ಸೆಲಬ್ರಿಟಿಯಾಗಿ ಅವರ ಜವಾಬ್ದಾರಿಯನ್ನು ಸೀರಿಯಸ್ ಆಗಿ ತೊಗೊಂಡು ಫ್ಯಾನ್ಸ್‌ಗೆ ಬುದ್ದಿ ಹೇಳಬಹುದಿತ್ತು. ರೇಣುಕಾಸ್ವಾಮಿ ಕೂಡ ದರ್ಶನ್ ಅವರ ಫ್ಯಾನ್ ಅಲ್ವಾ? ಅವರಿಗೂ ಆರಂಭದಲ್ಲಿಯೇ ಬುದ್ಧಿ ಹೇಳಿದ್ರೆ ದರ್ಶನ್ ಇವತ್ತು ಜೈಲಿಗೆ ಹೋಗುತ್ತಿರಲಿಲ್ಲ.
ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಕೊಲೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಎರಡು ವಾರಗಳ ಹಿಂದೆ ದರ್ಶನ್ ತಂಡದ ಜಾಮೀನು ಅರ್ಜಿ ಕುರಿತು ಸುಪ್ರೀಂ ಕೋರ್ಟ್‌ಲ್ಲಿ ವಿಚಾರಣೆ ನಡೆಯುತ್ತಿದ್ದಾಗ ನ್ಯಾಯಪೀಠದ ಹೇಳಿಕೆಯ ಬಗ್ಗೆ ನಟಿ ರಮ್ಯಾ ಅವರು ಮಾಡಿದ್ದ x ಪೋಸ್ಟ್ ಗೆ ದರ್ಶನ್ ಅಭಿಮಾನಿಗಳು ವರ್ತಿಸಿದ ರೀತಿ ಮತ್ತು ಅವರ ವಿರುದ್ಧ ರಮ್ಯಾ ಅವರು ಕಾನೂನು ಹೋರಾಟಕ್ಕೆ ಇಳಿದದ್ದು ಭಾರೀ ಸುದ್ದಿ ಮಾಡಿತ್ತು. ರಮ್ಯಾ ಅವರಿಗೆ ಅಶ್ಲೀಲ ಕಮೆಂಟ್ ಹಾಕಿದ ಹಲವರ ಬಂಧನವೂ ಆಗಿದೆ. ಇಂದು ದರ್ಶನ್ ಮತ್ತೆ ಜೈಲು ಸೇರಿದ್ದಾರೆ. ಈ ಬಗ್ಗೆ ಯುರೋಪ್ ಪ್ರವಾಸದಲ್ಲಿರುವ ರಮ್ಯಾ (Divya spandana)ಅವರು ಈ ದಿನಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಹೇಳಿದ್ದಿಷ್ಟು…
“ನನಗೆ ಇವತ್ತು ಈ ಸುದ್ದಿ ಬಂದಾಗ ಎಲ್ಲೋ ಒಂಡ್ಕಡೆ ಬೇಜಾರಾಯ್ತು. ಯಾಕಂದ್ರೆ ನನಗೆ ದರ್ಶನ್ ಗೊತ್ತು, ನಾನು ಅವರ ಜೊತೆ ಸಿನಿಮಾ ಕೂಡಾ ಮಾಡಿದ್ದೇನೆ. ನಾವು ಶೂಟ್ ಮಾಡುವಾಗ ಅವರ ಲೈಫ್ ಬಗ್ಗೆ ಹಂಚಿಕೊಂಡಿದ್ರು. ಸಿನಿಮಾ ಇಂಡಸ್ಟ್ರಿಗೆ ಹೇಗೆ ಬಂದ್ರು ಅಂತ. ಈ ನ್ಯೂಸ್ ಕೇಳಿದಾಗ ಒಂದು ಕಡೆ ಬೇಜಾರು ಏನಂದ್ರೆ, ಅವರು ಜೀವನ ಹಾಳು ಮಾಡಿಕೊಂಡ್ರಲ್ಲಾ ಅಂತ, ಯಾಕಂದ್ರೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೆಯ ಹೆಸರು ಮಾಡಿದ್ರು. ಹೋಗ್ತಾ ಹೋಗ್ತಾ ಯಾಕೆ ಹೀಗಾಯ್ತು? ನನಗನ್ನಿಸ್ತು ಅವರ ಅಕ್ಕಪಕ್ಕ ಗೈಡ್ ಮಾಡೋಕೆ ಯಾರೂ ಇರಲಿಲ್ವೇನೋ. ಅಟ್‌ಲೀಸ್ಟ್ ಗೈಡ್ ಮಾಡಲು ಯಾರೂ ಇರಲಿಲ್ಲ ಅಂದ್ರೂ ಅವರು ಸ್ವತಃ ಕಷ್ಟಪಟ್ಟು ಬಂದಿರೋರು. ಸೊಸೈಟಿ ಬಗ್ಗೆ ಕಾನ್ಶಿಯಸ್ ಆಗಿರಬೇಕಿತ್ತು.
ಸೆಲಬ್ರಿಟಿಯಾಗಿ ಅವರ ಜವಾಬ್ದಾರಿಯನ್ನು ಸೀರಿಯಸ್ ಆಗಿ ತೊಗೊಂಡು ಫ್ಯಾನ್ಸ್‌ಗೆ ಬುದ್ದಿ ಹೇಳಬಹುದಿತ್ತು. ಅವರಿಗೆ ಈ ವಿಷಯ ಗೊತ್ತಿಲ್ಲ ಅಂತ ಹೇಳಲಾರೆ, ಯಾಕಂದ್ರೆ ಈಗ ಎಲ್ಲರೂ ಆನ್‌ಲೈನ್ ಇರುತ್ತಾರೆ. ಏನೇ ಆದ್ರೂ ಆನ್‌ಲೈನ್‌ನಲ್ಲಿ ಗೊತ್ತಾಗುತ್ತೆ. ಅವರಿಗೆ ಅವರ ಫ್ಯಾನ್ಸ್ ಬಗ್ಗೆ, ಅವರು ಏನು ಕೆಲಸ ಮಾಡ್ತಾರೆ ಅಂತ ಗೊತ್ತಿತ್ತು ಅನ್ಸುತ್ತೆ. ಆದರೂ ಕೂಡ ಅವರು ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಇದು ಸರಿಯಲ್ಲ ಅಂತ ಅವರಿಗೆ ಹೇಳಿಲ್ಲ. ನನ್ನ ವಿಚಾರದಲ್ಲೂ ಹೊರಗೆ ಬಂದು ಏನೂ ಹೇಳಿಲ್ಲ. ಆಗ ನನಗೆ ಅನ್ನಿಸಿತ್ತು, ರೇಣುಕಾಸ್ವಾಮಿ ಕೂಡಾ ಅವರ ಫ್ಯಾನ್ ಅಲ್ವಾ? ಅವರಿಗೂ ಆರಂಭದಲ್ಲಿಯೇ ಬುದ್ಧಿ ಹೇಳಿದ್ರೆ ದರ್ಶನ್ ಇವತ್ತು ಜೈಲಿಗೂ ಹೋಗುತ್ತಿರಲಿಲ್ಲ, ಈ ತರದ ಸೊಸೈಟಿನಲ್ಲಿ ನಾವು ಇರುತ್ತಿರಲಿಲ್ಲ. ಅಷ್ಟು ಕೀಳುಮಟ್ಟಕ್ಕೆ ಸಮಾಜ ತಲುಪಿದೆ.
ಈ ಜಡ್ಜ್‌ಮೆಂಟ್‌ನಿಂದ ನನಗೊಂದು ರಿಲೀಫ್ ಏನಂದ್ರೆ, ಯಾವ ರೀತಿಯಲ್ಲಿ ನಮ್ಮ ಸಮಾಜ ಹೋಗುತ್ತಿತ್ತು ಅದನ್ನು ಕಂಟ್ರೋಲ್ ಮಾಡಿದೆ. ಯಾಕಂದ್ರೆ ಪ್ರಜ್ವಲ್ ರೇವಣ್ಣ ಕೇಸ್ ಆಗಲಿ, ದರ್ಶನ್ ಕೇಸ್ ಆಗಲಿ ಕೋರ್ಟ್‌ಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಿವೆ, ಸಮಾಜ ಮತ್ತು ಸಾರ್ವಜನಿಕರ ರಕ್ಷಣೆಗೆ ನಿಂತಿವೆ. ಇಂತಹ ಪ್ರಕರಣಗಳನ್ನು ಲೈಟ್ ಆಗಿ ತೆಗೆದುಕೊಳ್ಳಲ್ಲ. ಇವತ್ತಿನ ಆದೇಶ ಸಮಾಜಕ್ಕೆ ಒಂದು ಉತ್ತಮ ಮೆಸೇಜ್ ಕೊಟ್ಟಿದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ಎಲ್ಲರೂ ಸಮಾನರು. ಯಾರೇ ಆಗಿರಲಿ ಕಾನೂನನ್ನು ಪಾಲಿಸಬೇಕು ಅಂತ.
ಸೆಲಬ್ರಿಟಿಗಳಿಗೆ ಹೆಚ್ಚು ಜವಾಬ್ದಾರಿ ಇರುತ್ತದೆ. ನಾವು ಸಮಾಜಕ್ಕೆ ಎಕ್ಲಾಂಪಲ್ ಆಗಿರುತ್ತೇವೆ. ನಾವು ಮೊದಲು ಕಾನೂನು ಫಾಲೋ ಮಾಡಬೇಕು. ನಮ್ಮ ಸಿನಿಮಾಗಳು ಹೇಗಿರುತ್ತವೆ ಅಂದ್ರೆ ನಮ್ಮನ್ನು ತುಂಬಾ ಇಮಿಟೇಟ್ ಮಾಡುವವರು, ನಾವು ನಡೆಯುವ ರೀತಿ, ಬಟ್ಟೆ ಹಾಕಿಕೊಳ್ಳುವ ರೀತಿ, ಮಾತಾಡುವ ರೀತಿ, ಬ್ಯಾಗ್ ಹಾಕಿಕೊಳ್ಳುವ ರೀತಿ ಎಲ್ಲವನ್ನೂ ಕಾಪಿ ಮಾಡುತ್ತಾರೆ. ಅಂಥದ್ದರಲ್ಲಿ ನಮಗೆ ತುಂಬಾ ದೊಡ್ಡ ಜವಾಬ್ದಾರಿ ಇರುತ್ತದೆ. ನನಗನ್ನಿಸುತ್ತದೆ ಸೆಲಬ್ರಿಟಿಗಳು ಹೆಚ್ಚು ಜಾಗರೂಕತೆಯಿಂದ ಇರಬೇಕು. ಪಬ್ಲಿಕ್‌ನಲ್ಲಿ ನಮ್ಮ ಸ್ಟ್ಯಾಂಡರ್ಡ್ ಮೇಂಟೇನ್ ಮಾಡ್ಬೇಕು. ಪ್ರೆಸೆಂಟ್ ಮಾತ್ರ ಅಲ್ಲ, ಫ್ಯೂಚರ್‌ನಲ್ಲೂ. ಹೆಣ್ಣುಮಕ್ಕಳಿಗೆ ಸೇಫ್ ಎನ್ವಿರಾನ್‌ಮೆಂಟ್ ಒದಗಿಸಿಕೊಡಬೇಕು.
ಫೈನಲಿ ಒಂದು ಒಳ್ಳೆಯ ಟ್ರ್ಯಾಕ್‌ನಲ್ಲಿ ಹೋಗುತ್ತಿದೆ. ಹೈಕೋರ್ಟ್ ಜಡ್ಜ್‌ಮೆಂಟ್ ಪ್ರಜ್ವಲ್ ರೇವಣ್ಣ ಕೇಸಲ್ಲಿ, ದರ‍್ಸನ್ ಕೇಸಲ್ಲಿ ಸುಪ್ರೀಂ ಕೋರ್ಟ್ ಒಬ್ಸರ್ವೇಷನ್ ಭರವಸೆ ಮೂಡಿಸಿದೆ. ಆದರೆ, ಅವರ ಜೀವನ ಮಾತ್ರ ಅಲ್ಲ ಅವರ ಜೊತೆಗೆ ಹೋದವರ ಎಲ್ಲರ ಜೀವನ ವೇಸ್ಟ್ ಆಯ್ತು ಅಂತ ಬೇಜಾರಾಗ್ತಿದೆ. ಆದ್ರೆ, ಎಲ್ಲರೂ ಸಮಾನರು, ಎಲ್ಲರೂ ಕಾನೂನು ಪಾಲಿಸಲೇಬೇಕು. ಒಂದು ಸ್ವಸ್ಥ ಸಮಾಜಕ್ಕೆ ನಾವು ಇಷ್ಟು ಮಾಡಲೇಬೇಕು”.
ಇದನ್ನೂ ಓದಿ Breaking | ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಬಂಧನ ಬೆನ್ನಲ್ಲೇ ನಟ ದರ್ಶನ್ ಪೊಲೀಸ್ ವಶಕ್ಕೆ





