ಗಾಜಾ ಜನರ ಪರವಾಗಿ ಯುರೋಪ್‌ನ ಹಲವು ದೇಶಗಳು ನಿಂತಿವೆ. ಮಾನವೀಯ ಹಸ್ತ ಚಾಚಿದೆ, ಬೆಂಬಲ ವ್ಯಕ್ತಪಡಿಸಿದೆ. ಹಲವು ವರ್ಷಗಳಿಂದ ಪ್ಯಾಲೇಸ್ತೀನ್ ಪರವಾಗಿದ್ದ ನಮ್ಮ ಭಾರತ ಮಾತ್ರ ಮೋದಿ ಆಡಳಿತದಲ್ಲಿ ಇಸ್ರೇಲ್‌ನತ್ತ ವಾಲುತ್ತಿದೆ. ತುಳಿತಕ್ಕೆ ಒಳಗಾದವರ ಪರವಾಗಿ ನಿಲ್ಲುವ ಬದಲು, ಹತ್ಯಾಕಾಂಡ ನಡೆಸುವವರ ಬಗಲಿನಲ್ಲಿ ನಿಂತಿದೆ. ಇಸ್ರೇಲ್ ನಡೆಸಿದ ನರಮೇಧವನ್ನು ಖಂಡಿಸುವ ಬದಲು ಪ್ರಧಾನಿ ಮೋದಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಶ್ಲಾಘಿಸುವ ಹಂತಕ್ಕೆ ಇಳಿದಿದ್ದಾರೆ.
ಗಾಜಾದ ಜನರನ್ನು ಬೆಂಬಲಿಸಿ ಮತ್ತು ಗಾಜಾಕ್ಕೆ ನೆರವು ನೀಡುವವರ ಪ್ರಯತ್ನವನ್ನು ಬೆಂಬಲಿಸಿ ಹಲವು ಯುರೋಪಿಯನ್ ನಗರಗಳಲ್ಲಿ ಲಕ್ಷಾಂತರ ಮಂದಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಟರ್ಕಿಯಲ್ಲಿ ಅತಿ ದೊಡ್ಡ ಪ್ರದರ್ಶನ ನಡೆಸಲಾಗಿದೆ. ಇಸ್ತಾನ್‌ಬುಲ್‌ನಲ್ಲಿರುವ ಒಂದು ಪ್ರಮುಖ ಐತಿಹಾಸಿಕ ಸ್ಮಾರಕ ಹಗಿಯಾ ಸೋಫಿಯಾದಿಂದ ಗೋಲ್ಡನ್ ಹಾರ್ನ್ ದಡದವರೆಗೆ ಅಂದರೆ ಸುಮಾರು ಐದು ಕಿಲೋ ಮೀಟರ್ ದಾರಿಯಲ್ಲಿ ಬೃಹತ್ ಮೆರವಣಿಗೆ ನಡೆಸಿ ಗಾಜಾದ ಜನರಿಗೆ ಬೆಂಬಲ ವ್ಯಕ್ತಪಡಿಸಲಾಗಿದೆ. ಇವಿಷ್ಟು ಮಾತ್ರವಲ್ಲದೆ ಆರ್ಥಿಕ, ಮಾನವೀಯ ಹಸ್ತವನ್ನೂ ಯುರೋಪ್‌ನ ಬಹುತೇಕ ದೇಶಗಳು ಗಾಜಾಕ್ಕಾಗಿ ಚಾಚಿವೆ. ಇವೆಲ್ಲವುದರ ನಡುವೆ ನಮ್ಮ ನಾಯಕರ ಮನ ಮಾತ್ರ ಗಾಜಾಕ್ಕಾಗಿ ಮಿಡಿಯುತ್ತಿಲ್ಲ.
ಗಾಜಾದಲ್ಲಿ ಇಸ್ರೇಲ್ ನಡೆಸಿದ ನರಮೇಧವನ್ನು ಖಂಡಿಸಿ ಇಸ್ರೇಲ್ ಗಾಜಾ ಯುದ್ಧ ಆರಂಭವಾಗಿ(ಅ.7, 2023) ಎರಡು ವರ್ಷವಾದ ದಿನ ಅಂದರೆ ಅಕ್ಟೋಬರ್ 7ರಂದು ಯುರೋಪ್ ಗಾಜಾಕ್ಕೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿ ಬೃಹತ್ ಪ್ರತಿಭಟನೆ ನಡೆಸಿದೆ. ಇನ್ನು ಮುಸ್ಲಿಂ ಪ್ರಾಬಲ್ಯವಿರುವ ಟರ್ಕಿಯಲ್ಲಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ನೆದರ್‌ಲ್ಯಾಂಡ್‌ನಲ್ಲಿ ಬರೋಬ್ಬರಿ 2,50,000 ಜನರು ಆರ್ಮಸ್ಟ್ರಡಾಮ್‌ನಲ್ಲಿ ಇಸ್ರೇಲ್ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ತಮ್ಮ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಬಹುತೇಕರು ಕೆಂಪಂಗಿ ಧರಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಚುನಾವಣೆಗೂ ಎರಡು ವಾರಗಳಿಗೂ ಮುನ್ನ ನಡೆದ ಈ ಬೃಹತ್ ಪ್ರತಿಭಟನೆಯು ‘ಡಚ್’ ದೇಶದಲ್ಲಿ ಸಾಕಷ್ಟು ಸುದ್ದಿಯಾಗಿದೆ. ನೆದರ್‌ಲ್ಯಾಂಡ್ ಸರ್ಕಾರದ ವಿರುದ್ಧವು ಅಲ್ಲಿನ ಜನರು ಘೋಷಣೆಗಳನ್ನು ಕೂಗಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನರಮೇಧ ನಡೆಸಿದವರೊಂದಿಗೆ ಭಾರತ ನಿಲ್ಲುವುದು ಅಕ್ಷಮ್ಯ ಅಪರಾಧ
ನೆದರ್‌ಲ್ಯಾಂಡ್ ಹಲವು ವರ್ಷಗಳಿಂದ ಇಸ್ರೇಲ್ ಪರವಾಗಿ ನಿಂತ ದೇಶ. ಆದರೆ ಗಾಜಾದಲ್ಲಿ ಇಸ್ರೇಲ್ ನಡೆಸಿದ ಹತ್ಯಾಕಾಂಡದ ಬಳಿಕ ಡಚ್ ಸರ್ಕಾರವೂ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಶುಕ್ರವಾರ ನೆದರ್‌ಲ್ಯಾಂಡ್ ವಿದೇಶಾಂಗ ಸಚಿವ ಡೇವಿಡ್ ವ್ಯಾನ್ ವೀಲ್ಹ್, “ಇಸ್ರೇಲ್‌ಗೆ F-35 ಫೈಟರ್ ಜೆಟ್‌ಗಳ ಭಾಗಗಳನ್ನು ಕಳುಹಿಸಲು ರಫ್ತು ಪರವಾನಗಿಯನ್ನು ನೀಡುವ ಸಾಧ್ಯತೆಯಿಲ್ಲ” ಎಂದು ಹೇಳುವ ಮೂಲಕ ಇಸ್ರೇಲ್‌ನಿಂದ ತಮ್ಮ ಸರ್ಕಾರ ದೂರ ಸರಿಯುತ್ತಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಯುರೋಪ್ ಭಾಗವಾದ ಬ್ರಿಟನ್‌ನ ಕೆಲವೆಡೆ ತದ್ವಿರುದ್ಧವಾದ ನಿಲುವು ಕಂಡುಬಂದಿದೆ. ನೂರಾರು ಜನರು ಹಮಾಸ್ ನಡೆಸಿದ ದಾಳಿ ಮತ್ತು ಮ್ಯಾಂಚೆಸ್ಟರ್‌ನ ಸಿನಗಾಗ್ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ ಮತ್ತು ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಮ್ಯಾಂಚೆಸ್ಟರ್ ಕ್ಯಾಥೆಡ್ರಲ್ ಹೊರಗೆ ಜಮಾಯಿಸಿ ಇಸ್ರೇಲ್ ಮತ್ತು ಯುಕೆ ಧ್ವಜವನ್ನು ಹಿಡಿದು ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪ್ಯಾರಿಸ್‌ನ ಕೆಲವೆಡೆಯೂ ಇಸ್ರೇಲ್ ಪರ ಕೂಗಿದೆ.
ಈ ನಡುವೆ ಯುರೋಪ್ ದೇಶಗಳಾದ ಬಲ್ಗೇರಿಯಾ ಮತ್ತು ಮೊರಾಕೊದಲ್ಲಿ ಗಾಜಾ ಬೆಂಬಲಕ್ಕೆ ನಿಂತ ಹೋರಾಟಗಾರರ ಬಿಡುಗಡೆಗೆ ಒತ್ತಾಯಿಸಿ ಮೆರವಣಿಗೆಗಳು ನಡೆದಿದೆ. ಬಲ್ಗೇರಿಯನ್ ರಾಜಧಾನಿ ಸೋಫಿಯಾದಲ್ಲಿ, ‘ಗಾಜಾ: ಹಸಿವು ಯುದ್ಧದ ಆಯುಧ’ ಮತ್ತು ‘ಗಾಜಾ ಮಕ್ಕಳ ಅತಿದೊಡ್ಡ ಸ್ಮಶಾನ’ ಎಂಬ ಫಲಕಗಳನ್ನು ಹಿಡಿದು ಮೆರವಣಿಗೆ ನಡೆಸಿದ್ದಾರೆ. ‘ಗ್ಲೋಬಲ್ ಸುಮುದ್ ಫ್ಲೋಟಿಲ್ಲಾ’ ಮೂಲಕ ಗಾಜಾಗೆ ಮಾನವೀಯ ನೆರವು ತಲುಪಿಸಲು ಪ್ರಯತ್ನಿಸಿದ 137 ಹೋರಾಟಗಾರರನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ? ಹಮಾಸ್ ವಿರುದ್ಧ ನಿಲುವು | ಕೇಂದ್ರ ಸರ್ಕಾರ ಹೇಳುವುದನ್ನೇ ಪಠಿಸುತ್ತಿರುವ ಗೋಧಿ ಮಾಧ್ಯಮ
ಜನಾಂಗೀಯ ಹತ್ಯೆಯನ್ನು ಕೊನೆಗೊಳಿಸಬೇಕು ಮತ್ತು ಇಸ್ರೇಲ್‌ನೊಂದಿಗೆ ವ್ಯಾಪಾರ ಸಂಬಂಧವನ್ನು ಕೊನೆಗೊಳಿಸಬೇಕು ಎಂದು ಒತ್ತಾಯಿಸಿ ಸ್ಪೇನ್‌ನಾದ್ಯಂತ ಅಲ್ಲಲ್ಲಿ ಮೆರವಣಿಗೆಗಳನ್ನು ನಡೆಸಲಾಗಿದೆ. ಸ್ಪೇನ್‌ನ ಉತ್ತರದಲ್ಲಿರುವ ಸ್ಯಾಂಟಿಯಾಗೊ ಮತ್ತು ಗಿಜಾನ್‌ನಲ್ಲಿ ಬೃಹತ್ ಮೆರವಣಿಗೆ ನಡೆಸಲಾಗಿದೆ. ಇನ್ನು ಗಿಜಾನ್‌ನಲ್ಲಿ ಗಾಜಾದಲ್ಲಿ ಕೊಲೆಯಾದ ಮಕ್ಕಳ ಶವಗಳನ್ನು ಸಂಕೇತಿಸುವ ಬಿಳಿ ಬಂಡಲ್‌ಗಳನ್ನು ಹೊತ್ತು ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಒಟ್ಟಾರೆಯಾಗಿ ಯುರೋಪ್‌ನ ಬಹುತೇಕ ದೇಶಗಳು ಗಾಜಾದ ಪರವಾಗಿ ನಿಂತಿದೆ, ಬೆಂಬಲ ವ್ಯಕ್ತಪಡಿಸಿದೆ. ಬರೀ ಪ್ರತಿಭಟನೆ, ರಾಜಕೀಯ ಬೆಂಬಲ ಮಾತ್ರವಲ್ಲದೆ ಹಲವು ಯುರೋಪ್ ದೇಶಗಳು ಮಾನವೀಯ ಸಹಾಯ ಮತ್ತು ಆರ್ಥಿಕ ಬೆಂಬಲವನ್ನು ಗಾಜಾಗೆ ನೀಡಿದೆ. ಆಸ್ಟ್ರೇಲಿಯಾ, ಆಸ್ಟ್ರಿಯಾ, ಬೆಲ್ಜಿಯಂ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ನೆದರ್‌ಲ್ಯಾಂಡ್, ನಾರ್‌ವೇ, ಸ್ಪೇನ್ ಸೇರಿದಂತೆ 26 ದೇಶಗಳು ಗಾಜಾದಲ್ಲಿ ಯುದ್ಧ ನಿಲ್ಲಿಸುವಂತೆ ಕರೆ ನೀಡಿವೆ. ಆದರೆ ನಮ್ಮ ಭಾರತ ಮಾತ್ರ ತುಳಿತಕ್ಕೆ ಒಳಗಾದವರ ಪರವಾಗಿ ನಿಲ್ಲುವ ಬದಲು, ಹತ್ಯಾಕಾಂಡ ನಡೆಸುವವರ ಬಗಲಿನಲ್ಲಿ ನಿಂತಿದೆ. ನಮ್ಮ ಭಾರತ ಮಾತ್ರ ಎತ್ತ ಸಾಗುತ್ತಿದೆ?
‘ಹಾವೂ ಸಾಯಬಾರದು, ಕೋಲೂ ಮುರಿಯಬಾರದು’ ಎನ್ನುವ ಭಾರತ
ಇಸ್ರೇಲ್ ಮತ್ತು ಪ್ಯಾಲೇಸ್ತೀನ್ ವಿಚಾರದಲ್ಲಿ ಭಾರತವು ಸಮತೋಲಿತ ಮತ್ತು ಅಲಿಪ್ತ ನಿಲುವನ್ನು ಕಾಯ್ದುಕೊಂಡಿದೆ. ‘ಹಾವೂ ಸಾಯಬಾರದು, ಕೋಲು ಮುರಿಯಬಾರದು’ ಎಂಬಂತಹ ನಿಲುವು ಪ್ರಧಾನಿ ನರೇಂದ್ರ ಮೋದಿ ಅವರದ್ದು. ಗಾಜಾ ಮತ್ತು ಪ್ಯಾಲೇಸ್ತೀನ್‌ಗೆ ಮಾನವೀಯ ಸಹಾಯವನ್ನು ಮಾಡುತ್ತಿದ್ದರೂ ನೇರವಾಗಿ ಇಸ್ರೇಲ್‌ನ ನರಮೇಧವನ್ನು ವಿರೋಧಿಸಿಲ್ಲ, ಖಂಡಿಸಿಲ್ಲ. ಅಷ್ಟು ಮಾತ್ರವಲ್ಲದೆ ತುಳಿತಕ್ಕೆ ಒಳಗಾದವರ ಪರವಾಗಿ ನಿಲ್ಲುವ ಬದಲಾಗಿ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೌರ್ಯ ಮೆರೆಯುತ್ತಿರುವ ಇಸ್ರೇಲ್‌ಅನ್ನು ಶ್ಲಾಘಿಸಿದ್ದಾರೆ.
We welcome the agreement on the first phase of President Trump's peace plan. This is also a reflection of the strong leadership of PM Netanyahu.
— Narendra Modi (@narendramodi) October 9, 2025
We hope the release of hostages and enhanced humanitarian assistance to the people of Gaza will bring respite to them and pave the way…
ನಿರಂತರ ಇಸ್ರೇಲ್ ಬಾಂಬ್, ಕ್ಷಿಪಣಿ ದಾಳಿಯಿಂದ ಬಿಕ್ಕಟ್ಟಿನಲ್ಲಿ ಸಿಲುಕಿರುವ ಗಾಜಾಕ್ಕೆ ಭಾರತ ಸಹಾಯಹಸ್ತವೇನೋ ಚಾಚಿದೆ. 2023ರ ಕೊನೆಯಲ್ಲಿ 70 ಟನ್ ಆಹಾರ ಸಾಮಾಗ್ರಿ ನೆರವು ಮತ್ತು 2024ರ ಕೊನೆಯಲ್ಲಿ ಸುಮಾರು 65 ಟನ್ ಔಷಧಗಳು ಸೇರಿದಂತೆ ಮಾನವೀಯ ಸಹಾಯವನ್ನು ಭಾರತ ಗಾಜಾಕ್ಕೆ ಕಳುಹಿಸಿದೆ. ಆದರೆ ಇಸ್ರೇಲ್ ದಾಳಿಯನ್ನು ಮಾತ್ರ ಈವರೆಗೂ ಭಾರತ ಖಂಡಿಸಿಲ್ಲ. ಅಷ್ಟು ಮಾತ್ರವಲ್ಲದೆ ಇಸ್ರೇಲ್ ಪ್ರಧಾನಿಯನ್ನು ಬಹಿರಂಗವಾಗಿ ಹೊಗಳುವ ಮಟ್ಟಕ್ಕೆ ನಮ್ಮ ದೇಶದ ಪ್ರಧಾನಿಗಳು ಇಳಿದಿದ್ದಾರೆ. ಶಾಂತಿ ಒಪ್ಪಂದಕ್ಕೆ ಇಸ್ರೇಲ್ ಅಸ್ತು ಎನ್ನುತ್ತಿದ್ದಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋದಿ, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶಾಂತಿ ಯೋಜನೆಯ ಮೊದಲ ಹಂತದ ಅನುಷ್ಠಾನವನ್ನು ನಾವು ಸ್ವಾಗತಿಸುತ್ತೇವೆ. ಇದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ‘ಬಲವಾದ ನಾಯಕತ್ವದ ಪ್ರತಿಬಿಂಬ’ವೂ ಆಗಿದೆ” ಎಂದು ಮೋದಿ ಹೇಳಿದ್ದಾರೆ.
ಪಾಲೇಸ್ತೀನ್ ಪರವಾಗಿ ನಿರಂತರವಾಗಿ ನಿಂತ ದೇಶ ಭಾರತ. 1974ರಲ್ಲಿ ಪ್ಯಾಲೇಸ್ತೀನ್ ಲಿಬರೇಶನ್ ಆರ್ಗನೈಸೇಶನ್ (PLO) ಅನ್ನು ಮಾನ್ಯ ಮಾಡಿದ, ಗುರುತಿಸಿದ ಮೊದಲ ಅರಬೇತರ ದೇಶ ನಮ್ಮದು. ಆದರೆ ಪ್ರಧಾನಿ ಮೋದಿ ಆಡಳಿತದ ಬಳಿಕ ಈ ನಿಲುವು ಕ್ರಮೇಣವಾಗಿ ಬದಲಾಗುತ್ತಿದೆ. ಅದೂ ಪ್ಯಾಲೇಸ್ತೀನ್ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸುತ್ತಿರುವ ಹೊತ್ತಿನಲ್ಲಿ ನಮ್ಮ ಸರ್ಕಾರದ ಈ ದ್ವಂದ್ವ ನಿಲುವು ಖಂಡನೀಯ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




