ಹೊಸ ವರ್ಷ ಕ್ಯಾಲೆಂಡರ್ ಬದಲಾಗುವ ಕ್ಷಣದ ಜತೆಗೆ ಅದು ಸಮಾಜ ತನ್ನ ಆತ್ಮಪರಿಶೀಲನೆ ಮಾಡಿಕೊಳ್ಳುವ ಕಾಲ. ಆದರೆ ಇಂದು ಭಾರತದ ಹೊಸ ವರ್ಷವು ಆಚರಣೆಯ ಸಂಭ್ರಮದ ಶಬ್ದಗಳನ್ನು ಕೇಳಿಸಿಕೊಳ್ಳುತ್ತಿದೆಯಷ್ಟೇ; ಅದೇ ಸಮಯದಲ್ಲಿ ಶೋಷಿತ ಸಮುದಾಯಗಳ ಮೌನ ಕಿರುಚಾಟವನ್ನು ಮರೆಮಾಚುವ ದಿನವಾಗಿಬಿಟ್ಟಿದೆ. ಜಾತಿಯ ಹೆಸರಿನಲ್ಲಿ ಪ್ರೀತಿಗೆ ಶಿಕ್ಷೆ, ಗರ್ಭದಲ್ಲಿರುವ ಜೀವಕ್ಕೂ ಮರಣಶಾಸನ ವಿಧಿಸುವಂತಹ ಅಮಾನುಷ ಘಟನೆಗಳು, ನಾವು ಎಷ್ಟೇ ಆಧುನಿಕತೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದರೂ, ನಮ್ಮ ಮನಸ್ಸುಗಳು ಇನ್ನೂ ಶತಮಾನಗಳ ಹಿಂದೆಯೇ ನಿಂತಿರುವುದನ್ನು ಬಯಲುಗೊಳಿಸುತ್ತವೆ.
ನಾವೀಗ ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದೇವೆ. ಬ್ರಿಟಿಷರು ಭಾರತವನ್ನು ವಸಾಹತುವನ್ನಾಗಿ ಮಾಡಿದಾಗ ಹೊಸ ವರ್ಷ ಆಚರಿಸಲಾಯಿತು ಎಂದು ಕೆಲವರು; 1940ರ ದಶಕದ ನಂತರವೇ ಈ ಆಚರಣೆಯ ಜನಪ್ರಿಯತೆಯ ಹೆಚ್ಚಾಯಿತು ಎಂದು ಇನ್ನೂ ಕೆಲವರು ಹೇಳುತ್ತಾರೆ. ಅದೇನೇ ಇರಲಿ ಡಿಸೆಂಬರ್ 31ರ ಮಧ್ಯರಾತ್ರಿಯಿಂದ ಜನವರಿ 1ರವರೆಗೆ ಭಾರತದಾದ್ಯಂತ, ಪಾಶ್ಚಾತ್ಯ ಶೈಲಿಯಲ್ಲಿ, ಜನರು ವರ್ಣರಂಜಿತವಾಗಿ ಉಡುಗೆ ತೊಡುವುದು, ಹಾಡುವುದು, ನೃತ್ಯ ಮಾಡುವುದು ಸೇರಿದಂತೆ ಹಲವು ಮೋಜಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ರೆಸಾರ್ಟ್‌ಗಳು, ರೆಸ್ಟೋರೆಂಟ್‌ಗಳು, ಬಾರ್‌ಗಳು ಎಲ್ಲಾ ವಯಸ್ಸಿನ ಜನರಿಂದ ತುಂಬಿರುತ್ತವೆ. ಇಂತಹ ಮೋಜಿನ ಆಚರಣೆಗಳಲ್ಲಿ ಪಾಶ್ಚಿಮಾತ್ಯರನ್ನು ಅನುಸರಿಸುವ ಈ ದೇಶದಲ್ಲಿ ಜಾತಿ ವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವುದು ವಿಷಾದನೀಯ.

2026ಕ್ಕೆ ಕಾಲಿಟ್ಟರೂ ಶತಮಾನಗಳಿಂದ ಜೀವಂತವಾಗಿರುವ ಜಾತಿ ತಾರತಮ್ಯ, ಜಾತಿ ಹೆಸರಲ್ಲಿ ನಡೆಸುವ ಕ್ರೌರ್ಯವನ್ನು ಸಹಿಸಿಕೊಂಡು ಬರುತ್ತಿರುವ ದುರ್ಬಲ ಸಮುದಾಯ ನೈಜ ಹೊಸ ವರ್ಷಕ್ಕಾಗಿ ಕಾದುನೋಡುತ್ತಿದೆ. ಶತಮಾನಗಳು ಕಳೆದರೂ ಬಡವರ ಬದುಕು ಬದಲಾಗಲಿಲ್ಲ. ಅಸ್ಪೃಶ್ಯತೆ ಎಂಬ ಪಿಡುಗು ಈ ಸಮಾಜವನ್ನು ಬಿಟ್ಟು ಹೋಗಿಲ್ಲ. ಜಾತೀಯತೆಯು ಸಮಾಜದ ದೊಡ್ಡ ಪಿಡುಗಾಗಿದ್ದು, ದುರ್ಬಲ ಜಾತಿಗಳ ಮೇಲೆ ದಬ್ಬಾಳಿಕೆ, ಹಲ್ಲೆ, ಕೊಲೆ, ಅತ್ಯಾಚಾರ, ಮರ್ಯಾದೆಗೇಡು ಹತ್ಯೆಯಂತಹ ಘಟನೆಗಳು ಕ್ರಮೇಣ ಹೆಚ್ಚಾಗುತ್ತಿವೆ. ಶೋಷಿತ ಸಮುದಾಯಗಳು ಸಮಾನತೆಯಿಂದ ಬದುಕಬೇಕೆಂದು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನ್ಯಾಯ ಒದಗಿಸಿದ್ದಾರೆ. ಅವರ ಚಿಂತನೆಗಳನ್ನು ಇಂದು ಅನುಷ್ಠಾನಗೊಳಿಸಬೇಕಿದೆ. ಅದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತದೆ? ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತಿದೆ.
ಅದೆಷ್ಟೋ ಮಹನೀಯರು ಜಾತೀಯತೆ ವಿರುದ್ಧ ಪ್ರತಿಭಟಿಸಿ, ಧ್ವನಿಯೆತ್ತಿ ಜಾತಿವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಮಾನತೆಯ ಕನಸೂ ಕಾಣದ ಜಾತಿವಾದಿಗಳು ವ್ಯವಸ್ಥಿತವಾಗಿ ಈ ನೆಲದಿಂದ ಬುದ್ಧನನ್ನು ಹೊರಹಾಕಿದರು. ಬೌದ್ಧ ಸಾಹಿತ್ಯವನ್ನು ನಾಶ ಮಾಡಿದರು. ಬಸವಣ್ಣನ ಗಡಿಪಾರು ಮಾಡಿಸಿದರು. ವಚನ ಕಟ್ಟುಗಳನ್ನು ಸುಟ್ಟು ಹಾಕಿದರು. ಹರಳಯ್ಯ-ಮದುವರಸರಿಗೆ ಎಳೆಹೂಟೆ ಶಿಕ್ಷೆ ವಿಧಿಸಿದರು. ಶರಣರ ಕಗ್ಗೊಲೆ ಆಯಿತು. ಅಸ್ಪೃಶ್ಯತೆಯು ಛತ್ರಪತಿ ಶಿವಾಜಿಯನ್ನು, ಅಂಬೇಡ್ಕರರನ್ನು ಬಿಡಲಿಲ್ಲ. ಉತ್ತಮರೆನಿಸಿಕೊಂಡವರಾರನ್ನೂ ಈ ಕ್ರೌರ್ಯ ಬಿಟ್ಟಿಲ್ಲ. ಅಂದು ಶುರುವಾದ ಅನಿಷ್ಟ ಆಚರಣೆಗಳು, ಪದ್ಧತಿಗಳು, ಅಸಮಾನತೆ ಇಂದಿಗೂ ನಿಂತಿಲ್ಲ. ಶೋಷಿತರನ್ನೇ ಗುರಿಯಾಗಿಸಿಕೊಂಡು ದಬ್ಬಾಳಿಕೆ, ದೌರ್ಜನ್ಯ, ಕೊಲೆಯಂತಹ ಹೇಯ ಕೃತ್ಯಗಳು ನಡೆಯುತ್ತಲೇ ಇವೆ.

2025ರ ನವೆಂಬರ್ 30ರಂದು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಅನ್ಯ ಜಾತಿಯ ಹುಡುಗನನ್ನು ಪ್ರೀತಿಸಿ, ಮದುವೆ ಆಗಿದ್ದಕ್ಕೆ ಕೋಪಗೊಂಡ ಹುಡುಗಿಯ ಕುಟುಂಬದವರು ತನ್ನ ಪ್ರಿಯಕರ ಸಕ್ಷಮ್ ಟೇಟ್‌ಅನ್ನು ಥಳಿಸಿ, ಗುಂಡು ಹಾರಿಸಿ ಹತ್ಯೆ ಮಾಡುತ್ತಾರೆ. ತನ್ನ ಮನೆಯವರಿಂದ ಹತ್ಯೆಯಾದ ಪ್ರಿಯಕರನ ಅಂತ್ಯಕ್ರಿಯೆ ವೇಳೆ ಯುವತಿ(ಆಂಚಲ್) ಆತನ ಮೃತದೇಹದ ಜತೆಗೆ ಮದುವೆ ಆಗುತ್ತಾಳೆ. ತನ್ನ ಕುಟುಂಬವನ್ನು ತೊರೆದು, ತಾನು ಇನ್ಮುಂದೆ ಸಕ್ಷಮ್ ಮನೆಯಲ್ಲೇ ಸೊಸೆಯಾಗಿ ವಾಸಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ ಘಟನೆ ದೇಶದ ಮನಕಲಕಿತ್ತು.
ಇತ್ತೀಚೆಗೆ ಡಿ. 21ರಂದು ಕರ್ನಾಟಕದ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪೂರ ಗ್ರಾಮದಲ್ಲಿ ದಲಿತ ಯುವಕನನ್ನು ಮದುವೆ ಆಗಿದ್ದಕ್ಕೆ ಸಿಟ್ಟಿಗೆದ್ದ ಯುವತಿ ಮಾನ್ಯಾಳ ತಂದೆ, ಗರ್ಭಿಣಿ ಮಗಳನ್ನೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿಬಿಟ್ಟ. ಅಲ್ಲದೆ ಮೃತಳ ಗಂಡ ವಿವೇಕಾನಂದನ ಕುಟುಂಬಸ್ಥರ ಮೇಲೂ ದಾರುಣವಾಗಿ ಹಲ್ಲೆ ಮಾಡಿದ ಪರಿಣಾಮ ಯುವಕನ ತಾಯಿಯ ಸ್ಥಿತಿ ಇಂದಿಗೂ ಗಂಭೀರವಾಗಿದೆ. ಈ ಘಟನೆಯು ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಇಡೀ ನಾಗರೀಕ ಸಮಾಜಕ್ಕೆ ಕಳಂಕ ತಂದೊಡ್ಡಿದೆ. ಈ ಘಟನೆಯ ಬೆನ್ನಲ್ಲೇ ಡಿ. 23ಕ್ಕೆ ಚಿತ್ರದುರ್ಗ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ಗರ್ಭಿಣಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದಳು. ಇದು ಆತ್ಮಹತ್ಯೆಯಲ್ಲ, ಬದಲಿಗೆ ಜಾತಿ ದ್ವೇಷದ ಹಿನ್ನೆಲೆಯಲ್ಲಿ ಹುಡುಗನ ಮನೆಯವರು ಮಾಡಿದ ಕೊಲೆ ಎಂದು ಮೃತ ಯುವತಿ ಪುಷ್ಪ (25)ಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
2026 ಜ.1ರಂದು ಪ್ರೇಮವಿವಾಹ ಮಾಡಿಕೊಂಡಿದ್ದ ಯುವಕನನ್ನು ಯುವತಿಯ ಪೋಷಕರು ಕೂದಲು ಹಿಡಿದು ಎಳೆದೊಯ್ದು, ವಿದ್ಯುತ್ ಕಂಬಕ್ಕೆ ಕಟ್ಟಿ, ಚಪ್ಪಲಿ-ಕೈಗಳಿಂದ ಹೊಡೆದು, ಕಲ್ಲುಗಳಿಂದ ಹಲ್ಲೆ ಮಾಡಿದ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ರಮಣಕ್ಕಪೇಟ ಗ್ರಾಮದಲ್ಲಿ ನಡೆದಿದೆ. ಇದೇ ಜಿಲ್ಲೆಯ ಮಂಡವಳ್ಳಿ ಮಂಡಲದ ಕಾರು ಕೊಲ್ಲಿ ಗ್ರಾಮದ ಯುವಕ ಸಾಯಿ ಚಂದ್ ಮತ್ತು ಸಾಯಿ ದುರ್ಗಾ ಇಬ್ಬರೂ 8 ವರ್ಷಗಳಿಂದ ಪ್ರೇಮದಲ್ಲಿದ್ದಾರೆ. ಸಾಯಿ ದುರ್ಗಾ ಅವರ ಕುಟುಂಬ ಸಾಯಿ ಚಂದ್ ಅವರನ್ನು ಒಪ್ಪದ ಕಾರಣ ಪ್ರೇಮಿಗಳು ಪೊಲೀಸ್ ರಕ್ಷಣೆ ಕೋರಿ ಏಲೂರಿನ ಗಂಗಮ್ಮ ದೇವಾಲಯದಲ್ಲಿ ಕೆಲವು ದಿನಗಳ ಹಿಂದೆ ಮದುವೆಯಾಗಿದ್ದರು. ಯುವಕ ನಿರುದ್ಯೋಗಿ ಎಂಬುದು ಮುಖ್ಯ ಕಾರಣವೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಸಲಿ ವಿಚಾರ ಇನ್ನೂ ತಿಳಿದಿಲ್ಲ ಮತ್ತು ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಘಟನೆಗಳು ಕೆಲವು ಉದಾಹರಣೆಗಳು ಮಾತ್ರ, ಅದೆಷ್ಟೋ ಘಟನೆಗಳು ಬೆಳಕಿಗೆ ಬಾರದೇ ಮುಚ್ಚಿಹೋಗಿವೆ.

ಪಿ.ಲಂಕೇಶ್ ತಮ್ಮ ಟೀಕೆ ಟಿಪ್ಪಣಿಯಲ್ಲಿ ಬರೆದ ಕೆಲವು ಸಾಲು ಹೀಗಿವೆ… ಜಾತೀಯತೆ ಕಂಡು ರೇಗಿ ಎಗರಾಡುವವನು, ಅನ್ಯಜಾತಿಯವನ ಮೇಲೆ ದಾಳಿ ನಡೆಸುವವನು, ಸದಾ ಜಾತೀಯತೆಯ ಬಗ್ಗೆ ಚಿಂತಿಸುವವನು ಎಲ್ಲರೂ ಒಂದೇ ತರಹದವರು. ಜಾತೀಯತೆ ಎಂಥ ವಿಷವೆಂದರೆ ಈ ಬಗ್ಗೆ ಧ್ಯಾನಿಸುತ್ತಾ ಹೋಗುವವರಿಗೆ ದೊರೆಯುವುದು ದೇವರಲ್ಲ, ಅಜ್ಞಾನ ಮತ್ತು ವಿನಾಶ. ಬುರ್ಕಾದಲ್ಲಿ ಇರುವ ತಾಯಿಯೂ ಬುರ್ಕಾದ ಹೊರಗಿರುವ ತಾಯಿಯೂ ಅದೇ ಹೃದಯದ, ಹತಾಶೆಯ, ಬಡತನದ, ಅತೃಪ್ತಿಯ, ಪ್ರೀತಿಯ ತಾಯಿಯದು. ಇದು ಗೊತ್ತಿಲ್ಲದವರಿಗೆ ಮಾತ್ರ ನಾನು ಪದೇ ಪದೇ ಹೇಳುವ ‘ಜಾತ್ಯತೀತ ರೋಮಾಂಚನ’ ಸಿಕ್ಕುವುದಿಲ್ಲ. ಎಲ್ಲರೊಂದಿಗೆ ಆಡುವವನು, ಕೆಲಸ ಮಾಡುವವನು, ಎಲ್ಲರ ಪ್ರೀತಿಗಾಗಿ, ವಿಶ್ವಾಸಕ್ಕಾಗಿ ಪ್ರಯತ್ನಿಸುವವನು ನಿಜಕ್ಕೂ ಪರಿಪಕ್ವತೆಯ ದಾರಿಯಲ್ಲಿರುತ್ತಾನೆ…’
ಭಾರತದ ಜಾತಿ ಪದ್ಧತಿಯಲ್ಲಿ ಅಡ್ಡಹೆಸರುಗಳು ಒಂದೇ ಆಗಿದ್ದರೆ ಅಲ್ಲಿ ವಿವಾಹ ನಿಷಿದ್ದದ ನಿಯಮ ಇರುತ್ತದೆ. ಗ್ರಾಮೀಣ ವಲಯದಲ್ಲಿ ಜಾತಿಯ ನಿರ್ಭಂಧಗಳು ಕಟ್ಟು ನಿಟ್ಟಿನ ಕ್ರಮದಲ್ಲಿ ಚಾಲ್ತಿಯಲ್ಲಿವೆ. ಯಾವುದೇ ಧರ್ಮ ಗ್ರಂಥಗಳು ಜಾತಿ-ಆಧಾರದ ಭೇದಭಾವವನ್ನು ಪುಷ್ಠೀಕರಿಸುವಂತೆ ಇರುವುದಿಲ್ಲ. ಜಾತ್ಯತೀತತೆಯು ಪ್ರಜಾಪ್ರಭುತ್ವದ ತತ್ವಗಳ ಆಧಾರದ ಮೇಲೆ ದೇಶದ ಆಡಳಿತಕ್ಕೆ ಮಾರ್ಗದರ್ಶಿಯಾಗುತ್ತದೆ. ಆದರೂ; ಆಧುನಿಕ ಭಾರತದಲ್ಲಿ ಜಾತಿ ಪದ್ದತಿಯು ವಿವಿಧ ಸ್ತರಗಳಲ್ಲಿ ಮುಂದುವರೆದಿದೆ. ಇದರಲ್ಲಿ ರಾಜಕೀಯ ಕಾರಣಗಳು ಮತ್ತು ಸಾಮಾಜಿಕ ನಡವಳಿಕೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಭಾರತದ ಸಂವಿಧಾನವು ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿದ್ದರೂ, ಕಾನೂನುಗಳ ಜಾರಿಯಲ್ಲಿನ ಕೊರತೆ ಮತ್ತು ಸಾಮಾಜಿಕ ಪೂರ್ವಗ್ರಹ ಪೀಡಿತದಿಂದ ಇಂದಿಗೂ ಗಂಭೀರ ಸಮಸ್ಯೆಯಾಗಿ ಉಳಿದಿರುವುದು ವಿಪರ್ಯಾಸ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಮಾದಕ ವಸ್ತು ಉತ್ಪಾದನೆಗಿಳಿದ ಹೊರರಾಜ್ಯ ಮಾಫಿಯಾ ಗ್ಯಾಂಗ್; ಕರ್ನಾಟಕದ ಕಳಂಕ!
ಇವತ್ತಿಗೂ ಅದೆಷ್ಟೋ ಕಡೆಗಳಲ್ಲಿ ಮೇಲ್ವರ್ಗದವರು ಎನಿಸಿಕೊಂಡವರ ಮನೆಗೆ ದಲಿತರು, ಮುಸ್ಲಿಮರು ಬಾಡಿಗೆ ಮನೆ ಕೇಳಿಕೊಂಡು ಬಂದರೆ; ಮೊದಲು ಅವರ ಜಾತಿ ಕೇಳುವ ಮನಸ್ಥಿತಿ ರೂಢಿಯಲ್ಲಿದೆ. ಜಾತೀಯತೆಯನ್ನು ಚಾಚೂತಪ್ಪದೆ ಪರಿಪಾಲಿಸುವ ಮನಸ್ಥಿತಿ ಉಳ್ಳವರಿಗೆ ಜಾತ್ಯತೀತ ಪರಿಕಲ್ಪನೆಯ ಅರಿವಿದ್ದರೂ ಅದನ್ನು ಒಪ್ಪಿಕೊಳ್ಳುವ ಮನಸ್ಸಿರುವುದಿಲ್ಲ. ಕಳೆದ ವರ್ಷದ ಹೊಸ್ತಿಲು ದಾಟಿ, ಹೊಸ ವರ್ಷಕ್ಕೆ ಪ್ರವೇಶ ಮಾಡಿದ್ದೇವೆ. ಹೊಸ ಚಿಂತನೆಗಳೊಂದಿಗೆ ಈ ವರ್ಷವನ್ನಾದರೂ ಸ್ವಾಗತಿಸಬೇಕಿದೆ. ಜಾತೀಯತೆಯ ಕ್ರೌರ್ಯವನ್ನು ಕಿತ್ತೆಸೆಯಬೇಕಿದೆ. ʼಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು, ಸೇರಿರೈ ಮನುಜಮತಕೆ, ಓ, ಬನ್ನಿ, ಸೋದರರೆ, ವಿಶ್ವಪಥಕೆ!ʼ ಎಂಬ ಕುವೆಂಪು ವಾಣಿಯನ್ನು ಸಾಕಾರಗೊಳಿಸಬೇಕಿದೆ. ವಿಶ್ವಕ್ಕೆ ಸಮಾನತೆ, ಭ್ರಾತೃತ್ವ ಸಂದೇಶ ಸಾರಿದ ಭಾರತದಲ್ಲಿ, ಇಂದಿಗೂ ಇರುವ ಕಲುಷಿತ ಮನಸ್ಸುಗಳನ್ನು ಶುದ್ಧೀಕರಿಸುವ ಕೆಲಸವಾಗಬೇಕಿದೆ.
ಸಂವಿಧಾನವು ಸಮಾನತೆ, ಸ್ವಾತಂತ್ರ್ಯ, ಭ್ರಾತೃತ್ವದ ಭರವಸೆ ನೀಡಿದ್ದರೂ, ಅದರ ಆತ್ಮವನ್ನು ಸಮಾಜ ಇನ್ನೂ ಅಳವಡಿಸಿಕೊಂಡಿಲ್ಲ. ಕಾನೂನುಗಳು ಇದ್ದರೂ, ಮನಸ್ಸುಗಳು ಬದಲಾಗದಿದ್ದರೆ ನ್ಯಾಯ ಅಪೂರ್ಣವೇ. ಜಾತಿಯ ವಿರುದ್ಧ ಧ್ವನಿ ಎತ್ತಿದ ಬುದ್ಧ, ಬಸವ, ಅಂಬೇಡ್ಕರ್, ಲಂಕೇಶ್‌ರ ಚಿಂತನೆಗಳು ಇಂದು ಕೇವಲ ಪುಸ್ತಕಗಳಲ್ಲೇ ಸೀಮಿತವಾಗಿವೆ. ಅವುಗಳನ್ನು ಬದುಕಿನ ಭಾಗವಾಗಿಸಿಕೊಳ್ಳುವ ಧೈರ್ಯ ನಮಗಿದೆಯೇ ಎಂಬುದೇ ನಿಜವಾದ ಪ್ರಶ್ನೆ.





