ಇತ್ತೀಚೆಗೆ ಬಹಿರಂಗಗೊಂಡ ‘ಎಪ್‌ಸ್ಟೀನ್ ಫೈಲ್ಸ್’ ಜಗತ್ತಿನ ರಾಜಕೀಯ, ವ್ಯಾಪಾರ ಮತ್ತು ಗೂಢಾಚಾರ ಜಾಲಗಳ ಮೇಲೆ ಭಾರೀ ಅನುಮಾನಗಳ ನೆರಳು ಬಿದ್ದಿದೆ. ಅಮೆರಿಕದ ಮಾಜಿ ಅಧ್ಯಕ್ಷರು, ಜಾಗತಿಕ ಪ್ರಭಾವಿಗಳು, ಇಸ್ರೇಲ್ ಮೊಸಾದ್ ನಂಟು, ನಾಪತ್ತೆಯಾದ ಟೇಪ್‌ಗಳು ಮತ್ತು ಭಾರತೀಯರ ಹೆಸರುಗಳ ಕುರಿತ ವದಂತಿಗಳು ಸಾರ್ವಜನಿಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿವೆ. ಈ ಹಿನ್ನೆಲೆಯಲ್ಲಿ ನಿಜಾಂಶ, ಆರೋಪ, ಪಿತೂರಿ ಸಿದ್ಧಾಂತ ಮತ್ತು ವಾಸ್ತವಗಳ ನಡುವಿನ ಗಡಿ ಏನು ಎಂಬುದನ್ನು ಅರಿಯುವುದು ಅಗತ್ಯವಾಗಿದೆ
ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಕೋಟ್ಯಧಿಪತಿ ಮತ್ತು ಲೈಂಗಿಕ ಅಪರಾಧಿಯ ಸುತ್ತ ಹೆಣೆದುಕೊಂಡಿರುವ ‘Epstein files’ ಇತ್ತೀಚೆಗೆ ಜಗತ್ತಿನಾದ್ಯಂತ ಭಾರೀ ಸಂಚಲನ ಮೂಡಿಸಿದೆ. ನ್ಯಾಯಾಲಯದ ಆದೇಶದ ಮೇರೆಗೆ ಬಹಿರಂಗಗೊಂಡಿರುವ ಈ ಸಾವಿರಾರು ಪುಟಗಳ ದಾಖಲೆಗಳು ಕೇವಲ ಲೈಂಗಿಕ ಹಗರಣವನ್ನಷ್ಟೇ ಅಲ್ಲ, ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಕರಾಳ ಮುಖವನ್ನೂ ಅನಾವರಣಗೊಳಿಸಿವೆ. ಎಪ್‌ಸ್ಟೀನ್ ಮತ್ತು ಆತನ ಗೆಳತಿ ಗಿಸ್ಲೇನ್ ಮ್ಯಾಕ್ಸ್‌ವೆಲ್ ನಡೆಸುತ್ತಿದ್ದ ‘ಸೆಕ್ಸ್ ಟ್ರಾಫಿಕಿಂಗ್’ ಜಾಲದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷರಿಂದ ಹಿಡಿದು ಬ್ರಿಟನ್ ರಾಜಮನೆತನದವರೆಗಿನ ನಂಟು ಇತ್ತೆಂಬುದು ಈ ದಾಖಲೆಗಳಿಂದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆದರೆ, ಈ ಕಡತಗಳು ಕೇವಲ ಪಟ್ಟಿಯಲ್ಲ, ಬದಲಾಗಿ 2015ರ ಮಾನನಷ್ಟ ಮೊಕದ್ದಮೆಯೊಂದರ ವಿಚಾರಣೆಯ ಭಾಗವಾಗಿ ಸಂಗ್ರಹಿಸಲಾದ ಸಾಕ್ಷ್ಯಗಳಾಗಿವೆ ಎನ್ನಲಾಗಿದೆ.
ಟ್ರಂಪ್ ಮತ್ತು ಕ್ಲಿಂಟನ್ ಹೆಸರುಗಳ ಪ್ರಸ್ತಾಪ
ಈ ಕಡತಗಳಲ್ಲಿ ಅಮೆರಿಕದ ಇಬ್ಬರು ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಮತ್ತು ಬಿಲ್ ಕ್ಲಿಂಟನ್ ಅವರ ಹೆಸರುಗಳು ಪ್ರಸ್ತಾಪವಾಗಿರುವುದು ನಿಜ. ಆದರೆ, ಇಲ್ಲಿ ಒಂದು ಸೂಕ್ಷ್ಮವಿದೆ. ಟ್ರಂಪ್ ಅವರ ಹೆಸರು ದಾಖಲೆಗಳಲ್ಲಿದ್ದರೂ, ಎಪ್‌ಸ್ಟೀನ್ ದ್ವೀಪದಲ್ಲಿ ಅವರು ಅಕ್ರಮ ಎಸಗಿದ್ದಾರೆ ಅಥವಾ ಅಪ್ರಾಪ್ತರೊಂದಿಗೆ ಸಂಪರ್ಕ ಹೊಂದಿದ್ದರು ಎಂಬುದಕ್ಕೆ ಯಾವುದೇ ನೇರ ಸಾಕ್ಷ್ಯ ಅಥವಾ ಸಂತ್ರಸ್ತೆಯರ ಹೇಳಿಕೆ ಈ ದಾಖಲೆಗಳಲ್ಲಿಲ್ಲ. ಟ್ರಂಪ್ ಅವರು ಎಪ್‌ಸ್ಟೀನ್ ಅವರ ವಿಮಾನದಲ್ಲಿ ಪ್ರಯಾಣಿಸಿರಲಿಲ್ಲ ಎಂದು ಸಾಕ್ಷಿಯೊಬ್ಬರು ಹೇಳಿದ್ದಾರೆ. ಇನ್ನು ಬಿಲ್ ಕ್ಲಿಂಟನ್ ಅವರು ಎಪ್‌ಸ್ಟೀನ್ ಜೊತೆ ಆಪ್ತವಾಗಿದ್ದರು ಮತ್ತು ವಿಮಾನ ಪ್ರಯಾಣ ಮಾಡಿದ್ದರು ಎಂಬುದು ದೃಢಪಟ್ಟಿದ್ದರೂ, ಅವರ ಮೇಲೂ ನೇರವಾದ ಲೈಂಗಿಕ ಆರೋಪಗಳು ಈ ನಿರ್ದಿಷ್ಟ ಕಡತಗಳಲ್ಲಿ ಸಾಬೀತಾಗಿಲ್ಲ. ಹೀಗಾಗಿ ಹೆಸರು ಪ್ರಸ್ತಾಪವಾಗುವುದಕ್ಕೂ ಮತ್ತು ಅಪರಾಧ ಸಾಬೀತಾಗುವುದಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಬೇಕಿದೆ.
ಫೈಲ್ಸ್‌ನಲ್ಲಿ ಹಲವು ದಿಗ್ಗಜರ ಹೆಸರು
ಎಪ್‌ಸ್ಟೀನ್ ಕಡತಗಳಲ್ಲಿ ವಿಶ್ವದ ಅತ್ಯಂತ ಪ್ರಭಾವಶಾಲಿ ರಾಜಕೀಯ ನಾಯಕರ ಹೆಸರುಗಳೇ ತುಂಬಿವೆ. ಬ್ರಿಟನ್ ರಾಜಮನೆತನದ ಪ್ರಿನ್ಸ್ ಆಂಡ್ರ್ಯೂ ವಿರುದ್ಧ ಲೈಂಗಿಕ ದೌರ್ಜನ್ಯದ ನೇರ ಆರೋಪವಿದ್ದು, ಇದು ಪಟ್ಟಿಯಲ್ಲಿನ ಅತ್ಯಂತ ಗಂಭೀರ ವಿಷಯವಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷರುಗಳಾದ ಬಿಲ್ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ಹೆಸರುಗಳು ಹಲವು ಬಾರಿ ಪ್ರಸ್ತಾಪವಾಗಿವೆ. ಕ್ಲಿಂಟನ್ ಅವರು ಎಪ್‌ಸ್ಟೀನ್ ವಿಮಾನದಲ್ಲಿ ವಿದೇಶಕ್ಕೆ ಪ್ರಯಾಣಿಸಿದ್ದರು ಎಂಬುದು ದೃಢಪಟ್ಟಿದೆ. ಇವರಲ್ಲದೆ, ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ ಗೋರ್ ಮತ್ತು ನ್ಯೂ ಮೆಕ್ಸಿಕೋ ಮಾಜಿ ಗವರ್ನರ್ ಬಿಲ್ ರಿಚರ್ಡ್‌ಸನ್ ಅವರ ಹೆಸರುಗಳೂ ಇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ಇಸ್ರೇಲ್‌ನ ಮಾಜಿ ಪ್ರಧಾನಿ ಎಹುದ್ ಬರಾಕ್ ಅವರು ಎಪ್‌ಸ್ಟೀನ್ ಮನೆಗೆ ಹಲವು ಬಾರಿ ಭೇಟಿ ನೀಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಈ ಹೆಸರುಗಳು ಎಪ್‌ಸ್ಟೀನ್ ಹೊಂದಿದ್ದ ಉನ್ನತ ಮಟ್ಟದ ರಾಜಕೀಯ ಸಂಪರ್ಕ ಜಾಲ ಎಂತಹುದು ಎಂಬುದನ್ನು ಸಾಬೀತುಪಡಿಸುತ್ತವೆ.
ರಾಜಕಾರಣಿಗಳಲ್ಲದೆ, ಮನರಂಜನೆ ಮತ್ತು ವಿಜ್ಞಾನ ಕ್ಷೇತ್ರದ ಪ್ರಮುಖರ ಹೆಸರುಗಳೂ ಈ ಕಡತಗಳಲ್ಲಿ ಉಲ್ಲೇಖಗೊಂಡಿರುವುದು ಅಚ್ಚರಿ ಮೂಡಿಸಿದೆ. ಪ್ರಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ಎಪ್‌ಸ್ಟೀನ್ ದ್ವೀಪದಲ್ಲಿ ನಡೆದ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಿದ್ದರು ಎಂದು ಇಮೇಲ್ ಒಂದರಲ್ಲಿ ಉಲ್ಲೇಖಿಸಲಾಗಿದೆ. ಪಾಪ್ ತಾರೆ ಮೈಕೆಲ್ ಜಾಕ್ಸನ್ ಅವರು ಎಪ್‌ಸ್ಟೀನ್‌ನ ಪಾಮ್ ಬೀಚ್ ಮನೆಗೆ ಭೇಟಿ ನೀಡಿದ್ದರು ಎಂದು ಸಾಕ್ಷಿಯೊಬ್ಬರು ಹೇಳಿದ್ದಾರೆ. ಜಗದ್ವಿಖ್ಯಾತ ಮಾಂತ್ರಿಕ ಡೇವಿಡ್ ಕಾಪರ್‌ಫೀಲ್ಡ್, ಹಾಲಿವುಡ್ ನಟ ಕೆವಿನ್ ಸ್ಪೇಸಿ, ಮತ್ತು ಸೂಪರ್ ಮಾಡೆಲ್ ನವೋಮಿ ಕ್ಯಾಂಪ್‌ಬೆಲ್ ಅವರ ಹೆಸರುಗಳೂ ಕಂಡುಬಂದಿವೆ. ಇನ್ನುಳಿದಂತೆ ನಟರಾದ ಲಿಯೊನಾರ್ಡೊ ಡಿಕಾಪ್ರಿಯೊ, ಕ್ಯಾಮೆರಾನ್ ಡಿಯಾಜ್ ಮತ್ತು ಕೇಟ್ ಬ್ಲಾಂಚೆಟ್ ಅವರ ಹೆಸರುಗಳನ್ನು ಎಪ್‌ಸ್ಟೀನ್ ಕೇವಲ ಪ್ರಭಾವ ಬೀರಲು ಬಳಸಿಕೊಳ್ಳುತ್ತಿದ್ದನೇ ಹೊರತು, ಅವರು ಅಕ್ರಮದಲ್ಲಿ ಭಾಗಿಯಾದ ಬಗ್ಗೆ ಸಾಕ್ಷ್ಯಗಳಿಲ್ಲ.

ಭಾರತೀಯರ ಹೆಸರುಗಳಿವೆಯೇ?
ಭಾರತೀಯರ ಪಾಲಿಗೆ ಕುತೂಹಲ ಕೆರಳಿಸಿರುವ ಪ್ರಶ್ನೆಯೆಂದರೆ, ಈ ಪಟ್ಟಿಯಲ್ಲಿ ನಮ್ಮ ದೇಶದ ಗಣ್ಯರ ಹೆಸರುಗಳಿವೆಯೇ ಎಂಬುದು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಭಾರತೀಯ ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರುಗಳು ಎಪ್‌ಸ್ಟೀನ್ ಪಟ್ಟಿಯಲ್ಲಿವೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ವಾಸ್ತವವೇನೆಂದರೆ, ನ್ಯಾಯಾಲಯ ಬಿಡುಗಡೆ ಮಾಡಿರುವ ಅಧಿಕೃತ ದಾಖಲೆಗಳಲ್ಲಿ ಯಾವುದೇ ಪ್ರಮುಖ ಭಾರತೀಯ ರಾಜಕಾರಣಿಗಳು, ಬಾಲಿವುಡ್ ನಟರು ಅಥವಾ ಉದ್ಯಮಿಗಳ ಹೆಸರುಗಳು ನೇರವಾಗಿ ಕಂಡುಬಂದಿಲ್ಲ. ಎಪ್‌ಸ್ಟೀನ್ ಜಾಲವು ಪ್ರಧಾನವಾಗಿ ಅಮೆರಿಕ ಮತ್ತು ಯುರೋಪ್ ಕೇಂದ್ರಿತವಾಗಿತ್ತು. ಹೀಗಾಗಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಭಾರತೀಯ ಪಟ್ಟಿ’ ಅಧಿಕೃತವಲ್ಲದ್ದು ಎನ್ನಲಾಗುತ್ತಿದೆ.
ಭಾರತೀಯ ಮೂಲದ ಹೆಸರುಗಳು ಸಂಪೂರ್ಣವಾಗಿ ಇಲ್ಲವೇ ಇಲ್ಲ ಎನ್ನಲಾಗದು. ಆದರೆ ಅವು ರಾಜಕೀಯ ವಲಯದ್ದಲ್ಲ. ಎಪ್‌ಸ್ಟೀನ್ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದರಿಂದ, ಆತ ಜಾಗತಿಕ ಮಟ್ಟದ ಕೆಲವು ವಿಜ್ಞಾನಿಗಳೊಂದಿಗೆ ಸಂಪರ್ಕ ಹೊಂದಿದ್ದ. ಇದರಲ್ಲಿ ಕೆಲವು ಅನಿವಾಸಿ ಭಾರತೀಯ ವಿಜ್ಞಾನಿಗಳು ಅಥವಾ ಶಿಕ್ಷಣ ತಜ್ಞರು ಎಪ್‌ಸ್ಟೀನ್ ಆಯೋಜಿಸುತ್ತಿದ್ದ ಔತಣಕೂಟಗಳಲ್ಲಿ ಭಾಗವಹಿಸಿರಬಹುದು ಎಂಬ ಶಂಕೆಗಳಿವೆಯಾದರೂ, ಲೈಂಗಿಕ ಅಪರಾಧಗಳಲ್ಲಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ಆದರೂ ರಾಜಕಾರಣಿಗಳ ಹೇಳಿಕೆಗಳು ಭಾರತದವರ ಹೆಸರುಗಳು ಇರುವ ಸಾಧ್ಯತೆಯಿದೆ.
ಎಪ್‌ಸ್ಟೀನ್ ಕಡತಗಳ ಬಿಡುಗಡೆಯು ಭಾರತದ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಬಹುದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಮತ್ತು ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಗಂಭೀರವಾಗಿ ಪ್ರತಿಪಾದಿಸಿದ್ದಾರೆ. ಅಮೆರಿಕದಲ್ಲಿ ಅಂಗೀಕರಿಸಲ್ಪಟ್ಟ ‘ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪರೆನ್ಸಿ ಆಕ್ಟ್’ ಅಡಿಯಲ್ಲಿ ಬಿಡುಗಡೆಯಾದ ಕಡತಗಳಲ್ಲಿ ಕೆಲವು ಭಾರತೀಯ ಉನ್ನತ ನಾಯಕರ ಹೆಸರುಗಳಿರಬಹುದು ಎಂದು ಚವಾಣ್ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕಡತಗಳು ಬಹಿರಂಗಗೊಂಡರೆ ಭಾರತದ ಕೇಂದ್ರ ಸರ್ಕಾರದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಿ, ಪ್ರಧಾನಿ ಹುದ್ದೆಯಲ್ಲೂ ಪಲ್ಲಟವಾಗಬಹುದು ಎಂಬ ಅರ್ಥದಲ್ಲಿ ಅವರು ಮಾತನಾಡಿದ್ದಾರೆ. ಸಂಜಯ್ ರಾವತ್ ಕೂಡ ಇದೇ ಧಾಟಿಯಲ್ಲಿ ಮಾತನಾಡುತ್ತಾ, ಈ ಫೈಲ್ಸ್ ಭಾರತೀಯ ರಾಜಕಾರಣದಲ್ಲಿ “ಭೂಕಂಪ” ಸೃಷ್ಟಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಇವರ ಪ್ರಕಾರ, ಎಪ್‌ಸ್ಟೀನ್‌ನ ಅಕ್ರಮ ಜಾಲದೊಂದಿಗೆ ಭಾರತದ ಕೆಲ ಪ್ರಭಾವಿಗಳ ನಂಟಿರುವ ಸಾಧ್ಯತೆಯಿದೆ.

ಚವಾಣ್ ಮತ್ತು ರಾವತ್ ಅವರ ರಾಜಕೀಯ ಆರೋಪಗಳು ಏನೇ ಇದ್ದರೂ, ಇಲ್ಲಿಯವರೆಗೆ ಲಭ್ಯವಿರುವ ಅಧಿಕೃತ ದಾಖಲೆಗಳಲ್ಲಿ ಭಾರತೀಯರ ಪಾತ್ರದ ಬಗ್ಗೆ ಇರುವ ಮಾಹಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಇತ್ತೀಚೆಗೆ ಬಿಡುಗಡೆಯಾದ ಇಮೇಲ್ ವ್ಯವಹಾರಗಳಲ್ಲಿ ಕೇಂದ್ರ ಸಚಿವ ಹರದೀಪ್ ಸಿಂಗ್ ಪುರಿ ಮತ್ತು ಉದ್ಯಮಿ ಅನಿಲ್ ಅಂಬಾನಿ ಅವರ ಹೆಸರುಗಳು ಪ್ರಸ್ತಾಪವಾಗಿವೆ. ಆದರೆ, ಇವು ಎಪ್‌ಸ್ಟೀನ್ ಕಡೆಯಿಂದ ಬಂದ ಔತಣಕೂಟದ ಆಹ್ವಾನಗಳು ಅಥವಾ ಭೇಟಿಯ ಸಮಯ ಕೋರಿ ಬರೆದ ಪತ್ರಗಳಾಗಿದ್ದವೇ ಹೊರತು, ಇವರು ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಲ್ಲ. ಹರದೀಪ್ ಸಿಂಗ್ ಪುರಿ ಅವರು ವಿಶ್ವಸಂಸ್ಥೆಯಲ್ಲಿದ್ದಾಗ ಎಪ್‌ಸ್ಟೀನ್ ಅವರನ್ನು ಭೇಟಿಯಾಗಲು ಯತ್ನಿಸಿದ್ದ ಎಂಬ ಉಲ್ಲೇಖವಿದೆ.
ವಿಧಾನಸಭೆ ಕಪಿಲ್ ಮಿಶ್ರಾ ಆರೋಪ
ಗುಜರಾತ್‌ನಲ್ಲಿ 2009ರಲ್ಲಿ ನಡೆದಿದೆ ಎನ್ನಲಾದ ಯುವತಿಯ ಮೇಲಿನ ಅಕ್ರಮ ಗೂಢಚಾರಿಕೆ ಪ್ರಕರಣವನ್ನು ದೆಹಲಿ ವಿಧಾನಸಭೆಯಲ್ಲಿ ಶಾಸಕ ಕಪಿಲ್ ಮಿಶ್ರಾ ಪ್ರಸ್ತಾಪಿಸಿದ್ದು, ಅಂದಿನ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. 2005ರಲ್ಲಿ ಆರಂಭವಾದ ಪರಿಚಯ, ನಂತರ ಹೇಗೆ 2009ರ ವೇಳೆಗೆ ಪೊಲೀಸ್ ಕಣ್ಗಾವಲಿಗೆ ತಿರುಗಿತು ಎಂಬುದನ್ನು ಅವರು ಇಸವಿ ಸಹಿತ ವಿವರಿಸಿದ್ದರು. ಐಎಎಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರ ಅಫಿಡವಿಟ್ ಅನ್ನು ಉಲ್ಲೇಖಿಸಿದ ಮಿಶ್ರಾ, “2005ರ ಅಕ್ಟೋಬರ್‌ನಲ್ಲಿ ನಡೆದ ಶರದ್ ಉತ್ಸವದ ವೇಳೆ ಈ ಯುವತಿಯ ಪರಿಚಯವಾಗಿತ್ತು. ನಂತರ 2006ರ ಮಾರ್ಚ್ ತಿಂಗಳಲ್ಲಿ ಆಕೆ ಭುಜ್‌ಗೆ ಭೇಟಿ ನೀಡಿದಾಗ, ಆಕೆಯನ್ನು ಮುಖ್ಯಮಂತ್ರಿಯವರ ನಿವಾಸಕ್ಕೆ ಹಿಂಬಾಗಿಲ ಮೂಲಕ ಕರೆಸಿಕೊಳ್ಳಲಾಗಿತ್ತು. 2006ರ ಈ ಅವಧಿಯಲ್ಲಿ ಅಧಿಕೃತ ಸರ್ಕಾರಿ ಕೆಲಸಗಳನ್ನು ಬದಿಗಿಟ್ಟು, ನಿಯಮಬಾಹಿರವಾಗಿ ಭೇಟಿ ಮಾಡಲಾಗುತ್ತಿತ್ತು,” ಎಂದು ಹಳೆಯ ಘಟನಾವಳಿಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟದ್ದರು.
ಇದನ್ನು ಓದಿದ್ದೀರಾ? ಬದಲಾದ ಬಾಂಗ್ಲಾ ಮಗ್ಗಲು; ಭಾರತ ವಿರೋಧಿ ಅಲೆ ಮತ್ತು ಪಾಕ್ ಸ್ನೇಹದತ್ತ ‘ಯೂನಸ್’ ನಡೆ
ಪಿತೂರಿ ಸಿದ್ಧಾಂತಗಳು
ಎಪ್‌ಸ್ಟೀನ್ ಪ್ರಕರಣವು ಜಗತ್ತಿನ ಅತಿ ಹೆಚ್ಚು ಪಿತೂರಿ ಸಿದ್ಧಾಂತಗಳಿಗೆ ಜನ್ಮ ನೀಡಿದೆ. ಅದರಲ್ಲಿ ಪ್ರಮುಖವಾದುದು “ಎಪ್‌ಸ್ಟೀನ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನನ್ನು ಕೊಲ್ಲಲಾಗಿದೆ” ಎಂಬುದು. 2019ರಲ್ಲಿ ಜೈಲಿನಲ್ಲಿ ಎಪ್‌ಸ್ಟೀನ್ ಶವವಾಗಿ ಪತ್ತೆಯಾದಾಗ, ಆತನ ಸೆಲ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟುಹೋಗಿದ್ದವು ಮತ್ತು ಕಾವಲುಗಾರರು ನಿದ್ದೆ ಮಾಡುತ್ತಿದ್ದರು ಎಂಬ ವರದಿಗಳು ಈ ಸಂಶಯಕ್ಕೆ ತುಪ್ಪ ಸುರಿದವು. ಜಗತ್ತಿನ ಪ್ರಭಾವಿಗಳಿಗೆ ಎಪ್‌ಸ್ಟೀನ್ ಬದುಕಿದ್ದರೆ ಆಪತ್ತು ಎಂಬ ಕಾರಣಕ್ಕೆ, ವ್ಯವಸ್ಥಿತವಾಗಿ ಆತನನ್ನು ಮುಗಿಸಲಾಯಿತು ಎಂಬುದು ಜನಸಾಮಾನ್ಯರ ಮತ್ತು ಹಲವು ತನಿಖಾ ಪತ್ರಕರ್ತರ ಬಲವಾದ ನಂಬಿಕೆಯಾಗಿದೆ.

ಇಸ್ರೇಲ್ – ಮೊಸಾದ್ ಕೈವಾಡದ ಅನುಮಾನ
ಈ ಇಡೀ ಪ್ರಕರಣಕ್ಕೆ ಅತ್ಯಂತ ಸ್ಫೋಟಕ ತಿರುವು ನೀಡುವುದು ಇಸ್ರೇಲ್ ಗುಪ್ತಚರ ಸಂಸ್ಥೆ ‘ಮೊಸಾದ್’ ಜೊತೆಗಿನ ಸಂಪರ್ಕ. ಎಪ್‌ಸ್ಟೀನ್ ಮತ್ತು ಆತನ ಸಹಚರರಾದ ಗಿಸ್ಲೇನ್ ಮ್ಯಾಕ್ಸ್‌ವೆಲ್ ಇಬ್ಬರೂ ಮೊಸಾದ್ ಏಜೆಂಟರಾಗಿದ್ದರು ಎಂಬುದು ಒಂದು ಪ್ರಬಲವಾದ ಪಿತೂರಿ ಸಿದ್ಧಾಂತವಾಗಿದೆ. ಗಿಸ್ಲೇನ್ ಮ್ಯಾಕ್ಸ್‌ವೆಲ್ ಅವರ ತಂದೆ ರಾಬರ್ಟ್ ಮ್ಯಾಕ್ಸ್‌ವೆಲ್ ಬ್ರಿಟಿಷ್ ಮಾಧ್ಯಮ ದಿಗ್ಗಜರಾಗಿದ್ದು, ಅವರು ಇಸ್ರೇಲ್‌ನ ಸೂಪರ್ ಸ್ಪೈ ಆಗಿದ್ದರು ಎಂಬುದು ಈಗ ರಹಸ್ಯವಾಗಿಯೇನೂ ಉಳಿದಿಲ್ಲ. ತಂದೆಯ ಮರಣದ ನಂತರ ಗಿಸ್ಲೇನ್ ಮತ್ತು ಎಪ್‌ಸ್ಟೀನ್ ಈ ಕೆಲಸವನ್ನು ಮುಂದುವರಿಸಿದರು ಎಂಬುದು ಆರೋಪ.
ಈ ಇಸ್ರೇಲ್ ಸಿದ್ಧಾಂತದ ಪ್ರಕಾರ, ಎಪ್‌ಸ್ಟೀನ್ ಕೇವಲ ಕಾಮುಕನಾಗಿರಲಿಲ್ಲ, ಬದಲಾಗಿ ಆತ ಒಬ್ಬ ‘ಮಾಹಿತಿ ಸಂಗ್ರಾಹಕ’ನಾಗಿದ್ದ. ಅಮೆರಿಕ ಮತ್ತು ಯುರೋಪಿನ ರಾಜಕಾರಣಿಗಳು, ವಿಜ್ಞಾನಿಗಳು ಮತ್ತು ರಾಜಕುಮಾರರನ್ನು ಅಪ್ರಾಪ್ತ ಬಾಲಕಿಯರ ಮೂಲಕ ‘ಹನಿಟ್ರ್ಯಾಪ್’ ಮಾಡಿ, ಅವರ ರಹಸ್ಯ ವಿಡಿಯೋಗಳನ್ನು ಸೆರೆಹಿಡಿಯುವುದು ಆತನ ಕೆಲಸವಾಗಿತ್ತು. ಈ ವಿಡಿಯೋಗಳನ್ನು ಇಟ್ಟುಕೊಂಡು ಜಾಗತಿಕ ನಾಯಕರನ್ನು ಬೆದರಿಸಿ, ಇಸ್ರೇಲ್ ಅಥವಾ ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳಿಗೆ ಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿತ್ತು ಎಂಬುದು ಅರಿ ಬೆನ್-ಮೆನಾಶೆ (ಮಾಜಿ ಇಸ್ರೇಲ್ ಗುಪ್ತಚರ) ಅಂತಹವರ ವಾದವಾಗಿದೆ.
ಟೇಪ್‌ಗಳು ಎಲ್ಲಿವೆ?
ಪಿತೂರಿ ಸಿದ್ಧಾಂತಗಳ ಬೆನ್ನೆಲುಬಾಗಿರುವುದು ನಾಪತ್ತೆಯಾಗಿರುವ ಆ ‘ಟೇಪ್‌ಗಳು’ ಎಪ್‌ಸ್ಟೀನ್ ಮನೆಯ ಮೇಲೆ ದಾಳಿ ನಡೆದಾಗ ಹಲವು ಹಾರ್ಡ್ ಡ್ರೈವ್‌ಗಳು ಮತ್ತು ಸಿಡಿಗಳು ಪತ್ತೆಯಾಗಿದ್ದವು. ಆದರೆ ಬ್ಲಾಕ್‌ಮೇಲ್ ಮಾಡಲು ಬಳಸಬಹುದಾದ ಅತ್ಯಂತ ನಿರ್ಣಾಯಕ ವಿಡಿಯೋಗಳು ಸಾರ್ವಜನಿಕವಾಗಿ ಬಿಡುಗಡೆಯಾಗಿಲ್ಲ. ಈ ಟೇಪ್‌ಗಳು ಈಗ ಎಫ್‌ಬಿಐ ವಶದಲ್ಲಿವೆಯೇ ಅಥವಾ ಬೇರಾವುದೇ ಗುಪ್ತಚರ ಸಂಸ್ಥೆಯ ಕೈ ಸೇರಿವೆಯೇ ಎಂಬುದು ನಿಗೂಢ. ಇಸ್ರೇಲ್ ಕೈವಾಡದ ಸಿದ್ಧಾಂತಕ್ಕೆ ಪುಷ್ಟಿ ನೀಡುವಂತೆ, ಎಪ್‌ಸ್ಟೀನ್ ಬಳಿ ಇದ್ದ ಬೆದರಿಕೆ ಸಾಕ್ಷ್ಯಗಳೇ ಆತನಿಗೆ ಇಷ್ಟು ವರ್ಷಗಳ ಕಾಲ ರಕ್ಷಣೆ ನೀಡಿದ್ದವು ಎನ್ನಲಾಗುತ್ತದೆ.

ಎಪ್‌ಸ್ಟೀನ್ ಮೊದಲ ಬಾರಿ 2008ರಲ್ಲೇ ಸಿಕ್ಕಿಬಿದ್ದಿದ್ದರೂ, ಆತನಿಗೆ ಅತ್ಯಂತ ಕಡಿಮೆ ಶಿಕ್ಷೆ (ಕೇವಲ 13 ತಿಂಗಳು) ಮತ್ತು ಜೈಲಿನಲ್ಲಿ ಐಷಾರಾಮಿ ಸೌಲಭ್ಯ ಸಿಕ್ಕಿತ್ತು. ಆತನ ಹಿಂದೆ ಇಸ್ರೇಲ್ ಅಥವಾ ಅಮೆರಿಕದ ಸಿಐಎ ಕೈವಾಡವಿತ್ತೋ ಎಂಬುದು ಸ್ಪಷ್ಟವಿಲ್ಲದಿದ್ದರೂ, ಸಾಮಾನ್ಯ ಕಾನೂನು ಈತನ ವಿಚಾರದಲ್ಲಿ ಹಲ್ಲು ಕಿತ್ತ ಹಾವಿನಂತಾಗಿತ್ತು ಎಂಬುದು ಸತ್ಯ.
ಸಂತ್ರಸ್ತೆಯರ ನೋವು ಮತ್ತು ನ್ಯಾಯ
ಈ ಎಲ್ಲಾ ರಾಜಕೀಯ, ಗೂಢಚಾರಿಕೆ ಮತ್ತು ಹೈ-ಪ್ರೊಫೈಲ್ ಹೆಸರುಗಳ ಆರ್ಭಟದಲ್ಲಿ ಮರೆಯಾಗುತ್ತಿರುವುದು ನೊಂದ ಸಂತ್ರಸ್ತೆಯರ ದನಿ. ವರ್ಜೀನಿಯಾ ಜಿಯುಫ್ರೆ ಸೇರಿದಂತೆ ನೂರಾರು ಸಂತ್ರಸ್ತೆಯರು ಎಪ್‌ಸ್ಟೀನ್ ಮತ್ತು ಮ್ಯಾಕ್ಸ್‌ವೆಲ್ ಅವರ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಎಪ್‌ಸ್ಟೀನ್ ಸತ್ತಿರಬಹುದು, ಆತನ ವಿಮಾನದಲ್ಲಿ ಮೋಜು ಮಾಡಿದವರು ಮತ್ತು ಈ ಜಾಲವನ್ನು ಪೋಷಿಸಿದವರು ಇನ್ನೂ ಸಮಾಜದಲ್ಲಿ ಗಣ್ಯರಾಗಿ ಓಡಾಡುತ್ತಿದ್ದಾರೆ. ಆದರೆ ಪೂರ್ಣವಾಗಿ ಹೊರಬಂದರೆ ಅತಿರಥ, ಮಹಾರಥರ ಮುಖವಾಡಗಳೆಲ್ಲ ಕಳಚಿ ಬೀಳುತ್ತವೆ.
ಹಾಗೆಯೇ ಎಪ್‌ಸ್ಟೀನ್ ಫೈಲ್ಸ್ ಕೇವಲ ವ್ಯಕ್ತಿಯೊಬ್ಬನ ಲೈಂಗಿಕ ವಿಕೃತಿಯ ಕಥೆಯಲ್ಲ; ಅದು ಜಾಗತಿಕ ಅಧಿಕಾರ ಕೇಂದ್ರಗಳಲ್ಲಿ ಬೇರೂರಿರುವ ಭ್ರಷ್ಟಾಚಾರ ಮತ್ತು ನೈತಿಕ ದಾರಿದ್ರ್ಯದ ಪ್ರತಿಬಿಂಬ. ಅಧಿಕಾರಸ್ಥರು ಎಂತಹ ಹೀನ ಕೃತ್ಯಕ್ಕೂ ಇಳಿಯಬಲ್ಲರು ಎಂಬ ಎಚ್ಚರಿಕೆಯ ಗಂಟೆ ಇದು. ಇಸ್ರೇಲ್ ನಂಟಿನ ಆರೋಪಗಳು ಸಾಬೀತಾಗದೇ ಇರಬಹುದು, ಆದರೆ ‘ಹನಿಟ್ರ್ಯಾಪ್’ ಮೂಲಕ ಅಧಿಕಾರವನ್ನು ನಿಯಂತ್ರಿಸುವ ತಂತ್ರಗಾರಿಕೆ ಇತಿಹಾಸದುದ್ದಕ್ಕೂ ನಡೆದುಬಂದಿದೆ. ಪೂರ್ಣ ಸತ್ಯ ಹೊರಬರಬೇಕಾದರೆ, ನಾಪತ್ತೆಯಾಗಿರುವ ಟೇಪ್‌ಗಳು ಮತ್ತು ಎಪ್‌ಸ್ಟೀನ್ ಸಾವಿನ ರಹಸ್ಯ ಬಯಲಾಗಬೇಕಿದೆ. ಅಲ್ಲಿಯವರೆಗೆ ಇದು ಅರ್ಧ ಸತ್ಯ ಮತ್ತು ಉಳಿದರ್ಧ ಊಹಾಪೋಹವಾಗಿಯೇ ಉಳಿಯಲಿದೆ.






