕಿತ್ತು.
ದುರದೃಷ್ಟವಶಾತ್ ಹಿಂದುಳಿದ 114 ತಾಲೂಕುಗಳ ಎಂಎಲ್‌ಎಗಳ ಪೈಕಿ ಒಬ್ಬರೂ ಈ ವರದಿ ಮುಂದುವರೆಯಬೇಕಾ/ಬೇಡವಾ ಎಂಬುದರ ಬಗ್ಗೆ ದನಿ ಎತ್ತಲಿಲ್ಲ. ಬಸವರಾಜ ಬೊಮ್ಮಾಯಿ ನೇತೃತ್ವದ ಅಸೆಂಬ್ಲಿಯಲ್ಲಿ ಈ ಬಗ್ಗೆ ಚರ್ಚೆಯೂ ಆಗಲಿಲ್ಲ. ಹಾಗಾಗಿ ಇದನ್ನು ಅಲ್ಲಿಗೇ ಕೊನೆಗೊಳಿಸಿದರು.
ಈಗ ಗೋವಿಂದ ರಾವ್ ಸಮಿತಿಯನ್ನು ರಚಿಸಲಾಗಿದೆ. ಮುಂದಿನ ಒಂದೆರೆಡು ವಾರಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಈ ವರದಿ ಬಳಿಕ ರಾಜ್ಯದ 236 ತಾಲೂಕುವಾರು ವರದಿ ಇದ್ದರೆ ಹಿಂದುಳಿದ ತಾಲೂಕುಗಳ ಸ್ಥಿತಿ ತಿಳಿಯುತ್ತದೆ. ಸಿಸಿಡಿಐ ಇಂಡೆಕ್ಸ್ ನೀಡಲಾಗುತ್ತದೆ. ಇದರ ಅನ್ವಯ ಸರ್ಕಾರ ನಿರ್ಣಯ ಕೈಗೊಳ್ಳಬೇಕಾಗುತ್ತದೆ.
ರಾವ್ ಸಮಿತಿಯು 236 ತಾಲೂಕುಗಳನ್ನು ತಲಾ ಆದಾಯ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಸೇವೆಗಳು, ಸಾಮಾಜಿಕ ಮೂಲಸೌಕರ್ಯ ಮತ್ತು ಕೃಷಿಯನ್ನು ಆಧರಿಸಿ ಮೌಲ್ಯಮಾಪನ ಮಾಡುತ್ತಿದೆ.
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಆರು ಜಿಲ್ಲೆಗಳ ಸರಾಸರಿ ತಲಾ ಆದಾಯವು ರಾಜ್ಯದ ಸರಾಸರಿಗಿಂತ ಹೆಚ್ಚಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಆದರೆ ಶಿಕ್ಷಣ ಮತ್ತು ಆರೋಗ್ಯದಂತಹ ಸೂಚಕಗಳನ್ನು ಪರಿಗಣಿಸಿದಾಗ, ರಾಜ್ಯದ ಕೆಲವು ಭಾಗಗಳು ಉತ್ತಮ ಫಲಿತಾಂಶಗಳನ್ನು ಹೊಂದಿಲ್ಲ. ನಂಜುಂಡಪ್ಪ ವರದಿಯಲ್ಲಿ ಬಳಸಲಾದ ಸೂಚಕಗಳು ದೂರವಾಣಿ ಸಂಪರ್ಕ, ಅಂಚೆ ಕಚೇರಿ ಪ್ರವೇಶದಂತಹವುಗಳು ತಮ್ಮ ಪ್ರಸ್ತುತತೆಯನ್ನು ಕಳೆದುಕೊಂಡಿವೆ. 1991ರ ಜನಗಣತಿ ವರದಿಯನ್ನು ಆಧರಿಸಿದ ಕೆಲವು ಸೂಚಕಗಳು ಹಳೆಯದಾಗಿವೆ. ರಾವ್ ಸಮಿತಿಯು ವಿಧಾನವನ್ನು ಪರಿಷ್ಕರಿಸಿದೆ ಎನ್ನಲಾಗಿದೆ.
ಕಲ್ಯಾಣ ಕರ್ನಾಟಕದ ಅಸಮತೋಲನ ನಿವಾರಣೆಗೆ ತಜ್ಞರ ಅಭಿಪ್ರಾಯಗಳು
1. ಆರ್ಥಿಕ ಮತ್ತು ಉದ್ಯೋಗ ಅಸಮತೋಲನ
ಆರ್ಥಿಕ ತಜ್ಞ, ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿ ಅಧ್ಯಕ್ಷ ಪ್ರೊ. ಎಂ. ಗೋವಿಂದರಾವ್ ಅವರು 2025ರ ಫೆಬ್ರವರಿಯಲ್ಲಿ ಹೇಳಿರುವಂತೆ “ಕರ್ನಾಟಕದ ಜನಸಂಖ್ಯೆಯ ಶೇ.41ರಷ್ಟು ಇರುವ ಕಲ್ಯಾಣ ಕರ್ನಾಟಕದಲ್ಲಿ ರಾಜ್ಯದ ಆದಾಯದ ಕೇವಲ ಶೇ.9ರಷ್ಟು ಮಾತ್ರ ಉತ್ಪತ್ತಿಯಾಗುತ್ತಿದೆ. ಇದು ಗಂಭೀರ ಸಮಸ್ಯೆಯಾಗಿದ್ದು, ಉದ್ಯಮಗಳು, ಆಹಾರ ಸಂಸ್ಕರಣೆ ಮತ್ತು ಇತರ ಕ್ಷೇತ್ರಗಳಲ್ಲಿ ಪ್ರೋತ್ಸಾಹಗಳನ್ನು ನೀಡಿ, ಹಿಂದುಳಿದ ಜಿಲ್ಲೆಗಳಿಗೆ ಆದ್ಯತೆ ನೀಡಬೇಕು. ನಂಜುಂಡಪ್ಪ ವರದಿಯನ್ನು ಮತ್ತೊಮ್ಮೆ ಪರಿಶೀಲಿಸಿ, ಹೊಸ ಸೂಚನೆಗಳನ್ನು ರೂಪಿಸುವುದು ಅಗತ್ಯ” ಎಂದು ತಿಳಿಸಿದ್ದಾರೆ.
“ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಜಿಲ್ಲೆಗಳಿಗೆ, ಉತ್ತಮ ಆಡಳಿತ ಮತ್ತು ಸ್ವತಂತ್ರ ರಾಜ್ಯವಲ್ಲದೆ, ನಿಜವಾದ ಡಿಸೆಂಟ್ರಲೈಸೇಶನ್ ಬೇಕು. ನಂಜುಂಡಪ್ಪ ವರದಿಯನ್ನು ಜಾರಿಗೊಳಿಸದಿದ್ದರೆ, ಈ ಪ್ರದೇಶದ ಯುವಕರು ಇನ್ನೂ ಬೆಂಗಳೂರು ಮತ್ತು ಹೈದರಾಬಾದ್‌ಗೆ ಗುಳೆ ಹೋಗುತ್ತಲೇ ಇರುತ್ತಾರೆ” ಎಂದು ಎಂದು ಉತ್ತರ ಕರ್ನಾಟಕ ವೇದಿಕೆ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಕಳೆದ ನವೆಂಬರ್‌ನಲ್ಲಿ ಹೇಳಿದ್ದಾರೆ.
೨. ಶೈಕ್ಷಣಿಕ ಮತ್ತು ಆರೋಗ್ಯ ಅಸಮತೋಲನ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸದಸ್ಯ ಶಶಿಧರ್ ಕೋಸಂಬೆಯವರು, “ಅಂಗನವಾಡಿಗಳಲ್ಲಿ ನಿರ್ವಹಣೆಯ ಕೊರತೆಯಿಂದ ಮಕ್ಕಳು ಮತ್ತು ಗರ್ಭಿಣಿಯರಿಗೆ ಪೌಷ್ಟಿಕಾಹಾರ ಸರಿಯಾಗಿ ದೊರೆಯುತ್ತಿಲ್ಲ. ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ SSLC ಮತ್ತು PUC ಫಲಿತಾಂಶಗಳು 25ರಿಂದ 21ನೇ ಸ್ಥಾನದಲ್ಲಿವೆ. ಶಿಕ್ಷಣಕ್ಕೆ ಹೆಚ್ಚಿನ ಗಮನ ಬೇಕು” ಎಂದಿದ್ದಾರೆ.
ಹಣಕಾಸು ಸುಧಾರಣೆ ಮತ್ತು ಯೋಜನಾ ಇಲಾಖೆಯ ಸಚಿವಾಲಯ ಸದಸ್ಯ ಡಾ. ವಿಶಾಲ್ ಆರ್ ಅವರು, “ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ಹುದ್ದೆಗಳು ಖಾಲಿಯಾಗಿವೆ, ಇಂಗ್ಲಿಷ್, ಭೌತಶಾಸ್ತ್ರ, ರಸಾಯನಶಾಸ್ತ್ರ ಮುಂತಾದ ವಿಷಯಗಳಲ್ಲಿ ಶಿಕ್ಷಕರ ಕೊರತೆ ಇದೆ. ರಸ್ತೆ ಸಾರಿಗೆ ಕಾರ್ಪೊರೇಶನ್ ಬಸ್‌ಗಳ ಕೊರತೆಯಿಂದ ಗ್ರಾಮೀಣ ವಿದ್ಯಾರ್ಥಿಗಳು ಕಲಿಯಲು ತೊಂದರೆಪಡುತ್ತಾರೆ. ಇದನ್ನು ಸರಿಪಡಿಸಲು ಹೊಸ ಶಿಫಾರಸುಗಳು ಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
೩. ಮೂಲಸೌಕರ್ಯ ಮತ್ತು ಆರ್ಥಿಕ ಬೆಳವಣಿಗೆ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ರಾಜಕೀಯಶಾಸ್ತ್ರ ಅಧ್ಯಾಪಕ ಎ. ನಾರಾಯಣ ಅವರು, “ಬೆಂಗಳೂರು ಮತ್ತು ದಕ್ಷಿಣ ಜಿಲ್ಲೆಗಳಲ್ಲಿ IT-BT, ಆಟೋಮೊಬೈಲ್ ಮತ್ತು PSUಗಳ ಏಕರೂಪದಿಂದ ಉತ್ತರ ಕರ್ನಾಟಕದ ಪ್ರತಿ ವ್ಯಕ್ತಿ ಆದಾಯ ಕಡಿಮೆಯಾಗಿದೆ. ಖಾಸಗಿ ಉದ್ಯಮಗಳು, ಸರ್ಕಾರಿ ಸಂಸ್ಥೆಗಳನ್ನು ಈ ಪ್ರದೇಶಕ್ಕೆ ತರಬೇಕು. ಡಿಸೆಂಟ್ರಲೈಸ್ಡ್ ಅಭಿವೃದ್ಧಿಯಿಂದ ಮಾತ್ರ ಸುಸ್ಥಿರ ಪರಿಹಾರ ಸಾಧ್ಯ” ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ರಾಜಕೀಯಶಾಸ್ತ್ರ ಅಧ್ಯಾಪಕ ಹರೀಶ್ ರಾಮಸ್ವಾಮಿ ಅವರು, “1956ರ ಏಕೀಕರಣದಿಂದ ದಶಕಗಳ ನಿರ್ಲಕ್ಷ್ಯದಿಂದಾಗಿ ಕಲ್ಯಾಣ ಕರ್ನಾಟಕದ HDI(ಮಾನವ ಅಭಿವೃದ್ಧಿ ಸೂಚ್ಯಂಕ) ಕಡಿಮೆಯಾಗಿದೆ. ನಂಜುಂಡಪ್ಪ ವರದಿಗೆ ₹32,774 ಖರ್ಚು ಮಾಡಿದರೂ, ಗುಣಮಟ್ಟದ ಕೆಲಸಗಳು ಕಡಿಮೆ. ರಾಜಕೀಯ ಇಚ್ಛಾಶಕ್ತಿ ಇಲ್ಲದಿದ್ದರೆ ಹೊಸ ಸಮಿತಿಗಳ ವರದಿಗಳೂ ಕೂಡ ನಿರರ್ಥಕ” ಎಂದಿದ್ದಾರೆ.
ಕಲ್ಯಾಣ ಕರ್ನಾಟಕದ ಅಸಮತೋಲನವು ಕೇವಲ ಆರ್ಥಿಕ ಕೊರತೆಯಲ್ಲ, ಬದಲಿಗೆ ಐದು ದಶಕಗಳಿಂದಲೂ ಮುಂದುವರೆದ ರಾಜಕೀಯ ನಿರ್ಲಕ್ಷ್ಯ, ತಪ್ಪು ಆದ್ಯತೆಗಳು ಮತ್ತು ಕೇಂದ್ರೀಕೃತ ಅಭಿವೃದ್ಧಿ ಮಾದರಿಯ ದುಷ್ಪರಿಣಾಮವಾಗಿದೆ. ನಂಜುಂಡಪ್ಪ ವರದಿ(2002), 371(ಜೆ) ವಿಶೇಷ ಸ್ಥಾನಮಾನ (2013), ಗೋವಿಂದರಾವ್ ಸಮಿತಿ(2023-25) ಎಲ್ಲವೂ ಉತ್ತಮ ಶಿಫಾರಸುಗಳನ್ನು ನೀಡಿದ್ದರೂ, ಜಾರಿ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ದೊಡ್ಡ ತಡೆಗೋಡೆಯಾಗಿದೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೇವಲ ಹಣದ ಘೋಷಣೆ ಸಾಲದು. ನಿಜವಾದ ವಿಕೇಂದ್ರೀಕರಣ(ಅಧಿಕಾರ ಮತ್ತು ಸಂಪನ್ಮೂಲಗಳ ವಿಕೇಂದ್ರೀಕರಣ), ಖಾಸಗಿ ಹೂಡಿಕೆಗಳ ಆಕರ್ಷಣೆ, ನೀರಾವರಿ ಮತ್ತು ಉದ್ಯಮಗಳಿಗೆ ಆದ್ಯತೆ ಹಾಗೂ ಮುಖ್ಯವಾಗಿ ರಾಜಕೀಯ ಇಚ್ಛಾಶಕ್ತಿ ತೋರದಿದ್ದರೆ ಈ ಪ್ರದೇಶದ ಯುವಕರು ಬೆಂಗಳೂರು, ಹೈದರಾಬಾದ್‌ನಂತಹ ನಗರ ಪ್ರದೇಶಗಳಿಗೆ ಗುಳೆ ಹೋಗುವುದು ಹಸಿವು-ಅಪೌಷ್ಟಿಕತೆ ಮತ್ತು ಅಸಮಾನತೆಯ ದುಷ್ಟಚಕ್ರ ಇನ್ನಷ್ಟು ದಶಕಗಳವರೆಗೂ ಮುಂದುವರೆಯುತ್ತದೆ. ಕಲ್ಯಾಣ ಕರ್ನಾಟಕದ ನಿಜವಾದ ಕಲ್ಯಾಣವು ಕರ್ನಾಟಕದ ನಿಜವಾದ ಕಲ್ಯಾಣಕ್ಕೆ ಸಮಾನ. ಅದು ಸಾಧ್ಯವಾಗಬೇಕಾದರೆ, ಸರ್ಕಾರ ಈಗಲೇ ದಿಟ್ಟ ಹೆಜ್ಜೆ ಇಡಬೇಕಾಗಿದೆ.





